ಒಟ್ಟು 1080 ಕಡೆಗಳಲ್ಲಿ , 104 ದಾಸರು , 883 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀಸ ಪದ್ಯ ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ ರಾಘವಾ ಕೈಪಿಡಿದು ಸಲಹನ್ನನು ಪ ಸೀತಾ ಮನೋಹರಾ | ಶ್ರೀ ರಾಮಚಂದಿರಾ ಪಾತಕಾಮೃಗವಳಿದು | ಪರಮಧೀರಾ 1 ಶಬರಿ ಫಲಗಳ ತಿಂದು | ಶಾಶ್ವತಾ ಫಲವಿತ್ತು ಅಗಣಿತಾಗುಣಧಾಮ | ಆನಂದ ರಾಮ 2 ಸೇತು ಮಾರ್ಗದೊಳಿಂದ | ಆತ ರಾವಣನ ಕೊಂದ ಸೀತೆಯನು ತಂದ ಪ್ರಖ್ಯಾತಮಹಿಮಾ 3 ಲೋಕದೊಳು ನೇಮ ನಿನ್ನ | ಪಾಪಹರ ನಾಮ ವಾಲ್ಮೀಕಿ ಜಪಿಸಿದಾ ಶ್ರೀ ರಾಮನಾಮ 4 ಶ್ರೀ ಕಾಂತ ನರಸಿಂಹ ವಿಠಲಾ | ಸ್ವೀಕರಿಸೈಗಂಧವಾದೇವ 5
--------------
ಓರಬಾಯಿ ಲಕ್ಷ್ಮೀದೇವಮ್ಮ
ಸುಖದಕ್ಕಿತೇ | ಸುಖದಕ್ಕಿತು ಗುರುದಯ ಲೆಕ್ಕಾ ಪ ಕಂಡವರ ಮಾತಿಗೆ ಮನವಿಟ್ಟು ಜಗದೊಳು | ಹಿಂಡದೈವಕ ಬಾಯಿದೆರುತ್ತಿದ್ದೆನೆ | ಮಂಡಿಯ ಮ್ಯಾಲೆನ್ನಾ ಕರವಿಟ್ಟು ಹೊಳೆವಾ ಪಿಂಡಾಂಡದಿ ಗಂಡನ ತೋರಿದನಕ್ಕ 1 ಇಲ್ಲೆಂಬ ಸಂಶಯ ಹೋಯಿತು ಒಳಹೊರ | ಗೆಲ್ಲೆಲ್ಲಿ ನೋಡಲು ತಾನಾದನೇ | ಫುಲ್ಲನಾಭನ ಕೂಡಿ ತನುಭಾವ ಮರದು | ಕೈವಲ್ಯ ಮಂದಿರ ಸಾರಿದೆನಕ್ಕಾ 2 ಏನ ಹೇಳಲಿ ಆಡು ತಾಡುತಾ ಯಡಹಿನಿ | ಧಾನವ ಕಂಡಂತಾಯಿತೇ | ಮಾನುಭಾವರಸಾದ ತಂದೆ ಮಹಿಪತಿ | ತಾನೊಲಿದೆನ್ನನುದ್ಧರಿಸಿದನಕ್ಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಸುಮ್ಮನೆ ದೂರುವರೇ ಅಮ್ಮಯ್ಯ ಎನ್ನ ಸುಮ್ಮನೆ ದೂರುವರೇ ಪ ತಮ್ಮಯ ಸರಸಕೆ ಸಮ್ಮತಿ ಕೊಡದಿರೆ ಕಣ್ಮಣಿಯರುಗಳೆಲ್ಲಾ ಅ.ಪ ಕ್ಷೀರಚೋರನೆಂಬೋರೇ ಅಮ್ಮಯ್ಯ ಇವರ ಕೋರಿಕೆ ನಡೆಸದಿರೆ ಕ್ಷೀರ ಸಾಗರಶಾಯಿ ನಾರಾಯಣ ನಾನೆ ಕ್ಷೀರಕೆ ಬಡತನವೇ ಅಮ್ಮಯ್ಯ 1 ತುಂಟನೆಂಬೋರೆ ಎನ್ನ ಅಮ್ಮಯ್ಯ ಇವರ ತಂಟೆ ಏತಕೆ ಎನಗೆ ತುಂಟತನದಿ ಪಾಪ ಗಂಟು ಹೋಯಿತೆ ವೈ ಕುಂಠಪತಿಯೇ ಸಾಕ್ಷಿ ಅಮ್ಮಯ್ಯ 2 ಮಾಯಗಾರನೆಂಬೋರೆ ಅಮ್ಮಯ್ಯ ಎನ್ನ ತೋಯಜಾಕ್ಷಿಯರೆಲ್ಲ ಮಾಯಕೆ ಸಿಲುಕದೆ ಮಾಯೆಗೊಡೆಯನಾಗೆ ಜಾಯಮಾನವಲ್ಲವೇ ಅಮ್ಮಯ್ಯ 3 ಯಾರಿಂದೆನಗೇನೆ ಅಮ್ಮಯ್ಯ ಎನ್ನ ಜಾರನೆಂಬೋರೆ ಎಲ್ಲಾ ಯಾರು ಒಪ್ಪುವರೇ ಕುಮಾರನಲ್ಲವೆ ನಾನು ಮಾರಜನಕ ನಾನೆ ಅಮ್ಮಯ್ಯ 4 ಎನ್ನ ಮಾತನು ಕೇಳೆ ಅಮ್ಮಯ್ಯ ಈಗ ಕನ್ನೆಯರಿಗೆ ಪೇಳೆ ಇನ್ನಾದರು ಇವರು ಅನ್ಯಾಯವ ಬಿಟ್ಟು ಎನ್ನನು ಪೊಗಳಿದರೆ ಅಮ್ಮಯ್ಯ ಪ್ರಸನ್ನನಾಗುವೆನೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ವರ ವಾಣಿರಮಣಗೆ ಶರಣೆಂಬೆ ಸುವ್ವಿ ವರ ವಾಣಿರಮಣಗೆ ಶರಣೆಂದು ಪೇಳಿದ ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ 1 ¥ಕ್ಕಿವಾಹನ್ನ ಜಗಕ್ಕೆ ಮೋಹನ್ನ ರಕ್ಕಸದಾಹನ್ನನಿವ ಸುವ್ವಿ ರಕ್ಕಸದಾಹನ್ನನಿವ ತನ್ನ ಮರೆ- ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ 2 ಯಶೋದೆಯ ಕಂದ ತನ್ನ ವಿಷವನುಣ್ಣೆಂದ ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ 3 ಶಕಟಾಸುರನ್ನ ಮೆಟ್ಟಿ ಕೊಂದ ಬಲು ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ- ಸ್ತಕದಮೇಲೆ ನಲಿವುತ ನಿಂದ ಸುವ್ವಿ4 ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ 5 ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ ಭೃತ್ಯರಿಗೊಲಿದು ವರವಿತ್ತ ಸುವ್ವಿ ಭೃತ್ಯರಿಗೊಲಿದು ವರವಿತ್ತ ತನ್ನ ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ 6 ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ [ಕೊಂದಪೆ]ನೆಂದು ಬಂದ ಬಕನ ಸುವ್ವಿ [ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ ಕೊಂದು ಬಿಸುಟಾನೆ ಸುವ್ವಿ 7 ಕಲ್ಪತರುವಂತೆ ನಮ್ಮ ತನ್ನಧರಿಂದ ಕೊಳಲನೂದುವ ಚೆಲುವಗೆ ಸುವ್ವಿ ಕೊಳಲನೂದುವ ಚೆಲುವ ಗಾನಲೋಲ ಗೋ- ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ 8 ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ ಮಂಗಳ ವಿಲಾಸವನು [ರಚಿಸಿದ]ಸುವ್ವಿ ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ 9 ಮಧುರೆಗೆ ಪೋಗಿ ಮಲ್ಲರಸುವ ನೀಗಿ ಮದಾಂಧ ಮಾವನ್ನ ಮಡುಹಿದ ಸುವ್ವಿ ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ ಮುದದಿ ತನ್ನವರ ಮುದ್ದಿಸಿದ ಸುವ್ವಿ 10 ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ ದುರ್ಮನವ ಬಿಡದೆ ಹರಿಯಲಿಡು ಸುವ್ವಿ ದುರ್ಮನವ ಬಿಡದೆ ಹರಿಯಲಿಡು ಮನವ ಕಾಮಿನಿಯೊಳಾಡಿ ಕೆಡಬೇಡ ಸುವ್ವಿ 11 ದುರುಳರ ನೋಡಿ ದೂರಕ್ಕೋಡು ಹರಿ- ಶರಣಡಿಗೆ ಪೊಡಮಡು ಸುವ್ವಿ ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು- ಚರಿತವ ಪಾಡುವರೊಳಗಾಡು ಸುವ್ವಿ 12 ಏರಲರಿಯದವ ಮರನೇರಿ ಬಿದ್ದು ಸಾವಂತೆ ನೀರ ಮೀನುಗಳು ಕರಗುವಂತೆ ಸುವ್ವಿ ನೀರ ಮೀನುಗಳು ಕರಗುವಂತೆ ಮನುಜ ನೀ ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ 13 ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ 14 ದುರುಳ ಕೀಚಕ ಕೆಟ್ಟ ಪರಧನಕೆ ಮರುಳಾಗಿ ಕುರುರಾಯ ಸುವ್ವಿ ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು ಒರೆವ ಭಾರತವ ನಿರುತ ಕೇಳು ಸುವ್ವಿ 15 ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ ಭೇದವಿಲ್ಲವೆಂಬ ಮತದಲ್ಲಿ ಸುವ್ವಿ ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ ಗೆದ್ದಾನೆಂತು ಬಿದ್ದಾನೆಂತು ಸುವ್ವಿ 16 ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ 17 ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಭೇದ ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ 18 ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ ಪ್ರತ್ಯೇಕ ಜೀವರ ಇರವು ಸುವ್ವಿ 19 ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ- ನ್ನರ್ಥವ ತಾ ಕಾಣಲರಿಯನು ಸುವ್ವಿ ತ- ನ್ನರ್ಥವ ತಾ ಕಾಣಲರಿಯನು ಅದರಿಂದ ನಾ- ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ 20 ಬೊಮ್ಮ ಮಿಥ್ಯವಲ್ಲವೋ ನಿನ್ನ ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ- ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ 21 ಸತ್ತ ಪೆಣನುಂಟು ಸಾಯದ ವಸ್ತುಂಟು ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ [ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ 22 ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ- ಬರ್ಥ ತಾ ಕೂಡಲರಿಯದು ಸುವ್ವಿ ಎಂ- ಬರ್ಥ ತಾ ಕೂಡಲರಿಯದು ಅದರಿಂದ ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ23 ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ 24 ಇಲ್ಲ ಜಗವೆಂಬುದನು ಈಗ ಕಂಡದ ಕಾರಣ ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ [ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ 25 ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ 26 ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ 27 ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ- ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ 28 ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ- ವೇಕಿಗಳೆಲ್ಲ ಬಲ್ಲರು ಸುವ್ವಿ ವಿ- ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ 29 ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ ವೈಕುಂಠದ ವಾಸನೆ ಲೇಸು ಸುವ್ವಿ 30 ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ 31 ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ- ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ 32 ನಗರ ಕೃಷ್ಣಗೆ ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ34 ಇಂತು ಹಯವದನ ನಿಶ್ಚಿಂತ ಜಗತ್ಕಾಂತ ಸಂತರನು ಸದಾ ಸಲಹುವ ಸುವ್ವಿ ಸಂತರನು ಸದಾ ಸಲಹುವ ಮಾರಾಂತರ ಕೃ- ತಾಂತನ ಬಳಿಗೆ ಕಳುಹುವ ಸುವ್ವಿ 35
--------------
ವಾದಿರಾಜ
ಸುಳಾದಿ ತಾಳ-ಝಂಪೆ ನೋಡುವರೆ ನೀರದಶ್ಯಾಮಸುಂದರ ಮೂರ್ತಿ ಪಾಡುವರ ಪರಮಪಾವನ್ನ ಕೀರ್ತಿ ಕೂಡುವರೆ ಕೇವಲಾನಂದ ಚಿನ್ಮಯಗಾತ್ರ ನೀಡುವರೆ ನಿಖಿಳಲೋಕೈಕಪಾತ್ರ ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ ನಾಡದೈವಂಗಳ ಕೊಂಡಾಡಿಸದಲೆ ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ - ಮಾಡಿ ನಮ್ಮನು ಪೊರೆವ ರೂಢಿಗೊಡೆಯ ನಾಡದೈವಂಗಳ ಕೊಂಡಾಡಿಸದಲೆ 1 ತಾಳ-ಮಟ್ಟ ಸಕಲ ಶ್ರುತಿನಿಕರಸಾರಹೋ ಶುಕಮಹಾಮುನೀಂದ್ರ ಸನ್ನುತ ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ ಪ್ರಕಟಮಾಡಲ್ಯಾಕೆ ನಿನ್ನನು ಭಕ್ತವತ್ಸಲನೆಂಬೆನಲ್ಲದೆ ಮುಕುತವಂದ್ಯ ಶ್ರೀದವಿಠಲ ಯುಕುತಾಯುಕುತವೊಂದನರಿಯದೆ ಪ್ರಕಟಮಾಡಲ್ಯಾಕೆ ನಿನ್ನನು 2 ತಾಳ-ತ್ರಿವಿಡಿ ಆಯನುಭವ ಭಯ ಲಯವರ್ಜಿತ ನಯನೋತ್ಸಹಕಾರಕ ತಾರಕ ಜಯಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾÀಟ ಸಯವೇ ಸೈ ಶ್ರೀದವಿಠಲ ನಿ ನ್ನಯ ಚರಣಕೆ ನಮಿಸುವೆ ನಮಿಸುವೆ ಜಯ ಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾಟ 3 ತಾಳ-ಅಟ ಬಾರೋ ಬಾರೋ ಭವದೂರ ದೀನಜನ ಭಾರ ನಿನ್ನದಯ್ಯಾ ಅಯ್ಯಯ್ಯಾ ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4 ತಾಳ-ಆದಿ ಶ್ರೀರಮಣ ಶ್ರೀದವಿಠಲ ಸಂ - ಚಾರು ಚರಣಗಳ ಸಾರಿದೆನೊ ನಿನ್ನ ಶಿರಿಗುರವಿತ್ತೆ ಪರಮನ ಪೆತ್ತೆ ಗಿರಿಜೇಶಗೆ ನಿನ್ನ ಮೈ ಇತ್ತೆ ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ ಸರಿಬಂದರೆ ಸಾಕುವದೆಮ್ಮನು ಶರಣಾಗತವತ್ಸಲ 5 ಜತೆ ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
--------------
ಶ್ರೀದವಿಠಲರು
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು
ಸೂರ್ಯ | ಕಾಯೊಯತಿ ಸತ್ಯ ಧ್ಯಾನಾಖ್ಯವರ್ಯಾ ಪ ಧೃತ - ಕ್ಷಿತಿಯೊಳಗೆ ದುರ್ಮತವ ಖಂಡಿಸಿ | ಅತಿಹಿತದಿ ದ್ವೈತವನೆ ಬೋಧಿಸಿವಿತತ ಹರಿ ಪರನೆಂದು ಸಾಧಿಸಿ | ಮತಿಯ ಮನುಜರ್ಗೊರೆದ ತಾಪಸಿ ಅ.ಪ. ಪಾದ ವನಜಾ |ಸಾಪರೋಕ್ಷೀಕೃತ ಯತಿಜ | ತೋರೊಸುಪಥ ಮುಕ್ತಿಗೆ ಹತ ದಿತಿಜ |ಶ್ರೀ ಪತಿಯ ಚರಣಾಬ್ಜ ಮಧುಪನೆ | ಕೋಪ ಸಲ್ಲದು ಕೃಪೆ ಪಯೋನಿಧಿಪಾಪ ರಹಿತನ ಮಾಡಿಯನ್ನನು | ಪ್ರಾಪಿಸೆನಗೆ ಜ್ಞಾನಖ್ಯ ಸೂರ್ಯನ 1 ಕಾಶಿ ರಾಮೇಶ್ವರ ಕುಂಭ | ಕೋಣದೇಶ ಯಾತ್ರೆಗಳ್ಮಾಡಿ ಡಿಂಬಾ |ಮೀಸಲೆನಿಸಿ ಜಯಸ್ತಂಭಾ | ಹೂಡಿಶ್ರೀಶ ಸರ್ವೋತ್ತಮನೆಂಬಾ ||ಭಾಷೆಯನು ಕೈಗೊಂಡು ಚರಿಸುತ | ಕೃಷಿಯ ಮಾಡಿದೆ ಹರಿಯ ಮತವನುತೋಷಿಸಿದೆ ಸದ್ವೈಷ್ಣ್ವವೃಂದವ | ವಿಶದ ವಿದ್ವತ್ಸಭೆಯ ನೆರೆಸೀ 2 ಚಿತ್ತ ವಿಡುತ ಲಯದಿ ಚಿಂತನಾ | ಸಾರಿಸತ್ಯ ಪಾಂಡುರಂಗ ವಿಠಲನಾ |ಹತ್ತಿರ ಕಿತ್ತೊಗೆದೆ ತನುವಿನ ವರಚೈತ್ರ ಶುಕ್ಲದಿ ಆರೆಡನೆ ದಿಣ |ಕ್ಷಾತ್ರ ತೇಜದಿ ಮೆರೆದೆ ಗುರುವರ | ಕ್ಷಿತಿಯೊಳಗೆ ಸುರಾರು ನಿಮಗೆವಿತತ ಗುರುಗೋವಿಂದ ವಿಠಲನ | ಚಿತ್ತದಲಿ ಸ್ಮರಿಸುತ್ತ ಪೊರಟ 3
--------------
ಗುರುಗೋವಿಂದವಿಠಲರು
ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ ಇಷ್ಟವರನ ಬಂಧದೋಳೆನ್ನ ಸಿಲುಕಿಸಿ ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ 1 ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ ಅನ್ಯವಾರುತಿಗಳು ಚನ್ನಾಗಿ ನುಡಿಸಲು ಅನ್ಯಾಯ ಬಂತೆಂದು ಅವರಂತೆ ನುಡಿದು ನಾ ಮನ್ನದೊಳಗೆ ಮೊರೆ ಇಟ್ಟದನರಿಯಾ 2 ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ ಖಳರು ಅವರು ದೇಶ ಕಾಲವಯ್ಯ ಬಳಿಯಲಿ ನಿನ್ನವರು ಗೂಢ ವೇಷದಿ ತಾವು ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ 3 ಈಗಲೂ ನಿನ್ನ ಬಲಪವನನಾಗಮದಿಂದ ಬ್ಯಾಗನೆ ಖಳರನ್ನ ವರದು ಸವರಿಸೊ ಜಾಗರೂಕನಾಗಿ ಅದೇ ಪದ್ಧತಿ ಪಿಡಿದು ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ4 ಲೇಸಾಗಿ ಬಲವಿತ್ತು ಎನ್ನನು ಕಳಿಸಲು ಆಸು ಅಸುರರನ್ನು ತರದೊಟ್ಟುವೆಯಾ ವಾಸುದೇವವಿಠಲ ನೀ ಕೈಯ್ಯ ಪಿಡಿದರೆ ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ5
--------------
ವ್ಯಾಸತತ್ವಜ್ಞದಾಸರು
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಸೇವಿಸುವೆ ನಿನ್ನನು ಶ್ರೀಪಾದರಾಯ ಪ ಭಾವವಿರತಿ ಕೊಡು ಭಾಗವತಗೇಯಾ ಅ.ಪ ದಾಸಕೂಟವೆಂಬುದ ಧರೆಯೊಳು ನಿಲಿಸಿದೆ 1 ಸುವರ್ಣವರ್ಣತೀರ್ಥಸುತ ಸುಜನಾಪ್ತ ಶ್ರೀವರ ನಾಮಾಮೃತದಾತ ಸುಮಿತ್ರ 2 ಪತಿ ಗುರುರಾಮವಿಠಲಗೆ ಪ್ರಿಯದಾಸ 3
--------------
ಗುರುರಾಮವಿಠಲ
ಸ್ತುತಿಸಿ ಪ್ರಾರ್ಥಿಪೆ ನಿನ್ನನು ಸರಸ್ವತಿ ಸ್ತುತಿಸಿ ನಮಿಪೆ ನಿನ್ನನು ಪ. ಸ್ತುತಿಸಿ ನಮಿಸಿ ನಿನ್ನ ಜತನ ಮಾಡುತ್ತ ವದನದಿ ಸ್ತುತಿಸುವ ಭಾಗವತರನು ತೋರಮ್ಮಾ ಅ.ಪ. ಅಕ್ಷರಕ್ಷರ ರೂಪದಿ ಶ್ರೀಹರಿಯಾ ಅಕ್ಷಯ ನಾಮವನು ಸ್ತುತಿಯ ಮಾಳ್ಪ ಸುಕ್ಷೇಮ ಪಡೆದಿಹ ಮಾತೆ ಸರಸ್ವತಿ ಪ್ರತಿ ಅಕ್ಷರವನು ಅರಿವಾ ಭಾಗ್ಯವ ತೋರೆ 1 ರಾಗರಾಗದಿ ಭಜಿಪೆ ಶ್ರೀ ಹರಿಯಾ ಅನು ರಾಗಕೆ ಪಾತ್ರಳಾಗಿ ವಲಿಸಿಹೆ ಭಾಗವತಾಗ್ರಣಿ ಶ್ರೀಹರಿ ನಾಮವ ಶೀಘ್ರದಿ ಸ್ತುತಿಸುವ ಭಾಗವತರ ತೋರೆಂದು 2 ಅಗಣಿತ ಮಹಿಮೆಯನೂ ಬಲ್ಲವಳು ನೀ ಸುಗುಣಿ ಸರಸ್ವತಿಯೆ ಶ್ರೀ ಶ್ರೀನಿವಾಸನ ಅಗಣಿತ ಗುಣಗಳ ಪೊಗಳುವ ಮತಿಯಿತ್ತು ಅಘಹರ ಹರಿಭಕ್ತರಾ ಲಗುಬಗೆಯಲಿ ತೋರೆ 3
--------------
ಸರಸ್ವತಿ ಬಾಯಿ
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ. ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ 1 ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ 2 ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ 3 ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ 4 ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ 5
--------------
ಗುರುಗೋವಿಂದವಿಠಲರು
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ