ಒಟ್ಟು 79 ಕಡೆಗಳಲ್ಲಿ , 27 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀದೇವಿ ಅಂಬೋರುಹೇಕ್ಷಣೆ ಅಂಬಾಲತೇ ಜಗ ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ ನಂಬಿದೆ ನಿನ್ನ ಪದಾಂಬುಜಯುಗಳವ ಕಂಬು ಕಂಧರಿ ಕನಕಾಂಬರ ಧಾರಿಣಿ ಬೆಂಬಲವೀಯೆ ವಿಳಂಬವ ಮಾಡದೆ ಅ.ಪ `ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ ಪಂಕಜಭವಮುಖ ಸುಮನಸರು ಕಿಂಕರರೆನ್ನುತ ಪೊಗಳುತಿರೆ ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ ಶಾಂಕ ಸೋದರಿ ಆತಂಕವ ಬಿಡಿಸೆ 1 ನೀರಜಾತಗಣ ಕೃತ ನಿಲಯೇ ಮಾರಜನಕ ಹರಿ ಪ್ರಿಯ ಜಾಯೆ ಕೋರುವೆ ನಿನ್ನಯ ಪರಮದಯೆ ಸಾರಸಾಕ್ಷಿ ಸರಿಯಾರು ನಿನಗೆ ಕರು ಣಾರಸಮಯೆ ಸುವಿಶಾರದೆ ಜನನಿ 2 ಕನ್ಯೆ ನಿಖಿಲ ಸುರನರರೊಳಗೆ ಮಾನ್ಯೆ ನಿನ್ನ ಪೋಲುವರನ್ಯರುಂಟೆ ನಿನ್ನ ದಾಸನಾದ ಎನ್ನ ಮನೋರಥ ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3
--------------
ವಿದ್ಯಾಪ್ರಸನ್ನತೀರ್ಥರು
ವಾರಿಜನ ಹೃದಯೇಶ್ವರಿ ಸರ್ವವಿದ್ಯಕಾಧಾರಿ ಪ ವಾಣಿವಿರಂಚಿ ರಾಣಿ ಪಂಕಜ ಪಾಣಿ ಕಾಳಾಹಿವೇಣಿ ನಿನ್ನಯ ವೀಣೆಯಿಂದಲಿ ವೇಣುಗಾನವ ಮಾಣದೆ ಪಾಡುತ ಕುಣಿಕುಣಿಯುತ ಬಾರೆ 1 ಮಂದಯಾನೆ ಪೂರ್ಣೆಂದುವದನೆ ಕುಂದುರಹಿತೆ ಬಂದು ರಕ್ಷಿಸೆ ಮಂದಮತಿಯನಿಂದು ಬೇಗನೆ ಕಂದ ನಾನೆಂದ ನೀ ಛಂದದಿ ಅರಿಯುತ 2 ಸಾರಸಾಕ್ಷಿ ಮಯೂರವಾಹನೆ ಶಾರದಾಂಬೆ ಕಲಕೀರವಾಣಿಯೆ ಸಾರಿ ಬೇಡುವೆ ತೋರು ಕರುಣದಿ ಧೀರನಾ ಗಂಭೀರನಾ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ವ್ಯಾಸರಾಯರ ಸೇವೆ ಲೇಸಾಗಿ ಮಾಡಲು ದಾಸನೆಂದೆನಿಸಿಕೊಂಬ ಪ ಸಾಸಿರನಾಮದ ವಾಸುದೇವನ ಭಕ್ತ ಕಾಷಾಯ ವಸ್ತ್ರಧರಅ.ಪ ತಾ ಸಹಗಮನದಿ ಪತಿಸಹ ಪೋಗುವ ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ ಮೋಸ ಬರುವುದೆಂದಾಲೋಚನೆ ಇಲ್ಲದೆ ಸತಿ ವಂದಿಸೆ ಸುಮಂಗಲ್ಯವನಿತ್ತು ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ ಯಾ ಸತಿಪತಿಯ ಪ್ರಾಣವನುಳಿಹಿ ರನ್ನ ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು ಆ ಸುಮಂಗಲಿಯಲ್ಲಿ ಪ್ರಹ್ಲಾದ ಪುಟ್ಟಿದ ಆ ಸಮಯದಿ ಚಿನ್ನದ ಹರಿವಾಣದಲಿ ಶಿಶು ತಾನು ಬಿಡದೆ ಕಣ್ವ ನದಿಯಲ್ಲೀ ಶಿಷ್ಯರಿಗೆ ತೊಳಸಿ ತಂದು ಮಠಕೆ ಆಗ ವಾಸುದೇವನಭಿಷೇಕ ಕ್ಷೀರವನ್ನು ಆ ಸುರಭಿಯ ಕರೆದಭಿಷೇಕÀವನೆ ಕೊಂಡ ಲೇಸಿನಿಂದಲಿ ಮೊಲೆಯುಂಡು ಬೆಳೆದನು ವಾಸವನುತ ದೇವೇಶನ ಪಾಡುತ ವಾಸವಾದರು ಮಳೂರಿನಲಿ1 ಆ ಶಂಕುಕÀರ್ಣನೇ ಶೇಷಾವೇಶದಲ್ಲಿ ಶ್ರೀಶನ ಕÀಂಭದಿ ತೋರಿಸಿದಾತನೆ ತಾ ಸುಮ್ಮಾನದಿ ನರಸಿಂಹನ ಪೂಜೆಗೆ ತಾಸು ಬಿಡದೆ ಆಸೆ ತೀರಿಸಿದಾತನೆ ಈಸು ಮಹಿಮೆಗೆ ವ್ಯಾಸ ನಾಮಕರಣವು ಆ ಸುಮನೋಯತಿ ಆಶೀರ್ವಾದವಮಾಡೆ ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ ಈ ಶಿಶುಬೆಳೆಯೆ ಆಭರಣದಿ ಶೋಭಿತ ವೀ ಸುಮತಿಯ ಮಂಗುರುಳಿಗೆ ಮುತ್ತಿನ ಗೊಂಡೆ ಆ ಸುಮನೋಹರಗಳೆಲೆ ಮಾಗಾಯಿ ಭೂಸುರ ನಿಕರವ ಮೋಹಿಪ ಬಗೆವಂಟಿ ಭೂಸುರ ಕರ್ಣಕೆ ಚಳತುಂಬು ಬಾವಲಿ ನಾಸಿಕಛಂದವು ಪದ್ಮವಿಕಸಿತ ಮುಖನೇತ್ರ ಸೂರ್ಯ ಕಾಂತಿಯ ಮುಖ ಫಣೆ ತಿಲಕನ ನೃ ಕೇಸರಿ ಪ್ರಾಯಗೆ ಹಾರಪದಕÀವಿಟ್ಟು ಆ ಸುಕರಗಳಲಿ ಉಂಗುರ ಪೊಳೆಯುತ ಆ ಸುಕಾಂತಿಯ ಕಡಗ ಸರಪಳಿ ವಂಕಿಯೂ ಲೇಸು ವಡ್ಯಾಣವ ನಡುವಿಗೆ ಧರಿಸಿ ಆ ಸಣ್ಣ ಪಾದಕ್ಕೆ ಗೆಜ್ಜೆ ಕಾಲ್ಗಡಗವು ಈ ಶಿಶುವಿನ ಹರಿ ಆಡಿಸುವಾ 2 ವರ್ಷವೈದಕೆ ಚೌಲ ಅಕ್ಷರಾಭ್ಯಾಸ ವತ್ಸರ ಉಪನಯನ ಮಾಡಿ ಧೀರಗೆ ಸಪ್ತ ವರ್ಷಕೆ ತುರ್ಯಾಶ್ರಮ ಕಾರುಣ್ಯದಿಂದ ಶ್ರೀಪಾದರಾಯರಲ್ಲಿ ಅರುಹಿಸಲು ವೇದಶಾಸ್ತ್ರ ನಿಗಮಪಾಠ ಸಾರವ ತರ್ಕತಾಂಡವ ಚಂದ್ರಿಕೆಯ ಮಾಡಿ ಸೂರಿಶಿಷ್ಯ ವಾದಿರಾಜನ್ನ ಪಡೆದೆಯೋ ಶೂರಕೇಸರಿಯಂತೆ ವಾದಿದಿಗ್ಗಜಗಳ ಧಾರಿಣಿಯಲ್ಲಿ ತಲೆ ಎತ್ತದಂತೆ ಮಾಡಿ ನೂರೆಂಟು ಮಂದಿ ಶೂರವಾದಿಗಳಿಂದ ವಾರಿಧಿ ಕಟ್ಟಿ ಮಾರುತಿಯನು ಪ್ರತಿಷ್ಠೆಯ ತಾಮಾಡಿ ಶ್ರೀ ರುಕ್ಮಿಣಿಪತಿ ಗೋಪಾಲ ಕೃಷ್ಣನ ಸಾರಸಾಕ್ಷನ ಸೇವೆ ಅನುದಿನವು ಮಾಡಿ ಪುರಂದರ ದಾಸರಿಗಂಕಿತಾ ಪಾರ ಕುಹುಯೋಗವ ನೂಕಿ ಭೂಷತಿಯನು ಕಾಯ್ದ ಪಾರ ಮಹಿಮೆ ಫಾಲ್ಗುಣ ಬಹುಳ ಚೌತಿಯು ಶ್ರೀ ರಮಣನ ಪುರಿಯಾತ್ರೆಗೆ ರಥವೇರಿ ತೋರಿದ ವರದ ವಿಜಯವಿಠ್ಠಲನಾ ಪಾ ಸೇರೀದರಿವರು ಆನಂದದಿ * 3 * ಈ ಕೀರ್ತನೆ ವರದ ವಿಜಯವಿಠಲಾಂಕಿತದಲ್ಲಿ ದಾವಣಗೆರೆಶ್ರೀನಿವಾಸದಾಸಕೃತ ವ್ಯಾಸರಾಜ ಚರಿತೆಯಲ್ಲಿ ಉಪಲಬ್ಧವಿದೆ.
--------------
ವಿಜಯದಾಸ
ಶರಧಿ ಸುಖಾತ್ಮಜೆ ಪ ಶರಣು ತವ ಚರಣಾರವಿಂದಕೆ ಶರಣು ಸುರನುತ ಜಂಘಕೇಶರಣು ಕರಿಕರಭೋರು ಯುಗಳಕೆ ಶರಣು ಸುಟೊಂಕಕೆ1 ಕರ ಕಣ್ಣು ಮೂಗು ಭ್ರೂಲತೆ ಕರಣಾಭರಣಕೆ 2 ಶರಣು ಸಾಲಕ ಬಿಂಬ ಫಾಲಕೆ ಶರಣು ಕುಸುಮಿತ ವೇಣಿಗೆಶರಣು ಮಾಧವನಂಕ ಬಿಂಬದಿ ಮೆರೆವ ಸುಖ ಮುತ್ತೈದಿಗೆ 3 ಕಾಲ ಸ್ವಭರ್ತೃಸುಮಜಿತೆ ಭಕ್ತಪೋಷಣೆಕೃತ್ಯ ಕರುಣಾ ಸಾರಸಾಂಡ ಸುಪಾಸ್ತ ಸಂಸಿತಳೆ ನೀ4 ಸೊಲ್ಲು ಪೇಳುವೆ ಸ್ನೇಹದಿಂದಲಿಪುಲ್ಲನಾಭನ ಪರಿಚಿಸೀ ಈಗವನಲ್ಲಿ ನೀ ಪೇಳೆ 5 ದೇವಶರ್ಮನು ನಿನ್ನ ಚರಣಾಧ್ಯಾನದಲಿ ಸನ್ನುತಿಸಿ ಕರುಣತೋಯಜಾಕ್ಷನ ಕಂಡು ಸುಖಿಸಿದುಪಾಯವ ಬಲ್ಲವನು 6 ಸುಂದರಾಂಗಿಯೆ ಸಾರಸಾಕ್ಷಿಯೆ ಮಂದಹಾಸಿನಿ ಮಾರಮೋಹಿನಿಇಂದಿರೇಶನ ಮಾನಿನಿಯೆ ತವಕದಿಂದ ನಿಂತಿಹೆನು 7
--------------
ಇಂದಿರೇಶರು
ಶೌರಿ ಬಾರೋ ಶ್ರೀಹರಿ ಪ ಬಾರೋ ಬಾರೋ ಕರುಣಾನಿಧಿ ನಿನ್ನನು ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ ಸಾರಸಾಕ್ಷ ಸನ್ಮಂಗಳ ಮಹಿಮನೆ ತೋರೋ ನಿನ್ನ ಮಹಾ ಮೀನರೂಪವನು 1 ಸುಂದರಾನನ ಚಂದಿರವದನ ಮಂದಹಾಸನೆ ದುರಿತ ಕಳೆವಂದದಿ ಬೆನ್ನಿಲಿ ಮಂದರವೆತ್ತಿದ2 ಆದಿದೈತ್ಯನು ಭೂದೇವಿಯಪಹಾರ ಗೈದನು ಆ ದಿತಿಜರ ಸಂಹಾರ ಮಾಡಲು ನೆಲ ವರಾಹ ಬೇಗ 3 ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ ಮಂದರೋದ್ಧರ ಮುಚುಕುಂದ ವರದ ಸುರ- ಗಂಗೆಯ ಪಿತ ನರಸಿಂಗರೂಪದಿ 4 ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ ಬೇಡಿದುದನೆ ಕೊಟ್ಟಾಮಹೀಪಾಲನ ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5 ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ ಸಾಗರಶಯನಗೆ ತೋರಿ ಪರಾಕ್ರಮ ಶೂಲಿಯ ಧನುವಿತ್ತೆ ರೇಣುಕಾತ್ಮಜ 6 ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ ಶ್ರೀ ಮಾನಿನಿಯಳ ಕೈಪಿಡಿಯುತ ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7 ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ ಸಂದೇಹಿಸದಲೆ ಅಂದು ಅವರ ಮನೆ ಎಂಜಲ ಬಳಿದ ಮುಕುಂದನೆ ಬೇಗದಿ 8 ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ ಮಂಗಳಮಹಿಮ ವಿಹಂಗವಾಹನ ಸುರ ಸಂಗೀತಲೋಲ ಕೃಪಾಂಗ ದಯಾನಿಧೆ 9 ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ ರಾಜೀವಾಕ್ಷ ರಕ್ಕಸ ಸಂಹಾರಕ ಅ- ಪಾರ ಮಹಿಮ ರಥವೇರುತ ತವಕದಿ 10 ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11
--------------
ನಿಡಗುರುಕಿ ಜೀವೂಬಾಯಿ
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ. ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ. ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ 1 ಸಾರ ಸಂಗ್ರಹ ಮಾಡುತೆ ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ ಭೂರಿ ವೈಭವವೆಲ್ಲವಂ ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್2 ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ 3
--------------
ನಂಜನಗೂಡು ತಿರುಮಲಾಂಬಾ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಶ್ರೀರಾಮ ಪಾಹಿಮಾಂ ಸದಾಪೂರ್ಣಕಾಮ ವಾರಿಜಭವವಿನುತನಾಮ ಸಾರಸಾಕ್ಷ ಸಂಗರಭೀಮ ಪ ಮುನಿಕೌಶಿಕ ಮಖಪಾಲಕ ಘನತಾರಕನಾಮ ವನಜಾಂಬಕ ವರದಾಯಕ ಜನಕಾತ್ಮಜ ಪ್ರೇಮ ದನುಜಾಂತಕ ಭವಭಂಜಕ ಇನವಂಶಲಲಾಮ ಜನನಾಯಕ ಫಲದಾಯಕ ಸದಯ ಮಾಂಗಿರಿರಾಮ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಲೋಲ ಶ್ರೀನರಸಿಂಹ ಬಲಗೋಂಬೆನು ನಿನ್ನ ಪ. ಸಾರರಹಿತವಹ ಘೋರತರ ಸಂಸಾರದಿ ತೊಳಲುತ ಗಾರುಗೊಂಡಿಹೆನೈ ಶ್ರೀಲೋಲ ಅ.ಪ. ಚಿಣ್ಣನು ತಾ ಬಣ್ಣಿಸಿ ಕರೆಯೆ ಮನಕದ ತಂದು ಅನ್ಯದೈವಗಳ ಮರೆದು ತನ್ನನೆ ನೆನೆವ ಚಿಣ್ಣನಿಗಾಗಿ ಕಂಬದಿ ಬಂದು ಘನ್ನ ರೋಷದಿ ದೈತ್ಯನ ಸೆಳೆದು ಕುನ್ನಿಯ ಮುಡಿಯನು ಪಿಡಿದೆತ್ತಿ ಜಡಿದು ತನ್ನ ತೊಡೆಯೊಳಗಿರಿಸಿ ಖಳನುರ ವನ್ನು ಬಗೆದು ಕರುಳನು ಕೊರಳೊಳು ಧರಿಸಿದ 1 ಘೋರರೂಪಕೆ ನಡುಗುತಲಂದು ಸುರಗಣನಿಂದು ಶರಣೆಂದಾಕಂದನ ಕರೆದು ಪರಮಾದರದಿಂ ಶ್ರೀದೇವಿಯನೊಡಗೊಂಡು ಪರತರಾಭಯ ಹಸ್ತವ ನೀಡಿ ಸರಸದಿ ಕರೆದಾದರಗೂಡಿ ತರಳನೆ ಭಕ್ತಾಗ್ರೇ ಸರ ನೆನ್ನಿಸಿ ನೆರೆಸುಖಿಸೆಂದೊದವಿದ 2 ಚಾರು ಚರಿತ ಪ್ರಹ್ಲಾದನ ಆಲಿಸಿ ನಲವಿಂ ಸಾರಿತನ್ನನೇ ನೆನೆವರನೆಂದೆಂದು ಕೋರಿಕೆಗಳ ಸಲ್ಲಿಸಿ ಸಲಹುವನೆಂದು ಸಾರೆಬಂದಿಹೆ ನಿನ್ನೆಡೆಗಿಂದು ಸಾರಸಾಕ್ಷನೆ ನೀ ಕೃಪೆದೋರೆಂದು ಕೋರಿಭಜಿಪೆ ಶ್ರೀಶೇಷಗಿರಿವರ ದಯಾಸಿಂಧು 3
--------------
ನಂಜನಗೂಡು ತಿರುಮಲಾಂಬಾ
ಶ್ರೀಹರಿಶರಣರು ನಮ್ಮವರು ಭವ ಶರಧಿಯ ಜಿಗಿದರು ನಮ್ಮವರು ಪ ಪರಮನ ಚರಣದಿ ಅರಿವಿಟ್ಟುರತರ ದುರಿತದಿಂದುಳಿದರು ನಮ್ಮವರು ಅ.ಪ ನಿತ್ಯತೃಪ್ತರು ನಮ್ಮವರು ಜಗ ಮಿಥ್ಯೆಂದರಿತರು ನಮ್ಮವರು ನಿತ್ಯ ಸರ್ವೋತ್ತಮ ಹರಿಯೆಂಬ ವೃತ್ತಿ ಬಲಿಸಿದರು ನಮ್ಮವರು 1 ಸತ್ತು ಚಿತ್ತರು ನಮ್ಮವರು ಮಹ ನಿತ್ಯ ಮುಕ್ತರು ನಮ್ಮವರು ಮುಕ್ತಿದಾಯಕನಂ ಗುರ್ತಿಟ್ಟರಿಯುವ ಸತ್ವ ಕಾಲಗಳು ನಮ್ಮವರು 2 ನಿರ್ಮಲಾತ್ಮಕರು ನಮ್ಮವರು ನಿಜ ಧರ್ಮ ನಿರತರೈ ನಮ್ಮವರು ಬೊಮ್ಮನಯ್ಯನ ಮರ್ಮ ತಿಳಿದು ದು ಷ್ಕರ್ಮವ ಗೆಲಿದರು ನಮ್ಮವರು 3 ದೋಷದೂರರು ನಮ್ಮವರು ನಿ ರಾಸೆ ತಾರರು ನಮ್ಮವರು ಹೇಸಿದೈವಗಳ ಆಶಿಸಿ ಬೇಡದ ಕೇಶವನ ದಾಸರು ನಮ್ಮವರು 4 ಭಜನಾನಂದರು ನಮ್ಮವರು ಸ್ಥಿರ ನಿಜ ಪದವರಿದರು ನಮ್ಮವರು ಕುಜನ ಕುಹಕಿಗಳ ಗಜಿಬಿಜಿಗಳುಕದೆ ಸುಜನರೆನಿಸಿದರು ನಮ್ಮವರು 5 ಭೂರಿ ಶೀಲರು ನಮ್ಮವರು ದುಷ್ಟ ಕೇರಿಯ ಮೆಟ್ಟರು ನಮ್ಮವರು ಸಾರಸಾಕ್ಷನ ಸವಿಸಾರವರಿದು ಪಾದ ಸೇರಿಕೊಂಡಿರುವರು ನಮ್ಮವರು 6 ಸದಮಲಾನಂದರು ನಮ್ಮವರು ದು ರ್ಮದವ ನೂಕಿದರು ನಮ್ಮವರು ಅಧಮತನದಲಿಂದೊದರುವ ಹೊಲೆಯರ ಎದೆಯ ತುಳಿವರೈ ನಮ್ಮವರು 7 ಮೋಸಕೆ ಸಿಲ್ಕರು ನಮ್ಮವರು ಯಮ ಪಾಶವ ಗೆಲಿದರು ನಮ್ಮವರು ಈಶನ ತಿಳಿದರು ನಮ್ಮವರು 8 ಸುಗಣ ಸಂತರು ನಮ್ಮವರು ಮಹ ಭಗವದ್ಭಕ್ತರು ನಮ್ಮವರು ರಘು ಶ್ರೀರಾಮ ಜಗಸರ್ವೋತ್ತಮೆಂದು ಪೊಗಳುತ ನಲಿವರು ನಮ್ಮವರು 9
--------------
ರಾಮದಾಸರು
ಸತಿ ಪ. ನಾರಿಮಣಿಯೆ ನಿನ್ನ ಯಾರು ವರ್ಣಿಸುವರೆ ಸಾರಸಾಕ್ಷಿಯೆ ನಿನ್ನ ಸಾರಿ ಭಜಿಪೆ ಮುನ್ನ 1 ರಂಗನ ಅಂಗನೆ ಮಂಗಳ ರೂಪಳೆ ರಂಗು ಮಾಣಿಕ್ಯದ್ವಜ್ರ ಅಂಗಾಭರಣವಿಟ್ಟು 2 ಶ್ರೇಷ್ಠರೂಪಳೆ ಮನಮುಟ್ಟಿ ಪೂಜಿಪೆ ನಿನ್ನ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನರಸಿ 3
--------------
ಅಂಬಾಬಾಯಿ
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಸರಸ್ವತಿ ಮಂಗಳಾರುತಿಯನೆತ್ತೀರೆ ವಾರಿಜಭವಮುಖಿಗೆ ಮಂಗಳಾರುತಿಯನೆತ್ತೀರೆ ಪ ಇಂದು ಬಿಂಬ ಸದೃಶ ವದನೆಗೆ ಲಾವಣ್ಯ ಖಣಿಗೆ ಅಂದ ಕುಂಕುಮಭೂಷಿತ ಫಣೆಗೆ ಹರಿದ್ರ ಭೂಷೆಗೆ ಸಂದ ಮೌಕ್ತಿಕ ಚಂಪಕ ನಾಸಿಕೆಗೆ ಚಂದ ಕರುಣಾಭರಣ ಭೂಷಿತೆಗೆ ಚಾಪ ಇಂದು ಛವಿಯ ಕಿರೀಟ ಭೃತೆಗೆ ಹಿಂದೆ ಜೋಲ್ವ ಕನಕವೇಣಿಗೆ ಮಂಗಳಾರುತಿಯನೆತ್ತಿರೆ 1 ಚಾರುವಸನ ಭೂಷಿತಾಂಗೆಗೆ ವಿದ್ಯುತ್ಸುಕಾಂತೆಗೆ ಹಾರಪದ ಶÀಮಿರೂಪ ಕಂಠೆಗೆ ಸುಕಂಬು ಶ್ರೀದೇವಿಗೆ ಸಾರ ವೇದಾಂಗ ಭೂತೆಗೆ ನೀರಜ ಪಲ್ಲವಗಾತ್ರೆಗೆ ಸಾರಸಾಕ್ಷಿ ಶಿರಿವಂತೆಗೆ ಮಂಗಳಾರುತಿಯನೆತ್ತಿರೆ2 ಕರದಿ ವೀಣೆ ಧರಿಪ ದೇವಿಗೆ ಪಾವನ್ನಗಾತ್ರೆಗೆ ಧರೆಯ ಸೃಷ್ಟಿಕರ್ತನರಸಿಗೆ ಮಂಗಳ ವಾಣಿಗೆ ಪರಿಪರಿಯಲಂಕಾರ ಭೂಷಿತೆಗೆ ಸರಸ ಕೋಮಲ ಪದ್ಮಪಾತೆಗೆ ಮರಕತಭೂಷಣ ಭಾಸೆಗೆ ನಿರುತ ಜನಕೆ ವಿದ್ಯಪ್ರದೆಗೆ ನರಸಿಂಹವಿಠ್ಠಲನ ಬಾಲೆಗೆ ಮಂಗಳಾರುತಿಯನೆತ್ತಿರೆ 3
--------------
ನರಸಿಂಹವಿಠಲರು
ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ ಉರಗಾದ್ರಿವಾಸ ಶ್ರೀಹರಿ ಕೇಶಿಧ್ವಂಸಿ ಪ ಸಾರ ಶೃಂಗಾರ ಯದುವೀರ ಸಲಹೆನ್ನ ಮಧುವೈರಿ ಮೋಹನ್ನ 1 ಅಪ್ಪ ತಿಮ್ಮಪ್ಪ ಎನ್ನ ತಪ್ಪನೆಣಿಸದಲೆ ಸರ್ಪಶಯನ ಸರ್ವ ಶ್ರೇಷ್ಠ ಸಲಹೆನ್ನ 2 ರಂಗಉತ್ತುಂಗ ಅಂತರಂಗದಿ ಒಲಿದು ಮಂಗಳಕರ ಪಾಂಡುರಂಗ ಸಲಹೆನ್ನ 3 ಬಾರಿಬಾರಿಗೆ ನಿನ್ನ ಹಾರೈಸುತಿರುವೆ ಸಾರಸಾಕ್ಷನೆ ಸಾರ್ವಭೌಮ ಸಲಹೆನ್ನ 4 ಕಮಲ ಸಂಭವನಯ್ಯ ವಿಮಲಸ್ವರೂಪ ಕಮಲನಾಭ ವಿಠ್ಠಲ ಪೊರೆ ಎನ್ನದಾತ5
--------------
ನಿಡಗುರುಕಿ ಜೀವೂಬಾಯಿ