ಒಟ್ಟು 558 ಕಡೆಗಳಲ್ಲಿ , 91 ದಾಸರು , 395 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ | ಚಿನ್ನನೆನುತಲಿ ಬಿಡದೆ ಘನ್ನ ದಯ ಮಳೆಗರೆದು | ಮುನ್ನಿನಪರಾಧಗಳನಿನ್ನು ಕ್ಷಮೆಯನು ಮಾಡಿ | ನಿನ್ನ ಸ್ಮರಣೆಯೊಳಿಪ್ಪ ಸನ್ಮತಿಯನಿತ್ತು 1 ನಿಚ್ಚಳದ ಪದಗಳಿಗೆ ಮುಚ್ಚಗೊಳ್ಳದೆ ನಿನ್ನ | ಎಚ್ಚರಿಕೆಯನು ತೊರೆದು ಬೆಚ್ಚಿ ಬೆದರುತೆ ವಿಷಯ | ಕಚ್ಚಿ ಬಳಲುವ ಈ ಹುಚ್ಚು ಮನಸ್ಸಿಗೆ ನೀ | ನಿಚ್ಚಟದರಹು ಕೊಟ್ಟು ನಿಶ್ಚಲದಲಿ ಸಲುಹು2 ಕುಂಭಿನಿಲಿ ಧೇನು ಬಸಿರಿಂ ಬಂದ ಕರುವಿಂಗೆ | ಹಂಬಲಿಸಿ ತಿರು ತಿರುಗಿ ಬೆಂಬಿಡದೆ ಬಪ್ಪಂತೆ | ಇಂಬಾಗಿ ಎನಗ ಕರುಣಾಂಬಕದಿ ನೋಡಿ ನೀ | ಸಂಬಾಳಿಸೈ ಕೃಷ್ಣನೆಂಬವನ ಸ್ವಾಮೀ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜ್ಞಾನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು
ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ
ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿ- ಶಿಷ್ಟ ಮಹಿಮೆಗಳನು ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು ಸುರಕಾಮಧೇನು ವಿಷ್ಣುವೇ ಪರದೈವವೆಂದು ದುಷ್ಟರಾಕ್ಷಸರನ್ನೆ ಕೊಂದು ಸೃಷ್ಟಿಪಾಲಿಪ ಶ್ರೀ ರಮೇಶನೇ ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ ತಾಯಿಯೂ ಬಂದು ಸೇವೆಗೆ ರಘುಪತಿ ರಾಯನಲೆ ನಿಂದು ಬಯಸಲಿಲ್ಲಾ ಒಂದು ಶ್ರೀಹರಿಗೆ ಬಂದು ಕಾಯಬೇಕು ಸುಗ್ರೀವನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯ ಉ- ಪಾಯದಿಂದಲಿ ಕೊಲಿಸಿ ರವಿಜಗೆ ಸ- ಹಾಯ ಮಾಡಿದಿ ವಾಯುತನಯನೆ 1 ಕಡಲ ಬೇಗನೆ ಹಾರೀ ಶ್ರೀರಾಮನ ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ ಜಡಿದೆ ಬಲು ಹೊಂತಕಾರಿ ಮಾಡಿಯೊ ಸೂರಿ ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರ ಹೊಡೆಸಿದಾಕ್ಷಣ ಲೋಕಮಾತೆಯ ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ 2 ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ ಸಾರ ತತ್ವವ ಪೇಳ್ದಿ ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ ಮೊರೆಯ ಕೇಳ್ದಿ ಧೀರ ಕದರುಂಡಲಗಿ ಹನುಮಯ್ಯ ಸೇರಿದೆನೊ ನಿನ್ನಂಘ್ರಿ ಕಮಲವ ಗಾರು ಮಾಡದೆ ಸಲಹೊ ಕರುಣವಾರಿಧಿ ನೀಯೆನ್ನನೀಗಲೆ 3
--------------
ಕದರುಂಡಲಗಿ ಹನುಮಯ್ಯ
ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿ- ಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರಕಾಮಧೇನು ಪ ವಿಷ್ಣುವೆ ಪರಮದೈವವೆಂದು ದುಷ್ಟ ರಾಕ್ಷಸರ ಕೊಂದೆ ಸೃಷ್ಟಿಸಿ ಪಾಲಿಪ ಶ್ರೀರಾಮರ ಇಷ್ಟ ಭಕ್ತರೊಳು ಶ್ರೇಷ್ಠನೆಂದೆನಿಸಿದೆ ಅ ತಾಯಿಯಪ್ಪಣೆಗೊಂಡು ಸೇವೆಗೆ ರಘುಪತಿ ರಾಯನಲ್ಲಿ ನಿಂದು ತನ್ನಾತ್ಮ ಸುಖ ಬಯಸೆನೆಂದು ಶ್ರೀ ಹರಿಗೆ ನುಡಿದುಕಾಯಬೇಕು ಸುಗ್ರೀವನನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯನು ಪಾಯದಿಂದಲಿ ಕೊಲ್ಲಿಸಿ ರವಿಜಗೆ ಸ- ಹಾಯ ಮಾಡಿದೆ ವಾಯುತನಯ1 ಶೌರಿ ಒಡೆಯಗೆ ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರವ ನೊಡಿಸಿದಾಕ್ಷಣ ಲೋಕಮಾತೆಯ ನೊಡಗೂಡಿಸಿದೆ ಶ್ರೀವಾಸುದೇವರಿಗೆ 2 ಸಾರ ತತ್ತ್ವವ ಪೇಳ್ದೆ ಶರಣು ಹೊಕ್ಕ ಮನುಜರ ಘೋರ ದುರಿತವ ಸೀಳ್ದೆ ಧೀರ ತನು ಧುರದುಂಡಿ ಹನುಮಯ್ಯರಿಂ ಸೇವಿಸಿದ ನಿಮ್ಮಂಘ್ರಿ ಕಮಲವದೂರ ಮಾಡದೆ ಎನ್ನ ಸಲಹಯ್ಯ ಕರುಣಾವಾರಿಧಿ ಕಾಗಿನೆಲೆಯಾದಿಕೇಶವ ಮುತ್ತತ್ತಿ ದೊರೆಯೆ3
--------------
ಕನಕದಾಸ
ಏನ ಬೇಡಲೊ ನಿನ್ನ ದೇವಾಧಿ ದೇವ ಪ ಏನಹುದೊ ನಿನ್ನೊಳಗೆ ಮಹಾನುಭಾವ ಅ.ಪ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆತಿನುವುದಕೆ ಕೇಳುವೆನೆ ನವನೀತಚೋರ 1 ಒಡವೆಗಳ ಬಯಸೆ ಶಿಖಿಪಿಂಛ ತುಳಸಿ ಪತ್ರಕಡು ಸೈನ್ಯವನೆ ಬಯಸೆ ಗೋಪಾಲನುಬಿಡದೆ ರೂಪವÀ ಬಯಸೆ ನೀಲಮೇಘಶ್ಯಾಮಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ 2 ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆಭಕ್ತಿಯನು ಸತ್ಯವಂತರಿಗಿತ್ತಿಹೆಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವಮುಕ್ತಿ ಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ3
--------------
ವ್ಯಾಸರಾಯರು
ಏನಗೈದೊಡೇನು ನಿನ್ನ ಬಿಡೆನು ನಾನೆಲೈ ಉದಧಿಶಯನ ಕೇಳೆಲೈ ಈ ಹದನ ಲಾಲಿಸೈ ಪ. ಎತ್ತ ಪೋದಡತ್ತ ನಿನ್ನ ಬೆನ್ನ ಹತ್ತುವೆ ನಿನ್ನ ಸುತ್ತಿ ಕಾಡುವೇ ನೀನೆತ್ತ ಪೋಗುವೆ 1 ಜಲಧಿಯಲ್ಲಿ ವಾಸಗೈದೆ ಬೇಸರಿಲ್ಲದೆ ಮೋದದೆ ನೀ ಏನಗೈದೆ 2 ಘೋರ ರೂಪಕಲಸದೆ ಕೆನ್ನೀರ ನೀಂಟಿದೆ ಕರುಳಮಾಲೆ ಧರಿಸಿದೆ ಕಪಟರೂಪ ತಾಳಿದೆ 3 ನಲಿದು ತಾಯ ತಲೆಯ ಕಡಿದು ಬಲಿದನೆನಿಸಿದೆ ಜಲಧಿಯನ್ನೆ ಕಟ್ಟಿದೆ ಛಲದಿ ದ್ವಿಜನ ಕೆಡಹಿದೆ 4 ಜಾರಚೋರನೆನಿಸಿ ಜಗವಗಾರುಗೊಳಿಸಿದೆ ಕುದುರೆಯೇರಿದೆ ಇನ್ನೇನು 5 ಇಷ್ಟು ಪಾಡುಪಟ್ಟ ನಿನ್ನ ಬಿಟ್ಟು ಪೋದೆನೆ ದಿಟ್ಟತನಕೆ ಭೀತಿಪಟ್ಟೆನೇ ನಿನ್ನ ಪಿಡಿಯದಿರ್ಪನೆ6 ಮೋಸಗಾರ ಶೇಷಶೈಲವಾಸನಹುದೆಲೈ ವಾಸಿಪಂಥವೇನೆಲೈ ಮೀಸಲಾಗಿ ಭಜಿಪೆ ನೋಡಲೈ7
--------------
ನಂಜನಗೂಡು ತಿರುಮಲಾಂಬಾ
ಏನು ಕರ್ಮವ ಮಾಡಿ ನಾ ನಿನ್ನ ಒಲಿಸಲಿ ಶ್ರೀನಿವಾಸ ಧ್ಯಾನಕೆ ನಿಲುಕದ ಜ್ಞಾನಿಗಳರಸ ನೀನು ಶ್ರೀನಿವಾಸ ಪ ಗಂಗೆಯ ತಂದು ಮಂಗಳಸ್ನಾನ ಮಾಡಿಸೆ ಶ್ರೀನಿವಾಸ ಗಂಗೆಯು ನಿನ್ನಂಗುಷ್ಟದಲ್ಲಿಹಳಲ್ಲೊ ಶ್ರೀನಿವಾಸ 1 ಮನಮೆಚ್ಚುವಂತೆ ನಿನ್ನ ಸುಮಗಳಿಂದರ್ಚಿಪೆನೆ ಶ್ರೀನಿವಾಸ ವನಜ ಪುಷÀ್ಪವು ನಿನ್ನ ನಾಭಿಯೊಳಿಹುದಲ್ಲೋ ಶ್ರೀನಿವಾಸ 2 ಅಂಗಿವಸ್ತ್ರಗಳಿಂದ ಶೃಂಗರಿಸುವೆನೆಂದರೆ ಶ್ರೀನಿವಾಸ ಅಂಗನೆ ಲಕುಮಿ ಸಕಲಾಭರಣಂಗಳಾಗಿರುವಳಲ್ಲೊ ಶ್ರೀನಿವಾಸ 3 ಅನ್ನ ಪಾನಗಳಿತ್ತು ಧನ್ಯನಾಗುವೆನೆ ಶ್ರೀನಿವಾಸ ಅನ್ನಪೂರ್ಣಿ ಷಡುರಸದನ್ನವ ಮಾಳ್ಪಳಲ್ಲೊ ಶ್ರೀನಿವಾಸ 4 ಕಡುಭಕ್ತಿಯಿಂದ ನಿನ್ನಡಿ ಸೇವೆ ಮಾಳ್ಪೆನೆ ಶ್ರೀನಿವಾಸ ಎಡಬಿಡÀದೆ ಹನುಮ ನಿನ್ನಡಿಯ ಪಿಡಿದಿಹನಲ್ಲೊ ಶ್ರೀನಿವಾಸ 5 ಜಗದುದರ ನಿನ್ನ ಬಗೆ ಬಗೆ ನಾಮಗಳ ಸ್ತುತಿಸೆ ಶ್ರೀನಿವಾಸ ಅಗಣಿತವಾಗಿಹುದು ಮುಗಿಯದಂತಿಹುದಲ್ಲೊ ಶ್ರೀನಿವಾಸ6 ಶ್ರಿಷ್ಟಿಕರ್ತ ಶ್ರೀ ರಂಗೇಶವಿಠಲನೆ ಎಂಬೆ ಶ್ರೀನಿವಾಸ ಇಷ್ಟೆಂದ ಮಾತ್ರಕೆ ಒಲಿದಿಷ್ಟವ ಸಲಿಸೈಯ್ಯಾ ಶ್ರೀನಿವಾಸ 7
--------------
ರಂಗೇಶವಿಠಲದಾಸರು
ಏನು ಕಾರಣವೆಮ್ಮ ದೂರಕೆ ನೀನು ನೂಕಿದನೆನಿಸಿದೆಹಾನಿ ವೃದ್ಧಿಗಳನ್ನು ಕಾಣಿಸಿ ದೀನಧೀರರ ಮಾಡಿದೆ ಪಎಲ್ಲರೊಳು ನೀ ಪೂರ್ಣ'ರುತಿಲ್ಲವೆಮ್ಮೆಡೆಯೊಳಗೆನುವ ಭ್ರಮೆಯಲ್ಲಿ ಬಂದುದು ಎಮಗೆ ಠಾ'ನ್ನೆಲ್ಲಿ ನಿನ್ನನಗಲುವರೆಉಳ್ಳವನೆ ನಿನಗಿಂತು ಬರುತಿರುವಲ್ಲಿ ನ'್ಮುರವನ್ನು ಪೇಳ್ವದುಜಳ್ಳು ನೀನಿದಿರಿಟ್ಟು ತೊಲಗಿದೆಯಲ್ಲ ಶ್ರೀಗುರುವರ್ಯನೆ 1ಹಲವು ಪರಿಯಲಿ ಚಿತ್ತಪಾಕವ ತಿಳಿದು ಶ್ರುತಿತಾ ಸಾರಿದರ್ಥವುಹೊಳೆಯದೊಂದೊಂದರ್ಥದಲಿ ಮನತೊಳಲಿ ಮಾರ್ಗವ ಕಾಣದೆನಲುಗಿ ಭವಮೃತಿಯೊಂದಿ ಜೀವರು ಬಳಲುತಿರಲವತರಿಪನೆಂಬರುತಿಳಿ'ಯಗಲುವನೆಂದರ ನುಡಿಯಳವಡದು ಗುರುವರ್ಯನೆ 2ಕೊರಗಿ ಕರಗುವ ಜೀವರಾರೈ ಬರುವೆ ನೀನೆಲ್ಲಿಂದ ಸಮಯಕೆಇರುವೆ ನೀನಾವೆಡೆಯೊಳಜ್ಞತೆ ಬರುವದಿವರಿಂಗೇತಕ್ಕೆಹರೆವದೆಂತದರಂದತೋರದು ಧರಿಸುತಿಹೆ ನೀನೆಂತು ತನುವನುಮರೆಯ ಮಾಳ್ವೆಯದೇಕೆ ಮೂರ್ತಿಯ ಕರುಣಿಸೈ ಗುರುವರ್ಯನೆ 3ನಿನ್ನ ನಿನ್ನೊಳು ನೀನೆ ನಾನೆಂದೆನ್ನದೆಂಬುದರಿಂದ ತಿಳಿದರೆನನ್ನ ನಿನ್ನೊಳು ಕಾಣ್ಬೆ ಅಂದು ಪ್ರಸನ್ನನಾಗಿಯೆ ಕರುಣಿಸಿಎನ್ನೊಳಗೆ ಸರ್ವವನು ಸರ್ವರೊಳೆನ್ನ ತಿಳಿದನ್ಯಾರ್ಥವನೆ ಮರತುನ್ನತಾಮಲ ಪೂರ್ಣನಹೆಯೆಂದಿನ್ನು ತೋರದು ದೇವನೆ 4ಸಾಕು ಸನಿಯವ ಸೇರಿಸೆಮ್ಮೊಳು ನೂಕು ಕ'ದಿಹ ತಮವ ಸುಖವನುಸೋಕಿಸೈ ಕಡೆಗೊಳಿಸು ಚಿಂತೆಯ ಬೇಕು ನಿನ್ನಡಿ ಸೇವೆಯುಶ್ರೀಕರನೆ ಚಿಕನಾಗಪುರ ವರದರಸನೆ ಗುರುವಾಸುದೇವನೆತಾಕು ತಡೆ ಬರದಂತೆ ನಿನ್ನೊಳಗೇಕತೆಯ ದಯಮಾಡಿಸೈ 5
--------------
ವೆಂಕಟದಾಸರು
ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ಏನೆಂದ್ಹೇಳಲಿರಂಗನಟ್ಟುಳಿ ಮಾನವರಂತಿವನಲ್ಲಾ ತಾನಾರಿಗೆ ತನ್ನೆಲೆಗುಡ ಗೋಪೀ ಮಾನಿನಿಮಗ ಬಲುಹೊಲ್ಲಾ ಪ ಕೆಳಗಿಲ್ಲದಲಿರೆ ಗೋರಸ ಭ್ಯಾಂಡ್ಯವು | ನೆಲವಿನ ಅಡಕಲ ನೋಡಿ ಅದು | ನಿಲಕದಲಿರೆ ಕೈಗೂಡಿ ಕಡ | ಗೋಲಿಲಿ ಯಜ್ಞ ಮಾಡೀ | ಗೆಳೆಯರ್ವೆರ ಸೈದ ಬಲುಸೂರ್ಯಾಡಿ | ಸಿಲುಕದ ಲ್ಹೋಗುವ ಪೋಡಿ | 1 ಇಕ್ಕಿದ ಕದಗಳು ಇಕ್ಕಿರಬೇಕು | ಫಕ್ಕನೆ ಮನೆಯೊಳು ಸುಳಿದು | ಚಿತ್ತಕ ಮೋಹಿನಿಂದು ಅವ | ರಕ್ಕರದಲಿ ನೆರೆದು ಚಿಕ್ಕ ಬಾರಕೆ | ಠಕ್ಕಿಸಿ ಹೊರುವ ಆ ಮಕ್ಕಳಾಟಿಕೇನಿದು2 ಖೂನಕೆ ಬಾರದೆ ತಾನಲ್ಲಿದಲಿಹ | ನಾನಾ ವೃತ್ತಿಗೆ ಬಂದು ಇದು | ಧೇನಿಸಿ ನೆಲೆ ತಿಳಿಯದ | ನಾನಾ ನೆಂಬವರಿಗೆ ಇದು | ಶ್ರೀನಿಧಿ ಗುರುಮಹಿಪತಿ ಪ್ರಭುವಿನ | ಅನುಮಾನದಲೇ ದೂರುವುದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏಸುಪರಿ ಈಸಬೇಕೋ ಶ್ರೀಶದಾಸನೇ ಮತ್ತೂರೇಶ ಭವಸಾಗರದಿ ಏಸುಪರಿ ಈಸಬೇಕೋ ಪ ಕೂಸಿನಂಕದಿ ಬಾವು ಘಾಸಿಸುವ ಜ್ವರತಾಪನೋಸರಿಸಲೇಶ ಸಮಯದಿಯೊದಗಲು ಲೇಶವಾದರು ಮಗುವಿನಾಸೆ ಇರದಿರೆ ಪ್ರಾಣೇಶನೇ ಗತಿಯೆನಲು ಲೇಸುಮಾಡಿದೆ ಸ್ವಾಮಿ1 ಎನಿತೆಂದು ಹೇಳಲ್ಯ ನಿನಗೆ ಮನದಳಲು ನೀಗಲಸದಳವಾಗಿ ಬಳಲುವೆನು ತನುವಿನೀ ಸಂಕಟವ ತೊಲಗಿಸೈ ಜವದಿ 2 ದುರಿತ ದೂರಪುದು ಭರದಿ ಎನ್ನೊಡೆಯ ಶ್ರೀರಾಮ ಪೊರೆವಾ ಭವ ಕಿಚ್ಚಿನಿಂದುದ್ಧರಿಸಿ ಎನ್ನನು ನರಸಿಂಹವಿಠ್ಠಲನ ನೆನೆಯೆ ಜಿಹ್ವೆಗನಿಸೊ 3
--------------
ನರಸಿಂಹವಿಠಲರು
ಏಳೈಯ್ಯಾ ಆತ್ಮರಾಮಾ | ಯತಿ ಮುನಿಜನ ಪ್ರೇಮಾ | ಏಳೆಯ್ಯ ಘನಶಾಮಾ | ಎನ್ನಪಾಲಿಸೈ ಗುಣಧಾಮಾ ಪ ಬೋಧ ಸುರ್ಯನು ಬರಲಿ | ಮರವಿನ ಕತ್ತಲೆ ತೆರಳಿ | ಬೆಳಗಾಯಿತು ಮನದಲ್ಲಿ 1 ವಾದತಾರೆಗಳಡಗಿ | ವಿಕಸಿತ ಹೃತ್ಕಮಲಾಗಿ | ಸಾಧನ ಪಕ್ಷಿಗಳೊದಗಿ | ಕಲಕಲಿಸುತಿವೇ ಬಹುವಾಗಿ 2 ವಿವೇಕಾದ ಭರತಾ || ವೈರಾಗ್ಯ ಶತೃಘ್ನ ತಾ | ಸಾವಧ ಲಕ್ಷ್ಮಣ ನಿರುತಾ ಪದಸೇವೆಗೆ ನಿಂತರು ತ್ವರಿತಾ 3 ಶಮದಮವೇ ನಿಸ್ಸೀಮಾ | ವಿಭೀಷಣ ಸುಗ್ರೀವ ನೇಮಾ | ಜಾಂಬವ ಹನುಮಾ4 ಶಾಂತಿ ಸೀತೆಯು ವಲಿದು ನಿಂತಿಹಳೈ ಕೈಮುಗಿದು | ಚಿಂತಿತಾರ್ಥವನೇ ಕೊಡು | ಮಹಿಪತಿ ಸುತಗೊಲಿದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಂದೇ ಮತ ಹರಿಯ ಮತ ಒಂದೇ ಭಾವ ಸಿರಿಯರಸನ ಭಾವ ಸಲಹಿದ ನರಹರಿ ಒಂದೇ ಮನದಂಬರೀಷನ ಕಾಯ್ದ ಹರಿ ಒಂದೇ ಮನದಿ ಧ್ರುವನ ಕಾಯ್ದ ಹರಿ ಒಂದೇ ಗಳಿಗೆಯಲಿ ತನ್ನುಂಗುಟದಿ ಸೋಕಿಸೆ ಕಲ್ಲಾಗಿದ್ದಹಲ್ಲೆಯ ಪೆಣ್ ಮಾಡಿದ ತಂದೆಯಂದದಿ ಭಕ್ತರ ಹಿಂದೆ ಕಾದಿದ್ದು ಕರುಣಾಸಿಂಧು ಭಕ್ತರ ಬಂಧು ಸುಂದರಿ ಸಿಂಧುಸುತೆಯರಸನ ನಿತ್ಯ ನೆನಯಿರಿ ಹರಿ ಭಕ್ತರು 1 ಸಾರ ನಾಲ್ಕು ಯುಗದಾಧಾರ ನಾಲ್ಕು ಮುಖದಲಿ ನೆಲಸಿ ಸೃಷ್ಟಿಕಾರ್ಯವ ನಡೆಸಿ ನಾಲ್ಕು ಮುಖ ಬೊಮ್ಮನಲಿ ನಾನಿಲ್ಲವೆನಿಸಿ ನಾಲ್ಕು ಯುಗದಲಿ ಜನಿಸಿದ ರಕ್ಕಸರಿಗೆ ತಿಳಿಸಿ ನಾಲ್ಕು ಲೋಕದಿ ಮೆರೆದ ನಾಕಚಾರ ವಂದ್ಯ ನಾಲ್ಕು ಹಸ್ತದಿ ನಾಲ್ಕು ವೇದತಂದಾ ಮೂರ್ತಿ ನಾಲ್ಕು ವೇದದ ಸಾರದಮೃತ ಭಕ್ತರಿಗಿತ್ತು ಹದಿನಾಲ್ಕು ಲೋಕಕೆ ನಾನೇ ಕರ್ತನೆಂದರಿಸಿ ನಾಲ್ಕು ವಿಧದಲಿ ಕಾವ ಶ್ರೀ ಶ್ರೀನಿವಾಸನ ಭಕ್ತರಾದರೆ ಈ ಕಲಿಯುಗದಿ ನಾಲ್ಕು ಜನರು ಮೆಚ್ಚುವರು ನಿಮ್ಮ ಹರಿ ಭಕ್ತರೆ ಕೇಳಿ2 ನಿನ್ನ ಸಹವಾಸ ಸೈ ನಿನ್ನ ಒಡನಾಟ ಸೈ ನಿನ್ನ ರೂಪ ಚತುರ ಬುದ್ಧಿ ಎನ್ನ ಸೈ ಎನ್ನಲಾಪರೆ ನಿನ್ನ ಕೈ ಚಳಕವಿಲ್ಲದಲೆ ಜೈಸುವದೆಂತೀ ಕಲಿಕಾಲದಿ ಸ್ವಾಮಿ ಜೈಲುವಾಸದಿ ಕೂತು ನಿನ್ನ ಕಲ್ಯಾಣವ ಕಟ್ಟಿದರೊ ನಿನ್ನ ಭಕ್ತರು ಜೈ ಕರುಣಾಕರ ನಿನ್ನ ಭಕ್ತರ ಮಹಿಮೆ ನಾ ಪೊಗಳುವದೆಂತೊ ಜೈ ಎನಿಸಿಕೊಳ್ಳಲು ನಿನ್ನೊಲುಮೆ ಕಾರಣವಲ್ಲವೆ ಜೈವೆಂಕಟ ಶ್ರೀಶಾ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಗೆ ಜಯ ಅಪಜಯವೆಲ್ಲಿ ನಿನ್ನ ಭಕ್ತರಿಗೆ ಎಂದೆಂದಿಗೂ ಜೈ ಹರಿಭಕ್ತರ ನೆನೆಯಿರಿ ಹರಿಭಕ್ತರು 3 ಯನ್ನ ಯತ್ನವೇನಿಲ್ಲಿದರೋಳು ಪನ್ನಗಾದ್ರಿ ನಿವಾಸನಲ್ಲದೇ ಯನ್ನ ಯತ್ನ ಸಲ್ಲುವುದೇ ಎನ್ನ ಮನಸಿಲಿ ಬಂದು ನಿಂದು ತಾನೇ ನುಡಿಸಿದನಿಂದು ಚೆನ್ನಗಿರಿಯರಸ ಭಕ್ತ ಜನ ಬಂಧು ಬಂದು ನಿಂದು ಎನ್ನ ಮನದಭಿಲಾಷೆ ಸಲಿಸೆ ದೀನ ವತ್ಸಲನು ಎನ್ನ ಕರದಲಿ ಬರೆಸಿ ನಲಿದಾಡಿದ ತನ್ನ ವಾಣಿಯನಿತ್ತು ಎನ್ನ ಕುಲದೈವ ಶ್ರೀ ಶ್ರೀನಿವಾಸನ ಕೃಪೆ ಎನ್ನ ಮೇಲೆಂತುಟೊ ಕಾಣೆ ಇನ್ನು ಈ ವಾಣಿ ಹರಿಯದೆಂದು ನುಡಿವುದು ಹರಿಭಗವದ್ಭಕ್ತರು 4 ಪಾಮರರಿಗೆ ಕಲ್ಪತರು ಪಾಮರರಿಗೆ ಜಗದ್ಗುರು ವರವ ತೋರಿ ಪಾಮರರ ಪುನೀತರನು ಮಾಡೆ ಹರಿ ಪಾಮರೆಂದು ಲೆಕ್ಕಿಸದೇ ತಾವಲಿದು ನುಡಿಸಿದ ಪತಿತ ಪಾವನ್ನ ಶ್ರೀ ಶ್ರೀನಿವಾಸನದೇ ಈ ಉಕ್ತಿಯಲ್ಲರ ನೃತ್ರವಿಲ್ಲೆಂದು ತಿಳಿದು ಪಾಮರರನ್ನುದ್ಧರಿಸಲು ಹರಿಭಕ್ತರು ಪಠಿಸುವುದು ಈ ನುಡಿಯ 5 ಜತೆ ಶರಣು ಭಕ್ತರ ಪಾಲ ಶರಣು ಶ್ರೀಲೋಲಾ ಶರಣು ನಿನಗೆ ಸದಾ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆತನುಹೊರೆಯನೊಲ್ಲೆನವ್ವಾ ಪ ಭಾರ ಹುವ್ವಿನಭಾರ ಸೈರಿಸಲಾರೆನೆಮಾರನಯ್ಯನು ಬಾರದಿದ್ದರೆಮಾರನಂಬಿಗೆ ಗುರಿಯ ಮಾಡಿ 1 ಎಲ್ಲ ದೇವರ ವಲ್ಲಭನೆಂದುಒಲಿದ ಮನ ನಿಲ್ಲದೆನಿಲ್ಲದೆ ರಂಗ ಪೋದ ಮಧುರೆಗೆಬಿಲ್ಲ ಹಬ್ಬದ ನೆವನ ಮಾಡಿ 2 ಮಂದಾನಿಲನ ಸಹಿಸಲಾಗದುನೊಂದೆ ಶುಕಪಿಕ ರವಗಳಿಂದಚಂದ್ರಕಿರಣದಿ ಬೆಂದೆ ಇನ್ನೀವೃಂದಾವನವೇಕನನಗಲಿ 3 ಮುನ್ನ ಆಡಿದ ಮಾತ ಮರೆತುಎನ್ನ ಮನದೊಳಗೀಡಾಡಿವನ್ನಜಾಕ್ಷನು ಬಾರ ಪುರದವನ್ನಿತೆಯರನು ಮೆಚ್ಚಿ ಪೋದ 4 ಪೊಂಗೊಳಲ ಧ್ವನಿಗೆ ಸಿಲುಕಿಭಂಗಗೆಟ್ಟೆನಂಗಜನಿಂದಲಿಪೆಂಗಳಿಗುಚಿತವಲ್ಲ ಇದುರಂಗವಿಠಲನ ತೋರದಿದ್ದಡೆ 5
--------------
ಶ್ರೀಪಾದರಾಜರು