ಒಟ್ಟು 1764 ಕಡೆಗಳಲ್ಲಿ , 105 ದಾಸರು , 1296 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ಪ ಹಮ್ಮಿನ ಅರಿಷಡ್ವರ್ಗ ಬಿಡದೆ ಅಧರ್ಮರ ಸೇವೆ ಮಾಡಿ ಕಾಲ ಕಳೆವ ಪಾಮರ ಮನುಜನ ಅ.ಪ ಹರಿದಿನದುಪವಾಸ ಮರುದಿನ ಪಾರಣೆ ಸರಿಯಾಗಿ ಮಾಡಿದೆನೆ ಕೊರಳಲ್ಲಿ ತುಳಸೀ ಸರಗಳ ಧರಿಸಿ ಹರಿಗೆ ಮೈಮರೆದಾನೊಂದಿಸಿದೆನೆ 1 ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ ಕ್ಷೇತ್ರಗಳ ಬಳಸಿ ಪಾದ ನೇತ್ರದಿಂದ ನೋಡಿ ಕೃತಾರ್ಥ ನಾನಾದೆನೆ 2 ವರ ನಾರೇರ ಕಂಡು ನರಕ ಭಯವಿಲ್ಲದೆ ಕರೆದು ಮನ್ನಿಸುವ ವರ ಗಾಯಿತ್ರಿ ಮೊದಲಾದ ಪರಿಪರಿ ಮಂತ್ರಗಳು ನಿರುತ ನಾ ಜಪಿಸುವೆನೆ 3 ಕಾಲಿಗೆ ಗೆಜ್ಜೆಕಟ್ಟಿ ಶಿರಿಲೋಲನ ಮುಂದೆ ಲಲಿತದಿಂ ಕುಣಿಯುವೆನೆ ತಾಳ ಮ್ಯಾಳಾದಿಂದ ನೀಲಮೇಘಶ್ಯಾಮನ ಬಾಲಲೀಲೆ ಪಾಡಿ ಲೋಲನಾಗುವೆನೆ 4 ಕಂದರ್ಪ ಪಿತನಾದ ವಿಜಯ ರಾವi ಚಂದ್ರವಿಠಲನ್ನ ಮಂದಹಾಸ ಮುಖವನ್ನು ಒಂದಿನವಾದರು ನೋಡ್ಯಾನಂದಪಟ್ಟು ಮಂದ ಜ್ಞಾನ ತೊರೆದನೆ 5
--------------
ವಿಜಯ ರಾಮಚಂದ್ರವಿಠಲ
ಸುಮ್ಮನೆಲ್ಯದ ತಾ ನೋಡಿ | ನಮ್ಮಯ್ಯನ ಕೃಪೆ | ಸುಮ್ಮನೆಲ್ಲ್ಯದ ತಾ ನೋಡಿ ವಮ್ಮನಾಗದೇ ಪ ಅಂದಿಗಿಂದಿಗೇ ಒಂದೆರಡಲ್ಲದೆ | ಸಂಧಿಸಿ ಬಂದಿಹ ಜನ್ಮಗಳಲ್ಲಿ | ಕುಂದದೆ ಪುಣ್ಯದ ವೃಂದದ ಪಡೆದಾ | ನಂದದ ಛಂದದಿ ನಿಂದವರಲ್ಲದೆ 1 ಗಾಧವ ಸೂಸುವೆ ಸಾಧಕನಾಗಿ | ಸದರದಲಿ ಗುರು ಬೋಧದ ಲಿಂದಾ | ಸಾಧಿಸಿ ಸಾಧಿಸಿ ಬೇಧಿಸಿ ತನ್ನೊಳು | ವೇದಾಂತರಿ-ತಿಹ ಸಾಧುರಿಗಲ್ಲದೆ 2 ಬಂದದ ನುಂಡು ಬಾರದ ಬಯಸದೆ | ನಿಂದಿಸಿ ಲೊಂದಿಸಿ ಕುಂದದೆ ಹಿಗ್ಗದೆ | ತಂದೆ ಮಹಿಪತಿ ನಂದನ ನುಡಿ ನಿಜ | ವೆಂದನುಭವಕೆ ತಂದವಗಲ್ಲದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನೇಕೆ ಪರದಾಡುವೆಯೊ ಪರ ಬೊಮ್ಮನ ಚರಣಕೆ ಶರಣು ಹೊಡಿ ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ ನಮ್ಮನೇ ನುಂಗುವ ಗುಮ್ಮನಿವ ನಮ್ಮ ಶರೀರದೊಳಿರುವ ಯಂತ್ರಗಳು ನಮ್ಮಧೀನವೆ ಯೋಚಿಸೆಲೊ ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1 ಮೂರಂತಸ್ಥಿನ ನೂರು ಸದನಗಳು ನೂರು ರೂಪಗಳು ನಿನಗಳವೆ ಚಾರು ಮನೋಹರ ಸತಿಯಳಿರಲು ಮನ ಕೋರಿಕೆಯವಳಲಿ ಶಾಶ್ವತವೆ ನೂರು ಎಕರೆ ಹೊಲ ಗದ್ದೆ ತೋಟಗಳು ಮೂರು ಲಕ್ಷಗಳು ಬೆಲೆಯಿರಲು ಮೂರು ಚಟಾಕಿನ ಅನ್ನ ಹೊರತು ಅದ ಮೀರಿ ನುಂಗುವುದು ನಿನಗಳವೇ 2 ಶೂರನು ನಾ ಬಲುಧೀರನು ನಾ ಅಧಿ ಕಾರಿಯು ನಾ ಈ ಜಗದೊಳಗೆ ಕೋರಿದ ಜನರನು ಸದೆಬಡಿಯುವೆ ಎನ ಗಾರು ಸಮರು ಈ ಧರೆಯೊಳಗೆ ಕೋರುವ ಸುಖಗಳನನುಭವಿಸುವ ಮಮ ಕಾರದ ಗತಿಯನು ಯೋಚಿಸೆಲೊ ಹೇರಳ ಗಜತುರಗಾದಿ ವಾಹನಗ ಳೇರಿದ ನೀ ಹೆಗಲೇರಿ ಹೋಗುವಿಯೊ 3 ಸಾಸಿರ ಸಾಸಿರ ಬಡ್ಡಿ ಬಾಚಿಗಳ ಬೇಸರವಿಲ್ಲದೆ ಗಳಿಸಿದೆಯೊ ಕಾಸಿನ ಲೋಭಕೆ ಮೂಸಲು ಬಾರದ ಕಾಸಕ್ಕಿ ಅನ್ನವ ನುಂಗಿದೆಯೊ ಲೇಶವು ಗಮನಕೆ ತರಲಿಲ್ಲ ಈ ಸವಿನುಡಿ ಬಲು ಹಳೆಯದೆಂದು ಆಕ್ರೋಶವ ಮಾಡದೆ ಯೋಚಿಸೆಲೊ 4 ಮಾಯವು ತಾ ಈ ಜಗತ್ತಿನ ಜೀವನ ರುಚಿ ತೋರುವುದು ಕಾಯವು ಶಾಶ್ವತವೆಂಬ ಭ್ರಾಂತಿಯಲಿ ಹೇಯ ವಿಷಯಗಳನುಣಿಸುವುದು ಪ್ರಾಯಶರೆಲ್ಲರು ಬಲ್ಲರಿದನು ಬರಿ ಬಾಯಲಿ ನುಡಿಯುವರೊ ಸತತ ಕಾಯವಚನಮನದಿಂದ ಪ್ರಸನ್ನನ ಮಾಯವನರಿತಾಚರಿಪರು ವಿರಳ 5
--------------
ವಿದ್ಯಾಪ್ರಸನ್ನತೀರ್ಥರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ವರ ವಾಣಿರಮಣಗೆ ಶರಣೆಂಬೆ ಸುವ್ವಿ ವರ ವಾಣಿರಮಣಗೆ ಶರಣೆಂದು ಪೇಳಿದ ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ 1 ¥ಕ್ಕಿವಾಹನ್ನ ಜಗಕ್ಕೆ ಮೋಹನ್ನ ರಕ್ಕಸದಾಹನ್ನನಿವ ಸುವ್ವಿ ರಕ್ಕಸದಾಹನ್ನನಿವ ತನ್ನ ಮರೆ- ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ 2 ಯಶೋದೆಯ ಕಂದ ತನ್ನ ವಿಷವನುಣ್ಣೆಂದ ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ 3 ಶಕಟಾಸುರನ್ನ ಮೆಟ್ಟಿ ಕೊಂದ ಬಲು ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ- ಸ್ತಕದಮೇಲೆ ನಲಿವುತ ನಿಂದ ಸುವ್ವಿ4 ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ 5 ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ ಭೃತ್ಯರಿಗೊಲಿದು ವರವಿತ್ತ ಸುವ್ವಿ ಭೃತ್ಯರಿಗೊಲಿದು ವರವಿತ್ತ ತನ್ನ ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ 6 ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ [ಕೊಂದಪೆ]ನೆಂದು ಬಂದ ಬಕನ ಸುವ್ವಿ [ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ ಕೊಂದು ಬಿಸುಟಾನೆ ಸುವ್ವಿ 7 ಕಲ್ಪತರುವಂತೆ ನಮ್ಮ ತನ್ನಧರಿಂದ ಕೊಳಲನೂದುವ ಚೆಲುವಗೆ ಸುವ್ವಿ ಕೊಳಲನೂದುವ ಚೆಲುವ ಗಾನಲೋಲ ಗೋ- ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ 8 ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ ಮಂಗಳ ವಿಲಾಸವನು [ರಚಿಸಿದ]ಸುವ್ವಿ ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ 9 ಮಧುರೆಗೆ ಪೋಗಿ ಮಲ್ಲರಸುವ ನೀಗಿ ಮದಾಂಧ ಮಾವನ್ನ ಮಡುಹಿದ ಸುವ್ವಿ ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ ಮುದದಿ ತನ್ನವರ ಮುದ್ದಿಸಿದ ಸುವ್ವಿ 10 ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ ದುರ್ಮನವ ಬಿಡದೆ ಹರಿಯಲಿಡು ಸುವ್ವಿ ದುರ್ಮನವ ಬಿಡದೆ ಹರಿಯಲಿಡು ಮನವ ಕಾಮಿನಿಯೊಳಾಡಿ ಕೆಡಬೇಡ ಸುವ್ವಿ 11 ದುರುಳರ ನೋಡಿ ದೂರಕ್ಕೋಡು ಹರಿ- ಶರಣಡಿಗೆ ಪೊಡಮಡು ಸುವ್ವಿ ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು- ಚರಿತವ ಪಾಡುವರೊಳಗಾಡು ಸುವ್ವಿ 12 ಏರಲರಿಯದವ ಮರನೇರಿ ಬಿದ್ದು ಸಾವಂತೆ ನೀರ ಮೀನುಗಳು ಕರಗುವಂತೆ ಸುವ್ವಿ ನೀರ ಮೀನುಗಳು ಕರಗುವಂತೆ ಮನುಜ ನೀ ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ 13 ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ 14 ದುರುಳ ಕೀಚಕ ಕೆಟ್ಟ ಪರಧನಕೆ ಮರುಳಾಗಿ ಕುರುರಾಯ ಸುವ್ವಿ ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು ಒರೆವ ಭಾರತವ ನಿರುತ ಕೇಳು ಸುವ್ವಿ 15 ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ ಭೇದವಿಲ್ಲವೆಂಬ ಮತದಲ್ಲಿ ಸುವ್ವಿ ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ ಗೆದ್ದಾನೆಂತು ಬಿದ್ದಾನೆಂತು ಸುವ್ವಿ 16 ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ 17 ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಭೇದ ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ 18 ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ ಪ್ರತ್ಯೇಕ ಜೀವರ ಇರವು ಸುವ್ವಿ 19 ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ- ನ್ನರ್ಥವ ತಾ ಕಾಣಲರಿಯನು ಸುವ್ವಿ ತ- ನ್ನರ್ಥವ ತಾ ಕಾಣಲರಿಯನು ಅದರಿಂದ ನಾ- ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ 20 ಬೊಮ್ಮ ಮಿಥ್ಯವಲ್ಲವೋ ನಿನ್ನ ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ- ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ 21 ಸತ್ತ ಪೆಣನುಂಟು ಸಾಯದ ವಸ್ತುಂಟು ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ [ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ 22 ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ- ಬರ್ಥ ತಾ ಕೂಡಲರಿಯದು ಸುವ್ವಿ ಎಂ- ಬರ್ಥ ತಾ ಕೂಡಲರಿಯದು ಅದರಿಂದ ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ23 ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ 24 ಇಲ್ಲ ಜಗವೆಂಬುದನು ಈಗ ಕಂಡದ ಕಾರಣ ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ [ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ 25 ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ 26 ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ 27 ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ- ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ 28 ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ- ವೇಕಿಗಳೆಲ್ಲ ಬಲ್ಲರು ಸುವ್ವಿ ವಿ- ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ 29 ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ ವೈಕುಂಠದ ವಾಸನೆ ಲೇಸು ಸುವ್ವಿ 30 ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ 31 ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ- ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ 32 ನಗರ ಕೃಷ್ಣಗೆ ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ34 ಇಂತು ಹಯವದನ ನಿಶ್ಚಿಂತ ಜಗತ್ಕಾಂತ ಸಂತರನು ಸದಾ ಸಲಹುವ ಸುವ್ವಿ ಸಂತರನು ಸದಾ ಸಲಹುವ ಮಾರಾಂತರ ಕೃ- ತಾಂತನ ಬಳಿಗೆ ಕಳುಹುವ ಸುವ್ವಿ 35
--------------
ವಾದಿರಾಜ
ಸುಳಾದಿ ಕೌಸ್ತುಭ ಫಾಲ ಸಿಂಗಾಡಿಯಂತಿಪ್ಪ ಪುರ್ಬುಕೂರ್ಮನಂದದಿಗಲ್ಲ ಚುಬುಕ ಚುಬುಕಾಗ್ರದಿಂಸಿರಿಯರಸ ಹಯವದನ ಶೇಷಗಿರಿ ಅರಸನ ಕಿರೀಟದÀಪರಿಪರಿಯ ಸೊಬಗ ನಾ ಕಂಡು ಕೃತಾರ್ಥನಾದೆ ನಾ 1 ಮಠ್ಯತಾಳ ಇಂದಿನದಿನ ಸುದಿನ ಗೋವಿಂದನ ಕಂಡ ಕಾರಣಹಿಂದಿನ ಪಾಪವೃಂದವು ಬೆಂದುಹೋಯಿತು ಎನಗೆಮುಂದಿನ ಮುಕುತಿ ದೊರಕಿತುತಂದೆ ಹಯವದನನೊಲವಿಂದ 2 ತ್ರಿಪುಟತಾಳ ಪಾದ ಪದುಮದ ನೆನಹೊಂದಿದ್ದರೆ ಸಾಕು 3 ರೂಪಕತಾಳ ಗುರು ಭಕುತಿಯಿರಬೇಕು ಹಿರಿಯರ ಕರುಣವು ಬೇಕುಹರಿಕಥೆಗಳ ನಿತ್ಯದಲಿ ಕೇಳುತಿರಬೇಕುವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕುವರಮಂತ್ರ ಜಪಬೇಕು ತಪಬೇಕು ಪರಗತಿಗೆಪರಿಪರಿಯ ವ್ರತಬೇಕು ಸಿರಿಪತಿ ಹಯವದನನಪರಮಾನುಗ್ರಹ ಬೇಕು ವಿಷಯನಿಗ್ರಹಬೇಕು 4 ಝಂಪೆತಾಳ ಹರಿಸಗುಣ ಸಾಕಾರ ಸಕಲಸುರರೊಡೆಯ ನಿ-ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕುಮರಣಜನನ ದೋಷಗಳಿಗತಿ ದೂರತರನೆನಿಪಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕುಸಿರಿ ಹಯವದನ ಶೇಷಗಿರಿ ಅರಸನಸ್ಮರಣೆಯಿದ್ದವನು ಸಂಸಾರ ಭಯವನುತ್ತರಿಸುವ 5 ಆದಿತಾಳ ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳುನಾನಾದುಃಖಗಳುಂಬ ಹೀನ ಮಾನವನೆತ್ತಭಾನುಮಂಡಲವೆತ್ತ ಶ್ವಾನನುಬ್ಬರವೆತ್ತಮಾನವ ಹರಿ ನಾನೆಂಬುದ ನೆನೆಯದಿರುದಾನವಕುಲವೈರಿ ಹಯವದನ ವೆಂಕಟಶ್ರೀನಿವಾಸನ ದಾಸರ ದಾಸನೆನಿಸಿಕೊ 6 ಏಕತಾಳ ಕೈವಲ್ಯವನೀವ ನಮ್ಮಶ್ರೀವಲ್ಲಭನ ಕೈಯಿಂದನೀವೆಲ್ಲ ಕ್ಷುದ್ರವ ಬೇಡಿಗಾವಿಲನ ಪೋಲದಿರಿಸಾವಿಲ್ಲದ ಮುಕುತಿಪಥವಬೇಡಿಕೊಳ್ಳಿರೊನೋವಿಲ್ಲದಂತೆ ಸುಖಿಸಬಲ್ಲಕೋವಿದರೆಲ್ಲರುಪೂವಿಲ್ಲನಯ್ಯ ವೆಂಕಟಪತಿ ಹ-ಯವದನನ್ನ ಪ-ದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು 7 ಅಟ್ಟತಾಳ ಗಾತ್ರವ ಬಳಲಿಸಿ ಸ್ತೋತ್ರವ ಪಾಡುತ್ತಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯನೇತ್ರದಿ ನೋಡಿ ತಮ್ಮಿಷ್ಟವ ಪಡೆವ ಸ-ದ್ಭಕ್ತರ ಕಂಡುನಿನ್ನ ಮನದ ಭ್ರಮೆಯ ಬಿಡುದೈತ್ಯ ಪೌಂಡ್ರಕಮತವ ನೆಚ್ಚಿ ಕೆಡಬೇಡಚಿತ್ರಚರಿತ್ರ ಹಯವದನನೊಲಿಸಿಕೊ 8 ದಿಲ್ಲಿಯರಾಯನ ಕಂಡು ಪುಲ್ಲಿಗೆಯ ಬೇಡುವರೆತಲ್ಲೆಯೂರಿ ತಪಸು ಇದ್ದಲ್ಲಿ ಸಾಧಿಸಿಕೊಳ್ಳಿರೊಕ್ಷುಲ್ಲಕರೆಂಜಲನುಂಡು ಬಾಳ್ವರ ನೋಡು ಲಕ್ಷುಮಿವಲ್ಲಭನಲ್ಲದೆ ಹೀನಫಲದಾಸೆ ಸಲ್ಲದಯ್ಯಚೆಲ್ವ ಹಯವದನ ತಿಮ್ಮನಲ್ಲದೆ ಕೈವಲ್ಯಕೆಹಲ್ಲು ಹಂಚಿಗೆ ಬಾಯಿತೆರೆದಂತೆ ಅಲ್ಲಲ್ಲಿಗೆ ಪೋಗದಿರಿ 9 ರೂಪಕತಾಳ ಹನುಮಂತನ ನೋಡು ತನುಮನಧನಂಗಳಶ್ರೀನರಸಿಂಹಗರ್ಪಿಸಿದಪ್ರಹ್ಲಾದನ ನೋಡುಅನುದಿನ ವನದಲ್ಲಿ ತಪವ ಮಾಡುವಮುನಿಜನರ ಕಂಡು ನಿನ್ನ ಮನದ ಭ್ರಮೆಯ ಬಿಡುಘನಮಹಿಮ ವೆಂಕಟಪತಿ ಹಯವದನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ 10 ಜತೆÀ ತಿರುಮಲೆರಾಯ ತ್ರಿವಿಕ್ರಮಮೂರುತಿಸಿರಿ ಹಯವದನನ [ಚರಣವೆ ಗತಿಯೆನ್ನು]
--------------
ವಾದಿರಾಜ
ಸುಳಾದಿ ತಾಳ-ಝಂಪೆ ನೋಡುವರೆ ನೀರದಶ್ಯಾಮಸುಂದರ ಮೂರ್ತಿ ಪಾಡುವರ ಪರಮಪಾವನ್ನ ಕೀರ್ತಿ ಕೂಡುವರೆ ಕೇವಲಾನಂದ ಚಿನ್ಮಯಗಾತ್ರ ನೀಡುವರೆ ನಿಖಿಳಲೋಕೈಕಪಾತ್ರ ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ ನಾಡದೈವಂಗಳ ಕೊಂಡಾಡಿಸದಲೆ ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ - ಮಾಡಿ ನಮ್ಮನು ಪೊರೆವ ರೂಢಿಗೊಡೆಯ ನಾಡದೈವಂಗಳ ಕೊಂಡಾಡಿಸದಲೆ 1 ತಾಳ-ಮಟ್ಟ ಸಕಲ ಶ್ರುತಿನಿಕರಸಾರಹೋ ಶುಕಮಹಾಮುನೀಂದ್ರ ಸನ್ನುತ ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ ಪ್ರಕಟಮಾಡಲ್ಯಾಕೆ ನಿನ್ನನು ಭಕ್ತವತ್ಸಲನೆಂಬೆನಲ್ಲದೆ ಮುಕುತವಂದ್ಯ ಶ್ರೀದವಿಠಲ ಯುಕುತಾಯುಕುತವೊಂದನರಿಯದೆ ಪ್ರಕಟಮಾಡಲ್ಯಾಕೆ ನಿನ್ನನು 2 ತಾಳ-ತ್ರಿವಿಡಿ ಆಯನುಭವ ಭಯ ಲಯವರ್ಜಿತ ನಯನೋತ್ಸಹಕಾರಕ ತಾರಕ ಜಯಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾÀಟ ಸಯವೇ ಸೈ ಶ್ರೀದವಿಠಲ ನಿ ನ್ನಯ ಚರಣಕೆ ನಮಿಸುವೆ ನಮಿಸುವೆ ಜಯ ಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾಟ 3 ತಾಳ-ಅಟ ಬಾರೋ ಬಾರೋ ಭವದೂರ ದೀನಜನ ಭಾರ ನಿನ್ನದಯ್ಯಾ ಅಯ್ಯಯ್ಯಾ ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4 ತಾಳ-ಆದಿ ಶ್ರೀರಮಣ ಶ್ರೀದವಿಠಲ ಸಂ - ಚಾರು ಚರಣಗಳ ಸಾರಿದೆನೊ ನಿನ್ನ ಶಿರಿಗುರವಿತ್ತೆ ಪರಮನ ಪೆತ್ತೆ ಗಿರಿಜೇಶಗೆ ನಿನ್ನ ಮೈ ಇತ್ತೆ ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ ಸರಿಬಂದರೆ ಸಾಕುವದೆಮ್ಮನು ಶರಣಾಗತವತ್ಸಲ 5 ಜತೆ ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
--------------
ಶ್ರೀದವಿಠಲರು
ಸುಳ್ಳಿನೊಳಗೆ ನಾ ಬಲು ಸುಳ್ಳ ನನ್ನ ಸುಳ್ಳೆ ನನಗೊಳುಪಿಲ್ಲ ಪ ಸುಳ್ಳು ಹೇಳುವೆನು ಅಳತಿಲ್ಲ ಇದು ಎಳ್ಳಷ್ಟಾದರು ಸುಳ್ಳಲ್ಲ ಅ.ಪ ಸೂಜಿಗಡತರ್ಹೊಗೆಯೇಳ್ವುದ ಕಂಡೆ ಅಗ್ನಿ ಮೂಜಗಡರಿ ಸುಡುವುದು ಕಂಡೆ ಸೋಜಿಗ ಕಂಡೆನು ಉರಿಯೊಳು ಮತ್ತೊಂದು ಬೀಜ ಮೊಳೆತು ತೆನೆಯಾದದ್ದ ಕಂಡೆ 1 ಸಾಸಿವೆಕಾಳಷ್ಟು ಬಟ್ಟಲ ಕಂಡೆ ಇಡೀ ದೇಶ ಅದರೊಳಗಿಟ್ಟಿದ್ದ್ದು ಕಂಡೆ ಹಾಸ್ಯದ ಮಾತಲ್ಲ ತಿರುಗಿ ನೋಡಿ ನಾ ದೇಶದೊಳಗೆ ಆ ಬಟ್ಟಲ ಕಂಡೆ 2 ಮೈಯೆಲ್ಲ ತೂತಿನ ತಿದಿಯ ಕಂಡೆ ಅದು ವಾಯುತುಂಬಿ ಬಾತದ್ದು ಕಂಡೆ ದೀವಿಗೆಯಿಲ್ಲದೆ ಬೆಳಗದುಕಂಡೆ ಮತ್ತು ಕಿವುಡ ಮೂಕರ ಏಕಾಂತ ಕಂಡೆ 3 ಉರಿವುದ ಕಂಡೆನು ಬೆಂಕಿಲ್ಲದೆ ಅದು ಆರಿದ್ದಕಂಡೆನು ನೀರಿಲ್ಲದೆ ಹೊರುವುದ ಕಂಡೆನು ಕೂಲಿಲ್ಲದೆ ಮತ್ತು ಇರಿದುಕೊಲ್ವದು ಕಂಡೆ ಕತ್ತಿಲ್ಲದೆ 4 ಮೇಲಕೆ ಬೇರಿಳಿದ್ವøಕ್ಷ ಕಂಡೆನಲ್ಲಿ ಟೊಂಗೆ ನೆಲಕೆ ಬೆಳೆದದ್ದು ಕಂಡೆ ಕಣ್ಣಿಲಿ ಚಲಿಪದು ಕಂಡೆನು ಎಲ್ಲಿಗೆ ಬೇಕಲ್ಲಿ ಇದರ ಕೀಲಿಕಂಡೆ ಶ್ರೀರಾಮನ ಬಲ್ಲಿ 5
--------------
ರಾಮದಾಸರು
ಸುಳ್ಳು ಪೇಳುವೆ ನಿಮಗೆ ಸುಳ್ಳು ನಮ್ಮನೆ ದೈವ ಕಳ್ಳನ ಬಂಟರು ನಮಗೆ ಕಡೆ ಮೊದಲಿಲ್ಲಾ ಪ ನಾಮವಿಲ್ಲದೆ ಬೂದಿ ನೇಮ ಮಾಡೋದು ಸುಳ್ಳು ನಾಮವೆಂಬುದೆ ಬುದ್ಧಿ ಮಿಕ್ಕವೆಲ್ಲ ಸುಳ್ಳು 1 ಒಂದು ಅಹುದು ಎರಡು ಎಂದೆಂದಿಗೆ ಸುಳ್ಳು ಮುಂದರಿದು ನೋಡು ಯಿಂಥ ಅಂದವೆಲ್ಲ ಸುಳ್ಳು 2 ಸೃಷ್ಟಿಯ ಮತ್ತೊಬ್ಬ ಪುಟ್ಟಿಸುವುದೆ ಸುಳ್ಳು ಧಿಟ್ಟ ವಿಜಯವಿಠ್ಠಲನಲ್ಲದೆ ಶ್ರೇಷ್ಠನೆಂಬುವರು ಸುಳ್ಳು3
--------------
ವಿಜಯದಾಸ
ಸುಳ್ಳೆಭ್ರಮಿಸಿ ಕೆಡಬೇಡವೋ ಹೇ ಮುಳ್ಳುಮನುಜ ಎಲ್ಲ ಮಿಥ್ಯೆಜಗದ ಬಾಳವ್ಯೋ ಪ ನಿಲ್ಲದಳಿಕೆ ಪೋಗ್ವುದಿದು ಜಲದಮೇಲಿನ ಲಿಖಿತತೆರದಿ ಪಾದ ದುರ್ಭವದ ಭಂಗವೋ ಅ.ಪ ಬಂಧುಬಳಗರೆಂಬರೆಲ್ಲರು ನಿನ್ನೊಳಿರುವತನಕ ತಿಂದು ಉಂಡು ಸೇವೆ ಮಾಳ್ಪರು ನೀನುಹೋಗುವಕಾಲ ಸಂದಿಸಲಾಗ ಆರುಬಾರರು ಹಿಂದೆ ಉಳಿವರು ಮಂದಗಮನೆ ಸತಿಯು ತನ್ನ ಮುಂದಿನ ಗತಿಗೆ ಅತ್ತುಕರೆದು ಮಿಂದು ಮುಟ್ಟುಚಟ್ಟು ತೊಳೆದು ಚಂದದ್ಹೋಳಿಗೆ ತುಪ್ಪ ಉಂಬಳು 1 ಜನರಗೋಣು ಮುರಿದು ಹಲವು ಹಂಚಿಕ್ಹಾಕಿ ಬಿಡದೆ ಬಿನುಗುಯೋಚನದನುದಿನವು ಶೋಧಮಾಡಿ ನಾನಾರೀತಿಯಲಿ ಗಳಿಸಿದ ಧನವು ನಿನಗೆ ಎರವು ಕನಿಕರಿಲ್ಲದೆ ಜವನದೂತರು ಹಣಿದು ಎಳೆದಾಡೊದೆಯುವಾಗ ಮನೆಯೊಳ್ಹೊಳಿದಳದೆ ಧನವು ಬಂದು ನಿನಗೆ ಸಹಾಯ ಮಾಳ್ಪುದೇನೋ 2 ಭೂಮಿಸೀಮೆ ತನ್ನದೆನುತ ಶಾಸನವ ಬರೆಸಿ ನೇಮವಿಲ್ಲದೆ ಕಷ್ಟಬಡುತ ನಿಜಸುಖವ ಮರೆದು ತಾಮಸದೊಳಗೆ ಮುಳುಗಿ ಕೆಡುತ ಪ್ರೇಮದೊರಲುತ ಭೂಮಿಗಧಿಕ ಭಕ್ತಜನರ ಪ್ರೇಮಮಂದಿರ ಸ್ವಾಮಿ ಶ್ರೀರಾಮ ಮುನಿದು ನೋಡಲಾಗ ಭೂಮಿ ಸೀಮೆ ಕಾಯ್ವುದೇನೋ 3
--------------
ರಾಮದಾಸರು
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ ಪ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ1 ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ 2 ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ 3
--------------
ಕನಕದಾಸ
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಪ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಅ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು 1 ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು ಹೋಯಿತಮ್ಮ2 ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ 3 ಊರೊಳಿಂತಾಯ್ತೆಂದು ಸಾರಿದೆವೆ ನಾರೇರುಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರುನೂರಾರು ಗೆಳತೇರು ಉಳಿದ ಹಾಲನು ಮಾರಿದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು 4 ಓರಗೆ ಹೆಂಗಳು ನಾವು ನೀರಾಟವಾಡಲಿಕೆಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿತೋರದುಂಚ ಕಡಹದ ಮರನೇರಿ ನೋಡುತ ಕುಂತನೆ 5 ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋಕಿಟ್ಟನ ಕೈಚಳಕವೆಂದು ನಾವಷ್ಟದಿಕ್ಕುಗಳ ನೋಡಿದೆವೆತುಟ್ಟತುದಿ ಕೊಂಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ 6 ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲುವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದಬಂಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ 7 ಪುಷ್ಪಗಂಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ8 ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರುತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿಂದಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದುಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ 9 ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತ್ರವನಿತ್ತನೆ 10 ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟುಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆಪುಂಡ ನಿನ್ನಣುಗ ನೆಲೆಯಾದಿಕೇಶವರಾಯಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ 11
--------------
ಕನಕದಾಸ
ಸೊಕ್ಕಿದ ಕಲಿ ಇಕ್ಕೊ ಶಿಕ್ಷಿಸು ಬೇಗ ಎಲೆಲೆರಕ್ಕಸಾಂತಕ ನಿನ್ನ ಪಕ್ಕದೊಳಿಟ್ಟು ರಕ್ಷಿಸೆನ್ನ ಪ. ಅನುದಿನ ಎನ್ನಬೆಚ್ಚಿ ಬೇಸರಿಸಿ ಕೆಡಿಸುವುದು ನಿನ್ನಹೆಚ್ಚಿಗೆಗದು ಸಾಕೆ ಸಚ್ಚರಿತ ಗುಣಭರಿತ 1 ಆನೆಗಳು ಪಿಡಿಯಲತಿಭರದಿಂದ ಬಂದುಚಕ್ರಧರ ಮಕರಿಯನೆ ತರಿದುಶರಣನ ನೀ ಪೊರೆದೆ ಗಡ ಮರೆಯೊಕ್ಕವರ ಕಾವಕರುಣಿ ಆ ತರುಣಿಗಕ್ಷಯಾಂಬರವ ಕುರುಸಭೆಯೊಳಿತ್ತೆ 2 ಉತ್ತರೆಯ ಗರ್ಭದಲಿ ಸುತ್ತಸುಳಿವುತ್ತ ಹರ-ನಸ್ತ್ರವನು ನಿನ್ನಸ್ತ್ರದಿಂದ-ಲತ್ತತ್ತಲೇ ವತ್ತಿ ಚಿತ್ತಪರಾಕಿಲ್ಲದೆ ಪರೀ-ಕ್ಷಿತನ ಕಾಯಿದೆ ಭಕ್ತವತ್ಸಲ ಪಾಥರ್Àಮಿತ್ರ ಹಯವದನ 3
--------------
ವಾದಿರಾಜ
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ವೀರಶೈವರ ಗೆದ್ದ ಕ್ಷೇತ್ರ ಪ ಒಂದು ಭಾಗದಿ ರೂಪ್ಯಪೀಠ ಮ- ತ್ತೊಂದು ಭಾಗದಿ ಸೋದಾಕ್ಷೇತ್ರ ಕುಂದು ಎಳ್ಳಷ್ಟಿಲ್ಲದೆ ತೋರ್ಪು ದೆಂದು ಹರಿಭಕ್ತರಾದರಿಸುವರು 1 ವೈಕುಂಠನಂತಾಸನಗಳು ಚೆಂದವೇನೆಂದು ಪೇಳಲಿ ಮನವೆ 2 ರಾಜೇಶ ಹಯಮುಖ ಚರಣ ಕಂಜ ಮಧುಪನಂತಿರುವ ಶ್ರೀಭಾವಿ- ಕಂಜಜಾತನ ಪದಕರುಹ ವಾದಿರಾಜರಾಯರ ದಿವ್ಯ ಕ್ಷೇತ್ರ 3
--------------
ವಿಶ್ವೇಂದ್ರತೀರ್ಥ