ಒಟ್ಟು 171 ಕಡೆಗಳಲ್ಲಿ , 40 ದಾಸರು , 155 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣನಲ್ಲದಿಲ್ಲ ಜಗದಿ ಪ ನಾರಾಯಣನೆ ವಾರಿಶಾಯಿಯಾದ ಮೇಲೆ ವಾರಿಸಂಪರ್ಕವಿಲ್ಲದ ವಸ್ತುವುಂಟೆಅ.ಪ ತೃಣ ಲತೆ ತರು ವನಸ್ಪತಿ ಸಂತತಿಯೊಳೆಲ್ಲ ಗಣನೆಯಿಲ್ಲದ ಪ್ರಾಣಿವರ್ಗದೊಳೆಲ್ಲ ಅಣುಮಹತ್ತೆನಿಪ ಚರಾಚರಗಳೊಳೆಲ್ಲ ಅಣಗಿ ಪೋಷಿಪ ರಸ ವಾರಿಯಾದ ಮೇಲೆ 1 ಧರೆಯೊಳಗಡಗಿಹ ಧಾತುಜಾಲವ ಕರಗಿಸಿ ನೆರೆ ವನಸ್ಪತಿವರ್ಗಕೆ ಉಣಿಸನಿತ್ತು ಪರಿ ಧಾನ್ಯ ಫಲಂಗಳ ರಚಿಸುತ್ತ ಹರಹಿ ಲೋಕದೊಳೆಲ್ಲರನು ಪೋಷಿಪ ಪ್ರಭು 2 ಒಂದೇ ಸ್ಥಳದಲಿ ಮೊಳೆತು ಬೆಳೆವ ಬೀಜಕ್ಕೆಲ್ಲ ಒಂದೇ ವಾಸನೆ ಗುಣ ರುಚಿಗಳುಂಟೇ ಸಂದೇಹ ಬೇಡ ನಿರ್ಲಿಪ್ತ ತಾನವುಗಳ ಕುಂದಿಸದೆ ಗುಣ ಸ್ವಭಾವಗಳ ಪೋಷಿಸುವ 3 ಸರ್ವವಸ್ತುಗಳಲ್ಲು ಅಂತರ್ಯಾಮಿಯಾಗಿ ಸರ್ವ ಚರಾಚರಕೆ ನಿಯಾಮಕನಾಗಿ ಸರ್ವರೊಳಡಗಿ ಪೋಷಿಪ ಘನಪ್ರಭುವಾಗಿ ಸರ್ವರುತ್ಪತ್ತಿ ಸ್ಥಿತಿಗೆ ಕಾರಣನಹ 4 ಪರಮಪುರುಷ ತನ್ನನಂತ ಮಹಿಮೆಯೊಳು ಕಿರಿದೊಂದಂಶದಿ ವಾರಿರೂಪದೊಳಿಂತು ಸರುವ ಚರಾಚರದಿರುತಂತರ್ಗತನಾಗಿಪೊರೆವ ಜನವ ರಘುರಾಮವಿಠಲ ಪ್ರಭು 5
--------------
ರಘುರಾಮವಿಠಲದಾಸರು
ನಾರಾಯಣಾ ಹರಿನಾರಾಯಣಾ ಕೃಷ್ಣಾ ನಾರಾಯಣಾ ಸ್ವಾಮಿ ನಾರಾಯಣಾ 1 ಅಚ್ಯುತಾನಂತ ಗೋವಿಂದ ಪರಬ್ರಹ್ಮ ಸಚ್ಚಿದಾನಂದ ಶ್ರೀ ನಾರಾಯಣಾ 2 ಭಕ್ತವತ್ಸಲ ದೇವಾ ಪಂಡವಾಪಕ್ಷಕಾ ಮುಕ್ತಿ ದಾಯಕ ಶ್ರೀ ನಾರಾಯಣಾ 3 ನಂದನಂದನ ಆನಂದ ಶಂಕರ ಪ್ರೀಯಾ ವಂದಿತಾ ಮುನಿಜನರ ನಾರಾಯಣ 4 ಇಂದಿರಾರಮಣ ಮುಕುಂದ ಮುರಹರಿ ಮಂದರಧರ ಹರಿನಾರಾಯಣ 5 ದ್ರೌಪದಿ ರಕ್ಷಕಾ ದಾನವಾ ಶಿಕ್ಷಕಾ ಕವಿಜನ ಪೋಷಕ ನಾರಾಯಣಾ 6 ರಾವಣ ಮರ್ದನಾ ಆಜೀವಲೋಚನಾ ಯದುಕುಲಾಬ್ದಿ ಚಂದ್ರ ನಾರಾಯಣಾ 7 ಅಕ್ರೂರವರದಾ ನಿಜಾನಂದ ಮೂರುತಿ ಚಕ್ರಧರ ಹರಿ ನಾರಾಯಣಾ 8 ಭವ ನಾಯಕ ವಿಷ್ಣು ನಾರಾಯಣಾ 9 ಗಂಗಜನಕ ದೇವೋತ್ತುಂಗ ಮಹಾನುಭಾವ ಶೃಂಗಾರ ಮೂರುತಿ ನಾರಾಯಣಾ 10 ಅಂಬುಜಾದಳ ನೇತ್ರಾ ಅಜಮಿಳಾರಕ್ಷಕ ಪತಿ ನಾರಾಯಣ 11 ಪಕ್ಷಿವಾಹನ ಜಗದೃಕ್ಷಾ ಸುಲಕ್ಷಣಾ ಲಕ್ಷ್ಮೀರಮಣ ಶ್ರೀ ನಾರಾಯಣಾ 12 ಕಮಲಸಂಭವಪಿತಾ ಕರುಣಪಯೋನಿಧಿ ಅಮಿತ ಪರಾಕ್ರಮ ನಾರಾಯಣಾ 13 ಮೂರ್ತಿ ಪೂಜಿತ ಸರ್ವತ್ರಾ ಪೂತನ ಸಂಹಾರ ನಾರಾಯಣಾ 14 ದಿನಕರಾ ಕುಲದೀಪಾ ದೀನ ದಯಾಪರ ಅನಿಮಿತ್ತ ಬಂಧು ದೇವಾ ನಾರಾಯಣಾ 15 ಕಾಲಿಯಾ ಮರ್ದನಾ ಗಂಗಾಧರಾರ್ಚಿತ ಕಲ್ಮಷರಹಿತ ಶ್ರೀನಾರಾಯಣಾ 16 ಪಾಲಿತಾ ಸುರಮುನಿ ಪಾಪವಿನಾಶನಾ ವಾಲಿ ಸಂಹಾರಕಾ ನಾರಾಯಣ 17 ದಶರಥನಂದನ ಧರಣಿರಕ್ಷಕಾ ಲವ ಕುಶಪಿತಾ ಶ್ರೀಹರಿನಾರಾಯಣಾ 18 ವೇದಗೋಚರ ನಿಗಮಾಗಮ ವೇದ್ಯ ಸು- ನಾದ ವಿನೋದ ಶ್ರೀನಾರಾಯಣ 19 ಕೋಟಿದರ್ಪಕ ರೂಪಲಾವಣ್ಯ ಭಕ್ತ ಸಂಕಟ ಪರಿಹಾರ ನಾರಾಯಣಾ 20 ವಾರಿಧಿ ಬಂಧನಾ ವನಚರ ಪಾಲನಾ ವೈಕುಂಠ ಶ್ರೀನಾರಾಯಣಾ 21 ಗಜರಾಜ ವರದಾ ಕಾಮಿತಫಲದಾಯಕಾ ಅಜಭವ ಪೂಜಿತಾ ನಾರಾಯಣಾ 22 ಸಾಧುಜನ ಪ್ರಿಯಾ ಸಾಮಗಾನವೇಣು ನಾದ ಲೋಲ ಕೃಷ್ಣ ನಾರಾಯಣಾ 23 ಯಾದವ ಕುಲದೀಪಾ ಯಶೋದಾನಂದನಾ ಯಜ್ಞರಕ್ಷಕಾ ಹರಿನಾರಾಯಣಾ 24 ಕೇಶವಾ ಮಾಧವಾ ಕೃಷ್ಣ ದಾಮೋದರಾ ವಾಸುದೇವ ಹರಿನಾರಾಯಣ 25 ಸುಂದರ ವಿಗ್ರಹಾಸುಗುಣ ವಿಲಾಸ ಆನಂದ ನಿಲಯಾ ಹರಿನಾರಾಯಣಾ 26 ವ್ಯಾಸಾಂಬರೀಷ ವಾಲ್ಮೀಕ ನಾರದಾ ಪಾರಾಶರ ವಂದಿತ ನಾರಾಯಣ 27 ದೋಷದೂರಾ ನಿರ್ದೋಷಾ ಪರಮಪುರಷ ಪೋಷಿತ ಜಗತ್ರಯ ನಾರಾಯಣಾ 28 ಮಕರಕುಂಡಲಧರಾ ಮಹಿಮಾ ಚರಾಚರಾ ಸಕಲಂತರ್ಯಾಮಿ ನಾರಾಯಣ 29 ಲೋಕನಾಯಕಾ ವಿಲಾಸ ಮೂರುತಿ ತ್ರೀಲೋಕ ವಂದ್ಯ ಹರಿನಾರಾಯಣಾ 30 ವಿಶ್ವವ್ಯಾಪಕಾ ಘನ ವಿಶ್ವರೂಪಾ ಮಹಾ ವಿಶ್ವೇಶ್ವರಾ ಹರಿನಾರಾಯಣಾ 31 ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ದೇವ ಸಕಲ ಕರ್ತ ನೀನೆ ನಾರಾಯಣಾ 32 ಆಪನ್ನ `ಹೆನ್ನೆ ವಿಠ್ಠಲ ' ನಾರಾಯಣಾ 33
--------------
ಹೆನ್ನೆರಂಗದಾಸರು
ನಿಗಮ ಗೋಚರ ಸಿರಿರಮಣಾ ಪ ವಾಚಾಮಗೋಚರ ಕಂಜ ಲೋಚನ ಗುಣ ಪೂರ್ಣಾ ಅ.ಪ ಪರಮ ಪವಿತ್ರ ಸಕಲಗುಣಭರಿತ ಜಗತ್ಪ್ರಭುವೇ ನರಸುರ ಗರುಡೊರಗ ಕಿನ್ನರರೊಳು ನೀನಿರುವೆ 1 ಪಾವನ ಸುಜನಾ ವನಜಗ ಜೀವನ ಮಮಸ್ವಾಮಿ ಸಾವಧಾನದೊಳೆನ್ನ ಮೊರೆ ಕೇಳ್ ಸರ್ವಾಂತರ್ಯಾಮಿ 2 ಗುರುರಾಮ ವಿಠಲ ನಿಜ ಭಕ್ತರಿಗೆ ಕಾಮಧೇನು 3
--------------
ಗುರುರಾಮವಿಠಲ
ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ನಿನ್ನ ದಾಸಾನುದಾಸನು ನಾ ಸುಪ್ರ- ಸನ್ನಾತ್ಮ ನಿಗಮಸನ್ನುತನೆ ಪ. ಎನ್ನನಂತಪರಾಧಗಳ ಕ್ಷಮಿಸು ಪೂರ್ಣೇಂದುವಕ್ತ್ರ ಪನ್ನಗಶಯನಅ.ಪ. ಸಂತಾಪಘ್ನಾನಂತಮಹಿಮ ಜಗ- ದಂತರ್ಯಾಮಿ ಪರಂತಪನೆ ಮಂತ್ರಾತ್ಮ ರಮಾಕಾಂತ ಕಲಿಮಲ- ಧ್ವಾಂತ ಧ್ವಂಸನಾಚಿಂತ್ಯ ಸ್ವತಂತ್ರನೆ 1 ಬಟ್ಟೆಯೊಳ್ ಕೆಂಡವ ಕಟ್ಟಿ ಸ್ವಗೃಹದಿ ಬ- ಚ್ಚಿಟ್ಟಂತೆ ಕಾರ್ಯ ದುಷ್ಟರದು ಪರಮೇಷ್ಠಿ ಜನಕ ನಿನ್ನ ಭ್ರಷ್ಟರಾಚರಣೆಗೆಷ್ಟೆಂಬುವದ್ಯೆ 2 ಏಳೆರಡು ಲೋಕಪಾಲಕರು ಸರ್ವ ರೂಳಿಗದ ಜನರು ಮೂಲೇಶ ಶ್ರೀಲಕ್ಷ್ಮೀನಾರಾಯಣ ನಿರ್ಗುಣ ಕಾಲನಿಯಾಮಕ ದೈತ್ಯಾಂತಕ ಜಯ3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ ಮನ್ನಿಸಿ ಕೃಪೆಯ ಮಾಡೊ ಪ. ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ. ರಜತಪೀಠಾಪುರದಿ ರಮ್ಯ ಮಂದಿರದಲ್ಲಿ ರಾಜಿಸುತ್ತಿಹ ದೇವನೆ ಕುಜನಮರ್ಧನ ಎನ್ನ ರಜ ತಮೋಗುಣ ಕಳದು ನಿಜಭಕ್ತರೊಡನಾಡಿಸಿ ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು ನಿಜರೂಪ ನೋಡುವಂತೆ ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ ಭಜಿಸಲ್ಯಾತಕೆ ನಿನ್ನನು ದೇವ 1 ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ ನೀತ ಗುರುದ್ವಾರದಿಂದ ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ ಪ್ರೀತನಾಗಿ ಕಾಯೋ ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ ಘಾತಿಗೊಳಿಸುವರೆ ಹೀಗೆ ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ ಸೋತು ಬಂದಿಹೆನೊ ಭವದಿ ಮನದಿ 2 ಸತ್ಯಸಂಕಲ್ಪ ನೀನಾದಡೆ ಎನಗಿನ್ನು ಅತ್ಯಧಿಕ ರೂಪ ತೋರೊ ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು ಎತ್ತ ಪೋದರು ಬಿಡದೆಲೊ ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು ಮತ್ತೆ ಕರುಣವಿಲ್ಲವೆ ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ ಚಿತ್ತಕ್ಕೆ ತಂದು ಕಾಯೊ ಕೃಷ್ಣ 3 ಆನಂದಮುನಿವರದ ಆನಂದ ಕಂದನೆ ಆನಂದನಿಲಯವಾಸ ಆನಂದರತ್ನಪ್ರಭಾದಿಂದ ರಾಜಿತನೆ ಆನಂದಮೂರ್ತಿ ಕೃಷ್ಣ ಆನಂದಗೋಕುಲದಿ ಆನಂದದಲಿ ಮೆರೆದು ಆನಂದ ಸುಜನಕಿತ್ತೆ ನೀನಿಂದು ಎನ್ನ ಮನಕೆ ಆನಂದವನೆ ಇತ್ತು ಆನಂದರೂಪ ತೋರೊ ಕೃಷ್ಣ 4 ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು ಪೊರೆವರಿನ್ಯಾರು ಜಗದಿ ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ ಗುರುಗಳಂತರ್ಯಾಮಿಯೆ ಸರ್ವನಿಯಾಮಕ ಸರ್ವವ್ಯಾಪಕನೆಂಬ ಬಿರುದು ಪೊತ್ತಿಲ್ಲವೇನೊ ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ ಪರಿಪರಿಯ ರೂಪ ತೋರೊ ಕೃಷ್ಣ 5
--------------
ಅಂಬಾಬಾಯಿ
ನೊಂದು ಸಂಸಾರದೊಳಗೊಂದಿಸುವೆನೋ ಇಂದು ಮಾಧವ ಯಾದವ ಪ ಕರುಣಬಾರದೆ ನಿನಗೆ ಅಕಟಕಟ ಅಕಟಕಟ ಶರಣ ನಾ ನಿನಗಲ್ಲವೇ ಸ್ವಾಮಿ ನಿನ್ನ ಮೊರೆಹೊಕ್ಕೆ ಸರ್ವಾಂತರ್ಯಾಮಿ-ಎನ್ನ ಎರವು ಮಾಡುವರೇನೋ ಪ್ರೇಮಿ-ಇನ್ನು ಪರಿಹರಿಸು ಸಂಚಿತಾಗಾಮಿ-ಇದೇ ಸರಿಯೇನೊ ಜಗದೊಳಗೆ ಭಕುತವತ್ಸಲನೆಂಬ ಬಿರುದು ಪೊಳ್ಳಾಗದೇನೊ ನಿರುತ ಖ್ಯಾತ1 ಸತತ ಸುಖವುಳ್ಳರೆ ಬಾಯ್ದೆರೆದು ಪಲ್ಗಿರಿದು ನುತಿಸಿ ಬೇಡಿಕೊಂಬೆನೇ ನಿನ್ನ- ಮುಂದೆ ಗತಿಯ ಕಾಣದಲೆ ಚಾಲ್ವರಿದೆ ಭೇದ- ಮತಿ ಕೊಡದೆ ನೋಡುವುದು ಬರಿದೆ-ಸರ್ವ ಕ್ಷಿತಿಯೊಳಗೆ ನೀನೆಂದು ಅರಿದೆ-ವರ- ತತುವ ನಿಯ್ಯಾಮಕರ ಬಳಿ ಪಿಡಿದು ನಿನ್ನಂಘ್ರಿ ಶತಪತ್ರ ತೋರಿಸೈಯ್ಯಾ ಜೀಯಾ 2 ಶೃತಿಶಾಸ್ತ್ರ ಪೌರಾಣ ಭಾರತ ರಾಮಾಯಣ ಇತಿಹಾಸ ಪಾಂಚರಾತ್ರ ನಿಗಮ-ನಿನ್ನ ತುತಿಪ ಭಕುತರಿಗೆ ತಲೆಬಾಗಿ-ಕೊಂಡು ಪ್ರತಿದಿವಸದಲಿ ಚೆನ್ನಾಗಿ-ವಲಿದು ಅತಿಶಯವ ಕೊಡುತ ಲೇಸಾಗಿ-ವಿಘ್ನ ತತಿಕಳೆದು ನೀ ಬಂದು ಸಾರೆ ಬೆರಗಾಗುತಿದೆ ಪತಿತಿ ಪಾವನ ಮೋಹನ-ಚೆನ್ನ3 ತಡವ್ಯಾಕೆ ಗುಣಕಾಲ ಕರ್ಮದೇಶಗಳೆಲ್ಲ ವಡೆಯ ಎನ್ನಾಧೀನವೇ ಪೇಳೊ-ದು:ಖ ಬಿಡಿಸುವುದು ನಿನಗುಚಿತವಲ್ಲ-ಪಾಟು ಸಿರಿ ಲಕುಮಿನಲ್ಲ-ಒಂದು ನುಡಿವೆ ನಾನಾಂತರ್ಯ ಸೊಲ್ಲ-ಇಂತು ಕಡೆಮಾಡಿ ನೋಡದಿರು ದಿವಸ ಹಿಂದಾಗುತಿದೆ ಬಡವರಾಧಾರಿ ಕರುಣೀ-ದಾನಿ4 ಧ್ರುವನು ನಭದೊಳು ಇಲ್ಲಿ ರಾವಣಾನುಜ ಅಧೋ ಭುವನದಲಿ ಬಲಿರಾಯನ ನೋಡಿ, ನಾನು ತವಪಾದ ಗತಿಯೆಂದು ಬಂದೆ-ಮಹಾ ಭವಣೆ ಬಟ್ಟೆನೊ ಕೇಳು ಹಿಂದೆ-ಜಗದಿ ತ್ರಿವಿಧ ತಾಪಗಳಿಂದ ನೊಂದೆ-ಈ ಅವಸರಕೆ ಬಂದೊದಗಿ ನಿನ್ನ ನಾಮಾಮೃತದ ಸವಿದೋರೊ ದ್ವಾರಾವತಿಯ-ಜೀಯ 5 ಅಂಧಕೂಪದಲಿ ಬಿದ್ದವನ ನೋಡಿ ನಿನಗೆ ಚ ಕ್ಕಂದವಾಗಿದೆಯೊ ಕಾಣೆ-ನಾನು ಸಂದೇಹ ದ್ವೇಷದವನಲ್ಲ-ಇದು ಎಂದೆಂದಿಗೂ ಪುಸಿಯು ಅಲ್ಲ-ಹೃದಯ- ಮಂದಿರದೊಳು ಬಲ್ಲೆಯೆಲ್ಲ-ಸ್ವಾಮಿ ನೊಂದು ಕೂಗಿದರೆ ಎಳೆಗಂದಿಯೆಂಬಾ ಮಾತು ಇಂದು ಎತ್ತಲಿ ಪೋಯಿತೋ ತಾತ-ನೀತ 6 ಗುಣವಂತ ಬಲವಂತ ಜಯವಂತ ಸಿರಿವಂತ ಘನವಂತ ಧೈರ್ಯವಂತ ಶ್ರೀಕಾಂತ-ಎನ್ನ ಮನದ ದುಮ್ಮಾನವನೆ ಬಿಡಿಸೊ-ನಿನ್ನ ಅನವರತ ನಾಮವನು ನುಡಿಸೊ-ಮಧ್ವ ಮುನಿ ಕರುಣ ಕವಚವನು ತೊಡಿಸೊ-ಇದೇ ಜನುಮ ಜನುಮಕೆ ಬೇಡಿಕೊಂಬೆ-ಶರಣೆಂಬೆ ಪ್ರಣತ ಹೃದಯಾಬ್ಜ ತುಂಬೆ-ಕಾಂಬೆ 7 ಮಾನಸ್ನಾನವನುಂಡು ಮತಿಗೆಟ್ಟ ಪೂರ್ಣ ವಿ ಜ್ಞಾನಮಯನೆ ನಿನ್ನ ಮರೆದೆ-ಕರ್ಮ ಪ್ರಾಣೇಂದ್ರಿಯಂಗಳು ನಿನ್ನ ವಶವೊ-ಇಂಥ ಜಾಣತನ ಬಹಳ ಸಂತಸವೊ-ಹೀಗೆ ಮಾಣದಲೆ ಇಪ್ಪ ಸಾಹಸವೋ ಚನ್ನ ಜ್ಞಾನ ಭಕುತಿ ವಿರಕುತಿ ಕೊಟ್ಟು ನಿನ್ನವರೊಳಾನಂದದಲಿ ನಿಲ್ಲಿಸೈಯ್ಯ ಜೀಯ 8 ಶಂಖ ಚಕ್ರ ವರಾಭಯ ಹಸ್ತದಲಿ ನಿಂದ ವೆಂಕಟಾಚಲ ನಿವಾಸ ಶ್ರೀಶ-ನಿನ್ನ ಕಿಂಕರನ ಕಿಂಕರನೊ ನಾನು-ಅಕ- ಳಂಕ ಮನುಜನ ಮಾಡೊ ನೀನು-ಭವ ಸಂಕಟವ ಕಳೆಯಾ ಸುರಧೇನು-ಬೊಮ್ಮ ವಿನುತ ವಿಜಯವಿಠ್ಠಲ ಹರಿ- ಣಾಂಕ ಸೌವರ್ಣ ಪೂರ್ಣ ಸಂಪೂರ್ಣ 9
--------------
ವಿಜಯದಾಸ
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುವೆ ನೋಟದಲಿ ನೋಡುವೆ ನೋಟದಲಿ ಪ ಗಂಗೆ ಯಮುನೆಗಳ ಸಂಗಮದೀ ಮಿಂದು ಅಂಗ ಸಂಗ ರಹಿತಾಂಗನದೇ ಮಂಗಳಾಂಗ ದಿವ್ಯಾಂಗಪೂಜೆಯ ಮಾಡಿ ರಂಗ ಮಂಟಪ ಪಾಂಡುರಂಗನಿಗೆ 1 ಈಡೆ ಪಿಂಗಳೆಗಳ ಜೋಡುಗೂಡಿ ಮೂಡು ರವಿಶಶಿ ಸೂಡಿ ಮಧ್ಯಿರುವಾಗ್ನಿ ಗೂಡಿನೋಳಾಡುವಜೀವನ ವಿಚಾರೋನ್ಮೂರ್ತಿಗೆ 2 ಹೃದಯದಿ ಬೆರಿತು ಹಂಸನ ಭರದಿ ತಿರುಗಿತಲೆರಡೊಂದೊಂಕಾರದಿ ಎರಕವಾಗಿ ಸಸ್ವರದಿ ಮನ ಪರಮ ಪುರುಷ ದಿವ್ಯಾಂಗನಿಗೆ 3 ಒಳಹೊರಗೊಂದಾಗಿ ದೇವಾ ಸುಲಭದಿ ಭಕ್ತರ ಸುಖವೀವಾ ಬೆಳಗುವ ನಲಿನಲಿದಾಡಿ4 ಆರು ಚಕ್ರಗಳ ಮೀರಿ ಮುಂದಣ ಸಣ್ಣ ದಾರಿಹಿಡಿದು ಹಿಂದಕೆ ನಡೆದು ತೋರುವ ಪರಿಪೂರ್ಣ ತಾರಕ ಬ್ರಹ್ಮನ ಸೇರಿ ನಿರ್ಬಯಲಾ ಚಿದ್ರೂಪಗೆ 5 ಅಂತರ್ಯಾಮಿ ಪೂರ್ಣಾಂತರದಿ ಮೂರ್ತಿ ಹೃದಯಾಂತರದಿ ಸಂತ ಸಾಧು ನಿಜ ಶಾಂತಿ ಪಾಲಿಪ ಗುರು ಚಿಂತೆರಹಿತ ನಿಶ್ಚಿಂತದಲಿ 6
--------------
ಶಾಂತಿಬಾಯಿ
ಪಂಚೀಕರಣಮಾಡಿ ತಾ ಸಂಚರಿಸುವ ಪ ಪಂಚೀಕರಣತಿಳಿಯದೆ ಪ್ರಪಂಚದೊಳು ಮುಳುಗಿ ನಾ ವಂಚಿತನಾದೆ ವಿರಿಂಚಿಭಕ್ತಿಗೆ ಅ.ಪ ಸಚ್ಚಿದಾನಂದ ರೂಪ ವ್ಯಾಪ್ತರೂಪಿ ನಾರಾಯಣ ಅಪ- ಅಚ್ಯುತ ತನ್ನಿಚ್ಛೆಯಿಂದ ವೈಕೃತಾಕಾಶಕ್ಕೆ ಅಂಭ್ರಣಿದೇವಿಯರನೆ ಮುಖ್ಯ ಮಾಡಿದಾ 1 ಗುಣರಾಶಿಯೊಳು ಸತ್ವಕ್ಕೆ ಶ್ರೀದೇವಿಯರು ಮುಖ್ಯ ರಜಕೆ ಭೂದೇವಿ ತಮಕೆ ದುರ್ಗಾದೇವೇರು ಸತ್ಯಜ್ಞಾನಾನಂದದಯೆ ಮೌನಪಂಚೇಂದ್ರಿಯ ಜಯ ಅಕ್ರೌರ್ಯಗುರು ಸೇವೆಯೇ ಸತ್ವಕಾರ್ಯವು2 ತಮಕ್ರೋಧ ಅಹಂಕಾರ ಮದೋನ್ಮಾದ ಚಪಲೋದ್ಯೋಗ ಡಂಭ ಸ್ವಚ್ಛಂದರಜದ ಕಾರ್ಯವು ತಮದ ಕಾರ್ಯ ಅಜ್ಞಾನ ಮೋಹ ನಿದ್ರಾಲಸ್ಯ ಬುದ್ಧಿಶೂನ್ಯ ತಾಪವಾದಿ ಹಿಂಸಾಕಾರ್ಯವು 3 ಸತ್ವಪ್ರಾಚುರ್ಯದಿ ಮದ ಗುಣತ್ರಯವೈಷಮ್ಯಹೊಂದಿ ಶ್ರೇಷ್ಠಕಾರ್ಯಕೆ ಮಹತ್ತತ್ವವಾಯಿತು ಸಾತ್ವತಾಂಪತಿಯ ಇಚ್ಛೆಯಿಂದ ಮಹತ್ತತ್ವದಿ ಅಹಂಕಾರ ತತ್ವವೆಂಬುದೇರ್ಪಟ್ಟಿತು 4 ತೈಜಸ ತಾಮಸ ಅಹಂಕಾರ ವೆನುತಲಿ ಮೂರಹಂ- ಕಾರದಿ ಮೂರು ರುದ್ರರೂಪಗಳು ಬ್ರಹ್ಮವಾಯು ಶೇಷರಿಂದುದಯಿಸಿದರು5 ವೈಕಾರಿಕ ಅಹಂಕಾರದಿ ದೇವತಾ ದೇಹ ಮನಸು ತೈಜಸದಿಂದ ದಶೇಂದ್ರಿಯ ಹುಟ್ಟಿತು ತಾಮಸಾಹಂಕಾರದಿಂದುತ್ಪನ್ನವಾದುವು6 ಸರ್ವ ಮಿಳಿತಮಾಡಿ ಬ್ರಹ್ಮಾಂಡವನೆ ಸೇರಿ ಹರಿಯು ಪದ್ಮನಾಭರೂಪದಿಂದ ಶಯನಗೈದನು ಸರ್ವಲೋಕೋದ್ಧಾರ ಹರಿಯು ನಾಭಿಯೊಳು ಪದ್ಮ ತೋರಿ ಪದುಮದಲ್ಲಿ ಪದ್ಮಸಂಭವನಾಸೃಜಿಸಿದ 7 ಸರ್ವರಂತರ್ಯಾಮಿ ಸಕಲಜೀವರನ್ನು ಸೃಷ್ಟಿಗೈಸಿ ಜೀವಯೋಗ್ಯತಾ ಕಾರ್ಯ ನಡೆಸುತಿರುವನು ಸರ್ವಜೀವಕಾರ್ಯವು ಪಂಚವಿಂಶತಿತತ್ವ ಈ- ಶರಿಂದಲೆ ಕಾರ್ಯನಡೆಯತಿರುವುದು8 ಶಬ್ದತನ್ಮಾತ್ರದಿಂದ ಆಕಾಶ ಹುಟ್ಟಿತು ವಾಯುಹುಟ್ಟಿತು ಸ್ಪರ್ಶತನ್ಮಾತ್ರದಿ ರೂಪತನ್ಮಾತ್ರದಿ ಅಗ್ನಿಭೂತ ಹುಟ್ಟಿತು ಆಗ ರಸತನ್ಮಾತ್ರದಿ ಅಷ್ಟು ಹುಟ್ಟಿತು 9 ಈ ಪರಿವಿರಾಟದಿಂದುಯಿಸಿದವು ಆಕಾಶ ಕೊಂದೆ ಶಬ್ದಗುಣವು ಮಾತ್ರ ಇರುವುದು ಅಹುದು ವಾಯವಿಗೆ ಶಬ್ದ ಸ್ಪರ್ಶವೆರಡುಗುಣಗಳು10 ತೋರುತಿರ್ಪುದಗ್ನಿ ಶಬ್ದಸ್ಪರ್ಶರೂಪ ಗುಣಗಳು ಗುಣ ಶಬ್ದ ಸ್ಪರ್ಶ ರೂಪ ರಸ ಗಂಧವೈದು ಪರಿ ಭೂತಪಂಚಕಗಳ ಅರಿವುದು 11 ಪಂಚಭೂತಗಳು ತಮ್ಮ ಸ್ವಾಂಶಗಳ ಭಾಗಗೈಸಿ ಪ್ರ- ಪಂಚ ಕಾರ್ಯಕಿತ್ತ ಪರಿಯದೆಂತೆನೆ ಆಕಾಶ ದರ್ಧಭಾಗ ಭೂತ ಪ್ರೇತ ಪಿಶಾಚಿಗಳಿಗೂ ಉಳಿ ಪಾದ ಪಾದವೆನ್ನೆ ಜೀವಕೋಟಿಗೂ12 ವಾಯು ತನ್ನರ್ಧಭಾಗ ಪಕ್ಷಿ ಪನ್ನಗಾದಿಳಿಗೂ ಪಾದ ಭಾಗ ಜೀವಕೋಟಿಗೂ ಅಗ್ನಿತನ್ನರ್ಧಭಾಗ ದೇವ ಋಷಿಗಳಿಗೂ ಮಿಕ್ಕಧರ್Àದೊಳ್ ಪಾದಭಾಗ ಜೀವಕೋಟಿಗೂ13 ಅಪ್ಪುತನ್ನರ್ಧಂಶ ಜಲಚರಪ್ರಾಣಿಗಳಿಗು ಮಿಕ್ಕರ್ಧದೊಳು ಪಾದಭಾಗ ಜೀವಕೋಟಿಗೂ ಪೃಥ್ವಿ ತನ್ನರ್ಧಂಶ ಜಡಜೀವಕೋಟಿಗೂ ಮಿಕ್ಕ ರ್ಧದೊಳ್ ಪಾದಭಾಗ ಜೀವಕೋಟಿಗೂ14 ಪೃಥ್ವಿ ಅಪ್ಪು ತೇಜೋ ವಾಯು ಆಕಾಶಗಳು ಸೂಕ್ಷ್ಮರೂಪದಿಂದೆರಡೆರಡಾದವು ಆಕಾಶತನ್ನರ್ಧಾಂಶದಲ್ಲಿ ವಾಯ್ವಗ್ನಿ ಅಪ್ಪು ಪೃಥ್ವಿಗಳಿ ಗೆ ಕೊಟ್ಟು ಸ್ವಾಂಶ ಅಂತಃಕರಣವೆನಿಸಿತು 15 ವಾಯು ಸ್ವಾಂಶದಿಂದುದಾನವೆಂದೆನಿಸಿ ಮಿಕ್ಕ ಪೃಥ್ವೈ ಪ್ತೇಜಾಕಾಶಗಳಿಗೆ ತನ್ನ ಚಲನ ಕೊಟ್ಟಿತು ಅಗ್ನಿ ತನ್ನಸ್ವಾಂಶದಿಂದ ಚಕ್ಷುಸೇಂದ್ರಿಯ ವೆನಿಸಿ ವಾಯ್ವಾಕಾಶಅಪ್ಪು ಪೃಥ್ವಿಗುಷ್ಣ ಕೊಟ್ಟಿತು 16 ಅಪ್ಪು ತನ್ನ ಸ್ವಾಂಶದಿಂ ರಸವೆಂದೆನಿಸಿ ಮಿಕ್ಕ ವಾಯ್ವಾಕಾಶಾಗ್ನಿ ಪೃಥ್ವಿಗೆ ದ್ರವವ ಕೊಟ್ಟಿತು ಪೃಥ್ವಿತನ್ನ ಸ್ವಾಂಶದಿಂ ಗಂಧವೆಂದೆನಿಸಿ ಮಿಕ್ಕ ಅಪ್ತೇಜವಾಯ್ವಾಕಾಶಕೆ ಕಠಿಣ ಕೊಟ್ಟಿತು 17 ಭೂತಪಂಚಕಗಳಿಗೆ ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ರೂಪವು ಅಧಿಷ್ಠಾನರಾಗಿ ಅವರಂತರ್ಯಾಮಿಯಾಗಿ ಅನಿರುದ್ಧಾದಿ ಐದು ಭಗವನ್ಮೂರ್ತಿ ಇರುವುದು 18 ನಾಮರೂಪ ವರ್ಣಗುಣ ಸ್ವಭಾವ ತೇಜ ಸುಮುಖ ದೇವರಶಕ್ತಿ ಅಕ್ಷರ ಕ್ರಿಯಾ ಎಂಬೀ ಹತ್ತು ಗುಣಗಳು ಭೂತ ಒಂದಕ್ಕೆ ತಿಳಿದು ಉಪಾಸನ ಮಾಳ್ಪಾದೂ ಬುಧರು ಎಲ್ಲರು 19 ನಾಮವೇ ಆಕಾಶ ರೂಪ ಒಟ್ಟು ಭಾವ ಬಯಲು ವರ್ಣ ಕಪ್ಪು ಗುಣಶಬ್ದ ಕ್ರಿಯ ಅನುಗ್ರಹ ಮುಖವೇ ಈಶಾನ ದೇವತೆ ಪರಶಿವಶಕ್ತಿ ಪರಾಶಕ್ತಿ ಅಕ್ಷರವೇ ನಾದವು20 ನಾಮ ವಾಯುರೂಪ ಷಟ್ಕೋಣ ವರ್ಣನೀಲ ಮುಖ ತತ್ಪುರುಷ ದೇವತೆ ಸದಾಶಿವ ಶಕ್ತಿ ಅಕ್ಷರ ಬಿಂದುವೆನಿಪುದು 21 ನಾಮ ಅಗ್ನಿರೂಪ ಮುಕ್ಕೋಣವರ್ಣ ರಕ್ತವರ್ಣ ಮುಖ ಅಘೋರ ದೇವತೆ ರುದ್ರಶಕ್ತಿ ಪಾರ್ವತಿ ಅಕ್ಷರ ಮಕಾರ 22 ನಾಮ ಅಪ್ಪುರೂಪ ಅಧರ್Éೀಂದು ಶ್ವೇತವರ್ಣ ಸ್ವಭಾವದ್ರವ ಗುಣ ಮಾಧುರ್ಯ ವಿಷ್ಣುಶಕ್ತಿ ಅಕ್ಷರಉಕಾರ ಎಂದು ಪೇಳ್ವರು 23 ನಾಮವೇ ಪೃಥ್ವಿರೂಪ ಚತುಷ್ಕೋಣ ವರ್ಣ ಹೇಮ ಸ್ವಭಾವವೇಕಠಿಣ ಕ್ರಿಯ ಸೃಷ್ಟಿ ಗುಣವೆ ಗಂಧವು ಮುಖಸದ್ಯೋಜಾತ ದೇವತೆ ಬ್ರಹ್ಮಶಕ್ತಿ ಸರಸ್ವತಿ ಅಕ್ಷರ ಅಕಾರವು 24 ಉಕ್ತರೀತಿ ಹತ್ತು ಗುಣಗಳೊಳ್ ಭೂತ ಒಂದ- ಕ್ಕೆತಿಳಿದು ಈ ಜ್ಞಾನೇಂದ್ರಿಯಗಳೆಂತಾದವು ಎಂದರಿವುದು ಆಕಾಶಸಮಾನಾಂಶ ಅಗ್ನಿಯು ಮುಖ್ಯಾಂಶದಿರೆ ಶ್ರೋತ್ರೇಂದ್ರಿಯ ಹುಟ್ಟಿ ತೋರುತಿರುವುದು25 ವಾಯುಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ ತ್ವಗೇಂದ್ರಿಯವು ತಾನೆ ತೋರುತಿರುವುದು ಜಿಹ್ವೇಂದ್ರಿಯವು ತೋರುತಿರುವುದು26 ಘ್ರಾಣೇಂದ್ರಿಯವು ತಾನೆ ತೋರುತಿರುವುದು ಅಗ್ನಿ ಸ್ವಾಂಶದಿಂದ ಚಕ್ಷುಷೇಂದ್ರಿಯವೆಂದು ಹಿಂದೆಯೇ ಈ ವಿವರ ಪೇಳಿರುವುದು27 ಪೃಥ್ವಿಸಮಾನಾಂಶದೊಡನೆ ಆಕಾಶ ಸಮಾಂಶಸೇರೆ ವಾಗೇಂದ್ರಿಯವೆ ತಾನೆ ತೋರುತಿರುವುದು ಪೃಥ್ವಿ ಮುಖ್ಯಾಂಶದೊಡನೆ ವಾಯು ಸಮಾಂಶಸೇರೆ ಘ್ರಾಣೇಂದ್ರಿಯವು ತಾನೆ ತೋರುವುದು 28 ಪೃಥ್ವಿಮುಖ್ಯಾಂಶದೊಡನೆ ಅಗ್ನಿ ಸಮಾಂಶಸೇರೆ ಪಾದೇಂದ್ರಿಯವು ತಾನೆತೋರುತಿರ್ಪದು ಪೃಥ್ವಿ ಮುಖ್ಯಾಂಶರೊಡನೆ ಅಪ್ಪು ಸಮಾವಾಂಶ ಸೇರೆ ಪಾಯೇಂದ್ರಿಯವೆಂದು ತೋರುತಿರ್ಪುದು29 ಪೃಥ್ವಿಸ್ವಾಂಶವೇ ಗುಹ್ಯೇಂದ್ರಿಯವೆಂದು ಪೂ ರ್ವೋಕ್ತ ರೀತಿಗಣನೆ ತರುವುದು ಈ ರೀತಿ ಕರ್ಮೇಂದ್ರಿಯಗಳೆಲ್ಲ ಪೃಥ್ವಿ ತತ್ವದಿಂದಲೇ- ರ್ಪಟ್ಟು ಬೆಳಗುತಿರುವುದು30 ಆಕಾಶ ಸಮಾನಾಂಶ ಅಪ್ಪು ಮುಖ್ಯಾಂಶದಿರೆ ಶಬ್ದ ವಾಯು ಸ್ವಯಾಂಶದಿ ಅಪ್ಪು ಮುಖ್ಯಾಂಶದಿ ಸ್ಪರ್ಶತೋರ್ಪುದು ಅಗ್ನಿ ಸಮಾನಾಂಶ ಅಪ್ಪು ಮು ಅಪ್ಪು ಮುಖ್ಯಾಂಶದಿಂದಲೆ31 ಅಪ್ಪುಸ್ವಯಾಂಶವೇ ರಸವು ಎಂದೆನಿಸಿತು ತನ್ಮಾತ್ರಪಂಚಕಕ್ಕೆ ಮೂಲ ಅಪ್ಪುತತ್ವವು ಪ್ರಾಣಾದಿಪಂಚಗಳ ಮುಂದೆ ವಿವರಿಸಿಹುದು ವಾಯುತತ್ವವೇ ಅದಕೆ ಮುಖ್ಯಕಾರಣ32 ವಾಯು ಮುಖ್ಯಾಂಶದೊಳು ಆಕಾಶ ಸಮಾನಾಂಶ ಸೇರೆ ಸಮಾನ ವಾಯುವೆಂತೆಂದೇರ್ಪಟ್ಟಿತು ವ್ಯಾನ ವಾಯು ಎಂತೆಂದೇರ್ಪಟ್ಟಿತು 33 ವಾಯು ಮುಖ್ಯಾಂಶದೊಳು ಅಪ್ಪು ಸಮಾನಾಂಶ ಸೇರೆ ಅಪಾನವಾಯುವೆಂತೆಂದೇರ್ಪಟ್ಟಿತು ವಾಯು ಮುಖ್ಯಾಂಶದೊಡನೆ ಪೃಥ್ವಿಸಮಾನಾಂಶ ಸೇರಲು ಪ್ರಾಣ ವಾಯು ಉತ್ಪನ್ನವಾಯಿತು34 ವಾಯುವಿನ ಸ್ವಯಾಂಶವೇ ಉದಾನವಾಯುವೆನಿಸಿತು ಮುಂದೆ ವಿವರಿಸುವುದು ಜ್ಞಾನ ಪಂಚಕ ಈ ಜ್ಞಾನ ಪಂಚಕಕ್ಕೆ ಆಕಾಶ ತತ್ವವೇ ಮುಖ್ಯಕಾರಣವೆಂದು ಬುಧರು ಪೇಳ್ವರು35 ಆಕಾಶ ಮುಖ್ಯಾಂಶದಿ ವಾಯು ಸಮಾನಾಂಶ ಸೇರಿ ದಾಗಲೆ ಮನಸು ಎಂಬುವುದು ಹುಟ್ಟಿತು ಆಕಾಶ ಮುಖ್ಯಾಂಶದಿ ಅಗ್ನಿ ಸಮಾನಾಂಶ ಸೇರಿ ದಾಗಲೆ ಬುದ್ಧಿ ಎಂಬುದು ಗೋಚರವಾಯಿತು 36 ಸೇರೆ ಚಿತ್ತವೆಂಬುದು ವ್ಯಕ್ತವಾಯಿತು ಆಕಾಶ ಮುಖ್ಯಾಂಶದೊಳು ಪೃಥ್ವಿಸಮಾನಾಂಶ ಸೇರಿ ಅಹಂಕಾರವೆಂಬುದೇರ್ಪಟ್ಟಿತು 37 ಆಕಾಶ ಸ್ವಾಂಶವೇ ಕತೃತ್ವವೆಂದೆನಿಸಿತು ಈಪರಿಯ ತಿಳಿವುದು ಜ್ಞಾನಪಂಚಕ ಜ್ಞಾನೇಂದ್ರಿಯ ಕರ್ಮೇಂದ್ರಿಯ ಪಂಚತನ್ಮಾ ತ್ರಗಳಿಗೆ ಆಧ್ಯಾತ್ಮಿಕಾದಿಭೌತಿಕದೇವತೆಗಳ ತಿಳಿವುದು 38
--------------
ಉರಗಾದ್ರಿವಾಸವಿಠಲದಾಸರು
ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ ಸಂತಸದಿ ನಿನ್ನಂತರಂಗದಿ ಕಂತುಪಿತ ನೀನೆನಲು ಸಾಕೊ ಅ.ಪ ಕೋಪವ್ಯಾಕೊ ತಾಪವ್ಯಾಕೋ ತಾಪತ್ರಯಗಳ ಲೋಪ ಸಿರಿವರ ಕಾಪಾಡೆನಲದೊಂದೆ ಸಾಕೊ 1 ಕುಂದು ಯಾಕೋ ನಿಂದೆ ಯಾಕೋ ಸಿಂಧುಶಯನಗೋವಿಂದಗರ್ಪಿ ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ 2 ಕ್ಷೇತ್ರ ಯಾಕೋ ಯಾತ್ರವ್ಯಾಕೋ ಖಾತ್ರಿಯಿಂದ ಜಗತ್ರಯಕೆ ಸು ಸೂತ್ರಾಧಾರಿಯೆಂದ ಮಾತ್ರ ಸಾಕೊ 3 ಸ್ನಾನವ್ಯಾಕೋ ಸಂಧ್ಯಾನವ್ಯಾಕೋ ಜ್ಞಾನವಿಡಿದು ಭಕ್ತಪ್ರಾಣನಾಥನ ಧ್ಯಾನಗೈಯಲದೊಂದೆ ಸಾಕೊ 4 ಜಪವು ಯಾಕೋ ತಪವು ಯಾಕೋ ಕಪಟನೀಗಪರಿಮಿತ ಹರಿಯ ಗುಪಿತದಿಂದರ್ಚಿಸಲು ಸಾಕೊ 5 ಮಂತ್ರವ್ಯಾಕೋ ತಂತ್ರವ್ಯಾಕೋ ಮಂತ್ರಮೂರ್ತಿ ಸರ್ವಾಂತರ್ಯಾಮಿಯ ಅಂತರಂಗ ತಿಳಿಯೆ ಸಾಕೊ 6 ನೇಮವ್ಯಾಕೋ ನಿತ್ಯವ್ಯಾಕೋ ಸ್ವಾಮಿಯೆನುತ ಪ್ರೇಮಿಯ ಶ್ರೀ ರಾಮನ ನಂಬಿಕೊಳ್ಳಲು ಸಾಕೊ 7
--------------
ರಾಮದಾಸರು
ಪರತತ್ವ ವಿಠಲನೇ | ಪೊರೆಯ ಬೇಕಿವಳಾ ಪ ದುರಿತ ರಾಶಿಯ ತರಿದು | ಕರಪಿಡಿಯ ಬೇಕೋ ಅ.ಪ. ಕಾಲ ಕಾಲ ರೂಪಾತ್ಮಾ 1 ಗುರು ಕರುಣವಿಲ್ಲದಲೆ | ಹರಿಯೊಲಿಯನೆಂದೆಂಬಪರಮರಾಹಸ್ಯವನು | ಅರುಹಿ ಪ್ರೀತಿಯಲೀಕರುಣಿಸೋ ತವನಾಮ | ಸ್ಮರಣೆ ಸುಖ ಸಖ್ಯವನುಮರುತಾಂತರಾತ್ಮ ಹರಿ | ದುರಿತವನದಾವಾ 2 ಹರಿದಾಸ್ಯವತಿ ಕಷ್ಟ | ವಿರುವುದೆಂದರಿತಾಗ್ಯುಪರಿ ಪ್ರಶ್ನೆ ಭಕ್ತಿಯಲಿ | ಮೊರೆಯನಿಡುತಿರುವಾ |ತರಳೆ ಗಂಕಿತ ವಿತ್ತೆ | ವರ ಸ್ವಪ್ನ ಸೂಚ್ಯದಲಿಹರಿಯೆ ನಿನ್ನಾದೇಶ | ವಿರುವುದೆಂದರಿತು 3 ಪರಿ ಪರಿಯಗೈಯ್ಯುವಲಿಹರಿಯೆ ತವ ಸಂಸ್ಮರಣೆ | ಮರೆಯದಂತಿರಿಸೋ 4 ಜೀವೇಶ ಸನ್ನುತನೆ | ಜೀವರಂತರ್ಯಾಮಿಗೋವತ್ಸದನಿ ಗಾವು | ಧಾನಿಸೂವಂತೇ |ಕೈವಲ್ಯ ಪ್ರದ ಗುರೂ | ಗೋವಿಂದ ವಿಠ್ಠಲನೆಭಾವುಕಳ ಮಾಡಿವಳ | ನೀವೊಲಿಯ ಬೇಕೋ 5
--------------
ಗುರುಗೋವಿಂದವಿಠಲರು
ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ ವರ ತಂದೆ ಮುದ್ದುಮೋಹನರೊಡೆಯನೆ ಪ. ಸಿರಿಯರಸ ಶ್ರೀ ಶ್ರೀನಿವಾಸ ಶ್ರೀ ಕೃಷ್ಣಹರೆ ಪರಮದಯಾಳು ದೇವ | ದೇವಅ.ಪ. ನಿರುತ ನೀ ಸ್ವಪ್ನದಲ್ಲಿ ಪರಿಪರಿಯ ರೂಪದಲಿ ತ್ವರಿತದಲಿ ತೋರಿ ಕಾಯ್ದೆ ಪರಮಪಾವನಮೂರ್ತಿ ಗುರು ಅಂತರ್ಯಾಮಿಯೆ ಕರಕರೆಯ ಬಿಡಿಸಿ ಸಲಹೊ | ದೇವ 1 ವಿಶ್ವತೈಜಸ ಪ್ರಾಜ್ಞ ತುರಿಯ ರೂಪಗಳಿಂದ ನೀ ಸ್ವಪ್ನಗಳನೆ ತೋರ್ವೆ ವಿಶ್ವೇಶ ಎನ್ನೊಳಗೆ ಸಾಕ್ಷಿಯಾಗಿರುತ್ತಿರ್ದು ವಿಶ್ವಮಯ ಚೇಷ್ಟೆ ಮಾಳ್ಪೆ | ದೇವ 2 ಈ ಶರೀರದೊಳಗೆ ಶ್ರೀ ತೈಜಸನೆ ನೀನು ವಾಸವಾಗಿರುತಲಿರ್ದು ನಾಶರಹಿತನೆ ಮೋಹಪಾಶದಲಿ ಸಿಲುಕಿಸಿ ಮೋಸಪಡಿಸುವರೆ ಎನ್ನ | ದೇವ 3 ಬಿಡಿಸೊ ದುರ್ವಿಷಯಗಳ ತಡವಾಕೊ ಹರಿ ಇನ್ನು ಒಡಲಿಗೊಡೆಯನೆ ಶ್ರೀಹರಿ ಕೊಡು ನಿನ್ನ ಪದಸೇವೆ ನುಡಿಸು ನಿನ್ನಯ ನಾಮ ಪಡಿಸು ಸುಖ ಅನವರತದಿ | ದೇವ 4 ಸ್ವಪ್ನ ವ್ಯಾಪಾರದಲಿ ಅಪ್ರತಿಮಮಹಿಮೆಗಳ ಕ್ಷಿಪ್ರದಿಂದಲಿ ತೋರಿದೆ ಸಪ್ತಫಣಿಮಂಡಿತನೆ ಒಪ್ಪದಿಂದಲಿ ಎನ್ನ ತಪ್ಪನೆಣಿಸದಲೆ ಕಾಯೋ | ದೇವ 5 ನೀತ ಗುರುಗಳ ದ್ವಾರ ಪ್ರೀತನಾದ ಹರಿಯೆ ಪಾತಕವÀ ಕಳದೆ ಸ್ವಾಮಿ ವಾತಜನಕನೆÀ ನಿನ್ನ ಖ್ಯಾತಿ ಪೊಗಳಲು ಅಳವೆ ಪ್ರೀತನಾಗಿದ್ದು ಸಲಹೊ | ದೇವ 6 ಶ್ರೀಪತಿಯೆ ಪರಮಪಾವನಮೂರ್ತಿ ವಿಖ್ಯಾತ ನೀ ಪ್ರೀತಿಲೀಲೆ ತೋರ್ದೆ ಕಾಪಾಡಿದೆಯೊ ಎನ್ನ ಶ್ರೀ ಗುರುಗಳೊಳಗಿರ್ದು ಗೋಪಾಲಕೃಷ್ಣವಿಠ್ಠಲ ದೇವ 7
--------------
ಅಂಬಾಬಾಯಿ
ಪರಾಕು ಸಜ್ಜನಪ್ರೇಮಿ ಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮ ಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ 1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ 2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾದ ಮುಖ್ಯ ಪ್ರಾಣ ನಂಬಿದೆ ನಿನ್ನಯ ಪಾದ* ಪ ನಂಬಿದೆ ನಿನ್ನಯ ಪಾದಾಡಂಬರ ತೊಲಗಿಸಿಡಿಂಬದೊಳಗೆ ಹರಿಯ ಬಿಂಬ ಮೊಳೆವಂತೆ ಮಾಡೋ ಅ.ಪ. ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತರ ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿತಪ್ಪಿಸೋ ಭವವ ಸಮೀಪದ ಜೀವಗೆ ||ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೊ 1 ಸೂತ್ರ ಮಾರುತಉತ್ತರ ಲಾಲಿಸೋ ಉತ್ಕøಮಣದಲ್ಲಿನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ||ತತ್ತುವರೊಳು ಜೀವೋತ್ತಮನೆ ಸತ್-ಚಿತ್ತೆನಗೆ ಕೊಡು ಉತ್ತರ ಧರಿಸೊ (ಲಾಲಿಸೋ) 2 ಕಂತು ಜನಕನಲ್ಲಿಮಂತ್ರಿಯೆನಿಸಿ ಸರ್ವರಂತರ್ಯಾಮಿ ಆಗಿ ||ನಿಂತು ನಾನಾ ಬಗೆ ತಂತು ನಡಿಸುವ ಹಂತಕಾರಿ ಗುಣವಂತ ಬಲಾಢ್ಯ 3 ಕಾಯ ಪರಮೇಷ್ಠಿ ಸಂಚಿತಾಗಾಮಿ ಓಡಿಸಿಕೊಂಚ ಮಾಡೋ ಪ್ರಾರಬ್ಧ ವಂಚನೆಗೈಸದೆ ||ಅಂಚಂಚಿಗೆ ಪರಪಂಚವ ಓಡಿಸಿ ಪಂಚವಕ್ತ್ರ ಹರಿಮಂಚದ ಗುರುವೆ 4 ಜಾಗರ ಮೂರುತಿ 5
--------------
ಗುರುವಿಜಯವಿಠ್ಠಲರು