ಒಟ್ಟು 217 ಕಡೆಗಳಲ್ಲಿ , 51 ದಾಸರು , 199 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಬೇಡುವೆನೋ ನಿನ್ನ ಸೌಭಾಗ್ಯಸಾಗರ ಶ್ರೀ ಭೂ ನೀಳಾವರ ಭಾಗವತೋದ್ಧಾರ ಪ ಯಾವಾಗಲು ನಿನ್ನ ಬಳಿಯೊಳು ನಾನಿದ್ದು ಭಾವಿಸಿ ಕುಶಲದ ಮಾತನಾಡೀ ದೇವ ನಿನ್ನಯ ಪಾದಯುಗಳವನೊತ್ತುತೆ ಸೇವಿಸಿ ಸುಖಿಪಂತೆ ಕರುಣಿಸು ಮುರಹರ1 ಮುಂಗಡೆ ಕುಣಿ ಕುಣಿದಾಡಿ ಸ್ತೋತ್ರವ ಮಾಡಿ ಕಂಗಳೊಳಾನಂದಭಾಷ್ಪಗೂಡೀ ಅಂಗವ ಮರೆತೆನ್ನ ಕಂಠಗದ್ಗದವಪ್ಪ ಮಂಗಳಕರ ಭಕ್ತಿ ಕೃಪೆ ಮಾಡು ಶ್ರೀರಂಗ 2 ಹೆಜ್ಜಾಜಿಯ ಚೆನ್ನಕೇಶವ ಮಾಧವ ಹೆಜ್ಜೆ ಹೆಜ್ಜೆಗೆ ನಿನ್ನ ಸ್ಮರಣಿಯಿತ್ತು ಸಜ್ಜುಗೊಳಿಸಿ ಎನ್ನ ಹೃದಯಪೀಠದಿ ಕೂಡೊ ಅರ್ಜುನಸಾರಥಿ ಶ್ರೀಕೃಷ್ಣ ಪರಮಾತ್ಮ 3
--------------
ಶಾಮಶರ್ಮರು
ನಾರದ ಮುನಿವರರೆ | ಸದ್ಗುರುವರ ನಾರಾಯಣ ಪ್ರಿಯಶ್ರೀ ಪ ನಾರದ ಮುನಿವರರೆ ನಿಮ್ಮಯ ಚಾರುಚರಣಕೆ ನಮಿಪೆನು ಆ ದ್ವಾರಕಾಪುರನಿಲಯ ಕೃಷ್ಣನ- ಸಾರ ಪೇಳ್ದಿರಿ ಅ.ಪ. ಪರಮ ಸುಂದರ ರೂಪನು | ಆ ಕೃಷ್ಣನು ಪರತರ ಪರಮಾತ್ಮನು ಶರಣಜನ ಮಂದಾರನಾತನು ಕರುಣಶರಧಿಯು ಕಾಮಜನಕನು ಸರಸಿಜೋದ್ಭವ ಸುರರಿಗಧಿಕನು ಹರಿಯು ಇವನೆಂದರುಹಿದಿರಿ ಗುರು 1 ಲೋಕಮೋಹಕನಯ್ಯನು | ಶ್ರೀಕೃಷ್ಣನು ಲೋಕ ವಿಲಕ್ಷಣನು ಲೋಕ ಕಂಟಕರನ್ನು ಶಿಕ್ಷಿಸಿ ನಾಕ ನಿಲಯರ ಭರದಿ ರಕ್ಷಿಸಿ ಲೋಕ ಕಲ್ಯಾಣವನ್ನು ಗೈದ ತ್ರಿ ಲೋಕದೊಡೆಯನೆಂದರುಹಿದಿರಿ ಗುರು 2 ವಿಧಿ ಶುಭರೂಪನ | ಶ್ರೀಕೃಷ್ಣನ ದೇವಾದಿದೇವೇಶನ ಪಾವನಾಂಘ್ರಿಗಳನ್ನು ಪೂಜಿಸಿ ಸೇವಿಸುವ ಸೌಭಾಗ್ಯವೆಂದಿಗೆ ದೇವ ಕರಿಗಿರಿನಿಲಯ ನರಹರಿ ಯಿವನೆಂಬುದನೆನಗೆ ತಿಳುಹಿರಿ 3
--------------
ವರಾವಾಣಿರಾಮರಾಯದಾಸರು
ನಿತ್ಯ ಶುಭಮಂಗಳಮಂ ಪ ಧರೆಯೊಳು ನಿನ್ನಂಥಾ ತರುಣಿ ಮಣಿಯಳಾ ಕಾಣೆಹರಿಯ ವಕ್ಷಸ್ಥಳದಿ ಇರುವೆ ನೀನುಕರವೆತ್ತಿ ಮುಗಿಯುವೆನು ಸಿರಿಯೆ ತವ ಸೌಭಾಗ್ಯಎರಡು ಕಣ್ಣಿಗೆ ತೋರೆ ವರಮಹಾಲಕ್ಷ್ಮಿ1 ಜರದ ಪೀತಾಂಬರವು ಚರಣದೊಳಗಲಿಯುತಲಿಸಿರಿವಂತೆ ಮೂರು ಹೆಜ್ಜೆ ಬರುವಳಾಗಿಸೆರಗೊಡ್ಡಿ ಬೇಡುವೇನು ಹೆರಳಿನಲಿ ಮುಡಿದಿರುವಮರುಗು ಮಲ್ಲಿಗೆ ಚಂಪಕ ಸರಗಳನ್ನು ನೀಡೆ 2 ಇಂದುಮುಖಿ ನಿನ್ನಗಾರ್ತಿಯ ತಂದು ನಿಂದಿಹೆ ನಿಜಸುಂದರಾ ಮೃದು ಕೀರ್ತಿ ಪಾಡುತಿಹೆನೆಚಂದ್ರಶೇಖರ ಸುರರಿಂದ ವಂದಿತ ಚರಣಇಂದಿರೇಶನ ಸಹ ಬಂದಿಲ್ಲೆ ತೋರಿಸುಮುಖ3
--------------
ಇಂದಿರೇಶರು
ನಿನ್ನದೇ ಸಕಲ ಸೌಭಾಗ್ಯ ಸಾಧನವು ಹರಿಯೆ ಪ ನಿನ್ನದೆಂಬಭಿಮಾನ ಲವಲೇಶ ಸಲ್ಲದಯ್ಯಾ ಅ.ಪ. ನಿನ್ನ ಪ್ರೇರಣೆ ಹೊರತು ತೃಣವೊಂದು ಚಲಿಸದು ನಿನ್ನಿಚ್ಛೆಗನುಸಾರ ಸಕಲ ಜಗವು ನಿನ್ನ ಚಿತ್ತಕೆ ಬಾರದಿಹುದೇನು ನಡೆಯುವುದೋ ನಿನ್ನ ನಂಬಿದವರನು ನೀನಾಗೆ ಸಲಹುವೆಯೊ 1 ಸರ್ವತಂತ್ರ ಸ್ವತಂತ್ರ ಸರ್ವಾಂತರಾತ್ಮಕನೆ ಸರ್ವಜಗದಾಧಾರ ಸರ್ವೇಶನೆ ಅಘ ದೂರ ಸರ್ವಕಾಲದಲೆನ್ನ ಗರ್ವರಹಿತನ ಮಾಡೊ 2 ಸತ್ಯಚಿತ್ತನೆ ನಿನ್ನ ಚಿತ್ತವೆನ್ನಯ ಭಾಗ್ಯ ಕರ್ತೃತ್ವದಭಿಮಾನ ಕಳೆದು ಕಾಯೊ ಮತ್ತೇನು ಬೇಡುವೆನು ಪರತಂತ್ರ ನಾನಯ್ಯ ಮುಕ್ತಿದಾಯಕ ಶ್ರೀಶ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನೀನಹುದೋ ಶ್ರೀ ಹರಿ ಮುನಿಜನರ ಸಹಕಾರಿ ಅನಾಥÀರಿಗಾಧಾರಿ ನೀನೆವೆ ಪರೋಪರಿ ಧ್ರುವ ಪತಿತ ಪಾವನ ಪೂರ್ಣ ಅತಿಶಯಾನಂದ ಸುಗುಣ ಸತತ ಸುಪಥ ನಿಧಾನ ಯತಿ ಜನರ ಭೂಷಣ1 ಬಡವರ ನೀ ಸೌಭಾಗ್ಯ ಪಡೆದವರಿಗೆ ನಿಜ ಶ್ಲಾಘ್ಯ ದೃಢ ಭಕ್ತರಿಗೆ ಯೋಗ್ಯ ಕುಡುವದೇ ಸುವೈರಾಗ್ಯ 2 ಭಾಸ್ಕರ ಕೋಟಿ ಲಾವಣ್ಯ ಭಾಸುತಿಹ್ಯ ತಾರ್ಕಣ್ಯ ದಾಸ ಮಹಿಪತಿ ಜನ್ಮ ಧನ್ಯ ಲೇಸುಗೈಸಿದಿ ನಿನ್ನ ಪುಣ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಂಚಮಿಯ ದಿನ ವಿಭವ ನಮ್ಮ ಶ್ರೀನಿವಾಸನ ಮಹಾತ್ಮವ ಮಾನಿನಿ ರನ್ನೆ ನೀ ಪೇಳೆ ಭಕ್ತಾ- ಧೀನದ ಚರಣದ ಲೀಲೆ ಭಾನು ಉದಯದಲಿ ವೀಣಾದಿ ಸು- ಗಾನ ವಾದ್ಯ ನಾನಾವಿಧ ರಭಸದಿ1 ಎತ್ತಲು ನೋಡಿದಡತ್ತ ಜನ- ಮೊತ್ತವಿಲಾಸವಿದೆತ್ತ ಚಿತ್ತದಿ ನಲಿನಲಿದಾಡಿ ತೋಷ- ವೆತ್ತಿರುವನು ಒಟ್ಟುಗೂಡಿ ಸುತ್ತುಮುತ್ತು ಒತ್ತೊತ್ತಿಲಿಹರು ವಿ- ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2 ಚಾಮರ ಛತ್ರ ಸಿಗುರಿಯು ಜನ- ಸ್ತೋಮ ಪತಾಕೆ ತೋರಣವು ಹೇಮದ ಕಂಚುಕಿ ಈಟಿ ಗುಣ- ಧಾಮನ ಬಿರುದುಗಳ್ ಕೋಟಿ ಆ ಮಹಾಭೇರಿ ಪಟಹ ನಿಸ್ಸಾಳಕ ಸಾಮಗಾನ ಸಾಮ್ರಾಜ್ಯವೋಲಿಹುದು3 ಬಾಲರು ವೃದ್ಧ ಯೌವನರು\ಜನ- ಜಾಲವೆಲ್ಲರು ಕೂಡಿಹರು ಲೋಲ ಸ್ರೀಮುಂದ್ರಾಂಕಿತದಿ ಬಹು ವಿ- ಶಾಲ ದ್ವಾದಶನಾಮ ಮುದದಿ ಆಲಯದೊಳಗಿಹ ಬಾಲಕಿಯರು ಸಹ ಸಾಲಂಕೃತ ಸಮ್ಮೇಳದಿ ನಲಿವರು4 ಒಂದು ಭಾಗದಿ ವೇದಘೋಷ ಮ- ತ್ತೊಂದು ಭಾಗದಿ ಜನಘೋಷ ಇಂದಿನ ದಿನದತಿಚೋದ್ಯ ಏ- ನೆಂದು ವರ್ಣಿಸುವದಸಾಧ್ಯ ಚಂದಿರಮುಖಿ ಯಾರೆಂದೆನಗುಸುರೆಲೆ ಮಂದರಧರ ಗೋವಿಂದನ ಮಹಿಮೆಯ5 ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ ಪೇಳಲೇನದಾ ಮೂರ್ಲೋಕದೊಳಗೀ ವಿ- ಶಾಲವ ನಾ ಕಾಣೆಪ. ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ ರಾಜೀವನಾಭನ ಪೂಜಾವಿನೋದದಿ ರಾಜವದನೆ ವನಭೋಜನದಿಂದಿನ1 ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2 ನೂತನವೆಂದು ನೀ ಪೇಳುವಿ ಚಂದಿರ ಮುಖಿ ಜನಸಂದಣಿಗಳು ಮಹಾ ಮಂದಿ ಓಲೈಸುವರಿಂದು ಮುಕುಂದನ3 ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ. ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ ಕಾಣುವ ಯೋಗಭೋಗ1 ಎನಗತಿ ಮನವು ನಿನಗತಿ ಛಲವು ಜನುಮಾಂತರ ಪುಣ್ಯವೈಸೆ ನೀ2 ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ. ಅನವರತದಿಂದ ಬರುವ ಪುರುಷನಲ್ಲ ಮೀನಕೇತನ ಶತರೂಪ ಕಾಣೆ1 ನೂತನ ಪುರುಷನಿವನ್ಯಾರೆಂದರಿಯೆನಮ್ಮಾ ಶಾತಕುಂಭದ ಮಂಟಪವೇರಿ ಬರುವನಮ್ಮಾ2 ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ ತರತರ ರತ್ನವರದ ಬಾಯೊಳಿರುವದಮ್ಮಾ3 ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ ಪರಮ ಪುರುಷನಂತೆ ತೋರುವನು ಅಮ್ಮಾ4 ಬಾಲಾರ್ಕನಂತೆ ಮುಖ ಪ್ರಜ್ವಲಿಪುದು ನೀಲಮಾಣಿಕ್ಯ ಕಾಂತಿಯ ಸೋಲಿಪುದು5 ತೋರಲರಿಯೆ ಕಾಲಿಗೆರಗುವೆನು ಪೇಳಬೇಕು ಸಖಿಯೆ6 ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7 ವರರತ್ನಖಚಿತದಾಭರಣದಿಂದ ಮೆರೆವ ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8 ವಲ್ಲಭೆಯರ ಸಹಿತುಲ್ಲಾಸದಿ ಬರುವ ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9 ಬಲ್ಲಿದ ಪುರುಷನಿವನೆಲ್ಲಿಂದ ಬಂದ ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10 ಊರ್ವಶಿ : ನೋಡು ನಿತ್ಯಾನಂದಕರನ ಮೂಡಗಿರಿಯಿಂದೋಡಿ ಬಂದನ ನೋಡೆಪ. ಛಪ್ಪನ್ನೈವತ್ತಾರು ದೇಶ ಸರ್ಪಶೈಲ ರಾಜವಾಸ ಚಪ್ಪರ ಶ್ರೀ ಶ್ರೀನಿವಾಸ1 ತಿರುಗುತ್ತಿಪ್ಪಾ ತಿರುಮಲೇಶ ಶರಣ ರಾಮನ ಭಕ್ತಿಪಾಶ ದುರುಳಿನಲಿ ನಿಂದಿರ್ಪಶ್ರೀಶ ತರಿಸುವನು ಕಾಣಿಕೆ ವಿಲಾಸ2 ಪಟ್ಟದರಸನಾದ ದೇವ ಸೃಷ್ಟಿಯಾಳುವಜಾನುಭಾವ ದೃಷ್ಟಿಗೋಚರವಾಗಿ ಕಾಯ್ವ ಇಷ್ಟವೆಲ್ಲವ ಸಲಿಸಿ ಕೊಡುವ 3 ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ ವೃಂದ ನೆರಹಿ ವನಕೆ ಅಂದಣವೇರಿ ಮುಕುಂದನೊಲವಿನಲಿ ಕುಂದಣ ಮಂಟಪವೇರಿ ಮತ್ತೊಬ್ಬನು ಸಂದರುಶನವಂ ನೀಡುತ ಯಿಬ್ಬರು ಒಂದಾಗುತ್ತಾನಂದವ ಬೀರುತ್ತ 1 ಅಕ್ಕ ನೀ ನೋಡು ಬಹುಮಾನದಿ ಸಿಕ್ಕಿದಿ ಬಿರುದು ಪೊತ್ತಾ ಉಕ್ಕುವದತಿ ತೋಷ ಸ್ತುತಿಪಾಠಕ ಜನಗಳ ಮಿಕ್ಕಿ ನೊಡುವ ನೋಟಕೆ ಮನಸಿನೊಳು ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2 ಪವಿತ್ರ ನಿಶಾನಿಧಾರಣಾ ಪವಿತ್ರಗೈಯುವ ಕಾರಣ ಮಿತ್ರಮಂಡಳವನು ಮೀರಿ ಪೊಳೆವುತಿಹ ರತ್ನಖಚಿತ ಮಂಟಪದಲಿ ಮಂಡಿಸಿ ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ ಕೀರ್ತಿಯ ಧರಿಸಿ ಜಗತ್ರಯಪಾವನ 3 ನಿಸ್ಸಾಳ ಪಟಹ ಭೂರಿ ಜನ ಜಾಲ ಕೂಡಿರುವ ಮೇಳವಿಸುತ್ತನುಕೂಲಿಸಿ ಬಹು ಬಿರು ದಾಳಿಗೆ ಸಂಭ್ರಮದೇಳಿಗೆಯಿಂದಲಿ ಕೋಲು ಪಿಡಿದು ಓಹೋಯೆಂಬಂಥ ವಿ- ಶಾಲ ಭಕ್ತರ ಮೇಲು ಸಂತೋಷದಿ 4 ದೇಶದೇಶದ ಜನರು ನಾನಾ ವಿಧ &ಟಿ
--------------
ತುಪಾಕಿ ವೆಂಕಟರಮಣಾಚಾರ್ಯ
ಪರಿಪಾಲಿಸು ಎನ್ನನು| ಶ್ರೀ ಜಗದಂಬ| ಪರಿಪಾಲಿಸು ಎನ್ನನು ಪ ಕರುಣಾಶರಧಿ ಶಂಕರಿ| ಕಮಲವ ಸ್ಮರಿಸಿ ಬೇಡುವೆ ಅ.ಪ ರುಧಿರಬೀಜಸಂಹಾರಿಣಿ|| ವಧಿಸಿ ಶುಂಭ ನಿಶುಂಭ ದೈತ್ಯರ|| ಮಹಿಯನು ಪೊರೆದ ಮಾತೆ1 ಲಂಬೋದರ ಜನನಿ| ಶ್ರೀ ಜಗದಂಬ| ಕÀಂಬುಕಂಧರೆ ಸುಗುಣಿ|| ರುದ್ರಾದ್ಯಮರ ವಂದಿತೆ|| ಸುಮನೋಹರೆಯೆ ಶಂಕರಿ2 ಅರುಣಾಸುರನ ವಧಿಸಿ| ಮೆರೆವ ನಂದಿನಿನದಿಯ ಮಧ್ಯದಿ ಲಾಲಿಸಿ ಪೊರೆವ ಜನನಿ 3 ದುಷ್ಟದಾನವ ಮರ್ದಿನಿ|| ನೆಷ್ಟು ಪೊಗಳಿದರೆನಗಸಾಧ್ಯವು|| ಸೌಭಾಗ್ಯದಾಯಿನಿ 4 ಶಂಕರಿ ಘನಸುಗುಣಿ|| ಗೆಲಿದು ಮೆರೆಯುವ|| ಕಿಂಕರನ ಮನದಿಷ್ಟವೀಯುತ 5
--------------
ವೆಂಕಟ್‍ರಾವ್
ಪಾದ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ ಪ ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ 1 ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ 2 ಶ್ರೇಷ್ಠನ್ನ ಮಾಡು ಉತ್ಕøಷ್ಟ ಜ್ಞಾನವನಿತ್ತು ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ3 ಅಜಭವ ಮೊದಲಾದ ದ್ವಿಜರಿಂದ ವಂದಿತಳೆ ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ 4 ದ್ವಿಜರಾಜಗಮನಳೆ ಭುಜಗಶಯನನಾದವಿಜಯವಿಠ್ಠಲನಂಘ್ರಿರಜವ ಧರಿಸುವೆ 5
--------------
ವಿಜಯದಾಸ
ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿಮೇಲಾದ ಕರವೀರವಾಸಿನಿದೇವಿಪ ಬಡಬಡಿಸಿ ಬಂದಿಹೆ ನಾನಿಲ್ಲಿನೋಡಿಕೊಡುವಿ ವರವೆಂದು ಆಸೆಯ ಮಾಡಿಬಿಡಬೇಡ ಮಗನನು ಕರುಣದಿ ನೋಡಿಕೊಡು ನೀ ವರನನು ಸಿರಿಗಳ ನೀಡಿ 1 ಬಡತನದ ಭೂತವ ಎದುರಿಸುವುದು ತಾಯೆತಡೆಯಲಾರೆನು ಇನ್ನು ಕರುಣಿಸಿ ಕಾಯೆಬಿಡದೆ ಭಜಿಪೆ ನಿನ್ನ ಹೇ ಶುಭಕಾಯೆಕೊಡು ನೀ ವರವನು ಧನಗಳನೀಯೆ 2 ಪನ್ನಗ ವೇಣಿನುಡಿಯೆ ಹರಕೆಗಳ ಹೇ ಶುಭವಾಣಿಒಡೆಯ ಗದಗುವೀರ ನಾರಾಯಣನ ಜಾಣಿಕೊಡು ನೀ ವರವನು ವಿಠಲನ ರಾಣಿ 3
--------------
ವೀರನಾರಾಯಣ
ಪಾಲಿಸೊ ಜಗನ್ನಾಥ ದಾಸಾ | ವರ್ಯಕಳೆಯೊ ಯನ್ನ ಕಲಿಕಲ್ಮಷ ಪ ಶೀಲ ಗೋಪಾಲನ ದಾಸಾರ್ಯರ ಕರಜನೆಲಾಲಿಸೋಗುಣನಿಧಿ ಬಾಲನ ಬಿನ್ನಪ ಅ.ಪ. ಹರಿಕಥಾಮೃತ ವಕ್ತಗುರುವೇ | ಕಾಯೊಪರಮ ಭಕ್ತರ ಕಲ್ಪತರುವೆ |ಹರಿಗುರು ಕರುಣ ಸಂಪೂರ್ಣಪಾತ್ರನೆ ಭವಸೆರೆಯ ಬಿಡಿಸಿ ಕಾಯೊ ಪರಮ ಪವಿತ್ರ1 ಅದ್ವೈತ ಗಜಸಿಂಹ 2 ಭವಜಲಧಿ ನವಪೋತ ಹರಿಯಾ | ಗುರುಗೋವಿಂದ ವಿಠಲನ ಪದವಾ |ಅವಿರತ ಹೃದಯದಿ ನೋಡುವ ಸೌಭಾಗ್ಯಜವದಿ ಪಾಲಿಸೊ ಜಗನ್ನಾಥ ದಾಸಾರ್ಯನೆ 3
--------------
ಗುರುಗೋವಿಂದವಿಠಲರು
ಪುಣ್ಯ ಪಡೆಯೆ ನೀನು ಪೂರ್ಣೇಂದುವದನೆ ಪುಣ್ಯ ಪಡೆಯೆ ನೀನು ಪ ಕುಂದಣದಾರತಿ ಬೆಳಗಿ ಅಕ್ಷತೆನಿಟ್ಟು ಆ- ನಂದವಾಗಾಶೀರ್ವಾದ ಮಾಡ್ಹರಸುತಲಿ 1 ಅತಿ ಹರುಷದಿ ಗಂಡು ಸುತರನೆ ಪಡೆದು ನೀ ಪೃಥಿವಿನಾಳೆನುತ ದ್ರೌಪದಿ ಹರಸಿದಳು2 ಅಕ್ಕರದಿಂದ್ಹೆಣ್ಣುಮಕ್ಕಳ ಪಡೆದು ಪ- ಲ್ಲಕ್ಕಿನೇರೆನುತ ದೇವಕ್ಕಿ ಹರಸಿದಳು 3 ಕಟ್ಟಿದ್ದ ಮಾಂಗಲ್ಯ ಕರಿಯ ಕಾಜಿನ ಬಳೆ ಮುತ್ತೈದೆತನಕೆ ಸಾವಿತ್ರಿ ಹರಸಿದಳು 4 ಅನ್ನ ಗೋವ್ಗಳು ಕನ್ಯಾದಾನ ಮಾಡೆನುತ ಸಂ- ಪನ್ನ್ಯಾಗಿರೆನುತ ಅರುಂಧತಿ ಹರಸಿದಳು 5 ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ನೀ ಪಡೆ ಸುಖ ಶ್ರೀಮಹಾಲಕ್ಷ್ಮಿ ಹರಸಿದಳು 6 ಕಾಮಿತ ಫಲ ಇಷ್ಟದಾಯಕನಾದ ಶ್ರೀ ಭೀಮೇಶಕೃಷ್ಣರಾಯನ ಕರುಣದಲಿ 7
--------------
ಹರಪನಹಳ್ಳಿಭೀಮವ್ವ
ಪೋಗಿ ಬರುವೆನು ಎನ್ನ ಮನೆಗೆ ಜಗದೀಶ ಭಾಗವತಪ್ರಿಯ ಭಾಗೀರಥೀಜನಕ ಪ. ವರುಷವರುಷಕೆ ನಿನ್ನ ದರುಶನವನಿತ್ತೆನ್ನ ಕರುಣಿಸೈ ಶೇಷಾದ್ರಿವರ ಶ್ರೀನಿವಾಸ ವರ ಪ್ರಸಾದವನೀಯೊ ಜನ ಮೆಚ್ಚುವಂತೆ 1 ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ ನಿಯಮತಿಯೀಯೊ ನೀರಜನಾಭನೆ ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ2 ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ ಧೀನ ನೀನೆಂಬ ಬಿರುದುಂಟಾದಡೆ ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಸನ್ನ ಶ್ರೀ ಕಲ್ಕಿ ಅಮಿತ ವಿಕ್ರಮ ಕಲ್ಕಿ ಅನಘ ಲಕ್ಷ್ಮೀರಮಣ ಶರಣು ಮಾಂ ಪಾಹಿ ಕೃಷ್ಣ ನರಹರಿ ಕಪಿಲ ತಿಲಕ ವೇಂಕಟರಮಣ ಪ್ರಾಣ ಹೃದ್‍ವನಜಸ್ಥ ರಕ್ಷಮಾಂ ಸತತ ಪ ಶ್ರೀ ದುರ್ಗಾಭೂರಮಣ ವಿಷ್ಣು ರುದ್ರ ಬ್ರಹ್ಮ ಮಾಯಾ ಜಯಾ ಕೃತಿ ಕೂರ್ಮ 1 ಧನ್ವಂತರಿ ಶರಣು ಅಜಿತ ಸ್ತ್ರೀರೂಪನೇ ಘನಭೂಮಿಧರ ನಾರಸಿಂಹ ವಾಮನ ತ್ರಿಪದ ರೇಣುಕಾತ್ಮಜರಾಮ ವೇಣುಗೋಪಾಲ ನಮೋ ಬುದ್ಧ ಸುಜನಪ್ರಿಯ ಕಲ್ಕಿ 2 ವೃಷಭ ತಾಪಸ ಯಜ್ಞ ದತ್ತ ವಡವಾವಕ್ತರ ಕೃಷ್ಣ ಹರಿನಾರಾಯಣ ವೇದವ್ಯಾಸ ಶಿಂಶುಮಾರ ಸುಗುಣಾರ್ಣವನೆ ಶ್ರೀಶ ಸರ್ವಾಶ್ರಯ ಅನಂತ ಸುಖರೂಪ 3 ಭೂಲೋಕದಲಿ ಮಣಿಮಂತಾದಿ ಅಸುರರು ಶೀಲ ಹರಿಭಕ್ತರನ ಕಂಡು ಸಹಿಸದಲೆ ಬಾಲ ಶಶಿಶೇಖರನ ಸ್ತುತಿಸಿ ವರಗಳ ಪಡೆದು ಇಳೆಯಲಿ ಜನಿಸಿದರು ತತ್ವಜ್ಞಾನಿಗಳ ವೋಲ್ 4 ಸೂತ್ರ ವಿರುದ್ಧ ಭಾಷ್ಯಗಳ್ ಮಾಡಿ ವೇದೋಪನಿಷದ್‍ಗಳಿಗೆ ಅಪ ಅರ್ಥ ಪೇಳಿ ಸಾಧುಗಳ ಮನಕೆಡಿಸೆ ಮಧ್ವಾಖ್ಯ ಸೂರ್ಯನು ಉದಿಸಿ ಸಜ್ಜನರ ಹೃತ್ತಿಮಿರ ಕಳೆಯೆ 5 ಶ್ರೀಪತಿ ವಿಷಯಕ ಜ್ಞಾನ ಮರೆ ಮಾಡುವ ಇಪ್ಪತ್ತು ಮೇಲೊಂದು ಅಪದ್ದ ದುರ್ಭಾಷ್ಯ ಅಪವಿತ್ರ ಅಚರಣೆ ದುಸ್ತರ್ಕ ದುರ್ವಾದ ಈ ಪರಿಸ್ಥಿತಿಯ ನೆಟ್ಟಗೆ ಮಾಡಿದಾ ಮಾಧ್ವ 6 ಇಪ್ಪತ್ತಿ(ತ್ತು) ಎರಡನೇ ಭಾಷ್ಯಾ ಸಿದ್ಧಾಂತವ ಉಪನಿಷದ್ ದಶಕಕೆ ಸರಿಯಾದ ಭಾಷ್ಯಗಳ ಸಪ್ತ ತ್ರಿಂಶತ್ ಒಟ್ಟುಗ್ರಂಥ ಸುರಧೇನುವ ಅಪವರ್ಗಾನಂದ ಒದಗಿಸಿದ ಯೋಗ್ಯರಿಗೆ 7 ಸದ್ಧರ್ಮ ಆಚರಣೆ ಯೋಗ್ಯ ಉಪಾಸನಾ ಭಕ್ತಿ ಸವೈರಾಗ್ಯ ಜ್ಞಾನ ಉನ್ನಾಹ ಅಧಿಕಾರಿಗಳು ಈ ಪರಿಯಲಿ ಸುಖಿಸಲು ಕ್ಷಿತಿಯ ಜನರಿಗೆ ಲಭಿಸಿತು ಕ್ಷೇಮ 8 ಕಾಲವು ಜರುಗಿತು ದೈತ್ಯರು ನೋಡಿದರು ಮೆಲ್ಲಮೆಲ್ಲನೆ ಪುನಃ ವಿಷಮ ಮಾಡಿದರು ಶೀಲರ ಹಿಂಸಿಸಿ ಸದ್ಧರ್ಮ ಕೆಡಿಸಿದರು ಖಳರು ಕ್ರೌರ್ಯವ ವರ್ಧಿಸಿದರು ದಿನ ದಿನದಿ 9 ಮಹಾಭಯಂಕರ ದೈತ್ಯ ಸಮೂಹವ ಸಂಹನನ ಮಾಡಿದಳು ಮಹಾದುರ್ಗಾದೇವಿ ಬ್ರಾಹ್ಮಣಕುಲದಲಿ ಪ್ರಾದುರ್ಭವಿಸಿದ ದೇವಿ ಮಹಾದುರ್ಗಾ ಜಗದಾಂಬಾ ಶರಣು ಮಾಂಪಾಹಿ 10 ಮಾಸ ಋತು ವರುಷಗಳು ಕಾಲ ಪ್ರವಹಿಸಿತು ಜನಗಳು ಕಲಿಯುಗದ ಕಡೇ ಭಾಗ ಬರಲಾಗ ಹೀನ ಕರ್ಮಂಗಳಲಿ ಆಸಕ್ತರಾದರು 11 ಪುರಾಣಂಗಳಲಿ ಕಲಿಯಗದ ಸ್ಥಿತಿಗತಿಯು ವಿವರಿಸಿದಂತೆಯೇ ನೆನೆಯಲೂ ಭೀತಿ - ಕರ ಪಾಪಕರ್ಮದಲಿ ಜನರು ರತರಾಗಿರಲು ನರಪರ ಕ್ರೂರತನ ದಿನ ದಿನ ಹೆಚ್ಚಿತು 12 ಜ್ಞಾನಾದಿ ಸಂಪತ್ತು ಕಳಕೊಂಡ ಜನರು ವಿಷ್ಣು ದ್ವೇಷಿಗಳಾಗಿ ಬಹು ಬಹು ನೀಚ- ತನದಲಿ ಇರುತಿರಲು ದೇವತಾವೃಂದವು ನಿನ್ನ ಬೇಡಿದರು ಪುನಃ ಧರ್ಮಸ್ಥಾಪಿಸಲು 13 ಯದಾಯದಾಹಿ ಸದ್ಧರ್ಮಕ್ಕೆ ಹಾನಿಯು ಅಧರ್ಮಕ್ಕೆ ವೃದ್ಧಿಯು ಆಗುವದೋ ಆಗಾಗ ಸಾಧುಗಳ ರಕ್ಷಣೆಗೆ ಪಾಪಿಗಳ ಹನನಕ್ಕೆ ಸದ್ಧರ್ಮ ಸ್ಥಾಪನೆಗೆ ಅವತಾರ ಮಾಳ್ಪಿ 14 ಭೂಮಿಯಲಿ ಸುಪವಿತ್ರ ಶಂಭಳ ಗ್ರಾಮದಲಿ ಬ್ರಾಹ್ಮಣ ಮಹಾತ್ಮ ವಿಷ್ಣು ಯಶಸ್ ಭವನದಲಿ ಅಮಿತ ಪೌರುಷಜ್ಞಾನ ಆನಂದಮಯ ನೀನು ವಿಮಲ ಕಲ್ಕ್ಯವತಾರ ಮಾಡಿದಿ ಮಹೋಜ 15 ಕ ಎಂದರಾನಂದ ಕಲ್ಕೆಂದರೆ ಜ್ಞಾನ ಆನಂದ ರೂಪ ಶೂಲಿ ವಜ್ರಿಗಳಿಗೆ ಸುಖಜ್ಞಾನ ಬಲ ಕೊಡುವ ಠಲಕನಮೋ ಪಾಪಹರ ಸೌಭಾಗ್ಯದಾತ 16 ಲೋಕವಿಲಕ್ಷಣ ಸುಪ್ರಭಾಶ್ವ ಏರಿ ನಿಖಿಳ ದುರ್ಮತಿ ಭೂಪಾಲ ಚೋರರನ್ನ ಅಖಿಳ ಪಾಪಿಗಳ ಅಧರ್ಮ ಆಚರಿಸುವರ ಶ್ರೀಕಾಂತದ್ವೇಷಿಗಳ ಕತ್ತರಿಸಿ ಕೊಂದಿ 17 ಸತ್ಯವ್ರತ ಸುರವೃಂದ ವಸುಮತಿ ಪ್ರಹ್ಲಾದ ಶತಮಖ ಪ್ರಜೆಗಳು ವಿಭೀಷಣ ಸುಗ್ರೀವ ಪಾರ್ಥಸುಧಾಮ ರಕ್ಷಕನೇ ಸುರಬೋಧಕನೇ ಸತ್ಯಧರ್ಮರ ಕಾಯ್ವ ಕರುಣಾಳು ಕಲ್ಕಿ 18 ಜ್ಞಾನಸುಖ ಭೂಮದಿ ಗುಣಪೂರ್ಣ ನಿರ್ದೋಷ ವಿಷ್ಣು ಪರಮಾತ್ಮ ಹರಿ ಉದ್ದಾಮ ಬ್ರಹ್ಮ ಪೂರ್ಣಪ್ರಜ್ಞಾರ ಹೃಸ್ಥ ವನಜಭವಪಿತ ಕಲ್ಕಿ ಪ್ರಸನ್ನ ಶ್ರೀನಿವಾಸ ಶರಣು ಮಾಂಪಾಹಿ 19 -ಇತಿ ಕಲ್ಕ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ನರಸಿಂಹ (ಪ್ರಹ್ಲಾದ ಚರಿತೆ)] ಪ್ರಥಮ ಅಧ್ಯಾಯ - ಹಿರಣ್ಯಕಶಿಪು ಪೂರ್ವ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ತೋಯಸ್ಥ ಪತ್ರಸ್ಥ ತೋಯಜಾಲಯಾ ಸ್ತುತ್ಯ ಅಂಡ ಸ್ರಷ್ಟಾ ಸರ್ವಸ್ಥ ಅಚ್ಯುತಾನಂತ ಗೋವಿಂದ ನೀ ಸಜ್ಜನರ ಭಯ ನಿವಾರಣ ಮಾಳ್ಪಿ ತೋರಿ ಆಗಾಗ 1 ಪ್ರಳಯ ಜಲಚರ ಶೈಲಧರ ಧರೋದ್ಧರ ನಮೋ ಬಾಲಕಗೆ ಒಲಿದು ಬಲಿಯಲಿ ದಾನ ಕೇಳಿ ಖಳ ಕುಪಾಲರ ಸದೆದು ಜಲಧಿಯ ಬಂಧಿಸಿದ ಲಲನೇರ ರಂಜಿತ ಶಿಶು ಶಂಭಳದಿ ತೋರ್ವಿ 2 ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೇ ತಡೆದರು ದ್ವಾರಪಾಲಕರು 3 ಜಯವಿಜಯರೆಂಬ ಆ ದ್ವಾರಪಾಲಕರಿಗೆ0 ಮಾಯೇಶ ಹರಿ ಪ್ರಿಯತರರು ಮುನಿವರರು ಈಯಲು ಶಾಪವ ಆ ವಿಷ್ಣು ಪಾರ್ಶದರು0 ದೈತ್ಯಜನ್ಮವ ಹೊಂದಿದರು ಪತನವಾಗಿ 4 ಸುತಪೋನಿಧಿ ಕಶ್ಯಪ ತೇಜೋಲ್ಬಣದಿಂ ದಿತಿದೇವಿ ಜಠರದಲಿ ವಿಷ್ಣು ಪಾರ್ಶದರು ಪತಿತ ಆ ಜಯ ವಿಜಯರು ಪ್ರವೇಶಿಸಿದರು ದಿತಿ ಹಡೆದಳು ಗಂಡು ಮಕ್ಕಳೀರ್ವರನು 5 ದಿತಿದೇವಿ ಅಗ್ರಸುತ ಹಿರಣ್ಯಕಶಿಪು ಜಯ ದಿತಿ ಅವರಸುತ ವಿಜಯನೇ ಹಿರಣ್ಯಾಕ್ಷ ಉಪಟಳ ಕೊಟ್ಟನು ಈ ಧರೆಯ ಅಬ್ಧಿಯ ಕೆಳಗೆ ಅಡಗಿಸಿದ 6 ಸುರಸುಜನ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಹಿರಣ್ಯಾಕ್ಷನ ಕೊಂದು ಧರೆಯ ಲೀಲೆಯಿಂದ ಮೇಲೆತ್ತಿತಂದಿ ವರಾಹ ಹರಿ ನೀನು 7 ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 -ಇತಿ ಪ್ರಥಮಾಧ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಕಶಿಪು ವರ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಮೂರ್ಜಗದ ದೊರೆ ಹರೇ ನೀ ತನ್ನ ತಮ್ಮನ ಭಂಜಿಸಿದೆ ಎಂದು ಕಡುಕೋಪಗೊಂಡು ದುರ್ಜನ ದಾನವ ವಂದಿತ ಹಿರಣ್ಯಕನು ರಜಸ್ತಮೋಚ್ಛದಿ ದ್ವೇಷ ಮಾಡಿದನು ನಿನ್ನಲ್ಲಿ 1 ಶೂಲದಿಂ ಅಚ್ಯುತನ ಕುತ್ತಿಗೆ ಕತ್ತರಿಸಿ ಗಳರುಧಿರ ತರ್ಪಣ ಕೊಡುವೆ ಎನ್ನುತ್ತ ಖಳ ದೈತ್ಯ ಪ್ರಮುಖರಿಗೆ ಹೇಳಿದನು ವೈಷ್ಣವ ಸ್ಥಳ ದ್ವಿಜ ಗೋ ಭಕ್ತರನ್ನ ತರಿ ಎಂದ 2 ಗರ್ಜಿಸುತ ದೈತ್ಯರು ಪುರ ಗ್ರಾಮ ಆಶ್ರಮ ವ್ರಜಕ್ಷೇತ್ರ ದಹಿಸÀಲು ಹಿರಣ್ಯಕಶಿಪು ಅಜೇಯಾಜರಾಮರತ್ವವ ಅಪ್ರತಿ ಮುಖ್ಯ ರಾಜತ್ವ ಹೊಂದಲು ತಪಸ್ಸು ಮಾಡಿದನು 3 ಊಧ್ರ್ವದಲಿ ಬಾಹುಗಳ ನಭದಲಿ ದೃಷ್ಟಿಯು ಪಾದಾಂಗುಷ್ಟ ಮಾತ್ರದಿ ನಿಂತು ತಪವ ಗೈದನು ಆ ತಪೋಧೂಮಾಗ್ನಿ ಪೀಡಿತ ತ್ರಿದಿವರು ಮೊರೆ ಇಟ್ಟರು ಬ್ರಹ್ಮನಲ್ಲಿ 4 ಪದುಮಭವ ಭೃಗು ದಕ್ಷಾದಿಗಳೊಡೆಯೈದು ದೈತ್ಯೇಶ್ವರ ಹಿರಣ್ಯಕನ ಆಶ್ರಮವ ಭದ್ರಂತೇ ತಪಸಿದ್ಧಿ ಆಯಿತು ವಶೀಕೃತನಾದ ಉತ್ತಿಷ್ಠೋತ್ತಿಷ್ಠ ವರ ಕೊಡುವೆನು ಎಂದ 5 ಬ್ರಹ್ಮನ್ನ ನೋಡಿ ಹಿರಣ್ಯಕನು ಸನ್ನಮಿಸಿ - ಬ್ರಹಾಂತರ್ಗತ ಹರಿ ವಿವಕ್ಷಿತ ಗುಣಗಳ ಬ್ರಹ್ಮ ಹರುಷದಿಂದಲಿ ಸಮ್ಯಕ್ ಕೀರ್ತನೆ ಮಾಡಿ ಆ ಹಂಸವಾಹನನ ವರಗಳ ಬೇಡಿದನು 6 ಸರೋರುಹಾಸನ ಸೃಷ್ಟ ಸರ್ವಭೂತಂಗಳು ಮೃಗ ಪ್ರಾಣ ಉಳ್ಳವು ಇಲ್ಲದವು ಹೊರ ಒಳಗೆ ಭೂಮ್ಯಾಂಬರ ದಿವಾ ರಾತ್ರಿಯು ಸುರಾಸುರ ಮೃತ್ಯು ಮಾ ಭೂನ್ಮ್‍ಮ ಎಂದ 7 ಏಕಪಥ್ಯವು ಅಪ್ರತಿ ಶಕ್ತಿಮತ್ಯವವು ಲೋಕಪಾಲಕರಂತೆ ಬಲವು ಮಹಿಮೆಗಳು ಯೋಗಿ ತಪಸ್ವಿಗಳಂತೆ ಸಿದ್ಧಿಗಳು ಸರ್ವವು ಬೇಕು ತನಗೆಂದು ವರ ಬೇಡಿದ ಬ್ರಹ್ಮನ್ನ 8 ಶತಧೃತಿಯು ಈ ದುರ್ಲಭ ವರಗಳನ್ನಿತ್ತು ತಾ ತೆರಳಿದನು ದೈತ್ಯನಿಂ ಪೂಜೆಗೊಂಡು ಭ್ರಾತೃವಧ ಅನುಸ್ಮರಿಸಿ ಹರಿದ್ವೇಷ ಬೆಳಸಿದನು ಲಬ್ಧವರ ದೈತ್ಯೇಶ ಇನ್ನೂ ಹೆಚ್ಚಾಗಿ 9 ನರಸುರಾಸುರ ಋಷಿ ಗರುಡೋರಗ ಸಿದ್ಧ ಚಾರಣ ವಿದ್ಯಾಧರ ಯಕ್ಷ ಗಂಧರ್ವ ಪಿತೃ ಪ್ರೇತ ಭೂತಪತಿ ರಾಕ್ಷಸ ಪಿಶಾಚೇಶ ಸರ್ವರನು ಜೈಸಿ ತನ್ನವಶ ಮಾಡಿಕೊಂಡ 10 ಮೂರ್ಲೋಕಂಗಳಲ್ಲಿ ದಶದಿಕ್ಕುಗಳಲ್ಲಿ ಈ ಹಿರಣ್ಯಕಶಿಪು ತನ್ನ ಜಯಭೇರಿ ಹೊಡೆದ ಸರ್ವಲೋಕಪಾಲರ ತೇಜಃಸ್ಥಾನಗಳ ಅಪ - ಹರಿಸಿ ತ್ರಿವಿಷ್ಟಪ ಭೋಗದಲಿ ಮನಸ್ಸಿಟ್ಟ 11 ಅಜಿತೇಂದ್ರಿಯ ಹೇಯ ಭೋಗರತ ಅಹಂಕಾರಿ ಮೂರ್ಜಗಾರಿಯು ಧರ್ಮ ಆಚಾರ ದ್ವೇಷಿ ನಿರ್ಜರರು ಅವನಿಂದ ಹಿಂಸೆ ತಾಳದೆ ವಿಷ್ಣೋ ತ್ರಿಜಗದೀಶನೇ ಮೊರೆ ಹೊಕ್ಕರು ನಿನ್ನಲ್ಲಿ 12 ಅಚ್ಯುತ ಈಶ್ವರ ನಿನ್ನ ಭದ್ರವಾಣಿ ಅಭಯ ಹೊಂದಿ ಸುರವರರು ನಿರೀಕ್ಷಿಸಿದರು ಪ್ರಶಾಂತ ಮಹಾತ್ಮಾ ನಿರ್ವೈರ ಪ್ರಹ್ಲಾದ ಹುಟ್ಟುವ ಕಾಲವನು 13 ಜಯತು ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 13 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ - ತೃತೀಯ ಅಧ್ಯಾಯ - ಬಾಲಕ ಪ್ರಹ್ಲಾದ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಯುಕ್ತ ಕಾಲದಿ ಹೇಮಕಶಿಪುಗೆ ಐದು ಮಕ್ಕಳು ಹುಟ್ಟಿದರು ನಾಲ್ವರು ಗಂಡು ಮಕ್ಕಳು ನಾಲ್ವರಲ್ಲಿ ಪ್ರವರ ಪ್ರಹ್ಲಾದನು ಅಕಳಂಕ ಗುಣಶ್ರೇಷ್ಠ ಮಹದುಪಾಸಕನು 1 ಸತ್ಯಸಂಧನು ಶೀಲಸಂಪನ್ನ ಬ್ರಹ್ಮಣ್ಯ ಜಿತೇಂದ್ರಿಯ ಸಮದರ್ಶಿ ಆರ್ಯರ ವಿಧೇಯ ಸ್ನಿಗ್ಧರಿಗೆ ಭ್ರಾತೃವತ್ ಯಥಾದೇವೋ ತಥಾಗುರೋ ಭೂತಪ್ರಿಯ ಸುಹೃತ್ತಮ ದೀನವತ್ಸಲನು 2 ವಿಧ್ಯಾರ್ಥಿ ರೂಪಾದಿಗಳ ಗರ್ವ ಇವಗಿಲ್ಲ ಶ್ರುತ ದೃಷ್ಟ ವಿಷಯದಲಿ ಗುಣಗ್ರಾಹಿಯು ಶಾಂತನು ದಾಂತನು ಸಾಧುಗಳಲಿ ಪ್ರಿಯ ಸದಾ ಸ್ವಭಾವದಿ ಶ್ರೀ ವಿಷ್ಣುಭಕ್ತಿ 3 ವಾಸುದೇವ ನಿನ್ನಲ್ಲೇ ಸರ್ವದಾ ಮನವನು ನೆಲಸಿ ಈ ಬಾಲ ಸರ್ವ ನಡೆನುಡಿ ಊಟ ಶಯನ ಪರ್ಯಟನ ಸರ್ವಾವಸ್ಥೆಯಲೂ ನಿನ್ನ ಸ್ಮರಿಸುವನು 4 ಅಂಬುಜೋದ್ಭವ ತ್ರ್ಯಿಂಬಕ ಮುಖ್ಯವಿನುತ ನಿನ್ನ ಅಂಬುಜಾಂಘ್ರಿಗಳನ್ನ ಧ್ಯಾನಿಪ ಈ ಬಾಲಕನ ಅಂಬಕದಿ ಸುಜ್ಞಾನ ಭಕ್ತಿ ಪುಳಕಾಂಬುವು ತುಂಬಿ ತುಳುಕಾಡುವುದು ಕಂಡಿಹರು ಅಂದು 5 ಒಮ್ಮೆ ನಗುವನು ಒಮ್ಮೆ ರೋದಿಸುವನು ಒಮ್ಮೆ ಸುಮ್ಮನಿರುವ ಹರಿ ಪ್ರೇಮಾನಂದದಲಿ ಅಮ್ಮಮ್ಮ ಭಕ್ತಿಯಲಿ ಕೂಗಿ ಕುಣಿವನು ಮಹಾನ್ ರಮೆಯರಸ ನಿನ್ನ ದಾಸಾಗ್ರಣಿಯು ಪ್ರಹ್ಲಾದ 6 ಮಹಾತ್ಮನು ಮಹಾಭಾಗ ಮಹಾಭಾಗವತನು ಮಹಾಕಾರುಣಿಕ ಪ್ರಹ್ಲಾದಗೆರಗುವೆನು ಅಹರ್ನಿಶಿ ಧೃತಿಸ್ಥ ಹರಿ ನಿನ್ನಲ್ಲಿ ಭಕ್ತಿ ಇಹಪರದಿ ಸೌಭಾಗ್ಯ ಎಮಗೀಯಲೆಂದು 7 ಜಯ ಗುಣಾರ್ಣವ ಭೂಮನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 - ಇತಿ ತೃತಿಯಾ ಅಧ್ಯಾಯ ಸಂಪೂರ್ಣಂ - ಚತುರ್ಥ ಅಧ್ಯಾಯ ಪ್ರಹ್ಲಾದರ ವಿಧ್ಯಾಭ್ಯಾಸ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ದೈತ್ಯರಾಜನು ಪ್ರಿಯಪುತ್ರ ಪ್ರಹ್ಲಾದನಿಗೆ ವಿದ್ಯೆಕಲಿಸಲು ಶಂಡಾಮರ್ಕರು ಎಂಬ ಬೋಧಕರ ಏರ್ಪಾಡು ಮಾಡಿಸಲು ಆ ಮಹಾನ್ ಇತರ ಬಾಲಕರೊಡೆ ಕೂಡಿ ಓದಿದನು 1 ವಿದ್ಯೆ ಕಲಿಯುವಾಗ ಇತರ ಬಾಲರ ಮೀರಿ ಪ್ರತಿಭೆ ತೋರಿಸಿದನು ಬಾಲಪ್ರಹ್ಲಾದ ಕೇಳ್ದ ಕಲಿತದೆÀ್ದಲ್ಲಿ ಸಾಧು ಹೇಳೆಂದು 2 ಸಂಸಾರಿ ಜೀವರುಗಳು ಸದಾ ಐಹಿಕ ನಿಸ್ಸಾರ ವಿಷಯಂಗಳಲ್ಲಿ ಮುಳುಗಿ ತಮಃಸಿಲಿ ಬೀಳದಿರೆ ಸಾಧು ಜನಸಂಗ ಶ್ರೀಶ ಹರಿ ಸರ್ವವಂದ್ಯನ ಆಶ್ರಯಿಪುದು 3 ಹೀಗೆ ಪ್ರಹ್ಲಾದ ಪೇಳಲು ಹಿರಣ್ಯಕ ಕೇಳಿ ಪರ ಬೋಧಿತನಾಗಿಹನೆಂದು ನೆನೆದು ಶುಕ್ರ ಸುತರು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಕ್ಕ ವಿಧದಲಿ ಬುದ್ಧಿ ತಿದ್ದಿಸುವುದು ಎಂದ 4 ಗುರುಗಳು ಮನೆಯಲ್ಲಿ ಒಳ್ಳೆಮಾತಿಂದಲಿ ಪರಕೃತವೋ ಸ್ವತಃ ಕೃತವೋ ಈ ಹರಿಪಕ್ಷಬುದ್ದಿ ಅನೃತವಾಡದೆ ಸತ್ಯ ಪೇಳೆಂದು ಕೇಳಿದರು ಭಾಗವತ ಪ್ರಹ್ಲಾದ ಬಾಲನ್ನ 5 ಸತ್ತಾ ಪ್ರವೃತ್ತಿ ಪ್ರತೀತ್ಯಾದಿಪ್ರದ ಸರ್ವ - ಚಕ್ರಧರ ವಿಷ್ಣು ವಿಧಿ ಶಿವಾದೀಡ್ಯನಲಿ ರತತಾನು ಕಾಂತವು ಅಯಸ್ಸನ್ನು ಸೆಳೆವಂತೆ ಎಂದು 6
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು