ಒಟ್ಟು 154 ಕಡೆಗಳಲ್ಲಿ , 52 ದಾಸರು , 145 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸುವೆನು ನಿತ್ಯದೊಳು ವಂದಿಸುವೆನು ಪ ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ 1 ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯ ಮಾಡಿ ಮೋಹವನು ಹಿಂದುಗಳೆದು ನವವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರ ತ್ರಯದೊಳು 2 ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲು ನಾದಗಳೆಂಬ ಕಹಳೆವಿಡಿದವಗೆ 3 ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ 4 ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ 5 ಪ್ರತ್ಯಾಹಾರದಿಂ ಮಣಿಹಾರಕದ ಮನೆಯ ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು 6 ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು ಮನದೊಳು ಮೂಲ ಬಂಧದಿ ಆರು ಶಕ್ತಿಗಳ ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ- ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ 7 ಖೇಚರಿಯ ಯೋಗದಿಂ ಕರಣ ಚತುಷ್ಟಯದ ನೀಚ ಪ್ರಧಾನಿಗಳ ನೆಗಳವನಿಕ್ಕಿ ಕಾಲ ಕರ್ಮದ ಕಣ್ಣುಗಳ ಕಿತ್ತು ಯೋಚನೆಯ ಮಾಡಿದನು ವೀರಾಸನದೊಳು 8 ಮಾಯಾ ಪ್ರಪಂಚವೆಂಬನ್ಯಾಯ ನಾಯಕರ ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು- ಪಾಯದಿಂದಾರು ವಿಕಾರಗಳ ಕೈಗಟ್ಟಿ ಬಾಯ ಹೊಯ್ದ ಗುರುವಿಗೆರಗುವೆನು ನಾನು 9 ಇಪ್ಪತ್ತೊಂದು ಸಾವಿರವಾರು ನೂರಾದ ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು ಒಪ್ಪುವನು ಅರೆನೇತ್ರದಿಂದ ಬೆಳಗುವನು 10 ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ ವರ್ಣಾಶ್ರಮಂಗಳನು ಏಕವನು ಮಾಡಿಯೆ ನಿರ್ಣಯಿಸಿಕೊಂಡು ತಾ ನೋಡುವವಗೆ 11 ನುತಿಕರ್ಮದಿಂದಷ್ಟ ಆತ್ಮಕರ ಆಸನವ ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ 12 ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು ಕಾದು ಇರುತಿಹ ಹರಿಗಳಾರು ಬಿಂದುವಿನಿಂ ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ ಆದಿ ಕರಣಿಕನನ್ನು ಹಿಡಿದವನಿಗೆ13 ದಾತೃತ್ವದಿಂ ಸತ್ಯಲೋಕವನು ತಾ ಕಂಡು ಕಾತರದಿ ಆಕಾರದುರ್ಗವನು ಹತ್ತಿ ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ ಈ ತೆರದ ಮಹಾದುರ್ಗವನು ಕಂಡವಗೆ 14 ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ ಗುಣನಿಧಿಯು ವರಾಹತಿಮ್ಮಪ್ಪರಾಯನನು ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ 15
--------------
ವರಹತಿಮ್ಮಪ್ಪ
ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ ವರದಾಯ ಶ್ರೀ ರಾಘವೇಂದ್ರರ ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ ಪರಿ ಪರಿ ವಿಭವದಿ ಮೆರೆದ ಕರುಣವರ ಪುಣ್ಯ ಪುರುಷನ 1 ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ | ಅನಿಮಿಷ ಲೋಚನೆ ಅನುಮಾನಿಸದಿರು ಅನಿಮಿಷಾಮಶರಿವರನನುದಿನ ಸೇವಿಸು 2 ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ ಸತತ ರವಿ ಎನಿಸಿ ಶಾಮಸುಂದರನ ಅತಿ ಭಕುತಿಲಿ ತುತಿಪ ಗುಣನಿಧಿ 3
--------------
ಶಾಮಸುಂದರ ವಿಠಲ
ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು ನಿನ್ನವರ ಮಹಿಮೆಯ ಪ ದಶಪ್ರಮತಿ ಸುಮತಾಖ್ಯ | ಬಿಸಜನಿಧಿಗೆ ಉಡುನಾಥ ವಸುಧಿ ಸುಮನಸವ್ರಾತ | ನಮಿತ ಖಾತ | ವಸುಧೀಂದ್ರ ಕರಜಾತ | ಸುಶರಣರ ಸುಖದಾತ | ವಸುಧೀಶ ಪಸರಿಸಿದ | ಅಸಮ ತವ ಚರಿತೆಯನು 1 ಸಾರ ಕನ್ನಡದಲಿ ನೀರಚಿಸುತಲಿ ತಂತ್ರ | ಸಾರ ಮಂತ್ರವ ಪರಮ ಕಾರುಣ್ಯದಿ || ಶ್ರೀರಂಗನೋಲಿಸಿದ ಧಾರುಣಿಪ ದಾಸರಿಗೆ ಸಾರಿ ಪೇಳಿದ ಪರಮೋಧಾರ ಜಿತಮಾರ 2 ಗುಣನಿಧಿ ಪ್ರಾಣೇಶದಾಸಾರ್ಯರ ಮನೆಯ ಹಿತ್ತಲದೊಳಗೆ ಬಣವಿ ಬುಡದಲಿ ಬಂದು ಘನ ತುಲಸಿ ರೂಪದಲಿ ಜನಕೆ ತೋರಿಸಿ ಚಿತ್ರ 3 ವಾದದಲಿ ರಾಮಾಖ್ಯ ವಾದಿಯಪ ಜಯ ಪೊಂದಿ ಗಜ ಭೂಷಣಾದಿಗಳನು || ಮೋದ ಬಡಿಸಿ ನಿನ್ನ ಔದಾರ್ಯ ಗುಣವ 4 ಶಾಮಸುಂದರ ಮೂಲ ರಾಮಚಂದ್ರನ ಚರಣ ತಾಮರಸ ಷಡ್ಜಪರಮ ಸುಗಣ ಧೀಮಂತ ಶ್ರೀಮಂತ್ರಧಾಮ ನಿಲಯರ ಪೂರ್ಣ ಪ್ರೆಮ ಸತ್ವಾತ್ರ ಮಮ ಸ್ವಾಮಿ ಸುಚರಿತ್ರ 5
--------------
ಶಾಮಸುಂದರ ವಿಠಲ
ವಾದಿರಾಜಗುರು ನಿಮ್ಮಡಿಗೆರಗುವೆ ಸಾದರದಿಂದಲಿ ಮಂದನ ಕೈಪಿಡಿಯೋ ಪ ಸಾಧುಜನಾಶ್ರಯ ಮೇದಿನೀಸುರತರು ಪಾದವಪಿಡಿದಿಹೆ ಬೋಧಿಸು ವಿಜ್ಞಾನ ಅ.ಪ. ಕಾದಿಡೆ ಸುಜನಕೆ ಮಧ್ವಾಗಮನಿಧಿ ಸಾದರದುದಿಸಿದಿ ಬುಧಜನಕುಲಮೌಳಿ ಬೂದಿಯ ಮಾಡುತ ದುರ್ಮತಜಾಲವ ಮಾಧವ ಮಧ್ವರ ಸೇವೆಯ ಸಲ್ಲಿಸಿದೇ 1 ಕವಿತಾವನಿತೆಯ ಕುಣಿಸುತ ಶಾಸ್ತ್ರವ ನವವಿಧ ರಸದಿಂ ಪೇಳಿದೆ ಶಿಷ್ಯರಿಗೆ ಭುವಿಯಲಿ ಮೆರೆದೆಯೋ ಮಧ್ವಾನುಜ ತೆರ ಪವನ ಮತಾಬ್ಧಿಯ ಸೋಮನೆ ಶರಣೆಂಬೆ2 ರಿಕ್ತಬ್ರಹ್ಮನ ಭಕ್ತರ ನೊಲ್ಲನು ಯುಕ್ತಿಗಳೆಂಬುವ ಮಲ್ಲಿಗೆ ಪಟ್ಟಲಿ ಶಕ್ತಯತೀಂದ್ರನೆ ಅಡಗಿಸಿ ಸರ್ವೋ- ದ್ರಿಕ್ತನ ಗುಣಗಣ ಸಾಧಿಸಿ ನೀ ಮರೆದೇ3 ತೀರ್ಥಕ್ಷೇತ್ರವ ಪಾವನಗೈಯ್ಯಲು ಸುತ್ತುತನೀಡಿದೆ ತೀರ್ಥಪ್ರಬಂಧವನೂ ಪಾರ್ಥಿವ ಮೊರೆಯಿಡೆ ಅಕ್ಷತೆನೀಡುತ ಶತ್ರುಗಳಳಿಸುತ ಪೊರೆದೆಯೊ ಕರುಣಾಳು4 ಅರವತ್ನಾಲ್ಕು ಕಲಾಜ್ಞನೆ ಗುಣನಿಧಿ ಸುರಗಣಗಚ್ಚಿರಿಯೇ ಸರಿ ತವ ಮಹಿಮ ಹರಿಸಿದೆ ಮೃತ್ಯುವ ರಾಜನ ಅಳಿಯಗೆ ಸಿರಿಪತಿ ವ್ಯಾಸರ ಕಂಡೆಯೊ ಪ್ರತ್ಯಕ್ಷ5 ಗುಂಡಕ್ರಿಯೆ ವೈಕುಂಠ ವರ್ಣನೆ ಕಂಡಕಂಡಪದ ಪುಂಜವ ಪಾಡುತಲೀ ಕೂಡದು ಭಾಷಾ ಸಡಗರ ವೆಂಬುದ ಪಂಡಿತನಿಕರಕೆ ತೋರಿದೆ ಯತಿತಿಲಕಾ6 ಜಂಗಮಗರುವನ ಭಂಗಿಸೆ ತವಕದಿ ಇಂಗಿಸಿ ಸಲಹಿದೆ ವಿಪ್ರರ ಕಷ್ಟಗಳ ಗಂಗಾಪಿತ ತ್ರಿವಿಕ್ರಮ ದೇವನ ಮಂಗಳ ಸುರಿಸಲು ಸ್ವಾದಿಲಿ ಸ್ಥಾಪಿಸಿದೆ7 ಗೋಧರ ಹಯಮುಖ ಸಾಕ್ಷಾತ್ತಿ ಎಂಬುವ ಛಂದದಿ ನೀಡಿದ ಓದನವೆಂತೆನೆ ಸಾಧ್ಯವೆ ಶೇಷನು ಪೊಗಳಲು ನಿಮ್ಮನು ಮಂದಿರನವನಿವ ನೆನ್ನುತ ಕೈ ಪಿಡಿಯೋ8 ಇಂದ್ರನ ದೂತರ ತಡೆಯುತ ದಿನತ್ರಯ ಚಂದದಿ ಕುಳಿತೆಯಾ ಬೃಂದಾವನದೊಳಗೆ ಇಂದಿಗು ನೋಳ್ಪರು ಬುಧಜನ ನಿಮ್ಮನು ವೃಂದಾರಕಗಣ ವಂದಿತ ಚರಣಯುಗ9 ಸುಂದರ ಹಯಮುಖ ರಾಮನು ಕೃಷ್ಣನು ವೇದವ್ಯಾಸರು ಹನುಮಾದಿ ತ್ರಯರು ಮಧ್ಯದಿ ಕುಳಿತಿಹ ನಿನ್ನ ಸುನಾಲ್ಕೆಡೆ ನಿಂದಿಹರೆಂಬುದು ಸಿದ್ಧವು ಮಹಮಹಿಮಾ 10 ಬೃಂದಾವನ ಪಂಚದಿ ಹರಿ ತಾನಿಹ ಚಂದದಿ ಸೇವೆಯ ಕೊಳ್ಳುತ ನಿನ್ನಿಂದ ಸುಂದರ ದಶಗಳ ಪಂಚನುರೂಪವ ವಂದಿಸಿ ನೋಡುತ ನೆನೆಯುವೆ ಏನೆಂಬೆ11 ಗಂಗಾಪಿತ ತ್ರಿವಿಕ್ರಮದೇವನ ಹಿಂಗದೆ ನೆನೆಯುವೆ ಲಕ್ಷಾಭರಣವನು ರಂಗಗೆ ನೀಡಿದೆ ನಮ್ಮಯ ಭವವನು ಇಂಗಿಸೆ ಕಷ್ಟವೇ ಗುರುವರ ದಯಮಾಡೋ12 ಜಯಮುನಿ ಹೃದಯದಿ ವಾಯುವಿನಂತರ ಜಯದಿಂ ನಲಿಯುವ ಶ್ರೀಕೃಷ್ಣವಿಠಲನ ದಯದಿಂ ತೊರಿಸು ಭಾವೀಜಯಾಸುತ ಹಯಮುಖ ಕಿಂಕರ ನಮಿಸುವೆ ಭೂಯಿಷ್ಠಾ13
--------------
ಕೃಷ್ಣವಿಠಲದಾಸರು
ವಾಯ ದೇವರ ಮಹಿಮಾ ವರ್ಣನೆ ಮೂರವತಾರ , ಷಟ್ಪದಿ ಶ್ರೀರಮೇಶ ವಿಧೀರ ವಿಪವೃತ್ರಾರಿ ವಿನುತ ಸರ್ವಾಧಾರ ನಿರುಪಮನೆ ಸ್ವತಂತ್ರಗುಣಾರ್ಣವ ಪ್ರಭುವೇ | ಪತಿ ಓಂಕಾರ ವ್ಯಾಹೃತಿ ವಾಚ್ಯ ಸರ್ವಪ್ರೇರಕ ಬಲಸುಭಾಸಕ ಹರಿಯೆ ವಾಗ್ರಸನೆ ನಮಿಪೆ 1 ಆಪ್ತನೆಂದರೆ ಪ್ರಾಣ ಸರಿ ಪರಮಾಪ್ತ ಹರಿಯ ಯಥಾರ್ಥಜ್ಞಾನ ಪ್ರಾಪ್ತಿ ಮಾಡಿಸಿ ವಿಷ್ಣು ಕರುಣವ ಕೊಡಿಸುವನು ತಾನು | ಆಪ್ತ ನೆನ್ನೆಯಥಾರ್ಥ ಪೇಳುವ ಮತ್ತೆ ನಿಶ್ಚಯ ಜ್ಞಾನವುಳ್ಳವ ಶಕ್ತ ಕರುಣ ಪಟುತ್ವಯುತನಿರ್ವಂಚನೆಗಳಿಂದ 2 ಶಿಷ್ಯ ವಾತ್ಸಲ್ಯ ಯುತ ಗುರುಸರಿ ವಿಶ್ವ ಜನಕನ ಪ್ರಥಮ ಭಕ್ತಶ್ವಾಸಗಿಂತಲು ಬೇರೆಯವನಿಲ್ಲ ಪವಮಾನನವ | ದೋಷ ಸಂಶಯ ರಹಿತ ಹರಿ ವಿಶ್ವಾಸ ಪಾತ್ರ ವಿಶೇಷ ಮಹಿಮಸುರಾಶ್ರಯ ನಿವನು ವಂಶನೆ ನಿಸುವ ಸೂತ್ರಗಾನಮಿಪೆ 3 ಯಾವ ಜ್ಞಾನ ಬಲ ಸ್ವರೂಪ ಸುದೇವ ಕ್ರೀಡಾದಿ ಗುಣಯುತ ಭವನಾವಿಕ ಪ್ರಭು ವಾಯುವಿನಗುಣ ಚರಿತೆ ವೃಂದಗಳ | ಪಾವನ ಬಳಿತ್ಥಾದಿ ಶೃತಿಗಳು ಸಾವಧಾನದಿ ಪೊಗಳುವವೊ ಆಭಾವಿ ಬ್ರಹ್ಮನ ಮೂಲ ರೂಪವುಜ್ಞಾನ ಬಲಮಯವು 4 ಮೂಲ ರಾಮಾಯಣ ವಿಶೇಷವ ಪೇಳುವ ಹನುಮನೇ ಪ್ರಥಮ ನಿಹಖೂಳ ದಿತಿ ಜನ ಸೈನ್ಯ ಮಾರಕ ಭೀಮ ನೆರಡೆನ್ನಿ | ಶೀಲ ಸಖಗಳ ನೀವ ಶಾಸ್ತ್ರವ ಪಾಲಿಸಿದ ಗುರು ಮಧ್ವರಾಯರೆ ಮೂಲ ಮುಖ್ಯ ಪ್ರಾಣ ದೇವನ ಮೂರನೆಯ ರೂಪ 5 ಪ್ರಾಣ ನೀತ್ರಯ ರೂಪಗಳು ಸಮವೆನ್ನುವದು ಸರ್ವ ವಿಷಯದಿ ಮುಕ್ಕಣ ಪ್ರಮುಖರ ಜ್ಞಾನ ದಾತೃವಿಗಿನ್ನು ಸಮವುಂಟೆ | ಜ್ಞಾನ ವಾಚಕ ಹನುಮ ಶಬ್ದವು ಪೂರ್ಣ ಹರಿ ಸಂದೇಶವೈದನು ಜಾನಕಿಗೆ ನಿರ್ದೋಷ ವಾಕ್ಯಗಳನ್ನು ಧೀಮಂತ 6 ಪಂಚರಾತ್ರಾಗಮ ಪುರಾಣ ವಿರಂಚಿ ಜನಕನ ತೋರ್ಪವೇದವು ವಂಚಿಸದ ಇತಿಹಾಸಗಳು ಕೂಡುತಲಿ ಸಪ್ತಗಳ | ಮಿಂಚಿಸುತ ಸುಜ್ಞಾನ ಪಾಪದ ಸಂಚಯ ತರಿವ ಕಾರಣದಿ ಬಲಿವಂಚಕನ ಭಕ್ತರು ಕರೆಯುವರು ಸಪ್ತಶಿವ ವೆಂದು7 ಶಾಸ್ತ್ರ ವಚನಕೆ ಮಾತೃ ವೆಂಬರು ಸಪ್ತ್ರ ಶಿವಕರ ಮಾತೃಗಳ ಧರಿಸಿಪ್ಪ ನಿವನೆಂದು | ಖ್ಯಾತನಾಗಿಹ ಭೀಮ ನಾಮದಿ ತೀರ್ಥವೆನ್ನಲು ಶಾಸ್ತ್ರವಿದಿತವು ಮತ್ತೆ ಮಧುವೆನೆ ಸುಖವು ಮುಕ್ತಿಯನೀವ ಶಾಸ್ತ್ರವನು 8 ಇತ್ತ ದೇವನೆ ಮಧ್ವನೆಂಬರು ಸುತ್ತುತೀತ್ರಯ ನಾಮದರ್ಥವ ನಿತ್ಯ ತಿಳಿಯುತ ಪಠಿಸಿ ಪಾಡಲುವಾಯು ದೇವನನು | ಭಕ್ತ ಬಾಂಧವನಾತ ವಲಿಯುತ ತತ್ವವೇತ್ತನ ಮಾಳ್ವ ನಿಶ್ಚಯ ಭೃತ್ಯನಾನೆಂತೆಂದು ಮಧ್ವರ ಸಾರಿ ಭಜಿಸುತಿರಿ9 ಪ್ರೌಢ ಮಧ್ವಗೆ ಪೂರ್ಣ ಪ್ರಜ್ಞನೆ ಈತ ಶ್ರುತಿ ಸಿದ್ದ | ಬೀಡು ಮಾಡಿಹ ವಿದ್ಯೆ ನೂಕುತ ತೊಂಡ ನೆಂದಿವರಡಿಗೆ ಬೀಳಲು ಪಾಂಡುರಂಗನ ಬಿಚ್ಚಿ ತೋರುವ ಗೋ ಸಮುದ್ರದಲಿ10 ಏನ ಪೇಳಲಿ ಏನಪೇಳಲಿ ಜ್ಞಾನನಿಧಿ ಸರ್ವಜ್ಞ ಗುರುವರ ತಾನು ಗೈದ ಮಹೋಪಕಾರವ ಮುಕ್ತಿಯೋಗ್ಯರಿಗೆ | ಜ್ಞಾನ ಬಾಹುದೆ ಬಿಟ್ಟರೀತನ ಶೂನ್ಯವೆ ಸರಿ ಎಲ್ಲ ಆತಗೆ ಮನ್ನಿಸುವನೆ ಅನನ್ಯವನು ಹರಿ ಶರಣು ಆಚಾರ್ಯ 11 ಈತನೇ ಆನಂದ ತೀರ್ಥನು ಈತನೇ ಆಚಾರ್ಯ ನಿಶ್ಚಯ ಈತನೇ ಸರಿಮಾತರಿಶ್ವನು ವಾಯುವಿನರೂಪ | ಈತ ಚರಿಸುವ ಶಾಸ್ತ್ರವ್ಯೂಹದಿ ದೈತ್ಯರಿಂದಾಚ್ಛಾದಿತ ಗುಣಯುತ ಆತ್ಮಪೂರ್ಣಾನಂದ ದೇವನ ಶಾಸ್ತ್ರಮಥಿಸುತಲಿ 12 ಸಾರ ವೃಂದಕ್ಕೆ ಚುಚ್ಚುವನು ದುರ್ವಾದಿ ಮತಗಳ ಕೆಚ್ಚೆದೆಯವನು ಗರ್ಜಿಸುತವೇದೋಕ್ತವಾಕ್ಯಗಳ | ಹೆಚ್ಚು ಹೆಚ್ಚೇ ಸರಿಯು ವಿಷ್ಣುವು ಸ್ವಚ್ಛ ಪೂರ್ಣಾನಂದ ಸುಖಮಯ ಪೃಚ್ಛ ಪರಿವಾರ ಸರಿ ವಿಧ್ಯಾದಿಗಳು ಹರಿಗೆಂದು 13 ಕಚ್ಚಿಲತೆಗಳ ಬಿಸುಡುವಂದದಿ ನುಚ್ಚು ಮಾಡುವ ಪ್ರಶ್ನೆನೀಕವ ಅಚ್ಚನಾರಾಯಣನೆ ಪ್ರೇರಕ ನಿವಗೆ ಜನಕನಿಹ | ಮೆಚ್ಚು ಮಗ ಶ್ರೀ ಲಕ್ಷೀ ದೇವಿಗೆ ರಚ್ಚೆತನುವನು ಕಿತ್ತುವೋಡಿಸಿ ಹೆಚ್ಚಿಸುವ ಸುಜ್ಞಾನ ದೀಪವ ಹರಿಯ ಪ್ರಧಮಾಂಗ14 ಕೊಟ್ಟು ಉಂಗುರ ಸುಟ್ಟುಲಂಕೆಯ ಬಿಟ್ಟು ಕಾಮವ ಮೆಟ್ಟಿಖಳರನು ಜಟ್ಟಿ ಹನುಮನು ಪಟ್ಟ ಪುತ್ರನ ಪದವಿ ಸಾಧಿಸಿದ | ಹುಟ್ಟಿ ಕುಂತಿಲಿ ಕುಟ್ಟಿ ಕುರುಕುಲ ಇಟ್ಟು ಮನದಲಿ ದಿಟ್ಟ ಕೃಷ್ಣನ ಅಟ್ಟಿ ಹಾಸದಿ ಮೆರೆದ ಭೀಮನು ಜ್ಞಾನ ಭಾಸ್ಕರನು15 ಹುಟ್ಟು ಸಾವಿನ ಕಟ್ಟು ಬಿಡಿಸಲು ಘಟ್ಟ ದಡಿಯಲಿ ಭಟ್ಟನೆನಿಸುತ ಬಟ್ಟೆ ತವಕದಿ ಭ್ರಷ್ಟದಸ್ಯುಗಳ | ಕೆಟ್ಟ ಮತಗಳ ಸುಟ್ಟು ವಾದದಿ ಸೂತ್ರ ಭಾಷ್ಯವ ನೆಟ್ಟ ಸಂತರ ಮನದಿ ವಿಷ್ಣುವ ಶ್ರೇಷ್ಠಗುರುಮಧ್ವ16 ಏಕೆ ಭಯ ನಮಗಿನ್ನು ನಿರಯದ ಏಕೆ ಸಂಶಯ ಮುಕ್ತಿ ವಿಷಯದಿ ಏಕೆ ಕಳವಳ ಮಧ್ವರಾಯರ ಶಾಸ್ತ್ರ ಪೀಯೂಷ | ಜೋಕೆಯಿಂ ಪ್ರತಿದಿನವು ಸೇವಿಸೆ ಶ್ರೀಕಳತ್ರನು ಕೈಯ ಬಿಡುವನೆ ನಾಕಪತಿಯಿಂಬಿಟ್ಟು ಸಲಹುವ ಶಾಸ್ತ್ರಸಿದ್ಧವಿದು 17 ಹೆಚ್ಚು ಮಾತೇಕಿನ್ನು ಹರಿಮನ ಮೆಚ್ಚುಯೆನಿಸಿಹ ಮಧ್ವರಾಯರು ಬಿಚ್ಚಿತೋರಿದ ತೆರದಿ ಶೃತಿಗಳ ಭಜಿಸಿಖಳ ಜನಕೆ | ಬಚ್ಚಿಡುತ ವಿಜ್ಞಾನ ಮರ್ಮವ ನುಚ್ಚು ನೂಕುತ ದುರ್ಮತಕಿಡಿರಿ ಕಿಚ್ಚು ಕಮಲೇಶ ನೊಲಿಮೆಗೆ ಬೇರೊಂದು ಪಥವಿಲ್ಲ 18 ನಮ್ಮಹಿರಿಯರ ಖಿನ್ನನುಡಿಗಳ ನೊಮ್ಮನದಿ ನೀವೆಲ್ಲ ಕೇಳಿರಿ ರಮ್ಮೆಯರಸಗೆ ಸಮ್ಮತದ ಸಚ್ಛಾಸ್ತ್ರದರ್ಪಣವ | ಹೆಮ್ಮೆಯಿಂದಲಿ ಕೊಟ್ಟು ಬಂದೆವು ಒಮ್ಮೆಯಾದರು ನೋಡುವರೆ ಈ ನಮ್ಮ ಸಂತತಿ ಹಾ ಹರಿ ಹರೀಯೆಂಬ ಕ್ರಾಂತಿಯುತ19 ಉಣ್ಣಿರುಣ್ಣಿರಿ ಮಧ್ವಕಂದರೆ ಭವ ಹುಣ್ಣುವಳಿಯಿರಿ ಅಣ್ಣ ಪ್ರಾಣನದಯವ ಯಾಚಿಸಿಘನ್ನ ಶಾಸ್ತ್ರಾನ್ನ | ಅನ್ನ ಶೃತಿಗಳು ವಿವಿಧ ಸ್ಮøತಿಪ ಕ್ವಾನ್ನ ಪಾಯಸ ಗೀತೆ ಭಕ್ಷ್ಯಗಳೆನ್ನಿ ಬಗೆ ಬಗೆ ಸರ್ವ ಮೂಲವ ಸೂತ್ರಗಳೆ ಸಾರು 20 ತುಪ್ಪವೆನ್ನಿರಿ ನ್ಯಾಯ ಸುಧೆಯನು ಗೊಪ್ಪರಾಜರ ಗ್ರಂಥ ಹಲ್ಪವು ಅಪ್ಪರಾಯರ ವಾಣಿ ಕ್ಷೀರವು ದಾಸ ಸಾಹಿತ್ಯ | ತಪ್ಪದೆಲೆ ತಿಂಬಂಥ ತಿಂಡಿಯು ಚಪ್ಪರಿಸಿ ಭಾರತದ ಕೂಟನು ವಪ್ಪುವನು ಶ್ರೀ ಕೃಷ್ಣ ದೇವನು ಭಕ್ತ ನುಣ್ಣಲಿವ 21 ಎಂತು ಪೊಗಳಲಿ ನಿಮ್ಮ ಗುರುವರ ಹಂತ ಸುರಗಣ ವೆಲ್ಲ ನಿಮ್ಮಡಿ ನಿಂತು ಪಡೆದರು ಜ್ಞಾನ ಪ್ರಾತರ್ನಾಮಕನೆಶರಣು | ಕಂತೆ ಮತಗಳ ನಾಶಗೈದನ ನಂತ ಮಹಿಮನೆ ದೀನ ನಾನಿಹೆ ಕುಂತಿ ನಂದನ ನೀನೆ ತಿಳಸೈ ಸಕಲ ಶಾಸ್ತ್ರಾರ್ಥ 22 ಮೂರ್ತಳೆನಿಸುವ ಚಂದ್ರಮಾನಿನಿನಾಥ ಸೂರ್ಯ ನೊಳ್ ಆದಿತ್ಯ ನಾಮದಿ ನಿಂತು ದಿಕ್ಪತಿಗಳಿಗೆ ಶಕ್ತಿಗಳ | ಇತ್ತು ಸೃಷ್ಠಿಯ ಕಾರ್ಯ ವೆಸಗುವೆ ಉತ್ತರಾಯಣ ಪಗಲು ಮಾನಿಯೆ- ನಿತ್ಯ ಪ್ರೇರಿತ ನೀಪ್ರಜಾಪತಿನಾಮ ಹರಿಯಿಂದ 23 ಖ್ಯಾತ ಮೂರ್ತಾ ಮೂರ್ತ ಧಾರಕೆ ತತ್ವಪತಿಗಳ ಪೋಷತನುವಲಿ ಮೃತ್ಯುಹಾಗಶನಾಪಿಪಾಸಾಪಾನ ನಾಮಗಳ | ಎತ್ತಿ ನಡಿಸುವೆ ದೇಹ ಕಾರ್ಯವ್ರಾತ ಬಿಡಲೇನೊಂದು ನಡೆಯದು ಮಾತರಿಶ್ವನೆ ನಿಧಿಗು ಆರ್ಯುರ್ದಾತ ನೆನಿಸಿರ್ಪೆ 24 ಅನ್ನ ವಿಧಿಯಿಂ ಕೊಂಬೆ ಸಮಸರಿ ಯನ್ನ ಬ್ರಹ್ಮಗೆ ಜೀವ ಗಣತಾವುಣ್ಣಲಾರರು ನಿನ್ನ ಬಿಡೆ ಪ್ರಾಣದಿ ಪಂಚಕನೆ | ಸ್ವಪ್ನ ನಿದ್ರಾ ಸಮಯದೊಳ್ ಹರಿಯನ್ನು ಕೂಡಿರೆ ಕರಣಪರು ಘನಯಜ್ಞ ನಡಿಸಿ ಸರ್ಮರ್ಪಿಸುವೆ ನೀನೊಬ್ಬ ದೇವನಿಗೆ 25 ನಿನ್ನ ನಂಬಿದ ಭಕ್ತನಿಗೆ ಭವ ಹುಣ್ಣು ಮುಟ್ಟದು ವಿಷ್ಣು ವಲಿಯುತ ಮನ್ನಿಸುವ ಹರಿಯಾಜ್ಞೆಯಿಂಮುಕ್ತಿದನು ನೀ ಹೌದು | ವಿಶ್ವ ವಂಶನೆ ನಿನ್ನ ಮಹಿಮೆಯಗಣ್ಯ ಸಿದ್ಧವು ನಿನ್ನ ಧೊರೆ ಹರಿ ಒಬ್ಬ ಜೀವೋತ್ತುಮನೆ ಅಶರೀರ26 ಜ್ಞಾನ ಬಲ ಐಶ್ವರ್ಯಗಳು ಪರಿಪೂರ್ಣ ಸರಿ ವೈರಾಗ್ಯ ಹಾಗೆಯೆ ಪ್ರಾಣನಿನ್ನಲಿ ಕರಿಸುವೆಯೊ ಆಧ್ಯರ್ಧ ನಾಮದಲಿ | ಮಾನ್ಯ ವಿಷ್ಣುಸಹಾಯ ನಿನಗೈನ್ಯೂನ ವಿಲ್ಲವು ಯಾವ ತೆರದಲುಕಾಣೆ ಅಪಜಯ ಜೀವ ಸಾಧನೆಯೆಲ್ಲ ನಿನ್ನಿಂದ 27 ಶೇಷಗಸದಳ ನಿನ್ನ ಪೊಗಳಲು ಶೇಷ ಸರಿ ಬಡದಾಸನಹೆ ವಿಶ್ವಾಸದಿಂ ಸಂವತ್ಸರನೆ ನೀಕಾಯಬೇಕೆಂಬೆ | ಏಸು ಜನ್ಮಗಳನ್ನು ಕೊಟ್ಟರು ಶ್ವಾಸ ಪತಿತವ ಮತದಿ ಪುಟ್ಟಿಸಿ ದಾಸ ಭಾಗ್ಯವ ನೀಡು ಹರಿಯೊಳ್ ಶುದ್ಧ ಭಕ್ತಿಯುತ28 ಎರಡು ಸಹ ಮೂವತ್ತು ಲಕ್ಷಣ ವಿರುತಿಹ ಜಗದ್ಗುರುವೆ ವಿಷ್ಣುವಿಗೆರಡು ಎರಡು ಸರಿಯೆಂತೆಂದು ಸ್ಥಾಪಿಸಿ ಎರಡು ವಿದ್ಯೆಗಳಿರವು ತೊರುವ ಲೆರಡು ಸುಖಗಳ ಪಡೆಯೆಸಾಧನ ಮಾರ್ಗ ನೀಡ್ವೆಬತ 29 ಸರ್ವ ಶಕ್ತನೆ ಶರ್ವ ವಿನುತನೆ ಸರ್ವ ಸರ್ವಗ ಹಿರಿಯ ತನಯನೆ ಸರ್ವ ಜಗದಾಧಾರ ಪೋಷಕ ಸರ್ವ ತೋವರನೆ | ಸರ್ವ ಕಾಲದಿ ಸರ್ವ ದೇಶದಿ ಸರ್ವ ಗುಣದಿಂ ಹರಿಯ ಯಜಿಸುವ ಸರ್ವ ಸದ್ಗುಣ ಪೂರ್ಣ ದೋಷವಿದೂರ ಸರ್ವಜ್ಞ 30 ಹಿಂದೆ ಪೂರ್ವಜರೆಲ್ಲ ಕೂಡುತಲೊಂದು ಪಾಯವಗೈದು ಮೃತ್ಯುವತಂದು ದಿವಿಜ ವೃಂದಕೆ ಕುಂದು ವದಗಿಸಲು | ಕಂದುತಳಿಯಲ್ ನಿಖಿಲ ಸುರಗಣ ಕುಂದು ಮೃತ್ಯುವ ಗೈದು ಪುಡಿಪುಡಿ ವಂದನಾರ್ಹನು ಒಬ್ಬನೀನೇ ಯೆಂದು ಸ್ಥಾಪಿಸಿದೆ 31 ಪಾಹಿ ಅಮ ಶುಚಿ ಯೊಗ ಕ್ಷೇಮನೆ ಪಾಹಿ ಅಮರಲಲಾಮ ಅನಿಲನೆ ನಿರವದ್ಯ | ಪಾಹಿ ಸತ್ಯ ವಿಶುದ್ಧ ಸತ್ವನೆ ಪಾಹಿ ಲಕ್ಷ್ಮೀ ಪುತ್ರ ಭೃತ್ಯನೆ ಪಾಹಿ ಜೀವಗ ಬಾದರಾಯಣಪ್ರೀಯ ಮಹರಾಯ 32 ಪಾಹಿ ಹನುಮನೆ ಭೀಮ ಮಧ್ವನೆ ಪಾಹಿ ದುರ್ಮತ ಧ್ವಾಂತ ಸೂರ್ಯನೆ ಪಾಹಿ ನತಜನ ಪಾಲ ಪ್ರಾಣನೆ ಪಾಹಿ ಶ್ರೀಸುತನೆ | ಪಾಹಿ ಜಗದಾಧಾರ ಸೂತ್ರನೆ ಪಾಹಿ ಸಾಮನೆವಂಶ ದೂರನೆ ಪಾಹಿ ಹರಿಯಚ್ಛಿನ್ನ ಭಕ್ತನೆ ಪಾಹಿ ವಿಜ್ಞಾನ 33 ಪಾಹಿ ಋಜುಪತಿ ವಾಯುಕೂರ್ಮನೆ ಪಾಹಿ ಜೀವ ಲಲಾಮ ಗುಣನಿಧಿ ಪಾಹಿ ಶುಚಿ ಸರ್ವಜ್ಞ ಸಾಮಗಭಾವಿ ಶತಮೋದ | ಪಾಹಿ ಸತ್ಯನೆ ಕಲಿವಿದಾರಣ ಪಾಹಿ ಗುರು ಗೋವತ್ಸ ರೂಪಿಯೆ ಪಾಹಿ ಮಿಷ್ಣು ಪದಾಬ್ಜಮಧುಕರ ಭಾರತೀ ಕಾಂತ 34 ಪಾಹಿ ಅಮೃತನೆ ವಿಶ್ವರಜ್ಜುವೆ ಪಾಹಿ ಬೃಹತೀ ಛಂದ ಮಾನಿಯೆ ಪಾಹಿ ಹಂಸೋಪಾಸಕ ಪ್ರಭು ಆಖಣಾಶ್ಮಸಮ | ಪಾಹಿ ಸಾಯಂಖ್ಯಾತ ಜೀವಗ ಪಾಹಿ ಜಗಚೇಷ್ಠಾ ಪ್ರವರ್ತಕ ಪಾಹಿ ಅನಿಲನೆ ಶೇಷವಿಪಶಿವ ವಂದಿತಾಂಘ್ರಿಯುಗ 35 ಪಾಹಿ ಪರಿಸರ ಪಂಚ ಕೋಶಗ ಪಾಹಿ ಗುಣನಿಧಿ ಕೊವಿದೋತ್ತಮ ಪಾಹಿ ನಮಿಸುವೆ ಅಣುಮಹದ್ಘನ ರೂಪ ವಿಖ್ಯಾತ | ಪಾಹಿ ವಿಶ್ವಗ ವ್ಯಸನ ವರ್ಜಿತ ಪಾಹಿ ಹರಿಯನು ನಿತ್ಯನೋಳ್ಪನೆ ಪಾಹಿ ವಿಷ್ಣುದ್ವಾರ ಶರಣೈ ಪಾಹಿ ಹರಿ ಸಚಿವ 36 ಜಯ ಜಯವು ಶ್ರೀ ಹನುಮ ಭೀಮಗೆ ಜಯ ಜಯವು ಶ್ರೀ ಮಧ್ವರಾಯಗೆ ಜಯ ಜಯವು ತತ್ವೇಶರರಸಗೆ ಮುಖ್ಯಪ್ರಾಣನಿಗೆ | ಜಯ ಜಯವು ಜಯತೀರ್ಥ ಹೃಸ್ಥಗೆ
--------------
ಕೃಷ್ಣವಿಠಲದಾಸರು
ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ 1 ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ 2 ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ 3 ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ ಮಾಧವ ಮಧುಸೂದನನೇ ಆದಿ ಮೂರುತಿ ನೀನೆ 4 ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ 5
--------------
ಹನುಮೇಶವಿಠಲ
ಶಿವಶಿವ ಜಯಜಯ ಶಿವ ಸರ್ವೋತ್ತಮಕಾಯ ಶಿವ ದೂರಿಕೃತಮಾಯ ಶಿವಶರಣಾಗತಪ್ರಿಯ ಪ ಸನಕಾದಿ ಮುನಿಹೃದಯ ವನಜಸ್ಥಾಪಿತಸೂರ್ಯ ದನುಜ ವಿಮರ್ದನ ವೀರ್ಯ ಸುಗುಣನಿರಾಕೃತ ಕೋಪ 1 ಚಾಪ ನಿಗಮಾಗೋಚರ ರೂಪ ಜಗದಂತಃಸ್ಥಿತದೀಪ ಸುಗುಣನಿರಾಕೃತ ಕೋಪ 2 ಪರಮಪಾವನ ಕಾಮಹರ ಕಕುದ್ಗಿರಿಧಾಮವರ ಗಂಗಾಧರನಾಮ ತಿರುಪತೀಶ್ವರ ಪ್ರೇಮ 3
--------------
ತಿಮ್ಮಪ್ಪದಾಸರು
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ಪ ಕರವ ಜೋಡಿಸಿ ಬಿನ್ನೈಪಾ || ದುರಿತ ರಾಶಿ | ಪರಿಹಾರ ಮಾಡಿಸಯ್ಯಾ 1 ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರಿಗಳಿಗೆ ನಿರುತ ಮಾರಕ ನೀನಹುದೋ2 ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ 3 ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ 4 ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5
--------------
ವಿಜಯದಾಸ
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು
ಶ್ರೀ ಪುರುಷೋತ್ತಮವಿಲಾಸ 62-2 ಆನಂದ ಜ್ಞಾನಮಯ ಅಖಿಲ ಗುಣ ಪರಿಪೂರ್ಣ || ಅನಘ ಲಕ್ಷ್ಮೀರಮಣ ಶರಣು ಜಗದೀಶ ಪ ವನಜಾಸನಾದಿ ಸುರರಿಂದ ಆರಾಧಿತನೇ | ವನಜಜಾಂಡದಿ ಜಗಜ್ಜನ್ಮಾದಿಪತೇ ಅಪ ಅಮಿತ ಅನಂತ ಗುಣಕ್ರಿಯಾರೂಪ ಅನಂತ ಶೀರ್ಷಾನಂತ ಉರುಸುಗುಣಪೂರ್ಣ|| ಅನಂತಾಕ್ಷ ಸರ್ವಜ್ಞ ಸಾಕ್ಷಿ ಸರ್ವಾಧ್ಯಕ್ಷ || ಅನಂತಪಾದನು ಅನಂತರೂಪಸರ್ವಸ್ಥ 1 ಸಹಸ್ರಪಾತ್ ಸತ್ಯಂ ಸತ್‍ಸೃಷ್ಟಿ ಜೀವನದ ಸಹಸ್ರಾಕ್ಷಜ್ಞಾನಂ ಎರಡು ವಿಧಜ್ಞಾನ || ಸಹಸ್ರಶೀರ್ಷಾನಂತಂ ಆನಂದ ಆನಂದ ಮಹಾಮಹಿಮ ಪೂರ್ಣಗುಣ ಪುರುಷನೀಬ್ರಹ್ಮ 2 ನಾಕಭೂಪಾತಾಳ ಜಗದಂತರ್ಬಹಿವ್ರ್ಯಾಪ್ತ || ಭಕುತರ ಸಮೀಪಸ್ಥ ಇತರರಿಗೆ ದೂರ || ಏಕಾತ್ಮ ಪರಮಾತ್ಮ ಪರಮ ಪುರುಷವಿಷ್ಣೋ ನೀಕಾಲಗುಣ ದೇಶಾಪರಿಶ್ಚಿನ್ನ ಭೂಮನ್ 3 ಪ್ರಕೃತಿಶಚವ್ಯಕ್ತ - ಮಹದಾದಿ ತತ್ವಂಗಳಿಗೇ | ಆಕಾಶ ಮೊದಲಾದ ಭೂತ ಪಂಚಕಕ್ಕೆ || ಸುಖಮಯನೇ ನೀಸರ್ವೆ ಚೇತನಾ ಚೇತನಕೆ | ಏಕ ಆಶ್ರಯ ಅನಂತ ಶೀರ್ಷಾಕ್ಷಪಾದ 4 ಪರಮೇಶ ಅವಿಕಾರ ಸಮರ್ಥ ಉರು ತೈಜಸಚ್ಛಕ್ತಿ ರೂಪವಷಟ್ಕಾರ ಪ್ರಕ್ರತಿ ಸರ್ವದಿ ನೀನು ಸ್ವೇಚ್ಛೆಯಿಂ ತುಂಬಿರುವಿ | ಪ್ರಕೃತಿ ಸರ್ವವು ನಿನ್ನಧೀನವೋ ಸ್ವಾಮಿ 5 ದ್ಯುಭ್ವಾದಿ ಜಗತ್ತಿಗೆ ಆಧಾರಾಧಿಷ್ಠಿತನು ದುಭ್ವಾದಿಗಳವ್ಯಾಪ್ಯ ವ್ಯಾಪಕನು ನೀನು ಸರ್ವಸ್ಥನಾಗಿ ನೀ ಸರ್ವವಶಿಯಾದುದರಿಂ ಸರ್ವನೀನೇಂದೆನಿಸಿಕೊಂಬಿಯೋ ಸ್ವಾಮಿ 6 ಆಧಾರ ಆಧೇಯೆ ಅನಂತಾಲ್ಪಶಕ್ತಿಯು ಅಧಿಷ್ಠಾನಾಷ್ಟಿತ ವ್ಯಾಪ್ಯ ವ್ಯಾಪಕವು ಭೇದ ಈರೀತಿಯಲಿ ಸುಸ್ಪಷ್ಟವಾಗಿದೆಯು ಇದಂಸರ್ವಂ ಉಕ್ತಿ ನಿನ್ ಸ್ವಾಮಿತ್ವ ಬೋಧಕವು 7 ಅಧೀನ ನಿನ್ನಲ್ಲಿ ಸ್ವಾಮಿ ಸರ್ವವಶಿಸರ್ವ | ಓದುನವು ಕರ್ಮಫಲಭುಂಜಿಪ ಸಂಸಾರಿಗಳು ಅದರಂತೆ ಮುಕ್ತರಸ್ವಾಮಿ ಆಶ್ರಯನು 8 ಇವು ಮಾತ್ರವೇ ನಿನ್ನ ಮಹಿಮೆಗಳು ಪರಮಾತ್ಮ || ಸರ್ವ ಈ ಚೇತನಾಚೇತನ ಪ್ರಪಂಚವು ಸರ್ವೇಶ ನಿನ್ನಂಶ ಸಹೃದಯ ಕಿಂಚಿತ್ತು 9 ಒಡೆಯನಿನ್ನಮಿತ ಶಕ್ತಿಯೊದಂಶದಲೆ ಜಡಜಗತ್ ಇರುವಿಕೆ ವಿಕಾರವುಸರ್ವ || ಜಡ ಭಿನ್ನರಲಿ ನಿನ್ನ ಸಾದೃಶ್ಯ ಅತಿ ಸ್ವಲ್ಪ ಪಾದ ವೊಂದಂ ಶೃತ ಸುಪಾದನು 10 ಅಧೀನತ್ವದಿಂಜಗತ್ ಇದಂಸರ್ವಂ ಎಂದಂತೆ - ಪಾದೋಸ್ಯ ವಿಶ್ವದಲಿ ಭಿನ್ನಾಂಶಜೇಯ || ಭಿನ್ನಜೀವರು ನಿನ್ನ ಪಾದರಾಗಿತಿಹರೋ ಚಿತ್ಚೇತ್ಯಯಂತ 11 ಪೂರ್ಣಗುಣನಿಧಿ ಅನಘ ಜನ್ಮಾದಿಕರ್ತಅಜ ಆವಣ್ನಯೋನಿತ ಪ್ರಾಪ್ಯ ಮಧ್ವಸ್ಥ ಶರಣು || ವನಜಭವಪಿತ ಶ್ರೀಶ ಪ್ರಸನ್ನ ಶ್ರೀನಿವಾಸ ನಮೋ ಪರಮ ಪುರಷ 12
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಮಾದೇವಿ ಅಂಬೋನಿಧಿ ಹೃದಂಬರ ವಾಸಿನಿ ಅಂಬಾ ಬಾ ಬಾ ಅಂಬುಧಿಜಾ ನಮೋ ಪ ಅಂಬುಜನಾಭನ ನಿಜಸತಿ ಶ್ರೀ ಭೂ ರಥಾಂಗ ಪೂ ಕಂಬು ಮಾಲಾದಿ ಸುರೂಪದಿ ಹರಿಗೆ ನೀ ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ ಮಂದರಗಿರಿಯಿಂದ ಸಿಂಧುವ ಮಥಿಸಲು ನಿಂದು ಪ್ರಕಟವಾದೆ ಇಂದಿರಾದೇವಿಯೆ ಕುಂದೇನಿಲ್ಲದ ಸುಂದರಗುಣನಿಧಿ ಬಂಧಮೋಚಕ ಆನಂದಸುಪೂರ್ಣ ಗೋ ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ ಮಂದಜಭವ ಶಿವ ವೃಂದಾರಕನುತ 1 ಹರನ ಚಾಪವ ಶ್ರೀರಾಮನು ಮುರಿಯಲು ವರ ವನಮಾಲೆಯ ಅರ್ಪಿಸಿ ನಿಂದೆ ಸುರಮುನಿರಾಜರು ಪುರಜನರೆಲ್ಲರು ಸುರಿಯಲು ಪೂಮಳೆ ಸಂಭ್ರಮದಿಂದಲಿ ಸರಿಪರರಿಲ್ಲದ ಶ್ರೀ ರಘುರಾಮನು ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ 2 ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ ಹೇಮಗರ್ಭಾದಿ ಸಮಸ್ತ ಸುಜನರಿಗೆ ರಮೆ ನಿನ್ನಯ ಸುಮಂದ ಕಟಾಕ್ಷವು ಕಾಮಿತ ಫಲದವು ಮೋಕ್ಷಹೇತುವೆ ದೇವಿ ಸತಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಷ್ಣು ತೀರ್ಥರು (ಮಾದನೂರು) ಶ್ರೀ ವಿಷ್ಣು ತೀರ್ಥರೆ ನಮೋ ಪ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ. ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು 1 ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು 2 ಪತಿ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ಮøತಿ ಒದಗುತಿರಲು 3 ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ 4 ಶೃತಿ ಸ್ಮøತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು 5 ಸಂಚಿತ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು 6 ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ 7 ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ 8 ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು 9 ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು 10 ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು 11 ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ 12 ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||
--------------
ಗುರುಗೋವಿಂದವಿಠಲರು
ಶ್ರೀ ಹಯಗ್ರೀವ ಮಂತ್ರಸ್ತೋತ್ರ ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ ಸನ್ನುತ ಸೇವ್ಯ ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ ಕಮಲಾಸನ ಋಷಿಯು ಗಾಯತ್ರಿಛಂದಸ್ಸು ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್ ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು 1 ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ ಅಂಡ ಬಹಿರಂತರದಿ ಎಲ್ಲೂ ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ ಕಾಶಿಸುತಿಹ ತುರಗ ವದನ ಸರ್ವಜ್ಞ2 ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ 3 ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ 4 ಏಕದಶÀ ಶತÀ ಸಹಸ್ರಾನಂತ ರೂಪನೇ ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ ವ್ಯಾಂ ಕಪಿಲದತ್ತÀ ವರಾಹಹಯಗ್ರೀವ 5 ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕೃಷ್ಣಪರಬ್ರಹ್ಮ ನಮೊ ಶೇಷತಲ್ಪಶಯಶೌರಿ ನಮೊಪ್ರಾಕೃತರ'ತಾನಂತ ನಮೊ ಪರಮಪುರುಷ ಭವದೂರ ನಮೊ 1ಮದನಾರ್ವಧುಸುರಸ್ತೌತ್ಯ ನಮೊ ಮಧುಕೈಟಭದೈತ್ಯಾರಿ ನಮೊಯದುಕುಲಾಂಬುಧಿಸುಧಾಂಶ ನಮೊ ವಾಸುದೇವ ಪರಮಾತ್ಮ ನಮೊ 2ದೇವಕಿದೇ'ಕಿಶೋರ ನಮೊ ದ್ವಿಜಸುತಪ್ರಾಣಸುರಕ್ಷ ನಮೊಭಾವಜಪಿತ ಜಗನ್ನಾಥ ನಮೊ ಭಕ್ತಪ್ರಿಯಗೋಂ'ದ ನಮೊ 3ಅಷ್ಟಮಗರ್ಭಸಂಜಾತ ನಮೊ ಅ'ುತಧೈರ್ಯಗಾಂಭೀರ್ಯ ನಮೊದುಷ್ಟಪೂತನಧ್ವಂಸ ನಮೊ ಧೇನುಕಶಕಟ'ದೂರ ನಮೊ 4ಗೋವರ್ಧನಗಿರಿಧಾರಿ ನಮೊ ಗೋಪಗೋಪಿಕಾಲೋಲ ನಮೊಶ್ರೀವಸುದೇವಾನಂದ ನಮೊ ಸಾಂದೀಪಪ್ರಿಯಬೋಧ ನಮೊ 5ಯಶೋದನಂದೋತ್ಸಾಹ ನಮೊ ವೇಣುಗಾನ'ನೋದ ನಮೊಶಿಶುಪಾಲಶಿರಚ್ಛೇದ ನಮೊ ಶಂಖಚಕ್ರಕರಧಾರಿ ನಮೊ 6ಕೌರವಗರ್ವ'ದಾರಿ ನಮೊ ಕುಬ್ಜಪಾಲಕಮಲಾಕ್ಷ ನಮೊಪಾರಿಜಾತಮಪಹಾರಿ ನಮೊ ಪಾವನತೀರ್ಥಪದಾಯ ನಮೊ 7ತೃಣಾವರ್ತನಾಶಾಯ ನಮೊ ದ್ವಾರಕಾಪುರ'ಹಾರಿ ನಮೊಮೌನಿಮಾನಸೊಲ್ಲಾಸ ನಮೊ ಮಧುರಾಪುರಿನಾಥಾಯ ನಮೊ 8'ದುರ ಅಕ್ರೂರಸ್ತೌತ್ಯ ನಮೊ ವೃಷಭ ಮ್ಟುಕ ಮುರಾರಿ ನಮೊ (?) 9ಶ್ರೀರುಕ್ಮಣಿಹೃದಯೇಶ ನಮೊ ಸಿಂಧುಶಯನ ಕಂಸಾರಿ ನವನೀತ ನಮೊ ಜಂಭಭೇದಿಸುತಪ್ರೇಮ ನಮೊ 10ವೈಜಯಂತಿವನಮಾಲ ನಮೊ ವನದಶ್ಯಾಮಲವರ್ಣ ನಮೊವಜ್ರಸ್ಥಗಿತಕಿರೀಟ ನಮೊ ವರಮಣಿಕುಂಡಲಧರಣ ನಮೊ 11ಭುಜಕಿರೀಟಶುಭಗಾತ್ರ ನಮೊ ಭುವನಮೋಹನಾಕಾರ ನಮೊಅಜಪಿತಕನಕಸುಚೇಲ ನಮೊ ಆರ್ತಶರಣ್ಯೋದ್ಧಾರ ನಮೊ 12ಕಾಲಯವನಮದಖಂಡ ನಮೊ ಕೋಟಿರ'ಪ್ರಭಾಭಾಸ ನಮೊಮಾಲಾಕಾರುಪಕಾರ ನಮೊ ಲೀಲಾಮಾನುಷವೇಷ ನಮೊ 13ದ್ರೌಪತಿಕಭಯೋದ್ಧಾರ ನಮೊ ಧನಂಜಯಾದಿಸುಪಕ್ಷ ನಮೊಶ್ರೀಪತಿಸಕಲಾಧಾರ ನಮೊ ಸರ್ವಭೂತಹೃದಯಾತ್ಮ ನಮೊ 14ನಿಖಿಲಚರಾಚರದೂಪ ನಮೊ ನಾಮರೂಪಕ್ರಿಯರ'ತ ನಮೊಅಖಂಡಮಚಲಾಕಾರ ನಮೊ ಅದ್ಭುತಮ'ಮಾಪಾರ ನಮೊ 15ಸಗುಣನಿರ್ಗುಣಾತೀತ ನಮೊ ಸತ್ಯಾಸತ್ಯಸುಬೋಧ ನಮೊನಿಗಮಾಗನಶೃತಿಸಾರ ನಮೊ ನಿರ್ವಿಷಯಾಭವಪ್ರಣವ ನಮೊ 16ಅಜಪಸೂತ್ರಸಂಕೇತ ನಮೊ ಹಂಸತತ್ವಸುಪ್ರಕಾಶ ನಮೊತ್ರಿಜಗಾಂತರ್ಬ'ವ್ಯಾಪ್ತ ನಮೊ ತ್ರಿಗುಣಾಪ್ರತಿಭಾಗಮ್ಯ ನಮೊ 17ತುಳಸಿರಾಮ ಗುರುಸ್ತೌತ್ಯ ನಮೋ ತಾಕ್ಷ್ರ್ಯಾಚಲವರವಾಸ ನಮೊಮುಳಬಾಗಿಲಪುರಿಪಾಲ ನಮೋ ಮಹಾನುಮಪ್ರಿಯ ವಂದ್ಯ ನಮೋ 18ಮಂಗಳಮಘಚಯಭಂಗ ನಮೋ ಮಂಗಳಂ ಪಾ' ಪಾ' ನಮೋರಂಗಸ್ವಾ'ುದಾಸ ಪೋಷ ನಮೋ ಮಂಗಳಾಂಗ ಶ್ರೀಕೃಷ್ಣ ನಮೋ 19
--------------
ಮಳಿಗೆ ರಂಗಸ್ವಾಮಿದಾಸರು