ಒಟ್ಟು 399 ಕಡೆಗಳಲ್ಲಿ , 84 ದಾಸರು , 348 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೊ ಬಾಲನೆ ವೇಳೆ ಮೀರುತಿಹುದು ಪ ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ ಎದ್ದು ಬಾರೆಲೋ ಮುದ್ದು ಬಾಲಕೃಷ್ಣ ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು 1 ಜಾಣ ನಿನ್ನಯ ವೇಣುನಾದ ಕೇಳೆ ಏಣನಯನೆಯರು ಕಾಣ ಬಯಸುತಿಹರು 2 ಯಮುನಾ ತೀರದಿ ಸುಮಲತೆಗಳಲ್ಲಿ ಕಮಲನಯನ ನಿನ್ನ ರಮಿಸ ಬಯಸುತಿಹರು 3 ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ ಜ್ಞಾನ ಪೊಂದೆ ಗುಣಗಾನ ಮಾಡುತಿಹರು 4 ನಿನ್ನ ಪ್ರಿಯ ಜನರನ್ನು ಕಾಯಿಸಲು ಇನ್ನು ತರವೇನೋ ಪ್ರಸನ್ನವದನನಾಗಿ 5
--------------
ವಿದ್ಯಾಪ್ರಸನ್ನತೀರ್ಥರು
ಐಲು ಬಡ್ಡಿ ಕೇಳೆ ನೀನು ಐಲು ಬಡ್ಡಿ ಪ ಮನೆಯು ನಿತ್ಯವಲ್ಲ ವಸ್ತಿ ಮುಳಗಿತೆನ್ನು ಐಲುಬಡ್ಡಿತನಯ ಸತಿಯು ವಸ್ತಿ ಸಹವಾಸಿಯವರು ಐಲುಬಡ್ಡಿಇನಿಬರನ್ನು ನಂಬಬೇಡ ಹಾದಿಯವರು ಐಲುಬಡ್ಡಿನಿನಗೆ ಆರು ಇಲ್ಲ ವ್ಯರ್ಥ ಕೆಡುವೆ ಐಲುಬಡ್ಡಿ 1 ಎಷ್ಟು ತಂದೆ ತಾಯಿ ನಿನಗೆ ಐಲುಬಡ್ಡಿಹುಟ್ಟಿದೆಲ್ಲಿ ಹೋಹರೆತ್ತ ನೀನು ಅರಿಯೆ ಐಲುಬಡ್ಡಿನಷ್ಟವಾಗುವಿ ನನ್ನ ನನ್ನದೆಂದು ಐಲುಬಡ್ಡಿಕುಟ್ಟಿ ಪುಡಿಯ ಮಾಡ್ವ ನಿನ್ನ ಯಮನು ಬಿಡದೆ ಐಲುಬಡ್ಡಿ 2 ಕರ್ಮ ತೊಳೆದು ನಿನ್ನ ನಿಜದಿ ನಿಲುವೆ ಐಲುಬಡ್ಡಿ 3
--------------
ಚಿದಾನಂದ ಅವಧೂತರು
ಒಂದೇ ಮತ ಹರಿಯ ಮತ ಒಂದೇ ಭಾವ ಸಿರಿಯರಸನ ಭಾವ ಸಲಹಿದ ನರಹರಿ ಒಂದೇ ಮನದಂಬರೀಷನ ಕಾಯ್ದ ಹರಿ ಒಂದೇ ಮನದಿ ಧ್ರುವನ ಕಾಯ್ದ ಹರಿ ಒಂದೇ ಗಳಿಗೆಯಲಿ ತನ್ನುಂಗುಟದಿ ಸೋಕಿಸೆ ಕಲ್ಲಾಗಿದ್ದಹಲ್ಲೆಯ ಪೆಣ್ ಮಾಡಿದ ತಂದೆಯಂದದಿ ಭಕ್ತರ ಹಿಂದೆ ಕಾದಿದ್ದು ಕರುಣಾಸಿಂಧು ಭಕ್ತರ ಬಂಧು ಸುಂದರಿ ಸಿಂಧುಸುತೆಯರಸನ ನಿತ್ಯ ನೆನಯಿರಿ ಹರಿ ಭಕ್ತರು 1 ಸಾರ ನಾಲ್ಕು ಯುಗದಾಧಾರ ನಾಲ್ಕು ಮುಖದಲಿ ನೆಲಸಿ ಸೃಷ್ಟಿಕಾರ್ಯವ ನಡೆಸಿ ನಾಲ್ಕು ಮುಖ ಬೊಮ್ಮನಲಿ ನಾನಿಲ್ಲವೆನಿಸಿ ನಾಲ್ಕು ಯುಗದಲಿ ಜನಿಸಿದ ರಕ್ಕಸರಿಗೆ ತಿಳಿಸಿ ನಾಲ್ಕು ಲೋಕದಿ ಮೆರೆದ ನಾಕಚಾರ ವಂದ್ಯ ನಾಲ್ಕು ಹಸ್ತದಿ ನಾಲ್ಕು ವೇದತಂದಾ ಮೂರ್ತಿ ನಾಲ್ಕು ವೇದದ ಸಾರದಮೃತ ಭಕ್ತರಿಗಿತ್ತು ಹದಿನಾಲ್ಕು ಲೋಕಕೆ ನಾನೇ ಕರ್ತನೆಂದರಿಸಿ ನಾಲ್ಕು ವಿಧದಲಿ ಕಾವ ಶ್ರೀ ಶ್ರೀನಿವಾಸನ ಭಕ್ತರಾದರೆ ಈ ಕಲಿಯುಗದಿ ನಾಲ್ಕು ಜನರು ಮೆಚ್ಚುವರು ನಿಮ್ಮ ಹರಿ ಭಕ್ತರೆ ಕೇಳಿ2 ನಿನ್ನ ಸಹವಾಸ ಸೈ ನಿನ್ನ ಒಡನಾಟ ಸೈ ನಿನ್ನ ರೂಪ ಚತುರ ಬುದ್ಧಿ ಎನ್ನ ಸೈ ಎನ್ನಲಾಪರೆ ನಿನ್ನ ಕೈ ಚಳಕವಿಲ್ಲದಲೆ ಜೈಸುವದೆಂತೀ ಕಲಿಕಾಲದಿ ಸ್ವಾಮಿ ಜೈಲುವಾಸದಿ ಕೂತು ನಿನ್ನ ಕಲ್ಯಾಣವ ಕಟ್ಟಿದರೊ ನಿನ್ನ ಭಕ್ತರು ಜೈ ಕರುಣಾಕರ ನಿನ್ನ ಭಕ್ತರ ಮಹಿಮೆ ನಾ ಪೊಗಳುವದೆಂತೊ ಜೈ ಎನಿಸಿಕೊಳ್ಳಲು ನಿನ್ನೊಲುಮೆ ಕಾರಣವಲ್ಲವೆ ಜೈವೆಂಕಟ ಶ್ರೀಶಾ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಗೆ ಜಯ ಅಪಜಯವೆಲ್ಲಿ ನಿನ್ನ ಭಕ್ತರಿಗೆ ಎಂದೆಂದಿಗೂ ಜೈ ಹರಿಭಕ್ತರ ನೆನೆಯಿರಿ ಹರಿಭಕ್ತರು 3 ಯನ್ನ ಯತ್ನವೇನಿಲ್ಲಿದರೋಳು ಪನ್ನಗಾದ್ರಿ ನಿವಾಸನಲ್ಲದೇ ಯನ್ನ ಯತ್ನ ಸಲ್ಲುವುದೇ ಎನ್ನ ಮನಸಿಲಿ ಬಂದು ನಿಂದು ತಾನೇ ನುಡಿಸಿದನಿಂದು ಚೆನ್ನಗಿರಿಯರಸ ಭಕ್ತ ಜನ ಬಂಧು ಬಂದು ನಿಂದು ಎನ್ನ ಮನದಭಿಲಾಷೆ ಸಲಿಸೆ ದೀನ ವತ್ಸಲನು ಎನ್ನ ಕರದಲಿ ಬರೆಸಿ ನಲಿದಾಡಿದ ತನ್ನ ವಾಣಿಯನಿತ್ತು ಎನ್ನ ಕುಲದೈವ ಶ್ರೀ ಶ್ರೀನಿವಾಸನ ಕೃಪೆ ಎನ್ನ ಮೇಲೆಂತುಟೊ ಕಾಣೆ ಇನ್ನು ಈ ವಾಣಿ ಹರಿಯದೆಂದು ನುಡಿವುದು ಹರಿಭಗವದ್ಭಕ್ತರು 4 ಪಾಮರರಿಗೆ ಕಲ್ಪತರು ಪಾಮರರಿಗೆ ಜಗದ್ಗುರು ವರವ ತೋರಿ ಪಾಮರರ ಪುನೀತರನು ಮಾಡೆ ಹರಿ ಪಾಮರೆಂದು ಲೆಕ್ಕಿಸದೇ ತಾವಲಿದು ನುಡಿಸಿದ ಪತಿತ ಪಾವನ್ನ ಶ್ರೀ ಶ್ರೀನಿವಾಸನದೇ ಈ ಉಕ್ತಿಯಲ್ಲರ ನೃತ್ರವಿಲ್ಲೆಂದು ತಿಳಿದು ಪಾಮರರನ್ನುದ್ಧರಿಸಲು ಹರಿಭಕ್ತರು ಪಠಿಸುವುದು ಈ ನುಡಿಯ 5 ಜತೆ ಶರಣು ಭಕ್ತರ ಪಾಲ ಶರಣು ಶ್ರೀಲೋಲಾ ಶರಣು ನಿನಗೆ ಸದಾ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಓದಿ ಮರುಳಾದರಯ್ಯ ಬೋಧವಿಲ್ಲದೆ ಓದಿನೋಡಲದನರಿತು ಹರಿಯ ನೆನೆಯಲೊಲ್ಲದೆ ಪ. ಕರಣೇಂದ್ರಿಯ ಕಾಟಕೆ ಸಿಲುಕದ ಕರ್ಮದಾವುದು ಪರಗತಿ ವಿಚಾರವಿಲ್ಲದ ನಿಜದಾವುದು ಗುರುಚರಣ ಪರಿಚಯವಿಲ್ಲದ....ಯಾವುದು1 ಅಂತರಂಗ ಶುದ್ಧಿಯಿಲ್ಲದ ಕಂತೆಯಾವುದು ನಿತ್ಯ ಶಾಂತಿ ಶಮದಮವಿಲ್ಲದ ಭ್ರಾಂತಿ ಯಾವುದು ಸಂತತ ಸಮಾಧಾನದ ಚಿಂತೆಯಾವುದು ನಮ್ಮ ಕಪಟ ದಾವುದು 2 ಮಧ್ವಮತದ ಮಾರ್ಗವನ್ನು ಮೀರಿದಾವುದು ಶ್ರುತಿ ಸಿದ್ಧ ಹರಿಯ ಗುಣವ ಹಾಡಿಪಾಡದ್ಯಾವುದು ವೃದ್ಧರನ್ನು ಕೆಣಕಿ ಕಾಡಿ ಕೊಂಬದಾವುದು ಅದು ಸಿದ್ಧಯಮನ ಬಾಧೆಗೆ ಒಳಗಾಗುವದಾವುದು 3 ಸಾರತತ್ವ ಸುಧೆಯ ಸವಿಯ ದೂರಿದಾವುದು ಪರಿ- ವಾರ ಜನರ ಪೊರೆವರುಪಚಾರ ದಾವುದು ಸಾರಿ ತನ್ನ ಸಾಕ್ಷಿಗಿನ್ನು ಬಾರದಾವುದು ಅದು ಕೀರನಾಕ....ಯಾ ಸಂಸ್ಕಾರ ದಾವುದು 4 ಅನ್ನದ ಜೀವ ಭಿನ್ನಹರಿ ಎನ್ನದಾವುದು ದ್ವಾಸು- ಪರ್ನಪಥವ ಪಾ....ಮಾಡದಾವುದು ಧನ್ಯ ಹಯವದನ ನಾನೆನ್ನುವುದು ಅದು ಕುನ್ನಿಯಂತೆ ಹಲವು ಪರಿಯ ಕೂಗುವುದದು 5
--------------
ವಾದಿರಾಜ
ಕಮಲ | ಭಜಿಸಿ ಬದುಕಿರೋನಿಜ ಸುಜ್ಞಾನ ಹರಿಭಕ್ತಿ | ನಿಜಕೆ ತರುವರೋ ಪ ಸಂತ ಶ್ರೀನಿವಾಸನಹಂ | ಮತಿಯ ವಿಚಾರಾಚಿಂತಿಸದೆ ಒಲಿದಂಥ | ಶಾಂತ ಚಿತ್ತರಾ ||ಕಂತುಹರ ಸುತನಂಶ | ಜಾತರಿಹರಾಅಂತೆ ತೋರಿ ದಾಸ ದೀಕ್ಷೆ | ಪಂಥ ವಿತ್ತರಾ 1 ಮಂಗಳದುತ್ಸವಕಾಗಿ | ಸಂಘ ಬರ್ಲಾಗಿಮಂಗಳ ಭಕ್ಷವು ಮಂಡಿಗಿ | ಮಾಳ್ಪರಿಲ್ಲಾಗಿಭಂಗ ಭೀತಿ ಅಧಿಪಗೊದಗಿ | ಚಿಂತಿಸಲಾಗಿಅಂಗ ವೇಷ ಬದಲಾಗಿ | ಬಂದ ತಾನಾಗಿ2 ಗ್ರಂಥ ಸುಧಾಭಿಧ ಬಲ್ಲ | ಸಂತ ಸುಬ್ಬಣ್ಣಸಂತ ವಿಜಯದಾಸಗಿಂಥ | ಗ್ರಂಥವೆಲ್ಲಣ್ಣಅಂತೆ ದಾಸಗಪರೋಕ್ಷ | ಕಂತೆ ಕಾಣಣ್ಣಚಿಂತಿಸುತ್ತ ಪ್ರವಚನ | ಭ್ರಾಂತ ನಿದ್ದನ 3 ಬಂದು ವಿಜಯದಾಸರಾಗ | ತೊಂದರೆ ಯೋಗ ಛಂದದಿಂದ ನೀಗಿ ಭಕ್ಷ | ಮಾಡಿದ ರಾಗ |ಬಂದು ಸುಧಾ ಕೇಳುತಿರಲು | ಆಚಾರ್ಯರಾಗ ಸಂದೇಹವ ಪಡುತಲಿ | ಮೌನವಿರಲಾಗ 4 ಪಾಚಕನ ತೆರ ಬಂದ | ಭೃಗುವಿನಂಶನುನೀಚ ನೀರಿನವನ ಶಿರದಿ | ಚಾಚಿ ಕೈಯ್ಯನ್ನುಬಾಚಿ ಬಿಡಿಸೆಂದ ಅವರ | ಸಂಶಯವನ್ನುವಾಚೀಸೀದ ಅನುವಾದ | ನೀರಿನವನೂ5 ಪೇಚಿಗೆ ಸುಬ್ಬಣ್ಣ ಸಿಕ್ಕಿ | ಮನದಿ ತಪಿಸೀ |ಯಾಚಿಸೀದ ಕ್ಷಮೆಯನ್ನು | ಬಹಳ ಪ್ರಾರ್ಥಿಸಿ ||ಸೂಚಿಸಲು ಶೈವನಿದ್ದ | ಬೇಲೂರು ವಾಸಿಪ್ರಾಚೀನದ ಸ್ಮøತಿ ಬಂತು | ನಂಜುಂಡ ನೆನಿಸಿ 6 ಪಾಣಿ ಇಟ್ಟು ಶಿರದಲ್ಲಿ | ಆಶೀರ್ವದಿಸಿವೇಣುಗೋಪ ದಾಸರಲ್ಲಿ ಅಂಕಿತ ಕೊಡಿಸಿ ||ಸಾಣೆ ಇಟ್ಟಂತಾಯಿತವನ | ಜ್ಞಾನದ ಅಸಿಮಾಣದಲೆ ವಿಜಯ ಕವಚ | ಮಾಡಿದ ಸೂಸಿ 7 ದಾಸಕೂಟ ಜನರೆಲ್ಲ | ಬಿಡದೆ ಪಾಡುವವ್ಯಾಸವಿಠಲ ರಚಿತೆನ್ನ | ವಿಜಯ ಕವಚವಲೇಸು ನೆರೆ ನಂಬಿದೆನ್ನ | ವಿಠಲ ಸ್ತೋತ್ರವಮೀಸಲಾಗಿ ಪಾಡುವರು | ಸ್ತೋತ್ರವೆಲ್ಲವ 8 ವರ್ಷ ಸೌಮ್ಯ ಕಾರ್ತೀಕದಿ | ಸೇವಿಸುತ್ತಿರೆದರ್ಶನಿತ್ತು ಸ್ವಪ್ನದಲ್ಲಿ | ಧೈರ್ಯಕೊಟ್ಟಾರೆಹರ್ಷವಿತ್ತು ದಾಸಕಾರ್ಯ | ಸಾಗಿಸುತ್ತಾರೆದರ್ಶದಿನ ಪುಷ್ಯ ನೃಹರಿ | ಯಾತ್ರೆಯಿತ್ತಾರೆ 9 ವಿತ್ತ ನಿತ್ಯ | ಇಲ್ಲದಿನ ವೊಲ್ಲೆ ||ಮೂರ್ತಿ ಬಿಂಬ ತೋರಿ ಎಂದು | ಕೇಳುವ ಸೊಲ್ಲೆಸಾರ್ಥಕವ ಮಾಡಿರೆಂದು | ಪ್ರಾರ್ಥಿಸೆ ಬಲ್ಲೆ 10 ಸುಜನ ಸಂಗ | ವಿತ್ತು ಸುಶೀಲಕಾವ ದಾಸ ಜನರನ್ನು | ಹೃದಯ ವಿಶಾಲಗೋವ ಪರಿಪಾಲ ಗುರು | ಗೋವಿಂದ ವಿಠಲನತೀವರದಿ ಭಜಿಸಿ ಕಳೆದ | ಮಾಯಾಪಟಲ11
--------------
ಗುರುಗೋವಿಂದವಿಠಲರು
ಕಮಲನಾಭ ಕ್ಷಮೆಯಳೆದ ಪಾದ ರಮೆಯರಸನೆ ರಮ್ಯ ಚರಿತ ಕಮಲ ಪಾದವ ತೋರೋ ಅ.ಪ. ಸೂರ್ಯ ತೇಜ ಪೊಳೆವ ಶೇಷಶಯನ ತಲ್ಪದಿ ಹಾಟಕಾಂಬರಧರ ಕಿರೀಟ ಮಾಲ ಶೋಭ ಕೃಷ್ಣನೆ ಸಾಟಿಯಿಲ್ಲದ ಕರದಿ ಲಕುಮಿ ಧಾಟಿಯಿಂದ ವೊತ್ತುವ ಪಾದ ಸಾಟಿಯಿಲ್ಲದೆ ನಿನ್ನ ಭಕ್ತರ ಪೊರೆವ ದೇವ ನಿನ್ನ ಪಾದವು 1 ದುಷ್ಟರನ್ನು ಮೆಟ್ಟಿ ತುಳಿದ ದಿಟ್ಟ ಕೃಷ್ಣನ ಪಾದವು ಮೆಟ್ಟಿ ಕಾಳಿಂಗನ ಹೆಡೆಯ ದಿಟ್ಟ ರಂಗನ ಪಾದವು ಕಟ್ಟಿದ ವರಳನೆಳೆದು ಮತ್ತಿ ಮರವ ಮುರಿದ ಪಾದವು ಕೊಟ್ಟ ಅಭಯ ಭಕ್ತರ ಪೊರೆವಡಿಟ್ಟ ಪಾದವು 2 ಕೂರ್ಮ ವರಹ ನರಹರಿ ಅಚ್ಚವಾಮನ ಪಾದವು ಸಯಿಚ್ಚೆ ಪರಶುಧರ ಶ್ರೀರಾಮ ಕೃಷ್ಣ ನಿನ್ನ ಪಾದವು ಅಚ್ಚವರವನಳಿದು ತೇಜ ಹತ್ತಿ ಮೆರೆವ ಪಾದವು ಅಚ್ಚುತ ಶ್ರೀ ಶ್ರೀನಿವಾಸ ಕೃಷ್ಣ ನಿನ್ನ ಪಾದವು 3
--------------
ಸರಸ್ವತಿ ಬಾಯಿ
ಕರವ ಪಿಡಿದು ರಕ್ಷಿಸೈ ಪ ಸಿರಿ ಅ.ಪ ಉರಿವಕಿಚ್ಚಿನೊಳುನಿಂದು ಸ್ಮರಿಸಬಾರದಕೆಟ್ಟಪಾಪದಿ ಬೆರತುಸತಿಸುತಬಂಧುಮೋಹದಿ ಮರತು ವಿಷಯದಿ ಮುಳುಗಿಪೋದೆನು 1 ಇಂದು ನತಪಾಲ ನೀನೆ ಎಂದು ನುತಿಸಿ ಬೇಡುವೆ ಕರವಜೋಡಿಸಿ ಮತಿಯ ನೀನೆನಗಿತ್ತು ಬೇಗದಿ 2 ಬಾಧೆ ಘನವಾಗಿ ಇರುವದಯ್ಯ ಹರಡಿ ವೈಷ್ಣವರನ್ನು ದುಃಖದೊ ನಿರಂತರ ವ್ಯಾಪಿಸಿರ್ಪುದ 3 ಶ್ರೀಶನೀಕೋಪಬಿಟ್ಟುಸಂತತರಂಗ ದಾಸನೋಳ್ಮನವನಿಟ್ಟೂ ನಾಶಮಾಡದೆ ಬಿಟ್ಟರಿಳೆಯೊಳು ಪೋಷ ಯದುಗಿರಿವಾಸಪರಮನೆ4
--------------
ರಂಗದಾಸರು
ಕರುಣದಿ ಬಂದು ನಿನ್ನ ಚರಣ ಕಮಲವೆನ್ನ ಶಿರದ ಮೇಲಿಟ್ಟು ನೀ ಪೊರಿಯೊ ಕೃಪಾರಸ ಸುರಿಯೋ ಗರುಡಧ್ವಜ ನೀನು ಸ್ಮರಮಣ ನಿನ್ನ ಭಕುತರ ಸುರಧೇನೆಂದು ಕರೆವರು ನಿನ್ನನು ಪ ಸರಸಿಯೊಳ್ಕರಿರಾಜ ಭರದಿಂದ ತನ್ನವುದ್ಧರಿಸೆಂದು ಮೊರೆಯಿಡೆ ಪೊರೆದೆಯಲ್ಲೊ ಶಿರಿಯೊಳುನುಡಿಯದೋ ಶರಣಾಗತರನ್ನು ಪೊರೆವೆನೆಂಬ ನಿಜ ಬಿರಿದನು ಮೆರಿಸಿದಿ1 ಆಗಮವಂದಿತ ನಾಗಭೂಷಣ ತಾತ ಮೇಘವಾಹನ ಸುತನ ಬ್ಯಾಗ ರಕ್ಷಿಸಿದಿ ಜಾಗುಮಾಡದೆ ಎನ್ನ- ದಾಗಲು ರಕ್ಷಿಸೆಂದು ಬಾಗಿ ಬೇಡುವೆನು 2 ಕಾವನು ನೀನಲ್ಲದೆ ಯಾವ ದೇವರನು ನಾ ಆವಲ್ಯು ಕಾಣೆನು ಭಾವಜಜನಕನೆ ಶ್ರೀವಾಸುದೇವನ ಗೋವೃಂದ ರಕ್ಷಕನೆ ಪತಿ ಶ್ರೀವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸು ಭಾರತೀರಮಣ ಕರುಣಿಸು ಪ ಪರಮದಯಾದಿಂದ ಹರಿಯನ್ನ ತೋರಿಸು ದುರುಳರೊಳಡಗಿದೆ ನಿಲಿಸೊ ಜ್ಞಾನಿಗಳಲ್ಲಿ ಅ.ಪ ತ್ರೇತಾಯುಗದಲ್ಲವತರಿಸಿ | ಕಪಿ ವ್ರಾತ ಶಿರೋಮಣಿ ಎನಿಸಿ | ಪಕ್ಷ - ಚೂತ ಫಲಗಳನ್ನು ಸಲಿಸಿ | ಭೂಮಿ - ಜಾತೆಯ ಪಾದಕ್ಕೆ ನಮಿಸೀ | ಅಹ ಘಾತಿಸಿ ಖಳರನ್ನು ಸೀತಾಪತಿ | ಮನೋ ರಥವನು ಸಲಿಸಿದ ಮಾತರಿಶ್ವನೆ ನೀ 1 ಕುಂತಿಯ ಉದರದಿ ಜನಿಸಿ | ಬಹು ಸಿರಿ - ಕಾಂತನ ಪಾದಕ್ಕೆ ನಮಿಸಿ | ಮಡದಿ ಚಿಂತೆಯನು ದೂರಗೈಸಿ | ಅಹ ಸಂತಾಪಗೊಳುತಿಪ್ಪ ದಂತಿಪುರಾಧಿಪನ ತಂತುಗೆಡಹಿತ ಬಲವಂತ ಶಿರೋರನ್ನ 2 ಕಲಿಯುಗದಲುದ್ಭವಿಸಿ | ಬಹು ಲೀಲೆಯೊಳನ್ಯರ ಜಯಿಸಿ | ಸತ್ಯ ಶೀಲರನ್ನುದ್ಧರಿಸಿ | ಸಿರಿ ಲೋಲನೆ ಪರದೈವವೆನಿಸಿ | ಆಹ ಬಾಲ ರವಿ ತೇಜ ವಿಜಯ ರಾಮಚಂದಿರವಿ - ಠಲನ್ನ ಪೂಜಿಸುವಂಥ ಆಲವ ಬೋರ್ಧಾಯನೆ 3
--------------
ವಿಜಯ ರಾಮಚಂದ್ರವಿಠಲ
ಕರುಣಿಸು ಹರಿಯೆ ಕರುಣನಿಕರ ಎನ್ನ ಕರುಣದಿ ನೀನೀಗ ತರಳನ್ನ ಮೊರೆಕೇಳಿ ಪ ಭವತಾಪಶರಧಿಯ ಬವಣೆಯ ತಡೆಯದೆ ಭವಹರ ನೀನೆಂದು ಬಂದು ಮರೆಯಬಿದ್ದೆ 1 ಹಿಂದಾರು ಎನಗಿಲ್ಲ ಮುಂದಾರು ಗತಿಯಿಲ್ಲ ತಂದೆ ನೀ ಬಿಟ್ಟರೆ ಬಂಧ ಕಳೆಯುವರಿಲ್ಲ 2 ನೀನಿಗತಿ ಎನಗಿನ್ನು ಕಾಣೆ ಮತ್ತಾರನ್ನು ಮಾಣದೆ ಸಲಹಯ್ಯ ಪ್ರಾಣೇಶ ಶ್ರೀರಾಮ 3
--------------
ರಾಮದಾಸರು
ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ. ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ 1 ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ 2 ಕರ್ಮ ಬಾಧೆ ಕಳದು ಕರುಣದಿಂದ ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ಕೀಳಬಾರದೇ ಹಲ್ಲ | ಆಳುವಾಡತಿನ್ನುಮತವ ಏಳಲ ಮಾಡುವವರ ಪ ಮೂರು ಮೂರ್ತಿಗಳನೆ ಕರೆದು | ಸಾಯದಂಥ ದನುಜರನ್ನು | ತಾಯಿ ನೀನೆ ಕೊಂದು ಸುರ ನಿ- | ಕಾಯವನ್ನು ಕಾಯಲಿಲ್ಲ 1 ಇಂದು 2 ಇಂದು ನೀನು ಸುಮ್ಮನಿರಲು | ಮುಂದೆ ದಾರಿಗುಸುರಲಿನ್ನು |ತಂದೆ ಭವತಾರಕನ | ನಿಂದೆ ಮಾಡುವವರ ಹಲ್ಲ 3
--------------
ಭಾವತರಕರು