ಒಟ್ಟು 233 ಕಡೆಗಳಲ್ಲಿ , 47 ದಾಸರು , 188 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲಕೃಷ್ಣ ಬಂದು ನಿಲ್ಲೊ ಹೃದಯ ಕಮಲದಿ ನಳಿನನಾಭ ನಿನ್ನ ದಿವ್ಯ ಚಲುವ ರೂಪದಿ ಪ. ಶಿರದಿ ಮಕುಟ ಫಣೆಯ ತಿಲುಕ ಒಲಿವ ಮುಂಗುರುಳು ನಾಸಿಕ ಗಲ್ಲ ಹೊಳೆಯುತ 1 ಕರ್ಣದಲಿ ಕುಂಡಲಗಳು ಸ್ವರ್ಣ ಕಂಠವು ನಿನ್ನ ದಂತ ಹೊಳೆಯುತಿರಲು ಚನ್ನ ಶ್ರೀಹರಿಯೆ 2 ಅಧರ ಉರದಿ ಲಕ್ಷಿಯು ನಳಿತೋಳಿನಲಿ ಶಂಖ ಚಕ್ರ ವೇಣು ಪಿಡಿದಿಹ 3 ಕಮಲ ಮಾಲೆ ಮೇಲೆ ತುಳಸಿಯು ಮಾರಜನಕ ಹೊಳೆವೊ ಜರಿಯ ಪೀತ ವಸನವು 4 ರಕ್ತವರ್ಣ ವಸನ ಉಟ್ಟು ಕಟ್ಟಿ ಕಿರುಗೆಜ್ಜೆ ಮುಕ್ತರೊಡೆಯ ಮುಕ್ತಿಕೊಡುವ ಪಾದಕಮಲವು 5 ಕ್ಲೇಶ ಕಳೆಯುತ ದಾಸ ಜನರ ಕಾಯ್ವ ಕೃಷ್ಣ ಘಾಸಿಗೊಳಿಸದೆ 6 ಗುರುಗಳಲ್ಲಿ ನಿಂತು ಎನ್ನ ಹರುಷಪಡಿಸೊ ನೀ ಪರಮಪುರುಷ ನರಹರಿಯೆ ದುರಿತದೂರನೆ 7 ನೀರೊಳಾಡಿ ಭಾರಪೊತ್ತು ಕೋರೆ ತೋರಿದೆ ಘೋರರೂಪಿ ಬ್ರಹ್ಮಚಾರಿ ಕ್ಷತ್ರಿಯಾರಿ ನೀ 8 ಶ್ರೀ ಹರಿ ರಾಮ ಕೃಷ್ಣ ಬೌದ್ಧ ಕಲ್ಕಿಯೆ ಗೋಪಾಲಕೃಷ್ಣವಿಠ್ಠಲ ರೂಪ ತೋರೊ ನೀ 9
--------------
ಅಂಬಾಬಾಯಿ
ಕೌಶಿಕೋತ್ಸವ ಗೀತೆ ಕೌಶಿಕೋತ್ಸವ ನೋಡುವ ಜನರಿಗೆ ಕಣ್ಗಳೆರಡು ಸಾಲದು ಪ. ಕಾರ್ತೀಕ ಶುದ್ಧ ಏಕಾದಶಿಯಲ್ಲಿ ಕಂ ದರ್ಪಜನಕನು ಪೊರಟುಬಂದು ಮಜ್ಜನ ಮಾಡಿ ಎಂದಿನಂದದಿ ತನ್ನ ಮಂದಿರಕೆ ನಡೆದನು1 ನಿತ್ಯಕರ್ಮವನೆಲ್ಲ ಗ್ರಹಿಸಿ ರಂಗಸ್ವಾಮಿ ಅರ್ತಿಯಿಂದಲೆ ನೀರಾಡಿ ಎದ್ದು ಪರಾಕು ಎಂದೆನುತಿರೆ ಅರ್ತಿಯಿಂದಲೆ ಬಂದ ಅರ್ಜುನಮಂಟಪಕೆ 2 ಮಂಟಪದಲಿ ಶ್ರೀರಂಗನಿರೆ ವ್ಯಾಸ ಭಟ್ಟರು ಬಂದು ಪುರಾಣ ಪೇಳೆ ಮುನ್ನೂರುಅರವತ್ತು ವಲ್ಲಿಗಳನ್ನು ಧರಿಸಿ ಮು[ನ್ನ]ಸೇವೆಯನಿತ್ತ ಮೋಹನರಂಗನ 3 ಕರಿಯಕುಲಾವಿ ಕುತ್ತನಿಅಂಗಿ ವಜ್ರ ದರಳೆಲೆ ಮುತ್ತುಗಳಲುಗಾಡುತಾ ಕರ್ಣ ಕುಂಡಲ ಹಾರ ಪದಕಗಳ್ಹೊಳೆಯುತ ಪಡಿಯನೇರಿ ಬಂದ ಕರ್ಪೂರಧೂಳಿಯಿಂದ 4 ನೋಡಿದ ಅಗ್ನಿ ನಾಲ್ಕು ಕಣ್ಗಳಿಂದ ಬಂದು ನೋಡಿದ ರುದ್ರ ಹತ್ತು ಕಣ್ಗಳಿಂದ ನೋಡಿದ ಇಂದ್ರ ಸಹಸ್ರಕಣ್ಗಳಿಂದಲೆ ಹರಿಯ ನೋಡಿದನೆಂಟು ಕಣ್ಗಳಿಂದ ಬ್ರಹ್ಮ ವೆಂಕಟರಂಗನ 5
--------------
ಯದುಗಿರಿಯಮ್ಮ
ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ1 ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ 2 ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ 3
--------------
ಚಿದಾನಂದ ಅವಧೂತರು
ಗಣ್ಯಮಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ ಬೀಜವಾಗಿ ಮೆರೆಯುತಿರುವ 1 ಹುಟ್ಟಿ ಬೆಳೆಯದಾ-ಜನರು-ಮುಟ್ಟಿತೊಳೆಯದಾ ಎಷ್ಟುದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದ 2 ಬೆಲೆಗೆ ಬಾರದಾ-ತನ್ನ-ನೆಲೆಯ ತೊರದ ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ3 ಅರಿಯದವರಿಗೆ-ರುಚಿಯ-ನರಿತಜನರಿಗೆ ಅರಿತ ಮೇಲೆ ನಿರುತ ವಿರುತ ಸರಸಮಧುರ ಭರಿತ ಬರಿತ4 ಸಿರಿಮನೋಹರ-ವ್ಯಾಘ್ರ-ಗಿರಿಯ ಮಂದಿರ ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ5
--------------
ಸರಗೂರು ವೆಂಕಟವರದಾರ್ಯರು
ಗಣ್ಯವಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ ಬೀಜವಿಲ್ಲದೆ ಬೆಳೆದ ಭೂಜವಿಲ್ಲದ ಬೀಜ ಭೂಜಗಳಿಗೆ ತಾನೆ ಬೀಜಮಾಗಿ ಮೆರೆಯುತಿರುವ 1 ಹುಟ್ಟಿ ಬೆಳೆಯದಾ ಜನರು ಮುಟ್ಟಿ ತೊಳೆಯುದಾ ಎಷ್ಟು ದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದಾ 2 ಬೆಲೆಗೆ ಬಾರದಾ ತನ್ನ ನೆಲೆಯ ತೋರದ ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ3 ಅರಿಯದವರಿಗೆ ರುಚಿಯನರಿತ ಜನರಿಗೆ ಅರಿತ ಮೇಲೆ ನಿರುತವಿರುತ ಸರಸ ಮಧುರ ಭರಿತ ಬರಿತ 4 ಸಿರಿ ಮನೋಹರ ವ್ಯಾಘ್ರಗಿರಿಯ ಮಂದಿರ ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ 5
--------------
ವೆಂಕಟವರದಾರ್ಯರು
ಗುಣವಂತರ ಗುಣವ ಗುಣವಂತನರಿವನುಗುಣಹೀನ ಗುಣವಂತನ ಗುಣವೇನ ಬಲ್ಲನೋ ಪ ಕಮಲಗಳ ಹೃದಯ ಭ್ರಮರಕ್ಕೆ ತಿಳಿಯುವುದುಕಮಲಗಳ ಗುಣ ಕಪ್ಪೆಗೇನು ತಿಳಿವುದೋವಿಮಲರಾ ಹೃದಯ ವ್ಯುತ್ಪನ್ನರಿಗೆ ಹೊಳೆಯುವುದುಕುಮತಿಗಳಿಗೆ ಕೋಮಲರ ಘನತೆಯೆಂತರಿವುದೋ 1 ಕೆಚ್ಚಲೊಳಿರುತಿಹುದು ಕರುವಿಗೆ ದೊರಕುವುದುಕೆಚ್ಚಲ ಕಚ್ಚಿರುವ ಉಣ್ಣೆಗದು ದೊರೆವುದೋಸಚ್ಚರಿತ್ರರ ಬೋಧೆ ಸತ್ಪುರುಷಗಂಟುವುದುಹುಚ್ಚ ತಾ ಬದಿಯಿದ್ದರೆ ಪರಿಣಾಮವೇನಹುದೋ 2 ಸಾಧುಗಳ ಮಹಿಮೆಯ ಸಾಧುಗಳ ಹೃದಯವುಸಾಧುಗಳ ಬೋಧೆಯ ಸಾಧು ಸಹವಾಸಬೋಧ ಚಿದಾನಂದ ಬಗಳೆಯಾದವರಿಗರಿವುವಾದಿಯಾಗಿಹ ಮೂರ್ಖರಿಗೆ ಗುಣವೇನು ತಿಳಿಯುವುದೋ 3
--------------
ಚಿದಾನಂದ ಅವಧೂತರು
ಗುರು ಅಂತರ್ಯಾಮಿ ಶ್ರೀನಿವಾಸ ಸಿರಿರಮಣ ಶ್ರೀ ಕೃಷ್ಣ ಶ್ರೀನಿಧಿಯೆ ಶ್ರೀಶ ಪ. ಸೃಷ್ಟಿಕರ್ತನೆ ನಿನ್ನ ಲಕ್ಷಿದೇವಿಯು ಸತತ ಶ್ರೇಷ್ಠತನದಲ್ಲಿ ಪೂಜೆ ಮಾಡುತಿಹಳೊ ಅಷ್ಟು ದೇವತೆಗಳು ಆಗಮವನನುಸರಿಸಿ ಶಿಷ್ಟೇಷ್ಟನೆಂತೆಂದು ಪೂಜೆ ಮಾಡುವರೋ 1 ಅಣು ನಾನು ನಿನ್ನ ಅರ್ಚಿಸ ಬಲ್ಲೆನೇ ದೇವ ಘನಮಹಿಮ ಸ್ವೀಕರಿಸೊ ಅಲ್ಪ ಸೇವೆ ಮನ ಮಂದಿರದಿ ನಿಂತು ಅನುಗಾಲ ನಿನ್ನ ದಿವ್ಯ ಘನ ಮೂರ್ತಿಯನೆ ತೋರೋ ಪೂಜೆ ಮಾಡುವೆನೊ 2 ಸರಸಿಜಾಕ್ಷನೆ ನಿನಗೆ ಸರಸದಿಂದ ಗುಲಾಬಿ ಸರದ ಪೂಮಾಲೆಯನು ಕೊರಳಿಗ್ಹಾಕುವೆನೊ ಸುರರ ಪಾಲಿಪ ಹರಿಯೆ ಸುರಹೊನ್ನೆ ಹಾರವನು ಕರ ಚಕ್ರಯುತ ನಿನ್ನ ಕಂಧರದಿ ಧರಿಸೋ 3 ಶ್ಯಾಮವರ್ಣನೆ ರತ್ನಹಾರಗಳು ಹೊಳೆಯುತಿರೆ ಶ್ರೀ ಮನೋಹರ ಮುತ್ತಿನ್ಹಾರ ಪದಕಗಳು ಈ ಮಧ್ಯೆ ದಿವ್ಯ ಶ್ಯಾವಂತಿಗೆ ಸುಮನದಿಂ ಕಾಮಜನಕನೆ ಮಾಲೆಕಟ್ಟಿ ಹಾಕುವೆನೊ 4 ಈ ಜಗವ ಉದರದಲಿ ಧರಿಸಿ ಮೆರೆಯುವ ದೇವ ಜಾಜಿ ಪೂಮಾಲೆಯನು ಕಂಧರದಿ ಧರಿಸೊ ಭೋಜಕುಲ ತಿಲಕನೆ ಕೆಂಡ ಸಂಪಿಗೆ ಸರವ ಮಾಜದೇ ಎನ್ನಿಂದ ಸ್ವೀಕರಿಸೊ ದೇವ 5 ಪಾತಕರಹಿತ ಹರಿ ಪಾವನರೂಪನೆ ಪ್ರೀತಿಯಿಂ ಸ್ವೀಕರಿಸೊ ಕೇತಿಕೆಯ ಸರವ ಶ್ರೀತರುಣಿ ಸತ್ಯಭಾಮೆಯರು ಕದನವಗೈದ ಪ್ರೀತಿ ಪಾರಿಜಾತ ಧರಿಸಯ್ಯ 6 ಮರುಗ ದವನಗಳಿಂದ ಸುರಹೊನ್ನೆಯನೆ ಕಟ್ಟಿ ಇರುವಂತಿಗೆಯ ಹಾರ ಹರಿಯೆ ಅರ್ಪಿಸುವೆ ಪರಿಮಳವ ಬೀರುತಿಹ ಪರಿಪರಿಯ ಮಲ್ಲಿಗೆಯ ಸರಗಳನೆ ಧರಿಸಿನ್ನು ಸಾಕಾರರೂಪ 7 ದುಂಡುಮಲ್ಲಿಗೆಯ ಮೊಗ್ಗು ಪಾಂಡವರ ಪಾಲಕಗೆ ದಂಡೆಯನೆ ಕಟ್ಟಿ ನಾ ಕೊರಳಿಗ್ಹಾಕುವೆನೊ ಚಂಡವಿಕ್ರಮ ಶಂಖ ಚಕ್ರಧಾರಿಯೆ ಪಾದ ಮಂಡೆ ಪರಿಯಂತರದಿ ನೊಡಿ ದಣಿಯುವೆನೊ8 ಸತಿ ನಿನಗಾಗಿ ಕಾಷ್ಟದಳ ಮೃತ್ತಿಕೆಯ ಸೇವಿಸುವ ಜನಕೆ ಇಷ್ಟ ಫಲವನೆ ಇತ್ತು ಕೃಷ್ಣನ್ನ ತೋರಿಸುವ ಶ್ರೇಷ್ಠ ತುಳಸಿಮಾಲೆ ಕಟ್ಟಿ ಹಾಕುವೆನೊ 9 ಕಮಲನಾಭನೆ ಕೃಷ್ಣ ಕಮಲಾಪತಿಯೆ ಸ್ವಾಮಿ ಕಮಲಪಾಣಿಯೆ ದೇವ ಕಮಲಾಕ್ಷನೆ ಕಮಲಮುಖ ನಿನ್ನ ಪದಕಮಲದಲಿ ನಲಿವಂತೆ ಕಮಲದ್ಹಾರವ ಕಟ್ಟಿ ಕೊರಳೀಗ್ಹಾಕುವೆನೋ10 ಈ ಪರಿಯ ಮಾಲೆಗಳ ನೀ ಪ್ರೀತಿಯಿಂ ಧರಿಸಿ ಪಾಪಗಳ ತರಿದೆನ್ನ ಪಾವನವಗೈಯ್ಯೊ ಆಪತ್ತು ಕಳೆವ ಶ್ರೀ ಗುರು ಕಟಾಕ್ಷದಿ ನುಡಿದೆ ಗೋಪಾಲಕೃಷ್ಣವಿಠ್ಠಲನೆ ಕೃಪೆಮಾಡೊ 11
--------------
ಅಂಬಾಬಾಯಿ
ಗುರುಪರಮ ಸ್ವರೂಪ ಧ್ರುವ ಇಡದು ತುಂಬೇದ ನೋಡಿ ಎಡಬಲ ಪೂರ್ಣ ಬಿಡದೆ ಸೂಸುತಲ್ಯದೆ ಜಡಿದು ನಿಧಾನ 1 ಸಂಧಿಸಿಹದು ನೋಡಿ ಹಿಂದೆಮುಂದೆಲ್ಲ ಒಂದು ಮನದಿ ನೋಡಿ ಬಂದು ನೀವೆಲ್ಲ 2 ಬೆಳದುಕೊಂಬುವಂತೆ ಹೊಳೆಯುತವಲ್ಲ ಸುಳುಹು ಶ್ರೀ ಕೃಷ್ಣನ ತಿಳುವವರಿಲ್ಲ 3 ಕಣ್ಣುಗೆಟ್ಟಿರಬ್ಯಾಡಿ ಕಾಣದೆ ಖೂನ ತ ನ್ನೊಳಗದೆ ನೋಡಿ ಸಾನ್ನಿಧ್ಯಪೂರ್ಣ 4 ಭಾಸುತಲ್ಯದೆ ಭಾಸ್ಕರಕೋಟಿ ತೇಜ ದಾಸ ಮಹಿಪತಿ ಪ್ರಾಣದೊಡಿಯ ಸಹಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗೋಪಿ ಸುಕೃತ ಪ ಸುಕೃತ 1 ಕೌಸ್ತುಭ ಸುಕೃತ 2 ಕಸ್ತೂರಿಯಿಟ್ಟು ಕಂಗಳಿಗೆ ಕಾಡಿಗೆ ಹಚ್ಚಿಮತ್ತೆ ಕದಪಿನಲಿ ಕುಂಕುಮವನೊತ್ತಿಮುತ್ತಿನಂದದೊಳಿರುವ ಬೆವರ ಸೆರಗಿನೊಳೊರೆಸಿಮುತ್ತು ತಾರೈಯೆಂದು ಮುದ್ದಾಡುವೋ ಸುಕೃತ3 ಅಸುರಕುಲ ಹರಣನಿಗೆ ಅಂಗಿಯನು ತೊಡಿಸಿ ಬಲುಕುಶಲದಿ ಪೀತಾಂಬರವನ್ನು ಉಡಿಸಿಪೊಸ ರತುನ ಬಿಗಿದ ಮಣಿಮಯದ ಮಕುಟವ ಮಂಡೆ-ಗೊಸವಿಟ್ಟು ನಲಿ ನಲಿದು ಮುದ್ದಾಡುವೊ ಸುಕೃತ4 ಶಂಖ ಚಕ್ರಾಂಕಿತಗೆ ಭುಜಕೀರ್ತಿಯನೆ ಧರಿಸ್ಯ-ಲಂಕಾರದಲಿ ತಾರೆ ಮಣಿಯ ಕಟ್ಟಿಕಂಕಣವು ಕಡಗ ಥಳಥಳಿಪ ಪವಳದಿ ರಚಿಸಿಬಿಂಕದಲಿ ತೊಟ್ಟಿಲೊಳಗಿಟ್ಟು ತೂಗುವ ಸುಕೃತ5 ಮುಂಗೈಯ ಮುರಿ ಮುತ್ತಿನುಂಗುರವು ಥಳಥಳಿಸೆರಂಗು ಮಾಣಿಕದ ಒಡ್ಯಾಣ ಹೊಳೆಯೆಕಂಗೊಳಿಸುತಿಹ ಕಾಂಚಿದಾಮವಲಂಕರಿಸಿ ಸ-ರ್ವಾಂಗದೊಳು ಗಂಧ ಪರಿಮಳವ ಸೂಸುವ ಸುಕೃತ6 ಕಡಗ ಪೊಂಗೆಜ್ಜೆ ಕನಕದ ಘಂಟೆ ಸರಪಳಿಯಬಿಡದೆ ಶ್ರೀಹರಿಯ ಚರಣದಲ್ಲಿ ಧರಿಸಿಪೊಡವಿಯನು ಅಳೆದ ಶ್ರೀಪುರುಷೋತ್ತಮನಿಗೆ ಮೆ-ಲ್ಲಡಿಯನಿಡು ಎಂದೆನುತ ನಡೆಯ ಕಲಿಸುವ ಸುಕೃತ7 ನೆಲನ ಈರಡಿಮಾಡಿ ಬಲಿಯ ಮೆಟ್ಟಿದ ಪಾದಚೆಲುವ ಚರಣದಿ ಭೂಮಿಯಳೆದ ಪಾದಶಿಲೆಯೆಡಹಿ ಬಾಲೆಯನು ಮಾಡಿದ ದಿವ್ಯವಾದಒಲಿದಿಟ್ಟು ನಡೆಯೆಂದು ನಡೆಯ ಕಲಿಸುವ ಸುಕೃತ8 ಅಂದಿಗೆ ಪಾಯ್ವಟ್ಟು ಕುಂದಣದ ಕಿರುಗೆಜ್ಜೆಸಂದಣಿಸಿ ಕಿರಿಬೆರಳೊಳುಂಗುರಗಳುಚೆಂದದ ಕಡಗ ಪಾಡಗ ಘಂಟೆ ಸರಪಣಿಯುಮಂದಗಮನನ ಪಾದಪದ್ಮಕ್ಕಿಡುವೊ ಸುಕೃತ9 ಸುಕೃತ 10 ದಿನಕರ ನಿಭಾಂಗ ಕೇಶವ ರಾಮಚಂದ್ರ ಮುನಿಸನಕಾದಿವಿನುತ ಕುಣಿದಾಡು ಎನುತತನ್ನ ಕರಗಳಲಿ ತಕ್ಕೈಸಿ ಕೃಷ್ಣನ ದಿವ್ಯಘನ್ನ ಚರಿತೆಯ ಪಾಡಿ ಪೊಗಳುವ ಸುಕೃತ11
--------------
ವ್ಯಾಸರಾಯರು
ಘಿಲಿ ಘಿಲಿ ಘಿಲಿಕೆಂದು ಗೆಜ್ಜೆಘಿಲಿ ಘಿಲಿ ಘಿಲಿಕೆಂದು ಗೆಜ್ಜೆ ಪ. ಘಿಲಿ ಘಿಲಿ ಘಿಲಿ ಘಿಲಿಕು ಎನ್ನುತಲೆ ಬಲು ಬಲು ರೌಸದಿ ಬಾಲೆ ರಂಭಾ 1 ಕಿಲಿ ಕಿಲಿ ಕಿಲಿ ಕಿಲಿ ಕಿಂಕಿಣಿ ಜಾಲದಿನಲಿನಲಿದಾಡುತ ಚಲ್ವೆ ರಂಭಾ2 ಝಣ ಝಣರೆನುತಲಿ ಜಾಣಿ ಕುಣಿ ಕುಣಿದಾಡುತ ಕುಂಭಿಣಿ ಮ್ಯಾಲೆರಂಭಾ 3 ಥಳ ಥಳ ಹೊಳೆಯುತ ತಾಳವ ಹಾಕುತ ಅಳಕಿಸಿ ಸೂರ್ಯನ ಬೆಳಕವ ತಾನು 4 ತಕ್ಕಡ ತಕ್ಕಡ ತಾಥಾ ಎನುತಲೆ ಧಿಕ್ಕಿಡಿ ಧಿಕ್ಕಿಡಿ ಧಿಮಕಿಡಿ ಕೃಷ್ಣ 5 ಘಲು ಘಲು ಘಲುಕು ಎನುತ ಚಲ್ವ ರಾಮೇಶನ ಸುಲಭದಿ ಒಲಿಸಿ 6
--------------
ಗಲಗಲಿಅವ್ವನವರು
ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ಪ ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು 1 ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ 2 ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ 3
--------------
ಕನಕದಾಸ
ಜಯ ಜಯ ಮಂಗಳಜಯ ಮಂಗಳ ಸುಂದರಿ ಶಾಂಭವಿಗೆ ಪ ಕಮಲ ಮುಖಿಯಳೆಹೊಳೆವ ಮುತ್ತಿನ ವಾಲೆಯಳೇನಳಿನ ಮುಖಿಯರ ನಡುವೆ ಕುಳಿತುಥಳ ಥಳ ಹೊಳೆಯುವಳೇಒಳಹೊರಗೆ ತನ್ನ ಪ್ರಭೆಯನು ತೋರಿನೋಡಿ ಓಲಾಡಿ ತಾ ನಗುವವಳೇ 1 ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇಮಿಂಚುವ ಮೂಗುತಿ ಮೂಗಲಿ ಹೊಳೆಯುತಮಿಗಿಲಾದಾಭರಣವ ಧರಿಸಿಹಳೇಅಂಚು ರಂಗಿನ ಸೀರೆಯನುಟ್ಟುಅನಂತ ರೂಪವ ತೋರಿಹಳೇಅಂಚೆ ನಡೆಯಲಿ ನಡೆಯುತ ನಲಿಯುತಸದಾ ಮತ್ತಳಾಗಿರುವವಳೇ2 ರತ್ನದ ಉಡಿದಾರ ಚಿನ್ನದ ಚಿಂತಾಕಹೊನ್ನಿನ ಡಾಬನು ತೊಟ್ಟಿಹಳೇಎಡೆ ಎಡೆಗೆ ತಾ ಧರಿಸಿಹಳೇಸಣ್ಣ ಬಣ್ಣದ ಕುಪ್ಪಸ ತೊಟ್ಟುಮುಗುಳ್ನಗೆ ಬೀರುತ ಕುಳಿತಿಹಳೇಧನುರ್ಬಾಣ ಪಾಶವ ಕೈಯಲಿ ಅಂಕುಶಆಯುಧ ಪಿಡಿದಿಹಳೇ 3 ದುಂಡು ಕೈಯವಳೇ ಸುಂದರ ಕಾಯಳೇಚಂಡ ಮುಂಡ ಸಂಹಾರಕಳೇಮಾಂಡಲಿಕಳೇ ಮಹದ್ಭೂತಳೇಮಹಾಯೋಗಿ ವಿಲಾಸಳೇದಂಡಿ ಕಿರೀಟಳೇ ದಂಡೆಯ ಮುಡಿದಿಹಗೊಂಡೆಯಂದೊಲಿದಾ ಜಡೆಯವಳೇಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿದೇವಿ ತಾ ಕೊಂದಿಹಳೇ 4 ಆದಿರಹಿತಳೇ ಅಧ್ವಯ ರೂಪಳೇಅನಂತ ಕೋಟಿ ಪ್ರಭಾರೂಪಳೆಶುದ್ಧ ಬುದ್ಧಳೇ ನಿತ್ಯಮುಕ್ತಳೇಚಿದಾನಂದ ರೂಪಳೇಸದ್ಯೋಜಾತಳೇ ಸರ್ವಾತೀತಳೆಸಿದ್ಧ ಪರ್ವತ ಬಗಳೇಶುದ್ಧಾದ್ವೈತಳೆ ಸುಷುಮ್ನನಾಳಳೆಸೂಕ್ಷ್ಮವೆನಿಸುವಳೇ 5
--------------
ಚಿದಾನಂದ ಅವಧೂತರು
ಜಯದೇವ ಜಯದೇವ ಜಯ ಸದ್ಗುರುವೆಂದುಜಯವೆಂದು ಬೆಳಗಿದಳು ಬಗಳಾಂಬನಿಂದು ಪ ಬಿಗಿದ ಹೆದೆ ಬೆನ್ನಿಂಗೆ ಧನು ಶರಗಳ ಸೆಕ್ಕಿತಗತಗನೆ ಹೊಳೆಯುತಿಹ ಖಡ್ಗವ ಹೊರಗಿಕ್ಕಿಝಗಝಗನೆ ಆಭರಣ ಹೊಳೆಯಲು ಕಳೆಯುಕ್ಕಿಮಿಗಿಲೆನಿಪ ಆರುತಿಯೊಳ್ ಮುಕ್ತಾಕ್ಷತೆಯನಿಕ್ಕಿ 1 ಹತ್ತು ಕೈಯೊಳು ಹೊತ್ತು ನೆಗೆಹಿದಳು ಚದುರೆರತ್ನಖಚಿತದ ನತ್ತು ಹಣೆಬಟ್ಟು ಬೆದರೆಮತ್ತೆ ಕಿರುಬೆರಳ ಮುತ್ತು ಮುತ್ತುದುರೆಎತ್ತತ್ತಲೂ ಆರತಿಯ ಬಲು ಬೆಳಕು ಚದುರೆ 2 ಎತ್ತಿ ಹಾಡುತ ಒಲಿದು ಬಗಳೆ ಗುರುವಿಂಗೆತಥ್ಥೆಯ್ಯ ತಥ್ಥೆಯ್ಯ ತಥ್ಥೆಯ್ಯ ಕುಣಿದುಎತ್ತಲಾಯಿತೋ ದೇಹ ಪರವಶವದಾಗೆಮತ್ತೆ ಕಂಡಳು ತನ್ನ ಚಿದಾನಂದಾತ್ಮಗೆ 3
--------------
ಚಿದಾನಂದ ಅವಧೂತರು
ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ. ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ 1 ಕನಕಮಯ ಸರಪಳಿ ಥಳಥಳನೆ ಹೊಳೆಯೆ ಮಿನುಗುವಾಭರಣಗಳು ಝಗ ಝಗಿಸುತಿರಲು ಸನಕಾದಿ ಒಡೆಯನ ಫಣಿಪ ಹಿಂತೂಗೆ ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ 2 ವೇದವನೆ ಕದ್ದವನ ಕೊಂದವನೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ ಜಲಧಿ ಮೇದಿನಿ ತಂದೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ 3 ಬಲಿಯನೊಂಚಿಸಿದಂಥ ತರಳನೆ ಜೋ ಜೋ ಕುಲವನೆ ಸವರಿದ ಬಲಶಾಲಿ ಜೋ ಜೋ ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ4 ತ್ರಿಪುರ ಸತಿಯರ ವ್ರತವಳಿದೆ ಜೋ ಜೋ ಚಪಲತನದಿಂ ಹಯವನೇರಿದನೆ ಜೋ ಜೋ ಅಪರಿವಿತದವತಾರದಿಂ ಬಳಲಿ ಬಂದು ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ 5 ಅರಸು ಜಯದೇವಿ ಸಂಕರ್ಷಣನೆ ಜೋ ಜೋ ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ6 ನಾರದಾದಿಗಳೆಲ್ಲ ನರ್ತನದಿ ಪಾಡೆ ಊರ್ವಶಿ ಅಪ್ಸರರು ನೃತ್ಯವನು ಮಾಡೆ ತೋರೆ ಗಂಧರ್ವರು ಗಾನಗಳ ರಚನೆ ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ 7 ಭಕ್ತನಾದ ವಾಯು ಸಹಿತ ಪವಡಿಸಿದೆ ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ 8 ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ9
--------------
ಅಂಬಾಬಾಯಿ