ಒಟ್ಟು 1301 ಕಡೆಗಳಲ್ಲಿ , 111 ದಾಸರು , 1020 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಾಮ ಜಪಕಿನ್ನು ಸರಿಯಾದುದಿಲ್ಲ ಸರಸಿಜಾಸನಿದರ ಸಾರವನು ಬಲ್ಲ ಪ. ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ ನಡುನೀರೊಳಗೆ ಮುಳುಗಲುಡುಪವಹದು ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1 ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ ಮಾರಿ ಮೊದಲಾದಭಯಕಾರಿಗಳನು ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2 ಆವ ಕಾಲಕು ಸುಖವನೀವ ಶೇಷ ಗಿರೀಶ ಶ್ರೀವರನ ಸರ್ವತ್ರ ಸ್ಮರಿಸಿರೆಂದು ದೇವಋಷಿಯೆಂದುದನು ದಿಟವೆನುತ ನಂಬುವರ ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿಯ ಭಜನೆ ಮಾಡೋ ನಿರಂತರ ಪ. ಪರಗತಿಗಿದು ನಿರ್ಧಾರ ಅ.ಪ. ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ 1 ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ 2 ಸಾರವೊ ಬಹುಸಂಸಾರ ವಿಮೋಚಕ ಸೇರೊ ಶ್ರೀಹಯವದನನ್ನ 3 ತತ್ವವಿವೇಚನೆ
--------------
ವಾದಿರಾಜ
ಹರಿಯೆ ಪೊರೆಯೊ ಪರತರ ಮರೆಯ ಹೊಕ್ಕೆ ಕರುಣಾಕರ ಶ್ರೀಕರ ಪ ಸರುವತಾಪದಿಂದ ಗೆಲಿಸಿ ಸರುವವಿಷಯದಿದ ಉಳಿಸಿ ಪರಮ ನಿಮ್ಮ ಕರುಣ ಬರೆಸಿ ಕರವ ಪಿಡಿದು 1 ಘೋರ ಭವಕಡಲವ ಘೋರ ಬಟ್ಟು ಈಸಿಸಭವ ಸೈರಿಸದೆ ನಿಮ್ಮ ಪಾದವ ಸೇರಿದೆ ಸಲಹು ಪರಮಕರುಣ ಸಿರಿಯರಮಣ2 ಮಾಯಮೋಹಗಳ ಬಿಡಿಸಿ ಕಾಯಕರ್ಮಗಳನು ಕೆಡಿಸಿ ತೋಯಜಾಕ್ಷೆನ್ನಯ್ಯ ರಾಮ ಸಿಂಧು 3
--------------
ರಾಮದಾಸರು
ಹರಿವಾಯುಗಳು ಮೂರಕ್ಕರದ ದೇವ ಮೂರು ವಸ್ತುವ ಬೆರಸಿ ಮೂರು ಮೂರಾಗಿಸೆಯೆ ಪಾಲಿಸುವ ನಮ್ಮ ಎರಡು ವಸ್ತುವು ಸೇರಿ ದೇಹಕ್ಕೆ ಚಲನೆಯದು ಹರಿವಾಯುಗಳ ಒಲುಮೆ ದೇಹ ರಕ್ಷಕವು4 ಅವ್ಯಾಕೃತಾಕಾಶ ರೂಪದಲಿ ತಾನಿಹನು ವಿಶ್ವಂಭರಾತ್ಮಕನು ದೇವ ನಿಜದಿಂದ ಸೃಷ್ಟಿಗವನೇ ಮೂಲ ವಾಸುದೇವಾತ್ಮಕನು ಮಧ್ವಹೃದಯನಿವಾಸಿ ಸರ್ವಮೂಲನವ 5 ಪೃಥಿವಿಯಪ್ ತೇಜಸ್ಸು ಮೂರು ಭೂತಾಣುಗಳು ತುಂಬಿಯಾಗಸದಲ್ಲಿ ವ್ಯಾಕೃತವದಹುದು ತುಂಬಿ ವಾಯುವಿನಣುಗಳ್ ಒಂದೆಡೆಯೆ ತಾನಹುದು ವ್ಯಾಕೃತಾಕಾಶ 6 ಆಗಸದಿ ವಾಯುವಿನ ಪರಮಾಣು ಒತ್ತಡವೆ ದೃಶ್ಯವಾಯುವು ತಾನೆ ಹರಿವುದಾಗಸದಿ ದೃಶ್ಯವಾಯುವಿನ ಪರಮಾಣುವೊತ್ತಡದಿ ನಿಜ ತೇಜವುದಯಿಸುವುದದರಲ್ಲಿ ಮೂರಿಹವು 7 ತೇಜದಿಂದಲೆ ನೀರು ಜಗಕೆಯಾಧಾರವದು ನೀರಿನಿಂದಲೆ ಭೂಮಿ ಉದಯಿಸುವದದರಿಂ ಪಂಚಭೂತಂಗಳಿವು ಭೂಮಿಯಲಿ ತೋರುವವು ಪಂಚಭೂತಾತ್ಮದ ಪ್ರಕೃತಿಯಿದು ಸತ್ಯ 8 ಇವುಗಳಿಗೆ ಒಡತಿಯಾ ಪ್ರಕೃತಿದೇವಿಯು ಸತ್ಯ ಪ್ರಕೃತಿಯೆದೆಯಲ್ಲಿರುವ ದೇವರೂ ಸತ್ಯ ಪ್ರಕೃತಿ ಪುರುಷರ ಲೀಲೆ ಮಧ್ವಮತದಾ ತಿರುಳು ಮಧ್ವ ಸದ್ಗ್ರಂಥಗಳು ಸರ್ವಮೂಲಗಳು 9 ಭೂತಕೃತ್ತೂ ಅವನೆ ಭೂತಪಾಲಕನವನೆ ಭೂತಭಾವದಲಿದ್ದು ಪ್ರೇರಕನು ಅವನೆ ಆತ್ಮಾಂತರಾತ್ಮವೆಂದೆರಡು ರೂಪಗಳವಗೆ ಹೃದಯದಾಕಾಶದಲಿ ವಾಸವಾಗಿಹನು 10 ಪಂಚಭೂತಗಳು ಪಂಚೇಂದ್ರಿಯಗಳು ಪಂಚ ಕರ್ಮೇಂದ್ರಿಯಗಳ ರಚಿಸಿ ಹರಿಯು ಪಂಚಾತ್ಮಕನು ದೇವ ಪಂಚವಾಯುಗಳಿಂದ ಪಂಚತನ್ಮಾತ್ರಗಳ ಜ್ಞಾನವೊದಗಿಪನು11 ಸುಖ ರತಿ ಪ್ರೇರಕನು ತಾನಾಗಿ ಸಿರಿವರನು ಶಾರೀರ ಪುರದಲ್ಲಿ ನೆಲೆಯಾಗಿ ಇಹನು ಬೆಳಗುತ್ತ ದೇಹವನು ಬೆಳಗಿಸುವ ದೇವತೆಗ ಳವನ ಬಳಿಯಿದ್ದು ಸೇವೆಯ ಗೈಯುತಿಹರು 12 ವಿಶ್ವ ದರ್ಶನಕಾಗಿ ವಿಶ್ವಜನರೊಳು ಕಣ್ಣಿನಲ್ಲಿ ನೆಲೆನಿಂತು ವಿಶ್ವಸಾಕ್ಷಿಯು ಸೂರ್ಯನಲ್ಲಿಯೂ ತಾನಿದ್ದು ವಿಶ್ವವನು ಬೆಳಗಿಸುತ ಜ್ಞಾನವೊದಗಿಪನು 13 ಸೂರ್ಯನೊಂದೆಡೆಯಿದ್ದು ತಾನ್ ಬೆಳಗಿ ಲೋಕವನು ತನ್ನ ಕಿರಣಂಗಳಿಂ ಬೆಳಗಿಸುವ ತೆರದಿ ಕಣ್ಣು ಮೊದಲಾದಿಂದ್ರಿಯಗಳಲಿ ತಾನಿದ್ದು ಅವುಗಳನು ಬೆಳಗಿಸುತ ರಕ್ಷಿಪನು ನಮ್ಮ14 ತೈಜಸದ ದೇವನವ ತೇಜದಾರೂಪದಲಿ ಕಂಠಗತನಾಗಿದ್ದು ದೇಹದಲಿ ಬೆಳಗಿ ಹುಲಿ ಕರಡಿ ಮೊದಲಾದ ಜಂತುಗಳ ಸೃಷ್ಟಿಸುತ ಸ್ವಪ್ನಲೋಕವನು ಮಾನಸಕೆ ತೋರಿಸುವ 15 ಪ್ರಾಜ್ಞರೂಪದ ದೇವನಪ್ಪಿ ಜೀವಾತ್ಮನನು ಮಾಯೆಯಾ ಮುಸುಕಿನಿಂದಜ್ಞಾನಬರಿಸಿ ಜೀವನಿಗೆ ತೋರದುದರಿಂದ ಪ್ರಾಜ್ಞನದಾಗಿ ಜಗಕೆ ತನ್ನಯ ಮಾಯೆಯನು ತೋರಿಸುವನು 16 ನಾಲ್ಕನೆಯ ರೂಪವದು ತುರ್ಯ ನಾಮದಲಿಹುದು ಮುಕ್ತರಿಗೆ ಮಾತ್ರವೇ ತೋರುವುದು ಪೇಳ್ವೆ ಜಾಗರಾದಿಯವಸ್ಥೆಗಳ ನಾಲ್ಕು ಪೇಳಿದನು ಮಾಯಾವಿ ಪರಮಾತ್ಮನದು ಲೀಲೆಗಳಿವು 17
--------------
ನಿಡಂಬೂರು ರಾಮದಾಸ
ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ. ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ 1 ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ ಭಾರ ಪೊತ್ತ ಥರವು 2 ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1 ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2 ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3 ಸತಿ ರೂಪಸ್ಥಳಾದರಿನ್ನೇನಿನ್ನೇನು ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4 ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5
--------------
ರಾಮದಾಸರು
ಹಾರುವರಿಗೆ ಭೂಮಿಯಾ ನೀಡಿದೆನೆಂದು | ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ 1 ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ 2 ಶರಣ ವಸರಕ ಎಡತಾಕಲಾರೆನೆಂದು ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು
ಹಿಂಡು ಕರ್ಮಗಳ್ಯಾಕೆ | ಬಂಡಿ ದೈವಗಳ್ಯಾಕೆಪಂಡರಿ ದೊರೆಯು ಇರಲು ಪ ಪುಂಡರೀಕಾಕ್ಷ ಪದಬಂಡುಣಿಯವೋಲ್ ತುತಿಸಲಿಲ್ಲಾ | ಬಲ್ಲಾ 1 ಕಂಬು ಸಾರಥಿ ಕೃಷ್ಣಚರಿತೆಗಳ ಪೊಗಳುತಿರಲೋ | ಕೇಳೋ 2 ಇಂದು ಭಾಗದಿ ಭಕ್ತಸಂದಣೀಯಲಿ ಸೇರುತಾ |ತಂದೆ ತಾಯಿಯ ಸೇವೆ | ಮುಂದು ಮಾಡಿದಗೊಲಿದುನಿಂದು ಇಟ್ಟಿಗೆ ಮೆಟ್ಟಿಹಾ |ನಂದ ನಂದನ ಗುರೂ ಗೋ | ವಿಂದ ವಿಠಲನವಂದಿಸೆಲೊ ಮುದದಿ ಸತತಾ | ವಿತತಾ 3
--------------
ಗುರುಗೋವಿಂದವಿಠಲರು
ಹಿರಿಯ ಅತ್ತಿಗೆಯರ ಗರವು ಕಂಡೆವೆಮೇರುಗಿರಿಗಿಂತ ಕೋಟಿ ಅಧಿಕವೆ ಸಖಿಯೆನಾ ಹ್ಯಾಂಗೆಸುಮ್ಮನಿರಲಿ ಪ. ಓಡಿ ಬಂದವಳು ಒಳಗೆ ಸೇರಿಮಾತಾಡಳು ನೋಡಳು ನಮ್ಮ ಅಣ್ಣನ ಮಡದಿಯುನೋಡಳು ನಮ್ಮ ಅಣ್ಣನು ಮಡದಿಗೆಮಾಡಿದ ಮೋಹ ತಲೆಗೇರಿ1 ಹೆಣ್ಣು ರುಕ್ಮಿಣಿ ತಮ್ಮ ಅಣ್ಣನವಂಚಿಸಿಓಡಿ ಬಂದು ಕಣ್ಣಿಲೆನೋಡಿ ಕರೆಯಳುಕಣ್ಣಿಲೆ ನೋಡಿ ಕರೆಯಳು ಇವಳು ನಮ್ಮಅಣ್ಣನ ಬಲವ ಹಿಡಕೊಂಡು2 ಇಂದು ರುಕ್ಮಿಣಿ ತಿಳಿದು ಬಂದಳು ಭಾಳೆ ವಿನಯದಿಬಂದಳು ಭಾಳೆ ವಿನಯದಿ ದ್ರೌಪತಿಯಆಲಿಂಗನವÀ ಮಾಡಿ ಕರೆದಳು 3 ಬಾರವ್ವ ಸುಭದ್ರೆ ಏರವ್ವ ಸೋಪಾನ ತೋರವ್ವ ನಿನ್ನ ವಚನವತೋರವ್ವ ನಿನ್ನ ವಚನವ ಎನುತಲಿ ದ್ವಾರದಿ ಕೈಯ್ಯ ಹಿಡಕೊಂಡು4 ಬಂದ ಬೀಗಿತ್ತಿಯರು ಚಂದದಿಂದ ಇದುರುಗೊಂಡು ಮಂದಹಾಸದಲೆ ನುಡಿಸುತಮಂದ ಹಾಸದಲೆ ನುಡಿಸುತ ರುಕ್ಮಿಣಿ ಬಂದವರು ಯಾರು ಮನೆಯೊಳು 5 ಸೊಂಡಿಲನಗರದ ಪಾಂಡು ಭೂಪನ ಸೊಸೆಗಂಡುಗಲಿ ಪಾರ್ಥನ ಆರ್ಧಾಂಗಿಗಂಡುಗಲಿ ಪಾರ್ಥನ ಆರ್ಧಾಂಗಿ ಸುಭದ್ರಾಮುಯ್ಯವ ಕೈಕೊಂಡು ಬ್ಯಾಗ ತಿರುಗಿಸು 6 ಹರದಿ ರುಕ್ಮಿಣಿ ದೇವಿ ಸೆರಗ ಹಿಡಿದು ದ್ರೌಪದಿಯದೊರೆಗಳ ಹೆಸರು ನಮಗ್ಹೇಳೆ ದೊರೆಗಳ ಹೆಸರು ನಮಗ್ಹೇಳೆ ರಾಮೇಶನ ಪರಮಭಕ್ತರಿಗೆ ನುಡಿದಳು 7
--------------
ಗಲಗಲಿಅವ್ವನವರು
ಹಿರಿಯ ಮಗಳಿಂದ ಶ್ರೀಕರನಪದ ಸೇರೊ ಬರಿದೆ ಯೋಚನೆಯಿಂದ ಬೇಸರಗೊಳದಿರು ಪ. ಕಾಮಕ್ರೋಧಗಳನ್ನು ಭೌಮಿಯಲಿ ದೂಡುವಳು ವ್ಯಾಮೋಹ ಮದಲೋಭ ಮತ್ಸರಗಳಿಂ ಸೀಮೆಯಿಂಧೊರಗ್ಹಾಕಿ ಡಂಭಹಿಂಸಾನೃತದ ನಾಮವಡಗಿಸಿ ಪೂರ್ಣ ಕಾಮನನು ತೊರೆವ 1 ಭಾವ ಶುದ್ಧಿ ವಿವೇಕ ಬಾಲಕರನೆತ್ತುವಳು ಪಾವನತ್ವವ ಮಾಡಿ ತೂಗುತಿಹಳು ದಾವ ಕುಲಕು ದಶೇಂದ್ರಿಯ ದುಷ್ಟ ತುರಗಗಳ ಭಾವ ಕೆಡದಂದದಲಿ ಕಾವ ಕಮಲಾನನದ 2 ತನುವೆಂಬ ಮನೆಯ ಶುದ್ಧಿಯ ಗೈದು ಸುಜ್ಞಾನ ವೆನಿಸುತಿಹ ದೀವಿಗೆಯ ತೋರುತಿಹಳು ಮೂರ್ತಿ ಮನದೊಳಗೆ ನೆಲೆತೋರ್ಪ ವಿನಯ ವೆಂಕಟಪತಿಯ ನೆನವೆನಿಪ ಹರಿಭಕ್ತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹುಟ್ಟಿ ಹುಟ್ಟಿ ಹೊಂದಲಾರೆನಯ್ಯ ಕೃಷ್ಣನೆ ುೀಕಷ್ಟವನ್ನು ಬಿಡಿಸಿ ಕಾಯಬೇಕು ಕೃಷ್ಣನೆ ಪಇಷ್ಟು ದಿವಸ ನಿನ್ನನರಿಯದಿದ್ದೆ ಕೃಷ್ಣನೆ ನೀನುದ್ಟೃುಟ್ಟು ಹುಟ್ಟದಂತೆ ಮಾಡು ಕೃಷ್ಣನೆಅ.ಪಗರ್ಭದೊಳು ನವಮಾಸ ಸಿಕ್ಕಿ ಕೃಷ್ಣನೆ ನೊಂದೆನರ್ಭಕತ್ವದಲ್ಲಿ ಮುಗ್ಧನಾದೆ ಕೃಷ್ಣನೆನಿರ್ಬಂಧವಾುತು ವಿದ್ಯದಲ್ಲಿ ಕೃಷ್ಣನೆ ಮತ್ತೆನಿರ್ಭರದ ಪ್ರಾಯದಲ್ಲಿ ಬೆರೆತೆ ಕೃಷ್ಣನೆ 1ಮದಗಳೆಂಟರಿಂದ ಮೈಯ ಮರೆತೆ ಕೃಷ್ಣನೆ ಬೇಗಹುದುಗಿ ಕ್ಲೇಶವೈದರಲ್ಲಿ ಬಿದ್ದೆ ಕೃಷ್ಣನೆವೊದಗಿ ಪಾಶವೆಂಟರಿಂದ ಬಿಗಿದೆ ಕೃಷ್ಣನೆ ಹಮ್ಮುಇದಕೆ ಮೂಲವಾುತು ಕರ್ಮದಿಂದ ಕೃಷ್ಣನೆ 2ಅರಿಗಳರುವರಿಂದ ಕೊರಗುತಿಹೆನು ಕೃಷ್ಣನೆ ಮುಂದನರಿಯದವರ ಸಂಗವನ್ನು ಮಾಡಿ ಕೃಷ್ಣನೆಉರುಳಿಬಿದ್ದೆ ವಿಷಯಕೂಪದಲ್ಲಿ ಕೃಷ್ಣನೆ ುದನುಪರಿವ ಶಕ್ತಿಯನ್ನು ಕಾಣೆನಯ್ಯ ಕೃಷ್ಣನೆ 3ಮಾಯಾಕಾರ್ಯ ದೇಹವೆನ್ನದೆಂದು ಕೃಷ್ಣನೆ ಅದುಹೇಯವೆಂದು ಕಾಣದಾದೆನಯ್ಯ ಕೃಷ್ಣನೆ ನೋಯದಂತೆ ಪೋಷಣೆಯ ಮಾಡಿ ಕೃಷ್ಣನೆ ುೀಗ ನೋಯಲಾಗಿ ಭಯವು ಜನಿಸಿತಯ್ಯ ಕೃಷ್ಣನೆ 4ಹರಿವ ನದಿಯ ನಡುವೆ ಪರ್ಣ ಸಿಕ್ಕಿ ಕೃಷ್ಣನೆ ಸುಳಿಯಬೆರಸಿ ತಡಿಯ ತಾನು ಸೇರದಂತೆ ಕೃಷ್ಣನೆಕುರುಡ ಕೂಪವರಿಯದುರುಳುವಂತೆ ಕೃಷ್ಣನೆ ಕಾಲಶರಧಿಯಲ್ಲಿ ಮುಳುಗಿ ನೆಲೆಯ ಕಾಣೆ ಕೃಷ್ಣನೆ 5ಇರುಹೆ ಕಡೆಯು ಬ್ರಹ್ಮನಾದಿಯಾಗಿ ಕೃಷ್ಣನೆ ಲೋಕಮರುಳುಗೊಂಡು ಮಾಯೆುಂದ ಮರುಗಿ ಕೃಷ್ಣನೆ ಕೊರಗುತಿದೆ; ಮಾಯೆಯನ್ನು ದಾಟಿ ಕೃಷ್ಣನೆ ಬೇಗಪರಮನೊಳು ಬೆರೆಸಿ ಕೊರಗ ಬಿಡಿಸು ಕೃಷ್ಣನೆ 6ರಜ್ಜು ಸರ್ಪನಾಗಿ ತೋರಿ ಬೆದರೆ ಕೃಷ್ಣನೆ ಅದರಬೆಜ್ಜರವ ಪರಿವ ಮಂತ್ರವುಂಟೆ ಕೃಷ್ಣನೆರಜ್ಜುವೆಂದು ತಿಳಿವುದೊಂದೆ ಮಂತ್ರ ಕೃಷ್ಣನೆ ಹಾಗೆರಜ್ಜು ಸ್ಥಾನ ನಿನ್ನ ನಿಜವ ತೋರು ಕೃಷ್ಣನೆ 7ಕರ್ಮವೆ ಜನ್ಮಕ್ಕೆ ಹೇತುವೆನಲು ಕೃಷ್ಣನೆ ಅಂದುಬ್ರಹ್ಮವತ್ಸಪಾಲರಪಹರಿಸೆ ಕೃಷ್ಣನೆಕರ್ಮವಿತ್ತೆ ಬದುಲ ನಿರ್ಮಿಸಲು ಕೃಷ್ಣನೆ ಹಾಗೆಕರ್ಮವೆನ್ನದೀಗಲೆನ್ನ ಸಲಹು ಕೃಷ್ಣನೆ 8ದುರಿತ ದುಃಖದಿಂದ ನೋವ ಜನರ ಕೃಷ್ಣನೆ ಅವರದುರಿತಗಳ ನೂಕಿ ನಿನ್ನೊಳಿರಿಸು ಕೃಷ್ಣನೆತಿರುಪತೀಶ ದೇವ ವೆಂಕಟೇಶ ಕೃಷ್ಣನೆ ಮಾಯಾತೆರೆಯ ತೆಗೆದು ನಿನ್ನ ನಿಜವ ತೋರು ಕೃಷ್ಣನೆ 9ಓಂ ಸತ್ಯಸಂಕಲ್ಪಾಯ ನಮಃ
--------------
ತಿಮ್ಮಪ್ಪದಾಸರು
ಹೂವ ತರುವರ ಮನೆಗೆ ಹುಲ್ಲ ತರುವೆ ಪ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಅ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ 1 ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು 2 ಎಷ್ಟು ಮಾಡಲು ನಿನ್ನ ಬಂಟನೋ - ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ - ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ 3
--------------
ಕನಕದಾಸ