ಒಟ್ಟು 3141 ಕಡೆಗಳಲ್ಲಿ , 118 ದಾಸರು , 2209 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಅಂಜಿಕೆಯು ಎನಗೇನುದೇವಾ ನಿನ್ನ ಭಕುತರಿಗಲ್ಲದಲೆ ಅಂಜುವೆನೆ ನಾನು ಪ ನಿನ್ನ ಬೈದವನಿಗೆ ಪುಣ್ಯಲೋಕಗಳುಂಟು ನಿನ್ನವರ ನಿಂದಕರಿಗನ್ಯಗತಿಯು ನಿನ್ನ ನಿಂದಿಸಲು ಫಲವ ನೀಡುವಿ ದೇವಾ ಜನ್ಮ ಜನ್ಮಕೆ ನಿನ್ನ ಜನ ದ್ವೇಷಸಲ್ಲಾ 1 ರೂಪಕೆಡಿಸಿದವಗಾಪಾರ ಗತಿಯನೆ ಇತ್ತಿ ಪಾಪಿಯವನಾದರೂ ಪುಣ್ಯಶಾಲೀ ಕೋಪದಿಂದಲಿ ಒದ್ದ ಭೃಗುಮುನಿಯನು ಕಾದ್ಯಾ ಮೋಸದ್ವೇಷವ ಮಾಡೆ ಪಾಪನರಕಾ ಅಹುದು 2 ಧಾತಜನಕನೆ ನಿನ್ನ ಘಾತಿಸಲು ಪರವಿಲ್ಲ ಯಾತಕಾದರು ನಿನ್ನ ದೂತರನ್ನಾ ಮಾತಿನಿಂದಲಿ ದೂರೆ ಪಾತಕವೆ ಬರುವುದು ನಿತ್ಯಲ್ಲ ಗುರುಜಗನ್ನಾಥ ವಿಠಲರೇಯಾ 3
--------------
ಗುರುಜಗನ್ನಾಥದಾಸರು
ನಿನ್ನ ಕ್ಲೇಶವ ಕೇಳೆ ಎನಗೆ ಮರುಕಪ ಎನ್ನ ಕ್ಲೇಶವ ನಿನಗೆ ತಿಳಿಸಬಹುದೆ ದೇವ ಅ.ಪ ಹದಿನಾಲ್ಕು ಲೋಕಗಳ ಹುಡುಗತನದಲಿ ಪಡೆದು ಅದಕೆಲ್ಲ ಅನ್ನವೀಯುವ ಚಿಂತೆಯು ಹದಿನಾಲ್ಕು ಲೋಕಗಳ ಸರ್ವಕರ್ಮಗಳಿಗೂ ಹಗಲಿರುಳು ಪ್ರೇರಣೆಯ ಮಾಡುವಾತಂಕ 1 ಹಿರಿಮಗನದೊಂದುಸಿರ ತರಿದರೆಂಬಾತಂಕ ಕಿರಿಮಗನ ದೇಹ ಪೊಸಕಿದ ಚಿಂತೆಯು ಹರನು ಮೊಮ್ಮಗ ಹಾಲಾಹಲವ ಕುಡಿಯುತ ಹಲ್ಲು ಕಿರಿಯುವಾತಂಕಕ್ಕೆ ಹರವು ತೆರವಿಲ್ಲ 2 ಚಂಚಲಳು ಸತಿಯೆಂದು ಹೊಂಚು ಕಾಯುವ ಚಿಂತೆ ಮಂಚದಲಿ ಘಟಸರ್ಪ ವಿಷದ ಚಿಂತೆ ಸಂಚಿತಾಗಮ ಪ್ರಾರಭ್ಧಗಳನಳಿಸುವಗೆ ವಂಚಕರು ಏನು ಮಾಡುವರೆಂಬ ಚಿಂತೆ 3 ಹಲವು ವಿಧ ವೇಷಗಳ ತಾಳಿ ಜಗಂಗಳಲಿ ನೀ ತಲೆಯ ಮರಿಸಿಕೊಂಡರೇನು ಫಲವೊ ಬಳಸಿ ಹುಡುಕಿ ಗೂಢಚಾರಿ ಯೋಗಿಯು ನಿನ್ನ ತಿಳಿದು ಬೆಳಕಿಗೆ ತರುವ ಮರೆಮಾಚಲೇಕೊ 4 ತಾಪತ್ರಯ ತಳೆಯೆ ಗೋಪನಲಿ ಪುಟ್ಟಿದರು ಗೋಪಿಯರ ಸಾಸಿರದ ಗೋಳು ನಿನಗೆ ಭೂಪ ದಶರಥನ ಮಗನಾಗಿ ಪುಟ್ಟಿದರಯ್ಯೊ ಪಾಪ ಸತಿಯಳ ಕಳೆದುಕೊಂಡ ಬಲುಚಿಂತೆ 5 ನಿನ್ನ ಬೇಡುವುದಿಲ್ಲ ನಿನ್ನ ಕಾಡುವುದಿಲ್ಲ ನಿನ್ನ ನೋಡಲು ಎನಗೆ ಬೇಸರವು ಜಗಕೆ ನಿನ್ನ ಚಿಂತೆಯು ಮನ ಪ್ರಸನ್ನತೆ ನೀಡುವುದು ಇನ್ನೇನು ನಿನಗೆ ಚಿಂತೆಯೊ ತಿಳಿಸಿ ಪೊರೆಯೊ 6
--------------
ವಿದ್ಯಾಪ್ರಸನ್ನತೀರ್ಥರು
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಅ.ಪ. ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ 1 ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ ಪ್ರತಿದಿವಸವಾಗೆ, ದೇವ 2 ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು ಪಾತ್ರ ಜನರೊಳು ಪೊಂದಿಸು ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು ಧಾತ್ರಿಯೊಳು ನೀಚನೆನಿಸು ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು ಸ್ತೋತ್ರಕ್ಕೆ ಯೋಗ್ಯನೆನಿಸು ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ ರಾತ್ರಿ ಹಗಲು ಎನ್ನದೆ ದೇವ 3 ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು ಜಪತಪವನೆ ಮಾಡಿಸು ಅಪಹಾಸ್ಯ ಮಾಡಿಸು ಅದ್ಭುತವನೈದಿಸು ಗುಪಿತರೊಳಗಧಿಕನೆನಿಸು ಉಪಕಾರಿ ನರನೆನಿಸು ಉದ್ದಂಡನಿವನೆನಿಸು ವಿಪುಳ ಮತಿಯಲಿ ನಿಲಿಸು ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ ಸಫಲಮತಿಯೀವ ದೇವ 4 ವೇದವನು ಓದಿಸು ವೇದಾರ್ಥಗಳ ನುಡಿಸು ಓದಿದರು ದಡ್ಡನೆನಿಸು ಹಾದಿಯನು ತಪ್ಪಿಸು ಹಿತದವರನಗಲಿಸು ಸಾಧು ಮಾರ್ಗವನೆ ಕೊಡಿಸು ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು ಉದರಕೋಸುಗ ತಿರುಗಿಸು ಪಾದದಲಿ ಗಂಗೆಯನು ಪೆತ್ತ ಪರಮಾನಂದ ಮೋದ ವಿನೋದವಾಗೆ ದೇವ 5 ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು ಮಣಿ ಭೂಷಣವ ತೊಡಿಸು ಘನ ಕವನ ಪೇಳಿಸು ಕೌತುಕವನೈದಿಸು ವನ ಭುವನದೊಳು ನಿಲಿಸು ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು ಬಿನುಗು ವೈರಾಗ್ಯನೆನಿಸು ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ ಎನಗೆ ನೀನೆ ಸದ್ಗತಿ ಸ್ವಾಮಿ 6 ಯಾವುದಾದರು ನೀನು ಇತ್ತುದಕೆ ಎನಗಿಷ್ಟು ನೋವು ಒಂದಾದರಿಲ್ಲ ಜೀವೇಶರೊಂದೆಂಬ ದುರ್ಮತವ ಕೊಡದಿರು ಭಾವದಲಿ ನಾ ಬೇಡುವೆ ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ ನಾನೊಲ್ಲೆ ಮಿಥ್ಯಮತವ ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ ಪಾವನ್ನ ಮಾಳ್ಪ ಶಕ್ತ ವ್ಯಕ್ತ 7
--------------
ವಿಜಯದಾಸ
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ. ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1 ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2 ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3 ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4 ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5
--------------
ವಾದಿರಾಜ
ನಿನ್ನ ನಂಬಿದವರಿಗೆ ಇನ್ನು ಕೊರತೆಗಳುಂಟೆ ಪನ್ನಗಾದ್ರಿನಿವಾಸ ಶ್ರೀ ವೆಂಕಟೇಶ ಪ. ಬನ್ನ ಬಡಿಸದೆ ಎನ್ನ ಧ್ಯಾನವನ್ನು ಮರೆವರು ಭಕ್ತರಂದು ಬನ್ನ ಬಿಡಿಸಿ ಪೊರೆವೆ ಕರುಣದಿ ಅ.ಪ. ಅಧಿಕ ಸಂಸಾರದಿ ಪದೆಪದೆಗೆ ತೊಡರುಗಳ ಬದಿಗನಾಗಿದ್ದವರಿಗೆ ಕೊಟ್ಟು ಸದಮಲಾನಂದ ಪರೀಕ್ಷಿಸುವೆ ತವಕದಿ ಚದುರಿಸುತ ಮನವನ್ನು ಅದುಭುತನೆ ನಸುನಗುತ ನೀನೋಡುತ್ತ ಹೆದರಿ ಬೆದರಿ ನಿನ್ನ ಧ್ಯಾನಕ್ಕೊದಗಲಿ ಮನವೆಂಬೆಯಲ್ಲದೆ ಮಧುರವಾಣಿಯ ತೋರಿ ಸಲಹಲು ವದಗಿ ಕಾಯುವೆ ಭಕ್ತರನ್ನು (ಚದುರ ನಿನಗೆಣೆಗಾಣೆ ಜಗದೊಳು) 1 ಜಾಣರೊಳತಿ ಜಾಣತನ ತೋರುತ್ತ ಕಾಣಿಸಿ ಕಾಣದಂತಿರುತ ಭಕ್ತರೊಳು ಗಾಣಕೆ ಸಿಲ್ಕಿದ ಎಳ್ಳು ಸಚ್ಛದೆಣ್ಣೆ ಮಾಣದೆ ಬರುವ ತೆರ ತೋರುವೆ ಜನಕೆ ಕಾಣದಿಹ ಕಾಮಕ್ರೋಧದ್ಹಿಂಡಿಯ ಮಾಣದೆ ಬೇರ್ಪಡಿಪೆಯಲ್ಲದೆ ಇದು ಕಾಣ್ವರು ನಿನ್ನ ಚರಣದಂಘ್ರಿಯ ಕಾಣುತಲೆ ಸ್ತುತಿಮಾಡಿ ಹಿಗ್ಗುತಲಿಹರು 2 ದಿಟ್ಟಮೂರುತಿ ಕೇಳೊ ಕೊಟ್ಟರೊಳ್ಳಿತು ಕಷ್ಟ ಉತ್ಕøಷ್ಟವಾಗಲಿ ಹರಿಯೆ ಎನ್ನ ದೊರೆಯೆ ಕಟ್ಟಕಡೆ ನಿನ ಧ್ಯಾನ ಕೊಟ್ಟು ಕಾಯುವ ಭಾರ ಘಟ್ಟಿ ಕಂಕಣ ಕಟ್ಟಿ ನಿಂತಿಹೆ ಶ್ರೀ ಶ್ರೀನಿವಾಸ ಎನ್ನ ದುಷ್ಟತನವೆಲ್ಲ ಕುಟ್ಟಿ ಕೆಡಹುವೆ ಕಟ್ಟಕಡೆಗೆ ನಿನ್ನ ಪಾದಾಂಗುಷ್ಠ ಸೇರಲಿಯೆಂದಾ ಭಕ್ತರ ಬೆಟ್ಟದೊಡೆಯನೆ ಸಲಹುತಿರುವೆ ಉತ್ಕøಷ್ಟ ಮೂರುತಿ ಭಕ್ತರಿಷ್ಟದಾಯಕ 3
--------------
ಸರಸ್ವತಿ ಬಾಯಿ
ನಿನ್ನ ನಂಬಿರುವೆ ಪ್ರಸನ್ನನಾಗು ಬ್ಯಾಗಚನ್ನಿಗವರದ ವಿಜಯರಾಯ ಪ ಮನ್ನಿಸಿ ಎನ್ನ ಪಾವನ್ನ ನೀ ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ಅ.ಪ. ಕರುಣಸಾಗರನೆಂಬೊ ಬಿರಿದು ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ ||ಮರೆಯದೇ ಪೊರೆ ನಿನ್ನ ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ ||ದುರುಳ ವಿಷಯಕ್ಕಿಳಿವ ಮರುಳ ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ 1 ವಿಧಿ ಜಪ ತಪವ ಅರಿಯೆ ಹೋಮ ನೇಮಅರಿಯೆ ಮಂತ್ರ ಸ್ತೋತ್ರವ ||ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ ದಿನವಇರುಳು ಹಗಲು ಕಳದೆನು ||ಕರುಣವಿಲ್ಲವ್ಯಾಕೆ ಶರಣಾಗತನ ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ 2 ಅಜ ಭವರಿಂದೊಂದ್ಯನಾದ್ವಿಜಯ ಮೋಹನ ವಿಠಲಭಜಕರಿಗೊಲಿದಂತೆ ಉಪಾಯ ||ನಿಜವಾಗಿ ಮಾಡದಿರೆ ಬಿರುದಿಗೆ ಕುಂದುಗಜರಾಜವರದನ ಪ್ರಿಯಾ ||ಕುಜನರ ಮತ ಬಡಿದು ವಿಜಯ ವಿಠಲನೇ ಪರನೆಂದುತ್ರಿಜಗದೊಳು ಮೆರಸಿದ ಭಜಕಾಗ್ರೇಸರ ಗುರುವೆ 3
--------------
ಮೋಹನದಾಸರು
ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ 1 ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ2 ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವನಿನ್ನ ನಾಮ ಘಂಟಾಕರ್ಣನ ಸಲಹಿದೆ ದೇವನನ್ನನೀಗ ಉದ್ಧರಿಸು ರಂಗಧಾಮ ಪ ತಂದೆಯ ಮುಂದೆ ಮಗನನು ಬೈದು ಭಂಜಿಸಲುತಂದೆಯ ಮುಂದೆ ಪತ್ನಿಯ ಪಿಡಿದೆಳೆದು ಅಂಜಿಸಲುಕುಂದು ಗಂಡಗಲ್ಲದೆ ಹೆಂಡತಿಗುಂಟೆನಿಂದನೆ ಎಲೆ ದೇವ1 ದೊರೆ ನೋಡುತಿದ್ದಂತೆ ಬಂಟನನುಪರರು ಕೊಂಡೊಯ್ಯಲು ಕುಂದುಅರಸಗಲ್ಲದೆ ಆಳಿಗೇನುಅರಿಯಂತೆ ಬಂದೆನ್ನ ನಡವಳಿಯಲಿ ಸ್ವಾನದುರಿತಂಗಳೆಲ್ಲ ಕಾಡುತಿವೆ ಪರಿಹರಿಸು ಎಲೆ ದೇವ 2 ಊದುವ ಕಾಳೆಯದನರ್ಥಕವಾದಲ್ಲಿ ನುಡಿಸುವ ಬಿರುದು ಒಡೆಯಂಗಲ್ಲದೆಮಾಧವನೆ ಎನ್ನ ನಡವಳಿಯಲ್ಲಿ ಹುರುಳಿಲ್ಲಓದುವುದು ನಿನ್ನ ನಾಮಸ್ಮರಣೆಯೆ ಎಲೆ ದೇವಆದರಿಸು ನಿನ್ನ ಲೆಂಕನ ಪ್ರತಿ ಲೆಂಕನಭೇದವೇತಕೆ ನಿನ್ನ ದಾಸ ನಾನು ಬಾಡದಾದಿ ಪ್ರಸನ್ನ ಕೇಶವನೆ ಎನಗಾದ ದುರ್ಮತಿಯ ಪರಿಹರಿಸು ಎಲೆ ದೇವ 3
--------------
ಕನಕದಾಸ
ನಿನ್ನ ನೆನೆಯುವುದೆ ಭಾಗ್ಯ ನಿನ್ನ ನೋಡುವುದೇ ಕಂಗಳಿಗೆ ಹಬ್ಬ ನಿನ್ನ ಬಳಿ ನಲಿದಾಡುವುದೇ ಭಕ್ತರಿಗಿಷ್ಟ ನಿನ್ನಗಲಿ ಇಹದೊಂದು ಘಳಿಗೆಯೂ ಅವರ ಮನಸಿನಲಿ ಅಖಿಳ ದೇವೇಶ ನಿನ್ಹೊರತು ಗತಿಯಮಗಾರೆಂಬರೊ ನಿನ್ನ ಭಕ್ತರು ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ ಮನ್ನಿಸಿ ಕೃಪೆಯ ಮಾಡೊ ಪ. ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ. ರಜತಪೀಠಾಪುರದಿ ರಮ್ಯ ಮಂದಿರದಲ್ಲಿ ರಾಜಿಸುತ್ತಿಹ ದೇವನೆ ಕುಜನಮರ್ಧನ ಎನ್ನ ರಜ ತಮೋಗುಣ ಕಳದು ನಿಜಭಕ್ತರೊಡನಾಡಿಸಿ ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು ನಿಜರೂಪ ನೋಡುವಂತೆ ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ ಭಜಿಸಲ್ಯಾತಕೆ ನಿನ್ನನು ದೇವ 1 ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ ನೀತ ಗುರುದ್ವಾರದಿಂದ ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ ಪ್ರೀತನಾಗಿ ಕಾಯೋ ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ ಘಾತಿಗೊಳಿಸುವರೆ ಹೀಗೆ ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ ಸೋತು ಬಂದಿಹೆನೊ ಭವದಿ ಮನದಿ 2 ಸತ್ಯಸಂಕಲ್ಪ ನೀನಾದಡೆ ಎನಗಿನ್ನು ಅತ್ಯಧಿಕ ರೂಪ ತೋರೊ ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು ಎತ್ತ ಪೋದರು ಬಿಡದೆಲೊ ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು ಮತ್ತೆ ಕರುಣವಿಲ್ಲವೆ ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ ಚಿತ್ತಕ್ಕೆ ತಂದು ಕಾಯೊ ಕೃಷ್ಣ 3 ಆನಂದಮುನಿವರದ ಆನಂದ ಕಂದನೆ ಆನಂದನಿಲಯವಾಸ ಆನಂದರತ್ನಪ್ರಭಾದಿಂದ ರಾಜಿತನೆ ಆನಂದಮೂರ್ತಿ ಕೃಷ್ಣ ಆನಂದಗೋಕುಲದಿ ಆನಂದದಲಿ ಮೆರೆದು ಆನಂದ ಸುಜನಕಿತ್ತೆ ನೀನಿಂದು ಎನ್ನ ಮನಕೆ ಆನಂದವನೆ ಇತ್ತು ಆನಂದರೂಪ ತೋರೊ ಕೃಷ್ಣ 4 ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು ಪೊರೆವರಿನ್ಯಾರು ಜಗದಿ ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ ಗುರುಗಳಂತರ್ಯಾಮಿಯೆ ಸರ್ವನಿಯಾಮಕ ಸರ್ವವ್ಯಾಪಕನೆಂಬ ಬಿರುದು ಪೊತ್ತಿಲ್ಲವೇನೊ ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ ಪರಿಪರಿಯ ರೂಪ ತೋರೊ ಕೃಷ್ಣ 5
--------------
ಅಂಬಾಬಾಯಿ
ನಿನ್ನ ಪದ ಧ್ಯಾನಿಪರು ಪಗಲಿರುಳು ನಿನ್ನ ಭಕ್ತರು ಹರಿ ನಿನ್ನ ರೂಪ ನೆನೆನೆನೆದು ಸ್ಮರಿಸಿ ಮನದಲಿ ನಿಲಿಸಿ ಸ್ತುತಿಸಿ ಪಾದ ಧೂಳು ಶಿರದಲ್ಲಿ ಧರಿಸುವರು ಭಕ್ತರು ನಿನ್ನ ರೂಹವ ಮನಸಿನ ಜಗಲಿಯಲಿ ನಿಲಿಸುವರು ಭಕ್ತರು ನಿನ್ನ ನಂಬಿ ಸಕÀಲಕಾರ್ಯ ನಿರ್ವಹಿಸುವರು ಭಕ್ತರು ಹರಿ ನಿನ್ಹೊರತು ಅನ್ಯರನು ನೆನೆಯರೊ ಪನ್ನಗಾದ್ರಿನಿವಾಸ ಶ್ರೀ ಶ್ರೀನಿವಾಸ ನಿನ್ನ ಭಕ್ತರ ಸಂಗಕೊಡೊ ಎನಗೆ ಸರ್ವೇಶ
--------------
ಸರಸ್ವತಿ ಬಾಯಿ
ನಿನ್ನ ಮನ ಬಂದಂತೆ ವಿಹರಿಸೊ ಸಿರಿಕೃಷ್ಣ ಎನ್ನ ಸ್ವಾಮಿ ನೀ ಎಂದು ಮರುಳಾದೆನಲ್ಲದೆ ಪ ಬೊಮ್ಮ ಮೊದಲು ಸುರೋತ್ತಮದ ಪಾದ ಧುಮ್ಮಿನೊಳು ಮುಳುಗಿಹೆ ಎಮ್ಮಯ್ಯ ಕೇಳು 1 ಸರ್ವಜ್ಞನೆಂಬಿಯಾ ಉರ್ವಿಯ ಪತಿಗಳು ಸರ್ವ ಜನಗಳಾ ಪೆÀೂರ್ವರೆ ಕಂಡೀಗ2 ಅಕ್ಷೀಣ ಶಕುತೆಂಬ ದಾಕ್ಷಿಣ್ಯವಿಲ್ಲದೆ ಸುಕ್ಷೀಣ ಜನರನ್ನು ರಕ್ಷಿಪರಯ್ಯ 3 ಭಕುತ ವತ್ಸಲನೆಂಬೊ ಭಕುತಿಯು ಎನ್ನಲ್ಲೆ ಯುಕುತವಾಗಿಹವು ವ್ಯಕತ ನಿನಗಲ್ಲವೆ 4 ಶರಣರ ದೊರೆಯೆಂದು ಕರುಣ ಮಾಡುವೆನೆಂಬ ಸಿರಿ ವಾಸುದೇವವಿಠಲ ಕರುಣಿಸಾಲಸ್ಯವ್ಯಾಕೊ 5
--------------
ವ್ಯಾಸತತ್ವಜ್ಞದಾಸರು