ಒಟ್ಟು 3122 ಕಡೆಗಳಲ್ಲಿ , 120 ದಾಸರು , 2350 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭ ಮಂಗಳಂ ಪ. ಸರಸೀರುಹಾಕ್ಷಾಯ ದುರುಳಮದಶಿಕ್ಷಾಯ ಸುರಮೌನಿ ಪಕ್ಷಾಯಾಧೋಕ್ಷಜಾಯ ಶರಣನ ರಕ್ಷಾಯ ಕರುಣಾಕಟಾಕ್ಷಾಯ ಧರಣಿಜಾರಮಣಾಯ ರಾಮಭದ್ರಾಯ 1 ಕ್ರತು ಪಾಲಕಗೆ ಶಶಿವದನೆ ಜಾನಕಿಯ ಕೈಪಿಡಿದವಂಗೆ ಶಶಿಮೌಳಿಚಾಪಮಂ ಮುರಿದ ಅಸಮಬಲನಿಗೆ ದಶಕಂಠಕಾಲಂಗೆ ರಾಘವೇಂದ್ರನಿಗೇ 2 ಕಾಕುತ್ಸ್ಥಕುಲಮಂಡನಗೆ ಕಮಲಾಪ್ತ ಕುಲದೀಪಂಗೆ ಸಾಕೇತನಗರಾಧಿಪಗೆ ಲೋಕೇಶನಿಗೆ ಪಾಕಶಾಸನಮುಖ್ಯ ನಾಕಪೂಜಿತಚರಣ ವೈಕುಂಠನಾಯಕ ಶ್ರೀ ಶೇಷಗಿರಿವರಗೆ 3
--------------
ನಂಜನಗೂಡು ತಿರುಮಲಾಂಬಾ
ನಿತ್ಯ ಸುಖಕರ ನೀರಜಾಕ್ಷರ ಭೃತ್ಯರಾಗುವ ಬನ್ನಿರಿ ಎತ್ತುವನು ಸಂಶಯವಿಡದೆ ಕೃತಕೃತ್ಯರಾಗುವವೆನ್ನಿರಿ ಪ. ಮೋದಮಯನ ಪ್ರಸಾದವನು ಕೊಂಡಾದರದಿ ಸೇವಿಪುದು ಪಾದಪದ್ಮಾಮೋದಯುತಾ ತುಳಸೀದಳಗಳನು ಮುಡಿವುದು ತೇದ ಗಂಧವ ಮಾಧವನಿಗಿರಿಸಾದನಂತರ ಕೊಳುವುದು ಭಾಗವತ ಕೇಳುತ 1 ಭೀಕರಿಪ ಮಹ ದುರಿತಗಣ ನಿರಾಕರಿಸುವನು ನಿಮಿಷದಿ ಕುಯುಕ್ತಿ ಶಕ್ತಿಯ ದೂಕುವನು ದುಷ್ಕೂಪದಿ ವಾಕುಗಳ ತಪ್ಪುಗಳನೆಣಿಸದೆ ಸಾಕುವನು ಸಂತಸದಲಿ ಒಡಗೂಡಿ ನಲಿವನು 2 ಶ್ರೀಶನನು ಭಜಿಸುವದಕೇನಾಯಾಸವಿರುವುದು ಹೇಳಿರಿ ವಾಸವಾಗಿಹ ಸಕಲ ಹೃದಯಾಕಾಶ ಪದ್ಮದಿ ಕೇಳಿರಿ ವಾಸುದೇವನ ವರ್ಣನಾಂಶವ ಲೇಶವಾದರು ತಾಳಿರಿ ಶೇಷ ಗಿರೀಶನ ದಾಸಕೂಟ ಸಮಾಶ್ರಯಣ ಸಂಗ್ರಹಿಸಿ ಬಾಳಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿಂದಿಸಿದ್ದು ಕುಂದಾದದ್ದೇನೊ ಮಂದಮತಿಗಳು ನಿಂದು ಸುಜನರಿಗೆಲ್ಲ ಪ. ಅಂದನುವಾಗಿಲ್ಲೆ ಇಂದಿರೇಶನು ಮಂದಗಮನೆ ದ್ರೌಪದಿಗೆ ಅ.ಪ. ಕಂದನೆಂದು ಕೌರವನ ಸೇವೆಗೆ ಆ ನಂದದಿಂದ್ಯವರ ಬೇಡೆಂದ ಮುನಿ ಬಂದರತ್ನವ ಬಿಟ್ಟನ್ನವ ಬೇಡಿಬಾರೆನೆ ಇಂದು ಮುಖಿ ಕೈಯಿಂದಿಡಿಸಿದ ಕೃಷ್ಣ 1 ಖಡ್ಗ ತೋರಿ ಬಳ ಪ್ರಹ್ಲಾದನಂಜಿಸೆ ಗುಡ್ಡ ಪೊತ್ತ ನರಹರಿಯಾಗ ಹೆಡ್ಡನೆ ತೋರುವೆನೆಂದು ಕಂಬದಿ ದೊಡ್ಡ ಮೃಗರೂಪದಲಂಜಿಸಿದ 2 ತೊಡೆಯನು ಬಿಡು ಎನುತೊಡನೆ ನೂಕಲು ಪೊಡವಿಯಲ್ಲಿಹುದು ನಡೆ ಬಾಲಕನೆನೆ ಕಡುಭಯದಲಿ ಧೃವ ಒಡನೆ ಹರಿಯ ಪಾದ ಬಿಡದೆ ಧ್ಯಾನಿಸೆ ದೃಢವರವಿತ್ತ ಹರಿ (ಕಡೆ ಹಾಯಿಸಲು) 3 ಕರಿಯ ಕಂಬದ ತೆರದಿ ನಿಲಿಸೆ ನಕ್ರ ಪೊರೆದವನಾರೋ ಹರಿಯಲ್ಲದೆ ಶರಣಾಗತ ಚಿಂತಾಮಣಿ ಎನೆ ಕರಿ ಪರಿದು ಚಕ್ರನಿ ನಕ್ರನ ಬೇಗ 4 ಏಕಾದಶಿವ್ರತ ಏಕಭುಕ್ತನ ನೀರೆಡಿಸೆ ಮಾನುನಿ ಬರಲು ಹರಿತಾ ಕರುಣಿಪನೆಂದು ತರಳನ ಶಿರಕೆ ಕೈಹಾಕೆ ಶ್ರೀ ಶ್ರೀನಿವಾಸನ ಸುತತಾ ಕರುಣಿಸಿದ 5
--------------
ಸರಸ್ವತಿ ಬಾಯಿ
ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ನಿಂದೆ ಮಾಡುವಿ ಯಾತಕೋ | ಮಂದಮಾನವ ಶ್ರೀಗೋವಿಂದ ದಾಸಾರ್ಯರನ್ನ ಎಂದೆಂದಿಗೀಮಾತು | ಇಂದಿರೇಶನ ಭಕುತ ವೃಂದ ಮೆಚ್ಚುವದಿಲ್ಲವೋ ಮೂಢ ಪ ಬಾಲತನದಾರಭ್ಯ ಶೀಲ ಸದ್ಭಕುತಿಯಲಿ ತಾಳ ತಂಬೂರಿ ಪಿಡೆದು | ಶ್ರೀಲೋಲ ಹರಿನಾಮ ಹೇಳುತಲಿ ಸತತ | ಗೋಪಾಳ ವೃತ್ತಿಯ ಮಾಡಿ ಕಾಲವನು ಕಳೆದವರು 1 ಕುಸುಮಶರನಟ್ಟುಳಿಗೆ ವಶವಾಗದಿರಿ ಎಂದು ಉಸುರುತಲಿ ಶಿಷ್ಯಗಣಕೆ | ಅಸುರಾರಿ ಮಹಿಮೆಯನು ರಸವತ್ ಕವಿತೆಯಲಿಂದ ನಿಶಿ ಹಗಲು ವರ್ಣಿಸಿದ ಅಸಿಫ್ಯಾಳು ನಿಲಯರನು 2 ಕ್ಲೇಶ ಸುಖ ಸಮ ತಿಳಿದು ಲೇಸಾಗಿ ಗುರುಸೇವೆಗೈದು ವಾಸಸ್ಥಾನಕೆ ತೆರಳಿದೀ ಸುಗುಣರನು ವ್ಯರ್ಥ ನಿಂದೆ ಮಾಡುವಿ ಯಾಕೋ 3
--------------
ಶಾಮಸುಂದರ ವಿಠಲ
ನಿಂದೆಯಾಡಬೇಡೋ ಪರ ನಿಂದೆ ಮಾಡಬೇಡೋ ಪ ಇಂದಿರೇಶನಪಾದಗ್ಹೊಂದಿ ಭಜಿಪರಿ ಗೊಂದನೆ ಮಾಡೋ ಅ.ಪ ಕುಂದುವರಿಯಬೇಡೋ ಮನಸೇ ಮಂದನಾಗಬೇಡೋ ಎಂದಿಗಾದರು ಒಂದಿನ ಈ ಜಗ ಕುಂದಿಪೋಗುವ ಭವಬಂಧಕ್ಕೀಡಾಗಬೇಡೋ 1 ಕೋಪಗೊಳ್ಳಬೇಡೋ ಮನಸೇ ಪಾಪಕ್ಹೋಗಬೇಡೋ ಗೌಪ್ಯವಳಿಯಬೇಡೋ ಶಾಪಕೊಳ್ಳಬೇಡೋ ಆ ಪರಬ್ರಹ್ಮನ ಶ್ರೀಪಾದಪಾಡೋ 2 ಸೊಕ್ಕು ಮಾಡಬೇಡೋ ಯಮನ ಲೋಕಕ್ಹೋಗಬೇಡೋ ಏಕಚಿತ್ತದಿ ಲೋಕೈಕ ಶ್ರೀರಾಮನ ಭಕುತಿಂ ಭಜಿಸಿ ಮುಕುತಿಯ ಕೂಡೋ 3
--------------
ರಾಮದಾಸರು
ನಿಧಿಯು ದೊರಕಿತು ಎನಗೆ ನಿಧಿಯು ದೊರಕಿತು. ವಿಧಿ ಭವಾದಿ ದೇವರೆಲ್ಲ ಒದಗಿ ಮಾನದಿಂದ ಕಾಯ್ವ ಪ. ನಿತ್ಯ ಮಂಗಳೆಯನು ತನ್ನುರ ಸ್ಥಳದಲಿ ಧರಿಸಿರುವದು ಎತ್ತ ನೋಡಲಲ್ಲಿ ನಲಿವ ಭೃತ್ಯಪೂರ್ಣಾರ್ಥ ಕೊಡುವ 1 ಕಷ್ಟ ಕಲುಷವೆಂಬ ದೊಡ್ಡ ಬೆಟ್ಟವೆಲ್ಲ ಭೇದಿಸುವುದು ಇಷ್ಟ ಲಾಭ ಪುಷ್ಪ ಜ್ಞಾನ ದೃಷ್ಟಿಸಹಿತ ಕೊಟ್ಟು ಕಾವ 2 ಹಲವು ಭವದ ತಾಪವನ್ನು ಕಳೆದು ಕೃಪಾರಸವ ಸೂಸಿ ಮಧ್ಯಪೊಳೆವಪೂರ್ವ 3 ಸೋತು ಸಕಲ ಜನರ ಮುಂದನಾಥನಾಗೆ ಕರುಣಿ ಜಗ- ನ್ನಾಥದಾಸರೊಲಿದು ಪರಮ ಪ್ರೀತಿಯಿಂದ ತೋರಿದಂಥ 4 ಇಹ ಪರತ್ರ ಸುಖವನೀವ ಮಹದುಪಾಸ್ಯ ಪಾದಪದ್ಮ ವಹಿಸಿದವರ ಸಕಲಭಾಗ್ಯ ನಿವಹಿ ವೆಂಕಟೇಶನೆಂಬ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಿನಗೇನಾಯಚ್ಚರಿಲ್ಲೋ|ಕೇಳಾತ್ಮಾ| ಪಾದ ಭಕುತಿಯ ತೊರೆದಿಪ ನಾನಾ ಯೋನಿಯಲಿ ತೊಳಲಿ | ಭವದು:ಖ | ಕಾನನದಲಿ ಬಳಲಿ | ಮಾನವ ಜನುಮ ಬಂದು ಹರಿ ಹರಿ1 ವಿಷಯ ಸುಖವ ಬೆರೆದು | ಬೇಕಾದ | ಸ್ವಸುಖವನೆಗಳದು | ಅಶನ ವ್ಯಸನದಲಿ ಪಶುವಿನ ಪರಿಯಲಿ | ನಿಶಿದಿನವನುಗಳೆದೇ ಹರಿ ಹರಿ2 ಸಾಧು ಸಂಗಕತ್ಯಗಳೀ | ಕುಜನರಾ | ಹಾದಿಯಿಂದಲಿ ಮರಳೀ | ಸಾದರ ವಿವೇಕ ದೀಪ ಮನೆಯೊಳಿಟ್ಟು | ಸಾಧಿಸೋ ನಿಜ ಘನವಾ ಹರಿ ಹರಿ3 ಅರಗಳಿಗೆಯ ನೋಡಲು ಶ್ರೀಹರಿ | ಸ್ಮರಿಸದೆ ತಾ ನಿರಲು | ಕರೆದು ವಡಿಯ ನಿನ್ನ ತನು ಲೇಶವ ಕೇಳಲು | ತೆರಗಾಣಿ ನುಡಿಗಳಿಗೇ ಹರಿ ಹರಿ4 ಹಿಂದಾದ ಮತಿಗಳಿಯೋ ಇನ್ನಾರೆ | ಪಥ ವರಿಯೋ | ಭವ | ಬಂದಗೆಲಿದು ಸುಖಿಸೋ ಹರಿ ಹರಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನಿನ್ನ ನಂಬಿದೆನೊ ಬ್ರಹ್ಮಣ್ಯತೀರ್ಥಾರ್ಯಾ ಸನ್ನುತಚರಣಪಾವನ ಸುಚರ್ಯಾ ಪ ಘನ್ನ ಭವದ ಭಯವನ್ನು ಕಳೆದು ಯತಿ ರನ್ನ ಎನ್ನನು ಧನ್ಯನ ಮಾಡೋ ಅ.ಪ. ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ ದುರಿತೌಘಜೀಮೂತ ಚಂಡ ಸಮೀರ ಸುರುಚಿರ ತುಳಸಿ ಪಂಕಜಮಣಿಹಾರ ಧರಿಸಿ ಮೆರೆವೊ ದಿನಕರನವತಾರ ಕರುಣದಿ ತವ ಶ್ರೀಕರಚರಣಾಂಬುಜ ದರುಶನವನು ಕೊಡು ಗುಣಗಣನಿಧಿಯೇ 1 ಸೇವಕಜನರಿಗೆ ದೇವತರುವೆನಿಪ ಶ್ರೀವಿಠಲನಪಾದತಾವರೆ ಮಧುಪ ಕೋವಿದ ಜನರು ಸಂಭಾವಿಸಿ ಸ್ತುತಿಪ ಪಾವನ್ನ ಪಾದಾರ್ಚಿತ ಭಾವಜ ಮುನಿಪ ಪಾವನ ಸುಮತರ ಜೀವರ ಚಂದ್ರನೆ ಪಾವನ ಮತಿ ಕೊಡು ನೀ ಒಲಿದೆನಗೆ 2 ಪರ ತತ್ವಜ್ಞಾನ ವರವ ಪಾಲಿಸು ಸರ್ವವಿದ್ಯಾಪ್ರವೀಣ ನರಸಿಂಹವಿಠಲ ಶ್ರೀಹರಿ ಸನ್ನಿಧಾನ ಕರುಣಾಪಾತ್ರನೆ ದಿವ್ಯವರಪೂರ್ಣಜ್ಞಾನ ಹರಿಗುರುಭಜನ ತ್ವತ್ಪದ ವ್ಯಾಸಾರ್ಯರ ಗುರುವೆಂದೆನಿಸಿದೆ ಧರೆಯೊಳು ಮೆರೆದೆ 3
--------------
ನರಸಿಂಹವಿಠಲರು
ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ 1 ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ2 ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ನಿನ್ನ ನೀ ತಿಳಿದು ನೋಡೋ ಕೇಳಲೋ ಪ್ರಾಣಿ ಪ ನಿನ್ನ ನೀ ತಿಳಿದು ನೋಡೋ ಪನ್ನಗಾದ್ರೀಶನ ಕೂಡೋ ಬನ್ನ ಭವಣೆ ಈಡ್ಯಾಡೋ ಕೇಳೆಲೋ ಪ್ರಾಣಿ 1 ನಾನಾರು ತನುವಾರು ತನುವಿ ನೊಡೆಯನಾರು ನಾನೀ ನೆಂಬುದರೊಳಾರು ಕೇಳೆಲೋ ಪ್ರಾಣಿ 2 ಹಿಂದಿನ ಪುಣ್ಯಗಳಿಂದ ಬಂದು ನರ ದೇಹದಿಂದ ಬಂದೇನಾ ಘಳಿಸಿನಿಂದೇ ಕೇಳೆಲೋ ಪ್ರಾಣಿ 3 ವಿದ್ಯಾ ವಿತ್ಪತ್ತಿ ತೋರಿ ಗದ್ಯ ಪದ್ಯಗಳ ಬೀರಿ ಬಿದ್ದಿ ಗರ್ವಾರಣ್ಯದಾರೀ ಕೇಳೆಲೋ ಪ್ರಾಣಿ 4 ತಂದೆ ಮಹಿಪತಿ ದಯದಿಂದ ಪಡೆಯೋ ವಿಜಯ ಕಾಯ ಕೇಳೆಲೋ ಪ್ರಾಣಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ ಮನ್ನಿಸಿ ಕೃಪೆಯ ಮಾಡೊ ಪ. ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ. ರಜತಪೀಠಾಪುರದಿ ರಮ್ಯ ಮಂದಿರದಲ್ಲಿ ರಾಜಿಸುತ್ತಿಹ ದೇವನೆ ಕುಜನಮರ್ಧನ ಎನ್ನ ರಜ ತಮೋಗುಣ ಕಳದು ನಿಜಭಕ್ತರೊಡನಾಡಿಸಿ ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು ನಿಜರೂಪ ನೋಡುವಂತೆ ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ ಭಜಿಸಲ್ಯಾತಕೆ ನಿನ್ನನು ದೇವ 1 ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ ನೀತ ಗುರುದ್ವಾರದಿಂದ ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ ಪ್ರೀತನಾಗಿ ಕಾಯೋ ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ ಘಾತಿಗೊಳಿಸುವರೆ ಹೀಗೆ ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ ಸೋತು ಬಂದಿಹೆನೊ ಭವದಿ ಮನದಿ 2 ಸತ್ಯಸಂಕಲ್ಪ ನೀನಾದಡೆ ಎನಗಿನ್ನು ಅತ್ಯಧಿಕ ರೂಪ ತೋರೊ ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು ಎತ್ತ ಪೋದರು ಬಿಡದೆಲೊ ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು ಮತ್ತೆ ಕರುಣವಿಲ್ಲವೆ ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ ಚಿತ್ತಕ್ಕೆ ತಂದು ಕಾಯೊ ಕೃಷ್ಣ 3 ಆನಂದಮುನಿವರದ ಆನಂದ ಕಂದನೆ ಆನಂದನಿಲಯವಾಸ ಆನಂದರತ್ನಪ್ರಭಾದಿಂದ ರಾಜಿತನೆ ಆನಂದಮೂರ್ತಿ ಕೃಷ್ಣ ಆನಂದಗೋಕುಲದಿ ಆನಂದದಲಿ ಮೆರೆದು ಆನಂದ ಸುಜನಕಿತ್ತೆ ನೀನಿಂದು ಎನ್ನ ಮನಕೆ ಆನಂದವನೆ ಇತ್ತು ಆನಂದರೂಪ ತೋರೊ ಕೃಷ್ಣ 4 ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು ಪೊರೆವರಿನ್ಯಾರು ಜಗದಿ ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ ಗುರುಗಳಂತರ್ಯಾಮಿಯೆ ಸರ್ವನಿಯಾಮಕ ಸರ್ವವ್ಯಾಪಕನೆಂಬ ಬಿರುದು ಪೊತ್ತಿಲ್ಲವೇನೊ ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ ಪರಿಪರಿಯ ರೂಪ ತೋರೊ ಕೃಷ್ಣ 5
--------------
ಅಂಬಾಬಾಯಿ
ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ಪ ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾ-ವನ್ನವಾದುದು ನಿಶ್ಚಯಾ ಜೀಯ ಅ.ಪ. ಪಂಚ ಮಹ ಪಾತಕರೊಳಗೆ ಮೂರನೆ ಕಕ್ಷಿಕಾಂಚನ ದ್ರೋಹಿ ನಾನು ಯೆನ-ಮುಂಚೆ ಬಂದಾಗ ಕೈ ಬಿಡದೆ ಪ್ರಾ-ಪಂಚವನೆ ಬಿಡುಯೆಂದು ನುಡಿದೆ ಯೆನ್ನಸಂಚಿತಾಗಮವೆಲ್ಲ ತೊಡದೆ ಯೆನ್ನ ||ಕಂಚು ಕಟ್ಬುಳಿ ಕಲ್ಲೊತ್ತಿನ ಮೇಣ್ ಕಾಶಿಗೆ ||ಪಂಛೇರು ಮಾಡಿ ನಡದೆ ಬಿಡದೆ 1 ವ್ಯಾಸರಾಯರ ಗುಹೆಯೊಳಗೆ ನವ ಸಂ-ನ್ಯಾಸಿಗಳ ಸಮಕ್ಷಮದಲಿ ಯೆನ್ನದಾಸನಾಗೆನುತ ನೀ ಪೇಳ್ದೆ ಯೆನ್ನವಾಸಿ ಪಂಥಗಳೆಲ್ಲ ತಾಳ್ದೆವೊಲಿದುದೋಷಾಂಕುರಗಳೆಲ್ಲ ಸೀಳ್ದೆ ಸ್ವಾಮಿ ||ಶ್ರೀಶ ಸರ್ವೋತ್ತಮನೆಂದು ನೀ ಪೇಳಿ ಸಂ-ತೋಷದಿಂದೆನ್ನ ಪೊರದೆ ಬಿಡದೆ 2 ನಿತ್ಯ ಮೆರೆವೆ ಯೆನ್ನ ||ಪೂಜಾ ಫಲವೆಂದು ಆವಾಗೆ ನಿನ್ನ ಪದರಾಜೀವ ಧ್ಯಾನಿಸುವೆ ಸ್ವಾಮಿ 3 ಪುಶಿಯು ಜಗವೆಲ್ಲ ದೈವವು ತಾನೆನುತಅಸಮ ವೇದ ಪೌರುಷ ಯೆಂಬಂಥಭಸುಮಧಾರಿಯನೆ ಕರದೆ ಅವನಅಸುರ ಭಾವವನೆಲ್ಲ ಮುರಿದೆ ನಮ್ಮಬಿಸಜಾಕ್ಷ ಪರನೆಂದು ಪೊರೆದೆ ಸ್ವಾಮಿ ||ಎಸೆವ ದ್ವಾದಶನಾಮ ಪಂಚಮುದ್ರಿಯನಿಡಿಸಿನಸುನಗುತಲವನ ಪೊರದೆ ಬಿಡದೆ 4 ವಾಕು |ಅನ್ಯಥಾ ಮಾಡುವುದು ಸಲ್ಲ ಮೋ-ಹನ್ನ ವಿಠ್ಠಲ ಯಿದನು ಬಲ್ಲ ಮುನ್ನಾಪನ್ನಗಶಯನ ಪ್ರಸನ್ನನಾದದಕೆ ಯಿದುಎನ್ನ ಮನೋರಥ ಸಿದ್ಧಿಯೊ ಸ್ವಾಮಿ 5
--------------
ಮೋಹನದಾಸರು