ಒಟ್ಟು 1924 ಕಡೆಗಳಲ್ಲಿ , 108 ದಾಸರು , 1460 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕುತಿಯಲಿ ಭಜಿಸಿ ಹರಿಯ ಸುಖಿಸಬಾರದೇ ಪ ಪ್ರಕಟದಿ ಸಜ್ಜನ ನಿಕಟದಿ ತಾಮಸ| ಶಕಟ ಮುರಿದ ಸುರ ಮುಕುಟ ಮಣಿಯಾ ಅ.ಪ ತರಣೀಯಾ ಕೋಟಿ ಪ್ರಕಾಶದಿ ಧರಣಿಯಾ ರಮಣನ ನಾಮ| ಕರಿ ಕಿರಿಯನೆ ಶಿರಿ| ಗರುಡಗರಿಯದೇ ಭರದಿ ತಾ ಬರುತದೆ ಶರಣರಾ ಹೊರೆದ 1 ಮರುವಿನ ಕತ್ತಲೆ ನೂಕುವ ಚರಣವ ಅರವಿನ ದೀಪವ ಹಚ್ಚಿ| ಕುರುವಿನಾ ಚಿನ್ಮಯ ನೊಡಲು ಗುರುವಿನಾ| ಚರಣವ ಪೂಜಿಸಿ ಕರುಣವ ಸಾಧಿಸಿ ತರುಣೋಪಾಯದ ಚರಣವ ಬಲಿಯೋ 2 ಮನವಧಾನದಿ ನಿಲಿಸಿ ತನುವನಾ ಸೇವೆಗರ್ಪಿಸಿ| ಘನವನು ಮಾಡುತಾ ಸುಜನರಾ ಅನುವನು ಕನಸಿಲೇ| ಘನ ಗುರು ಮಹಿಪತಿ-ಜನ ಪ್ರಭುವಿನ ಅನುದಿನದಲಿ ಪಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತೋದ್ಧಾರ ಪರಿಭವದ್ವೈದ್ಯ ನಿಖಿಲಬ್ರಹ್ಮಾಂಡ ಸುಸೂತ್ರ ಸಿರಿಬಾಧ್ಯ ನಿಖಿಲವ್ಯಾಪಕ ನಿಖಿಲರಕ್ಷ ಭಕುತರಾತ್ಮಕ ಭಕುತಪಕ್ಷ ಪ್ರಕಟರಕ್ಕಸಕುಲ ನಿರ್ಮೂಲನೆ ಮುಕುಟಮಾನಸ ಮನದಿ ಭಜಿಪರ ಮುಕುತಿದಾಯಕ ಮಣಿವೆನೈ ಮಹ ಮುಕುತಿಸಂಪದ ಕರುಣಿಸಭವ ಪ ಕಲ್ಪನೆಯಿಂದೊಂದೆತ್ರಯವೆನಿಸಿ ಕಲ್ಪ ಕಲಿಸಿ ಕಲ್ಪನೆಯಿಂದ ನಾಲ್ಕುಘೋಷ ರಚಿಸಿ ಕಲ್ಪನಿಲ್ಲದೆ ಕಲ್ಪಕಲ್ಪದರರ್ಹೊಗಳಿಸಿ ಕಲ್ಪಿತದಿ ನೆಲಸಿ ಕಲ್ಪಿತದಿ ಸಂಕಲ್ಪ ತೋರಿಸಿ ಕಲ್ಪಿತದಿಂ ಸಂಕಲ್ಪ ಮುಳುಗಿಸಿ ಕಲ್ಪ ಕಲ್ಪಾಂತರದಿ ಉದಿಸಿ ಕಲ್ಪತಕೆ ನೀ ಬೇರೆಯೆನಿಸಿ ಕಲ್ಪನದೊಳು ಕಲ್ಪ ಕೂಡಿಸಿ ಕಲ್ಪನಕೆ ಮಹಪ್ರಳಯವೆನಿಸಿ ಕಲ್ಪನೆಯನು ಮತ್ತು ತಿರುಗಿಸಿ ಕಲ್ಪಿಸಿದಿ ಪುನ:ಸಫಲವೆನಿಸಿ ಕಲ್ಪನೆಯನು ಪೊಗಳಲಿನ್ನಾವ ಕಲ್ಪನಕೆ ತುಸು ಶಕ್ಯವಲ್ಲವು ಕಲ್ಪ ಕಲ್ಪಾಂತರದಿ ಎನ್ನನು ಕಲ್ಪಿಸದಿರು ಕಲ್ಪತರುವೆ 1 ಕಲ್ಪಿಸಿದೆ ಕೋಟಿ ತ್ರಿದಶತ್ರಯೆನಿಸಿ ಕಲ್ಪ ಕಲ್ಪಕೆ ಕಲ್ಪಿತೀಯುವ ಮಂತ್ರ ಕಲ್ಪಿಸಿ ಕಲ್ಪಿಸಿದಿಯೊ ಕಲ್ಪ ಕಲ್ಪದಿ ಐದು ಮೇಲೆನಿಸಿ ಕಲ್ಪಸಾರೆನಿಸಿ ಕಲ್ಪನೆ ಮಹತಾರಕೆನಿಸಿ ಕಲ್ಪನೆ ಘನಗಾಯತ್ರೆನಿಸಿ ಕಲ್ಪನೆಯಲಿ ಸ್ಥೂಲವೆನಿಸಿ ಕಲ್ಪನೆ ಬಹುಸೂಕ್ಷ್ಮವೆನಿಸಿ ಕಲ್ಪನೆಯ ಮಹಕಾರಣೆನಿಸಿ ಕಲ್ಪನದಿ ಈ ಕಲ್ಪವಿರಿಸಿ ಕಲ್ಪನಕೆ ನೀನೆ ಸೂತ್ರನೆನಿಸಿ ಕಲ್ಪನಕೆ ನೀನೆ ಚೈತನ್ಯನೆನಿಸಿ ಕಲ್ಪ ಕುಣಿಸುವಿ ಕಲ್ಪನಿಲ್ಲದ ಕಲ್ಪದ ನೆಲೆಬುಡ ನೀನೆನ್ನಯ ಕಲ್ಪನೆಯೊಳುದಯನಾಗಿ ಕಲ್ಪನೆಯ ಕಡೆಗಾಣಿಸಭವ 2 ಕಲ್ಪ ಕಲ್ಪಕೆ ಆಚೆ ನೀನೆನಿಸಿ ಕಲ್ಪ ನಿರ್ಮಿಸಿ ಕಲ್ಪ ಕಲ್ಪದಿ ನೀನೆ ಆವರಿಸಿ ಕಲ್ಪ ನಡೆಸಿ ಕಲ್ಪ ಕಲ್ಪದಮೂಲ ನೀನೆನಿಸಿ ಕಲ್ಪದಿಂ ನುಡಿಸಿ ಕಲ್ಪದಲಿ ಮಿಥ್ಯಕಲ್ಪ ಪುಟ್ಟಿಸಿ ಕಲ್ಪದಲಿ ನಿಜಕಲ್ಪ ಸೃಷ್ಟಿಸಿ ಕಲ್ಪದಿಂ ತ್ರಿಕಲ್ಪ ರಕ್ಷಿಸಿ ಕಲ್ಪದಿಂ ಕಲ್ಪಕ್ಕೆ ಶಿಕ್ಷಿಸಿ ಕಲ್ಪವೇ ಮಹ ಮಾಯವೆನಿಸಿ ಕಲ್ಪದಿಂದಲೇ ಅದನು ಗೆಲಿಸಿ ಕಲ್ಪದಿಂ ಕಲ್ಪವನು ಬೆಳಗಿಸಿ ಕಲ್ಪದಿಂ ಕಲ್ಪವನು ತೊಲಗಿಸಿ ಕಲ್ಪನರಿಯುವ ಕಲ್ಪಕೆ ಮಹ ಕಲ್ಪನಿದು ಬಹು ಸುಲಭವೆನಿಸಿ ಕಲ್ಪಿತದಿಂ ರಕ್ಷಿಸುವ ಮಮ ಕಲ್ಪನಿಲ್ಲದವರ ಶ್ರೀರಾಮ 3
--------------
ರಾಮದಾಸರು
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಭಕ್ತರುದ್ಧಾರಕ ದಾಸರಾಯರಿವರ್ಯಾರೇ ಪೇಳಕ್ಕ ಪ. ಮುಕ್ತಿಗೊಡೆಯನ ಮಾರ್ಗತೋರಿ ಭವ ಮುಕ್ತಿಗೊಳಿಪ ಶ್ರೀ ಗುರುವೆಲೆ ತಂಗಿ ಅ.ಪ. ಕಂದರಂದದಿ ಪೊಂದಿದವರ ಪೊರೆಯುವರ್ಯಾರೇ ಪೇಳಕ್ಕಯ್ಯ ನಂದಕಂದನ ಅಂಕಿತ ಕೊಡುವವರ್ಯಾರೇ ಪೇಳಕ್ಕಯ್ಯ ಸಿಂಧುಶಯನನ ತೋರುವೆನೆಂಬುವರ್ಯಾರೇ ಪೇಳಕ್ಕಯ್ಯ ಬಿಡಿಸುವ ದಾಸೋತ್ತಮರೆಲೆ ತಂಗಿ 1 ಭಾವಜನಯ್ಯನ ಭಾವಿಸಿ ಭಜಿಸುವರ್ಯಾರೇ ಪೇಳಕ್ಕಯ್ಯ ಸಾವಕಾಶವಿಲ್ಲದೆ ತತ್ವವನೊರೆಯುವರ್ಯಾರೇ ಪೇಳಕ್ಕಯ್ಯ ಪಾವನಮಾನಿಗತಿ ಪ್ರಿಯರೆಂದೆನಿಸುವರ್ಯಾರೇ ಪೇಳಕ್ಕಯ್ಯ ನಾಮಾತ್ಮಕರಲೆ ತಂಗಿ 2 ಮಂದಮತಿಗಳ ಬಂದು ಕಾಯ್ವರಿವರ್ಯಾರೇ ಪೇಳಕ್ಕಯ್ಯ ಗಂಧಾಕ್ಷತೆ ಪದ್ಮಾಕ್ಷಿಯ ಧರಿಸಿಹರ್ಯಾರೇ ಪೇಳಕ್ಕಯ್ಯ ಬಂದು ಸ್ವಪ್ನದಿ ಅಭಯ ಕೊಡುವರಿವರ್ಯಾರೇ ಪೇಳಕ್ಕಯ್ಯ ಪೊಂದಿ ಭಜಿಸಿದ ಮಹಿಮರೆ ತಂಗಿ 3 ಕಷ್ಟವ ಬಿಡಿಸಿ ಉತ್ಕøಷ್ಟವ ತೋರಿದರ್ಯಾರೇ ಪೇಳಕ್ಕಯ್ಯ ಸೃಷ್ಟೀಶ ನಿತ್ಯಾನಂದನ ತೋರಿದರ್ಯಾರೇ ಪೇಳಕ್ಕಯ್ಯ ತುಷ್ಟಿಬಡಿಸಿ ವಚನಾಮೃತ ಕರೆಯುವರ್ಯಾರೇ ಪೇಳಕ್ಕಯ್ಯ ಶ್ರೇಷ್ಠ ದಾಸರೆಂದೆನಿಸಿ ಗೋಪಾಲಕೃಷ್ಣವಿಠಲಗತಿ ಪ್ರ್ರಿಯರೆ ತಂಗಿ4
--------------
ಅಂಬಾಬಾಯಿ
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ನಿರ್ಮಳದಲಿ ನಡಿಬೇಕು ಪಡೆದು ಸಮದೃಷ್ಟಿಗುಡಬೇಕು 1 ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2 ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಗವಂತನ ಸಂಕೀರ್ತನೆ ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
--------------
ವಿದ್ಯಾಪ್ರಸನ್ನತೀರ್ಥರು
ಭಗವನ್ನಾಮವನಾಡು ಅಡಿಗಡಿ| ಗಾಡು ಅಡಿಗಡಿಗಾಡು ಅಡಿಗಡಿ ಪ ಭಗವನ್ನಾಮದ ಸುಧೆಯನು ಸೇವಿಸಿ | ಸೊಗದಿಂ ನಲಿನಲಿದಾಡು ಅಡಿಗಡಿ ಅ.ಪ ಪಾಪವ ನೀಗಿ ಪಾವನನಾಗಿ| ಶ್ರೀಪತಿಯನು ಕೂಡ್ಯಾಡು ಅಡಿಗಡಿ 1 ಪಾಮರಗೋಲಿದಾ ರಾಮನ ನಾಮವ | ಪ್ರೇಮದಿ ಮನದೊಳಗಾಡು ಅಡಿಗಡಿ 2 ತರುಣಿಯ ಸೀರೆಗೆ ಅಕ್ಷಯವಿತ್ತ | ಕೃಷ್ಣನ ನಾಮವನಾಡು ಅಡಿಗಡಿ3 ದಾಸಜನರ ಮನದಾಸೆಯ ಸಲಿಸುವ | ವಾಸುದೇವನ ಕೂಡ್ಯಾಡು ಅಡಿಗಡಿ 4 ಇಂಗಿತವೀಯುವ ಮಂಗಳಮಹಿಮ | ರಂಗನ ನಾಮವ ನಾಡು ಅಡಿಗಡಿ 5 ಮರಣಕಾಲದೊಳಜಾಮಿಳಗೊಲಿದಾ | ನಾರಾಯಣ ನೊಡನಾಡು ಅಡಿಗಡಿ 6 ವೆಂಕಟರಮಣನ ಸಂಕಟಹರಣನ | ಕಿಂಕರನಾಗಿ ನೀನಾಡು ಅಡಿಗಡಿ 7
--------------
ವೆಂಕಟ್‍ರಾವ್
ಭಜನೆ ಭಾಗ್ಯ ಒಂದೇ ಸಾಲದೇ | ಹರೀ ಪ. ಭಜಕರಾದವರಿಗೆ ಹಗಲು ಇರುಳು ಮಾಳ್ಪಾ ಭಜನೆ ಭಾಗ್ಯ ಒಂದೇ ಸಾಲದೆ ಅ.ಪ. ಭಕ್ತರೆಲ್ಲರು ಕೂಡೀ ಮುಕ್ತಿಗೊಡೆಯನ ಪಾಡಿ ಭಕ್ತಿ ಭಾಗ್ಯವ ಬೇಡಿ ನೃತ್ಯವ ಗೈಯುವಾ 1 ತಾಳ ತಂಬೂರಿ ಗೆಜ್ಜೆ ಮೇಳನದಿಂದಲೀ ತೋಳುಗಳೆತ್ತಿ ಪಾಡೀ ವೇಳೆಯ ಕಳೆವಂಥಾ 2 ಹಿಂದೆ ಮುಂದಾಡುವ ನಿಂದಕರಾ ನುಡಿ ಒಂದು ತಾರದೆ ಮನಕಾನಂದವ ಬೀರುವಾ 3 ಕಟ್ಟಳೆ ಮೀರದೆ ಬಿಟ್ಟು ಬಿಡದೆ ನಿತ್ಯ ನಿಷ್ಠೆಯಿಂದಲಿ ಗುರು ಕೊಟ್ಟ ಅಜ್ಞೆ ಎಂಬಾ 4 ಮೂರ್ತಿ ನಿಂತು ಒಳಗೆ ಹೊರಗೆ ಸಂತಸಪಡಿಸೆ ಏಕಾಂತ ಭಕ್ತರು ಮಾಳ್ಪ 5 ಸಾಸಿರ ಸತ್ಕರ್ಮ ಮೀಸಲು ಫಲಗಳೂ ಶ್ರೀಶನ ಧ್ಯಾನಕೆ ತ್ರಾಸಿಗೇರದೆಂಬ 6 ಪದ್ಧತಿಯಂತೆ ತಂದೆ ಮುದ್ದುಮೋಹನ್ನ ಗುರು ಪದ್ಮ ಪಾದಕೆ ಸೇರಿ ಪೊದ್ದಿದ ದಾಸ್ಯದ 7 ತ್ರಿಗುಣದ ಕಲ್ಮಶ ವಗೆದು ದೂರಕೆ ಮನ ಮಿಗಿಲಾಗಿ ಹರಿಪದ ತಗಲಿಕೊಂಬುವುದಕ್ಕೆ 8 ನರ್ತಗೈಯ್ಯುತ ಸುತ್ತಿ ಪ್ರದಕ್ಷಿಣೆ ಎತ್ತಿ ಸ್ವರವ ಹರಿ ಮೂರ್ತಿಯ ಪಾಡುವಾ 9 ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನನು ಇಟ್ಟು ಹೃತ್ಕಮಲದಿ ಮುಟ್ಟುವೋ ಹರಿ ಪುರ 10
--------------
ಅಂಬಾಬಾಯಿ
ಭಜರೆ ಮಾನಸ ದ್ವಿಜವರಗಮನಂ ಪ ದ್ವಿಜಕುಲ ತೋಷಣಂ ಗಜವರ ಪೋಷಣಂ ಅ.ಪ ವಿಜಯ ಸಾರಥಿಂ ಭಜಕೃಷ್ಣಮೂರುತಿಂ ಭಜಕಾಮರತರುಂ ಕುಜನಕುಠಾರಂ 1 ಹರಿಪದ ಸ್ಮರಣಂ ದುರಿತನಿವಾರಣಂ ಭವ ಮುಖಸುರನುತ ಚರಣಂ 2 ಜಲಧಿಜಾರಮಣಂ ಬಲಿಕೃತ ಕರುಣಂ ವಿಲಸತ್ಕಾರ್ಪರ ನಿಲಯ ನರಹರಿಂ 3
--------------
ಕಾರ್ಪರ ನರಹರಿದಾಸರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಭಜಿಸಿ ಬದುಕಿರೋ _ ಭರದಿ ಸುಜನ ರೆನಿಸಿರೋ ಪ ಸುಜನ ರಾಜ ರಾಘವೇಂದ್ರರಾ ಅ.ಪ ಸುಜನ ಮಲಿನ ಕಳಿಯಲು ಒಲಿದು ಭವಿಯೊಳು _ ಬಂದ ಅಲವ ಮಹಿಮರ 1 ವೇಧ ದೂತರ _ ಪ್ರಹ್ಲಾದರೆಂಬರ ಸಾಧು ಸೇವ್ಯರ _ ದುರ್ಬೋಧೆ ಕಳಿವರ 2 ನಾರಸಿಂಹನ ಕರುಣ ಸೂರೆ ಪಡದಿಹ ಭಾರಿ ಭಕ್ತರ ದೇವರ್ಷಿ ಛಾತ್ರರ 3 ವ್ಯಾಸರಾಯರ _ ಶ್ರೀನಿವಾಸ ಯಜಕರ ಶೇಷದೇವರ ಆವೇಶ ಯುಕ್ತರ 4 ರಾಜ ಗುರುಗಳು ಕವಿರಾಜ ಮಾನ್ಯರು ನೈಜ ತೇಜರು ನಿವ್ರ್ಯಾಜ ಪ್ರೇಮರು 5 ಹರಿಯ ತರಿಸಿದಾ ಮುರಹರನ ಕುಣಿಸಿ ದಾ ಮುರವ ಹರಿಸಿದಾ ಧೊರೆಗೆ ಹರುಷ ಸುರಿಸಿದಾ 6 ಮಾನವಂತರಾ ಬಹುಜ್ಞಾನವಂತರಾ ದಾನ ಶೀಲರಾ ಅನುಮಾನ ರಹಿತರ 7 ಭ್ರಾಂತಿ ವಾದವ ವಿಶ್ರಾಂತಿ ಗೊಳಿಸಿದ ಶಾಂತಿ ಸಾಗರ ವೇದಾಂತ ಭಾಸ್ಕರ 8 ಶ್ರೀ ಸುಧೀಂದ್ರರ ವಿಶ್ವಾಸ ಪುತ್ರರ ದೋಷದೂರರ _ ಗುರು ದೋಷ ಕಳಿವರ 9 ಮಂತ್ರ ಸಿದ್ಧರು ಬಹು ಗ್ರಂಥ ಕರ್ತರು ತಂತ್ರ ಮಲ್ಲರು ಹರಿ ಮಂತ್ರಿ ಸಚಿವರು 10 ಭವ ರೋಗ ವೈದ್ಯರ ರಾಗ ರಹಿತರ ವೈರಾಗ್ಯ ಭಾಗ್ಯರ 11 ವಾದಿ ಭೀಕರ ಶ್ರೀವಿಜೀಂದ್ರ ಪೌತ್ರರ ನಿತ್ಯ ಮಿಂದು ಮೀಯ್ವರ 12 ತರ್ಕದಿಂದಲು ಹರಿಯು ಶಕ್ತಿಯಿಂದಲು ಯುಕ್ತಿಯಿಂದಲು ಒಲಿಯ ಭಕ್ತಿ ಇಲ್ಲದೆ 13 ಶ್ರೀಶ ದಾಸರ ಪದ ಪಾಂಶು ಧರಿಸದೆ ದೇಶ ತಿರುಗಲು ಬರಿಘಾಸಿ ಸಿದ್ಧವು 14 ಭಕ್ತರೊಲಿಯದೆ ನಿಜ ಭಕ್ತಿ ಸಿಕ್ಕದು ಪಕ್ವವಾಗದೆ ಭಕ್ತಿ ದಕ್ಕ ಶ್ರೀ ಹರಿ 15 ಇವರ ಮಂತ್ರವ ಭಕ್ತ ಜವದಿ ಜಪಿಸಲು ಅವಗೆ ಕರಗತ ಸಿದ್ಧ ಭವದಿ ವಾಂಛಿತ 16 ಶ್ರೀನಿವಾಸನ ಭಕ್ತ ಶ್ರೇಣಿ ಸೇರುವ 17 ಅಲ್ಪ ಸೇವೆಯೆ ಮೇರು ಕಲ್ಪ ವಾಹುದೊ ಕಾಕು ಸ್ವಲ್ಪ ತಟ್ಟದೊ 18 ನಿಖಿಳ ಯಾತ್ರೆಯಾ ಫಲ ಭಕ್ತ ಪಡೆಯುವ ಸಂದೇಹ ಸಲ್ಲದೊ 19 ಪುತ್ರ ನೀಡುವ ಸಂಪತ್ತು ದೊರಕಿಪ ವೃತ್ತಿ ಕಲ್ಪಿಪ ಆಪತ್ತು ಕಳಿಯುವ 20 ರಾಮ ನರಹರಿ ಕೃಷ್ಣ ಬಾದರಾಯಣ ದಿವಿಜ ಸ್ತೋಮ ವೆಲ್ಲವು 21 ಸೇರಿ ಇವರಿಗೆ ಕೀರ್ತಿ ಸೂರೆ ಕೊಡುತಿರೆ ಪಾರವಿಲ್ಲವು ಸತ್ಯ ಮಹಿಮೆ ಗೆಂಬುವೆ 22 ಕರ್ಣ ವಿದಿತರು ವಿಘ್ನ ಕಳಿವರು ಶ್ರೀ ಸತ್ಯ ಸಂಧರು 23 ಗುರುವು ಒಲಿದರೆ ತಾ ಹರಿಯು ಒಲಿಯುವ ಗುರುವು ಮುನಿದರೆ ಯಾರು ಪೊರೆವರಿಲ್ಲವೊ 24 ಶುದ್ಧ ಭಕ್ತಿಲಿ ಈ ಪದವ ಪಠಿಸಲು ಸಿಧ್ಧಿ ಸತ್ಯವು ಸರ್ವತ್ರ ವಿಜಯವು25 ಸಾರಿ ಸಾರುವೆ ಕೇಳಿ ಕ್ರೂರ ಕಲಿಯಲಿ ದೂರ ಸಾಧನೆ ಇವರ ಸೇರ ದಿರ್ಪಗೆ26 ಜಿಷ್ಣು ಸೂತ ಶ್ರೀ ಕೃಷ್ಣ ವಿಠಲನ ಶ್ರೇಷ್ಟ ಭಕ್ತರ ಶ್ರೀ ರಾಘವೇಂದ್ರರ27
--------------
ಕೃಷ್ಣವಿಠಲದಾಸರು
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ. ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ1 ಭೃಂಗಕುಂತಳ ನೀಲಕೇಶ | ಹುಬ್ಬು | ಚಾಪ ವಿಲಾಸ | ಉ | ತ್ತುಂಗ ಚಂಪಕ ಕೋಶನಾಸ | ರಸ ರಂಗು ತುಟಿ ಮಂದಹಾಸ || ಆಹ || ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ ಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳವೀಳ್ಯ ಕರ್ಪೂರ | ಇಟ್ಟು | ಜಲಧಿ ಗಂಭೀರ | ದಂತ ಪರಿಪಜ್ಞೆ ಸಮ ವಿಸ್ತಾರ ||ಆಹ || ಮಿನುಗುವನಂತ ಚಂದೀರ ತೇಜಾಧಿಕ ಮುಖ ಪರಿಪರಿ ವೇದ ಉಚ್ಚರಿಸುವ ಚತುರಾರ 3 ಬಕುಳಾರವಿಂದ ಮಲ್ಲೀಗೆ | ಅದು | ಕುರುವಕ ಪನ್ನೀರು ಸಂಪಿಗೆ | ಭೂಚಂಪಕ ಜಾಜಿ ಯಿರುವಂತಿಗೆ | ಪೂಕೇತಕಿ ಮರುಗ ಶಾವಂತಿಗೆ ||ಆಹ|| ಸಕಲ ಪೂತರುವಿರೆ ವಿಕಸಿತ ಮುಕುಳಿತ ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು4 ಕರತಾಳರೇಖೋಪರೇಖ | ಕಾಂತಿ | ಅರುಣಸಾರಥಿ ಮಯೂಖ | ಬೇರೆ | ಪರಿ ಶೊಭಿತ ಹಸ್ತ ಶಂಖ | ಗದೆ | ಧರಿಸಿದ ಚಕ್ರ ನಿಶ್ಶಂಕ || ಆಹ | ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ ವೈಜಯಂತಿ ಮಂಜರಹೀರ ಹಾರನ್ನ5 ಕಡಗ ಕಂಕಣ ಮುದ್ರೆ ಬೆರಳ | ಪಾಣಿ | ನಿಡಿತೋಳ ಕಕುಭುಜಿ ಕೊರಳ ಸ್ಕಂಧ ವಿಡಿ ಸಪ್ತವರಣ ವಿಸರಳ | ಬೆನ್ನು | ಮುಡಿಯವಿಟ್ಟ ಮಣಿಹವಳ ||ಆಹ | ಝಡಿತದ ಪವಳ ವಡಸೀದ ಕೇಯೂರ ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ6 ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ | ಕೆತ್ತಿದ ಪದಕನ್ಯಾವಳ ಸುತ್ತ ಸುತ್ತಿದ ಸನ್ಮುಡಿವಾಳ | ಇತ್ತ ತುತಿಪ ಜನಕೆ ಜೀವಾಳ ||ಆಹ || ಪ್ರತ್ಯೇಕವಾಗಿ ತೂಗುತ್ತಿಹ ಸರಗಳ ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ 7 ಕೇಸರಿ ಅಂಬರ | ಗೋರೋ ಚನ ನಖಚಂದ ನಗಾರು | ಪೆಚ್ಚಿ | ತೆನೆ ಮೃಗನಾಭಿ ಪನ್ನೀರ | ವೆಳ | ಘನಪರಿಮಳ ಗಂಧಸಾರ ||ಆಹ || ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ 8 ತ್ರಿವಳಿ ಉಪಗೂಢ ಜಠರ | ಅಖಿ | ಳಾವನೀ ಧರಿಸಿದಾ ಧೀರಾ | ಮೇಲೆ | ಕುಸುಮ ಮಂದಿರಾ | ಮೃಗದೇವ ಉಡಿನಡು ಧಾರಾ ||ಆಹ || ಭಾವ ಕಿಂಕಿಣಿ ತೋಳಲಿವಾಸನಾ ಬಿರು ದಾವಳಿಕೊಂಡರು ದೈತ್ಯಾವಳಿ ಹಾರನ್ನಾ 9 ಊರು ಜಾನು ಜಂಘ ಗುಲ್ಫ | ವಿ ಚಾರ ಶಕ್ರ ಮಾತು ಅಲ್ಪ | ಎನ್ನ ತೋರುನೆಯ ಅಗ್ರ ಸ್ವಲ್ಪ | ಗುಣ | ಸಾರಮಾಡಿಪ್ಪ ಸಂಕಲ್ಪ ||ಆಹ || ವಾರಣಕರದಂತೆ ಹಾರೈಸು ಈ ತನೂ ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ10 ಪಾದ | ಪಾಪ ಪಾದ | ಕಾಮ ಪಾದ | ಬಹು ಪಾದ ||ಆಹಾ|| ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ ಮಾನವಗೆ ಬಂದು ಕಾಣಿಸಿಕೊಂಬನ11 ಮೃದುತಾಳಾಂಗುಲಿನಿಸಿ ಭಾಸ | ರಕ್ತ ಪದತಳ ಧ್ವಜ ವಜ್ರಾಂಕುಶ | ಚಕ್ರ ಪದುಮ ಚಿಹ್ನೆ | ನಿರ್ದೋಷ | ಸುಧಿ ಸುಧ ಕಥಾಪಾಠ ಸರಸÀ ||ಆಹ|| ತ್ರಿದಶನಾಯಕ ಶಿವ ವಿಧಿಗಮುಗುಟ ಪಾದದಲಿ ಸಮರ್ಥವಾದರು ನೋಡು ತರುವಾಯ 12 ಆಪದ್ರಕ್ಷಕ ಸುರಾಧ್ಯಕ್ಷ | ಜಗ | ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ | ಸ್ವಪ್ನದಲಿ ನೀನೆ ದಕ್ಷಾ | ನಗೆ | ಆಪನ್ನರಿಗೆ ನೀನೆ ವೃಕ್ಷಾ ||ಆಹ || ರೂಪರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ಮೌಳಿ ಪರಿಯಂತರ ನೀನು 13 ಹಿಂದಾಣ ಅನುಭವ ಧಾನ್ಯ | ಲೋಹ | ತಂದು ಸಂಪಾದಿಸೋ ಜ್ಞಾನ | ಭಕ್ತಿ | ಯಿಂದ ಮುಂದಕೆ ನಿಧಾನ | ಚಿತ್ತ | ಯಿಂದು ಕೊಂಡಾಡೋ ಮುನ್ನೀನ ||ಆಹ|| ಬಂಧನ ಹರಿಸಿ ಆನಂದಾವ ಕೊಡುವ ಮು- ಕುಂದ ಅನಿಮಿತ್ತ ಬಂಧು ವೆಂಕಟನಾ ನೀ14 ನಿತ್ಯ | ನೀಲ | ಪುಣ್ಯ | ವ್ರಜವ ಪಾಲಿಸುವ ವಿಶಾಲ | ವಿತ್ತು | ನಿಜದೊಳಗಿಡುವ ಈ ಕೋಲ ||ಆಹ|| ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ | ವಿಜಯವಿಠ್ಠಲರೇಯ ಗಜರಾಜವರದನ್ನ 15
--------------
ವಿಜಯದಾಸ
ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು ಸುಜನರ ಹೃದಯ ಪಂ ರಜತಮೋ ದೂರನ್ನ ಪ ಮನ ಸೋಲಿಸುವ ಲಲಾಟ ಫಣಿ ನಮ್ಮನು ನೋಡುವ ವಾರೆ ನೋಟಾ ಹಾಹಾ ಮಕರ ಕುಂಡಲ ಕರ್ಣ ಕದಪು ಆವಿನ ಸೋಲಿಸೆ ನಿತ್ಯಾ 1 ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ ತ್ತುಂಗ ಚಂಪಕ ಕೋಶಾ ನಾಸಾರಸಾ ರಂಗುದುಟಿಯ ಮಂದಹಾಸಾ ಹಾಹಾ ತಿಂಗಳ ಎಳೆ ಬೆಳ ದಿಂಗಳಾ ಮೀರೆ ಭೂ ಮಂಗಳಾಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳ ವೀಳ್ಯೆ ಕರ್ಪುರಾ ವಿಟ್ಟಾ ಜಲಧಿ ಗಂಭೀರಾ ದಂತ ಪರಿಪಙË್ತ ಸಮ ವಿಸ್ತಾರ ಹಾಹಾ ಮಿರುಗುವಾನಂತ ಚಂ ಚರಿಸುವ ಚತುರನ್ನ 3 ಪನ್ನೇರು ಸಂಪಿಗೆ ಪೊಂಗೇ ಜಾಜಿ ಇರುವಂತಿಗೆ | ಹಾಹಾ | ಮಕರಂದಾ ಮಾರಂದೋದಕ ಸುರಿಯಲಿಂದು4 ನಿಡಿದೋಳು ಕಕುಭುಜಾ ಕೊರಳಾ ಸ್ಕಂಧಾ ಮಣಿ ಹರಳಾ | ಹಾಹಾ| ಒಡನೆ ತಾಯಿತ ಕೀರ್ತಿ ವಡಿವೇಲಿ ಮೆರೆವನ್ನ 5 ಸುರವಿ ಮಯೂಖಾ ಮೇಲು ಧರಿಸಿದ ಚಕ್ರಾದಿ ಶಂಖಾ | ಹಾಹಾ | ಕೌಸ್ತುಭ ಮಣಿ ಸಿರಿವತ್ಸ ವನಮಾಲಾ ಉರವೈಜಯಂತಿ ಮಂದಾರ ಹೀರ ಹಾರನ್ನ6 ಮುತ್ತು ವೈಢೂರ್ಯ ಪ್ರವಳಾ ಪಚ್ಚ್ಚೆ ಕೆತ್ತಿದ ಪದಕ ನ್ಯಾವಳಾ ಸ್ತುತಿಪ ಜನಕೆ ಜೀವಾಳಾ | ಹಾಹಾ | ಪ್ರತ್ಯೇಕವಾಗಿ ತೂಗುತಿಹ ಸರಗಳು ತತ್ತುಲಸಿಧಾಮ ಚಿತ್ರವಾಗಿರೆ ಬಲು 7 ನಖ ಚಂದನಾ ಅಗರಾ ಪಚ್ಚೆ ಘನ ಪರಿಮಳ ಗಂಧ ಸಾರಾ | ಹಾಹಾ | ತನುವಿಗೆ ತನುವು ಲೇಪನವಾದಾ ಸೊಗಸು ವಾ ಸನೆ ಸುತ್ತ ಘಮಘಮ ತನರು ಹಾವಳಿ ತಿಳಿ 8 ತ್ರಿವಳಿ ಉಪಗೂಢ ಜಠರಾ ಅಖಿಳಾವನಿ ಧರಿಸಿದ ಧೀರಾ ನಾಭಿ ಕುಸುಮ ಮೃಗ ದೇವ ಉಡಿ ಉಡದಾರಾ | ಹಾಹಾ | ಭವಕಿಂಕಿಣಿ ತಳಲಾವಿ ವಸನ ಬಿರು ತೊಡರು ದೈತ್ಯಾವಳಿ ಹರನನ್ನಾ 9 ಊರು ಜಾನು ಜಂಘೆ ಗುಲ್ಫಾ ವಿಚಾರಿಸೆ ಕ್ರಮಾತು ಅಲ್ಪಾ ತನ್ನ ಸಂಕಲ್ಪಾ | ಹಾಹಾ| ವಾರಣಾ ಕರದಂತೆ ಹಾರೈಸುಯಿಂತು ನೂ ಚಾರು ಚರಣ ಪೆಂಡೆ10 ನಖ ವಜ್ರಾಂಕುಶ ಚಕ್ರ ಸುಧಿಯಾ ಸುರಿವ ಪೀಠ ಸರಸಾ | ಹಾಹಾ | ತ್ರಿದಶನಾಯಕ ಶಿವ ವಿಧಿಗಳ ಮುಕುಟ ಪಾದದಲಿ ಸಮ್ಮರ್ದವಾದುದು ನೋಡಿ ತರುವಾಯಾ 11 ದಹಿಸುವ ಪಾದಾ ಕಾಮ ಕಾನನ ದಹಿಸುವ ಪಾದಾ | ಹಾಹಾ | ಅನಂತ ದಿನಕ್ಕೊಮ್ಮೆ ನೀನೇ ಗತಿಯೆಂದಾ ಮಾನವಗೆ ಬಂದು ಕಾಣಿಸಿಕೊಂಬನ್ನ12 ಅಪದಕ್ಷ ಸಾರಾಧ್ಯಕ್ಷ ಸರ್ವವ್ಯಾಪಕ ಕರುಣಿಕಟಾಕ್ಷ ಜಾಗ್ರತ್ ಸ್ವಪ್ನದಲ್ಲಿ ಪ್ರಾಜ್ಞಾದಕ್ಷ ನಿಜ ಆಪನ್ನರಿಗೆ ದಾವಾ ವೃಕ್ಷ | ಹಾಹಾ | ರೂಪ ರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ರತುನ ಮೌಳಿಪರಿಯಂತರಾ13 ಸಂಪಾದಿಸು ಜ್ಞಾನಾ ಭಕ್ತಿ ಕೊಂಡಾಡು ಮುನ್ನಿನಾ | ಹಾಹಾ | ಬಂಧನ ಹರಿಸಿ ಆನಂದವ ಕೊಡುವ ಮು ಕುಂದ ಅನಿಮಿತ್ತ ಬಂಧು ವೆಂಕಟನ್ನ 14 ನಿತ್ಯ ಭಜಿಸುವ ಜನರಿಗೆ ಶೀಲಾ ಪುಣ್ಯ ನಿಜರೊಳಗಿಡುವ ಈ ಕೂಲಾ | ಹಾಹಾ | ವ್ರಜದಲಿ ಪುಟ್ಟಿದಾ ಸುಜನಾಂಬುಧಿ ಸೋಮ ವಿಜಯವಿಠ್ಠಲರೇಯಾ ಗಜರಾಜವರದನ್ನಾ 15
--------------
ವಿಜಯದಾಸ
ಭಜಿಸುವರು ಭಾಗ್ಯವಂತರು | ಭಾಗವತರು ಪ ನಿಲುಕದೆಂದು ನಿಗಮಗಳು ನೆಲೆಗಾಣದೆ ನಿಲ್ಲಲು |ಮಲಕೀನ ಮಾತುಗಳಿಂದ ಜರಿದು ಕಲಕಾದ ಕರ್ಮನೀರೆರೆದು ನಳಿನಾಕ್ಷ ವಲ್ಲಭ ನೀನೆಂದರಿತು 1 ಅಳಿದುಳಿದೆಲ್ಲ ನೋಡುತಲಿ ತಳೆದು ಭವದ ಮೂಲವನುಕಳೆದು ಕಾಮಕ್ರೋಧಮದಗಳನು | ಬಳೆಸುತ ಮೈತ್ರಿ-ಕರುಣಾಗಳನು | ಬಳೆಸುತ ಏಳು ಧರಣಿಗಳನು 2 ಕಡಲೊಳೊರಗುವ ತೆರೆಯಂತೆ | ಒಡಲೊಳಗೆ ರುಕ್ಮ ಕಡಗದಂತೆ ನೆಮ್ಮದೆ ಚಣಿಸಿ | ಪಡದ ರೂಪವನುಜಡವೆಂದೆನಿಸಿ ಕಡಿಗಾಗದಿರೆಂದು ಜಗವನೆನಿಸಿ 3
--------------
ರುಕ್ಮಾಂಗದರು
ಭಯ ನಿವಾರಣ ಸುಳಾದಿ ನಾಕೇಶ ದೇವತತಿ ಆ ಕಮಲನಾಭ ಯತಿ ನಿಕರಗೊಲಿದನೆ ಶ್ರೀಕರವದನ ಸರ್ವಲೋಕಕಧಿಪ ಕೃಪಾ- ಲೋಕನದಲಿ ನೋಡಿ ಸುಖತೀರ್ಥನುತ ಚರಣ ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ ಈ ಕಾಲದಲಿ ಮನ ವ್ಯಾಕುಲಪಡಿಸುವ ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ ಲೋಕ ಲೋಕಾದಿಗಳ ಸಾಕುವ ಭಾರಕರ್ತ ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ ಲೋಕಪತಿಯೆ ಭಕ್ತಾನೀಕಕÀಭಯದಾತ ಭೀಕರ ಬೆನ್ಹತ್ತಿ ತಾಕಿದ ಮನಸಿನ ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1 ಭಯ ನಿವಾರಕದೇವ ಭಕ್ತವತ್ಸಲ ನೀನೆ ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು ಸಂತೈಸಿ ತರುಣಿಯ ರೂಪದಿ ಖಳನ ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2 ನಿತ್ಯ ನಿನ್ನನು ನಂಬಿ ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು ಮೃತ್ಯು ಭಯವು ಉಂಟಿ ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ ಸಿರಿ ಗೋಪಾಲಕೃಷ್ಣವಿಠ್ಠಲ ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3 ವಾಸುದೇವನೆ ನಿನ್ನ ದಾಸನ ಕಾಯುವಂಥ ಈಶನಲ್ಲವೆ ಜೀವರಾಶಿಗಳಿಗೆ ಬಿಂಬ ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ ದಾಶರಥಿಯೆ ನಿನ್ನ ಅನುಜನ ಜೀವಭಯ ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ ವಾಸವ ಮೊರೆಯಿಡೆ ಒಲಿದು ಅಮೃತವಿತ್ತು ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4 ತರಳತ್ವದಲಿ ಭಯವು ವರ ಯೌವ್ವನದಲಿ ಭಯವು ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ ಪರಮ ಮಂಗಳರೂಪ ದೈತ್ಯರಿಗತಿ ಘೋರ ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5 ಜತೆ ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ
--------------
ಅಂಬಾಬಾಯಿ