ಒಟ್ಟು 95 ಕಡೆಗಳಲ್ಲಿ , 36 ದಾಸರು , 86 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗಾಗಲು ಅರಘಳಿಗೆಯು ಇರುತಿರೆ ಸ್ಮರಿಸುವೆ ವಿಶ್ವಮೂರುತಿಯನ್ನು ಬೆಳಗಾಗಲು ಹರಿಧ್ಯಾನವ ಮಾಡುತ ಬಹಿರ ಭೂಮಿಗ್ಹೋಗುತ ಮುನ್ನು 1 ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ- ಸರ್ಜನೆ ಮಾಡುತ ಮತ್ತಿನ್ನೂ ದಂತ ಧಾವನೆಯ ಮಾಡುತ ಶ್ರೀ ಮಾ- ಧವನನು ಸ್ಮರಿಸುವೆ ನಾನಿನ್ನೂ 2 ಮುಖವನು ತೊಳೆಯುತ ಮುರಹರಿ ಧ್ಯಾನದಿ ಶ್ರೀತುಳಸಿಯ ನಮಿಸುತಲಿನ್ನೂ ಮೀಸಲ ನೀರನು ಎರೆಯುತ ಬೇಗದಿ ಮೃತ್ತಿಕಿ ಫಣಿಗಿಡುತಲಿ ಇನ್ನು 3 ಮೂರು ಪ್ರದಕ್ಷಿಣಿ ಮಾಡುತ ಬೇಗದಿ ಮುದದಿ ನಮಸ್ಕರಿಸುತಲಿನ್ನೂ ದೇವರ ಮನೆಕಡೆ ಪೋಗುತ ನಿಂದಿಹ ಜಯವಿಜಯರಿಗೊಂದಿಸಿ ಮುನ್ನು 4 ದೇವರ ದರ್ಶನಕಾಜ್ಞೆಯ ಕೇಳುತ ದೇವರ ಗೃಹದೊಳು ಪೋಗುತಲಿ ಮಾಯಾ ಪತಿಯನು ಮನದೊಳು ಧ್ಯಾನಿಸಿ ವಂದನೆ ಮಾಡುತ ಬೇಗದಲಿ 5 ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ ಪದುಮನ್ಹಾಕುತಲಿ ಗಜವರದನ ಕೊಂಡಾಡುತ ಮುದದಿ ಗಜೇಂದ್ರ ಮೋಕ್ಷನ ಸ್ಮರಿಸುತಲಿ 6 ಗೋವೃಂದದ ಕಡೆ ಪೋಗುತ ಶ್ರೀ- ಗೋವಿಂದನ ಸ್ಮರಿಸುತ ನಿತ್ಯದಲಿ ಗೋಪೀ ಬಾಲನ ಗೋಕುಲವಾಸನ ಗೋವ್ಗಳ ಮಧ್ಯದಿ ಸ್ಮರಿಸುತಲಿ 7 ಬಾಲಕೃಷ್ಣನ ಲೀಲೆಯ ಪೊಗಳುತ ಬಾಲಲೀಲೆಗಳ ಕೇಳುತಲಿ ಪುರಾಣವ ಪೇಳುವ ದ್ವಿಜರಿಗೆ ವೃದ್ಧರಿಗೆರಗುತ ಪ್ರತಿನಿತ್ಯದಲಿ 8 ಮುರಳಿಯನೂದುತ ಮೆರೆಯುವ ಕೃಷ್ಣನ ಅನುದಿನ ಮಾಡುತಲಿ ಸರಸಿಜನಾಭನ ಸ್ಮರಿಸುತ ಮನದಲಿ ಸ್ನಾನಕೆ ತೆರಳುತ ಶೀಘ್ರದಲಿ 9 ನದಿಯ ಸ್ನಾನಕೆ ಪೋಗುವ ಸಮಯದಿ ನಾರದವಂದ್ಯನ ಸ್ಮರಿಸುತಲಿ ಭಾಗೀರಥಿಯಲಿ ಸ್ನಾನವು ಮಾಡುತ ಬಾಗುತ ಸಿರವನು ಬೇಗದಲಿ10 ಫಣಿರಾಜನ ಶಯನದಿ ಮಲಗಿಹ ಶ್ರೀ- ಪರಮಾತ್ಮನ ನೋಡುತ ಬೇಗ ಪಾದಗಳ ಸೇವಿಪ ಶ್ರೀ ಭೂದೇವಿಯ- ರೇನುಧನ್ಯರೆಂದೆನುತಾಗ11 ಪೊಕ್ಕಳ ಮಧ್ಯದಿ ಪೊರಟಿಹ ನಾಳದ ತುದಿಯಲಿ ರಂಜಿಪ ಕಮಲದಲಿ ಉದ್ಭವಿಸಿದ ನಾಲ್ಮೊಗನನು ನೋಡುತ ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12 ನೆರೆದಿಹ ಸುರ ಪರಿವಾರವೆಲ್ಲ ಶ್ರೀ- ಹರಿಯನು ವಾಲೈಸುತಲಿನ್ನೂ ಪರಮವೈಭವದಿ ಮೆರೆಯುವ ದೇವನ ಸ್ಮರಿಸುವೆ ಜಲಮಧ್ಯದೊಳಿನ್ನು 13 ದೇವರ ರಥವನು ತೊಳೆಯುವೆನೆಂಬ- ನುಸಂಧಾನದಿ ಸ್ನಾನವು ಮಾಡಿ ದೇವರ ರಥ ಶೃಂಗರಿಸುವೆನೆನ್ನುತ ಶ್ರೀಮುದ್ರೆಗಳ್ಹಚ್ಚುತ ಪಾಡಿ 14 ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ- ಹರಿಪೂಜೆಗೆ ಅಣಿಮಾಡುತಲಿ ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ ತಂದಿಡುವೆನು ಮೋದದಲಿ 15 ಪಂಚಭಕ್ಷ ಪಾಯಸಗಳ ಮಾಡುತ ಪಂಚಾತ್ಮಕ ನ ಸ್ಮರಿಸುತಲಿ ಮಿಂಚಿನಂತೆ ಹೊಳೆಯುವ ತಬಕಿಲಿ ತಾಂಬೂಲವ ನಿರಿಸುತ ಬೇಗದಲಿ 16 ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ ಬ್ರಹ್ಮನ ಪಿತಗರ್ಪಿಸುತಲಿರಲು ಸುಮ್ಮಾನದಿ ಮಹಲಕುಮಿಯು ಇದ- ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17 ಪರಮಾತ್ಮನು ಈ ವಿಧ ಸೇವೆಯ ಕೈ- ಗೊಳುತಲಿ ಸಂತಸ ಪಡಲಿನ್ನು ಅರಿತವರೆಲ್ಲರು ನಿರುತದಿ ಹರಿ ಧ್ಯಾ- ನವ ಮಾಡುತಲಿರೆ ತಾವಿನ್ನು 18 ದೇವಪೂಜೆ ವೈಶ್ವದೇವವು ನಿತ್ಯದಿ ಗೋಬ್ರಾಹ್ಮಣನರ್ಚಿಸಿ ಇನ್ನು ಸಾಯಂ ಸಮಯದಿ ಸಾಧುಗಳೊಡನೆ ದೇವರ ಕಥೆ ಕೇಳುತಲಿನ್ನೂ 19 ಝಾಮಝಾಮದಿ ಜಯಶಬ್ದಗಳಿಂ ಜಯಾಪತಿಯನು ಪೊಗಳುತಲಿ ಆರತಿ ಜೋಗುಳ ಹಾಡುತ ಮುದದಲಿ ಮಧ್ವೇಶಾರ್ಪಣ ಪೇಳುತಲಿ 20 ಮಲುಗುವಾಗ ಮುಕುಂದನ ಸ್ಮರಿಸುತ ಲಯ ಚಿಂತನೆಯನು ಮಾಡುತಲಿ ಕರಮುಗಿಯುತ ಕಾಯೇನ ವಾಚಾ ಎಂ- ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21 ಝಾಮಝಾಮದಿ ಶ್ರೀ ಹರಿ ಮಾಧವ ಆಗಲು ಬೆಳಗಿನ ಝಾವದಿ ಸೃಷ್ಟಿಯ ಚಿಂತನೆ ಮಾಡಿ ಎಂದೆನುತ22 ಮಳಲಗೌರಿ ನೋಂತಿಹ ಸತಿಯರಿಗೆ ಮುರಳೀಧರ ಒಲಿದಿಹನೆನ್ನುತ ಉದಯವಾಗಲು ವಿಶ್ವನ ಸ್ಮರಿಸುತ ವಿಧಿ ನೇಮಗಳನುಸರಿಸುತ್ತ 23 ನಿತ್ಯದಿ ಈ ತೆರವಾಚರಿಸುವ ನರ ಮುಕ್ತನು ಧರೆಯೊಳಗೆಂದೆನುತ ಅತ್ಯುತ್ಸಾಹದಿ ಬರೆದೋದುತಲಿ- ದರರ್ಥವ ತಿಳಿದಾಚರಿಸುತ್ತ24 ಈ ವಿಧ ಚಿಂತನೆ ಮಾಡುವ ಮನುಜಗೆ ದಾರಿದ್ರ್ಯವು ದೂರಾಗುವದು ಮಾರಮಣನು ತನ್ನವರೊಡಗೂಡುತ ವಾಸವಾಗುವನೆಂಬುವ ಬಿರುದು25 ಕರೆಕರೆಗೊಳ್ಳದೆ ಕೇಳಿರಿ ನಿತ್ಯವು ಕನಕಗಿರಿವಾಸನ ಮಹಿಮೆ ಕನಲಿಕೆ ಕಳೆವುದು ಕಮಲನಾಭ- ವಿಠ್ಠಲನು ಕೊಂಡಾಡುತ ಮಹಿಮೆ 26
--------------
ನಿಡಗುರುಕಿ ಜೀವೂಬಾಯಿ
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಭಾರ್ಗವಿ ದೇವಿಭೃಗುವಾರ ಬರಲಿಬೇಕು ಪ ಭೃಗುವಾರ ಬರಲಿಬೇಕ್ಹಗಲು ಪಾಯಸವುಂಡುನಗುತ ರಾತ್ರಿಲಿ ತಾಂಬೂಲಗಳ ಮೆಲ್ಲುವುದಕ್ಕೆ ಅ.ಪ. ನೂಪುರ ಮುಖ ಭೂಷನೀ ಪದ ಕುಣಿಸುತ್ತಶ್ರೀಪತಿ ಸಹ ಸುಖಾಲಾಪಗಳಾಡುತ 1 ಕಂಕಣ ಮುಖರತ್ನಾಲಂಕಾರಗಳನಿಟ್ಟುಕಿಂಕರರಿಗೆ ಮುಖಾಲಂಕಾರ ತೋರುತ2 ಶಂಕರ ಮುಖ್ಯ ಸುರಪುಂಖ ಮಧ್ಯದಿ ಶ್ರೀಮ-ದ್ವೇಂಕಟೇಶನ ದಿವ್ಯ ಟೊಂಕಾದೊಳಗೆ ಕೂತು 3 ಪಕ್ಷಿವಾಹನ ದಿವ್ಯ ವಕ್ಷಸ್ಥಳಾಶ್ರಿತೆಲಕ್ಷ್ಮೀಲೀಲಾಮೃತ ಲಕ್ಷ್ಮೀ ಕೇಳುವುದಕ್ಕೆ 4 ಇಂದಿರೇಶನ ಮೃದು ಸುಂದರೋತ್ಸಂಗದಿಪೊಂದಿ ಭಕ್ತರ ಪೂಜಾನಂದ ಭುಂಜಿಪುದಕ್ಕೆ 5
--------------
ಇಂದಿರೇಶರು
ಭೀಮ ಲಾಲಿ ಭಾರತ ಕುಲಾಂಬುಧಿ ಸೋಮ ಗುಣನೆ ಲಾಲಿ ಪ ಲಾಲಿ ಯಾದವ ಪದಾಂಭೋಜ ಮಧುಕರನೆಲಾಲಿ ಮುನಿವರತನಯ ಸುತನ ಗೆಲಿದವನೆಲಾಲಿ ಕರೆವೆನು ಬಾರೋ ಮಧ್ವ ಮುನಿವರನೆ ಲಾಲಿ ಅ.ಪ. ಲಾಲಿ ಕಾಲ್ಗಡಲರುಳಿ ಕುಣಿತ ನಿಜಚರಣಾಲಾಲಿ ಮಧ್ಯದೊಳುಟ್ಟ ಕನಕಮಯ ವಸನಾಲಾಲಿ ಕೊರಳೊಳಗಿಟ್ಟ ಹಾರಗಳ ಸದನಾಲಾಲಿ ಕಿವಿಯೊಳು ಹೇಮಕುಂಡಲಾಭರಣಾ ಲಾಲಿ 1 ಲಾಲಿ ಕರಯುಗ ಶೋಭಿತ ಕಂಕಣಾಭರಣಾಲಾಲಿ ಲೋಕವ ಮೋಹಿಸುವ ಮಂದಹಾಸನಾಲಾಲಿ ತರುಣಿರೂಪ ಶೃಂಗಾರ ಸದನಾಲಾಲಿ ತಾಂಬೂಲರಸಭಾಸ ನಿಜವದನಾ ಲಾಲಿ 2 ಲಾಲಿ ನರ್ತನಾ ಕೃತಾಲಯ ಚರಣಗಮನಾಲಾಲಿ ನಿಜ ಕಾಮಿನಿ ಸಂಕಟ ಹರಣಾಲಾಲಿ ಕೀಚಕಲಾಲಿ ಇಂದಿರೇಶ ಮಾಧವನ ತೋರಿದನ ಲಾಲಿ 3
--------------
ಇಂದಿರೇಶರು
ಭೀಮ ಶಾಮ ಕಾಮಿನಿಯಾದನು ಪ ಭೀಮ ಶಾಮ ಕಾಮಿನಿಯಾಗಲು ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆಅ.ಪ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು 1 ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು ಆಲೋಚನೆಯಿಂದಲಿ ನಾಚಿಕೆ ತೋರುತಲಾ ಚೆನ್ನೆ ಪೋಗಲು ಕರ ಚಾಚಿದನು 2 ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು ಕಳವಳಿಸಿದ ನಾ ಗೆಲಲಾರೆನಿಂದು ವಲಿಸಿಕೊ ಎನ್ನ ಲಲನೆಯ ಕರುಣಾ- ಜಲಧಿಯೆ ನಾರೀ ಕುಲಮಣಿಯೆ ಬಳಲಿಸದಲೆ ನೀ ಸಲಹಿದಡೇ ವೆ- ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ- ಖಳನಾ ಮಾತಿಗೆ ತಲೆದೂಗುತಲಿ ಅ- ನಿಳಜನೆನ್ನ ನೀ ಸಲಹೆಂದ 3 ಮೌನಿ ದ್ರೌಪದಿ ಮೌನದಲ್ಲಿ ಹೀನನಾಡಿದಾ ಊನ ಪೂರ್ಣಗಳು ಮನೋಭಾವವ ಧೇನಿಸಿ ನೋಡುತ್ತ ಹೀನಕೆ ತಿಳಿದಳು ಮನದಲಿ ದೀನವತ್ಸಲ ಕರುಣವು ಮೀರಿತು ಕಾನನದೊಳ್ಕಣ್ಣು ಕಾಣದಂತಾಯಿತು ಏನು ಮಾಡಲೆಂದು ಜಾಣೆಯು ಚಿಂತಿಸಿ ಅನಿಲಗೆ ಬಂದು ಮ-ಣಿದಳು4 ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ ಸಲ್ಲದೆ ಆತನ ಹಲ್ಲನು ಮುರಿದು ಹಲ್ಲಣವ ಹಾಕಿ ಕೊಲ್ಲುವೆ ನಾನೀಗ ತಲ್ಲಣಿಸದಿರೇ ಗೆಲ್ಲುವೆನೆ ಪುಲ್ಲನಾಭ ಸಿರಿನಲ್ಲನ ದಯವಿ- ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ ಸಲ್ಲಿಸಿ ಕೊಡುವನು ಬಲ್ಲಿದ ನಮಗೆ ಮಲ್ಲಿಗೆ ಮುಡಿಯಾ ವಲ್ಲಭಳೆ 5 ಎಂದ ಮಾತಿಗಾನಂದ ಮಯಳಾಗಿ ಬಂದಳಾ ಖಳನ ಮಂದಿರದೊಳು ನೀ- ನೆಂದ ಮಾತಿಗೆ ನಾನೊಂದನು ಮೀರೆನು ಕಪಟ ಸೈರಂಧಿರಿಯೂ ಕುಂದಧಾಭರಣವ ತಂದು ಕೊಡಲು ಆ- ನಂದದಿಂ ಪತಿಯ ಮುಂದೆ ತಂದಿಟ್ಟಳು ಮಂದರೋದ್ಧರನ ಚಂದದಿ ಪೊಗಳುತ ಇಂದು ಸುದಿನವೆಂದ ಭೀಮ6 ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ ಇಟ್ಟೋಲೆ ತೂಗಲು ಬಟ್ಟ ಕುಚ ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ- ದಿಟ್ಟಂಥ ಈರೈದು ಬೆಟ್ಟುಗಳುಂಗರ ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ ಕಟ್ಟುಗ್ರದ ಜಗ ಜಟ್ಟಿಗನು 7 ತೋರ ಮೌಕ್ತಿಕದ ಹಾರ ಸರಿಗೆ ಕೇ ಯೂರ ಪದಕ ಭಂಗಾರ ಕಾಳಿಸರ ವೀರ ವಿದ್ರುಮದ ಭಾಪುರಿ ಉ- ತ್ತಾರಿಗೆ ವರ ಭುಜಕೀರುತಿಯು ಮೂರೇಖೆಯುಳ್ಳ ಉದಾರ ನಾಭಿವರ ನಾರಿ ನಡು ಉಡುಧಾರ ಕಿಂಕಿಣಿ ಕ- ಸ್ತೂರಿ ಬೆರಸಿದ ಗೀರುಗಂಧವು ಗಂ- ಬೂರ ಲೇಪ ಶೃಂಗಾರದಲಿ8 ವಂಕಿ ದೋರ್ಯವು ಕಂಕಣ ಒಮ್ಮೆಯೀ- ಚಾಪ ಭ್ರೂ ಅಲಂಕಾರ ಭಾವ ಪಂಕಜಮಾಲೆ ಕಳಂಕವಿಲ್ಲದಲೆ ಸಂಕಟ ಕಳೆವ ಪಂಕಜಾಂಘ್ರಿ ಝಂಕಾರಕೆ ಲೋಕ ಶಂಕಿಸೆ ನಾನಾ- ಅಂಕುರ ವೀರ- ಕಂಕಣ ಕಟ್ಟಿದ ಬಿಂಕದಿಂದಲಾ- ತಂಕವಿಲ್ಲದೆಲೆ ಕಂಕಾನುಜ 9 ಕಂಬು ಕೊರಳು ದಾಳಿಂಬ ಬೀಜ ದಂತ ದುಂಬಿಗುರುಳು ನೀಲಾಂಬುದ ಮಿಂಚೆಂ- ದೆಂಬ ತೆರದಲಾ ಅಂಬಕದ ನೋಟ ತುಂಬಿರೆ ಪವಳ ಬಿಂಬಾಧರ ಜಂಬೀರ ವರ್ಣದ ಬೊಂಬೆಯಂತೆಸೆವ ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು ಹಂಬಲಿಸಿದ ತಾ ಸಂಭ್ರಮದಿ 10 ಸಂಧ್ಯಾದೇವಿಯೊ ಇಂದ್ರನ ರಾಣಿಯೊ ಚಂದ್ರನ ಸತಿಯೋ ಕಂದರ್ಪನಾಕರ- ದಿಂದ ಬಂದ ಅರವಿಂದದ ಮೊಗ್ಗೆಯೊ ಅಂದ ವರ್ಣಿಪರಾರಿಂದಿನಲಿ ಇಂದು ರಾತ್ರಿ ಇದೆ ಎಂದಮರಮುನಿ ಸಂದೋಹ ಕೊಂಡಾಡೆ ಇಂದುಮುಖಿಯೊಡ ನಂದು ತಾ ನಾಟ್ಯದ ಮಂದಿರಕೆ ನಗೆ- ಯಿಂದ ಬಂದ ಕುಂತಿನಂದನನು11 ಭಂಡ ಉಡಿಯಲಿ ಕೆಂಡವೊ ಪರರ ಹೆಂಡರ ಸಂಗ ಭೂಮಂಡಲದೊಳೆನ್ನ ಗಂಡರು ಬಲು ಉದ್ದಂಡರು ನಿನ್ನನು ಕಂಡರೆ ಬಿಡರೋ ಹಂಡಿಪರೋ ಲಂಡ ಬಾಯೆಂದು ಮುಕೊಂಡು ಕೈದುಡುಕಿ ಅಂಡಿಗೆಳೆದು ಅಖಂಡಲನ ಭಾಗ್ಯ ಮಂಡೆ ಮೊಗ ಗಲ್ಲ ಡುಂಡು ಕುಚ ಮುಟ್ಟಿ ಬೆಂಡಾದನು 12 ಸಾರಿಯಲ್ಲ ಮಕಮಾರಿಯಿದೆನುತ ಶ- ರೀರ ವತಿ ಕಠೋರವ ಕಂಡು ಜ- ಝಾರಿತನಾಗಿ ನೀನಾರು ಪೇಳೆಂದು ವಿ- ಕಾರದ್ಯಬ್ಬರಿಸಿ ಕೂರ್ರನಾಗಿ ತೋರು ಕೈಯೆಂದು ಸಮೀರನು ಎದ್ದು ವಿ ಚಾರಿಸಿಕೋ ಎನ್ನ ನಾರಿತನವೆಂದು ವೀರ ಮುಷ್ಟಿಯಿಂದ್ಹಾರಿ ಹೊಡೆಯಲು ಕ್ರೂರನು ರಕ್ತವ ಕಾರಿದನು 13 ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ- ಸೂರೆಯಾಯಿತು ಪರನಾರೇರ ಮೋಹಿಸಿ ಪಾರಗಂಡವರುಂಟೆ ಶರೀರದೊಳಿದ್ದ ಮಾರುತೇಶ ಹೊರಸಾರಿ ಬರೆ ಧೀರ ಭೀಮರಾಯ ಭೋರಿಡುತ ಹಾರಿ ಕೋರ ಮೀಸೆಯನೇರಿಸಿ ಹುರಿಮಾಡಿ ನಾರಿಮಣಿ ಯಿತ್ತ ಬಾರೆಂದು ಕರೆದು ಸಾರಿದನು ನಿಜಾಗಾರವನು 14 ಸರಸವು ನಿನಗೆ ವಿರಸವು ಆಯಿತು ಕರೆಸೆಲೊ ಈ ಪುರದರಸಾ ಕಳ್ಳನ ನರಸಿಂಹನ ನಿಜ ಅರಸಿಗೆ ಮನವನು ಮಂದರ ಅರಸನೆ ಅರಸಿ ನೋಡುತಿರೆ ವರೆಸಿದನಾ ಜೀವ ದೊರಸೆಯ ಖೂಳನ ಬೆರೆಸಿ ಸವಾಂಗ ಸಿರಿ ವಿಜಯವಿಠ್ಠಲ ಅರಸಿನ ಲೀಲೆಯ ಸ್ಮರಿಸುತಲಿ 15
--------------
ವಿಜಯದಾಸ
ಭೀಮಸೇನ ಭಾಮಿನಿಯಾದನು ಪ. ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ಅ.ಪ. ರಾಜಾಧಿರಾಜನು ಗಜಪುರದಲ್ಲಿಜೂಜಾಡಿ ತಮ್ಮ ರಾಜ್ಯವನು ಸೋತುವಿಜಯಮುಖ್ಯ ಅನುಜರೊಡಗೂಡಿಭುಜಂಗಶಾಯಿಯ ಭಜಿಸುತ್ತಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆವ್ಯಾಜದಿಂದ ರೂಪಮಾಜಿಕೊಂಡು ಪೋಗೆರಾಜ ಮತ್ಸ್ಯನೊಳು ಭೋಜನ ಮಾಡುತ್ತಪೂಜಿಸಿಕೊಂಬೋ ಸೋಜಿಗವೇನಿದು1 ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲುಮುನ್ನಿನ ಸಂಗತಿ ಪೇಳಿದಳುಆಣಿಮುತ್ತಿನಂಥಾ ವಾಣಿಯ ಕೇಳಲುಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನುಪ್ರಾಣ ನೀನೆನಗೆ ವೇಣಿ ಹಾಕೆನುತಪಾಣಿ ಪಿಡಿದು ಕರೆತಂದಳಾಗ2 ಈಶ ಕೇಳೊ ಪರದೇಶದಿಂದೊಬ್ಬಳುಕೇಶಕಟ್ಟುವಂಥ ವೇಷದಿ ಬಂದಳುಸಾಸಿರಮುಖದ ಶೇಷನೀರೂಪವಲೇಶವು ತಾ ವರ್ಣಿಸಲರಿಯನುವಾಸಮಾಡುವೆನು ಮಾಸಯೀರಾರುಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿದೋಸನು ಪೇಳಲು ಮೀಸೆಯ ತಿರುವುತಮೀಸಲೆನಗೆಂದು ತೋಷಿಸಿದ 3 ನಾರಿ ಅಕ್ಕನಲ್ಲಿ ಸೇರಿಕೊಂಡಿಹಳುಮೋರೆಯ ನೋಡಲು ಭಾರಿ ಗುಣವಂತೆತೋರುತಲಿದೆ ಎನ್ನ ಸೇರಿದ ಮೇಲನು-ಚಾರಿ ಎನಿಸುವೆ ಮೀರಿದ್ದಕ್ಕೆವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದುಬಾರಿ ಬಾರಿಯಾಕೆ ಮೋರೆ ನೋಡುತಿರೆನೀರೆ ಆ ಕ್ರೂರನ್ನ ಘೋರರೂಪಕಂಜಿಮೋರೆ ತೋರದೆ ಗಂಭೀರದಿಂದಿರೆ 4 ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆಪುಕ್ಕಟೆ ಅನ್ನಕೆ ಸಿಕ್ಕುವರೆ ನೀನುಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆಸಕ್ಕರೆದುಟಿಸವಿ ದಕ್ಕಿಸುವೆರಕ್ಕಸ ನಿನಗೆ ದಕ್ಕುವಳೆ ನಾನುಮುಕ್ಕಣ್ಣನಾದರು ಲೆಕ್ಕಿಸದಾ ಪತಿಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ 5 ಭಂಡಕೀಚಕನುದ್ದಂಡತನ ಕೇಳುಮಂಡೆ ಹಿಕ್ಕುವಳೆಂದು ಕಂಡಕಂಡ ಬಳಿಪುಂಡು ಮಾಡುವನು ಗಂಡಕಂಡರೆ ತಲೆಚಂಡನಾಡುವನು ಖಂಡಿತದಿಮಂಡಲಾಧಿಪನ ಹೆಂಡತಿ ನೀನಮ್ಮಉಂಡಮನೆಗೆ ಹಗೆಗೊಂಡಳೆನ್ನದಿರುಲಂಡನಿಗೆ ಬುದ್ಧಿ ದಂಡಿಸಿ ಪೇಳದೆಹಿಂಡಿಕೊಳ್ಳದಿರು ದುಂಡುಮುಖ 6 ತರಳ ನಿನ್ನಯ ದುರುಳತನದಬೆರಳ ಸನ್ನೆಯು ಗರಳವಾಯಿತೆಸರಳ ಗುರಿಗೆ ಕೊರಳ ಕೊಡದೆಪುರದೊಳಿರದೆ ತೆರಳೊ ನೀಅರಳಮೊಗ್ಗೆಯ ಹೆರಳಿಗ್ಹಾ ಕುತಕುರುಳು ತಿದ್ದುವ ತರಳೆಯ ಕಂಡುಇರಳು ಹಗಲು ಬಾರಳು ಎನ್ನುತಮರುಳುಗೊಂಡರೆ ಬರುವಳೆ 7 ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲುನಷ್ಟವಾಗುವುದು ಅಷ್ಟೈಶ್ವರ್ಯವುಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನುಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕದುಷ್ಟರ ಎದೆಯ ಮೆಟ್ಟಿ ಸೀಳುವೆನುಗುಟ್ಟಿಂದ ನಾರಿಯ ಕೊಟ್ಟುಕಳುಹಲುಪಟ್ಟದ ರಾಣಿಯೊಳಿಟ್ಟುಕೊಂಬೆ 8 ಕರವ ಬಾಚಿದನುಬಾಚಿ ಹಿಕ್ಕುವಂಥ ಪ್ರಾಚೀನವೇನಿದುವಾಚನಾಡು ಮೀನಲೋಚನೆ ಎನ್ನಲುಆಚರಿಸಿ ಮುಂದುತೋಚದೆ ಖಳನವಿಚಾರಿಸಿಕೊ ಶ್ರೀಚಕ್ರಪಾಣಿ 9 ಪೊಡವಿಪತಿಗಳ ಮಡದಿ ನಾನಾಗಿಬಡತನವು ಬಂದೊಡಲಿಗಿಲ್ಲದೆನಾಡದೊರೆಗಳ ಬೇಡುವುದಾಯಿತುಮಾಡುವುದೇನೆಂದು ನುಡಿದಳುಕೇಡಿಗ ಕೀಚಕ ಮಾಡಿದ ಚೇಷ್ಟೆಗೆಕಡಲಶಾಯಿ ಕಾಪಾಡಿದ ಎನ್ನನುಆಡಲಂಜಿಕೇನು ಷಡುರಸಾನ್ನದಅಡುಗೆ ರುಚಿಯ ನೋಡುವರೇ 10 ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-ದಾಡುವ ಮಾತನು ಬಾಡಿದ ಮುಖವನೋಡಿದನಾಕ್ಷಣ ತೊಡೆದು ನೇತ್ರವಬಿಡುಬಿಡು ದುಃಖ ಮಾಡದಿರುಪುಡುಕಿ ನಿನ್ನನು ಹಿಡಿದವನನ್ನು ಬಡಿದು ಯಮಗೆ ಕೊಡುವೆ ನೋಡೀಗತಡವ ಮಾಡದೆ ಗಾಢದಿ ಪೋಗು ನೀಮಾಡಿದ ಚಿಂತೆ ಕೈಗೊಡಿತೆಂದು 11 ಶಶಿಮುಖಿ ಕೇಸರಿ ಗÀಂಧವದಾಸಿಯರಿಂದ ಪೂಸಿಕೊಂಡುಹಾಸುಮಂಚದಲ್ಲಿ ಬೀಸಿ ಕೊಳುತಲಿಗಾಸಿ ಪಡುತಿರೆ ಆ ಸಮಯದಲಿಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆಈಸು ಸಂಶಯ ಬೇಡ ಭಾಷೆ ಕೊಟ್ಟೆ 12 ನಳಿನಮುಖಿಯು ಪೇಳಿದ ಮಾತನುಕೇಳಿ ಹರುಷವ ತಾಳಿದನಾಕ್ಷಣಖಳನು ಹೊನ್ನಿನ ಜಾಳಿಗೆಯ[ತೊಟ್ಟಿನ್ನುಳಿಯದಲೆ] ರತಿಕೇಳಿಗಿನ್ನುಕಾಳಗದ ಮನೆಯೊಳಗೆ ಬಾರೆಂದುಪೇಳಿದ ಸುಳುವು ಪೇಳಲು ಭೀಮಗೆಖಳನ ಕಾಯವ ಸೀಳುವವೇಳೆ ಬಂತೆನ್ನುತ ತೋಳ ಹೊಯಿದ 13 ನಾರಿಯಿನ್ಯಾವಾಗ ಬರುವಳೋಯೆಂದುದಾರಿಯ ನೋಡುವ ಚೋರ ಕೀಚಕನುತೋರಿದ ಠಾವಿಲಿ ಸೇರುವ ಬೇಗನೆಊರೊಳಗಾರು ಅರಿಯದಂತೆಕ್ರೂರನು ಮೋಹಿಪತೆರದಿ ಎನಗೆನಾರಿಯ ರೂಪ ಶೃಂಗರಿಸು ನೀನೆಂದುವಾರಿಜಮುಖಿಯ ಮೋರೆಯ ನೋಡಲುನೀರೆ ದ್ರೌಪದಿ ತಾ ನಾಚಿದಳು14 ಬಟ್ಟ ಮುಖಕೆ ತಾನಿಟ್ಟಳು ಸಾದಿನಬಟ್ಟು ಫಣೆಯಲಿ ಇಟ್ಟು ಕಣ್ಣಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ ಬೆರಳಿಗಿಟ್ಟಳು ಉಂಗುರವಿಟಪುರುಷರ ದೃಷ್ಟಿತಾಕುವಂತೆ15 ಮುತ್ತಿನ ಮೂಗುತಿ ಕೆತ್ತಿದ ವಾಲೆಯುಇತ್ತೆರÀ ಬುಗುಡಿಯು ನೆತ್ತೀಗರಳೆಲೆಚಿತ್ರದ ರಾಕಟೆ ಉತ್ತಮಕ್ಯಾದಿಗೆಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾಹಸ್ತದ ಕಡಗವು ಮತ್ತೆ ಚೂಡ್ಯ ವಂಕಿಮುತ್ತಿನ ಹಾರವು ರತ್ನದ ಪದಕವುಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲುಹಸ್ತಿನಿಯೋ ಈಕೆ ಚಿತ್ತಿನಿಯೊ16 ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧತೊಡೆದು ತಾಂಬೂಲ ಮಡಿಸಿಕೊಡುತಪ್ರೌಢನ ಸ್ತ್ರೀರೂಪ ನೋಡಲು ಖಳನುಕೊಡದೆ ಪ್ರಾಣವ ಬಿಡನೆಂದಳುಮಾಡಿದ್ಯೋಚನೆ ಕೈಗೂಡಿತು ಇಂದಿಗೆನೋಡು ಆ ಕೃಷ್ಣನು ಹೂಡಿದ ಆಟವಮಡದಿ ನೀನೆನ್ನ ಒಡನೆ ಬಾರೆಂದುನಡೆದ ಖಳನ ಬಿಡಾರಕೆ 17 ಇಂದುಮುಖಿ ಅರವಿಂದನಯನದ ಮಂದಗಮನೆಯು ಬಂದಳು ಎನ್ನುತನಂದನತನಯನ ಕಂದನ ಬಾಧೆಗೆಕಂದಿ ಕುಂದಿ ಬಹು ನೊಂದೆನೆಂದಹಿಂದಿನ ಸುಕೃತದಿಂದಲಿ ನಿನ್ನೊಳಾ-ನಂದವಾಗಿಹುದು ಇಂದಿಗೆ ಕೂಡಿತುಕುಂದದಾಭರಣ ತಂದೆ ನಾ ನಿನಗೆಚಂದದಿಂದಿಟ್ಟು ನೀನಂದವಾಗೆ18 ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊವಲಭರ್ತಾಕಂಡರೆ ಹಲ್ಲು ಮುರಿವರೊಬಲ್ಲವ ನಿನಗೆ ಸಲ್ಲದು ಈ ಕಾರ್ಯಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟಕೊಲ್ವಬಗೆ ಗೆಲ್ಲಲಾರೆನೆಂದುಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲುಕಲ್ಲೆದೆಯಲ್ಲ್ಲಿರೆ ಖೂಳ ನೊಂದ 19 ನಾರಿಯೊ ನೀನೇನು ಮಾರಿಯೊ ಇನ್ನೊಂದುಬಾರಿ ನೀ ಎನಗೆ ಮೋರೆ ತೋರಿಸೆಂದಧೀರನ ಸಮೀಪಬಾರದೆ ಓಡುವದಾರಿಯ ನೋಡುತಿರಲಾಗಬಾರದಂಥಾ ಪರದಾರರ ಮೋಹಿಪಕ್ರೂರಗೆ ಈ ರೂಪ ಘೋರವಾಗಿಹುದುಸಾರದ ಮಾತಿದು ಯಾರಾದರೇನೀಗಮಾರನ ತಾಪವ ಪರಿಹರಿಸುವೆ 20 ಸಮೀರಜ ಗುದ್ದಲು ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ 21 ಕೆಟ್ಟ ಕೀಚಕ ತಾ ತೊಟ್ಟ ಛಲದಿಂದಬೆಟ್ಟದಂಥ ದೇಹ ಬಿಟ್ಟಿನ್ನವನಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲುಭ್ರಷ್ಟನ ನೋಡುವುದೇನೆಂದಳುಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆಕೃಷ್ಣನ ದಯದಿ ಕಷ್ಟವು ಹಿಂಗಿತುಪಟ್ಟಣಕೀಸುದ್ದಿ ಮುಟ್ಟದ ಮುಂಚೆಗುಟ್ಟಲಿ ಪೋಗುವ ಥಟ್ಟನೆಂದ 22 ಅರಸಿ ನಿನ್ನೊಳು ಸರಸ ಬೇಕೆಂದಪುರುಷನ ಜೀವ ಒರೆಸಿ ಕೊಂದೆನುಹರುಷದೀ ಪುರದರಸು ನಮ್ಮನುಇರಿಸಿಕೊಂಡೊಂದೊರುಷವಾಯಿತುಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದುಸರಸಿಜಾಕ್ಷಿಯು ಕರೆಸಿ ನಿನ್ನೊಳಗಿರಿಸದಿದ್ದರೆ ಹಯವದನನಸ್ಮರಿಸಿ ಗದೆಯನು ಧರಿಸುವೆ23
--------------
ವಾದಿರಾಜ
ಭೋಜನ ಮಾಡೈಯ ಶ್ರೀರಾಮಚಂದ್ರ ಪ ರಾಜೀವಾನಯನ ಸ್ವರಾಜಾನುಜ ಮಹಾ ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು ಹಪ್ಪಳ ಸಂಡಿಗೆ ಶಾಖಗಳೂ ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು 1 ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು- ಚ್ಚೋರೆಯು ಅತಿರಸ ಹೊಯಗಡಬೂ ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ2 ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ ಬೆಂಡು ಸೋಮಾಶಿಬತ್ತಾಸು ಫೇಡಾ ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ- ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ 3 ಪನಸು ಜಂಬೂ ಕದಳಿನಾರಂಗ ಎಳನೀರು ಪಾನಕ ತಕ್ರಬೆಣ್ಣೆಯು ಮೊಸರೂ ಸ್ವಾದೋದಕ ಮೊದಲಾಗಿ ಶ್ರೀ ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ 4 ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ ವಿತ್ತಸಮೇತವಾದಿದನು ಕೈಕೊಂಡು ನೀ 5 ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ6 ನವ್ಯ ಸುಗಂಧ ಪುನರ್ಧೂಪವರ್ಪಿಸಿ ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು 7 ಅವ್ಯಯಾನಂತ ಜಗದ ಬದುಕು ನೀನೆಂದು ಸೇವ್ಯಸೇವಕನಾಗಿರುವೆ ಎಂದು ಭವ್ಯಚರಿತ್ರರು ಪೊಗಳುವರೈ ನಿನ್ನ ಸವ್ಯಸಾಚಿಯ ಸೂತ ಗುರುರಾಮ ವಿಠಲನೆ 8
--------------
ಗುರುರಾಮವಿಠಲ
ಮನಮುಟ್ಟಿ ಮಾಡುವದೆ ಭಕ್ತಿಗಳು ಶ್ರುತದೃಷ್ಟನು ಮನದಿಂದ ಮಾಡುವ ನೇಮನಿತ್ಯಗಳು ಮಹಾ ಧರ್ಮಶಾಸ್ತ್ರಗಳು ಯತಿ ಕುಲದೀಪಗಳು 1 ತ್ರಿವೇಣಿ ಸಂಗಮ ಸ್ನಾನಗಳು ಮಹಾದಿವ್ಯ ಮಡಿಯಗಳು ಇಟ್ಟಿಹ ದ್ವಾದಶ ನಾಮಗಳು ಮನಗಂಡಿಹದೇ ಶ್ರೀಮುದ್ರೆಗಳು 2 ಸ್ಮರಣೆಯೊಳಿಹುದೆ ಸಂಧ್ಯಾನಗಳು ಜಪಸರ ಮಾಲೆಗಳು ಜಪತಪ ಧ್ಯಾನವೆ ಮೌನಗಳು ನಿರ್ಧಾರದಿ ಗುರುಪಾದ ನಿಶ್ಚೈಸಿಹ ವ್ರತ ಆಚಾರವೇ ನಿಷ್ಠೆಗಳು 3 ಮಾಡುವುದೇ ದೇವಪೂಜೆಗಳು ಅಂತ:ಕರಣದಿ ಗುರುಚರಣದ ಅಭಿಷೇಕಜ್ಞಾನ ಭಾಗೀರಥಿ ತೀರ್ಥಗಳು ಚಿತ್ತಚಿಂತನದಿ ದಿವ್ಯ ವಸ್ತ್ರಗಳು ಪರಿಮಳಪುಷ್ಪಗಳು 4 ಅನಿಮಿಷ ನೇತ್ರದಿ ನೋಡುವ ಘನ ಚಿತ್ಪ್ರಕಾಶವೆ ಸದಾನಂದದ ಮೊದಲಾದ ಸತ್ವರಜತಮ ಏಕಾರ್ತಿಗಳು ಸದ್ಭಾವನಿ ತಾಂಬೂಲಗಳಿಂದಲಿ ರತಿಮನ ಘನ ಮಂಗಳಾರ್ಚನಿ ಪಂಚ ಪ್ರಕಾಶಗಳು 5 ಶ್ರೀಗುರು ಸೇವೆ ಸತ್ಕಾರಗಳು ಜಯ ಲಕ್ಷ್ಮಿಯ ಷೋಡಶ ಉಪಚಾರಗಳಿಂದಲಿ ಮಹಾದಿವ್ಯ ಪೂಜೆಗಳು ತಲ್ಲೀನವು ಅಗಿಹ ಗುರುಪಾದದಿ ಪ್ರದಕ್ಷಿಣೆವೆ ಗುರುನಾಮವೇ ಸದ್ಗತಿ ಮುಕ್ತಿಗಳು 6 ಆತ್ಮಾನುಭವ ಗುರುದಾಸರಿಗಲ್ಲದೆ ಬಲ್ಲವೇನು ಪಶುಪ್ರಾಣಿಗಳು ಸಾಕ್ಷಾತ್ಕಾರಗಳು ಭಾಸ್ಕರ ಸ್ವಾಮಿಗಳು ತ್ರಾಹಿ ಜೀವನಮುಕ್ತಿಗಳು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನಜ್ಞಾನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ಮಾರನಯ್ಯನ ಚದುರನ ತಂದುತೋರು ವೆಂಕಟರಮಣನ ಪ. ನಲ್ಲ ನುಡಿದರೆ ನುಡಿದರಗಿಣಿಯನು ನಾಚಿಸುವಚೆಲ್ವಮೊಗದಿ ಶಶಿಯನುಗೆಲ್ವ ಭಾರಿಯ ಸೊಬಗ ತೋರಿಫುಲ್ಲಬಾಣನ ಜರೆವನೊ 1 ಕಂಬನಿಯ ತೊಡೆದು ತನ್ನ ಮೊಗವಚುಂಬಿಸಲು ತರುಣಿ ತನ್ನ ಬಾಯತಾಂಬೂಲವನಿತ್ತು ಎನ್ನಮನ ದ್ಹಂಬಲ ಸಲಿಸಲು ಪೂರ್ಣ 2 ಇಂದೆನ್ನನಗಲಿದರೆ ಮನದಕುಂದು ಬಿಡಿಸುವನದಾರೆಇಂದುಮುಖಿ ಕರೆದು ತಾರೆ ಹಯವದನನಬಂದು ಬೇಗದಲಿ ಸಾರೆ 3
--------------
ವಾದಿರಾಜ
ಯತಿಗಳು ಇರುವರ್ಯತಿಗಳ್ಹನ್ನೆರಡು ಮಂದಿ ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ ಟೀಕೆ ಬರೆದ ಜಯ ಮಹರಾಯರಿವರು ಪಾಲಿಸೆನ್ನನು ಜಯರಾಯ ಪ ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು ಶಿಷ್ಯತ್ವ ವಹಿಸಿಕೊಂಡು ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ ಗಂಟ್ಹೊತ್ತು ತಿರುಗುತ ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ ಳುತ ಪ್ರಕಟವಾದರು 1 ಗೋವುಸುತನ ಜನ್ಮ ನೀಗಿ ಮಂಗಳವೇಡಿ ಸಾಹುಕಾರನ ಸುತನಾಗಿ ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ ಮಂಡಿಬಾಗಿ ನೀರನು ಕುಡಿಯ- ಲಾಕ್ಷಣ ನೋಡಿ ಕರೆತರಲವರ ಗುರುಗಳ ಪಾದಕÀ್ವಂದನೆ ಮಾಡಿ ನಿಂತರು 2 ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ ಕೊಟ್ಟು ಕಾಯ್ಕರದಲಿ ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು ಉಟ್ಟು ದಂಡ ಕಾಷ್ಠವ್ಹಿಡಿದು ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು ಹುಡುಕುತ್ತ ಬಂದರು 3 ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ ಧೋಂಡು ರಘುನಾಥನ ಕರಕೊಂಡು ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ ಮಂಡಿಗಿ ಮೃಷ್ಟಾನ್ನ ಉಣಿಸಿ ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ ಮಾಡಿಸ್ಯಾರತಿಯ ಬೆಳಗೋರು 4 ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ ಇಟ್ಟು ತಾಂಬೂಲ ಬು- ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ ಅಚ್ಚಮಲ್ಲಿಗೆ ಮಾಲೆ ಫಲಗಳು ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು ಕುಳಿತಿರಲರ್ಥಿಯಿಂದಲಿ 5 ಮಡದಿ ಮಂಚಕೆ ಬಂದ ಸಡಗರವನು ನೋಡಿ ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ ಚಾಚುತಾರ್ಭಟಿಸಿ ಬರುತಿರಲ- ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು ಹಡೆದವರು ಬಾಯ್ಬಿಡುತ ಬಂದರು 6 ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ ನಾವು ಮಾಡಿದಪರಾಧ ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ ನೋಡಿ ಕರೆತಂದಾಗ ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು ಧನ್ಯರಾದೆವೆಂದರು 7 ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ- ವತಾ ಪೂಜೆಗಧಿಕಾರ ಮಾಡಲು ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ- ವೆಂದೆನಿಸಿ ಮೆರೆವರು ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ ಸಜ್ಜನ ಶಿರೋಮಣಿ 8 ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ ತಿದ್ದಿ ಟೀಕೆ ಟಿಪ್ಪಣಿ ಮಾಡಿ ಪದ್ಮನಾಭ ಭೀಮೇಶಕೃಷ್ಣಗೆ ಪರಮ ಭಕ್ತರೆನಿಸಿ ಮೆರೆವರು ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು ಸರುವ ಲೋಕದಿ 9
--------------
ಹರಪನಹಳ್ಳಿಭೀಮವ್ವ
ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ. ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ1 ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ2 ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು 3 ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು 4 ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ 5 ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ6 ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ 7 ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ 8 ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು 9
--------------
ಗಲಗಲಿಅವ್ವನವರು
ರುದ್ರಕುಮಾರನ ಚರಣಕ್ವಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸು - ಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ಧವಾಗಿ ಕೊಡು ಮತಿಯ 1 ಶ್ರಾವಣಮಾಸ ಶುಕ್ಕುರುವಾರ ಶುಭಮೂರ್ತೆ (ಮುಹೂರ್ತೆ?) ಕಾಲದಿ ಕಮಲಾಕ್ಷಿಯನು ಆಲಯದೊಳಗಿಟ್ಟಾದರದಿಂದ ಪೂಜಿಸೆ ಬೇಡಿದಭೀಷ್ಟ ನೀಡುವಳು 2 ಇರುತಿರಲೊಂದು ಪಟ್ಟಣದಲ್ಲಿ ರಾಜನು ತನಯರಿಲ್ಲದ ಕಾರಣವು ವಿವಹದುತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳಾತನಾಯುಧವ 3 ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನು ನೆಟ್ಟನೆರಡು ಕಾಲು ಚಾಚಿ ಕುಳ್ಳಿರಲಾಗ ತಟ್ಟನೆ ದಾಟಿ ನಡೆದನು 4 ಮೂರು ತಿಂಗಳು ಗರ್ಭಸಾಕ್ಯಾ (ವಾಸಕ್ಕಾ?)ಗಿ ಬಂದಿತು ನೀನೀಗ ದಾಟಿ ಪೋಗುವರೆ ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು ತಾಳಿದ ಪರಮ ಹರುಷವನು 5 ಸದ್ದು ಮಾಡದೆ ಸೂಲಗಿತ್ತಿ ಕರೆಸಿ ತಾ- ನಿದ್ದ ವಾರ್ತೆಗಳ ಹೇಳಿದಳು ಮುತ್ತಿಲು ತುಂಬ್ಹೊನ್ನು ಕೊಡುವೆ 6 ಹುಡುಕುತ ಬಂದಳು ಕಡೆಯ ಬಜಾರಕ್ಕೆ ಬಡವ ಬ್ರಾಹ್ಮಣನ ಮಂದಿರದಿ ಮಡದಿಗೆ ಮೂರು ತಿಂಗಳು ಗರ್ಭವಾಗಿದೆ ಕÀಡೆಹಾಯ್ಸಲೆನ್ನ ಕರೆಸೆಂದ್ಲು 7 ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು ಏಳು ತಿಂಗಳು ಹೂವ ಮುಡಿಸಿ ಎಂಟು ತಿಂಗಳಿಗೆ ಶ್ರೀಮಂತದುತ್ಸವ ಮಾಡಿ ಬಂತಾಗ ನವಮಾಸಗಳು 8 ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ ಕಟ್ಟಿ ಕಣ್ಣುಗಳ ನಿಚ್ಚಣಿಕೆ ಹತ್ತಿ ಇಳಿದು ಹಡೆದಳ ಗಂಡುಕುಮಾರನ ಎತ್ತಿಕೊಂಡೊಯ್ದಳಾಕ್ಷಣವೆ 9 ಕಲ್ಲು ಗುಂಡನೆ ಹಡೆದಿಯೆ ನೀನೆಂಬಂಥ ಸೊಲ್ಲು ಕೇಳುತಲೆ ತಲ್ಲಣಿಸಿ ಎಲ್ಲಿದ್ದರೆನ್ನ ಕುಮಾರನು ಸುಖಬಾಳಲೆಂ- ದಲ್ಲಿ ನೇಮವ ನಡೆಸಿದಳು 10 ಜಾತಕ ಬರೆಸಿ ಸಕ್ಕರೆ ಸಗಟದಿಂದ್ಹಂಚಿ ದಕ್ಷಿಣೆ ತಾಂಬೂಲ ಸಹಿತ ಬ್ರಾಂಬರಿಗೆಲ್ಲ ಇಟ್ಟು ಭೋಜನವ ಮಾಡಿಸಿದ 11 ನಾಮಕರಣ ಜಾವಳ ಜುಟ್ಟು ಉಪÀನಯನ ಪ್ರೇಮದಿಂದ್ವಿದ್ಯವ ಕಲಿಸಿ ಸೋಮನಂದದಿ ಹೊರಗ್ಹೊರಟು ತ- ಮ್ಮಮ್ಮನ ನೋಡಿ ಮೋಹಿಸಿದÀನಾಕ್ಷಣದಿ 12 ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ ಕಟ್ಟಿದ ಗೋವು ಕಾಣದಲೆ ವತ್ಸದ ಕಾಲು ತುಳಿಯಲಾಗ ಅದು ಬಾಯಿ ಬಿಟ್ಟೊದರಿತು ಭಯದಿಂದ 13 ಅಮ್ಮ ನೀ ಬಾರೆ ತಮ್ಮಮ್ಮನರಿಯದವ ನಮ್ಮನು ಬಲ್ಲನೆ ಒಮ್ಮ್ಯಲ್ಲದೆರಡುಬಾರ್ಯಾಲಿಸ್ಯದರ ಮಾತು ತಮ್ಮಿ ್ಹರಿಯರನು ಕೇಳಿದನು 14 ಮಂದಾಕಿನಿಯ ಸ್ನಾನವ ಮಾಡಿ ಬಂದರೆ ಸಂದೇಹ ಪರಿಹಾರವಾಗುವುದು ಹಾ- ಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ ಗಂಗಾಯಾತ್ರೆಗೆ ತೆರಳಿದನು 15 ನಡೆದು ಬಂದನು ನಡುಮಾರ್ಗದಿ ಪಟ್ಟಣ ಹಡೆದ ಮನೆಯ ಬಾಗಿಲಲ್ಲಿ ಕೊಡಬೇಕು ನಮಗಿಷ್ಟು ಸ್ಥಳಗಳೆಂದೆನುತಲಿ ನುಡಿದು ಪವಡಿಸಿದ ತಾನಲ್ಲಿ 16 ಹೊರಗಿಂದ ಶೆಟವಿ ಬಂದಳು ಮಹಾಲಕ್ಷುಮಿ ಒಳಗಿಂದ ಬಂದಳು ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು ಸಿಡಿದು ಸಾ(ಸಹ?)ಸ್ರೊ ್ಹೀಳಾಗೋದೆನಲು17 ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ ಬದಿಯಲ್ಲಿ ಬದುಕಿದ್ದ ಶಿಶುವು ಇದು ನಿನ್ನ ಪುಣ್ಯದಿಂದುಳಿದಿತೆಂದೆನುತಿರೆ ಅಧಿಕ ಸಂತೋಷವಾಗಿ ಹೊರಟು 18 ಭಾಗೀರಥಿಯ ಸ್ನಾನವಮಾಡಿ ತಾನು ಪ್ರ- ಯಾಗಕೆ ನಡೆತರಲು ಬ್ಯಾಗ ಮಾಡಿದ ದಾನಧರ್ಮಕಾರ್ಯಗಳ ತಾ- ನಾಗ ಕಂಡನು ಚತುರ್ಹಸ್ತ 19 ನಾಲ್ಕು ಹಸ್ತಗಳ ಕಂಡಕಾರಣೇನೆಂದು ವ್ಯಾ- ಕುಲದಿಂದ ಕೇಳಿದನು ಸಾಕಿದವರು ಹಡೆದವರುಂಟು ನಿನಗೆಂದ್ವಿ- ವೇಕಬುದ್ಧಿ ಅವರು ಹೇಳಿದರು 20 ಗೊತ್ತಿಲೆ ಬಂದನು ಪಟ್ಟಣದೊಳಗೊಂಡು ಹೆತ್ತರಂದಿನದ (?) ಮಂದಿರದಿ ಹೊಸ್ತಿಲೊಳಗೆ ಅಡ್ಡಮಲಗಿದ್ದ ಕಾಲಕ್ಕೆ ಮತ್ತಾಗ ಬಂದಳು ಶೆಟವಿ 21 ಚೊಚ್ಚಿಲ ಮಗನ ದಾಟಲು ನಿನ್ನ ಶಿರವು ಬಿಚ್ಚಿ ಸಾಸ್ರೊ ್ಹೀಳಾಗೋದೆನಲು ಲಕ್ಷ್ಮಿ ಮಾತಿಗೆ ತಿರುಗಿದಳೆನ್ನ ತುತ್ತಿಗೆ ಮಿತ್ರ್ಯಾದ ಪಾಪಿ ಎಂದೆನುತ 22 ಸತ್ಯವಂತನೆ ನಿನ್ನ ಪುಣ್ಯದಿಂದಿಬ್ಬರು ಪುತ್ರರು ಉಳುದÀರಂತಿಹರು
--------------
ಹರಪನಹಳ್ಳಿಭೀಮವ್ವ
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಲಾಲಿ ಶ್ರೀ ಕೃಷ್ಣ ಬಾಲ ಲಾಲಿ ನಂದ ಯಶೋದೆ ಲೀಲ ವೇಣುಗೋಪಾಲ ಪ. ವಸುದೇವ ಸುತನಾಗಿ ಬಂದು ಎಸೆವೊ ಗೋಕುಲದಲಿ ನಿಂದು ಅಸುರಕುಲ ಸಂಹಾರಕೆಂದು ನಸುನಗುತ ಗೋಪಿಯರ ವಶವಾಗ್ವೆನೆಂದು 1 ಪುಟ್ಟಿದಾ ಶಿಶುವನ್ನೆ ನೋಡಿ ನಕ್ಷತ್ರ ರೋಹಿಣಿ ಎಂದು ತಿಳಿದು ಅಷ್ಟಜನ ಸಹಿತ ಗೋಕುಲದಿ ಸಂತುಷ್ಟಿಯೊಳು ನಾಮಕರಣವ ಮಾಡಿ ನಲಿದೂ 2 ವೇದ ಘೋಷಗಳಾಗುತಿರಲೂ ಆದಿ ಮೂರುತಿಗೆ ಮೋಹದಲಿ ಕೃಷ್ಣನೆಂದ್ಹೆಸರನಿಡಲೂ ಸಾದರದಿ ಗೋಪ ದಕ್ಷಿಣೆ ತಾಂಬೂಲ ಅಗಾಧದಲಿ ಬ್ರಾಹ್ಮಣರಿಗೆ ಕೊಟ್ಟು ನಲಿದೂ 3 ಚತುರ ವೇದದ ನಾಲ್ಕು ಸರಪಣಿಯ ಹೂಡಿ ಚತುರ ದಿಕ್ಕನೆ ನಾಲ್ಕು ಚೌಕ ತೊಟ್ಟಿಲನೆ ಕಟ್ಟಿ ಚತುರ್ಮುಖನಯ್ಯನ ತೊಟ್ಟಿಲೊಳಗಿಟ್ಟು ಅತಿಶಯದಿ ನಾರಿಯರು ತೂಗಿದರು ಹರಿಯಾ ಲಾಲಿ4 ಮಚ್ಛಕೂರ್ಮನೆ ವರಹ ಲಾಲಿ ತುಚ್ಛ ದೈತ್ಯನ ಕೊಂದ ನರಹರಿಯೆ ಲಾಲಿ ಅಚ್ಚವಾಮನ ಭಾರ್ಗವ ಕೃಷ್ಣ ಲಾಲಿ ಸಚ್ಚ ಬೌದ್ಯಕ ಶ್ರೀ ಶ್ರೀನಿವಾಸನೆ ಲಾಲಿ 5
--------------
ಸರಸ್ವತಿ ಬಾಯಿ