ಒಟ್ಟು 368 ಕಡೆಗಳಲ್ಲಿ , 76 ದಾಸರು , 328 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಬ್ಬನೆ ಎಲ್ಲರಿಗೂ ಸ್ವಾಮಿ ಬಲು ಪ ಹಬ್ಬ ಅವನನೆ ನಂಬಿದವರಿಗ್ಯಾವಾಗಲು ಅ.ಪ ಪುಟ್ಟಿಸಿ ಪೋಷಿಸಿ ಸಂಹಾರಗೈಸಿ ತನ್ನ ಹೊಟ್ಟೆಯೊಳಗಿಟ್ಟಿರುವನು ಎಲ್ಲರನು 1 ಪ್ರವಿಮಲಾತ್ಮನಾಗಿ ರವಿಮಂಡಲದಲಿದ್ದು ಭುವನಗಳನ್ನು ಪೊರೆವನು ಕೇಳಿನ್ನು 2 ಶ್ರೀಗುರುರಾಮ ವಿಠಲನು ಕೇಳಿದನೂ 3
--------------
ಗುರುರಾಮವಿಠಲ
ಒಲಿದವಳ ಬಿಡುವುದು ಧರ್ಮವಲ್ಲ | ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ಪ ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ | ಅಂದೆ ನೇಮಿಸಿದರು ಪೆಸರನಿಟ್ಟು | ಸಂದೇಹಗೊಳದಿರು ಮೈಲಿಗೆಯವಳೆಂದು | ಬಂದ ಪ್ರಾಣವÀ ನೋಡು ಬರಿದೆ ಪೇಳುವಳಲ್ಲ 1 ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ | ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ | ಅನ್ಯಾಯವೇನು ಆಗಲಿ ಪೋಗುವರೇನೊ | ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು 2 ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ | ಬಲು ಶುಚಿಯಾದೆನೊ ಶುದ್ಧ ಜಲದಿ | ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ | ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ 3 ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ | ಸೊಗಸಿಗನೆ ಸರಸವಾಡುವನೆ ಬಾರೊ | ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು | ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ 4 ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ | ಅಂಡೊಲಿವ ಖ್ಯಾತಿ ಎಂದಿಗೆ ತೀರದೂ | ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ | ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ 5
--------------
ವಿಜಯದಾಸ
ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ಪ ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು 1 ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು 2 ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು 3
--------------
ವ್ಯಾಸರಾಯರು
ಕಟ್ಟಳೆ ನಿನ್ನದೆಂತೊ ಪ. ನಷ್ಟಗೈಸುವುದಿನ್ನು ಕಷ್ಟಪಡಿಸಲಿಬ್ಯಾಡ ಇಷ್ಟ ಕೃಷ್ಣಾರ್ಯನೆ ಅ.ಪ ಪುಟ್ಟಿದಾ ಮೊದಲಾಗಿ ನಷ್ಟತನವನೆ ಹೊಂದಿ ದುಷ್ಟರೊಳು ಶ್ರೇಷ್ಠನಾದೆ ಎಷ್ಟುದಿನ ಇದರಂತೆ ಇಟ್ಟಿರುವೆಯೊ ಗುರುವೆ ಇಷ್ಟೇವೆ ಎನ್ನ ಯೋಗ್ಯತೆಯು 1 ಪಾಪಿ ವಿಷಯ ಜ್ವಾಲೆಯು ಕುಪಿತದಿಂದೆನ್ನ ತಪಿಸಿ ಬೇಯಿಸುತಿದೆ ಕೃಪೆಯೆಂಬ ಮಳೆಗರೆದು ಉಪಶಮನವನೆ ಮಾಡು ಆಪದ್ಭಾಂಧವನಲ್ಲವೇ ಗುರುವೆ2 ಪಾಪಕಾರ್ಯರತನ ಪಾಪಿ ಎಂದೆನಿಸದೆ | ಜನರಿಂದ ತಪಸಿ ಎಂದೆನಿಸುವುದ್ಯಾತಕೆ ಭೂಪ ವಿಜಯ ರಾಮಚಂದ್ರವಿಠಲನ ಪಾದ ಪದುಮವ ನಂಬಿಹ ಗುರುವೆ 3
--------------
ವಿಜಯ ರಾಮಚಂದ್ರವಿಠಲ
ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ- ದುದ್ದಂಡ ದೇವವರೇಣ್ಯ ತಾಪತ್ರಯಗಳಘ ಹಿಂಡು ಓಡಿಸು ರನ್ನ ಪೊರೆ ಸುಪ್ರಸನ್ನ ಪ. ಕಂಡೆ ನಿನ್ನಯ ಬಾಲರೂಪವ ಪುಂಡರೀಕದಳಾಯತಾಕ್ಷನೆ ಕುಂಡಲೀಶಯ ನಿನ್ನ ಚರಣದಿ ದಂಡವಿಕ್ಕುವೆ ಗೋಪಿಬಾಲ ಅ.ಪ. ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ ಜನಮ ಜನುಮದ ಕರ್ಮಗಳ ನಾ ಅನುಭವಿಸಿ ಪೂರೈಸಲಾಪೆನೆ ಘನಮಹಿಮ ದಯ ಮಾಡಿದಲ್ಲದೆ ಕೊನೆಯ ಕಾಣೆನು ವಿಷಯ ವಾಸನೆ ವನಜ ಸಂಭವ ಪವನ ರುದ್ರಾ ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು ನಿನಗೆ ವಿೂರಿದರುಂಟೆ ದನುಜದಲ್ಲಣ ದಯದಿ ಸಲಹೊ 1 ಕಾಮಪಿತ ಮಧ್ವೇಶ | ಸೌಂದರ್ಯ ಸಾರ ತಾಮಸರ ವಿಧ್ವಂಸ | ಸಜ್ಜನರ ಕಾಯುವ ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ ಹೋಮಕುಂಡದಿ ಪುಟ್ಟಿದಾ ಸತಿ ಕಾಮಿಗಳ ಉಪಟಳಕೆ ಸಹಿಸದೆ ಶ್ರೀ ಮನೋಹರ ಕಾಯೊ ದ್ವಾರಕೆ ಧಾಮ ನೀ ಗತಿ ಎನುತವರಲೆ ಪ್ರೇಮದಿಂದಕ್ಷಯವನಿತ್ತ ನಾಮ ಮಂಗಳ ನಿರ್ಮಲಾತ್ಮಕ ಸೋಮಶತಪ್ರಭ ಸೌಮ್ಯರೂಪ ತ್ರಿ- ಧಾಮ ಭಕ್ತರ ಕಾಮಿತಾರ್ಥನೆ 2 ಆದಿಮಧ್ಯವಿದೂರ | ಆನಂದ ಪೂರ್ಣ ಸಾಧು ಮನದಿ ವಿಹಾರ | ಸರ್ವಜ್ಞರಾಯರ ಹಾದಿ ತೋರಿಸೊ ಧೀರ | ಸುಜ್ಞಾನಸಾರ ವೇದ ಶಾಸ್ತ್ರಗಳರ್ಥವರಿಯೆನು ಮಾಧವನೆ ಮಮಕಾರದಲಿ ನಾ ಹಾದಿ ತಿಳಿಯದೆ ನೊಂದೆ ಅಜ್ಞತೆ ಹೋದಡಲ್ಲದೆ ನಿನ್ನ ಕಾಣುವ ಮೋದ ಬರುವುದೆ ಮಧ್ವವಲ್ಲಭ ಭೇದ ಮತಿ ಕೊಡು ತಾರತಮ್ಯದಿ ನೀ ದಯದಿ ಒಲಿದೆನ್ನ ಮನದಲಿ ಆದರದಿ ನೆಲೆಸಿನ್ನು ಪೊಳೆಯೊ 3 ಕಡಲಶಯನನೆ ಶ್ರೀಶ | ಕಡಗೋಲ ಕೈ ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ- ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ ಕೊಡುತ ಮಧ್ಯದಿ ತಡೆವ ಸಂಸೃತಿ ತಡೆದು ಸಂತ ಚಿಂತನೆಯ ದೃಢ ಒಡಲೊಳಗೆ ನೆಲೆಸಯ್ಯ ಬಿಡದೆ ಪತಿ ಸತಿ ಪಿತ ಕಡಲವಾಸನೆ ಕಡಲ ಬಂಧನ ಕಡಲ ಮಧ್ಯದಿ ಪುರವ ರಚಿಸಿದೆ ಕಡು ದಯಾಂಬಯಧೆ ಕಾಯೊ ಸತತ 4 ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ ಕೊಟ್ಟೆ ಮನು ಮುನಿಗಳಿಗೆ ಜ್ಞಾನವ ತುಷ್ಟಿಪಡಿಸುತÀ ಸುರರ ಸುಧೆಯಲಿ ಕುಟ್ಟಿ ಅಸುರನ ಕೋರೆದಾಡಿಲಿ ಕುಟ್ಟಿ ಅರಸರ ಕಟ್ಟಿ ಜಟೆಯನು ಮಟ್ಟಿ ಕಂಸನ ಬಿಟ್ಟು ವಸನವ ದಿಟ್ಟ ಕಲ್ಕಿ ಗೋಪಾಲಕೃಷ್ಣ ವಿಠ್ಠಲನೆÀ ಶ್ರೀ ಉಡುಪಿಲೋಲ5
--------------
ಅಂಬಾಬಾಯಿ
ಕಂಡೆನು ಗುರುರಾಯಾ ನಿನ್ನುದ್ದಂಡ ಪರಾಕ್ರಮವಾ ಕಂಡೆನಾ ಮನಗಾಡೆ ಪಾಂಡುಪಕ್ಷನ ಭೃತ್ಯ ಹಿಂಡು ಖಂಡಿಸಿದ್ಯೋ ಪ ರಾಮನ ಸೇವೆಗೆಂದೂ ನೀನು ಕಾಮಿಸಿ ಜನಿಸಿದೆಯೋ ನೇಮದಿಂದಲಿ ಸುರಸ್ತೋಮವ ನೀಗಿ ಭೂಮಿಜೆಯ ತಂದು ರಾಮನಿಗೊಪ್ಪಿಸಿದ್ಯೋ 1 ಗೋವಳ ಭೃತ್ಯನಾಗಿ ನೀನು ಅವರಲ್ಲಿ ಪುಟ್ಟಿದ್ಯೋ ಸಾವಿನ ಬಾಯಿಗೆ ಕುರುವಿಂಡು ಕಟ್ಟಿ ನೀ ಭಾರ ಪೋಗಲಾಡಿಸಿದ್ಯೋ 2 ಹರಿಮತ ಏರುವುದಕೆ ನೀನೆ ಸರಿ ಗುರುಮಧ್ವನೆನಿಸಿದೆಯೋ ಏಕವಿಂಶತಿ ಮತ ನರಸಿಂಹ ವಿಠಲನ ದಾಸನೆನಿಸಿದ್ಯೋ 3 ಗಂಧದ ಮರವೇನು ಗಂಧದ ಮರವೇ
--------------
ನರಸಿಂಹವಿಠಲರು
ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿ-ಪ ದಂದಿಂದ ಈ ಅಂಬೆಗಾಲು ಬಿಡದಮ್ಮ ಅ.ಪ ಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ ಗ್ರಹ ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ 1 ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ 2 ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ 3
--------------
ವ್ಯಾಸರಾಯರು
ಕಪ್ಪುಗೊರಳ ಬಿಂಬ ಅಪ್ಪ ಸಲಹೋ ಪ ಕ್ಷಿಪ್ರ ಕೃಪೆ ಪುಟ್ಟಿಸೈ ಅಪ್ರತಿಮ ದಯವನಧಿ ಅ.ಪ. ದಿವಿಜ ದಾನವ ಗಣವ ತೃಣ ಮಾಡಿ ಆಳುವ ಪವನಾಂಶ ಪಾವನ್ನ ಜ್ಞಾನ ಶರಧಿ ನವವಿಧಾ ಹರಿಭಕ್ತಿ ರಸಸಿಂಧು ವೈರಾಗ್ಯ ಸೌಭಾಗ್ಯನಿಧಿ ಮನದಿ ನೆಲೆಯಾಗಿ ನಿಲ್ಲಯ್ಯ 1 ಶೌರಿ ಮೂರ್ತಿಯನು ನಿತ್ಯೋತ್ಸವದಿ ಹೃದಯ ಕಮಲದಲ್ಲಿ ಭೃತ್ಯ ಮಸ್ತಕ ಮಣಿಯೆ ಚಿತ್ತದಲಿ ಕೂತೆನ್ನ ಹರಿಯ ತೋರಿಸು ಸ್ವಾಮಿ 2 ಸಾರತಮ ಹರಿಯೆಂದು ಜಗಕೆ ತೋರಿದ ಗುರುವೆ ಭಾರ ನಿನ್ನದೊ ಸ್ವಾಮಿ ಕಾಯೊ ಎನ್ನ ಮಾರಪಿತ ಜಯೇಶವಿಠಲನ ಪೂರ್ಣೊಲಿಮೆ ವಾರಿಧಿ ವಿಹಾರ ತವ ಎಡಬಿಡದೆ ಇರಿಸೆನ್ನ 3
--------------
ಜಯೇಶವಿಠಲ
ಕರಿಯನೆರಿರೇ ಮುರಾರಿಗೆ ಪ ಹಂಸವಾಹನ ಶಿವರಂಶಗಳನು ಕೂಡಿಕಂಸ ಶಾಸ್ತ್ರವ ತ್ರಿವಂಶ ಬೆಳೆಸಿದಾ 1 ಗೋಪಿ ಪುತ್ರನ ಪಾಡಿ2 ಕರಿಪುದಸರಾಧ್ವರ ಧನುರ್ದನು ತನ್ನಕರದಿ ಮುಟ್ಟುತ ಮೃತ ತರುಳನ ಕಾದಾ 3 ರಾಮನಾಮದಿ ಭೂಪ ಧಾಮದೊಳಗೆ ಪುಟ್ಟಿಕಾಮಿನಿ ಸಹ ಕೂತ ಪ್ರೇಮ ಪುರುಷಗೆ 4 ಕರ ಕರದೊಳು ಸುರಭಿ ಕುಸುಮವೆತ್ತಿಪರಮ ಪುರುಷ ವಿಪತ್ ಪರಿಹರಿಸಿದನು 5 ಕರ ಕತ್ತರಿಸುವೆನೆಂಬೋ-ನ್ಮತ್ತನಾಸ್ತ್ರವ ಕರೆ ಕಿತ್ತು ರಕ್ಷಿಸಿದಾ 6 ಪೇಸಿಯಿಂದಲಿ ಪುಂಸ್ತ್ರೀ ಕೂಸುಗಳನೆ ಮಾಡಿತೋಷಿಸಿದನು ಬದರೀಶ ಮೌನಿಜನು 7 ಇಂಥ ಮಹಿಮೆಗಳಾನಂತ ಮಾಡಿದ ಲಕ್ಷ್ಮೀ-ಕಾಂತಗಬ್ದಾಪತ್ತಿ ಶಾಂತಿ ಮಾಡುವುದೇ 8 ಸುಂದರ ಭೂಷಣಗಳಿಂದ ಶೋಭಿಪ ಬಾಲಇಂದಿರೇಶನ ಕೃಪಾ ಪೊಂದಿ ಸುಖಿಸುತಿರೆಕುಂದಣದಾರತಿ ನಿಂದು ಬೆಳಗಿರೆ 9
--------------
ಇಂದಿರೇಶರು
ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ ಈ ಪ ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಅನುದಿನ ಅ.ಪ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ 1 ಭಾಗವತಸು ತಿಳಿಸೆನ್ನ ಮನಕೆ ಜಿತ ಮನೋಜಾತ 2 ಪರಿಪಾಲಿಸಲು ಶಿವನೆ ರಾಜಿಸುವ ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ಪಾದ ಸುವಿಶಾಲ ಮಹಿಮನೇ 3 ನೀಡಿದೆಯೊ ಗೌತುಮ ಮನಮಂದಿರದಿ ಗೋ- ವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ4 ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ5
--------------
ಕಾರ್ಪರ ನರಹರಿದಾಸರು
ಕಲಿಮುಖ್ಯ ದೈತ್ಯರನು ಸ್ಮರಿಸಿ ಬಿಡದೆ ಕಲುಷವರ್ಜಿತ ಭಾಗವತರು ಮರೆಯದಲೆ ಪ ಮಲಮೂತ್ರಗಳ ವಿಸರ್ಜನೆ ಗೈವಾಗ ಎಂ ಜಲ ಕೈ ಬಾಯ್ದೊಳೆದು ಉಗುಳುವಾಗ ಹುಳಿ ಬೀಜ ಕವಡೆ ಪಗಡೆಗಳಾಡುವಾಗ ಮ ಕ್ಕಳನಾಡಿಸುತಲಿ ವಿಸ್ಮರಣೆಯಿಂದಿರುವಾಗ 1 ಸಂಧಿಕಾಲದಲಿ ಸತಿಯೊಡನೆ ಪವಡಿಸಿದಾಗ ನಿಂದ್ಯ ಕರ್ಮಗಳನಾಚರಿಸುವಾಗ ತಂದೆ ತಾಯಿಗಳ ದಿನ ಮರೆತು ಒಟ್ಟಾಗ ಕ ರ್ಮೇಧಿ ಭಿಕ್ಷಕೆ ಬರಲು ಇಲ್ಲೆಂಬುವಾಗ 2 ಮಾಸೋಕ್ತ ಧರ್ಮವನು ತೊರೆದಾಗ ವಿಪ್ರಗೋ ಗ್ರಾಸಗಳ ಕೊಡದೆ ಭುಂಜಿಸುವಗಲೇ ಮೀಸಲು ಮಡಿ ಮೈಲಿಗೆಗಳ ನೋಡದಲೆ ದು ಷ್ಯಾಸೆಯಲಿ ನೀಚರಾಲಯದಲುಂಬಾಗ 3 ಪ್ರಾಯ ಧನ ಮದದಿಂದ ಹೇಯ ವಿಷಯಗಳು ಪಾ ದೇಯವೆಂದರಿದು ಭುಂಜಿಸುವಾಗಲು ಜಾಯಾತ್ಮ ದೇಹಾದಿಗಳು ತನ್ನದೆಂಬಾಗ ಮಾಯವಾದಿಯ ಉಕುತಿ ಮನಕೆ ತಂದಾಗ 4 ಮತಿವಮತರೊಡನೆ ಮತ್ಸರ ಪುಟ್ಟಿದಾಗವ ರ್ಪಿತ ಪದಾರ್ಥಗಳ ಭುಂಜಿಸುವಾಗಲು ಮೃತ ವತ್ಸ ಗೋವಿನ ಚಲಮಂಬಾಗ ಶ್ರೀ ಪತಿ ಜಗನ್ನಾಥವಿಠಲನ ಸ್ಮøತಿ ಬಿಟ್ಟಾಗ 5
--------------
ಜಗನ್ನಾಥದಾಸರು
ಕಲ್ಲಿನಿಂದ ಸರ್ವ ಫಲ ಬಾಹುದೊ | ಪ ಕೈವಲ್ಯ ತೋರುವುದೊ ಅ.ಪ ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು | ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು | ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು | ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು1 ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ | ಮೂರ್ತಿ ಮಂತಾಹುದು | ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು | ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು2 ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ | ಕಲ್ಲು ಮನಸನು ಬಿಟ್ಟು ಪೂಜೆಮಾಡಿ | ಸಿರಿ ವಿಜಯವಿಠ್ಠಲ ಒಳ್ಳೆ | ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ 3
--------------
ವಿಜಯದಾಸ
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಕಳವಳಿಪುದೆನ್ನ ಮನ ಕಮಲಾಕ್ಷ ಬಾರದಿರೆ ಪ ನಳಿನಸಂಭÀವ ಲಿಖಿತವೇನಿಹುದೊ ಸಖಿಯೆ ಅ.ಪ. ಪೋದ ವಿಪ್ರನು ಬರದಿರಲು ಏನು ಕಾರಣವೊ ಹಾದಿಯಲಿ ವಿಘ್ನ ತಾನೊದಗಿತೊ ಮಾಧವನಿಗೆನ್ನೊಳು ಮಮತೆ ಬಾರದೆ ಹೊಯ್ತೆ ಮೇದಿನಿಯೊಳೇಕೆ ನಾ ಪುಟ್ಟಿ ಬಂದನೆ ಸಖಿಯೆ 1 ನಿನ್ನ ಹೊರತೆನಗಿನ್ನು ಅನ್ಯಗತಿಯಿಲ್ಲೆಂದು ಭಿನ್ನವಿಸಿಕೊಂಡಿದ್ದೇನಾಯಿತೆ ಕರ್ಮ ಬಲವಂತವಾಗಿರಲು ಬನ್ನಪಡಿಸುತಲೆನ್ನ ಬಳಲಿಪುದು ಸರಿಯೆ 2 ವಸುದೇವ ಸುತನಾಗಿ ಶಿಶುತನದ ಕ್ರೀಡೆಯೊಳ್ ಅಸುರರನು ಸಂಹಾರ ಮಾಡಿದವಗೆ ಶಿಶುಪಾಲನಾಕಾಲದ ವಶಮಾಡಲಸದಳವೆ ಕುಸುಮಾಕ್ಷಿ ಕರಿಗಿರೀಶನೆ ಗತಿಯು ಸಖಿಯೆ 3
--------------
ವರಾವಾಣಿರಾಮರಾಯದಾಸರು
ಕಾಖಂಡಕಿ ಪ್ರಸನ್ನ ವೆಂಕಟದಾಸರು ಸಿರಿ ಪ್ರಸನ್ನವೆಂಕಟನ್ನನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ಪ ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳುದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲುಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲುತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು 1 ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ 2 ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿನಂದದಿಂದೆಚ್ಚೆತ್ತು ಜ್ಞಾನವುದಿಸೆ ಮುಕುಂದನ ಕಂಡು ಎದೆಯಲಿಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ 3 ಭಾಗವತ ಪೂರ್ವಾರ್ಧಕನ್ನಡದಿಮತಿಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ 4 ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ 5
--------------
ರಮಾಪತಿವಿಠಲರು