ಒಟ್ಟು 4153 ಕಡೆಗಳಲ್ಲಿ , 125 ದಾಸರು , 2858 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಕರೆ ಕರೆ ಭವದೊಳು ಮುಳುಗಿರುವೆ ದುರಿತದೂರನೆ ದು:ಖ ತರ ತರ ವ್ಯಥೆಯಲಿ ಪ ಅಗಣಿತ ಮಹಿಮನೆ ಸುಗುಣಗಳನುದಿನ ಬಗೆ ಬಗೆ ಸ್ಮರಿಸುವ ಬಗೆ ಮರೆದು ಹಗಲಿರುಳೆನ್ನದೆ ನಿಗಮವೇದ್ಯನ ನಾಮ ಬಗೆ ಬಗೆ ಪೊಗಳಿ ಕೊಂಡಾಡಿ ಸ್ತುತಿಸದಲೆ 1 ಜನುಮ ಜನುಮದಲಿ ಜನಿಸಿ ಬರುವ ದು:ಖ ಕೊನೆಗಾಣದಾಗಿದೆ ಕರುಣಾನಿಧೆ ಅನಿಮಿಷರೊಡೆಯ ಶ್ರೀ ಘನ ಮಹಿಮನ ನಾಮ ಮನದಣಿ ಪೊಗಳಿ ಕೊಂಡಾಡಿ ಸ್ತುತಿಸದಲೆ2 ನಾನು ನನ್ನದು ಎಂಬ ಹೀನವೃತ್ತಿಗಳಿಂದ ಹಾನಿಯಾಯಿತು ಆಯು ಶ್ರೀನಿಧಿಯೆ ಜ್ಞಾನಿಗಳೊಡನಾಡಿ ಮೌನದಿಂದಿರದಲೆ ಶ್ವಾನಸೂಕರನಂತೆ ತಿರುಗಿ ಬಾಯ್ಬಿಡುತಲಿ 3 ರಂಗನ ಮೂರ್ತಿಯ ಕಂಗಳಿಂದಲಿ ನೋಡಿ ಭಂಗಗಳಳಿಯುವ ಹರಿದಾಸರ ಸಂಗದೊಳಿರಿಸು ಉತ್ತುಂಗ ಮಹಿಮಪಾಂಡು- ಭವ ಭಂಗ ಬಿಡಿಸೆನ್ನದೆ4 ಪಾದ ಪೊಂದಿ ಭವದಘ ವೃಂದವ ಕಳೆಯುವನೆಂದೆನ್ನುತ ಬಂಧಕ ಮೋಚಕನೆಂದರಿಯದೆ ಭವ ಬಂಧನದೊಳು ಸಿಕ್ಕಿ ಬಳಲಿ ಬಾಯ್ಬಿಡುತಲಿ5 ಪರಿ ಮೋಹ ಮಾತುಳಾಂತಕ ಕೃಷ್ಣ ಮಾತು ಮಾತಿಗೆ ಹರಿ ಹರಿ ಎನ್ನದೆ ಸೋತು ಬಂದೆನೊ ದೇವ ಮಾತರಿಶ್ವನಪ್ರಿಯ ಕೋತಿ ಬುದ್ಧಿಯ ಬಿಡಿಸೆಂದು ತುತಿಸದಲೆ 6 ಕಮಲ ಪತ್ರಾಕ್ಷ ಶ್ರೀ ಕಮಲಜಾತೆಯ ಪ್ರಿಯ ಕಮಲನಾಭ ವಿಠ್ಠಲ ವಿಠ್ಠಲ ಹರೇ ಸುಮನಸರೊಡೆಯ ಶ್ರೀ ಭ್ರಮರಕುಂತಳೆ ಪ್ರಿಯಶ್ರಮ ಪರಿಹರಿಸೆಂದು ನಮಿಸಿ ಸ್ತುತಿಸುವೆನು 7
--------------
ನಿಡಗುರುಕಿ ಜೀವೂಬಾಯಿ
ಕರೆದಾಗ ಬಳಿಸಂದು ನಿಲ್ಲಬಾರದೆ ಶರಣಾರ್ಥಿನಾನೆಂಬುದರಿವಾಗದೆ ರಂಗ ಪ ಕರುಣಾಳು ನೀನೆಂದು ನೆರೆನಂಬಿದೆ ಅ.ಪ ಶಿಲೆಯಾದ ಪತ್ನಿಯು ಪೊರೆಯೆಂದಳೆ ಆ ಬಲುಪಾಪಿ ಅಜಮಿಳನು ಬಾರೆಂದನೆ ಖಗ ಕೇಳ್ದನೇ 1 ನೆರೆ ದಾನಧರ್ಮಗಳ ಕುಡಲಾರೆನೋ ವರ ಯಾಗಯೋಗಗಳ ಕೊಡಲಾರೆನೋ ಮಾಂ ಗಿರಿರಂಗ ಭಜನೆಯ ಬಿಡಲಾರೆನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರೆದು ತನ್ನಿ ಭರದಿಬನ್ನಿ ಸಿರಿಯನಿದಿರ್ವಂದು ನೀವು ಸಿರಿಯನಿದಿರ್ವಂದು ಭರದಿ ಕರೆದುತನ್ನಿ ಮೋದದಿ ಪ. ಕೋಟಿಸೂರ್ಯಚಂದ್ರರೆನಿತುಂ ಸಾಟಿಯಲ್ಲವೆನಿಸುವ ನೋಟಮಾತ್ರದಿಂದ ಜಗವ ನಾಟ್ಯರಂಗ ವೆನಿಸುವ 1 ಕಡಲ ತನಯೆ ಎನಿಸೆ ಮತ್ತೆ ಕಡಲಮಧ್ಯದಲ್ಲಿ ನೆಲಸಿ ಕಡಲಶಯನನ ಮಡದಿಯಾಗಿ ಬಿಡದೆ ನಮ್ಮ ಪೊರೆವಳ 2 ಶೇಷಶೈಲವಾಸನುರದಿ ವಾಸವಾಗಿ ಶರಣರ ಆಸೆಯನ್ನು ನಲಿಸುತಿರುವ ಭಾಸುರಾನನೆ ಲಕ್ಷ್ಮಿಯ 3
--------------
ನಂಜನಗೂಡು ತಿರುಮಲಾಂಬಾ
ಕರೆಯೆ ಯಶೋದ ಕೃಷ್ಣನ ಕರೆಯೆ ಪ ನರಹರಿಯೆ ನಂದಗೋಪನ ಮರೆಯೆ ಮಾತಲಿ ಮಹಾ ದೊರೆಯೆ ಇವನ ಗುಣ- ವರಿಯೆವು ನೋಡಲಾಶ್ಚರ್ಯವಾಗೋದು ನಿ- ನ್ನರಮನೆಗೀತನ ಕರೆಯೆ 1 ನೋಡೆ ಈತಗೆ ಇನ್ಯಾರೀಡೇ ಕೋಪವ ಮಾಡಬ್ಯಾಡೆ ಮಾತಿಗೆ ಮಾತ- ನಾಡಿಂದಿರಾಪತಿ ಗಾಡಿಕಾರನೆಂದಾಡಿಕೊಂಬೆವೆ ನಮ್ಮ ಕಾಡುವೋದುಚಿತವೆ 2 ಬಾಲಗೋಪಾಲ ಕೃಷ್ಣ ಲೀಲೆಮಾಡುವೊ ದೊಡ್ಡಿ ್ವ ಶಾಲ ಉದರಕ್ಕೆ ಬೆಣ್ಣೆ ಪಾಲುಕುಡಿದು ನಮ್ಮಾಲಯದೊಳು ಬಂದು ಕಾಲಂದಿಗೆ ಧ್ವನಿ ಆಲಿಸಿ ಕೃಷ್ಣನ 3 ರೂಪನೋಡಿದರೆ ಸಣ್ಣ ಪೋರನೆನಿಸುವ ಅಪಾರಮಹಿಮ ಕೃಷ್ಣನ ವ್ಯಾಪಾರವ ನಾನಾಪರಿಯಿಂದಲಿ ಗೋಪನ ಮುಂದ್ಹೇ- ಳೀಪುರ ಬಿಡುವೆವೆ 4 ತುರುವ ಕಾಯುತ ಭಾಳಾತುರ ವಾರಿಜಾಕ್ಷ ನಮ್ಮ ತುರುವ ಪಿಡಿದು ನಿಂತ ತುರುವ ಭಾರಕೆ ಸೀರೆ ಜರಿದು ಬೀಳುತಲೆ ಸರಿಜನರೊಳು ಮಾನ ತೊರೆದಂತಾಯಿತು 5 ಕಾಂತರಿದ್ದಂಥ ಏಕಾಂತದೊಳಗೆ ಬಂದು ನಿಂತರಿಬ್ಬರೊಳಗ- ಭೃಂತರ ತಿಳಿಯದೆ ಭ್ರಾಂತಳಾದೆ ಎನ್ನ ಕಾಂತನೋ ಇವ ಶ್ರೀಕಾಂತನೊ ತಿಳಿಯದು 6 ನಂದನಂದನ ನಿನ್ನ ಕಂದ ಮಾಡುವೋದು ಬಾ- ಯಿಂದ ಹೇಳಿದರೆನ್ನ ಬಂಧು ಜನರು ಭೀಮೇಶಕೃಷ್ಣಗೆ - ನ್ನೊ ್ಹಂದಿಸಿಬಿಡುವೋರು ಸಂದೇಹವಿಲ್ಲದೆ 7
--------------
ಹರಪನಹಳ್ಳಿಭೀಮವ್ವ
ಕರೆವರು ನಿನ್ನ ಹಸೆಗೆ ಪರಮ ಪುರುಷ ನೀನೆಂದು ಪ ಸರಸದಿಂದ ಸಿರಿಸಹಿತ ಬರಬೇಕು ನೀಂ ತ್ವರಿತದಲಿ ಅ.ಪ ನಾದದಶವಾದ್ಯಗಳು ಮೋದದಿಂದ ಮೊರೆಯಲು ವೇದಾಂತರಹಸ್ಯವೆಂಬ ವಿವಿಧ ಗೀತೆಗಳ ಪಾಡಿ 1 ತತ್ವಭಿಮಾನಿಗಳೆಂಬ ಮುತ್ತೈದೆಯರೆಲ್ಲ ಕೂಡಿ ಸೂರಿ ಜನಪ್ರಿಯನೆಂದು 2 ಎಂಟುದಳ ಪದ್ಮದೊಳು ನೆಂಟರಿಷ್ಟರೆಲ್ಲುರು ನೂ- ರೆಂಟು ಚಿತ್ರಗಳ ಬರೆದು ರಚಿಸಿ ರತ್ನ ಪೀಠವನ್ನು 3 ಧೀರ ಸಭೆಯಲ್ಲಿ ಹದಿನಾರು ನಿನ್ನಾಧೀನಗೈದು 4 ಯಾಮ ಯಾಮದಿ ಬಿಡದೆ ಕಾಮಿನೀ ಮಣಿಯರು ನಿ- ಷ್ಕಾಮ ಸುಖವೀವ ಗುರುರಾಮವಿಠಲ ಬಾರೆಂದು 5
--------------
ಗುರುರಾಮವಿಠಲ
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ ಕಾಲ ವಿಪರೀತದಿ ಅ ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ - ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ 1 ನಿತ್ಯ ನೇಮವು ನಿಂತಿತು - ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು 2 ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ 3
--------------
ಕನಕದಾಸ
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಕಲಿಮುಖ್ಯ ದೈತ್ಯರನು ಸ್ಮರಿಸಿ ಬಿಡದೆ ಕಲುಷವರ್ಜಿತ ಭಾಗವತರು ಮರೆಯದಲೆ ಪ ಮಲಮೂತ್ರಗಳ ವಿಸರ್ಜನೆ ಗೈವಾಗ ಎಂ ಜಲ ಕೈ ಬಾಯ್ದೊಳೆದು ಉಗುಳುವಾಗ ಹುಳಿ ಬೀಜ ಕವಡೆ ಪಗಡೆಗಳಾಡುವಾಗ ಮ ಕ್ಕಳನಾಡಿಸುತಲಿ ವಿಸ್ಮರಣೆಯಿಂದಿರುವಾಗ 1 ಸಂಧಿಕಾಲದಲಿ ಸತಿಯೊಡನೆ ಪವಡಿಸಿದಾಗ ನಿಂದ್ಯ ಕರ್ಮಗಳನಾಚರಿಸುವಾಗ ತಂದೆ ತಾಯಿಗಳ ದಿನ ಮರೆತು ಒಟ್ಟಾಗ ಕ ರ್ಮೇಧಿ ಭಿಕ್ಷಕೆ ಬರಲು ಇಲ್ಲೆಂಬುವಾಗ 2 ಮಾಸೋಕ್ತ ಧರ್ಮವನು ತೊರೆದಾಗ ವಿಪ್ರಗೋ ಗ್ರಾಸಗಳ ಕೊಡದೆ ಭುಂಜಿಸುವಗಲೇ ಮೀಸಲು ಮಡಿ ಮೈಲಿಗೆಗಳ ನೋಡದಲೆ ದು ಷ್ಯಾಸೆಯಲಿ ನೀಚರಾಲಯದಲುಂಬಾಗ 3 ಪ್ರಾಯ ಧನ ಮದದಿಂದ ಹೇಯ ವಿಷಯಗಳು ಪಾ ದೇಯವೆಂದರಿದು ಭುಂಜಿಸುವಾಗಲು ಜಾಯಾತ್ಮ ದೇಹಾದಿಗಳು ತನ್ನದೆಂಬಾಗ ಮಾಯವಾದಿಯ ಉಕುತಿ ಮನಕೆ ತಂದಾಗ 4 ಮತಿವಮತರೊಡನೆ ಮತ್ಸರ ಪುಟ್ಟಿದಾಗವ ರ್ಪಿತ ಪದಾರ್ಥಗಳ ಭುಂಜಿಸುವಾಗಲು ಮೃತ ವತ್ಸ ಗೋವಿನ ಚಲಮಂಬಾಗ ಶ್ರೀ ಪತಿ ಜಗನ್ನಾಥವಿಠಲನ ಸ್ಮøತಿ ಬಿಟ್ಟಾಗ 5
--------------
ಜಗನ್ನಾಥದಾಸರು
ಕಲ್ಲು ನಾಯೇನೋ ಕೈವಲ್ಯದಾಯಕನೆ ಕಲ್ಲು ಕರುಣದಿಂದ್ಹೆಣ್ಣಾಗಿರಲುದ್ಧಾರ ಕೇಳೊ ಪ (ಉಡಬಲ್ಲೆ ಉಣಬಲ್ಲೆ) ಉತ್ತಮ ಸಂಗ ಬಿಡಬಲ್ಲೆ ನಡೆಯಬಲ್ಲೆನೋ ದುರ್ಮಾರ್ಗದಿಂದ ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ 1 ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ ಮೋಹ ಬಲ್ಲೆನೊ ಬಾಂಧವ ಭವದಿ ಪಾದದಿ ಭಕುತಿ ಪರಮಾದರೊಂದರಿಯೆನೊ 2 ನಿಷ್ಠುರಾಡುತ ಜನರ ನಿಂದಿಸುವುದು ಬಲ್ಲೆ ಕಷ್ಟದಾರಿದ್ರ್ಯ ಒಲ್ಲೆನ್ನಬಲ್ಲೆ ದುಷ್ಟ ಅಲ್ಪರಿಗೆ ಬಾಯ್ ತೆರೆಯಬಲ್ಲೆ ಭೀಮೇಶ- ಕಷ್ಟ ನಿನದಯ ಬೇಡಿಕೊಂಬೋದೊಂದರಿಯೆನೊ 3
--------------
ಹರಪನಹಳ್ಳಿಭೀಮವ್ವ
ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ ಪ ಭುವನ ಪಾವನ ಲಕ್ಷ್ಮೀ - ಧವನ ನವಗುಣ ರೂಪ ಕ್ರಿಯವನ್ನೆ ಅ.ಪ ಸ್ತವನ ಮಾಡಬೇಡÀ ನ್ಯಪನನ್ನು ನವ ಯುವತೇರ ಮೆಚ್ಚಬೇಡ ಭವ ಮತ ಬಿಡಬ್ಯಾಡ ಭವದೊಳು ಮಮತೆ ಕೊಡಬ್ಯಾಡÉ 1 ಹರಿಕಥಾ ಶ್ರವಣ ಬಿಡಬ್ಯಾಡ ಹರಿದಾಸರೊಳು ಛಲ ಇಡಬ್ಯಾಡ ದುರುಳ ಮಾಯವಾದಿರ ಸ್ನೇಹ ಅರಿತು ಮಾಡಲು ಅದು ಮಹಾಮೋಹ 2 ಅಜನಪಿತನ ಸ್ಮರಣೆ ಮರಿಬ್ಯಾಡ ರುಜುಮಾರ್ಗವ ಬಿಟ್ಟು ನಡಿಬ್ಯಾಡ ವಿಜಯ ರಾಮಚಂದ್ರವಿಠಲನ ಮರೆದು ಗೋಜು ಕರ್ಮವ ಮಾಡಲಲ್ಲೇನು ಮಾತು 3
--------------
ವಿಜಯ ರಾಮಚಂದ್ರವಿಠಲ
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಕಷ್ಟಪಡಲಾರೆನೋ ಸೃಷ್ಟೀಶ ಶ್ರೀಶಾ ದುಷ್ಟದಮನ ದೀನವತ್ಸಲ ನಾರಾಯಣ ಪ ಒಡಲು ಕ್ಷಣಗಳು ಬಿಡದೆ ಬಾಧಿಸೆ ನಿನ್ನ ಅಡಿಯಕಾಣಿಸದಿವೆ ಕೆಡಿಪ ದುರಾಶೆಯ ಸುಡುತಲಿ ನೂಕು ದುಡುಕುವ ಮನವಂ ಸಡಲಿಸಬೇಕು ಕಡುಮುದದಿಂದಲಿ ಕಾಯುತ ಸಾಕು ಪರಾಕು 1 ಲೋಕಿಗರೊಳು ನಾನನೇಕದುಶ್ಚರ್ಯೆಯ ವಿ- ವೇಕವಿಲ್ಲದೆ ಮಾಡಿ ಕಾಕುಮನುಜನಾದೆ ಘೂಕದ ಪರಿಯೀ ಭವಸಂಸಾರ ನಾಕವಾದರೂ ಬಹು ನಿಸ್ಸಾರ ಜೋಕೆಯೊಳಿದಬಿಟ್ಟು ಒಟ್ಟು ಬಂದನೆ ತೋರಾ ಶೋಕಸಾಗರವಾ ಶೋಷಿಪಶೂರ 2 ಇಷ್ಟ ಮೂರುತಿ ನಿನ್ನ ನಿಷ್ಠೆಯಿಂ ಕಾಣುವೆ ಎಷ್ಟು ಮೊರೆಯಿಟ್ಟರೂ ದೃಷ್ಟಿಸದಿರುವೇ ಅಷ್ಟಮದಗಳನಿತಿಷ್ಟೂ ನಿಲ್ಲವೋ ಭ್ರಷ್ಟಗುಣಗಳ ನಿಷ್ಠುರಗೈವುದೋ ವಿಷ್ಣು ಶ್ರೇಷ್ಠಪದ ಕೊಟ್ಟು ಕರುಣಿಸೋ ಕೃಷ್ಣ ಕೃಪಾಳು ಹೆಜ್ಜಾಜೀಶಾ 3
--------------
ಶಾಮಶರ್ಮರು
ಕಂಸಾರಿನಿಜಪಾದ ಮರೆಯದಿರೆಲೆ ಮನವೆ ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ ಜನನಿಜನಕರುವನಿತೆತನುಜನುಜರಿವರೆಲ್ಲ ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ ಅನುದಿನವು ದುಡಿದುಡಿದು ತನುಮನಧನವನಿತು ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು 1 ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ ಬಲವಾಗಿ ಬಿಗಿದ ನರ ಎಲುವಿನ್ಹಂದರವು ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು 2 ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ ಪೊಡವಿಯ ಸುಖ ನಿಮಿಷದಡಗಿ ಪೋಗುವುದು ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ 3
--------------
ರಾಮದಾಸರು
ಕಾಕು ನೀಮೀನ ಮೇಷಂಗಳನೆಣಿಸದೆ ನೂಕು 1ಸಾಕು ಮಂದನಾಗಬೇಡ ನಿನಗೆಬೇಕಾದ ಸುಖವಿದೆ ನಿನ್ನೊಳು ನೋಡಶೋಕ ಮೋಹಗಳನೀಡಾಡ ನಿನ್ನನೀ ಕಂಡು ನಿಜ ಸುಧೆಯೊಳಗೋಲಾಡ2ನಿನ್ನೊಳು ನಿಜ ಸುಖವುಂಟು ನೀನನ್ಯವನಳಿದು ನೋಡಲು ಕೈಗಂಟು ಭಿನ್ನ ಬುದ್ಧಿಯನೆಲ್ಲದಾಂಟುಸನ್ನುತಾನಂದಾಮೃತವನೊಲಿದೀಂಟು 3ಗುರುವಿನ ಕೃಪೆುಲ್ಲದಿಲ್ಲಾ ಮುಕ್ತಿಕರೆದರೆ ಬರುವರೆ ಕಾಮಿನಿಯಲ್ಲಪರಮ ಧೈರ್ಯವ ಮಾಡುವನಲ್ಲ ನಿನ್ನಮರೆಯದೆ ನೋಡು ನಾನೆಂದಿದನೆಲ್ಲಾ 4ಈ ಪಾಳು ಕರ್ಮದಲೇನು ಈಗನಾ ಪೇಳಿದೆ ಕಂಡುದ ಮಾಡು ಮಾಣುಕೋಪವ ಬಿಡು ಸುಖಿ ನೀನು ಸದ್ಯಗೋಪಾಲಾರ್ಯರ ಕಂಡೆ ಇನ್ನೇನೂ 5
--------------
ಗೋಪಾಲಾರ್ಯರು