ಒಟ್ಟು 3404 ಕಡೆಗಳಲ್ಲಿ , 117 ದಾಸರು , 2499 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ರಮಾಕಾಂತ - ಜಯತು ದೈತ್ಯ ಕೃತಾಂತ ಜಯ ಸರ್ವ ವೇದಾಂತ - ಜಯತು ನಿಶ್ಚಿಂತ ಪ ಬೇಡ ವೇಷವ ತಾಳಿ- ಓಡಿಸುತೆ ತುರಗವನು ಪ್ರೌಢೆ ಪದ್ಮಾವತಿಯ - ನೋಡಿ ನಸುನಗುತ ಜೋಡಾಗು ತನಗೆಂದು - ಗಾಡಿಕಾರರ ಮಾತ ನಾಡಿ ಕ್ರೋಢಾಲಯಕೆ - ಓಡಿಬಂದವನೆ 1 ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ ಕಾಯದಿಂದಾಕಾಶರಾಯನರಮನೆಗೆ ಜೋಯೆಂದು ಪೋಗಿ - ಸದುಪಾಯಗಳ ನಡೆಸಿ ತ ನ್ನಾಯ ಕೈತಂದ ಕಮನೀಯ ಮೂರುತಿಯೆ 2 ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ ಸಕಲ ದೇವೋತ್ತಮರ - ನಿಕರವನು ನೆರಹಿ ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ 3
--------------
ಲಕ್ಷ್ಮೀನಾರಯಣರಾಯರು
ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಧ್ರುವ ಸ್ವಯಂಭು ಸ್ವತಂತ್ರ ಸ್ವಪ್ರಕಾಶ ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ ದ್ವೈತಾದ್ವೈತಕೆ ಸಹಿತ ಸ್ವವಿಲಾಸ ಶ್ರೇಯ ಸುಖದಾಯಕನಹುದೋ ನೀ ಪರೇಶ 1 ಸ್ವಭಾವ ಸ್ವಸಿದ್ಧ ಸರ್ವಾಧಾರ ಸ್ವಭಾಸ ಸ್ವತೇಜ ಸಹಜ ನಿರ್ಧಾರ ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ ಸ್ವಭಕ್ತಜನರಿಗೆ ನೀನೆ ಸಹಕಾರ 2 ಸ್ವಾನಂದ ಸದೋದಿತ ಸ್ವಯಂ ಭಾನು ಸ್ವಾನಭವಲಾದಯ್ಯ ತಾನೆ ತಾನು ಅನುದಿನ ಭೋರ್ಗರೆವ ನೀ ಕಾಮಧೇನು ದೀನಮಹಿಪತಿ ಸ್ವಾಮಿ ನೀನೆ ನೀನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಶ್ರೀ ಹಯವದನ ಜಯ ಜಯ ಶ್ರೀ ಖಳದಮನ ಜಯತು ಸಜ್ಜನಸದನ ಸಕಲ ಆಭರಣ ಪ. ರಾಘವಾನ್ವಯಸೋಮ ಖರನಿಶಾಚರ ಭೀಮ ಧಾಮ ಸೀತಾಭಿರಾಮ ಕಾಮಿನೀಜನಕಾಮ ಶರಣಪಾಲಕ ಧಾಮ ಸ್ವಬಲ ಪಾಲಿತ ರಾಮ ಪಟ್ಟಾಭಿರಾಮ 1 ಯಾದವಾನ್ವಯಜಾತ ವರಸತ್ಯಭಾಮೇತ ವ್ಯಾಸರಾಯಸನ್ನುತ ಸಕಲವಾಗ್ವಿದಿತ ಕಂಜಾಸನಾದಿಸುತ ಕಮಲಮಾರ್ಗಣಪಿತ ಸರಸರುಕ್ಷ್ಮಿಣೀಸಕಲೇಷ್ಟದಾತ2 ವಾಸಿಷ್ಠಕುಲವಾರ್ಧಿ ಸತ್ಕಳಾಧರರೂಪ ಮಧ್ವಾರ್ಯ ಸದ್ರೂಪ ದಳಿತÀಬಹುತಾಪ ಮಾಯಿಜನ [ಧೃ] ತಕೋಪ ಕೃತಸದ್ವೀಕ್ಷೋ[ದ್ದೀ]ಪ ಸೃತಾನಿ ಸತ್ಸುಖರೂಪ ಹಯವದನ ರೂಪ 3
--------------
ವಾದಿರಾಜ
ಜಯ ಜಯವೆನ್ನಿ ಸ್ವಾಮಿ ಶ್ರೀಹರಿಗೆ ದಯೆಯುಳ್ಳ ಮಹಿಮ ಶ್ರೀಮುಕುಂದ ಮುರಾರಿಗೆ ಧ್ರುವ ಭಾವಿಸಿ ನಿಮ್ಮೊಳಗೆ ದೇವಾಧಿ ಶ್ರೀದೇವಿಗೆ 1 ಅನುಭವಿಸುವ್ಹಾಂಗೆಂದೆಂದು ಮನೋಮಂದಿರಕೆ ತಂದು 2 ಕಾಣುವನ ಕಂಡು ನೋಡಿ ಕಾಣಿಸಿಕೊಂಬ್ಹಾಂಗೆ ಮಾಡಿ 3 ಪಾವನಗೈಸುವ ದೇವಗೆ ಕಾವ ಕರುಣನಿಧಿಗೆ 4 ಸಿರಿ ಸುಖಲೋಲಗೆ 5 ಅಂತರಾತ್ಮಲಿಹಗೆ ಸಂತತ ಸದೋದಿತಗೆ 6 ಭಾನುಕೋಟಿ ತೇಜಗೆ ದೀನಮಹಿಪತಿ ಸ್ವಾಮಿಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯಾನಂದ ಕಂದ ಜಯ ನಿರ್ಗುಣ ನಿದ್ರ್ವಂದ್ವ ಧ್ರುವ ಒಳಗೆ ಹೊರಗೆ ನೀನೆ ಪೂರ್ಣ ಬೆಳಗಿ ಬೆಳಗಾಗಿಹುದ ಥಳಥಳಿಸುವ ಗುಣ ಹೊಳವು ಸುಳವು ಪಾವನ 1 ದೇವಾಧಿದೇವ ದೇವ ಭುವನತ್ರಯಕೆ ಜೀವ ಭಾವಿಕರಿಗೆ ಕಾವ ಭವನಾಶಗೈಸುವ 2 ಅಜ ಸುರವರ ಮುನೀಂದ್ರ ನಿಜಘನಸುಖಮುದ್ರ ರಾಜ ರಾಜರಾಜೇಂದ್ರ 3 ಮುನಿಜನರ ಪ್ರಾಣಪದಕ ಅನುಭವದ ನಿಜಸುಖ ಖೂನ ವಿಶ್ವತೋಮುಖ ಅಣುರೇಣು ವ್ಯಾಪಕ 4 ಮೂರು ಗುಣಕೆ ರಹಿತ ಗುರುಮೂರ್ತಿ ಸಾಕ್ಷಾತ ತರಳ ಮಹಿಪತಿದಾತ ಹೊರಿಯೊ ನೀ ಸದೋದಿತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಾನಕೀನಾಥ ಜಯ ಕುಶೀಲವ ತಾತ ಜಾಮಾತ ಪ ಜಯ ಜಯತು ಸುಖದಾತ ಜಯ ಜಗನ್ನಾಥ ಅ.ಪ ಮರುತಸಂಭವ ಪಕ್ಷ ಮಹನೀಯ ಸುಕಲಾಕ್ಷ ಸರಿಸಿಜದಳ ನಿಭಾಕ್ಷ ಸಾಧು ಸಂರಕ್ಷಾ ಶರಧಿ ಬಂಧನದಕ್ಷ ಶಾತ್ರವನಿಕರ ಶಿಕ್ಷ ವರವಿಶಾಲಸು ವಕ್ಷ ವಂದ್ಯ ಪಾಲಾಕ್ಷ 1 ಘೋರ ಪಾಪವಿದೂರ ಕುಜನಸಂಹಾರ ಸಾರತತ್ವವಿಚಾರ ಸದಸದ್ವಿಹಾರ 2 ಶಿವವಿನುತ ಶುಭನಾಮ ಜೀಮೂತನಿಭಶ್ಯಾಮ ನವತುಳಸಿದಳಧಾಮ ನತಜನಪ್ರೇಮ ಅವನಿಪಾಲಲಲಾಮ ಅಖಿಳಾಮರಸ್ತೋಮ ಕವಿಗೇಯ ಗುರುರಾಮವಿಠಲ ರಿಪುಭೀಮ3
--------------
ಗುರುರಾಮವಿಠಲ
ಜಯ ದೇವ ಜಯ ದೇವ ಜಯ ಗುರು ನಾಗೇಶ ದಯಗುಣದಲಿ ನೀ ಮಾಡೊ ಭವತಾಪ ನಾಶ ದ್ರುವ ಜನ್ಮ ಮರಣಗಳೆಂಬ ಖಚ್ಚಿಖವಡಿಗಳು ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು ಬ್ರಹ್ಮಾನಂದದ ಸುಖ ಭಾಸುದು ಮನದೊಳು ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು 1 ತಾಪತ್ರಯವೆಂಬುದು ಬಲು ಪೀಡಿಯ ಗುಣ ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ ಕೋಪತಾಪವೆಂಬುದು ತದ್ದುದುರೀಯ ಗುಣ ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ 2 ದುರಿತ ಸಂಹಾರ ಸುರಜನ ಸಹಕಾರ ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ ತರಳ ಮಹಿಪತಿಸ್ವಾಮಿ ಘನ ಕೃಪಾಕರ ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ ಪರಿಪೂರ್ಣ ಶ್ರೀಗುರು ಮನ್ನಾಥ ಧ್ರುವ ಅಂದಿಗಿಂದಿಗೆ ನೀನೆ ನಿತ್ಯನುಭವದಿಂದ ತಂದಿ ತಾಯಿ ನೀನೆ ಶ್ರೀಹರಿ ಮುಕುಂದ ಬಂಧುಬಳಗ ನೀನೆ ಕುಲಕೋಟಿಗಳಿಂದ ಎಂದೆಂದೆನಗೆ ನೀನೆ ಫಲದೊಲವಿಂದ 1 ಸೃಷ್ಟಿ ಜನ ಪಾಲಕ ನೀನೆ ಸದ್ಗುರು ರನ್ನ ಸೃಷ್ಟಿಯಲಿ ಪೊಗಳುತಲಿ ಶ್ರುತಿಸ್ಮøತಿಗಳು ನಿನ್ನ ಇಷ್ಟ ಕುಲದೈವಗಳೆಂಬುದು ನೀ ಎನ್ನ ದೃಷ್ಟಿಸಿ ಮಾಡುವ ಭಕ್ತಜನರಿಗೆ ಪಾವನ್ನ 2 ಮನೋಹರ ಮಾಡುವ ಮಂಗಳಕರಮೂರ್ತಿ ಘನ ಸುಖದಾಯಕ ನೀನೆ ಜ್ಞಾನದ ನಿಜಸ್ಫೂರ್ತಿ ಭಾನುಕೋಟಿತೇಜ ನೀನೆ ಸಕಲಸಾರ್ಥಿ ಅನುದಿನ ಮಾಡೊ ಮಹಿಪತಿ ಶ್ರೀಪಾದಕೆ ಆರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಭಾಗೀರಥಿದೇವಿ ಜಯ ಜಾನ್ಹವಿ | ಭವ ಭಯನಿವಾರಿಣಿ ಸುಖಕಾರಣಿ ಪ ಪಟು ತ್ರಿವಿಕ್ರಮನ ಉಂಗುಟ ಸೋಂಕಲಾರ್ಭಟದಿ | ಸ್ಫುಟಿತ ಬ್ರಹ್ಮಾಂಡ ನಿಜಕಟಹದಲ್ಲುದಿಸಿ | ನೆಟನೆ ಪದುಮಜಪಾತ್ರ ತಟಕೆೃದು ತೀರ್ಥೆನಿಸಿ | ನಿಟಲಲೋಚನ ನಘನಜಟೆಗೆ ಬಂದು 1 ಕೆಲವು ಕಾಲಕೆ ಹಿಮಾಚಲದಿಂದ ಭಗೀರಥಗೆ | ಒಲಿದು ಕಾಶೀ ಪ್ರಯಾಗದಲಿ ಬಂದು | ಸಲೆಜಗವ ತಾರಿಸುತಲಿ ಮುಖ ಸಹಸ್ರದಿಂ | ಫಣಿ ನಿಲಯಕಿಳಿದೇ2 ಸ್ಮರಣೆಯಿಂದಘಹರಿಪೆ ದರುಶನದಿ ಗತಿಯೀವೆ | ನೆರೆ ಸ್ನಾನದಾ ಫಲವನರಿವರಾರು | ಗುರುಮಹೀಪತಿಜನುದ್ಧರಿಸು ಕರುಣದಲಿ | ಸಾಗರಪ್ರೀತೆ ಖ್ಯಾತೆ ಲೋಕಮಾತೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ರಮಾದೇವಿ ಸಾಗರ ಕನ್ನಿಕೆ ಪ ಪದ್ಮ ಪದ್ಮಾಲಯೇ ಪದ್ಮದಳಲೋಚನೆ | ಪದ್ಮಪ್ರಿಯೆ ದಿವ್ಯ ಪದ್ಮವದನೆ | ಪದ್ಮವಕ್ಷೋಜಾತಿ ಪದ್ಮಕಲ ಶೋಭಿತೆ | ಪದ್ಮಾಸನಾದೆನುತ ಪದ್ಮಚರಣೆ 1 ಮಂಗಲಾತ್ಮಕ ನೀಲಭ್ರಂಗ ಕುಂತಲಶಶಿ ಪ- ತಂಗ ಸನ್ನಿಭ ಕೋಮಲಾಂಗಿ ವರದೆ || ಗಾಂಗೆಯ ವಸನ ಸರ್ವಾಂಗ ರತ್ನಾಭರಣೆ | ಅಂಗಜಾಜನನಿ ಶ್ರೀರಂಗಪ್ರಿಯೆ 2 ಸತತ ಜಗದುತ್ಪತೆ ಸ್ಥಿತಿಯಂತೆ ಕಾರಿಣೆ | ನುತಗುಣ ಮಹಿಮಾಯ ಶ್ರುತಿ ಪೂಜಿತೆ || ಪತಿತಪಾವನ ಮಹೀಪತಿನಂದನಿಷ್ಟ | ದೇ ವತಿ ಭಕ್ತ ಜನಸುಖದಿ ಮತಿದಾಯಿತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಸದ್ಗುರು ಮೂತಿ ದಯವುಳ್ಳ ನಿಮ್ಮ ದಯ ಕೀರ್ತಿ ಧ್ರುವ ದಯಗುಣದಲಿ ಬಲು ಉದಾರ ತ್ರೈಲೋಕ್ಯಕೆ ನೀನೆ ಆಧಾರ ಜಯ ಸದ್ಗುರು ಮಾಮನೋಹರ ಇಹಪರ ಸಹಕಾರ 1 ಮುನಿಜನರಿಗೆ ನೀ ಪ್ರತಿಪಾಲ ಸ್ವಾನುಭವದ ಸುಖದ ಕಲ್ಲೋಳ ಘನಗುರು ನೀನೆ ಕೃಪಾಲ ದೀನದಯಾಳ 2 ಜೀವದ ಸುಪ್ರಾಣ ಪರಮಾಮೃತದ ನಿಧಾನ ಹೊರಿಯೊ ನೀ ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ಜಯಜಯವೆನ್ನಿರೊ ಧ್ರುವ ಕಂಗಳದೆರಸಿ ಅಂತರಂಗದೋರಿದವಗೆ ಮುಂಗಡÀಲೆ ಇದ್ದು ಸುಸಂಗದೋರಿದವಗೆ ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ ಮಂಗಳಾತ್ಮಕನ ಸಂಗಸುಖ ಬೀರಿದವಗೆ 1 ಆರು ಅರಿಯದ ವಸ್ತು ಸಾರಿದೋರಿದವಗೆ ಶಿರದಲಿ ಕರವಿಟ್ಟು ಕರುಣಿಸಿದವಗೆ ಮೂರುಗುಣಕೆ ಮೀರಿದ ತಾರಕ ಗುರುವಿಗೆ ಸಾರವಾಡದಲಿ ನಿಂದು ಪಾರದೋರಿದವಗೆ 2 ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ ಗುಹ್ಯ ಗುರುತ ತೋರಿದ ಗುರುಮೂರ್ತಿಗೆ ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯತು ಸೀತಾರಾಮ ರಾಮ ಚರ- ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮ ಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ- ಣಾರಿ ನೀನಲ್ಲದೆ ಯಾರಿಲ್ಲ ಗತಿ ಜಯ ರಾಮ ರಾಮ 1 ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ- ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮ ಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ- ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2 ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ- ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮ ನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ- ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3 ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ- ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮ ಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ- ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4 ಸೀತಾರಾಮ ರಾಮ ದುಷ್ಟ- ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮ ಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ- ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5 ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ- ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಸಾಧು- ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6 ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ- ಜ್ಞಾನ ಭಕ್ತಿಭಾಗ್ಯ ನೀನಿತ್ತು ಪೊರೆ ಜಯ ರಾಮ ರಾಮ ಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ- ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7 ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವ ಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಪರ- ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8 ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವ ಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮ ಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ- ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9 ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷ ಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮ ದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ- ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10 ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ- ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮ ಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ- ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11 ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ- ಸನ್ನ ನಿನ್ನ ಸ್ಮರಣೆಯನಿತ್ತು ಪೊರೆ ಜಯ ರಾಮ ರಾಮ ಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣು ಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12 ನಿತ್ಯ ನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ- ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮ ಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ- ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13 ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು- ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮ ಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ- ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14 ಸೀತಾರಾಮ ರಾಮ ವಾಯು- ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮ ಸೀತಾರಾಮ ರಾಮ ಬ್ರಹ್ಮಾ- ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ತುಪಾಕಿ ವೆಂಕಟರಮಣಾಚಾರ್ಯ
ಜಯದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ ಹಭವ ಭವಮುಖರಮೊರೆಯನು ಕೇಳುತಲಿ ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1 ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2 ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3 ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4 ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು ನೀತಿಯ ತಪ್ಪಿದ ರಾವಣ ಕುಂಭಶ್ರವಣರನು ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5 ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6 ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯ ವಾಸುದೇವ ಭಾಸುವ ಭಾಸ್ಕರಕೋಟಿತೇಜನ ಮನದೈವ ಧ್ರುವ ಪ್ರಾರ್ಥಿಸುವದರ್ತಿ ಆರ್ಥಿಯ ಘನ ಸ್ಫೂರ್ತಿ ಸ್ಪೂರ್ತಿಗೆ ಸುಸ್ಥಾನಾಗಿಹ ನೀ ಘನಗುರು ಮೂರ್ತಿ ಮೂರ್ತಿ ನಿಮ್ಮ ಕೀರ್ತಿ ಬೆಳಗುದು ಭಾವಾರ್ತಿ ಅರ್ತಿ ಬೆಳಗುವ ಕಂಗಳಿಗ್ಯಾಗಿಹ ನೀ ಸಾರ್ಥಿ 1 ಸುಗುಣ ನಿರ್ಗುಣ ನೀನೆ ಪರಿಪೂರ್ಣ ಯೋಗಿಯ ಮಾನಸಹಂಸನಾಗುವೆ ನೀ ಪೂರ್ಣ ಬಗೆ ಬಗೆ ಭಾಸುವ ಭಕ್ತವತ್ಸಲ ಗುಣ ಸುಗಮಾಗೂದಕೆ ನಿಮ್ಮ ದಯ ಆಧಿಷ್ಠಾನ 2 ಮುನಿಜನಕಾಗುವ ಖೂನ ಸ್ವಾನುಭದ ಜ್ಞಾನ ಸನಕ ಸನಂದನ ವಂದಿತ ನೀನೆ ಅನುದಿನ ಘನಸುಖದಾಯಕ ಸದ್ಗುರು ನೀ ನಿಧಾನ ದೀನ ಮಹಿಪತಿ ಸ್ವಾಮಿ ನೀ ಸನಾತನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು