ಒಟ್ಟು 95 ಕಡೆಗಳಲ್ಲಿ , 43 ದಾಸರು , 92 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಜೀವರಾಯ ಸಾಧುಜನಪ್ರಿಯ ಪ ಭುಂಜಿಪ ಸದ್ಭಕ್ತರ ಸೇವೆಯೊಳಿರಿಸೆನ್ನನು ಅ.ಪ ರಾಮನಾಜ್ಞೆಯಲಿ ಶರಧಿಯದಾಟುತಲಿ | ರಾವಣನ ಪಟ್ಟಣದಿ ಭೂಮಿಜಾತೆಗುಂಗುರವನು ನೀಡುತಲಿ ಆ ಮಹಾಶಿರೋ ಮಾಣಿಕ್ಯವ ಸೀ- ತಾ ಮಹಾದೇವಿಯಿಂದ ಕೈಕೊಂಡ 1 ವನವ ಕೀಳುತಕ್ಷಾದಿ ರಾಕ್ಷಸರನು ವಧಿಸಿ | ಮುದದಿ ದಶಕಂ- ಠನ ತೃಣೀಕರಿಸಿ ವರಪುರವನುದಹಿಸಿ ಇನಕುಲಂಗೆ ವಾರ್ತೆಯ ತಿಳುಹಿಸಿ ನೀ ವನಜ ಸಂಭವನ ಪಟ್ಟವ ಪಡೆದೆ 2 ಕೋಲಾಹಲನಗರ ನಿವಾಸವಗೈಯ್ವೆ ಕುಜನರನು ತರಿವೆ | ಕರು- ಣಾಲವಾಲ ಭಕ್ತರಿಗೀಪ್ಸಿತವೀವೆ ಶ್ರೀಲತಾಂಗಿಪತಿ ಗುರುರಾಮವಿಠಲ ನೋಲಗಿಸುವ ಭಾಗ್ಯವಂತರೊಡೆಯನೆ 3
--------------
ಗುರುರಾಮವಿಠಲ
ಸರ್ವಾಂತರ್ಯಾಮಿ ಸಲಹೊ ಎನ್ನ ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ ಭಕ್ತರನು ತೋಷಿಸಲು ಹತ್ತವತಾರದಿ ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ 1 ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ 2 ಆವಾವ ಕಾಲದೊಳು ಆವಪರಿ ಕಷ್ಟದೊಳು ಕಾವ ನಿನ್ನಯ ನಾಮ ಮರೆಯದಂತೆ ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ 3
--------------
ಸರಸ್ವತಿ ಬಾಯಿ
ಸ್ಮರಿಸೊ ಹರಿನಾಮ ಏ ಮನುಜಾ ಸ್ಮರಿಸೋ ಹರಿನಾಮ ನಿರವಧಿ ಸುಖಧಾಮ ಪರಮ ಪುರುಷಗಿದು ಪರಿಪೂರ್ಣ ಪ್ರೇಮ ಪ. ತರಳ ಪ್ರಹ್ಲಾದನ ಪೊರದು ಪಾಂಚಾಲಿಗೆ ತ್ವರಿತದೊಳಕ್ಷಯವಿತ್ತು ಸರಸಿಯೊಳಗೆ ಕರಿರಾಜನ ಸಲಹಿದ ನರ ಕಂಠೀರವ ಕರುಣಿಸುವನು ಬೇಗ 1 ಹಲವು ಜನ್ಮಗಳಲ್ಲಿ ಗಳಿಸಿದ ದುಷ್ಕøತ ಗಳನೆಲ್ಲ ನಿರ್ಮೂಲಗೊಳಿಸುವುದು ಜಲಜ ಸಂಭವ ಮಾಳ್ಪ ಕೆಲಸದಿ ಸಿಲುಕದೇ ನೆಲೆಗೊಂಡು ಸೌಖ್ಯವ ಸಲಿಸಬೇಕಾದರೆ 2 ಕಲಿಕೃತ ಕಲ್ಮಷ ಬಲೆಯಿಂದ ಮೋಚನ- ಗೊಳಿಸಲು ಹರಿನಾಮವಲ್ಲದಿನ್ನು ಚಲಿತ ಚಿತ್ತದ ಕರ್ಮಬಲದಿಂದಲಾಹದೆ ನಳಿನನಾಭನೇ ನೀ ಬೆಂಬಲನಾಗು ತನಗೆಂದು 3 ಉದಯಾರಂಭಿಸಿ ಮತ್ತೊಂದು ದಯ ಪರ್ಯಂತ ವಿಧಿವಿಹಿತಗಳೆಲ್ಲ ಸದರವೇನೊ ಪದುಮನಾಭನ ನಾಮ ಒದಗಿದರದು ಪೂರ್ಣ- ವದರಿಂದ ಸರ್ವರ ಹೃದಯ ನೀ ಮರೆಯದೆ 4 ಸಂಚಿತಾಗಾಮಿಗಳಂಚುವಂ ದಿತಿಜರ ಸಂಚಯಕನುದಿನ ಸ್ಮರಿಸುವರ ಕಿಂತಿತಾರಬ್ದ ಪ್ರಪಂಚವ ತ್ವರಿತದಿ ಮಿಂಚಿನಂದದಿ ತೋರಿ ಪರಿಹಾರಗೊಳಿಪರೇ 5 ಕರುಣಾಭಿಮಾನಿಗಳರಿತು ಮಾಡಿಸುತಿಹ ನಿರತ ಕೃತ್ಯಗಳೊಂದು ಮೀರದಲೆ ಹರಿಯಾಜ್ಞೆ ಇದು ಯೆಂದು ಚರಿಸುತಲನುದಿನ ಪರಮೋತ್ತಮ ಕಾರ್ಯಧುರವಿದೆ ತನಗೆಂದು 6 ನಾಗ ಗಿರೀಂದ್ರನ ನೆನೆದರೆ ಇಹಪರ ಭೋಗ ಸಾಮ್ರಾಜ್ಯವು ಸ್ಥಿರವಾಹುದು ವಾಗೀಶನ ಪರಮಾಗಮ ಸಿದ್ಧಾಂತ- ವಾಗಿಹದಿದೆಯೆಂದು ನೀ ಗುರುತವನಿಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ
ಹಸ್ತವ ಕರುಣಿಸು ವಿಸ್ತಾರ ಮಹಿಮದ ಪ ಹಸ್ತವ ಕರುಣಿಸೋ ರಂಗಯ್ಯ ಹಸ್ತ ಕರುಣಿಸೆನ್ನ ಮಸ್ತಕದ ಮೇಲೆ ಹಸ್ತವ ಕರುಣಿಸೊ ಅ.ಪ ಸೋಮಕಾಸುರನ ವಧಿಸಿ ವೇದತಂದ ಹಸ್ತವ ಕರುಣಿಸೋ ರಂಗಯ್ಯ ತಾಮಸ ದೈತ್ಯನ ಉದರವ ಬಗಿದ ಹಸ್ತವ ಕರುಣಿಸೊ ರಂಗಯ್ಯ ಭೂಮಿಭಾರ ಶಿವಧನುವನು ಮುರಿದ ಹಸ್ತವ ಕರುಣಿಸೊ 1 ಎಸೆದು ಬಾಣ ವಾಲಿಗಭಯ ಪಾಲಿಸಿದ ಹಸ್ತವ ಕರುಣಿಸೋ ರಂಗಯ್ಯ ಅಸಮಮೂರುತಿಗೆ ಒಸೆದು ಉಂಗುರವಿತ್ತ ಹಸ್ತವ ಕರುಣಿಸೊ ಅಸುರನಿಗೊಲಿದು ಸ್ಥಿರ ಮುಕುಟವನಿಟ್ಟ ಹಸ್ತವ ಕರುಣಿಸೋ ರಂಗಯ್ಯ ವಸುಧೆ ಭಾರಿಳುಹಲು ನಿರುತದಿಂದೆತ್ತಿದ ಹಸ್ತವ ಕರುಣಿಸೊ 2 ಸುರಗಣಕಮೃತ ಹರುಷದಿ ನೀಡಿದ ಹಸ್ತವ ಕರುಣಿಸೋ ರಂಗಯ್ಯ ಪರಮಗೋವರ್ಧನ ಗಿರಿಯೆನೆತ್ತಿದ ಹಸ್ತವ ಕರುಣಿಸೊ ಸಾರಸ ಗಂಧಿಯರುಟ್ಟಿರ್ದ ಸೀರೆಯ ಕದ್ದ ಹಸ್ತವ ಕರುಣಿಸೋ ರಂಗಯ್ಯ ಮೆರೆವ ರುಗ್ಮನ ಮಹಗರುವವ ಮುರಿದ ಹಸ್ತವ ಕರುಣಿಸೊ 3 ಜನನಿ ಜನಕರ ಸೆರೆಯನು ಬಿಡಿಸಿದ ಹಸ್ತವ ಕರುಣಿಸೋ ರಂಗಯ್ಯ ಜನನಿಮುಂದಾಡುತ ಕಡಗೋಲು ಪಿಡಿದ ಹಸ್ತವ ಕರುಣಿಸೊ ವರರುಗ್ಮಿಣಿಕೈಯ ಸರಸದಿ ಪಿಡಿದ ಹಸ್ತವ ಕರುಣಿಸೋ ರಂಗಯ್ಯ ನರಗೆ ಸಾರಥಿಯಾಗಿ ಕುದುರೆ ತಿರುವಿದ ಹಸ್ತವ ಕರುಣಿಸೊ 4 ವಿದುರನ ಮನೆಯಲಿ ಹಾಲೆತ್ತಿ ಕುಡಿದ ಹಸ್ತವ ಕರುಣಿಸೋ ರಂಗಯ್ಯ ಸುದತಿಗೆ ಮೆಚ್ಚಿ ಅಕ್ಷಯಾಂಬರವಿತ್ತ ಹಸ್ತವ ಕರುಣಿಸೊ ಮುದದಿ ಧ್ರುವಗೆ ಮೆಚ್ಚಿ ಸದಮಲ ಪದವಿತ್ತ ಹಸ್ತವ ಕರುಣಿಸೋ ರಂಗಯ್ಯ ಸುದಯದಿಂದ ಅಂಬರೀಷನುದ್ಧರಿಸಿದ ಹಸ್ತವ ಕರುಣಿಸೊ 5 ದಿನವಿರೆ ದಿನಮಣಿಯನು ಮಾಯಮಾಡಿದ ಹಸ್ತವ ಕರುಣಿಸೋ ರಂಗಯ್ಯ ರಣದಿ ಭಕ್ತರ ಶಿರ ಕನಿಕರದೆತ್ತಿದ ಹಸ್ತವ ಕರುಣಿಸೊ ಸೆಣದಾಡಿ ಭಕ್ತನಿಂ ದಣಿದು ಕಟ್ಟಿಸಿಕೊಂಡ ಹಸ್ತವ ಕರುಣಿಸೋ ರಂಗಯ್ಯ ಸನಕಾದಿಗಳು ಘನ ಅನಂದದ್ಹೊಗಳಿಸುವ ಹಸ್ತವ ಕರುಣಿಸೊ 6 ಫಡ ಫಡ ಎನ್ನುತ ತೊಡೆಯ ಚಪ್ಪರಿಸಿದ ಹಸ್ತವ ಕರುಣಿಸೋ ರಂಗಯ್ಯ ಬಿಡದೆ ಸೋಳಸಹಸ್ರ ಮಡದಿಯರ್ಹಿಡಿದ ಹಸ್ತವ ಕರುಣಿಸೊ ಅಡಿಯ ದಾಸರ ಪಿಡಿದಪ್ಪಿ ರಕ್ಷಿಸುವ ಹಸ್ತವ ಕರುಣಿಸೋ ರಂಗಯ್ಯ ಒಡೆಯ ಶ್ರೀರಾಮ ನಿನ್ನಡಿ ನಂಬಿ ಬೇಡುವೆ ಹಸ್ತವ ಕರುಣಿಸೊ 7
--------------
ರಾಮದಾಸರು
(3) ಆಳ್ವಾರಾಚಾರ್ಯ ಸ್ತುತಿಗಳು105ಶ್ರೀಮದ್ರಾಮನೃಪಾಲ ಸೇವಕ ಕಾಮಿತ ಫಲದಾಯಕ ಪಭೂಮಿಶೋಕವಿನಾಶಕ ಕಪಿಕುಲಸೋಮಸದ್ಗುಣಸ್ತೋಮದಯಾಳೋ1ಆಂಜನೇಯ ಸುರಂಜನ ರಿಪುಕುಲಭಂಜನಮಣಿಮಯ ಮಂಜುಳ ಭಾಷಣ2ರಾಮಾನುಜಮುನಿ ಪ್ರಾಣೋದ್ಧಾರಕರಾಮಕಾರ್ಯವರ ಪ್ರೇಮಸಾಗರ 3ವಾತಾತ್ಮಜಭವಪಾತಕದೂರಸೀತಾನುಗ್ರಹ ಸೇವಧಿಯುಕ್ತ 4ವಾಸುಕೀಶಯನ ನಿವಾಸ ಭಕ್ತಾಗ್ರೇಸರ ತುಲಸೀದಾಸಾನವಹರಿ5
--------------
ತುಳಸೀರಾಮದಾಸರು
199ಒಂದೆ ಮನದಲಿ ಭಜಿಸು ವಾಗ್ದೇವಿಯ |ಇಂದುಮತಿಕೊಡುವಳು ಶ್ರೀಹರಿಯ ಧ್ಯಾನದೊಳುಪಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |ಬಂದು ಆರಂಭಿಸಲುಹರಿವಿಶ್ವಮಯನೆಂದು ||ಬಂದವಿಪ್ಲವಕಳೆದು ಭಾವಶುದ್ಧಿಯನಿತ್ತು |ಹೊಂದಿಸಿದಳು ಶ್ರೀ ಹರಿಯ ಚರಣವನು || 1ಅಂದು ದಶಮುಖನನುಜ ವಂದಿಸದೆ ವಾಣಿಯನು |ಬಂದು ತಪವನು ಗೈಯೆ ಬಹುಕಾಲಕೆ ||ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು 2ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|ಉರುತರವಾದ ವಾಕ್ ಶುದ್ಧಿಯನಿತ್ತು ||ನಿರುತ ಶ್ರೀಪುರಂದರವಿಠಲನ ಸೇವೆಯೊಳು |ಪರತತ್ತ್ವದ ಕಥಾಮೃತವನುಣಿಸಿದಳು 3
--------------
ಪುರಂದರದಾಸರು
ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಕೌತುಕಲಕುಮಿನಾಥನು ಒಲಿದದ್ದುಭೂತಳದೊಳಗÀಂಜೋದ್ಯಾತರ ಮಾತಿದು ಪ.ವೇದ ತಂದಾತನ ಪಾದವ ನೋಡಿ ನೋಡಿಮೋದಬಟ್ಟನುಬೊಮ್ಮಮಾಧವಅಂಜಿದ್ದು1ಮಂದಾರಗಿರಿಎತ್ತಿ ತಂದ ಅಮೃತವನ್ನುಆನಂದ ಬಟ್ಟನುಬೊಮ್ಮಇಂದೈವರು ಅಂಜಿದ್ದು2ಧರಣಿ ತಂದಾತನ ವರಹಾ ಸುರರರಿಗೆ ಸುಖವಿತ್ತುದೊರೆ ಧರ್ಮನ ಕಂಡುಪರಮಭೀತನಾದ3ನರಸಿಂಹ ದೈತ್ಯನ ವಧಿಸಿಬಿಟ್ಟನೆಂದುಹರುಷವಾದನುಬೊಮ್ಮಅರಸ ಅಂಜಿದ್ದು4ವಾಮನ ರೂಪಕ್ಕೆ ಕಾಮ ಮೋಹಿತರಾಗಿಶಾಮ ವರ್ಣನ ಕಂಡು ಭೀಮ ಭೀತನಾದ 5ಜ್ಞಾನಿಗಳು ಭಾರ್ಗವನ ಧೇನಿಸಿ ನಮಿಸೋರು ಏನೆಂಬೆಪಾರ್ಥನು ತಾ ನೋಡಿ ಅಂಜಿದ್ದು 6ಚಲ್ವರಾಯನಗುಣಎಲ್ಲ ಮೋಹಿಸಬೇಕುನಲ್ಲಿ ದ್ರೌಪತಿದೇವಿಯ ವಲ್ಲಭರಂಜಿದ್ದು 7ಕೃಷ್ಣಾವತಾರಗೆ ಎಷ್ಟು ಮೋಹಿಸುವವರುಧಿಟ್ಟ ನಕುಲರಾಯ ಇಷ್ಟೊಂದು ಅಂಜಿದ್ದು 8ಬೌದ್ಧನ್ನ ಧೇನಿಸಿ ಸಿದ್ಧಿ ಪಡೆದವರೆಷ್ಟುರುದ್ರಾದಿ ವಂದ್ಯಗೆ ಬುದ್ದಿವಂತರು ಬೆದರ 9ಚಲುವ ರಂಗಯ್ಯನು ಕುದುರೆ ಏರಿ ಬರಲುಬುದ್ಧರು ನಮಿಸುವರು ಹೆದರ ಸಹದೇವನು 10ತಂದೆ ರಾಮೇಶನ ಕೊಂಡಾಡೊ ಗುಣವಿಲ್ಲಪುಂಡರಿಕಾಕ್ಷಗೆ ಪಾಂಡವ ರಂಜಿಸಿದ್ದು 11
--------------
ಗಲಗಲಿಅವ್ವನವರು
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ತೊರವೆಪುರನಿವಾಸ ನರಸಿಂಹ ನೀಹೊರೆಯೊ ಭಕ್ತರ ಭಯಗಜಸಿಂಹಅರಿವರಾರಯ್ಯ ನಿನ್ನ ಮಹಿಮೆಯಸರಸಿಜಭವಭವಸುರವರಅಹಿಕಿನ್ನರವರಮುನಿವರ ನರವರವಂದ್ಯಪ.ಹಿರಣ್ಯಕನೆಂಬ ದೈತ್ಯ ಮಹೀತಳದಿವಿಧಿಹರವರದಲಿ ಬಲುಸೊಕ್ಕಿ ಅಂದುಪರಮಭಾಗವತಪ್ರಹ್ಲಾದನಿಗೆಪರಿಪರಿದುರಿತವ ಮರಳಿ ಮರಳಿ ಭಯಂಕರವನು ಚರಿಸಲು ನೆರೆಮೊರೆಯಿಡಲು 1ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲುಸರವಭೂತ ಭರಿತಾನಂತನೀಗಅರಸಿದರೀ ಕಂಬದೊಳಿಹನೆನಲುಮೊರೆ ಮೊರೆದೇಳುತ ಸರಸರನೊದೆಯಲುಬೆರಬೆರ ದೋಷದಿ ವರನರಹರಿಯೆ 2ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರಕಟಿಸಿ ದೈತ್ಯನುದರವನು ಸೀಳಿತ್ರುಟಿಯೊಳು ಕರುಳಮಾಲೆಯ ಧರಿಸಿಶಠನ ವಧಿಸಿ ನಿಜಭಟನ ಪೊರೆದ ಜಗಜಠರಪ್ರಸನ್ನವೆಂಕಟ ನರಸಿಂಹ3
--------------
ಪ್ರಸನ್ನವೆಂಕಟದಾಸರು
ನಾರಾಯಣ ಪಂಜರನಾರಾಯಣಾಯ ನಮೊ ನಾರಾಯಣಾಯ ನಮೊನಾರಾಯಣಾಯ ನಮೊ ನಾರಾಯಣನಾರದರ ಮುಖದಿಂದ ನರಕಸ್ಥರೆಬ್ಬಿಸಿದೆನಾರಾಯಣಾಯ ನಮೊ ನಾರಾಯಣ ಪ.ಮತ್ತಕರಿಯವಸಾನಕಂಜಿ ಹರಿಯೆ ನೀ ಕಾಯ್ದೆ *ಭಕ್ತ ಪ್ರಹ್ಲಾದನೇಕಾಂಗ ನಿಷ್ಠೆಗೆ ಒಲಿದೆ 1ಪೃಥುವಿಗಳ್ಳನನಿರಿದು ಸತಿಯನುದ್ಧರಿಸಿದೆಪೃಥುಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ2ಶೂಲಿಯನು ಬೆಂಬತ್ತಿ ಸುಡುವೆನೆಂಬನ ಸುಟ್ಟೆಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ 3ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆಮುಖದಿಶ್ರುತಿಪಿಡಿತಂದು ವಾರಿಜಾಸನಗಿತ್ತೆ4ಪುರುಹೂತಗಖಿಳ ಪರಮಾರ್ಥವನು ಅರುಹಿದೆಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತ್ತ್ತೆ 5ಮಹಾಪಾಪನಿರತ ಅಜಾಮಿಳನಿಷ್ಟ ಕರಿಸಿದೆಮಹಿದಾಸನಾಗಿ ತಾಯಿಗೆ ತತ್ವವನು ಪೇಳ್ದೆ 6ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರುಣಾನಿಧಿಮುನಿವೆಂಗಳರೆಯಾಗೆ ಪದಸೋಂಕಿಸ್ಯೆತ್ತಿದೆಯೊ 7ಮಖವ ರಕ್ಷಿಸಿ ರಾಜಋಷಿಗಭೀಷ್ಟೆಯನಿತ್ತೆಮಕರಧ್ವಜಾರಿ ಧನು ಮುರಿದವನಿಜೇಶ8ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ 9ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆಶರದಿ ರಾವಣನರಿದು ಸುರರ ಸಂಕಟ ಹರಿದೆ 10ಅನುಜನಗ್ನಿಗೆÉ ಧುಮುಕಲವಧಿ ಮೀರದೆ ಪೊರೆದೆಅನಿಮಿಷರ ನಿಕರಕತಿ ಆಹ್ಲಾದ ಬೆಳೆಯಿಸಿದೆ 11ಉರಿನುಂಗಿ ಗಿರಿನೆಗಹಿ ವ್ರಜವ ಪಾಲನೆ ಮಾಡ್ಡೆಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ 12ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆಕ್ರತುಭೋಕ್ತø ಕ್ರತುಗಾತ್ರ ಕ್ರತುಪಾಲ ಕ್ರತುಶೀಲ13ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗಗೋಪೀ ಜನಜಾರನವನೀತದಧಿಚೋರ14ವಂಶಗಾಯನ ಪ್ರಿಯ ವಿಧುಕುಲೋದ್ಭವ ಕೃಷ್ಣವಂಶವರ್ಧಕಸುಜನವಂಶಮರ್ದಕ ಕುಜನ15ಅಕ್ರೂರವಂದ್ಯಕಂಸಾರಿಕುಬ್ಜಾರಮಣಆಕ್ರಂದಿಸಿದ ತಂದೆ ತಾಯಿಯರ ಭಯವಳಿದೆ 16ಅದಿತಿ ಕುಂಡಲದಾತ ಭಗದತ್ತವರದನೆಅಧಿಪತಿಗಳಧಿಪತಿಯೆ ಭೈಷ್ಮಿ ಸತ್ಯಾರಮಣ 17ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯಶಂಬರಾರಿಯ ಜನಕ ಯಜÕಪೂಜಾಗ್ರಣಿಯೆ 18ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆಪೌಂಡ್ರಕಶೃಗಾಲಕೌರವ ಭೂಮಿ ಭಾರಹರ19ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ 20ಗರುಡ ಗಂಧರ್ವಕಿನ್ನರಗೀತ ಸಂಪ್ರೀತಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ 21ಶಂಖ ಚಕ್ರ ಗದಾಬ್ಜ ಶ್ರೀವತ್ಸ ಶೋಭಿತನೆಸಂಖ್ಯೆರಹಿತಾಭರಣ ಭೂಷಣಾವ್ಯಾಕೃತನೆ 22ಮೀನ ಕಶ್ಯಪ ಪೋತ್ರಿ ನೃಹರಿ ವಾಮನ ಭಾರ್ಗ್ವಮಾನವಪ ಕೃಷ್ಣಬುದ್ಧಕಲ್ಕಿ ಕಪಿಲಾತ್ರೇಯ23ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ 24ಷಟ್ಕೋಟಿ ತೀರ್ಥಯುತಚರಣ ಶ್ರೀಭೂರಮಣಷಟ್ಕಮಲನಿಲಯ ಚಿನ್ಮಯ ಚಿದ್ಗುಣಾರ್ಣವನೆ 25ಭಕ್ತಾಭಿಮಾನಿ ಭವದೂರ ಭಕ್ತರ ಪ್ರಭುವೆಭಕ್ತವತ್ಸಲ ಕೃಪಾಂಬುಧಿಪರಾತ್ಪರಕೃಷ್ಣ26ವಸುಧೆವೈಕುಂಠ ಮಂದಿರವಾಸ ಶ್ರೀನಿವಾಸವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ 27ಆದಿನಾಥÀಪ್ರಮೇಯಾದಿ ಪುರುಷೋತ್ತಮನೆಆದಿಮಧ್ಯಾಂತ ರಹಿತಾದ್ಯಮೂರುತಿ ವಿಷ್ಣು 28ಬದುಕಿಪ್ಯಾದರೆ ನಿನ್ನ ಹೊಗಳಿಕೆಲಿ ಬದುಕಿಸೈಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ 29ಕಿವಿಯಲ್ಲಿ ಮುಖದಲ್ಲಿ ನಾಮಾಮೃತವÀ ತುಂಬುಕವಲಾಗದೆ ಮನೋಳಿ ಮಿಗೆ ಪದಾಬ್ಜವ ತೋರು 30ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆಭವವಿರಿಂಚ್ಯಾದಿ ಕರಿಗಭಯದನೆ ನೀ ಸಲಹು31ನೀ ತಾಯಿ ನೀ ತಂದೆ ನೀ ಬಂಧು ನೀ ಬಳಗನೀತಿಗಳನರಿಯೆ ನಿನ್ನಯ ನಾಮವೆ ಗತಿಯು 32ತನು ನೆಚ್ಚಿಕಿಲ್ಲ ಚಿತ್ತದ ಗತಿಯು ನೀಟಿಲ್ಲತನಯತರುಣಿ ಕೊನೆಯ ಸಂಗತಿಗೆ ಆರಿಲ್ಲ33ದೋಷಗಳನರಸದೆನ್ನನು ಸಾಕು ಸಾಕಯ್ಯದಾಸಪಾಲಕ ದೇವ ಡಿಂಗರರ ಸಂಜೀವ 34ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿನಿನ್ನ ಬಿಂಬವನೆಂದು ಕಂಡು ಕೊಂಡಾಡುವೆನೊ 35ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿನಿನ್ನವ ನಾ ನಿನ್ನವರ ಕೈಲಿ ಕೊಡು ಗಡಗಡ 36ವಾರಿಯಲಿ ಸ್ಥಳದಲ್ಲಿ ಅಡವಿಲೆಲ್ಲೆಲ್ಲಿ ಕಾಯೊವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ 37ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲಸತ್ಕರ್ಮಗಳಿಗೆ ಬಹಿಷ್ಕøತನಾಗಿ ಬಾಳುತಿಹೆ 38ಒಂದು ಜಾವದ ತಪ್ಪನೆಂದೆಂದಿಗುಣಲಾರೆವಂದಿಸುವೆ ಸಾಷ್ಟಾಂಗತ್ರಾಹಿತ್ರಾಹಿಪಾಹಿತ್ರಾಹಿ39ಮಧ್ವೇಶ ಮಧ್ವಪ್ರಿಯ ಮಧ್ವಮತ ಪ್ರತಿಪಾಲಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜಹರಿ40ಏನರಿಯೆನೇನರಿಯೆ ನೀನೆ ನೀಗೆಲೆಲೆಎನ್ನಘವ್ರಜ ಪ್ರಸನ್ನವೆಂಕಟ ಕೃಷ್ಣ 41
--------------
ಪ್ರಸನ್ನವೆಂಕಟದಾಸರು
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆಬನ್ನಬಡಿಸದೆ ದಾಸಜನರ ನಿನ್ನ ಪ್ರಾಣಸಮಮಾಡಿ ಪೊರೆಯುವಿ ಅ.ಪಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದುನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ 1ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮಪರಮಉಗ್ರರೂಪ ಧರಿಸಿದಿ ಭಕುತಗಾಗಿಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿಚರಣದಾಸರ ಪೊರೆಯುಲೋಸುಗ ನರನ ರೂಪದಿನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿದುರಳರ್ಹಾವಳಿ ದೂರ ಮಾಡಿದಿ 2ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿಪರಮಸುರಗಣಕ್ಹರುಷವಿತ್ತು ಧಾರುಣಿಯನು ಪರಿಶುದ್ಧಮಾಡಿಕರುಣದಾಳುವಿ ಭುವನತ್ರಯವನು ಶರಣಜನಪ್ರಿಯವರದ ಶ್ರೀರಾಮ 3
--------------
ರಾಮದಾಸರು
ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ |ಸಲಿಸೆಮ್ಮ ಮನದಿಷ್ಟಅನುದಿನ ದಯದಿಪಸಿರಿಮಿಂಚಿ ಮರುತ್ಯುಪರ್ಣ ಪು - |ರಾರಿವಂದಿತಚರಣಸರಸಿಜ ||ಪರಮಭಕ್ತ ಪ್ರಹ್ಲಾದ ನಾರದ |ವರಪರಾಶರ ಮುಖಸುಸನ್ನುತ ಅ.ಪನಾರುವಿ ಭಾರವ ಪೊರುವಿ - ಬಲು - |ಬೇರುಗಳನೆ ಕಿತ್ತು ಮೇಲುವಿ -ಕರಿ - |ವೈರಿ ರೂಪಗೊಂಡ ಗರುವಿ - ಬ್ರಹ್ಮ - |ಚಾರಿ ಖಳರ ಕತ್ತರಿಸುವಿ |ವೀರದಶರಥಸುತ ಸುರಾರ್ಚಿತ |ಜಾರತನದಲಿ ವ್ರತವ ಕೆಡಿಸುತ |ತೋರಿ ಮೆರೆವನೆತರಳ ಬಲು ಗಂ - |ಭೀರ ಕುದುರೆಯನೇರಿ ಮೆರೆವನೆ 1ಅನಿಮಿಷ ಮಂದರೋದ್ಧರಣ - ನೀನಾ - |ವನಗಪಂಚಾನನವದನ - ವಾ - |ಮನ ದಾನವರ ಕೊಯ್ವಕದನ - ಹೀನ - |ದನುಜರಾವಣ ಸಂಹರಣ ||ಧೇನುಕಾಸುರ ಶಕಟಮರ್ದನ |ಜಾÕನದಾನ ವಿಡಂಬನಾನಕ |ಭಾನುಮಸ್ತಕ ನೀಲವರಕರ |ದೀನಜನಸಂತ್ರಾಣ ನಿಪುಣನೆ 2ಮಚ್ಛಕಚ್ಛಪ ಸ್ವಚ್ಛಕಿರನೆ - ಬಲು - |ಅಚ್ಚ ಶಿಶುಮೊರೆ ಕೇಳಿದವನೆ ||ಸ್ವೇಚ್ಛೆಯವಟು ಪರಶುಕರನೆ - ರಾಮ - |ವತ್ಸಾಸುರನ ವಧಿಸಿದವನೆ ||ತುಚ್ಛ ಜನರಿಗೆ ಕಪಟಕಾರಣ |ಹೆಚ್ಚಿನಶ್ವದ ಮೇಲೆ ಹೊಳೆವನೆ |ಮೆಚ್ಚಿಪುರಂದರ ವಿಠಲನಪರ - |ಮಾಚ್ಯುತದ ಪದವೀವ ದೇವನೆ 3
--------------
ಪುರಂದರದಾಸರು
ಪಾಲಿಸು ಪರಮಪಾವನ ಪದ್ಮಾವತೀರಮಣಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲಪಾಹಿಪಾರ್ಥಸಾರಥಿ ಅ.ಪ.ಮದನಜನಕ ಮಹಿಮಾಂಬುಧಿ ನಿನ್ನಪದಕಮಲವ ನಾ ಸ್ಮರಿಸದೆ ಎನ್ನಮದಮುಖತನವನು ಒದರುವದೆನ್ನಪದುಮನಾಭ ರಕ್ಷಿಸು ನೀ ಮುನ್ನಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧಉದುಭವಿಸುವುದು ನಿಜವೇ ಭಕ್ತವಾತ್ಸಲ್ಯಇದಕೆ ನೀ ಊನ ತರುವೆ ಸಾಕು ಈ ಮರವೆಒದಗಿಸು ಸರ್ವಮನಸಿನೊಳ್ ಪುದು-ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತಮಧುಸೂದನ ಮಂದರಗಿರಿಧರ ನೀ-ರದ ನಿಭ ನಿರ್ಮಲ ನಿಜರೂಪಗುಣಸದನಾಚ್ಯುತ ರವಿಕುಲದೀಪ ನಿರ-ವಧಿ ಆನಂದ ರಸಾಲಾಪಬುಧಜನೋಪಲಾಲಿತ ಲೀಲಾಯತಉದಧಿಶಾಯಿ ಮಾನದ ಮಧುಸೂದನ 1ನಾಮಸ್ಮರಣೆಯೆ ನರಕೋದ್ಧಾರನೇಮವಿಲ್ಲೆಂಬುದು ನಿನ್ನ ವಿಚಾರಸಾಮಾರ್ಥದ ಗುಣಕೆಲ್ಲನುಸಾರಪಾಮರಮನಕಿದು ಈ ಗುಣಭಾರಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊಸಾಮಗಾನಲೋಲಸುಜನಸ್ತೋಮಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬತಾಮಸಪರಿಹರಿಸಿ ಜ್ಞಾನೋದಯದ ಸದಾನಂದಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆನೀ ಮಾಡುವುದೆಲ್ಲವು ಸಹಜಗುಣಧಾಮಾಶ್ರಿತ ನಿರ್ಜರಭೂಜಸುಜನಸ್ತೋಮಾರ್ಕಾಮಿತ ವಿಭ್ರಾಜಶ್ರೀಮಚ್ಛೇಷಾಚಲ ಮಂದಿರ ಸು-ತ್ರಾಮಾರ್ಚಿತ ಸದ್ರಾಮ ಶ್ರೀರಾಮ 2ಉಡುವ ಸೀರೆಯ ಸೆಳೆಯಲು ದ್ರುಪಜೆಯಕೊಡಲಿಲ್ಲವೆ ಬಹುವಸನ ಸಂತತಿಯಹಿಡಿಯವಲಕ್ಕಿಗೆ ದ್ವಾರಕ ಪತಿಯಕಡು ಸರಾಗವಾಯ್ತಿಂದಿನ ಪರಿಯಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟಕೊಡು ದಯವಿಟ್ಟು ಮುದದಿ ಕರುಣಾವುದಧಿಕಡುಲೋಭಿತನ ಬಿಡು ಮಹರಾಯಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತಕರ್ಮವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯಒಡೆಯ ಶ್ರೀ ಲಕ್ಷ್ಮೀನಾರಾಯಣನಡುನೀರೊಳು ಕೈಬಿಡುವೆಯ ನೀತೊಡಕೊಂಡ ಬಿರುದೇನಯ್ಯ ಈಕಡು ಕೃಪಣತನ ಸಾಕಯ್ಯಪೊಡವಿಯೊಳಗೆ ಪಡುತಿರುಪತಿಯೆಂಬದೃಢಕಾರ್ಕಳದೊಡೆಯ ಶ್ರೀನಿವಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ರಮಣನ ಪಾದಸೇವನ ಮಾಡಿ ಬುಧರು ಪ.ಈರಮತದವರನುದಿನ ಅ.ಪ.ಮಹಾಲಕುಮಿಪಾದಸರೋರುಹದ್ವಯವ ತೋಳಲಪ್ಪಿಸ್ನೇಹವಾರ್ಧಿಯಲ್ಲಿ ಮುಳುಗಿಗಹನದಿ ಭಜಿಸುತಲಿಪ್ಪ 1ವಿಧಿಯು ನೈಜಭುಕ್ತಿಭರಿತಹೃದಯ ಸರೋವರದಲ್ಲಿಟ್ಟುಪದಸರೋಜಾವಧಿ ಇಲ್ಲದೆಮುದದಿ ಭಜಿಸಿ ಸುಖಿಸುತಿಪ್ಪ 2ಮತ್ತೆ ತನ್ನ ಭಕ್ತಿಯಲ್ಲಿಸತ್ಪದಾಬ್ಜಗಳನು ತೊಳೆದುಸತ್ತ್ರಿಪಥದ ಗಾಮಿನಿಯಳುಪೊತ್ತು ಪೂಜೆ ಮಾಡುತಿಪ್ಪ 3ಸಾಲಿಗ್ರಾಮವಾಗಿ ಭವನಮೌಳಿತೀರ್ಥದಲ್ಲಿ ತೋಯಿಸಿಮೇಲೆರಡೇಳ್ಜಗಂಗಳಘವಪಾಳುಮಾಡಿ ಪೂಜೆಗೊಂಬ 4ಮುಕ್ತರಿಗೆ ವ್ಯಕ್ತಪಾದಶ್ರೀಕರ ಪ್ರಸನ್ವೆಂಕಟವಲ್ಲಭಸುಖಮುನೀಶಗೊಶನಾಗಿಪ್ಪ 5
--------------
ಪ್ರಸನ್ನವೆಂಕಟದಾಸರು