ಒಟ್ಟು 2084 ಕಡೆಗಳಲ್ಲಿ , 116 ದಾಸರು , 1437 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲೆನೋ ಚಲ್ಲಾಟವ ಪ ಸಲ್ಲದೋ ಎನ್ನಲಿದೆಲ್ಲವು ಅ.ಪ ದುರುಳ ಕಂಸನಿಗಂಜಿ ಇರುಳು ಸಮಯದಲಿ ತೆರಳಿದ ನಿನ್ನಯ ತಿರುಳುಗಳನು 1 ಸಾಧು ಸುಧಾಮನ ಹಿಡಿಯವಲಕ್ಕಿಗೆ ಮೋದವ ಪೊಂದಿದ ಮಾದರಿಯನು 2 ಗಂಧದ ಲೋಭಕೆ ನಂದದಿ ಕುಬುಜೆಯ ಸುಂದರಿ ಮಾಡಿದ ಅಂದಗಳನು 3 ಕೋರಿಕೆ ಪೊಂದಿದ ಜಾರತನವ 4 ಹಟದಲೆ ಪಾರ್ಥಗೆ ಅನುಜೆ ಸುಭದ್ರೆಯ ಘಟಿಸಿದ ನಿನ್ನಯ ಕಪಟತನವ 5 ನಿನ್ನ ಭಕುತರೊಳು ಎನ್ನನು ಸೇರಿಸಿ ಮನ್ಮನವರಿತು ಪ್ರಸನ್ನ ನೀನಾಗೆಲೋ 6
--------------
ವಿದ್ಯಾಪ್ರಸನ್ನತೀರ್ಥರು
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಬಾಗಿಲ ತೆಗೆಯವ್ವಾ ಲಕ್ಷ್ಮೀದೇವಿ ಬಾಗಿಲ ತೆಗೆಯವ್ವಾ ಪ ಬಾಗಿಲ ತೆಗೆಯವ್ವಾ ಸಾಗಿ ಬಂದಿಹನಯ್ಯಾ ಭೋಗಿ ಭೂಷಣ ಪ್ರಿಯ ಕೇಶವನ ದಾಸಾ ಅ.ಪ. ಸಂಸಾರ ಜಾಲದಲೀ ಸಿಲುಕಿ ಬೆಂದೇ ಸಂಸಾರ ಮಾಯದಲೀ ಹಿಂಸೆ ಮಾಡಿದವಯ್ಯಾ ಐದಾರುರಿಪುಗಳು ಸಂಶಯ ಪಡದೆ ಬಂದೇ ಶರಣೆಂದೇ 1 ಭವದೊಳುರಳಿ ಬಿದ್ದೆನೋ ಪ್ರಾಣಾಂತಕ ಸವೆದು ಕರಗಿ ಬೆಂದೆನೋ ಯುವತಿಯರೊಡಗೂಢಿ ಇಹವೆನ್ನೆ ನೆರೆನಂಬಿ ವಿವಿಧ ಕಷ್ಟವ ಪೊಂದಿ ಬಂದೇ ಶರಣೆಂದೇ 2 ಹಲವು ಜನ್ಮಗಳಿಂದ ನೋಡಲು ಬಂದೆ ಹಲವು ರೀತಿಗಳಿಂದ ನಳಿನ ನಾಭನ ದಿವ್ಯ ರೂಪವ ನೋಡುವೆ ನಳಿನಾಕ್ಷಿ ತಾಯ ಕೇಶವನ ಸೇರುವನು 3
--------------
ಕರ್ಕಿ ಕೇಶವದಾಸ
ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ ಪ ಮೂರ್ತಿ ಪ್ರಭುವೆ ಅ.ಪ. ಸುರನದಿ ಉರಗ ಕಂಕಣ ಕರಕಪಾಲ ಪಿಡಿವೆ | ಹರ ಹರ ಎಂಬ ಭಕ್ತರಿಗೆ ವರವೆ || ಬಾರಯ್ಯ 1 ತರಣಿ ಸೆಳೆದ ವಸನ ಮಿಂಚಿನ ವರ್ಣ |ಶರಣು ಮಾಡುವೆ ನಿಮ್ಮ ಎರಡೂ ಚರಣ || ಬಾರಯ್ಯ 2 ಧಾಮ ಮಾಡಿದಿ ನಿಮ್ಮ ಭೃಂಗಾವಳೀ ಗ್ರಾಮಾ | ಭೀಮಾಶಂಕರಗೊಲಿದ ಸದ್ಗುರು ಆತ್ಮಾ || ಬಾರಯ್ಯ 3ಚಿ
--------------
ಭೀಮಾಶಂಕರ
ಬಾರಯ್ಯ ಬಾ ಬಾ ಬುಧಜನಗೇಯಾ | ಹೇ ಗುರರಾಯಾಸಾರಿ ಬರುವ ಭಕುತರೊಡೆಯ | ಕಾಯಯ್ಯ ಜೀಯಾ ಪ ವಾರಿಜನಾಭನ ವಾರಿಧಿಮಥನನವೈರದಿ ಭಜಿಸಿದ ಪುರಟ ಕಶ್ಯಪನ |ವರ ಉದರೋದ್ಭವ ಹರಿ ಪ್ರಿಯ ಭಕುತನೆಶರಣರ ಪೊರೆಯಲು ತ್ವರ್ಯದಿ ಬಾರೋ ಅ.ಪ. ದಿತಿಸುತ ದೊರೆಯೇ | ಬಾಹ್ಲೀಕ ದೊರೆಯೇ |ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ | ದೊರೆಬಲು ಮೊರೆಯೇ |ವ್ಯಥೆಯಾಕೆನ್ನುತ | ಹಸ್ತವ ಚಾಚುತಹುತ ವಹ ನೊಳು ಬಲಾ | ಜತನಾಗಿರಿಸಿಹ ರತುನವ ಹಾರವ | ಪ್ರೀತಿಲಿ ಕೊಡುತಅತಿಶಯ ತೋರಿದ | ಯತಿ ರಾಘವೇಂದ್ರ 1 ಸುಧೀಂದ್ರರ ಕರಜ ಮಂತ್ರಾಲಯ ನಿಲಯ | ಬಲು ಮಂತ್ರಗಳೊಡೆಯಾ |ಬಧಿರ ಮೂಕರ ಅಂಧರ ಹೊರೆಯಾ | ಪರಿಹರಿಸುವ ದೊರೆಯಾ |ಮಧ್ವಾಂತರ್ಗತ ಮಧು ಕೈಟ ಭಾರಿಯಸಿದ್ಧಾಂತದ ಸವಿ ಹೃದ್ಗತ ಮಾಡಿದ |ವಿದ್ವನ್ಮಣಿಗಳ ಸದ್ವøಂದದ ಖಣಿಸದ್ವಿದ್ಯದ ಸವಿ ಮೋದದಿ ಉಣಿಸಲು 2 ಮನ್ರೋವಿನ ಮನ ತಿಳಿಯುತಲಿನ್ನೂ | ಮುನಿವರ ತಾನೂ |ಸಾನುರಾಗದಿ ತನುವ ತೋರಿದನೂ | ಘನ ಕರುಣಿಯು ತಾನೂ |ಜ್ಞಾನಿಗಮ್ಯ ಗುರುಗೋವಿಂದ ವಿಠಲನಧ್ಯಾನಿಸೆ ಪೊಗುತಲಿ ವೃಂದಾವನವ |ಆನತ ಜನ ಮನದಿಷ್ಟವ ಸಲಿಸುತಮೌನಿವರೇಣ್ಯನೆ ತುಂಗೆಯ ತೀರಗ 3
--------------
ಗುರುಗೋವಿಂದವಿಠಲರು
ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ
ಬಾರವ್ವ ಮಹÀಭಾಗ್ಯದಭಿಮಾನಿ ಶ್ರೀಹರಿ ನಿಜರಾಣೀ ಪ ಸಾರಿದೆ ನಿನಪಾದನೀರಜಯುಗ ಮನೋ - ವಾರಿಜದಲಿ ನೀ ತೋರುತ ಲಕುಮಿ ಅ.ಪ ಅಖಿಲಾಗಮವಿನುತೆ ಎನ್ನಯ ಮಾತೆ ಸಕಲಸುರಗೀತೆ ನಿಖಿಲಾ ತ್ರಿಜಗದ್ವ್ಯಾಪ್ತೆ ಪ್ರಖ್ಯಾತೆ ಸಂಪತ್ಪ್ರದಾತೇ ನಖಮುಖ ಮಾತ್ರದಿ ವಿಖನಸಆಂಡದ ಅಖಿಲವ್ಯಾಪಾರವ ಸುಖದಲಿ ಮಾಡುವಿ 1 ಇಷ್ಟಾರ್ಥವ ಸಲಿಸಿ ಎನ್ನನು ಪೊರೆಯೇ ಕೊಲ್ಹಾಪುರÀ ಶಿರಿಯೆ ಅಷ್ಟ್ಟದಾರಿದ್ರÀ್ಯಗಳನು ನೀ ತರಿಯೆ ಈ ಕ್ಷಣ ಸುಖಸುರಿಯೇ ಅಷ್ಟಪÀÀದೋದರ ಅಷ್ಟಮೂರ್ತಿನಿನ್ನ ದೃಷ್ಟಿಯಿಂದ ಮಹಶ್ರೇಷ್ಟನಾಗಿಹನೇ 2 ಕ್ಷೀರಾವಾರಿಧಿಯೊಳು ಸಂಜಾತೆ ಮಾರನ್ನ ಮಾತೆ ಅ - ಪಾರಾಮಹಿಮಾಳೆ ಸುರಸನ್ನುತೆ ಜಗದೊಳಗೆ ಖ್ಯಾತೆ ವಾರವಾರಕೆ ದುರಿತಾರಿ ನಿನ್ನಯ ಪೂಜೆ ಚಾರುಮನದಿ ಮಾಳ್ಪೆ ಧೀರೆ ಉದಾರೆ 3 ವಾಸವಾಗೆನ್ನಾ ಮನೆಯೊಳಗಿನ್ನಾ ಪಾಲಿಸೆ ಇದನನ್ನಾ ವಾಸವಾದಿ ಸುರರಾಸೆಯ ಪೂರ್ತಿಸಿ ಈಶರ ಮಾಡಿದಂತೆ ಈ ಸಮಯದಿ ಎನ್ನ 4 ನಗೆಮೊಗ ಚೆನ್ನೆ ಸುಪ್ರಸನ್ನೆ ಸುರನಿಕರರನ್ನೆ ಮಗುವಿನ ಮಾತೆಂದು ನಗುತ ನೀ ಇನ್ನೆ ಬಾ ಬರುವದು ಘನ್ನೆ ನಗಹರ ಸುರಪನ ಮಗನನ ಸಖ ಗುರು ಜಗನ್ನಾಥ ವಿಠಲ ಸಮ್ಮೊಗವಾಗಿ ಬೇಗ ನೀ 5 ಶಿರಿದೇವಿ ನಿನ್ನ ಚರಣ ಸರಸಿಜಯುಗಕೆ ಶಿರದಿ ನಮಿಪೆ ಸತತ ಸರಸಿಜಾಂಬಕೆ ಸರಿಯಾರು ನಿನಗೀ ಸರಸಿಜಭವಾಂಡದೊಳು ಸgಸಿಜಾಕ್ಷಗೆ ದೇಶಕಾಲಗಳಿಂದ ಸರಿಯಾಗಿ ನಿತ್ಯದಲಿ ಪರಿಪರಿಸೇವಾದಿಂದ ಹರಿಯಾ ಮೆಚ್ಚಿಸಿ ಪರಮಾದರದಿಂದ ಪತಿಗನುಕೂಲ - ಪರಳಾಗಿ ಸೃಷ್ಟಿಗೆ ಮೂಲಕಾರಣಳೆನಿಸಿ ಪರಮೇಷ್ಟಿ ಮೊದಲಾದಾನಂತಜೀವರನ್ನ ಅರಿತು ಯೋಗ್ಯಾಯೋಗ್ಯತೆಯನ್ನನು - ಸರಿಸಿ ಸೃಜಿಪ ಶಕ್ತಿ ನಿನಗುಂಟು ನೀ “ಯಂ ಯಂ ಕಾಮಯೆ ತಂ ತಮುಗ್ರಂ ಕೃಣೋಮಿ” ಎಂತ ಶ್ರುತಿ ಸಾರುತಿದೆ ಶಿರಿ ನಿನ್ನ ಕಟಾಕ್ಷದಿ ಸಕಲೈಶ್ವರ್ಯಗಳು ಪರಿಪರಿ ವಿಧದಿಂದ ಒದಗುತಿಪ್ಪವು ಹರಿಕೃಪೆ ನಿನ್ನೊಳಗೆಂತಿಹುದೋ ಅರಿಯಾರು ಎಂದಿಗು ಬೊಮ್ಮಾದಿಸುರರು ನರರೇನು ಬಲ್ಲರಮ್ಮ ನಿನ್ನ ಮಹಿಮೆಯ ಶಿರಿಮಾನಿ ಎನ್ನ ನೀನು ಕರುಣದಿಂದಲಿ ನೋಡಿ ಹರಿಮೂರ್ತಿಯನ್ನೇ ತೋರೆ ಹರಿಣಲೋಚನೆ ಹರಿದಾಸಜನರೊಡೆಯ ಗುರುಜಗನ್ನಾಥವಿಠಲನ್ನ ಇರವು ತೋರಿಸಿ ಎನ್ನ ಪೊರೆಯಮ್ಮ 6
--------------
ಗುರುಜಗನ್ನಾಥದಾಸರು
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ. ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ 1 ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ 2 ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು3 ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ4 ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ5 ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು 6 ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ7 ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ8 ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ9
--------------
ಗಲಗಲಿಅವ್ವನವರು
ಬಾರೊ ರಂಗ ಕೋಮಲಾಂಗ ದಾರಿಗೆ ತನ್ನಂಗಸಂಗ ನೀಡಲ್ಹೋದ ಎನ್ನ ಕಂಗಳಿಂದ ನೋಡದೆ 1 ಉಂಗುರಗುರುಳ ಚೆಲ್ವೆ ಉದಯಭಾಸ್ಕರನಂತಿದ್ದ ಜಾಂಬವಂತಿಯೇರ್ಹಂಬಲಿಸುತ್ಹೋದನೆ ಸಖಿಯೆ 2 ರಂಗುತುಟಿ ರಜತದಾಭರಣ ಕುಂದಣದಂತಿರುವೋ ಕೋಮಲೆ ಇಂದು ನಾ ಕರೆತಾವೇನಮ್ಮ ಸುಂದರಾಂಗನ 3 ವೇಳ್ಯಮಾಡಿದೆನ್ನರಮಣ ಕಾಳಾದೇವಿ ಮನೆಯಲವಳ ತೋಳ ಪಿಡಿದು ಸೆಳೆಮಂಚದಲ್ಲಿ ಕುಳಿತಿಹನೆ 4 ಏಳು ಏಳೆಂದೆಬ್ಬಿಸುತಲಿ ಈರೇಳು ಲೋಕದೊಡೆಯನ ನಾಳೆ ನಾ ಕರೆತಾವೇನಮ್ಮ ನಾರದಪ್ರಿಯನ 5 ಅಮ್ಮನಾ ಸ್ಮರಿಸಲ್ಲಾ ್ಹ್ಯಗೆ ಪನ್ನಂಗಶಯನ ನೀಲ ರನ್ನಮಂಚದಲ್ಲಿ ಲೆತ್ತವನ್ನಾಡಹೋದ 6 ಅನ್ನವನು ಬಿಟ್ಟು ಭಾಮೆ ತನ್ನ ಪ್ರಾಣ ತೊರೆವೋಳೆಂದು ಮನ್ನಿಸಿ ಕರೆತಾವೇನಮ್ಮ ನಿನ್ನಾಳುವೋನ 7 ಮುದ್ದು ಮುಖವನು ನೋಡುತಿದ್ದನಾಕೆ ಮಂದಿರದಲ್ಲಿ ಮದ್ದು ಮಾಡ್ವೊಲಿಸಿದ್ದಾಳೇನಾ ಭದ್ರಾ ಕೃಷ್ಣಗೆ 8 ಸದ್ಯೋಜಾತನಯ್ಯನಯ್ಯ ಕದ್ರುಕುಮಾರನ ಶಯ್ಯ- ನ್ನ ್ಹದ್ದೇರಿಸಿ ಕರೆತಾವೇನಮ್ಮ ಪದ್ಮನಾಭನ 9 ಅತ್ಯಂತ ಪ್ರೀತಿ ಮೋಹದ ಮಿತ್ರವಂತೆ ಮಂದಿರದಲ್ಲಿ ವತೆÀ್ತಯಿಟ್ಟಂತಾಯಿತಮ್ಮ ವಾಮಾಂಗಿ ಹರಿಯ 10 ಸತ್ಯವಾಗಿ ಕೇಳೇ ಭಾಮೆ ಹೆತ್ತ ತಾಯಿ ತಂದೆಯರಾಣೆ ಹಸ್ತ ಮುಗಿದು ಕರೆತಾವೇನರ್ಕಕೋಟಿತೇಜನ 11 ಪಚ್ಚೆಪದಕ ರತ್ನದಾಭರಣ ಅಚ್ಚಮುತ್ತಿನಂತಿರುವೊಳ್ವೊಯ್ಯಾರಿ ಮೆಚ್ಚು ಮಾಡೊಲಿಸಿದ್ದಾಳೇನೊ ಲಕ್ಷಣಾ ಹರಿಯ 12 ರಕ್ಷಿಸ್ಹರಿ ರಕ್ಷಿಸೆಂದು ಇಕ್ಷು ಬಿಲ್ಲನಯ್ಯನ ಕರೆತಂದು ಈ ಕ್ಷಣದಲ್ಲಿ ಕೂಡಿಸುವೆ ಇಂದಿರಾಪತಿಯ 13 ಚೆಲ್ವೆರುಕ್ಮಿಣಿ ಮಂದಿರದಲ್ಲಿ ಮಲ್ಲಿಗೆ ಮಂಚದಲ್ಲೆಚ್ಚರಿ- ಲ್ಲದ್ಹಾಗೆ ಕುಳಿತಿದ್ದ ಬರುವೋನಿಲ್ಲಿಗಿನ್ನಾ ್ಹ್ಯಗೆ14 ಪಲ್ಲವಪಾದಗಳಿಂದ ನಿಲ್ಲದೆ ಭೀಮೇಶಕೃಷ್ಣ ಇಲ್ಲಿಗೆ ಬಂದಿರುವ ನೋಡೆ ಫುಲ್ಲನಯ್ಯನು 15
--------------
ಹರಪನಹಳ್ಳಿಭೀಮವ್ವ
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ಪ ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ 1 ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟುಮಸ್ತಕದಲಿ ಪರವಸ್ತು ತೋರಿದ ಕೃಷ್ಣ 2 ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟುಗೆಜ್ಜೆಯ ಕಟ್ಟಿ ತಪ್ಹೆಜ್ಜೆಯನಿಕ್ಕುತ 3 ನಾರೇರು ಬಿಚ್ಚಿಟ್ಟ ಸೀರೆಗಳನೆ ವೊಯ್ದುಮ್ಯಾರೆ ಇಲ್ಲದೆ ಕರತೋರೆಂದ ಶ್ರೀಕೃಷ್ಣ 4 ಅಂಗನೆಯರ ವ್ರತಭಂಗವ ಮಾಡಿದರಂಗವಿಠಲ ಭವಭಂಗವÀ ಪರಿಹರಿಸೋ 5
--------------
ಶ್ರೀಪಾದರಾಜರು
ಬಾರೋ ಬಾರೋ ಎನ್ನ ನೀ ತಾರಿಸ ಬಾರೋ ಪ ಸಾರಥಿ ಬಾರೋ | ವಾಸುಕಿ ಶಯನಾವಂತನೇ ಬಾರೋ | ವಾಸುದೇವ ಮುಕುಂದನೆ ಬಾರೋ | ವಾಸ ಮಾಡಿದೆ ಕ್ಷೀರಾಬ್ಧಿಲಿ ಬಾರೊ 1 ಕರಿವರ ಸಂಕಟ ಹರಿಸಿಹ ಬಾರೋ | ಕರುಣಾಕರ ಗೋಪಾಲನೆ ಬಾರೋ | ಕರದಲಿ ಚಕ್ರವ ಪಿಡಿದಿಹ ಬಾರೋ | ಕರಿಚರ್ಮಾಂಬರ ಮಿತ್ರನೆ ಬಾರೋ 2 ಸರಸೀರುಹದಳ ನೇತ್ರನೇ ಬಾರೋ | ಸರಸೀರುಹ ಸಂಭವ ವಂದ್ಯನೇ ಬಾರೋ | ಸರಸಿಜೋವನಾಭನೆ ಬಾರೋ | ಸಾರಥಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಹೃದಯ ಸದನಾ ಮುಖ್ಯ ಪ್ರಾಣ ಪ ಬಾರೋ ಹೃದಯದೊಳು ವಾರಿಜಾಸನ ಪದಏರುವಾತನೆ ದಿವ್ಯ ಕಾರುಣ್ಯ ಸಾಗರ ಅ.ಪ. ಹರಿಭಕ್ತರೊಳು ನೀನು ಹಿರಿಯನೆಂಬುವ ವಾರ್ತೆಪರಿಪರಿ ಕೇಳುತ ಶರಣು ಬಂದೆನೊ ನಿನ್ನ1 ಮಂದಗಮನೆ ಕೊಟ್ಟ ಇಂದ್ರಮಾಣಿಕ ಮಾಲೆಕಂಧರದೊಳಗಿಟ್ಟ ಇಂದ್ರಶಯನ ಪ್ರೀಯಾ 2 ಕಾಳಿ ರಮಣ ಧರ್ಮನಾಳೆ ಎನಲು ಧನ-ನೀಲ ಮಾಣಿಕ್ಯ ಭೂಷಲೋಲ ಭೂಸುರಗಿತ್ತೆ 3 ಮಾಧವನಾಜ್ಞದಿ ಮೇದಿನಿಯೊಳು ಬಂದುಬಾದರಾಯಣ ಮತ ಸಾಧನೆ ಮಾಡಿದ 4 ಪಾದ ಮುಂದೆ ಸೇವಿಸಿ ನಿತ್ಯಾನಂದತೀರ್ಥರೇ ನೀವು ಸಂದೇಹವಿಲ್ಲದೆ 5
--------------
ಇಂದಿರೇಶರು
ಬಾಲಕ ಕಂಡೆನು ನಿನ್ನ | ಬಾಲಕ ಪ. ಬಾಲಕ ಕಂಡೆನು ನಿನ್ನಾ | ಮುದ್ದು ಬಾಲ ತೊಡಿಗೆ ಇಟ್ಟರನ್ನಾ | ಆಹ ಕಾಲ ಕಾಲದ ಪೂಜೆ ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ. ವಸುದೇವ ಕಂದ ಗೋವಿಂದ ವಸುಧಿ ಭಾರವನಿಳುಹೆ ಬಂದಾ | ಪುಟ್ಟ ಹಸುಗಳ ಕಾಯ್ವ ಮುಕುಂದ | ರ ಕ್ಕಸರನೆಲ್ಲರ ತಾನೆ ಕೊಂದಾ | ಆಹಾ ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು ಶಶಿಮುಖಿಯರಮನಕಸಮ ಸಂತಸವಿತ್ತು 1 ವಿಶ್ವವ್ಯಾಪಕನಾದ ಬಾಲಾ | ಸರ್ವ ವಿಶ್ವ ತನ್ನೊಳಗಿಟ್ಟ ಬಾಲಾ | ಸ ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ ಈಶ್ವರ ಸುರ ಪರಿಪಾಲಾ | ಆಹ ವಿಶ್ವ ಪ್ರದೀಪಕ ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2 ಸಿರಿಗರಿಯದ ಗುಣನೀತಾ | ಮತ್ತೆ ಸಿರಿಯ ತನ್ನೊಳಗಿಟ್ಟಾತಾ | ಆ ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ ಸಿರಿಯಿಂದ ಮಾಡಿಸುವಾತಾ | ಆಹ ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3 ಪ್ರಳಯಾಂಬುವಟಪತ್ರ ಶಯನಾ | ಥಳ ಥಳಿಸುವ ಪದತಳ ಅರುಣಾ | ವರ್ಣ ಎಳೆಗೂಸಿನಂತಿಹ ಚಿಣ್ಣಾ | ಆರು ತಿಳಿಯಲಾಗದ ಗುಣಪೂರ್ಣ | ಆಹ ನಳಿನಭವನ ಪೊಕ್ಕಳಲಿ ಪಡದು ತನ್ನ ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4 ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್ ಸುತರ ಪಡೆದಂಥ ಸಂಪನ್ನಾ | ವೇದ ತತಿಗೆ ಶಿಲ್ಕದ ಸುಗುಣಾರ್ಣ | ಅ ದ್ಭುತ ರೂಪ ಜಗದೇಕ ಘನ್ನಾ | ಆಹ ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ ಜತನದಿ ಜಗಜೀವತತಿಗಳ ಕಾಯೂವ 5 ಸುರತತಿಗಳನೆ ನಿರ್ಮೀಸಿ | ಅವರೊಳ್ ತರತಮ ಭೇದ ಕಲ್ಪಿಸಿ | ತನ್ನ ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ ಗರಸನ್ನ ಮಾಡಿ ನೀ ನಿಲಿಸೀ | ಆಹ ಪರಮೇಷ್ಟಿ ಪದವಿತ್ತು ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6 ಸರಿ ಇಲ್ಲ ವಾಯುಗೆಂದೆನಿಸೀ | ತತ್ವ ಸುರರಿಗಧೀಶನೆಂದೆನಿಸೀ | ತನ್ನ ಶರಣರ ಕಾಯ್ವನೆಂದೆನಿಸೀ | ಅವ ನಿರುವಲ್ಲಿ ತಾ ಸಿದ್ಧನೆನಿಸೀ | ಆಹ ತರಣಿಜಗೊಲಿಯುತ್ತ ಕುರುಕುಲವಳಿಯುತ್ತ ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7 ತ್ರಿವಿಧ ಜೀವರಗತಿದಾತಾ | ನಮ್ಮ ಪವನನಂತರ್ಯಾಮಿ ಈತಾ | ಪದ್ಮ ಭವ ರುದ್ರ ತ್ರಿದಶರ ಪ್ರೀತಾ | ಭಕ್ತ ರವಸರಕೊದಗುವ ದಾತಾ ಪವನಜ ಸತಿಭಕ್ತ ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8 ಶೋಣಿತ ನೀಲ ಕಾಯಾ | ದೇವ ಅಕ್ಲೇಶ ಆನಂದಕಾಯಾ | ಯುಗಕೆ ತಕ್ಕಂಥ ವರ್ಣಸುಕಾರ್ಯ | ಮಾಳ್ಪ ರಕ್ಕಸಾಂತಕ ಕವಿಗೇಯಾ | ಆಹ ಪೊಕ್ಕಳ ನಾಡಿಯೊಳ್ ಸಿಕ್ಕುವ ಜ್ಞಾನಿಗೆ ದಕ್ಕುವ ಸುರರಿಗೆ ಠಕ್ಕಿಪ ದನುಜರ 6 ಸಚ್ಚಿದಾನಂದ ಸ್ವರೂಪ | ಭಕ್ತ ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ ಭವ ಕೂಪಾ | ದಲ್ಲಿ ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10 ವಲ್ಲನು ಸಿರಿಸತಿ ಪೂಜೆ | ಮತ್ತೆ ವಲ್ಲನು ಸುರ ಸ್ತುತಿ ಗೋಜೆ | ತಾ ನೊಲ್ಲನು ಮುನಿಗಳ ಓಜೆ | ಹರಿ ವಲ್ಲನು ಋಷಿಯಾಗವ್ಯಾಜೆ | ಆಹ ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11 ಅಂಬುದಿಶಯನ ಶ್ರೀಕಾಂತಾ | ಸರ್ವ ಬಿಂಬನಾಗಿಹ ಮಹಶಾಂತ | ತನ್ನ ನಂಬಿದ ಸುಜನರ ಅಂತಾ | ರಂಗ ಅಂಬುಜ ಮಧ್ಯ ಪೊಳೆವಂಥಾ | ಆಹ ಭಂಜನ ಪಶ್ಚಿ- ಮಾಂಬುಧಿ ತಡಿವಾಸ ಶಂಬರಾರೀಪಿತ12 ಸ್ವಪ್ನದಿ ಗೋಪಿಕರ ತಂದು | ಎನ ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ ದಪ್ಪಾರಭರಣವದೆಂದೂ | ನಾನು ವಪ್ಪದಿರಲು ಎತ್ತೆನೆಂದೂ | ಆಹಾ ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13 ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ ನಾಮಕ ಶಿರಿವರ ಕರುಣಾ | ಪೂರ್ಣ ಹೇಮಾಂಡ ಬಹಿರಾವರ್ಣ | ವ್ಯಾಪ್ತ ಮಾ ಮನೋಹರ ಪ್ರಣವ ವರ್ಣಾ | ಆಹ ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14 ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ ಅದುಭುತ ರೂಪ ತೋರಿಸೀ | ಸ- ನ್ಮುದವಿತ್ತು ಕುರುಕುಲವರಸಿ | ಆಹ ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15 ನಿತ್ಯನೂತನ ದೇವ ದೇವಾ | ಸರ್ವ ಶಕ್ತ ನಿನ್ಹೊರತಾರು ಕಾವಾ | ಎನ್ನ ಚಿತ್ತದಿ ನೆಲಸು ಪ್ರಭಾವಾ | ಸರ್ವ ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16 ಚರಣತಳಾರುಣ ಪ್ರಭೆಯೂ | ಹತ್ತು ನಖ ಪಂಕ್ತಿಯ ಪರಿಯೂ | ಗೆಜ್ಜೆ ಸರಪಳಿ ಪಾಡಗರುಳಿಯೂ | ಮೇಲೆ ಜರೆಯ ಪೀತಾಂಬರ ನೆರಿಗೆಯೂ | ಆಹ ವರ ಜಾನುಜಂಘೆಯು ಕರಿಸೊಂಡಲಿನ ತೊಡೆ ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17 ಸರಸಿಜೋದ್ಭವ ವರಸೂತ್ರ | ಮೇಲೆ ಮೆರೆವಂಥ ಸಿರಿಯ ಮಂದೀರ | ಹೃದಯ ವರರತ್ನ ಪದಕದ ಹಾರ | ಸ್ವಚ್ಛ ದರ ವರ್ಣ ಪೊಲ್ವ ಕಂಧಾರಾ | ಆಹ ಕರದ್ವಯ ಕಂಕಣುಂಗುರ ತೋಳ ಬಾಪುರಿ ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18 ಮೊಸರರ್ಧ ಕಡದಿರೆ ಜನನೀ | ಬಂದು ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ- ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19 ಪದ್ಮ ಮುಖದ ಕಾಂತಿ ಸೊಂಪೂ | ಅಧರ ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ ಕುಂಡಲ ಕೆಂಪೂ | ಆಹ ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20 ಕಮಲಸಂಭವ ವಾಯುಚಲನಾ | ಹುಬ್ಬು ವಿಮಲ ಫಣೆ ತಿಲುಕದಹನಾ | ಮೇಲೆ ಭ್ರಮರ ಕುಂತಳ ಕೇಶ ಚನ್ನಾ | ವಜ್ರ ಅಮಿತ ಸುವರ್ಣ ಮುತ್ತೀನಾ | ಆಹ ಕಮನೀಯ ಮಕುಟವು ಸುಮನಸರೊಂದಿತ ಕಮಲ ತುಳಸಿಹಾರ ವಿಮಲಾಂಗ ಸುಂದರ 21 ಅಂತರ ಬಹಿರ ದಿವ್ಯಾಪ್ತಾ | ಸರ್ವ ರಂತರ ಬಲ್ಲ ನೀ ಗುಪ್ತಾ | ಜೀವ ರಂತರಂಗದಿ ವಾಸ ಸುಪ್ತಾ | ದಿಗ ಳಂತಾನೆ ನಡೆಸುವ ಆತ್ತಾ | ಆಹ ಸಂತತ ಚಿಂತಿಪರಂತರಂಗದಿ ನಿಂತು ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22 ಎಚ್ಚತ್ತು ಇರುವ ಸರ್ವದಾ | ಕಾಲ ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ ನುಚ್ವಾಸದುತ್ಪತ್ತಿಯಾದ | ಬಾಯ ಪಾದ | ಆಹ ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23 ಗೊಲ್ಲರೊಡನಾಟ ಬಯಸೀ | ವಸ್ತು ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ ಚಲ್ವ ಕುದುರೆ ಏರಿ ಚರಿಸೀ | ತಾ ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24 ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ ರೂಪ ಸಜ್ಜನ ಪರಿಪಾಲಾ | ಗುರು ನಿತ್ಯ ನಿರ್ಮಾಲಾ | ದೇವಾ ಗೋಪಾಲಕೃಷ್ಣವಿಠ್ಠಾಲ | ಆಹ ಪರಿ ನಿಂತು ಮ ಕೊಂಡ ಶ್ರೀಪತಿ ಮರುತೇಶ 25
--------------
ಅಂಬಾಬಾಯಿ