ನಿನ್ನ ದಯಾ ದೃಷ್ಟಿಯು ಎನ್ನ ಮೇಲಿರಬೇಕು
ಪನ್ನಂಗಶಯನ ಭಕ್ತ ವಿಜಯವಿಠಲಯ್ಯ ಪ
ಮುನ್ನ ಭಕ್ತನಿಗೊಲಿದು ಭಿನ್ನವಿಲ್ಲದೆ ಬಂದು
ಮಣ್ಣಿನ್ಹೆಂಟೆಯ ಮೇಲೆ ಇನ್ನು ನಿಂತುದನು
ಕಣ್ಣಿನಿಂದ ನಾ ಕಂಡು ಧನ್ಯನಾದೆನು ಜಗದಿ
ಇನ್ಯಾಕೆ ಭವದಂಜು ತನು ನಿನ್ನದಯ್ಯ1
ಹೆತ್ತಮಕ್ಕಳ ತೆರದಿ ಅತ್ಯಧಿಕ ಪ್ರೀತಿಯಿಂ
ಭಕ್ತರನು ಬಿಗಿದಪ್ಪಿ ಮುಕ್ತಿ ಸೋಪಾನ
ಹತ್ತಿಸಿದ ನಿನ್ನಡಿ ಭಕ್ತಿಯಿಂ ಕಂಡೆ
ಮತ್ತು ಮೃತ್ಯುವಿನ ಭೀತ್ಯಾಕೆ ಮನ ನಿನ್ನದಯ್ಯ 2
ಕಡಲನಿಲಯನೆ ನಿನ್ನ ಅಡಿ ನಂಬಿ ಮರೆಹೊಕ್ಕೆ
ದೃಢಭಕುತಿ ನೀಡೆನ್ನ ನುಡಿಯೊಳಗೆ ನೆಲಸು
ಎಡರು ತೊಡರನು ಕಡಿದು ದೃಢಕರನು ಬಿಡದಾಳ್ವ
ಒಡೆಯ ಶ್ರೀರಾಮಯ್ಯ ಧನ ನಿನ್ನದಯ್ಯ 3