ಒಟ್ಟು 86 ಕಡೆಗಳಲ್ಲಿ , 28 ದಾಸರು , 80 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಲೋಕನೀತಿ ಏನು ಮಾಡಿದರೇನು ಹಾನಿಯಾಗದು ಪಾಪ ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ 1 ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ ಅಪರೂಪ ಹರಿನಾಮ ಜಪ ಮಾಡದನಕ 2 ದಾನಧರ್ಮಗಳಿಂದ ಧನ್ಯನಾದೆನು ಎನಲು ಹಾನಿಯಾಗೋದು ಆಯು ಪ್ರತಿ ನಿಮಿಷದಿ ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದÉ ಮೌನದಿಂದ್ಹರಿ ನಾಮ ಧ್ಯಾನಿಸುವತನಕ 3 ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು ವಾಸುದೇವನೆ ಜಗತ್ಪ್ರೇರಕನು ಎಂದು ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ- ರ್ವೇಶ ನಿನ್ನಧೀನವೆಂದರಿವ ತನಕ4 ಗಾತ್ರ ಶೋಷಣೆಯಾಕೆ ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ5
--------------
ನಿಡಗುರುಕಿ ಜೀವೂಬಾಯಿ
ವಂದಿಸುವೆನು ನಿತ್ಯದೊಳು ವಂದಿಸುವೆನು ಪ ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ 1 ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯ ಮಾಡಿ ಮೋಹವನು ಹಿಂದುಗಳೆದು ನವವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರ ತ್ರಯದೊಳು 2 ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲು ನಾದಗಳೆಂಬ ಕಹಳೆವಿಡಿದವಗೆ 3 ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ 4 ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ 5 ಪ್ರತ್ಯಾಹಾರದಿಂ ಮಣಿಹಾರಕದ ಮನೆಯ ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು 6 ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು ಮನದೊಳು ಮೂಲ ಬಂಧದಿ ಆರು ಶಕ್ತಿಗಳ ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ- ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ 7 ಖೇಚರಿಯ ಯೋಗದಿಂ ಕರಣ ಚತುಷ್ಟಯದ ನೀಚ ಪ್ರಧಾನಿಗಳ ನೆಗಳವನಿಕ್ಕಿ ಕಾಲ ಕರ್ಮದ ಕಣ್ಣುಗಳ ಕಿತ್ತು ಯೋಚನೆಯ ಮಾಡಿದನು ವೀರಾಸನದೊಳು 8 ಮಾಯಾ ಪ್ರಪಂಚವೆಂಬನ್ಯಾಯ ನಾಯಕರ ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು- ಪಾಯದಿಂದಾರು ವಿಕಾರಗಳ ಕೈಗಟ್ಟಿ ಬಾಯ ಹೊಯ್ದ ಗುರುವಿಗೆರಗುವೆನು ನಾನು 9 ಇಪ್ಪತ್ತೊಂದು ಸಾವಿರವಾರು ನೂರಾದ ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು ಒಪ್ಪುವನು ಅರೆನೇತ್ರದಿಂದ ಬೆಳಗುವನು 10 ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ ವರ್ಣಾಶ್ರಮಂಗಳನು ಏಕವನು ಮಾಡಿಯೆ ನಿರ್ಣಯಿಸಿಕೊಂಡು ತಾ ನೋಡುವವಗೆ 11 ನುತಿಕರ್ಮದಿಂದಷ್ಟ ಆತ್ಮಕರ ಆಸನವ ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ 12 ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು ಕಾದು ಇರುತಿಹ ಹರಿಗಳಾರು ಬಿಂದುವಿನಿಂ ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ ಆದಿ ಕರಣಿಕನನ್ನು ಹಿಡಿದವನಿಗೆ13 ದಾತೃತ್ವದಿಂ ಸತ್ಯಲೋಕವನು ತಾ ಕಂಡು ಕಾತರದಿ ಆಕಾರದುರ್ಗವನು ಹತ್ತಿ ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ ಈ ತೆರದ ಮಹಾದುರ್ಗವನು ಕಂಡವಗೆ 14 ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ ಗುಣನಿಧಿಯು ವರಾಹತಿಮ್ಮಪ್ಪರಾಯನನು ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ 15
--------------
ವರಹತಿಮ್ಮಪ್ಪ
ವಾಸುದೇವನ ನೆನೆದು ನೀ ಸುಖಿಯಾಗು ಮನವೆ | ಈ ಶರೀರದ ಭ್ರಾಂತಿ ಇನ್ಯಾಕೆ ಮನವೆ ಪ ಕಾಲುಗಳು ಕುಂದಿದವು ಕಣ್ಣದೃಷ್ಟಿ ಹಿಂಗಿದವು | ಮೇಲೆ ಯೌವನ ಹೋಗಿ ಮುಪ್ಪಾಯಿತು || ಕಾಲ ಕರ್ಮಂಗಳು ಒದಗಿದಾಕ್ಷಣದಲಿ | ಬೀಳುವ ತನುವಿನಾಶೆ ಇನ್ಯಾತಕೆಲೆ ಮರುಳೆ 1 ಧಾತುಗಳು ಹಿಂಗಿದವು ದಂತಗಳು ಸಡಲಿದವು | ಕಾಂತೆಯರು ನೋಡಿ ವಾಕರಿಸುವರು || ಭ್ರಾಂತಿ ಇನ್ಯಾಕೆ ಬಯಲಾದ ದೇಹಕ್ಕೆ ಇನ್ನು | ಅಂತರ ಮಾಡದೆ ಹರಿಯ ನೆನೆ ಮನವೆ 2 ನೀರ ಬೊಬ್ಬುಳಿಯಂತೆ ನಿಜವಲ್ಲ ದೇಹ | ಧಾರಣಿಯನು ಮೆಚ್ಚಿ ಮರುಳಾಗಿ ಕೆಡದೆ || ಶ್ರೀರಮಣ ವಿಜಯವಿಠ್ಠಲರಾಯ | ಸೋರಿ ಹೋಗುತಿದೆ ಸ್ವರ್ಗ ಸುಮ್ಮನಿರಬೇಡಾ 3
--------------
ವಿಜಯದಾಸ
ಶೋಕವ್ಯಾತಕೆ ಮನವೆ ನಿನಗೆ ಇನ್ನು ಪ. ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಅ.ಪ ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠ ಪಿತೃ ಪಾರ್ಥಾದಿ ಮಹಧೀರರು ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ 1 ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು ಅಸಮ ಸಾಸಿಗರು ಮಹ ಶೀಲಜ್ಞರು ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ ವಶರಾಗಿ ಪೋದರು ನೋಡಿ ಅಚ್ಚರಿಯ2 ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ ಸಂತೋಷವನು ತೊಡೋ ಮನಸಿನಲ್ಲಿ ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ3
--------------
ವಿಜಯದಾಸ
ಶೋಭಾನೆ ಶೋಭಾನೆ ಶೋಭಾನೆ ಪ ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವÀಂದಿಸಿ ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ ಸುಜನರೆಲ್ಲಾಲಿಪುದು ಶೋಭಾನೆ 1 ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ ಶಾಸ್ತ್ರಾರ್ಥವೇತ್ತನಾಗುತಲಿ ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ ಅಗ್ಗಳ ನೀನಾಗು 2 ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ- ನಿಖಿಳ ಯಜ್ಞಗಳಾಚರಿಸು ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು ಮಾನ್ಯರೊಳು ವರ್ತಿಸಿಸುಖಿಸು 3 ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ- ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು ನಿತ್ಯ ಸಂತಸದಿ ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ ಮಾಡಿ ನಿತ್ಯಸುಖಿಯಾಗು 4 ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ- ಅರ್ಥಿಯ ಪೊಂದು ಸ್ವರ್ಗಸ್ಥಿತಿ ಲಯಕರ್ತ ಗುರುರಾಮವಿಠಲ ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ ನಿತ್ಯ ಸತ್ಯಾಧನವ ಮಾಡಿಸುವಾ ಶೋಭಾನೆ 5
--------------
ಗುರುರಾಮವಿಠಲ
ಶ್ರೀ ಮಹಿದೇವಿಯರು ಸತ್ಯಭಾಮಾ ರುಕ್ಮಿಣಿಯರೆಂಬ ನಾಮಗೊಂಡು ನಮ್ಮ ಕೃಷ್ಣ ಸ್ವಾಮಿಯನ್ನು ಸೇವೆ ಮಾಳ್ಪ ಕರವ ಪಿಡಿಯಲಾ ಮಹಾರುಂಧತಿಯ ಕೂಡಿ ಭಾಮೆಯರೆಲ್ಲ ನಲಿವುತ 1 ನೀಲ ಖಚಿತ ನಿರ್ಮಲಾರತಿಗಳನೆತ್ತಿ ಸಾಮಗಾನಲೋಲಗೆ ಶ್ರುತಿಗಳರ್ಥವರಿತು ಪುಣ್ಯ ನಾಮನ ಹರಿಸಿ ನುಡಿದರು 2 ವೇದ ತಂದು ಮಂದರಾಖ್ಯ ಭೂಧರವ ನೆಗಹಿ ಧರೆಯ ಕಾದು ಕುಂಭದಿಂದಲುದಿಸಿ ಸಾಧುತನದಿ ಬಲಿಯ ಗೆದ್ದು ಕ್ರೋಧದಿಂದ ಕೊಡಲಿ ಪಿಡಿದು ಕಪಿಗಳನ್ನು ಕೂಡೆ ಕುಬ್ಜೆ ನೋಡಿ ಕಾಪಾಡಿ ಒಡನಾಡಿ 3 ಮೂಢಜನರ ಮೋಹಿಸಿ ಮುಂದೋಡಿ ಮ್ಲೇಚ್ಛ ಜನರ ಮಡುಹಿ ಆಡುವ ಬಾಲಕರ ತೆರೆವ ಮಾಡಿ ಮೋದದಿಂದ ಲಕ್ಷ್ಮಿ ಕೂಡಿ ಕ್ರೀಡಿಸುತ ಸುಖಿಯಾಗು 4 ಕಲಿಯ ಕಾಲದಲ್ಲಿ ಬಹಳ ಬಳಲುವ ಸಜ್ಜನರೆಲ್ಲ ಸುಲಭದಿಂದ ಸಲಹಿ ಖ್ಯಾತಿ ಗೊಳುವೆನೆಂದು ವೆಂಕಟಾದ್ರಿ ಕುಲವೆಲ್ಲ ಕರಸಿ ಚೆಲುವೆ ಪದ್ಮಜಾತೆಯನ್ನು ಒಲಿಸಿ ನಂಬಿದವರ ಸೌಖ್ಯ ಜಲಧಿಯೊಳ್ಯೋಲಾಡಿಸುತ ಫಲವನೀವನೆಂಬ ಕೀರ್ತಿಬಲವಾಗಿ ಪಡದು ಸುಖಿಯಾಗು 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಎನ್ನಿರೋ ``ಶ್ರೀ ರಾಘವೇಂದ್ರಾಯನ ನಮಃ'' ಎಂಬ ಪ ನಾಮವ ಸ್ಮರಿಸಿ | ಸುಖಿಯಾಗು ಮನವೇ ಅ.ಪ ಸಂಸಾರ ಸಾಗರದಿ ಬೆಂದು ಬಳಲಿರುವೇನಯ್ಯ ಮುಂದೇನು ಗತಿ ಕಾಣೆ ಗಾಡಾಂಧಕಾರದೊಳು ಮುಳುಗಿ ಬೆಂಡಾದೆನೊ ಕರುಣಿಸೈ ಗುರುರಾಘವೇಂದ್ರಾ1 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆಂದು ನಂಬಿದೆನೈ ಪ್ರಭವೆ ಸಂದೇಹವೇಕಿನ್ನು ಕಂದನೆನು ತೆಂದು ಕಾಯೋ ಗುರುವೇ ಶ್ರೀ ರಾಘವೇಂದ್ರ ಪ್ರಭುವೆ2 ಅಂಧತ್ವ ಮೂಕತ್ವ, ಬಧಿರತ್ವ ಎಕಲಾಂಗಿಗಳ ಹಿಂದೆ ಪೊರೆದೆ ನೀನೆಂಬ ವಾರ್ತೆಕೇಳಿ ನಿನ್ನ ಘನ್ನಮಹಿಮಾ ಶ್ರೀ ರಾಘವೇಂದ್ರಾ 3 ಭವರೋಗ ಗಳೆಲ್ಲ ಪರಿಹರಿವುದೊ ಸ್ಮರಣೆ ಮಾತ್ರದಿ ಸಕಲ ಪಾಪಗಳನೋಡಿಸಿ ಪುನೀತರನೆ ಮಾಡುವಿಯೊ ಗುರುವೆ 4 ಬಿಡೆನು ಬಿಡೆನು ನಿನ್ನಡಿಗಳಿಗೆ ಸೇವಿಸಲು ದೃಢ ಭಕುತಿಯನೆ ಕೊಡು ಎನಗೆ ಶ್ರೀ ರಾಘವೇಂದ್ರಾ ಅಪಾರ ಮಹಿಮ ಶ್ರೀ ರಾಘವೇಂದ್ರಾ 5
--------------
ರಾಧಾಬಾಯಿ
ಶ್ರುತಿ ಮತವ ಕೇಳಿ ನೀ ಮರುಳಾಗಬೇಡ | ಶ್ರುತಿಯುತರ ಸಂಗ ಬಿಡಬೇಡ ಪ ಮಾಡಿದನ್ನವು ಎಲ್ಲ ಪ್ರಸಾದವೆ ನೋಡು | ಆಡುವ ವಚನ ಅಕ್ಷರ ಮಂತ್ರವೇ | ರೂಢಿಯೋಳ್ ಜನರೆಲ್ಲ ಸಾಧು ಸತ್ಪುರುಷರೇ | ಬೇಡುವವರೆಲ್ಲ ಫಲಗಳ ಕೊಡುವರೇ 1 ಜಲವೆಲ್ಲ ತೀರ್ಥವೇ ಸ್ಥಳವೆಲ್ಲ ಕ್ಷೇತ್ರವೇ |ಶಿಲೆಯೆಲ್ಲ ತಿಳಿದರದು ಶಿವಲಿಂಗವೇ | ಹಲವು ಮತದಿ ಸಾಯೋದು ಜಪಮುಕ್ತಿಯೇಕುಲವೆಲ್ಲ ಕಾಷ್ಠವದು ಶ್ರೀ ಗಂಧವೇ 2 ಮೂರ್ತಿ ಭವತಾರಕ ಪಾದದ |ಬೋಧದಲಿ ಸುಖಿಯಾಗೊ ಮನುಜಾ3
--------------
ಭಾವತರಕರು
ಸನ್ಮಾರ್ಗಪಿಡಿದು ಸದ್ವಸ್ತಿಯೊಳು ಬೆರೆದಿಹ ಸದ್ಬ್ರಹ್ಮರಿಗೆ ನಮಸ್ಕಾರ 1 ಸದ್ಗುರು ಕೃಪೆಯಿಂದ ಸದ್ಗತಿಯ ಪಡೆದಿಹ ಸದ್ಭಕ್ತರಿಗೆ ನಮಸ್ಕಾರ 2 ಅಧ್ಯಾತ್ಮವಿದ್ಯ ಸಾದ್ಯ ಮಾಡಿಕೊಂಡಿಹ ಬುದ್ಧಿವಂತರಿಗೆ ನಮಸ್ಕಾರ 3 ಸಿದ್ಧಾಂತ ಅನುಭವದ ಸಾಧನವು ಬಲಿದಿಹ ಶುದ್ಧ ಬುದ್ಧರಿಗೆ ನಮಸ್ಕಾರ 4 ಇದೆ ನಿಜತಿಳಿದಿಹ ಸದ್ಬೋಧದಲ್ಲಿ ಪೂರ್ಣ ಸದ್ಭಾವಿಗಳಿಗೆ ನಮಸ್ಕಾರ 5 ಆದಿತತ್ವದ ನೆಲೆಯು ಭೇದಿಸಿ ಬೆರೆದಿಹ ಬುದ್ದಜನರಿಗೆ ನಮಸ್ಕಾರ 6 ಕ್ರೋಧ ಕಳೆದು ಸದಾ ಶಾಂತಪದಹೊಂದಿದ ಸಾಧುರಿಗೆ ನಮಸ್ಕಾರ 7 ಭಿನ್ನ ಭೇದವನಳಿದು ತನ್ನ ತಾ ತಿಳಿದ ಸುಜ್ಞಾನಿಗಳಿಗೆ ನಮಸ್ಕಾರ 8 ಮೇಲ್ಗಿರಿಯೊಳಗಿಪ್ಪ ಮೂಲಮೂರ್ತಿಯ ತಿಳಿವ ನೆಲೆವಂತರಿಗೆ ನಮಸ್ಕಾರ 9 ಮಾಯಮೋಹವನಳಿದು ಸೋಹ್ಯ ಸೊನ್ನೆಯ ತಿಳಿದ ಮಹಾಮಹಿಮರಿಗೆ ನಮಸ್ಕಾರ 10 ಆರುಮೂರನೆ ಗೆದ್ದು ಏರಿ ತ್ರಿಪುರ ದಾಟಿ ಮೀರಿಹರಿಗೆ ನಮಸ್ಕಾರ 11 ಮನಕರಗಿ ಘನ ಬೆರೆದು ತಾನೆ ತಾನಾಗಿಹ ಮೋನ ಮುಗ್ಧರಿಗೆ ನಮಸ್ಕಾರ 12 ತತ್ವಮಸಿ ಅರ್ಥದಿತ್ಯರ್ಥವನು ತಿಳಿದಿಹ ಮುಕ್ತಜನರಿಗೆ ನಮಸ್ಕಾರ 13 ತಾನರಿತು ಸುಖಿಯಾಗಿ ಇನ್ನೊಬ್ಬರಿಗೆ ಕಣ್ದೆರೆಸುತಿಹರಿಗೆ ನಮಸ್ಕಾರ 14 ತರಳ ಮಹಿಪತಿ ಹೊರೆವ ಅರುಹು ಕುರುಹವನಿತ್ತ ಗುರುಹಿರಿಯರಿಗೆ ನಮಸ್ಕಾರ 15
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಖಿಯಾದೆನು ಶ್ರೀ ಪಾದಾ ಹೊಂದಿ ಗುರುವಿನಾ ಪ ಸರಿತ ಮಹಾನದಿಯೊಳು ಬೆರೆತಂತೆ | ನೆರೆ ಕೀಟಕ ಭೃಂಗಿ ಬೆರೆಸಿದಂತೆ 1 ಬಡವಗ ನಿಧಾನವ ದೊರೆತಂತೆ | ಪೊಡವಿ ಬೆಳೆಗೆ ಘನ ಮಳೆಗರೆದಂತೇ ಜಡ ಮತಿಗೇ ಶಾರದೆ ಒಲಿದಂತೆ 2 ತಂದೆ ಮಹೀಪತಿ ಕಂದಗ ವಲಿದು | ಛಂದದಿ ಭಕುತಿಯ ದಾರಿಗೆ ತಂದು | ಬಂದದ ಸಾರ್ಥಕ ಮಾಡಿದೆ ನಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಹರಿ ಹರಿಯಂದು ನೆನೆದವನೆ ಧನ್ಯ | ಹರಿಯ ಮರದವನೇ ಮೂರು ಲೋಕದೋಳಾಮಾನ್ಯ ಪ ಹರಿಯ ಬಲಗೊಂಡಾ ಪ್ರಹ್ಲಾದಾ ಸುಖಿಯಾದಾ | ಹರಿಯ ಕೂಡ ಮರೆತು ಹಿರಣ್ಯಕನು ದುಃಖಿಯಾದಾ 1 ಹರಿಶರಣನಾಗಿ ವಿಭೀಷಣನು ನೆಲೆಗೊಂಡಾ | ಹರಿಗೆ ಬಾಗದವೆ ದಶಾನನನು ಕಲುಷವುಂಡಾ 2 ಹರಿಯ ನಂಬಿದ ಪಾಂಡವರು ಕೀರ್ತಿ ಧರಿಸಿದರು | ಹರಿಯನ್ನದೆ ವ್ಯರ್ಥ ಕೆಟ್ಟರು ನೋಡು ಕೌರವರು 3 ಗುರು ಮಹಿಪತಿ ಸ್ವಾಮಿ ಭಕ್ತ ಸಹಕಾರಿ | ದುರುಳ ದುರ್ಮಾರ್ಗದಲಿ ನಡೆದ ದುಷ್ಟ ಜನವಿದಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ ಧ್ರುವ ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಪದುಮನಾಭನಪಾದಭಜನೆ ಸುಖವಯ್ಯಪ.ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆಬಿಲ್ಲಾಗಬೇಕು ಬಲ್ಲವರ ಒಳಗೆ ||ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕುಬೆಲ್ಲವಾಗಿರಬೇಕು ಭಕುತಜನರೊಳಗೆ 1ಬುಧ್ಧಿಯಲಿ ತನ್ನ ಮನ ತಿದ್ದುತ್ತಲಿರಬೇಕುಮುದ್ದಾಗಬೇಕು ಮುನಿಯೋಗಿಗಳಿಗೆ ||ಮಧ್ವಮತದಬ್ಧಿಯೊಳು ಮೀನಾಗಿ ಇರಬೇಕುಶುದ್ಧ ಭಕುತಿಯಸುಕೃತಉಣಲುಬೇಕು2ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕುಕುಶಲದಲಿ ಶ್ರೀ ಹರಿಯ ನೆನೆಯಬೇಕು ||ವಸುಧೆಯೊಳು ನಮ್ಮ ಪುರಂದರವಿಠಲನಹಸನಾಗಿ ನೆನೆನೆನೆದು ಸುಖಿಯಾಗಬೇಕು 3
--------------
ಪುರಂದರದಾಸರು