ಒಟ್ಟು 1636 ಕಡೆಗಳಲ್ಲಿ , 112 ದಾಸರು , 1355 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೀತಾಂಬರಧರ ನಮೋನಮೋ ವನ ಜಾತಾಂಬಕ ತೇ ನಮೋ ನಮೋ ಪ ಖ್ಯಾತ ಚರಿತ್ರ ವಿಧಾತೃಜನಕ ಪುರು - ಹೂತ ಸಹೋದರ ನಮೋ ನಮೋ ಅ.ಪ ಪಾರ್ಥೋನಿಧಿಶಯ ನಮೋ ನಮೋ ಶ್ರೀ ತರುಣೀಪ್ರಿಯ ನಮೋ ನಮೋ 1 ಶ್ಯಾಮಳನೀರದ ಕೋಮಳದೇಹ ನಿ ರಾಮಯ ನಿರ್ಮಲ ನಮೋ ನಮೋ ಕಾಮಜನಕ ಬಲರಾಮ ಸಹಜ ಸಂ ಗ್ರಾಮಮುಜ್ವಲ ನಮೋ ನಮೋ 2 ಸುಂದರ ನಮೋ ನಮೋ ಕುಂದರದನ ಶರದಿಂದುವದನ ಗೋ ವಿಂದ ಜನಾರ್ಧನ ನಮೋನಮೋ 3 ಶಂಸ ವಿಹಿಂಸಕ ನಮೋ ನಮೋ ಸಂಸರದಘ ವಿಧ್ವಂಸಕ ಪರಮ ಹಂಸೋತ್ತಂಸಕ ನಮೋ ನಮೋ 4 ಗರುಡಗಮನ ತೇ ನಮೋ ನಮೋ ವರದವಿಠಲ ತೇ ನಮೋ ನಮೋ 5
--------------
ವೆಂಕಟವರದಾರ್ಯರು
ಪುಟ್ಟಿಸಿದ್ದೇನು ಕಾರಣವೋ ಸೃಷ್ಟಿಗೋಡೆಯಾ ಪ. ಶ್ರೀಕೃಷ್ಣ ಮೂರುತಿವೊಂದಿಷ್ಟು ತಿಳಿಯದೋ ಮಾಯಾ ಜೀಯಾ ಅ.ಪ. ಆವಾವ ಸಾಧನವಾಗಲಿಲ್ಲಾ ಯನ್ನಿಂದ ಶ್ರೀದೇವಾ ಕರವ ಬಿಡುವುದುಚಿತವೇನು ಮಾಧವಾ ನಿನ್ನ ಮನದಣಿಯ ನೋಡಾದೆ ಹಾಗಾದೆ 1 ಹರಿಮೂರ್ತಿ ನೋಡಲೊಲ್ಲಾದು ಯನ್ನಮನವು ಪರಪುರುಷರ ನೋಡಿತು ಮನಸು ಹೊಲೆಗೆಡಿಸಿತು ಪುರುಷೋತ್ತಮನ ಮರಿತಿತು 2 ಹರಕಥಾ ಶ್ರವಣ ಕೇಳದು ಎನ್ನ ಕರ್ಣಂಗಳು ಪರವಾರ್ತೆಗೆ ಹೊತ್ತು ಸಾಲದು ಸರ್ವೋತ್ತಮನೆ ನಿನ್ನ ಮರೆತೆನು ಉನ್ಮತ್ತಳಾದೆ 3 ಹರಿನಿರ್ಮಾಲ್ಯವ ಕೊಳ್ಳದು ಯನ್ನ ಮೂಗು ಪರಪುರುಷರಾ ಮೈಗಂಧವಾ ಆಘ್ರಾಣಿಸುವುದು ನಿನ್ನ ನಾಮ ಸ್ಮರಣೆಯನು ಮರೆತೆನು 4 ಹರಿಯಾತ್ರೆಯಾ ಮಾಡಲಿಲ್ಲ ಯನ್ನ ಕಾಲು ಜಾರಸ್ತ್ರೀಯರ ಮನೆಮನೆ ತಿರುಗುವೆನು ಪರಿ ನೀಯನ್ನ ಮರೆಯುವುದುಚಿತವೆ 5 ಎನ್ನ ಇಂದ್ರಿಯಗಳು ಈ ಪರಿವ್ಯರ್ಥವಾಯಿತು ಸಾರ್ಥವಾಗಲಿಲ್ಲ ಪಾರ್ಥಸಾರಥಿ ನಿನ್ನ ನೋಡಿ ಪವಿತ್ರಳಾಗಲಿಲ್ಲ ಏಕಿನ್ನ ಈ ಪರಿಯ ಮರುಳು ಮಾಡುವಿದೇವಾ ಧರೆಯೊಳಗೆನ್ನ ತಂದುದಕೆ ಬಂದಕಾರ್ಯವಾಗಲಿಲ್ಲ 6 ಆವಬಾಧೆಯು ನಾನರಿಯೆ ಪರಜಾತಿಯ ಆ ಮನಸು ಪೋಗುವುದು ಕೋತಿಯಂದದಿ ಕುಣಿಸುವರು ಇದು ರೀತಿಯೆ 7 ಭವಸಾಗರದೊಳು ಇದ್ದು ಸೊರಗಲಾರೆನೊ ಘಾಸಿಗೊಳಿಸುವುದು ನಿನಗೆ ಧರ್ಮವೆ ವಾಸುದೇವನೆ ನಿಮ್ಮ ನಾಮವನು ನೆನೆಯದೇ 8 ಇರುಳು ಹಗಲು ಹೀಗೆ ದುರುಳತನದಲಿ ತಿರುಗಿದೆನು ಗುರು ಹಿರಿಯರಂಘ್ರಿಗೆ ಶಿರವ ಬಾಗದೆ 9 ಎಷ್ಟು ಮೊರೆ ಹೊಕ್ಕರೇನು ಒಂದಿಷ್ಟು ದಯಪುಟ್ಟದು ನಾನೀಗ ದ್ವೇಷಿಯೇನೋ ಶೇಷಶಯನನೆ ನಮ್ಮ ಕಾಳೀಮರ್ಧನಕೃಷ್ಣನೆ 10
--------------
ಕಳಸದ ಸುಂದರಮ್ಮ
ಪುಣ್ಯೋದವೇ ಈ ಪುಣ್ಯಭೂಮಿಯೊಳು ಪನ್ನಂಗಶಯನ ಸನ್ನುತಿಪ ದಾಸರಿಗೆ ಪ ಕಡುಸಿರಿವಂತರಾದೊಡೆ ಬಡವರ ಬಾಯ್ಬಡಿಯದೆ ಕೊಡುವಿಡುವ ಕೆಡದತಿ ಪುಣ್ಯ ಬಡತನವಿರ್ದಡೆ ಎಡೆಬಿಡದೆ ಒಡಲೊಳು ಜಡಜಾಕ್ಷನಡಿಧ್ಯಾನ ಹಿಡಿದ ಮಹಪುಣ್ಯ 1 ಮಡದಿಯರೊಂದಿಗೆ ಬಿಡದೆ ಸಂಸಾರಗೈಯೆ ದೃಢಯುತರು ಮನೆಯೊಳಗಡಿಯಿಡುವ ಪುಣ್ಯ ಸಡಗರದಿ ಮಕ್ಕಳನ್ಹಡೆದು ಮೋಹದಿ ಜಗ ದೊಡೆಯನ್ಹೆಸರಿಟ್ಟು ನುಡಿಯುವ ಪುಣ್ಯ 2 ತಿರುಕರಾಗಿರ್ದಡೆ ತಿರಿದು ತಂದನ್ನವನು ಹರಿಯಪ್ರಸಾದವೆಂದು ತಿರಿದುಣುವ ಪುಣ್ಯ ಪರಮಪುರುಷನ ಚರಣ ನಿರುತ ಸ್ಮರಿಪ ಪುಣ್ಯ 3 ಹಿಂದೆ ಮುಂದೆ ತಮಗೆ ನಿಂದೆಯಾಡಲು ಆ ನಂದದಿ ಹಿಗ್ಗದ ಕುಂದದ ಪುಣ್ಯ ಮಂದಿಮಕ್ಕಳು ಬಿಡದ್ಹೊಂದಿಸಲದು ಹರಿ ಗೆಂದು ಅರ್ಪಿಸಿ ಮನಸೊಂದೆಮಾಡಿದ ಪುಣ್ಯ 4 ನೀರಿನೊಳಿರಲೇನರಣ್ಯದೊಳರಿಲೇನು ಘೋರತಾಪದಿರಲೇನಪಾರಜ್ಞಾನಿಗಳು ಪಾರಮೋಕ್ಷಕ್ಕಧಿಪ ಧೀರ ಶ್ರೀರಾಮಪಾದ ವಾರಿಜದೊಳು ಮನ ಸೇರಿಸಿದ ಪುಣ್ಯರಿಗೆ5
--------------
ರಾಮದಾಸರು
ಪುರಂಜನೋಪಾಖ್ಯಾನ ಲಾವಣಿ ಗೆರಗಿ ಮಹೇಶ್ವರನಾ ಶಾರದೆಯ ಸರಸಿಜಸಂಭವನಾ | ಇಂದಿರೆ ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ ಕರುಣಿಪುದು ಜ್ಞಾನ | ಚರಣಗಳಿಗೆ ಬಿನ್ನೈಸುವೆನಾ 1 ಯತಿಗಣಪ್ರಾಸೊಂದಾದರು ತಿಳಿಯದು ಮತಿಹೀನನು ನಾನು | ನಾನಾಚಮ- ತ್ಕøತಿಗಳರಿಯದವನು | ಆದರೀ ಕೃತಿಯಲಿ ತಪ್ಪೇನು | ಮತಿವಂತರಾಲಿಸುವುದು ನೀವಿದನು 2 ಒಂದರೊಳಗೆ ಎರಡಾಗಿ ಎರಡರೊಳು ಹೊಂದಿ ಮೂರ್ನಾಲ್ಕೈದಾಗಿ ಆರೇಳೆಂಟೊಂಬತ್ತುಗಳಾಗಿ | ಸಕಲದೊಳು ಹೊಂದಿರುವುದುತಾಗಿ ಕುಂದಿಲ್ಲದೆ ಇರುತಿರುವ ಮಹಾತ್ಮನ ರಂದವ ಚನ್ನಾಗಿ | ತಿಳಿದು ಸುಖ ತಂದವನೇಯೋಗಿ 3 ಮೊದಲು ಮಹತ್ ಸೃಷ್ಟಿಯಲಿ ಎಲ್ಲತ- ತ್ವದಲಿ ತೋರುತಿಹುದು ಬೇರೆಬೇರಾಗಿ ಕಾಣಿಸುವುದು ಅದುಭುತವಾಗಿಹ ಅನಾದಿ ಕರ್ಮತ್ರಿ- ವಿಧದಿ ಭಾದಿಸುವುದು | ಅದರೊಳು ಬಿ- ಡದೆ ತಾ ಮುತ್ತುವುದು ಎಂದಿಗು ನಿಜವತಿ ರಹಸ್ಯವಿದು 4 ಮೊಟ್ಟೆವೊಂದು ದಶಸಾವಿರವರುಷಗ ಳಿಟ್ಟು ಜಲದಿತಾನು | ಅದಕೆ ಕೈ- ಗೊಟ್ಟು ಎಬ್ಬಿಸಿದನು | ನಾನಾ ವಿಧ ವೆಷ್ಟಿ ಸಮಷ್ಟಿಗಳೆರಡೆಂದದರೊಳು ಗುಟ್ಟಂಗಡಿಸಿದನು | ಗುರಿಯಮಾ ಡಿಟ್ಟು ಚೇತನಗಳನು | ಅನೇಕವು ಪಟ್ಟಣ ರಚಿಸಿದನು 5 ಈ ಪಟ್ಟಣಕಾರ್ ಮಂದಿ ಇರುವರತಿ ಕಾಪಾಡುವರದರೊಳು ವ್ಯಾಪಾರಗಳನು | ಬಹುವಿಧಮಾಡುವ- ರಾಪುರ ಜನರುಗಳು | ಇವರುನಡೆ ಕೋಪಿಸೆ ಹಗಲಿರುಳು 6 ಎರಡು ಮಾರ್ಗದೊಳಿರುತಿಹರೆಲ್ಲರು ಹುರುಡಿಲ್ಲವುನೋಡೆ | ಗಜಿಬಿಜಿಯು ತರತರದಲಿಮಾಡೆ | ನಮಗಿದೆ ಸ್ಥಿರವೆನ್ನುತ ಕೂಡೆ | ಪರಿಪರಿ ಬಗೆಯಲಿ ಭೇದ ಪುಟ್ಟುವುದು ಕರೆಕರೆಯಂದುಡೆ | ವಳಗೆಕೆಲ ಬರುಹರುಷದಿ ನೋಡೆ | ಯುವಶೃಂ- ಗರುವು ಇದಕೆ ಈಡೆ 7 ಇದೆತನ್ನದೆನುತೋರ್ವಳು ಮಾನಿನಿ ಚದುರತನದಿ ಬಂದು | ಊರ ಮುಂದಿರುವ ವನದಿ ನಿಂದು | ಅವಳಿಗಿರು ವುದು ಜನ ಹನ್ನೊಂದು ಚದುರೆಯೈದುತಲೆ ಸರ್ಪವಾಡಿಸುತ ಜಾಣೆಯಿರುವಳಂದು | ತಾನೊಬ್ಬನ ಇಂದು | ಸುಖದೊಳಾ- ಳ್ಬೇಕುರಾಜ್ಯವೆಂದು 8 ಅರಸನೊಬ್ಬ ವಿಜ್ಞಾತನೆಂಬ ಭೂ- ಸುರನಸಹಿತನಾನಾ | ದೇಶಗಳ ತಿರುಗುತ ಉದ್ಯಾನ | ವನದಿಕಂ- ಡನು ಆತರುಣಿಯನ ಪರಮ ಮಿತ್ರನಹ ಬ್ರಾಹ್ಮಣನ ಮರೆತು ಹರುಷದಿ ಪೊಕ್ಕುವನ | ಸ್ಮರಶರಕೆ ತರಹರಿಸುತಲಿರೆ ಮನ | ಕೇಳಿದನು ನಗುತಲಿ ನಾರಿಯನ 9 ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ- ರೇನು ಪೇಳೆ ಹೆಣ್ಣೆ | ಮಾತನಾ- ಡೆಲೆ ತಾವರೆಗಣ್ಣೆ | ನಿನ್ನ ಮೈ- ಸುಲಿದ ಬಾಳೆಯ ಹಣ್ಣೆ ಯಾರದು ಈ ಜನ ಉರಗವೇನು ವನ- ವಾರದು ಶಶಿವದನೆ | ಈ ಪುರವ- ನಾಳುವನಾವವನೆ | ಒರ್ವಳಿ- ಲ್ಲಿರುವುದಕೇನ್ಹದನೆ 10 ಎನಲು ನಸುನಗುತವನಿತೆನುಡಿದಳೀ ಜನಗಳು ನನ್ನವರು | ಇಲ್ಲಿಕಾ- ಣುವ ಪುರ ನನ್ನೂರು | ಸರ್ಪನ- ನ್ನದು ಇದಕಿನ್ನಾರು | ಅರಸರಿಲ್ಲ ನಾನೊಬ್ಬಳಿರುವೆನೀ ವನದೊಳು ನೀನ್ಯಾರು | ನಿನ್ನಕಥೆ ವಿವರಿಸೆನಗೆ ತೋರು | ಯನ್ನ ಬಳಿ- ಗಿಷ್ಟವಿರಲುಸಾರು 11 ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ- ನೆನ್ನ ಪುಷ್ಪಶರನು | ನೀನುಪೇ- ಪರಿ ವಲ್ಲಭನನು ಮಾಡಿಕೊ ಎನ್ನನು ಬಹು ಬಲ್ಲಿಯಳೆ ನೀನು | ನಿನ್ನಸರಿ ಚಲ್ವೆಯರಾರಿನ್ನು | ಇಬ್ಬ- ರಾಳ್ವೆಯೀವೂರನ್ನು 12 ಎನಲು ಹರುಷಗೊಂಡಾಕೆ ಸಮ್ಮತಿಸಿ ಜನವೆರಗಿತಂದು | ನುಡಿದಳಾಮೊಗದ- ಲಿನಗೆತಂದು | ನಿನ್ನಮೇಲ್ ಮನಸಾಯಿತುಯಿಂದು ನಿನ್ನನು ಮಾನವೇತಕಿಂದು | ಆಳು ಜನಸಹಿತ ಪುರವ ಮುಂದು ನೀನು ನಾನಿರುವೆವಾಗಿವಂದು 13 ಸರ್ವವನ್ನು ಭವದಿ ಆದರಿಸುತತತ್ಪುರ ಮಧ್ಯ | ದೊ ಳುಪ್ಪರಿಗೆಯೇರಿ ತ್ವರದಿ | ಸರ ಸಗಳನಾಡಿ | ಬಹುತರದಿ ಮುಳುಗಿ ಸಂಸಾರವೆಂಬಶರಧಿ 14 ಅನ್ನಪಾನಾಭರಣ ಕುಸುಮ ವಿನ್ನು ಗಂಧಧೂಪ | ತಾಂಬೂಲಗಳ ಮನ್ನಣೆಯಲಿ ಭೂಪ | ಪೊಂದಿದ ಸುಖ ವನು ನಾನಾರೂಪ | ನನ್ನದು ಎನ್ನುತಲಿ ಪ್ರತಾಪ | ಶಾಲಿತಾ- ರಾಜ್ಯವಾಳಿದನಾಗುತಭೂಪ 15 ದ್ವಾರಗಳೊಂಭತ್ತಾಪುರಕಿರುವುದು ಮೂರು ಪೂರ್ವದಲ್ಲಿ | ಮೇ- ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ ಕಟ್ಟಿಹುದು ಕನ್ನಡಿಯಲಿ ತೋರುವುದುತ್ತರದಕ್ಷಿಣದೊಳೆರಡು ದ್ವಾರ ಪಶ್ಚಿಮದಲಿ ಕಾರಣವದರಲ್ಲಿ 16 ಮತ್ತದರೊಳಗಾರ್ಸುತ್ತು ಕೋಟೆ ಒಂ- ಬತ್ತು ಬಾಗಿಲ ಪುರದಿ | ಅನೇಕವು ಗೊತ್ತನಾವವಿಧವಿ | ಉತ್ತಮವಹಪುರದಿ | ಮುಖ್ಯವಾ- ಗಿರುವದೆರಡು ಬೀದಿ | ದೊರೆಯಮನೆ- ಯಿರುವುದು ವಿಸ್ತರದಿ17 ಇಂತರಮನೆಯಲಿ ದೊರೆ ಕಲಿಯಾಗುತ ಕಾಂತೆಯೊಡನೆ ಸೇರಿ | ಸದಾಸು- ಸ್ವಾಂತನಾಗಿಮೀರಿ | ಸೌಖ್ಯಹೊಂ- ದುತಲಾವೈಯ್ಯಾರಿ ನಿಂತರೆ ನಿಲುವನು ಕುಳಿತರೆ ಕೂಡುವ ಮಲಗಿದರೆ ನಾರಿ | ತಾನು ಮಲಗುವಯೇಕದಿ ಸೇರಿ | ಉಂಡ- ರುಣ್ಣುವನು ಅವಳನುಸಾರಿ 18 ಮನದಿಯೋಚಿಸದನೂ | ಈಗಲೆ ಮೃಗಯಾತ್ರೆಗೆತಾನೂ | ಸೊಗಸಿಂದ ಸೈನ್ಯವ ಕೂಡುತ ಪುಂ- ಚಪ್ರಸ್ಥವನವನು | ಪೊಕ್ಕು ಅ- ಲ್ಲಿರುವಮೃಗಗಳನ್ನು | ಹೊಡೆದು ಸಂ- ತೋಷದಿ ಸುಖಿಸುವೆನು 19 ಮೂರೆರಡು ಕುದುರೆಯೈದು ಮೇಲ್ ಮೂರು ಪತಾಕಿಗಳು | ಅ- ಚ್ಚೆರಡು ಎರಡು ಕೂಬರಗಳು | ಚಕ್ರ ವೆರಡುವರೂಥಗಳೇಳು ಆರಥಕೊಪ್ಪುವದೇ- ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ ಸಾರಥಿ ಎರಡು ಗತಿಗಳು | ಬಿಗಿಸಿಹುದು ಕನಕಭೂಷಣಗಳು 20 ಪುರಂಜನ ಭೂ- ಕಾಂತಕರದಿ ಧನುವ | ಪಿಡಿದುಸು- ಸ್ವಾಮತದಿಂದಲನುವಾ | ಗಿಬಹ ಹನ್ನೊಂ- ದು ತನ್ನ ಜನನ | ಸಂತಸದಲಿ ಕೂ- ಡುತ ಹೊರಡುತ ತಾ ಪೊಕ್ಕನು ಕಾನನವಾ | ಶರಗಳಿಂ- ದ್ಹೊಡದು ಮೃಗನಿವಹವಾ | ಮೇರೆಯಿಲ್ಲ- ದೆ ತಟ್ಟುತ ಭುಜವಾ 21 ಇನಿತು ಬೇಟೆಯಾಡುವ ಕಾಲದಿ ತನ್ನ ಮನದಿ ನೆನೆದು ಸತಿಯಾ | ತಕ್ಷಣವೇ ಬಂದು ಸೇರಿ ಮನೆಯ | ಕಾಣದೆ ಹುಡುಕಿದನು ಯುವತಿಯ ಮಂಚದೊಳಿಹ ಸತಿಯ | ಕಂಡುಲಾ- ಲಿಸುತ ಚಮತ್ಕøತಿಯಾ | ನುಡಿಯಲುಪ- ಚರಿಸಿದನಾಕಾಂತೆಯ 22 ನೂರುವರುಷವೀರೀತಿಯವಳೊಡನೆ ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ- ಸಾರದಿ ಕಾಲವನು | ಯಾರೆ- ಮೀರಿ ಹೋದುದಿನ್ನು | ಮೊಮ್ಮಕ್ಕಳ ಪಡೆದನನೇಕರನು ದೇಶತುಂಬಿಸಿದ ತನ್ನ | ವರನು 23 ಉತ್ತರ ದಕ್ಷಿಣ ಪಾಂಚಾಲಗಳಾ ಳುತ್ತಲಿವನು ತನ್ನ | ಸುತರಬೆರೆ- ಯುತ್ತಸದಾ ಚಿನ್ನ | ಬೆಳ್ಳಿ ನವ- ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ- ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ ಚಿಂತೆಯಿಲ್ಲದೆ ನಾ | ಬಲು ಪುಣ್ಯವಂತನೆ | ನ್ನುತ್ತತಿಳಿದಿರುವನಾ 24 ಚಂಡವೇಗವೆಂಬುವರಾ ತಮ್ಮತಮ್ಮ ಹೆಂಡಿರುಗಳು ತಾವು | ಸೇರಿಮು- ನ್ನೂರರವತ್ತು ಜನವು | ಗಂಧರ್ವರು ಬಂಡೆಬ್ಬಿಸಿ ಪುರವು | ದಂಡು ಮುಂದಾಗೆ ರಿಪುಬಲವು | ಕ್ಷೀಣಗತಿ ಹೊಂದುತಲಿರೆ ಪುರವು 25 ಸ್ತ್ರೀಜಿತನಾಗಿಹಕಾರಣದಲಿಯಾ ರಾಜಪುರಂಜನಗೆ | ಯತ್ನವಿ- ಲ್ಲದೆ ತನ್ನಯಪುರಿಗೆ | ಕೇಡುಬಂ- ದರು ತೋರದು ಕೊನೆಗೆ | ಶೋಕದಿ ಮನದೊಳಗೆ | ಮಿ ಡುಕುತಲಿರಲಾನೃಪತಿಮೇಗೆ | ಮತ್ತು ಶತ್ರುಗಳುನೆರೆಯೆ ಹೀಗೆ 26 ಯವನೇಶ್ವರನೊಬ್ಬನುಭಯಪ್ರಜ್ವಾ ರಾದಿ ಸೈನಿಕರನು | ಕಾಲಕನ್ಯಾಖ್ಯ ಯುವತಿಯನ್ನು | ಕರೆದುಕೊಂ- ಡೀಪುರವ ಸೇರಿದನು | ಬವರದಿ ಗೆದ್ದನು ಭವಿಸಿದನಾ ಕನ್ಯಾಮಣಿಪಟ್ಣವನು | ಭೋಗಿಸಿದ- ಳಾಪ್ರಜ್ವಾರನನು | ಸುಡಲುಪುರಿ ಕಂಡು ಪುರಂಜನನು 27 ಕಾಲಕನ್ಯೆ ತಾ ಲೀಲೆಯಿಂದಲಿ ನೃ- ಪಾಲನ ಹತ್ತಿಗೆಯಾ | ಪಿಡಿಯೆ ಹಾ- ಹಾಯೆನಲಾರಾಯಾ | ಅಬಲತೋ- ರದು ಮುಂದೆ ಉಪಾಯ | ಬಾಲಕರನು ಪತ್ನಿಯ | ನುಕೂಗಿಬಿಡು-
--------------
ಗುರುರಾಮವಿಠಲ
ಪುರಂದರ ದಾಸರಾಯರ ಪೋಷಿಸುವ ಸಂತೋಷದಿಂದಲಿ ಪ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ 1 ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ2 ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ ಮುತ್ತಿನ ಮೂಗುತಿಯ ಕೊಡು ಎನೆ ಉತ್ತುಮಳು ತೆಗೆದಿತ್ತಳಾಕ್ಷಣ 3 ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ ಪಾಕಿ ಕೊಡೆಯೆನುತ ಅದು ಕಂಡು ಇದು ನ ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು ಎಂದಾಕೆ ಹೋದನು ತಿರೂಗಿ ಬಾರದೆ 4 ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು ಕರದಿ ಬಟ್ಟಲು ಧರಿಸಲಾಕ್ಷಣ ತ್ವರಿತದಲಿ ಹರಿ ಅದರೊಳಾಕಿದ 5 ಪುರುಷನಾ ಕೈಕೊಳಗೆಯಿಡಲು ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ 6 ಬಂದಿದ್ದ ಪರಿಪಕ್ವವೆನಗೆ ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ ಕೋವಿದರ ಕರೆದಿತ್ತ ಹರುಷದಿ ಕಾವನಯ್ಯನ ದಾಸನಾದ 7 ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು ಅಪರೋಕ್ಷ ಪುಟ್ಟಲು ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ ಧೋಕ್ಷಜನು ಸಂರಕ್ಷಿಸಿದ 8 ಘೊರ ನರಕದೊಳಗೆ ಬಿದ್ದಾ ಪಾರ ಜನರು ಚೀರುತಿರಲು ದ್ಧಾರ ಮಾಡಿದ ನಾರದಾರಿವರು ಅವ ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ 9
--------------
ವಿಜಯದಾಸ
ಪುರಂದರ ಗುರುರಾಯ ಪೂರ್ಣ ಗುಣಾಂಬುಧೆ ಶರಣಜನ ಪರಿಪಾಲಾ ಸುಸ್ಸೀಲಾ ಪ ಕಲಿ ವಿಪ್ರಜಿತು ದ್ವಾಪರ ಮಧು ಕೈಠಭ ಖಳರು ಬಂದಾಗೆ ಅಪಾರ ಸುಲಭ ಮಾರ್ಗಕೆ ಎನ್ನ ಸುಳಿಯಲೀಸದೆ ತಮ್ಮ ಬಳಗಾ ಹರಿಯಬಿಟ್ಟು ಕಳವಳಿಸುವ ಚಂಚಲತನವಿತ್ತು ಕ ಮಾಯಾ ಕತ್ತರಿಸುವ ಪ್ರೀಯಾ1 ಜ್ಞಾನ ಭಕುತಿ ವಿರಕುತಿ ಸರ್ವದಯಿತ್ತು ಮಾಣಿಸುವುದು ದುರ್ಮತೀ ನೀನೋಲಿದು ಯಿಂದು ಅನಂತ ಜನುಮಕ್ಕೆ ಪಾದ ಧ್ಯಾನವೆ ಮಾಡುವ ಬಗೆಯಿಂದ ಗುರುವೆ ನಿತ್ಯಸರು ತರುವೆ 2 ಈ ದೇಹ ಬಂದದೆ ಪಂಚ ಭೇದವೆ ತಿಳಿಸಿ ಮೋದವೆ ಕೊಡು ಪ್ರಾಪಂಚ ಖೇದವೆ ಖಂಡಿಸಿ ಆದರಿಸುವದಪರಾಧವಗಳೆಣಿಸದೆ ಸಾಧುಗಳಡಿಯಲಿ ಕಾದುಕೊಂಡಿಹ್ಯ ವಿ ನೋದವೆ ಕರುಣಿಸು ವಿಜಯವಿಠ್ಠಲನ ಪ್ರೀಯಾ3
--------------
ವಿಜಯದಾಸ
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ಧ್ರುವ ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ಮಾಡುವ ಬನ್ನಿರೊ 1 ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಡುವ ಮಾಡುವ ಬನ್ನಿರೊ 2 ಅರವ್ಹೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ನಲಿದಾಡುವ ಬನ್ನಿರೊ 3 ಭಕ್ತವತ್ಸಲ ಮೂರ್ತಿಗೆ ಸುಖದು:ಖ ಧೂಪಾರತಿ ಮಾಡುವ ಮಾಡುವ ಬನ್ನಿರೊ 4 ನೆನವು ನೈವೇದ್ಯದಲಿ ಮನ ಬುದ್ಧಿ ತಾಂಬೂಲವ ನೀಡುವ ಮಾಡುವ ಬನ್ನಿರೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೂಜಿಸ ಬಲ್ಲೆನೆ ನಾನು ನಿನ್ನಂಘ್ರಿಯ ರಾಜೀವದಳ ನಯನ ಪ ಭಂಜನ ಭವ ರಾಮಚಂದ್ರ ಸೀತಾ ಹೃತ್ಕುಮುದ ಚಂದ್ರ ಅ.ಪ ಪಾರಿಜಾತ ಪುನ್ನಾಗ ಬಕುಳ ಮಂ- ದಾರ ಮಲ್ಲಿಕ ಕೇತಕೀ- ಸಾರಸ ಜಾಜಿ ಚಂಪಕ ತುಳಸಿಯುಕರ- ವೀರವೇ ಮೊದಲಾದ ದಿವ್ಯ ಪುಷ್ಪಗಳಿಂದ 1 ವಿಶ್ವಾದಿ ಸಾಹಸ್ರನಾಮಂಗಳಿಂ ನಿನ್ನ ಶಾಶ್ವದ್ರೂಪವ ತಿಳಿದು ಅಶ್ವಮುಖಾನಂದಮಯ ಪರಮಾತ್ಮ ನಿ- ನ್ನರ್ಚಿಸುವಡೆ ಚಪಲ ಚಿತ್ತಗೆ ಸಾಧ್ಯವೆ 2 ಸೂರ್ಯ ಚಂದ್ರರು ದೀಪ ನೀರೆಲ್ಲ ಅಭಿಷೇಕವೂ ತೋರೂವದಿಗ್ವಸ್ತ್ರ ಪೃಥ್ವಿಗಂಧವು ಸರ್ವ ಸಾರ ಭೋಕ್ತಗೆ ಗುಣಗಳ ತಾಂಬೂಲಾದಿಗಳಿಂದ3 ಕಮಲ ಸದನ ಹಂಸಾಖ್ಯ ಕು- ಡಿದ ನೀರು ಅಭಿಷೇಕವೂ ಮುದದಿ ನಿತ್ಯದಿ ಉಂಬುವುದೆ ನೈವೇದ್ಯವು ಪ್ರತಿ ಪದ ಪ್ರದಕ್ಷಣೆ ಮಲಗುವದೆ ವಂದನೆಯೆಂದು 4 ಒಂದು ಅರಿಯದ ಉಭಯಾಂಧನು ನಾನು ಗೋ- ವಿಂದ ನಿನ್ನಯ ಭಕ್ತಾರಾ ಸಂದೋಹದೊಳಗಿಟ್ಟೆನ್ನರ್ಚನೆ ಕೈಕೊಂಡು ತಂದೆ ಪಾಲಿಸೋ ಗುರುರಾಮ ವಿಠಲ ಸ್ವಾಮಿ 5
--------------
ಗುರುರಾಮವಿಠಲ
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಪೊಂದಿ ಪ್ರಾರ್ಥಪೆನಯ್ಯಾ ಪ. ಬಂಧನದೊಳು ನೊಂದೆನಯ್ಯ ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ ಕುಂದುಗಳೆಣಿಸದಿರಯ್ಯಾ ಗುರು ಗಂಧವಾಹನ ವಜ್ರಕಾಯಾ ಅ.ಪ ನಾನು ನನ್ನದು ಎಂಬ ಮದ ಬಿಡಿಸೊ ಜ್ಞಾನ ಭಕ್ತಿ ವಿರಕ್ತಿ ಕೊಡಿಸೊ ಜಾನಕಿಪತಿ ಪದದಿ ಮನ ನಿಲಿಸೊ ಸಾನುರಾಗದಿ ಸತತ ಉದ್ಧರಿಸೊ 1 ನಿನ್ನ ದಯದಿಂ ರವಿಜ ಭಯ ಕಳೆದಾ ನಿನ್ನ ವಲಿಮೆಲಿ ಪಾರ್ಥ ಜಯ ಪಡೆದಾ ನಿನ್ನ ನಂಬದೆ ರಾವಣನು ತಾ ಮಡಿದಾ2 ಶ್ರೀಮದಾನಂದತೀರ್ಥ ಮಧ್ವೇಶಾ ಶಾಮಸುಂದರ ಸ್ವಾಮಿ ನಿಜದಾಸಾ ಕಾವಿತಾರ್ಥಗಳಿತ್ತು ಪೊರೆ ಅನಿ ಶಾ 3
--------------
ಶಾಮಸುಂದರ ವಿಠಲ
ಪೊರಿಯದಲಿರುವರೇನು ಶ್ರೀಹರಿ ನೀನು ಪ ನಿರುತ ನಿನ್ನನಾನು ಸ್ಮರಿಸುತಲಿರುವೆನು ಕೌಸ್ತುಭ ಭೂಷಾ ಹರುಷದಿ ಮಂಜುಭಾಷಾ 1 ಭವಾರ್ಣವ ಪಾರಗಾಣಿಸೋ ದೇವಾ ಸಾರಸದಲನೇತ್ರ ನೀರದ ನಿಭಗಾತ್ರ 2 ದಿನಕರ ಕೋಟಿ ತೇಜ ಘನ ಗರುಡಧ್ವಜ ವನಧಿ ಕನ್ಯಾಧವ 3 ವರಗಿರಿಧರ ಕರುಣಾಕರ ಶುಭವದನ ಶರಣರ ಕಾಯುವಂತಹ ಬಿರುದು ನಿನ್ನದೊ ಅನಂತ 4 ಪರಮ ಪಾವನನಾದ ತರುಳ ಪ್ರಹ್ಲಾದಗೊಲಿದ ನರಹರಿ `ಹೆನ್ನೆಯ ಪುರನಿಲಯ ಪ್ರಮೇಯ 5
--------------
ಹೆನ್ನೆರಂಗದಾಸರು
ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ ಶೇಷನಾಮಕನೆ ವಿಶೇಷ ಜ್ಞಾನವ ನೀಡೋ ದಾಸರಾಯ ಪ ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ ಸಂತೋಷ ತೀರ್ಥರಂತಃ ಕರಣ ಪಾತ್ರ ದಾಸರಾಯ 1 ಚಿಂತಿಪ ಜನರಿಗೆ ಚಿಂತಾಮಣಿತಯ ನೀನೆ ದಾಸರಾಯ ಚಿಂತಿರಹಿತವರ ಚಿಂತಾಮಣಿಯು ನೀನೆ ದಾಸರಾಯ 2 ಚಿಂತ ರಹಿತವರ ಚಿಂತರವೇಲಿವಾಸ ದಾಸರಾಯ ಕದಂಬ ವಿನುತ ದಾಸರಾಯ 3 ಬೆಂಬಿಡದಲೆ ಮನದ್ಹಂಬಲ ಪೂರೈಸು ದಾಸರಾಯ ನಂಬಿದ ದ್ವಿಜರಿಗೆ | ಶಂಭುಗಿರಿಯಲ್ಲಿ ದಾಸರಾಯ 4 ಬಾಂಬೊಳೆ ತೋರಿಸಿ ಸಂಭ್ರಮಗೊಳಿಸಿದ ದಾಸರಾಯ ಹರಿಕೇತು ಹರಿಸುತ ಹರಿಣಾಂಕ ಕುಲಜಾತ ದಾಸರಾಯ 5 ಹರಿಕೇತು ಹರಿಸುತಾದ್ಯರನ ಸಂಹರಿಸಿದ ದಾಸರಾಯ ಹರಿದಾಡುತಿಹ ಮನ | ಹರಿಯಲ್ಲಿ ನಿಲಿಸಯ್ಯದಾಸರಾಯ 6 ಹರಿವೈರಿ ಮತಕರಿ | ಪರಿಪರಿ ಹರಿಸಘು ದಾಸರಾಯ ಪೂರ್ತಿಸುವ ನಿನ್ನ ವಾರ್ತೆಕೇಳಿ ಬಂದೆ ದಾಸರಾಯ 7 ಪಾರ್ಥಸಾರಥಿ ಭವ್ಯದಾಸರಾಯ ಮೂರ್ತಿಯ ಸ್ಥಾಪಿಸಿ ಕೀರ್ತಿಯ ಪಡೆದ ದಾಸರಾಯ 8 ನೇಮನಿಷ್ಟೆಯ ಬಿಟ್ಟು ಪಾಮರನಾದೆನಗೆ ದಾಸರಾಯ ಶ್ರೀಮಧ್ವನಿಗಮಾರ್ಥ | ಪ್ರೇಮದಿ ತಿಳಿಸಯ್ಯ ದಾಸರಾಯ 9 ಕಾಮಾದಿ ಷಡ್ವೈರಿ | ಸ್ತೋಮಾದಿ ಕುಲಿಶನೆ ದಾಸರಾಯ ಕಾಮಿತ ಫಲದಾಯಕ ಶಾಮಸುಂದರ ದೂತ ದಾಸರಾಯ 10
--------------
ಶಾಮಸುಂದರ ವಿಠಲ
ಪೌರಾಣಿಕ ಕಥನ ಸೃಷ್ಟಿಯಲಿ ಕಡು ದುಷ್ಟ ರಾವಣ ಕಟ್ಟಳೆಯ ಕಂಗೆಡಿಸಲು ಅಷ್ಟರೊಳು ಭಯಪಟ್ಟು ದಿವಿಜರು ಒಟ್ಟುಗೂಡುತ ಸ್ತುತಿಸಲು ಥಟ್ಟನೆ ದಯವಿಟ್ಟು ದಶರಥಪಟ್ಟಮಹಿಷಿಯೊಳುದಿಸಲು ದಿಟ್ಟ ಕೌಶಿಕನಿಷ್ಟಿಯನು ಕೈಗೊಟ್ಟು ಸಲಹಿದ ಶ್ರೇಷ್ಠಧನುಜಘರಟ್ಟಗಾರತಿಯ ಬೆಳಗಿದರು1 ಪಾದರಜದಿಂ ಪೊರೆಯುತ ಸಾಧಿಸಿದ ಧನು ಭೇದಿಸುತ ಹಿತಳಾದ ಸೀತೆಯ ಒಲಿಸುತ ಕ್ರೋಧದಿಂದೆದುರಾದ ಪರಶುವನಾ ದಯಾನಿಧಿ ಗೆಲ್ಲುತ ಸಾಧುಮಾರ್ಗವಿನೋದ ಸೀತಾಹ್ಲಾದ ಪಾಪವಿರೋಧ ದಾನವಸೂದನಗಾರತಿಯ ಬೆಳಗಿದರು 2 ಚಿಕ್ಕ ತಾಯಿಯ ಸೊಕ್ಕುನುಡಿಗತಿಸೌಖ್ಯವನು ಹೋಗಾಡುತ ಘಕ್ಕನನುಜನ ನಿಜಸತಿಯತಾ ಸೌಖ್ಯದಿಂದೊಡಗೂಡುತ ವನಕ್ಕೆ ತಾ ಸಂಚರಿಸುತ ಮಿಕ್ಕಿ ಬಂದಾ ರಕ್ಕಸಿಯ ಕುಚದಿಕ್ಕೆಲವ ಖಂಡಿಸಿದ ಪ್ರಭುಗೆ ಮಾಣಿಕ್ಯದಾರತಿಯ ಬೆಳಗಿದರು 3 ಧೂರ್ತ ಖರತ್ರಿಶಿರಾದಿ ದಾನವ ಮೊತ್ತವನು ಸಂಹರಿಸುತ ದೈತ್ಯಮಾಯಾವೃತ್ತಿಮೃಗವನು ಮತ್ತಕಾಶಿನಿ ಬೇಡುತ ಸತ್ತ್ವನಿಧಿ ಬೆನ್ನಟ್ಟಿ ಸೀತೆಯ ದೈತ್ಯಪತಿ ಕೊಂಡೋಡುತ ಮತ್ತೆ ಕಾಣದೆ ಕೋಪದಿಂದರಸುತ್ತ ಬಂದ ಮಹಾತ್ಮ ರಾಮಗೆ ಮುತ್ತಿನಾರತಿಯ ಬೆಳಗಿದರು 4 ತೋಯಜಾಕ್ಷಿಯ ಸುದ್ದಿ ಪೇಳ್ದ ಜಟಾಯುವಿಗೆ ಗತಿ ತೋರುತ ವಾಯುತನುಜಸಹಾಯದಿಂ ಕಪಿರಾಯ ಸಖ್ಯವ ಮಾಡುತ ನ್ಯಾಯಗರ್ಭಿತ ಸಾಯಕದಿ ಮಹಕಾಯ ವಾಲಿಯ ಕೊಲ್ಲುತ ಪ್ರಾಯಶದಿ ಗಿರಿಯೊಡ್ಡಿ ಶರಧಿಗುಪಾಯದಿಂ ಬಂಧಿಸಿದ ಜಾನಕೀಪ್ರಿಯಗಾರತಿಯ ಬೆಳಗಿದರು 5 ಮನವಿವೇಕವ ನೆನೆದು ಬಂದಾ ಧನುಜಪತಿ ಸೋದರನಿಗೆ ಇನಶಶಿಗಳುಳ್ಳನಕ ಲಂಕಾವನಿಯ ಪಾಲಿಸುತ ಮಿಗೆ ರಣದಿ ರಾವಣಕುಂಭಕರ್ಣರ ಹನನಗೈಯುತ ಲೋಕಕೆ ಸೀತೆಯ ವಿನಯ ಗೈದಗೆ ಮೇರುಗಿರಿನಿಭ ಇಂದ್ರಪುಷ್ಪಕಾವೇರಿ ತಾ ಸಾಕೇತಕೆ ಸೇರಿ ಸಾನುಜರಿಂದ ಧರ್ಮದ ಮೇರೆದಪ್ಪದೆ ಸುಜನಕೆ ಸಾರಸಂಪದವಿತ್ತು ಲೋಕೋದ್ಧಾರನಾಗುತ್ತಖಿಳಕೆ ನೀರಜೇಕ್ಷಣ ಕರುಣಪಾರಾವಾರ ಶರಧೀಗಂಭೀರ ಲಕ್ಷುಮೀ ನಾರಾಯಣ ರೂಪ ಜಯ ಜಯ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ. ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು ಅಕಳಂಕ ನಾಮರೂಪದಲಿ ಕರೆಸಿ ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1 ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ ಸುರರು ದೀನರುದ್ಧರಿಸುವುದು ದಯದಿಂದ ನಿರುತಾ 2 ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ ಶರ್ವಾದಿಸುರರು ಪ್ರಾರ್ಥಿಸುತಿಪ್ಪರು ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ ಗರ್ವಿಸಿದ ದಾನವರ ಗಣವ ಸಂಹರಿಪೆ 3 ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4 ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ ಭೀಷಣಗೆ ಲಂಕಾಧಿಪತ್ಯವಿತ್ತೇ ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5
--------------
ಜಗನ್ನಾಥದಾಸರು