ಒಟ್ಟು 1970 ಕಡೆಗಳಲ್ಲಿ , 112 ದಾಸರು , 1271 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಖ್ಯಕಾರಣ ವಿಷ್ಣು ಸ್ವತಂತ್ರನೆಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ ಪ. ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆತಿಳಿವ ವಸ್ತುವು ನೀನೆ ತೀರ್ಥಪದನೆ ತಿಳಿದುದಕೆ ಫಲನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ 1 ಧ್ವನಿ ವರ್ಣಉಭಯ ಶಬ್ದದ ವಾಚ್ಯನು ನೀನೆಗುಣದೇಶಕಾಲ ಕರ್ಮದನು ನೀನೆತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ 2 ಹಯಾಸ್ಯ ಧನ್ವಂತ್ರಿ ವೃಷಭ ಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು ಆದೆ ಕೃಪಾಳುವೆ ಶ್ರೀಶ 3 ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-ಚೇತನನು ಸರಿ ನೀನು ಸುಮ್ಮನಿರಲುಯಾತರವ ನಾನಯ್ಯ ನಿನ್ನಧೀನವು ಎಲ್ಲಚೇತನನಹುದೊ ನೀ ಚಲಿಸೆ ಚಲಿಸುವೆನು 4 ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆತಿಳಿಸೊ ಸೋತ್ತುಮರೆಲ್ಲ ತಿಳಿದ ಶೇಷತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿಚಲಿಸದಲೆ ಮನ ನಿಲಿಸೊ ಗೋಪಾಲವಿಠಲ 5
--------------
ಗೋಪಾಲದಾಸರು
ಮುಖ್ಯಪ್ರಾಣನೀತಾ | ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ 1 ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ | ಮೊಗದವನಾಗಿ ವಾನರ ಬಲವ | ನಗವ ತಂದೆತ್ತಿದವನೀತಾ 2 ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ | ಪರಮ ಮಂಗಳ ಪದದಿ ಭವದ | ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ | ಮರುತಾವತಾರನೀತಾ ತನ್ನ | ಶರಣ ಜನರ ಪೊರೆವನೀತಾ 3 ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ | ನೋಡಿ ಪೊರೆವನೀತಾ | ಅಸುರ ಲಿಂಗಭಂಗವ ಮಾಡಿ | ಬೆಸನೆ ಮತವ ಕಟ್ಟುವನೀತಾ | ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ 4 ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ | ದಾನ ಧರ್ಮ ಪ್ರೇರಕನೀತಾ | ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ | ನಮಗೇನೇನು ಕೊಡುವನೀತಾ | ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ 5
--------------
ವಿಜಯದಾಸ
ಮುಗಿವೇನು ಕೈಯ್ಯಾ ಶಾಂತೇಶರಾಯಾ ರಘುರಾಮಾ ಪ್ರೀಯಾ ಪಾಲಿಸೆನ್ನ ಜೀಯಾ ಪ ಶರಧಿಯ ದಾಟಿ ಮುದ್ರೆಯನು ಕೊಟ್ಟೀ ದುರುಳರ ಮೆಟ್ಟಿ ಪುರಲಂಕೆ ಸುಟ್ಟೀ 1 ಭಂಡಿ ಅನ್ನವನುಂಡೂ ದೈತ್ಯನ ಚಂಡಾಪರಿ ಹಿಡಿಂಬನನು ಮುರಿದಿ 2 ದುಷ್ಟಮತವನು ಸುಟ್ಟೀ ಜ್ಞಾನತೀರ್ಥ ಧಿಟ್ಟ ಶ್ರೀ ಹನುಮೇಶವಿಠಲನ ದೂತಾ 3
--------------
ಹನುಮೇಶವಿಠಲ
ಮುಂಚೆ ನೋಡಣು ಬನ್ನಿ ಜನಗಳೆ ಹಂಚಿನಾಳಿನವ ಹನುಮನ ವಾಂಛಿತಾರ್ಥಗಳೀವ ಭಾವಿ ವಿರಂಚಿದೇವ ಪದಾರ್ಹನಾ ಪ ಅಂದು ಕಪಿಕುಲದಿಂದ ದುಸ್ತರ ಸಿಂಧು ದಾಟಿದ ಧೀರನ ವಂದಿಸುತ ಭೂನಂದನೆಯು ಕ್ಷೇಮೆಂದು ರಾಮಗೆ ಪೇಳ್ದನ 1 ಧಾರುಣಿಯೊಳವತರಿಸಿ ಕುಂತಿ ಕುಮಾರನೆನಿಸಿದ ಧೀರನ ಕೌರವಾಂತಕನೆನಿಸಿ ಕೃಷ್ಣನ ಭೂರಿ ಕರುಣವ ಪಡೆದನ 2 ವಾದಿಗಳ ನಿರ್ವಾದ ಗೈಸಿದ ಬಾದರಾಯಣನ ಶಿಷ್ಯನ ಭೇದಮತವನು ಸ್ಥಾಪಿಸಿದ ಗುರು ಮೋದ ತೀರ್ಥ ಯತೀಂದ್ರನಾ 3 ಪಾಲಕಿಯ ಉತ್ಸವದಿ ಮೆರೆಯುತ ವಾಲಗವ ಕೈಕೊಳುವನ ಕಾಲಕಾಲಗಳಲ್ಲಿ ಭಜಕರ ಮ್ಯಾಳವನು ಪಾಲಿಸುವನಾ 4 ಶೇಷಭೂಷಣ ವಾಸವಾದಿಸು ರೇಶ ಭಕುತರ ಪೋಷನ ಶ್ರೀಶ ಕಾರ್ಪರವಾಸ ಸಿರಿನರ ಕೇಸರಿಗೆ ಪ್ರಿಯ ದಾಸನ5
--------------
ಕಾರ್ಪರ ನರಹರಿದಾಸರು
ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಪ ಕಟ್ಟು ಮಾಡಿದ ಯಮನು ತನ್ನ ದೂತರಿಗೆಅ ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ 1 ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು 2 ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ3
--------------
ಕನಕದಾಸ
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ ಮುತ್ತೈದೆಯರು ಜಯ ಪ ರತ್ನಮಂಟಪದೊಳು ವರ ಮಹ- ಲಕ್ಷ್ಮಿಯ ಕುಳ್ಳಿರಿಸಿ ಮುತ್ತಿನ್ಹಾರಗಳ್ಹಾಕಿ ಮುತ್ತೈದೆಯರು ಜಯ 1 ಮಿತ್ರೆ ಮಹಲಕ್ಷುಮಿಯ ಬಹು ಸಿಸ್ತಿಲಿ ಶೃಂಗರಿಸಿ ಉತ್ತಮಾಂಗನೆಗೀಗ ಮುತ್ತೈದೆಯರು ಜಯ2 ಕರ್ತೃ ಶ್ರೀಹರಿ ಎನ್ನುತ ಕಮಲನಾಭ ವಿಠ್ಠಲನರಸಿಗೀಗ ಎತ್ತಿ ಚಾಮರ ಬೀಸಿ ಮುತ್ತೈದೆಯರು ಜಯ3
--------------
ನಿಡಗುರುಕಿ ಜೀವೂಬಾಯಿ
ಮುತ್ತೂರೇಶ ಶ್ರೀ ಮರ್ಕಟಾ ತುಲಸÀದಲಾಯತಾಕ್ಷ ಶ್ರೀರಾಮದೂತಾ ಪ ಎತ್ತ ಚಲಿಸದಂತೆನ್ನ ಮನವ ತವ ಪಾದ ಸರೋಜದೊಳಿಟ್ಟು ಪತ್ತು ತಲೆಯನರಿಯಡಿದಾವರೆಯನು ನಿತ್ಯ ಭಜಿಸುವಂದದಿ ಮಾಡಯ್ಯ 1 ಆಂಜನೇಯಾ ಭೀಕರ ರೂಪಾ ದಾನವ ಘಾತಕರಾ ಸತಿ ಮೇದಿನಿ ಸುತೆಯಳ ಮಂಜುಮಾಡಿ ಖಲ ರಾವಣನೊಯ್ಯಲು ಅಂಜದಿರೆಂದವನಿಪ- ನಿಗಭಯವಿತ್ತು ಮಂಜುಂ ಕಾರ್ಯವ ನೆರೆದಪೆನೆಂದೀ 2 ಭಾರತೀಯ ಪವÀನತನಯ ಘನತರ ಕಾರ್ಯಕರ್ತಾ ಶ್ರೀರಾಮದೂತಾ ಘೋರತರದ ಅಪರಾರ್ಣವನು ಹಾರಿ ದಾಂಟಿ ಲಘು ದಶಮುಖಪುರವನು ವೀರರಾಘವನಂಘ್ರಿಗೆ ಎರಗಿದಿ ನೀ 3 ದಾನವನಾಶಾ ಜಾನಕೀತ್ರಾತ ದಶರಥಸುತ ಭಜಕಾ ಆನಂದತೀರ್ಥ ದಾನವ ಕೋಟಿಯ ನಡೆದು ಜವದಿ ನೀ ಮೌನಿ ಹರಿಗೆ ಸಹಾಯಾಗ್ರಣಿಯಾಗಿ ಹೀನ ರಕ್ಕಸ ದಶ- ಶಿರವನರಿಸಿ ನೀ ನರಸಿಂಹವಿಠಲನ ದಾಸನೆನಿಸಿದೀ 4
--------------
ನರಸಿಂಹವಿಠಲರು
ಮುದದಿ ಪಾಲಿಸೊ ಮುದತೀರಥರಾಯಾ ಸದ್ಭುಧ ಜನಗೇಯಾ ಪ ಪದುಮನಾಭ ಪದ ಪದುಮ ಮಧುಪ ಸದಯಾ ಸದಮಲ ಶುಭಕಾಯಾ ಅ.ಪ ವದಗಿ ರಾಮಕಾರ್ಯದಿ ನೀ ಮನಸಿಟ್ಟಿ ಲಂಕಾಪುರ ಮೆಟ್ಟಿ ಹೆದರದೆ ದಿತಿಜರನೆಲ್ಲ ಕೊಂದುಬಿಟ್ಟೆ ಪುಚ್ಛದಿ ಪುರಸುಟ್ಟ ಕದನದಿ ಭೀಮ ವೃಕೋದರ ಜಗಜಟ್ಟಿ ಸಂನ್ಯಾಸತೊಟ್ಟಿ1 ಸೀತಾಶೋಕ ವಿನಾಶನ ಮಹಂತಾ ಮಹಬಲಿ ಹನುಮಂತ ವಾತಜ ವಾರಿಜ ಜಾತನಾಗುವಂತಾ ಖ್ಯಾತಿಯುಳ್ಳ ವಂಥಾ ಜಯವಂತಯತಿನಾಥನೆ ಶಾಂತಾ 2 ಶಿರಿಗೋವಿಂದ ವಿಠಲನ ಪ್ರೀತಿ ಕಂದಾ ಭೀಮನೆ ಆನಂದಾಗರಿದು ಮುರಿದು ಪರಮತವನೆ ಆನಂದಾ ಮುನಿ ರೂಪದಲಿಂದ ಬದರಿಗೆ ನಡೆತಂದಾ 3
--------------
ಅಸ್ಕಿಹಾಳ ಗೋವಿಂದ
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ಮುದ್ದು ಮೋಹನ ಗುರುಗಳಂಘ್ರಿ | ಶ್ರದ್ಧಾ ಭಕುತೀಲಿಬುದ್ಧಿ ಪೂರ್ವಕ ಭಜಿಪ ಜನರ | ನ್ನುದ್ಧರೀಸುವಾ ಪ ಕರ್ಮ ನಿಷ್ಠಾತೃಸುಮ್ಮನಸ ವಿಜಯಗುರವ | ನಮ್ಮಿತುತಿಸುವ 1 ತೀರ್ಥಕ್ಷೇತ್ರ ಚರಿಸೂತ | ಮೂರ್ತಿದರ್ಶನಾಸಾರ್ಥಕವ ಮಾಡಿಕೊಂಡ | ತೀರ್ಥಪಾವನಾ |ಕಾರ್ತಸ್ವರೇತ್ಯಾದಿವಿತ್ತ | ಪಾರ್ಥಿವಸಮಾಶಾಸ್ತ್ರ ಪ್ರಾಕೃತಾದಿ ತಿಳಿಪ | ಹರಿ ಸರ್ವೋತ್ತಮ 2 ಶ್ರೀ ವರರಿಂದುಪದಿಷ್ಟ | ವಿಠಲ ಪ್ರತಿಷ್ಟಓ ವಿಸಾಧೀಸಲು ಹರಿಯೊಳ್ | ಪ್ರಾಯೋಪವಿಷ್ಟ |ಭಾವಿ ಬ್ರಹ್ಮನಲ್ಲಿ ಗುರು ಗೋವಿಂದ ವಿಠಲನಭಾವ ಅಷ್ಟ ಕುಸುಮದಿ | ಸೇವಿಸೀದನ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನ ರಾಯಾ | ಸುಜನರಉದ್ಧರಿಸಿದ್ಯೊ ಜೀಯಾ | ಪ ಶ್ರದ್ಧಾಳುತನದಲಿ | ಬದ್ಧ ದೀಕ್ಷಿತನೆಮಧ್ವಮತವು ಎನೆ | ದುಗ್ಧಾಬ್ದಿ ಚಂದಿರ ಅ.ಪ. ಚಿಪ್ಪಗಿರಿ ಸುಕ್ಷೇತ್ರಾ | ದೊಳಗೆಅಪ್ಪ ಶ್ರೀ ವರರಿಂದಾ |ಗೊಪ್ಪ ಸದುಪ ದೇಶ | ಅಪ್ಪುತದಾಸನೆನೆಪ್ಪು ಕೊಡುತ ತಿ | ಮ್ಮಪ್ಪನೊಳಗೆಮನ 1 ತೀರ್ಥಕ್ಷೇತ್ರ ಚರಿಸೆ | ದೇಹವುಸಾರ್ಥಕಾಯಿತು ಎನಿಸೀ |ಯಾತ್ರೆ ಮಾಡಿದೆ ಸ | ತ್ಪಾತ್ರರ ಸೇರುತಗಾತ್ರ ಗೈಸಿದೆ ಪಾವಿ | ತ್ರ್ಯ ಬಾಹ್ಯಾಂತರ 2 ಗುರುಗೋವಿಂದ ವಿಠಲನೇ | ಪರತತ್ವಸರ್ವೋತ್ತಮನವನೇ |ಒರೆಯುತ ಸುಜನರ | ಪರಿಪಾಲಿಸಿದಿಯೊವರಬಳ್ಳಾಪುರದಲಿ | ವಿಠಲನ ಸನಿಯ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಮುದ್ದು ಮೋಹನರಾಯಾ | ಅಸ್ಮದ್ಗುರೋರ್ಗುರುಶುದ್ಧ ಜನ ಸಂಪ್ರೀಯ | ನಿಮಗೊಂದಿಸುವೆ ಭವಬಂಧ ಪರಿಹರಿಸಯ್ಯಾ | ಬುಧರಿಂದಗೇಯಾ ಪ ಪಂಕಜ ಮೋದ ಪಾದ ನಂಬಿದೆ ಅ.ಪ. ದೇವಮುನಿನುತ ಪೀಠಾ | ವರ ಚಿಪ್ಪಿಗಿರಿಯಲಿ ದಿವ್ಯ ಭವಹರ ಮಂತ್ರಾ | ಅಂಕಿತ ಸುತಾರಕಪ್ರವರ ಪೊಂದಿದೆ ಪೋತ | ಜಪಿಸುತ್ತ ಮನದೀಶರ್ವವಂದ್ಯ ವಿಧಾತಾ | ಪಾದಾಬ್ಜ ಭಕುತಾ ||ಶ್ರೀ ವರರ ಕರಕಮಲಜಾತನೆ ಭುವಿಯ ಸತ್ತೀರ್ಥಗಳ ಚರಿಸುತ ಪಾವಮಾನಿ ಮತಾಬ್ಧಿಜಾತರ | ಪಾವನವ ಮಾಡ್ಯವನಿಯಲಿಮೆರೆದೆ 1 ಭೃಂಗ ಮುದ್ದು ಮೋಹನಾರ್ಯ ಗುರುರೂಪದೇಶವ ವಿಹಿತ ಮಾರ್ಗದಿಗೈದು ತಂದೆ ಮುದ್ದು ಮೋಹನಾಭಿಧನೆಂದು ಕರೆದೆಯೊ 2 ಗುರುವಿನಾಣತಿಯನ್ನಾ | ಪೊಂದುತಲಿಸ್ವಪ್ನದಿಸಿರಿವಿಜಯ ವಿಠಲನ್ನಾ | ನಿಜಪುರದಿ ನಿಲಿಸಿನಿರುತ ಅರ್ಚನೆಯನ್ನಾ | ಸ್ಥಿರಪಡಿಸಿ ಮುನ್ನಅರಿತು ಮನದಲಿ ನಿನ್ನ | ಉತ್ಕ್ರಮಣವನ್ನಾ ||ಶೌರಿ ದಾಮೋದರನ ಮಾಸದಿ | ವರದತುರ್ದಶಿ ಅಸಿತಪಕ್ಷದಿಸಿರಿ ಗುರೂ ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದೆ 3
--------------
ಗುರುಗೋವಿಂದವಿಠಲರು
ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು 1 ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ 2 ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ 3 ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ ಮೆರೆದ4 ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ ವೇಲೂರ ಪುರಪಯೋನಿಧಿವಾಸ ಜಗದ ದೊರೆ ವಿಜಯವಿಠ್ಠಲನ್ನದಾಸ5
--------------
ವಿಜಯದಾಸ
ಮುನಿಯು ನೀನಾದದ್ದು ಮನದೊಳು ನಾಬಲ್ಲೆಮುನಿ ಜನ ಮನ ಮಂದಿರಾ - ಸುರೇಂದ್ರಾ ಪ ಅನುಮಾನ ತೀರ್ಥರ ಮಾನ ಮೇಯದ ಸಾರಘನವಾಗಿ ತಿಳಿಸಿದುದಾರಾ - ಸುರೇಂದ್ರಾ ಅ.ಪ. ಗಜ ವೈರಿ ಮಧ್ಯದಭುಜಗ ವೇಣಿಯರ ಕೂಡೀ - ಸುರೇಂದ್ರಾ ||ಅಜನೀನೇ ಎನ್ನುತ | ಭುಜಿಸೆ ಅನ್ನವ ನೀಡಿಯಜನಾದಿಗಳ ಮಾಡಲೂ - ಸುರೇಂದ್ರಾ ||ಗಜ ವರದನು ಬಂದು | ಭುಜಿಸಲು ಅನ್ನವತ್ಯಜಿಸಿ ಬಂದೆಯೊ ಸುರಪುರವಾ - ಸುರೇಂದ್ರಾ 1 ವ್ರಜ || ಸುರರನೆಲ್ಲರ ಕಾಯ್ದಹರಿಯ ಮೊಗವ ನೋಡೆ ನಾಚುತಲೀ - ಸುರೇಂದ್ರಾ 2 ವಾಸುಕಿ | ಅಂದ ನೇಣನ ಮಾಡಿಮಂಥಿಸಿ ಶರಧಿಯನ್ನಾ - ಸುರೇಂದ್ರಾ ||ಅಂದು ನೀನಮೃತವ ನುಂಡ ಕಾರಣದಿಂದಇಂದಿಲ್ಲಿ ಸುರರಿಗುಣಿಸೆ ಬಂದ್ಯೋ - ಸುರೇಂದ್ರಾ 3 ಮಧ್ವ ಶಾಸ್ತ್ರವೆಂಬ | ದುಗ್ದಾಬ್ದಿಯನೆ ನೀನುಶ್ರದ್ಧೆಯಿಂದಲಿ ಮಥಿಸೇ - ಸುರೇಂದ್ರಾ ||ಉದುಭವಿಸಿದ ನ್ಯಾಯ | ಸುಧೆ ಎಂಬ ಅಮೃತವವಿದ್ವಜ್ಜನಕೆ ಉಣಿಸೇ - ಸುರೇಂದ್ರಾ ||ತ್ರಿದಶ ಲೋಕವ ತ್ಯಜಿಸಿ | ಉದಿಸಿದೆ ಧರೆಯೊಳುಸಾಧು ವೇಷವನ್ನೆ ಧರಿಸೀ - ಸುರೇಂದ್ರಾ 4 ನಾಕಪತಿಯೆ ನಿನ್ನಾ | ನೇಕ ಚರಿತೆಯಲ್ಲಿನಾಕೇಳಿ ಪೊಗಳಲಳವೇ - ಸುರೇಂದ್ರಾ ||ಲೋಕಾ ಲೋಕದೊಳು | ಟೀಕಾರ್ಯರೆಂಬವಾಕು ಕೇಳೀ ಬಲ್ಲೆನೋ - ಸುರೇಂದ್ರಾ ||ನಾಕಜ ಪಿತ ಗುರು ಗೋವಿಂದ ವಿಠಲನನೇಕ ಬಗೆಯಿಂದ ಸ್ತುತಿಸಿದೆಯೋ - ಸುರೇಂದ್ರಾ 5
--------------
ಗುರುಗೋವಿಂದವಿಠಲರು