ಒಟ್ಟು 1528 ಕಡೆಗಳಲ್ಲಿ , 97 ದಾಸರು , 1142 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಫಲವಾಯಿತು ಜನುಮ ಸಫಲವಾಯಿತು ಸಫಲವಾಯಿತೆನ್ನ ಜನುಮ ವಿಭು ಶ್ರೀ ವೈಕುಂಠೇಶನ ಕಂಡೇ ಪ ಚತುರವೇದ ಸ್ಮøತಿ ಪುರಾಣ ತತಿಗಳೊಂದಾಗಿ ನೆರೆದು ತಮ್ಮ ಮತಿಗಳಿಂದ ನುತಿಸಿ ಮಹಿಮೋ ನ್ನತಿಯ ಕಾಣದ ಮಹಿಮನ ಕಂಡೇ 1 ಶಂಖ ಚಕ್ರ ಗದೆ ಪದುಮಾ ಲಂಕೃತವಾದ ಹಾರ ಕೇಯೂರ ಕಟಕ ಮುಕುಟಾ ಲಂಕೃತನಾದ ಹರಿಯ ಕಂಡೇ 2 ಕರವ ಜಘನದ ಮೇಲೆ ಮ ಕರವ ತಾನಿದ್ದಯಿರವೆ ಸಂದೇಹವೇಕೆ ವೈಕುಂಠ ವೆಂದು ಅಟ್ಟೈಸುವಂದದಿ ಹರಿಯ ಕಂಡೇ 3 ಲಕುಮಿಗುಣಗಳೆಣಿಪನೆಂದು ಪಿಡಿದು ಅಕಳಂಕದುಂಗುಟದುಗುರುರೆ ಧ್ಯಾನಿಸಿ ಪ್ರಕಟಿತವಾದ ಗುಣಗಳನಂತ ನಿಕರವ ತೋರಿದ ಹರಿಯ ಕಂಡೇ 4 ತನ್ನ ನಂಬಿದವರನೆಂದು ಮನ್ನಿಪೆನೆಂಬ ಬಿರಿದ ತೋರ್ಪ ಚನ್ನ ಶ್ರೀ ರಂಗನಾಥ ಘನ್ನ ವೈಕುಂಠೇಶನ ಕಂಡೇ 5
--------------
ಬೇಲೂರು ವೈಕುಂಠದಾಸರು
ಸರಸೀರುಹಾಂಬಕಿ ನಿನ್ನ ಪಾದ- ಸರಸಿಜಗಳ ಸ್ಮರಿಸುವೆ ಪೊರೆಯೆನ್ನಪ. ಕಾಳಾಹಿವೇಣಿ ಕಲಕೀರವಾಣಿ ಫಾಲಾಕ್ಷನ ರಾಣಿ ಪರಮಕಲ್ಯಾಣಿ1 ಕಣ್ಮಯಜಾತೆ ಹಿರಣ್ಮಯ ಖ್ಯಾತೆ ಕಣ್ಮುಖ ವರಕರಿ ಷಣ್ಮುಖಮಾತೆ2 ಕಣ್ಮನದಣಿಯೆ ಕೊಂಡಾಡುವೆ ಪಾಡುವೆ ಮನ್ಮನೋರಥದಾಯೆ ಚಿನ್ಮಯೆ ಚೆಲುವೆ3 ಕಂಬುಕಂಧರಿ ನಿನ್ನ ನಂಬಿದೆ ಶಂಕರಿ ಕುಂಭಪಯೋಧರಿ ಶಂಭುಮನೋಹರಿ4 ಸಿರಿ ಕಾತ್ಯಾಯಿನಿ ಗೌರಿ ಭವಾನಿ ಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಸರ್ವ ವಿಪತ್ ಪರಿಹಾರ ಸ್ತುತಿ ಕರ್ಮ ಫಲದಾತನು ಶೂನ್ಯ ಪ ವಾಹನ ಪತನ ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ ಏಕ ಕಾಲದಿ ಸಂಗ ಮರಣ ಸಂಭವಿಸುವುದು ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1 ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ ಮಂದ ಮಾರುತ ಪುಷ್ಪವನದಿ ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು ಹೀಗೆ ಜನ ಸಂಘದಲಿ ನಾನಾ ಸಂಭವವು 2 ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ ಹಿತಕರವೊ ಅಹಿತವೊ ಕರ್ಮಗತಿ ಸಂಭವವು ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3 ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು ಪ್ರವಹಿಸುವ ನದಿ ಹರಡುವ ದಾವಾಗ್ನಿ ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4 ಘೋರ ಭೂಕಂಪದ ಪೀಡೆಗೆ ಯೋಗ್ಯರು ಯಾರು ಯಾರೊ ಒಳ್ಳೆವರೋ ಕೆಟ್ಟವರೊ ಹರಿಯು ಆ ಜನರನ್ನು ಕಂಪನಕೆ ಒಳಮಾಡಿ ಮರಣಾಂಗ ಹೀನತೆಯು ರಕ್ಷಣೆಯು ಈವ 5 ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು ಭಿನ್ನ ಫಲಯೋಗ್ಯರು ಆದ ಕಾರಣದಿ ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6 ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ ಹಾನಿಗೊಳಿಸುವ ಕಂಪನಕೆ ಸಿಲುಕದಂತೆ ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7 ಸಿಂಧು ವಿಜ್ಞಾನಂದ ಹರಿಯೇ ಕರ್ಮಾಧ್ಯಕ್ಷನು ಕರ್ಮಫಲದಾತ ಕರ್ಮ ಕೊಡದು ಫಲ ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8 ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು ಐಹಿಕ ವಿಷಯಜವು ಉದಾನಿಸಿ ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9 ನರಜನ್ಮ ಹೊಂದಿದವ ಹರಿನಾಮ ಸರ್ವದಾ ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು ನರಪಶÀು ಜಡಮತಿ ಮೂಢನು ನುಡಿಯ 10 ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11 ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ ದೇಹ ಬೆಳಸುವ ಪೋಷಿಸುವ ರಕ್ಷಿಸುವನು ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12 ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ ಹರನು ಕೈಲಾಸ ವಾಸನು ಆ ತೀರ್ಥ ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ ಸತಿ ಪಾರ್ವತಿಗೆ ಎರೆದ 13 ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ ಬರೆಯುವ ಪಠಿಸುವ ಕೇಳುವ ಭಕ್ತರನ್ನು ಶ್ರೀರಮಾಯುತ ಹರಿ ಸುರವೃಂದ ಸಹ ಬಂದು ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14 ವರಾಹ ನರಸಿಂಹ ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಸದಾ ಶರಣು ಮಾಂಪಾಹಿ ಸಜ್ಜನರ 15
--------------
ಪ್ರಸನ್ನ ಶ್ರೀನಿವಾಸದಾಸರು
ಸರ್ವದೈವ ಸ್ತುತಿಗಳು 1. ಶ್ರೀ ಗಣಪತಿ ಸ್ತುತಿಗಳು 163 ಗಜಮುಖ ಗಣಪ ಪಾಹಿಮಾಂ ಪ ತ್ರಿಜಗಾಧಿಪ ಸಂಪೂಜಿತ ಅಜವಂದಿತ ಏಕದಂತಂ ಅ.ಪ ಗಿರಿಜಾಸುತ ಸುಖವರ್ಧನ | ಉರಗಾಧಿಪ ಕಟಿಬಂಧನ ವರದಾ ಮೌಕ್ತಿಕ ರದನ [ವರಮಾಷಿಕವಾಹನಾ] 1 ಗಂಗಾಧರ ಮನಮಂದಿರ ಇಂಗಿತೇಷ್ಟದಾತಾರ ಮಂಗಳ ಪಾಶಾಂಕುಶಧರ ಮಾಂಗಿರೀಶ ಪ್ರಿಯಶಂಕರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರ್ವಾಧಾರ ವಿಠಲ | ಶರ್ವ ನೊಡೆಯ ಪ ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ. ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1 ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2 ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3 ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4 ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು ಖುಲ್ಲದೇವರ ಪೂಜೆ ಪ ಮಾರಿ ಮಸಣಿ ಜೆಟ್ಟೆ ಜೆಟ್ಟಿಂಗ ಭೇತಾಳ ವರ ಪೋತರಾಜಾ ಬೊಮ್ಮೆಯನು ಬೀರೆದೇವರು ಹಾದಿಬೀದಿಯ ಬಸವಣ್ಣ ಚಾರುದೈವ ಉಚ್ಚಾರವಲ್ಲದೆ ಹೊಲ್ಲಾ 1 ಯಲ್ಲಮ್ಮಾ ಯಕನಾತಿ ಅಡವಿಯ ಗಿಡದಮ್ಮ ಹಳ್ಳದ ತೀರದ ಹಾಳದೇವಿ ಅಮ್ಮ ಜಲದೇವಿ ಜಕ್ಕಮ್ಮನೆಂತೆನಲು ಸೊಲ್ಲು ಬರಿದೆ ವ್ಯರ್ಥವಲ್ಲದೆ ಫಲವಿಲ್ಲ 2 ಬನದಶಂಕರಿ ಕುಳ್ಳಹಟ್ಟಿಗೆ ಕರಿಮಾತೆ ವನಶಕ್ತಿ ಚವಡಮ್ಮ ಜವನಿಕೆ ಬಿನಗ್ಯ ಮಾಳಾದೇವಿ ಮಾಳಿಗೆ ಹಿರಿಯಕ್ಕ ಘನ ಪಿಶಾಚಿಗಳಿಂದ ಒಂದಿಷ್ಟು ಸುಖವಿಲ್ಲ 3 ಖಂಡೇರಾಯ ಮಲಕಚ್ಚಿನ ಗಡಿಗೆಮ್ಮ ಮುಂಡೆ ಮೂಕಾರುತಿ ಬೆಂಚೆಮ್ಮನು ಭಾಂಡಾರದ ದುರ್ಗಿ ಹಿರಿಯಣ್ಣ ಮೈಲಾರ ಹಿರಚು ಗುಂಪಿನ ಬಳಗ ಕಂಡರೇನಿಲ್ಲ 4 ಸುಣ್ಣದ ಕೆಸರು ಹಾಲು ಕೂಡಿ ಕುಡಿದಂತೆ ಅನ್ಯದೇವತೆಗಳ ಭಜನೆ ಹೊಲ್ಲ ಸಿರಿ ವಿಜಯವಿಠ್ಠಲನ ಯುಗಳಪಾದ ಸನ್ನುತಿಸಿದರೆ ಪರಮ ಪದವಿಯಮ್ಮ 5
--------------
ವಿಜಯದಾಸ
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಗರಕನ್ನಿಕೆಯ ಪ್ರಾಣಮನೋಹರ ಪ ಕಿಂಕರೋದ್ಧಾರಣ ಜಿಂಕೆಸಂಹರಣ ಲಂಕಾಪುರನಾಶನ ಶಂಖ ಚಕ್ರಧಾರಣ ಶಂಕರಾದಿವಂದನ ಪಂಕಜನಯನ 1 ತಾಪತ್ರನಿರ್ಮೂಲ ಪಾಪಮೋಚನ ಶೀಲ ಗೋಪೇರಾನಂದ ಲೀಲ ಗೋಪಾಲಬಾಲ ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ 2 ದೀನಜನಮಂದಾರ ಧ್ಯಾನಿಪರ ಪ್ರಿಯಕರ ಜ್ಞಾನಿಗಳ ಆಧಾರ ವನಮಾಲಧರ ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ ಜಾನಕೀರಮಣ ಶ್ರೀರಾಮಪ್ರಭು ಸುಂದರ 3
--------------
ರಾಮದಾಸರು
ಸಾಂಬಶಿವಾ ಭಕ್ತಿಮಾರ್ಗದಿ ನಡೆಸೋ ಅಂಬುಜಾಕ್ಷನ ದಿವ್ಯನಾಮವ ನುಡಿಸೋ ಪ ನಂಬಿದ ಭಕ್ತನ ಕೊರತೆಯ ಬಿಡಿಸೋ ಶಂಬರಾರಿಯ ಪಿತನ ಚರಣವ ಹಿಡಿಸೋ ಅ.ಪ ಮಾನವರಿಷ್ಟವ ಸಲ್ಲಿಸುವೆಯಂತೆ ದೀನರೊಳನುಕಂಪ ನಿನಗುಂಟಂತೆ ಜ್ಞಾನ ವೈರಾಗ್ಯ ನಿಧಿ ನೀನಂತೆ ದೀನಗೊಲಿದು ವರವೀಯುವೆಯಂತೆ 1 ಕಾಮಿತವೆನ್ನದು ಒಂದೇ ಅಯ್ಯ ಆ ಮಾಂಗಿರಿಪತಿ ಕರುಣೆ ಅದಯ್ಯ ರಾಮತಾರಕನಾಮ ಎನಗಿರಲಯ್ಯ ನೀ ಮನಮಾಡೆ ಕೃತಾರ್ಥ ನಾನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾರ ಪ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1 ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2 ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3
--------------
ಕನಕದಾಸ
ಸಾರಿದ ಭಕ್ತಸಂಸಾರಿ ಮಾಲಿಂಗ ಕ್ಷೀರ ಗ್ರಾಮದಿ ನಿಂತ ಧೀರ ಮಾಲಿಂಗ ಪ ಹರ ಹರ ಮಹಾದೇವ ಶಿವಮಾಲಿಂಗ ವರ ಶಂಭೊ ಗಿರಿವಾಸ ಶಂಕರ ಮಾಲಿಂಗ ಉರಗ ಭೂಷಣ ಗಂಗಾಧರನೆ ಮಾಲಿಂಗ ಪರದೈವ ಶಶಿಮೌಳಿ ಗರುವ ಮಾಲಿಂಗ 1 ಖಂಡಲಪತಿಯೆ ದೋರ್ದಂಡ ಮಾಲಿಂಗ ತಂಡದ ಸುರರೊಳ್ ನಂಜುಂಡ ಮಾಲಿಂಗ ರುಂಡಮಾಲೆಯ ಧರಿಸಿಕೊಂಡ ಮಾಲಿಂಗ ಕೆಂಡಾಕ್ಷತೇಜ ಮಾರ್ತಾಂಡ ಮಾಲಿಂಗ 2 ಮಾರಹರನೆ ಶ್ರುತಿಸಾರ ಮಾಲಿಂಗ ಧೀರ ಬಾಣನ ದ್ವಾರ ಸಾರಿ ಮಾಲಿಂಗ ಮೂರುಪುರ ವೀರ ಸಂಹಾರಿ ಮಾಲಿಂಗ ಘೋರ ಸಂಸಾರ ಭವದೂರ ಮಾಲಿಂಗ 3 ಬ್ರಹ್ಮಾದಿ ಸುರವಂದ್ಯ ಹರ್ಮಿ ಮಾಲಿಂಗ ನಿರ್ಮಲ ರೂಪಕ ಧರ್ಮಿ ಮಾಲಿಂಗ ಕರ್ಮಬಂಧದ ನರವರ್ಮಿ ಮಾಲಿಂಗ ಉರ್ವಿಯೊಳು ನೀ ಬಹಳ ಪೆರ್ಮಿ ಮಾಲಿಂಗ 4 ನೀಲಕಂಠನೆ ನಿಗಮಶೀಲ ಮಾಲಿಂಗ ಪಾಲ ಕರಶೂಲ ಕಪಾಲಿ ಮಾಲಿಂಗ ಕಾಲ ಕಲ್ಪಾಂತಕ ಜಾಲ ಮಾಲಿಂಗ ಲೋಲಾಸ್ಥಿಮಾಲ ಸುರಮೂಲ ಮಾಲಿಂಗ 5 ಪ್ರಣವ ರೂಪಕ ಪಾರ್ವತಿ ಮಾಲಿಂಗ ತ್ರಿಣಯ ಗಣಸೇವಪರ ಧಣುರೆ ಮಾಲಿಂಗ ಮಣಿ ಕರ್ಣಾಭರಣ ಮಾಲಿಂಗ ಅಣುಮಹಾರೂಪ ಗುಣನಿಧಿಯೆ ಮಾಲಿಂಗ 6 ಪಂಥ ಬೇಡೆನ್ನೊಳು ನಿಶ್ಚಿಂತ ಮಾಲಿಂಗ ಸಂತತ ಸಲಹೆನ್ನ ಕಾಂತ ಮಾಲಿಂಗ ಅಂತರಾತ್ಮಕನಾದ ಶಾಂತ ಮಾಲಿಂಗ ಚಿಂತಿತಾರ್ಥವ ತೋರುವಂಥ ಮಾಲಿಂಗ 7 ಬೇಡಿದ ವರಗಳ ನೀಡೊ ಮಾಲಿಂಗ ಮಾಡಿದ ಸೇವೆಯ ನೋಡೊ ಮಾಲಿಂಗ ಜೋಡಾಗಿ ನಿನ್ನೊಳು ಕೂಡೊ ಮಾಲಿಂಗ 8 ಭೂಮಿಗೆ ವರಾಹತಿಮ್ಮಪ್ಪನಂತೆ ಗ್ರಾಮ ಮಂದಿರದೊಳು ನೆಲಸಿಹನಂತೆ ಪ್ರೇಮದಿ ಅದನೆಲ್ಲ ಕಡಿದುಕೊಡುವಂತೆ ಈ ಮಹಾ ಮಾಲಿಂಗ ಸ್ವಾಮಿ ದಯವಂತೆ 9
--------------
ವರಹತಿಮ್ಮಪ್ಪ
ಸಿರಿಕೃಷ್ಣ ವಿಠಲನೆ | ಪೊರೆಯ ಬೇಕಿವಳಾ ಪ ಮರುತಾಂತರಾತ್ಮಕನೆ | ಶರಣ ಸುರಧೇನೂ ಅ.ಪ. ಭವ | ಕರಿಗೆ ಕೇಸರಿಯೇ |ಮರುತ ಮತ ತತ್ವಗಳ | ಅರಿವು ಕೊಡುತಲಿ ಇವಳಕರುಣನೋಟದಿ ನೋಡೊ | ಸರ್ವದೇವೇಡ್ಯಾ 1 ಕಂಸಾರಿ ತವದಾಸ್ಯ | ಶಂಸನಾರ್ಹತೆಯರಿತುಸಂಶಯವುರಹಿತೆಪದ | ಪಾಂಸು ಬಯಸುವಳೋ |ಹಂಸವಹ ವಂದ್ಯ ವೀ | ಪಾಂಸಗನೆ ಸಿರಿಲೋಲವಂಶವೃದ್ಧಭಿಲಾಷೆ | ಹಂಸಪೂರೈಸೋ 2 ಕಾಯ ಬೇಕೋ 3 ಪವನ ವಂದಿತ ದೇವಾ | ಭವವನಧಿ ನವಪೋತತವನಾಮ ಸಂಸ್ಕøತಿಯ | ಪವನ ಮೂರರಲೀ |ಅವಶದಲಿ ಕೀರ್ತಿಸುವ | ದಿವ್ಯಭಕ್ತಿಯ ಜ್ಞಾನಹವಣಿಸುತ ಶ್ರೀಹರಿಯೆ | ತಾವಕಳ ಪೊರೆಯೇ 4 ಕರ | ಪುಟವ ಜೋಡಿಸಿ ಬೇಡ್ವೆಧಿಟಗುರೂ ಗೋವಿಂದ | ವಿಠಲ ಪೊರೆ ಇವಳಾ 5
--------------
ಗುರುಗೋವಿಂದವಿಠಲರು
ಸುಂದರ ಮೂರುತಿ ನಂದ ಕಂದ ಶ್ರೀ ಕೃಷ್ಣನ ಕಂಡೆ ಇಂದಿನ ದಿನದೊಳು ಧನ್ಯನಾಗಿ ಅಮೃತಾನ್ನವನುಂಡೆ ಪ ವಿವಿಧ ವಜ್ರವೈಡೂರ್ಯ ಗೋಮೇಧಿಕ ಖಚಿತ ಸುವರ್ಣ ಕಿರೀಟ ಸುವಿಲ ಸತ್ತಿಲದಿಂದೊಪ್ಪುವ ಮಣಿಕ್ವತ ಗೊಂಚಲೆಸೆವ ಲಲಾಟ ಕಪೋಲಗಳ್ಮಾಟ ಕಿರಣದ ನೋಡಾ 1 ಚತುರಸುಂದರ ಭುಜಕೀರ್ತಿ ಶಂಪಾಪರಿಯ ವೈಜಯಂತಿ ಘನತರ ಪೊಳೆವ ಸುವ್ರತ ಮೌಕ್ತಿಕದೇಕಾವಳಿ ಹಾರಪದಗಳ ಪಂಕ್ತೀ ಕನಕ ಕಂಕಣಕರದುಂಗುರ ಶೋಭಿತದರ ಚಕ್ರಗದಾ ಪದ್ಮವರ್ತಿ 2 ಮೇಖಲಾಲಂಕಾರಾ ಕಟ್ಟಿನ ಸಿಂಗಾರಾ ಪಾದದೊಡಪುಗಳು ಪೂರಾ ನರಸಿಂಹವಿಠಲನರಸಿ ಬಣ್ಣಿಪುದು ಶಿರಿ ಬಮ್ಮುಸುರರಿಗೆ ಘೋರಾ 3
--------------
ನರಸಿಂಹವಿಠಲರು
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕ ನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ. ಗೌರೀಕುಮಾರ ಪಾರಾವಾರಗಭೀರ ಮಾರನವತಾರ ತಾರಕಾರಿ ಶ್ರೀಕರ1 ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜ ಕುಂಕುಮಾರುಣವರ್ಣ ಪೂರ್ಣಾಲಂಕೃತ ವಿರಜ2 ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರ ಕರ್ತ ಲಕ್ಷ್ಮೀನಾರಾಯಣಭೃತ್ಯ ಸುಂದರ3
--------------
ತುಪಾಕಿ ವೆಂಕಟರಮಣಾಚಾರ್ಯ
ಸುರನರವಂದಿತ ಪಾಹಿ ಮುಕುಂದ ಶರಣರ ಪಾಲಕ ತ್ರಾಹಿ ಗೋವಿಂದ ಪ ಅಶನವಸನ ನೀಡಿ ಪಾಹಿ ಮುಕುಂದ ಅಜಹರ ಪೂಜಿತ ಪಾಹಿ ಮುಕುಂದ ಭಜಿಸುವೆ ಚರಣವ ತ್ರಾಹಿ ಗೋವಿಂದ 1 ಶಂಖ ಚಕ್ರಾಂಕಿತ ಪಾಹಿ ಮುಕುಂದ ಪಂಕಜ ಲೋಚನ ತ್ರಾಹಿ ಗೋವಿಂದ 2 ಇಂದಿರ ರಮಣನೇ ಪಾಹಿ ಮುಕುಂದ ಚಂದದಿ ದಾಸನ ತ್ರಾಹಿ ಗೋವಿಂದ 3 ಪನ್ನಗಶಯನನೇ ಪಾಹಿ ಮುಕುಂದ ಚನ್ನಕೇಶವ ಸ್ವಾಮಿ ತ್ರಾಹಿ ಗೋವಿಂದ 4
--------------
ಕರ್ಕಿ ಕೇಶವದಾಸ