ಒಟ್ಟು 180 ಕಡೆಗಳಲ್ಲಿ , 54 ದಾಸರು , 150 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿವಳಿಕೆಯಲಿ ನಡಿ ಮನುಜಾ ಯಮ-ನಲಿ ಆಗೊ ಭವಣೆಯು ತಪ್ಪದು ನೈಜಾ ಪ. ಸುಳ್ಳು ಮಾತುಗಳಾಡೋರಿಲ್ಲೆ ನಿನ್ನಹಲ್ಲು ಕಿತ್ತಿಸಿ ಕಡಿ ಘಾಕುವರಲ್ಲೆಕಳ್ಳತನವ ಮಾಡೋದಿಲ್ಲೆ ಬೆನ್ನಸೆಳ್ಳಿಯಬ್ಬಿಸೆ ಕೈಯ ಕಡಿಸುವರಲ್ಲೆ 1 ದತ್ತಾಪಹಾರ ಮಾಡೋದಿಲ್ಲೆ ಜಿಂಹ್ವಕತ್ತರಿಸುವರೆಲೊ ಅಂತಕರಲ್ಲೆವೃತ್ತಿಛೇದನ ಮಾಡೋದಿಲ್ಲೆ ನಿನ್ನಎತ್ತಿ ಹಾಕುವರೊ ಕುಂಭೀಪಾಕದಲ್ಲೆ 2 ಪರಸತಿಯರನಪ್ಪೋದಿಲ್ಲೆ ನಿನ್ನಉರಿವ ಉಕ್ಕಿನ ಕಂಭ ತೆಕ್ಕಿಸೋರಲ್ಲೆಮರವಿ ಮೋಸವ ಮಾಡೋದಿಲ್ಲೆ ನಿನ್ನಪರಿಪರಿ ಭವಣಿಯ ಬಡಿಸುವರಲ್ಲೆ 3 ಪ್ರಾಣಹಿಂಸೆಯ ಮಾಡೋದಿಲ್ಲೆ ಕಲ್ಲಗಾಣದೊಳಗೆ ಇಕ್ಕಿ ತಿರಗಿಸೋರಲ್ಲೆಮಾನಿನಿಯರ ನೋಡೋದಿಲ್ಲೆ ಶಸ್ತ್ರಪೋಣಿಸಿ ಕಂಣಾ ಮೀಟಿಸುವರೋ ಅಲ್ಲೆ 4 ಹೇಸಿ ವಿಷಯ ನಂಬೋದಿಲ್ಲೆ ಸೀಸ ಕಾಶಿ ಹೊಯ್ಯುವರೆನೊ ನಿನ್ನ ಬಾಯಲ್ಲೆದೂಷಣ ನಿಂದಗಳಿಲ್ಲೆ ಬಲುದೋಷಿಯೆನ್ನುತ ನಿನ್ನ ಘಾಸಿಪರಲ್ಲೆ 5
--------------
ಐಹೊಳೆ ವೆಂಕಟೇಶ
ದಾಸದಾಸ್ಯವ ದಯಮಾಡಿ ಸಲಹೋ ಕರುಣಾ ಸಮುದ್ರ ಹರಿಯೆ ಸುಳಿ ಘಾಸಿಮಾಡದ ಮುನ್ನ ಪ. ಅಂತಪಾರಗಳಿಲ್ಲವಿದಕಿನ್ನು ಪ್ರತಿ ಕ್ಷಣ ಚಿಂತನೆಯಿಂದಲಿ ಬಾಧೆಗೊಳಿಸುವುದು ಕಂತುಜನಕ ನೀನಿತ್ತದನುಂಡು ಸುಖಿಸದೆ ಭ್ರಾಂತಿ ಬಡಿಸುವದನೆಂತು ವರ್ಣಿಸಲಿನ್ನು 1 ತನ್ನಿಂದಧಿಕ ಕಷ್ಟ ಪಡುವ ಜನರ ಕಂಡು ಭಂಡಾಗಿರದಿ ಪರರ ಹೊನ್ನು ಹೆಣ್ಣುಗಳಲಿ ಕಣ್ಣಿಟ್ಟು ಹಗಲಿರು- ಳುಂಣಲೀಯದು ನಿದ್ರೆ ಕಣ್ಣಿಗೆ ಬಾರದಿನ್ನು 2 ಭವರೋಗ ವೈದ್ಯ ನೀನೆಂದು ಸಕಲ ಶ್ರುತಿ ನಿವಹವು ನಿನ್ನ ಕೊಂಡಾಡುವುದು ನವವಿಧ ಭಕುತಿ ಮಧ್ವ ತವಕದೊಳೆನಗಿತ್ತು ಭುವನ ಪಾವನ ಶೇಷಗಿರೀಶಾ ನೀ ದಯದೋರು 3
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸನಾದರರೂ ಆದ ಘಟಿಕನಾದ ಸೋಜಿಗಾ ವಾಸುದೇವನ ಬಿಡದೆ ಭಜಿಸಿ ಸುಖಿಪ ಮತ್ತೀಗಾ ಪ ಮಂದಿ ಒಳಗೆ ಶೇರದಾಗಿ ನೊಂದು ಬಳಲಿದಾ ಭವ ತಾಪಂಗಳ ಹೊಂದಿ ಅಳಲಿದಾ ಮಂದಿರವೆಲ್ಲೆ ಗೃಹಿಣಿ ಸುತರೆಲ್ಲೆಂದ್ಹಲುಬಿದಾ ಪಾದ ಪಿಡಿದಾನಂದ ತಾಳಿದಾ 1 ಪಿಡಿದ ಕಾರ್ಯ ಬಿಡದೆ ... ಒಡನೆ ಪೀಡೆ ರಾಶಿಯಾಗಿ ಒಡಲ ಮುಸುಕಿತು ಕಡು ಬಡತನದುರಿಯು ಅಡರಿ ಒಡಲ ಸುತ್ತಿತು ಜಡಜನಾಭನೊಲುಮೆಯಿಂದ ಎಡರು ಪೋಯಿತು 2 ಭರದಿ ಸತೀ ಸುತರು ದುಃಖ ಶರದಿ ವಿಹ್ವಲಾ ಇರದೆ ವ್ಯಾಧಿ ಜಲಂಗಳಾ ಉರಿಯ ಉಮ್ಮಳಾ ತೆರೆಯ ಕಂಗಳಿಲ್ಲಾ ಗತಿಯು ಧರೆಯ ಕತ್ತಲಾ ಪೊರೆದ ನರಸಿಂಹವಿಠಲಾ ನಿರುತ ನಿರ್ಮಲಾ 3
--------------
ನರಸಿಂಹವಿಠಲರು
ದುರಿತಾರಿಯೊಳು ಮನವಿರಿಸಿ ಸೌಖ್ಯವತಾಳು ನರಕವು ಬರದೊ ಮಾನವಾ ಪ ಪರಿಪರಿ ಜನ್ಮದೆ ಕೊರಗಿ ಕಂಗೆಡಬೇಡ ಸ್ಥಿರವಲ್ಲವೀ ದೇಹವೂ ಭರವಸದಿಂದ ಅ.ಪ ಮಂದಮತಿಯನಾಂತು ನೊಂದು ಸಾಯಲಿಬೇಡ ಕುಂದುಕೊರತೆಗಳಿಲ್ಲವೋ ವಂದಿಸಲು ಹರಿಯ 1 ಎರಡು ಕಂಬದ ಮೇಲೆ ಮೆರೆವ ಗೋಪುರವಿದು ಬಿರುಗಾಳಿಯಿಂದಲೋ ಉರುತರ ಮಳೆಯೊಳೊ ಉರುಳಿ ಬೀಳುವುದೆಂಬುದು ಬರೆದಿಡೊ ಮೂಢಾ 2 ನೀರ ಬೊಬ್ಬುಳಿಯಂತೆ ಆರಿಹೋಗುವುದಿದು ಸೇರದು ಪದುಮಾಕ್ಷನಾ ಆರುದಿನ ಬಾಳಿಗಾರು ಸಮರೆನಬೇಡ ಆರಡಿ ಕಮಲವುತಾ ಸೇರುವವೊಲು 3 ಎನಗೆ ಮುಂದೊದಗುವ ಜನ್ಮಕೋಟಿಗಳೊಳು ಅನುಗಾಲ ದೇಶವಸ್ಥೆಗಳೊಳಗೂ ವನಜನಾಭನೆ ನಿನ್ನ ಘನಪಾದಕಮಲವ ನೆನೆವ ನೆಲೆಸುವಂದದೆ ಅನವರತ ಬೇಡೋ 4 ಜೀವಾತ್ಮ ಪೋಪಾಗ ದೇವದೇವನ ಮರೆವ ಭಾವಗಳೊಳುದಯಿಪವು ಸಾವಕಾಶವ ತೊರೆದು ಮಾಂಗಿರಿರಂಗನ ದಿವ್ಯನಾಮವ ನೆನೆದು ಭಾವುಕನಾಗು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಧನವು ಇದ್ದರೆ ಸಾಕು ಜನರಿಗೆ ಧನವು ಇದ್ದರೆ ಸಾಕು ಪ ಧನದೋರದಾತಗೆ ಗುಣವಿಲ್ಲವನುದಿನ ಧನವಿಲ್ಲದಾತನು ವನದ ಪಾಮರನು ಅ.ಪ ತಂದೆ ತಾಯಿಗಳಿಲ್ಲ ಬಂಧುಬಾಂಧವರಿಲ್ಲ ಹಿಂದುಮುಂದುದಿಸಿದ ತಮ್ಮಂದಿರನೊಲ್ಲ 1 ಒಡವೆಯುಳ್ಳಾತಗೆ ನಡೆಯಬಾರದು ಕಾಲು ನಡೆವಾಗ ಬಡವರ ಎಡವುತ್ತ ಕಾಣನು 2 ಅರ್ಥವ ಪುಂಜಕನರ್ಥ ಯಥಾರ್ಥವು ಧೂರ್ತನಾದರು ತಾನು ಕೀರ್ತಿಸಿಕೊಂಬನು 3 ಸೆಡವೆಂಬ ಪುತ್ರನು ಒಡಲೊಳು ಜನಿಸುವ ಮಡದಿ ಗರ್ವಿತೆಯಾಗಿ ಪಿಡಿದಳು ಕರವನು 4 ಉತ್ತಮೋತ್ತಮನಾಗಿ ಅಧಮನುತ್ತಮನಪ್ಪ ಮೃತ್ಯುಮಾನಿನಿ ವ್ಯರ್ಥ ಮಗನ ಪಡೆಯುವಳು 5 ಉಡಿಗೆ ಆಭರಣಕ್ಕೆ ನುಡಿಯಬಾರದು ಬಾಯಿ ಕಿಡಿಯಿಡೆ ಕಂಗಳು ಜಡದ ಕರ್ಣಗಳು 6 ಕಟ್ಟಲು ಅರ್ಥವ ಹೊಟ್ಟೆಯೊಳು ಹಸುವಿಲ್ಲ ಭ್ರಷ್ಟ ಅನಾಥರ ಶ್ರೇಷ್ಠ ಸೃಷ್ಟಿಯೊಳಾತ 7 ಬಡಮನಸಾಗಿಯೆ ನುಡಿಯ ಬಂದವನೊಳು ಸಡಗರದಿಂದಲೆ ಸೆಡಕ ತೋರುವನು 8 ಅರಸು ಆತನ ಕಂಡು ಕರೆಸಿ ಉಚಿತವಿತ್ತು ಸರಸವನಾಡಿ ವಿಹರಿಸುತ್ತಲಿಹನು 9 ಫಣಿಗಿರಿಯೊಳು ನಿಂತ ವರಾಹತಿಮ್ಮಪ್ಪನು ಹಣವನಿತ್ತವರಿಗೆ ಉಣಿಸುವಭೀಷ್ಟವ 10
--------------
ವರಹತಿಮ್ಮಪ್ಪ
ಧರ್ಮದಮಾತು ಹಳಸಿ ಬಂದಿತು ಯುಗ ಧರ್ಮದಿಂದದು ವನವನು ಸೇರಿತು ಪ ಆಟ ನೋಟಕೆ ಉಂಟು ಪೋಟ ಪುಂಡರಿಗುಂಟು ಮಾರ ಕಟ್ಟಲುಂಟು ಕಾಟಕ ದೊರೆಗೆ ದಂಡವನು ಕೊಡಲಿಕುಂಟು ಚಂದ್ರ ಜೂಟಗರ್ಪಿತವೆಂದು ಕೊಡಲು ದ್ವಿಜರಿಗಿಲ್ಲ 1 ಕಲ್ಲು ಮಣ್ಣಿಗೆ ಇಕ್ಕಲುಂಟು ಆಕಳ ಎಮ್ಮೆ ಕೊಳ್ಳಲಿ ಕುಂಟು ಕೈಯೊಳು ಹೊನ್ನು ಚಿನ್ನಗಳ ಬಂಗಾರ ಮಾಡಿಸಲುಂಟು ಇಲ್ಲದೇಹಿ ಎಂದು ಯಾಚಿಪದ್ವಿಜರಿಗೆ 2 ಬಣ್ಣ ಸಣ್ಣಗಳ ಕೊಡಲಿ ಕುಂಟು ಕಾಮನ ತನ್ನ ಕೈಯಾರೆ ಲಕ್ಷ್ಮೀಶಗರ್ಪಿತವೆಂದು ಮನ್ನಿಸಿ ದ್ವಿಜರಿಗೀಯಲಿಕೆ ದುಡ್ಡುಗಳಿಲ್ಲ 3
--------------
ಕವಿ ಪರಮದೇವದಾಸರು
ನಡುನೀರೊಳಗೆ ಕೈಯ್ಯ ಬಿಡುವುದೆ ಸಿರಿನಲ್ಲ ಕಡೆ ಹಾಯಿಸದೆ ಮೋಸ ಕೊಡುವುದು ತರವಲ್ಲ ಪ. ನಾನಾ ವಿಧದ ನೀಚಯೋನಿಗಳನು ದಾಟಿ ಮಾನುಷೋತ್ತಮ ಮಧ್ವಮತದಿ ಪುಟ್ಟಿ ನೀನೆ ಮುಕ್ತಿದನೆಂಬೊ ಜ್ಞಾನವಂತರ ಭೇಟಿ ನಾನೈದಬೇಕೆಂದು ಧ್ಯಾನಗೊಂಡಿಹೆನೆಂದು 1 ವೇದ ವಿಹಿತಕರ್ಮವಾದರು ಕ್ರಮವಾಗಿ ಸಾಧಿಸಲಿಲ್ಲ ಸಂತತಿಗಳಿಲ್ಲ ಪಾದ ಪದ್ಮ ಪರಾಗ ಮೋದಾನುಭವದಿ ಶುಭೋದಯಗೊಳಲಿಲ್ಲ 2 ಕೆಲವು ಕಾಲವ ಬಾಲ್ಯದಲಿ ಕಳೆದೆನು ಮತ್ತೆ ಲಲನೇರ ಮೋಹದಿ ಬಳಲಿದೆನು ಬಲವು ಕುಂದುತ ದೇಹ ಗಳಿತವಾಗುವುದಿನ್ನು ನಳಿನಾಕ್ಷ ಪದಪದ್ಮ ನೆಳಲನೈದದ ಮುನ್ನು 3 ಮೂರೊಂದು ಪುರುಷಾರ್ಥ ತೋರುವ ಪುರುಷ ಶ- ರೀರವ ಕರುಣಿಸಿದವನೆ ನೀನು ಮೂರಾರು ವಿಧ ಭಕ್ತಿ ಸಾರುವ ತಿಳಿಸಿ ಕಂ ಪಾದ ಪರಿಯಂತ 4 ಸಂಚಿತಾಗಾಮಿ ದುಷ್ಕøತಗಳನಳಿಸಿ ಪ್ರಾ ಪಂಚಿಕ ಭೋಗ ಪೂರಣಗೊಳಿಸಿ ಪಂಚಭೌತಿಕ ಹರ ವಂಚನೆ ಮಾಡದೆ ಶ್ರೀ ವಿ ರಿಂಚಿವರದ ದೇವ ವೆಂಕಟೇಶ ನೀ ಕರುಣಿಸು 5
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನಬದುಕು ಆಗಲಿಲ್ಲ ಪ ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲಪಂಡಿತತ್ವದ ಪರಮಾರ್ಥಕಿಲ್ಲಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲಕಂಡ ಕಂಡಂತೆ ಚರಿಸುವಂತಾಯಿತೆ 1 ಅರಿವು ಮರೆವು ಇಲ್ಲ ಆಸೆಗಳೇನಿಲ್ಲಇರುಳು ಹಗಲು ಎಂಬುದೆರಡಿಲ್ಲವೋಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಮರುಳು ಮರುಳು ಆಗಿ ತಿರುಗುವಂತಾಯಿತು 2 ಚಿದಾನಂದ ಗುರುವಿನ ಚಿತ್ತದಿ ಪಿಡಿದರೆಒದವಿದ ಬ್ರಹ್ಮಾನಂದವ ಸವಿದುವಿಧವಿಧವಾದ ಬೆಳಕಿನೊಳಾನಡಗಿರೆಇದರಿಂದಲಿ ಇಂತಾದುದಿದೆಲ್ಲವು3
--------------
ಚಿದಾನಂದ ಅವಧೂತರು
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ
ನಾರಾಯಣಯೆಂಬೊ ನಾಮವನು ನೆನೆದರೆ ಹಾರಿ ಹೋಹುದು ಜನ್ಮಜನ್ಮದ ಪಾಪಗಳು ಮುಕ್ತಿದೋರಿಸು ಮುರಾರಿ ಪ. ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ ಸುಕುಮಾರನೆನಿಸಿಕೊಂಡು ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ ದುಷ್ಕøತ್ಯದ ಫಲದಿಂದ ಅಂತ್ಯಜಳನು ಕಂಡು ಕಾ- ಅರಿತರಿಯದೆ 1 ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ ಹುಲ್ಲೆನೋಟದ ಭಾವಕಿ ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ ಸೆರಗ ಪಿಡಿದ 2 ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು ಹಿಂಡು ಬಲು ಘೋರ ಎನಿಸಿಪ್ಪುದು ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ ಛಲವೊಂದೆ ಎನಗೆ ಎಂದ3 ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ ನಿನಗೊಲಿವೆನೆಂ[ದಳು] ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ ಮೊತ್ತಕೊಳಗಾಗದಿರೊ 4 ಆಗದಾಗದು ಎನ್ನ ಕುಲಬಂಧು ಬಳಗವÀನು ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು 5 ಹಾಲಂತ ಕುಲವ ನೀರೊಳಗದ್ದಿಪೂರ್ವದ ಶೀಲವನಳಿದು ಸತಿಯೊಡಗೂಡಿ ತಾನು ಚಾಂ- ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ ಆಲಂಬನದಲಿ ಅಜಾಮಿಳನು ಇರುತಿರಲಾಗ ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು ಯಮನಾಳುಗಳು ಇಳಿದರಾಗ 6 ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ] ಘುಡು‌ಘುಡಿಸುತಲಿ ನಿಂತರು ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು ಲಾಲಿಸಿದ ಸ್ವಾಮಿ 7 ಮರಣಕಾಲದಿ ಶ್ರೀಹರಿಯೆಂಬ ನಾಮವನು ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ ಉರದೊಳೊಪ್ಪುವ ತುಳಸಿದಂಡೆ ಪೀತಾಂ- ಬರವು ಗದೆ ಶಂಖ ಚಕ್ರ ದ್ವಾದಶನಾಮವನು ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು 8 ಪುಂಡರೀಕಾಕ್ಷನ ಭೃತ್ಯನ ಭಾಧಿಸುವ ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ- ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ ಉದ್ದಂಡರಹುದೆಂದರಾಗ 9 ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ 10 ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು ಬಿದ್ದ ಕಾಯವನು ಭಾದಿಸಿದವರ್ಯಾರು ಉ- ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ ಅದ್ದಿದೆ ನೂರೊಂದು ಕುಲವ ನರಕದೊಳೆಂದು ತಾನತಿ ಮರುಗುತ 11 ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧÀ ಜನರು ಮದನ ಬಾಧೆಗೆ ಸಿಲುಕಿ ದುಷ್ಟ ತಾಪವ ಪೊತ್ತೆ ಜನನಿಂದಕನಾದೆ ಅಪ್ರತಿಮ ಅನಂತಪಾತಕಿ ಭುವನದಲಿ ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ ವಿಧಿ ಎಂದನು 12 ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು ದುಷ್ಟಯವÀುದೂತರನು ಕಂಡು ಚಂಡಾಲತಿಗೆ ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ ಗಟ್ಯಾಗಿ ಧ್ಯಾನಿಸಿದನು 13 ತನ್ನ ನಾಮವ ನೆನೆವ ಭಕ್ತರಾದವರೆಲ್ಲ ಧನ್ಯರಿವರಹುದೆಂದು ಜಗವರಿಯಬೇಕೆಂದು ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು ಎನ್ನಯ್ಯ ಏಳೆಂದು ಕೈಲಾಗವÀನು ಕೊಡಲು ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ . ಸನ್ನಿಧಿಗೆ ನಡೆದ 14 ಜಲಜನಾಭನ ದಿವ್ಯನಾಮವನು ನೆನೆದರೆ ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ ಸಲುವರಲ್ಲೆಂದ ಯಮನು ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು 15
--------------
ಹೆಳವನಕಟ್ಟೆ ಗಿರಿಯಮ್ಮ
ನಾರಿಯರಲಿ ಮಾದರಿಯೆಂದೆನಿಸಿರಮ್ಮ ಮೂರುಕುಲಕೆ ಕೀರುತಿಯನು ತನ್ನಿರಮ್ಮ ಸೇರಿದ ಪತಿಮಂದಿರವನುದ್ಧರಿಸಿರಮ್ಮ ಬೇರೆ ಜನಕೆ ಸೋದರಿಯೆಂದರಿಯಿರಮ್ಮ ಅಬಲೆಯರಿರಬಹುದು ದೇಹ ಶಕುತಿಯಲಿ ಪ್ರಬಲಸ್ಥಾನ ನಿಮಗಿಹುದು ಸಮಾಜದಲ್ಲಿ ಶುಭಪರಂಪರೆಗಳ ಪತಿಗೆ ಕೋರಿರಮ್ಮ ಲಭಿಸುವುದತಿಸುಲಭದಿ ಪರಲೋಕವಮ್ಮ ಗೃಹಿಣಿಯೇ ಗೃಹವೆಂಬ ಮಾತನರಿಯಿರಮ್ಮ ಗಹನದ ಸಂಸಾರಪಥವ ಜರಿಯಬೇಡಿರಿ 10 ವಹಿಸಿರಿ ಗೃಹಕೃತ್ಯಗಳನು ಆದರದಲ್ಲಿ ಸಹಿಸಿರಿ ಸುಖದು:ಖಗಳನು ಖೇದವಿಲ್ಲದೆ ಶ್ರದ್ಧೆಯಿರಲಿ ಗೃಹಿಣಿಯ ಕಾರ್ಯದಲಿ ಸರ್ವದ ಸ್ಪರ್ಧೆಯ ಮಾಡಬೇಡಿ ಪುರುಷಗುಚಿತ ಕಾರ್ಯದಿ ತಿದ್ದಿರಮ್ಮ ವಿನಯದಿಂದ ಪತಿಯ ದೋಷವÀ ಹದ್ದಿನಂತೆ ಕಾಯಿರಮ್ಮ ಪತಿಯ ಶ್ರೇಯವ ದೈವದತ್ತವಿಹುದು ನಿಮ್ಮ ಮುಖದ ಕಾಂತಿಯು ಸೇರಿಸಿ ಫಲವೇನು ವಿವಿಧ ಸುಣ್ಣಬಣ್ಣವ ಹೂವುಗಳನು ಕಸಕಲದರ ಗಂಧವಿರುವುದೆ ಯಾವ ಕೃತಕ ಬೇಕಿದೆ ಸ್ವಭಾವ ಶೋಭೆಗೆ 20 ಅನುಗಾಲವು ಊರಿಗೆ ಉಪಕಾರಿಯಾದರು ಮನೆಗೆ ಮಾರಿಯಾಗಬೇಡಿರಮ್ಮ ಎಂದಿಗು ವಿನಯವಿರಲಿ ನಡೆನುಡಿಯಲಿ ಸರ್ವ ಜನರಲು ಪ್ರಣಯ ಸರಸ ಬೇಡಿರಮ್ಮ ಬಂಧು ಜನರಲಿ ದುಡಿದು ದಣಿದು ಉಶ್ಶೆನುತಲಿ ಬರುವ ಪತಿಯಲಿ ಕಿಡಿಕಿಡಿಯಾಗಲಿ ಬೇಡಿರಿ ತರಲು ಮರೆತರೆ ಬಡತನವಿರಬಹುದು ಸದ್ಯ ನಿಮ್ಮ ಪಾಲಿಗೆ ಅಡಿಗಡಿಗದನಾಡಬೇಡಿ ಒಡೆಯನೆದುರಲಿ ನೆರೆಮನೆ ವೆಂಕಮ್ಮನೊಂದು ಸೀರೆ ಕೊಂಡರೆ ಗುರು ಗುರುಗುಟ್ಟುತಲಿ ನೋಡಬೇಡಿ ಪತಿಯನು 30 ಮರುಕದಿ ಸಂತೈಸಲವನು ಮನವು ಕರಗದೆ ಸೆರೆಸೆರೆ ಕಣ್ಣೀರುಗಳನು ಸುರಿಸಬೇಡಿರಿ ತುಳಸಿಯ ಪೂಜೆಯನು ಮಾಡ ಮರೆಯಬೇಡಿರಿ ಕೆಲಸಗಳನು ದಿಟ್ಟತನದಿ ಮಾಡಿ ಮುಗಿಸಿರಿ ಕಲಿಯಿರಿ ಸಂಸಾರದಲಿ ನೆಪ್ಪು ನೇರವ ಹಳಿಯಬೇಡಿರಮ್ಮ ನೀವು ನೆರೆ ಹೊರೆ ಜನರ ಉಳಿಸಿ ಬಳಸಿರಮ್ಮ ತಂದ ಧಾನ್ಯವ ತಿಳಿಸಬೇಡಿ ಮನೆಯ ಗೋಪ್ಯ ಪರರಿಗೆಂದಿಗು ಕಾಲ ಕಳೆಯಬೇಡಿ ಕೆಲಸವಿದ್ದರೆ ಪ್ರಳಯ ಮಾಡಬೇಡಿ ಸಣ್ಣ ಪುಟ್ಟ ಮಾತಿಗೆ 40 ಸೊಟ್ಟ ಬೈತಲೆಯನು ತಗೆಯಲಿಷ್ಟಪಡದಿರಿ ಅಷ್ಟವಕ್ರದುಡುಪುಗಳನು ಧರಿಸಬೇಡಿರಿ ರಟ್ಟು ಮಾಡಬೇಡಿರಮ್ಮ ರೂಪು ರಚನೆಯ ಸಿಟ್ಟು ಮಾಡಬೇಡಿ ಮುದಿಯ ಬುದ್ಧಿವಾದಕೆ ಶ್ರವಣ ಮಾಡಿರಮ್ಮ ಹರಿಯ ಕಥೆಗಳನುದಿನ ಶ್ರವಣ ಮಾಡುವಾಗ ಹರಟೆ ನಿದ್ರೆ ಬೇಡವು ಕಿವಿಯ ಕಚ್ಚಬೇಡಿರಮ್ಮ ಪರರ ವಾಕ್ಯಕೆ ಲವಲವಿಕೆಯು ಬೇಡಿರಮ್ಮ ಚಾಡಿ ಚುದ್ರದಿ ರೂಢಿಯಿಲ್ಲದಿರುವ ನಡತೆ ಬೇಡಿರೆಂದಿಗು ಮೂಢರೆನಿಸಬೇಡಿ ಹಾಡುಹಸೆಯ ಕಲಿಯದೆ 50 ಪಾಡುಪಡುತ ಪತಿಗೆ ಹರುಷನೀಡಿ ಗೃಹದಲಿ ಪ್ರೌಢವಿದ್ಯೆ ಕಲಿತು ದುಡಿಯಬೇಡಿ ಪರರಿಗೆ ಬಣ್ಣವಿಲ್ಲದಿರುವುದು ಬಂಗಾರವಲ್ಲವು ಕಣ್ಣಿಗೆ ಹಿತವಲ್ಲದು ಶೃಂಗಾರವಲ್ಲವು ಉಣಲು ತಾ ದೊರೆಯದಿರಲು ಸಂಪತ್ತಲ್ಲವು ಅನ್ನ ಮಾಡಲರಿಯದಿರಲು ಹೆಣ್ಣದಲ್ಲವು ದುಂದುಗಾರಿಕೆಯನು ಕಲಿಯಬೇಡಿರೆಂದಿಗು ಮುಂದೆ ಕಾಲಚಕ್ರಗತಿಯನು ಮನದಿ ಯೋಚಿಸಿ ಬಂದ ಮಾತುಗಳನು ಬಾಯಿತಡೆದು ಆಡಿರಿ ನಂದಗೋಕುಲವನೆ ಮಾಡಿ ಗೃಹವ ನಗುತಲಿ 60 ಬಳಕೆಯಲ್ಲದಿರುವ ಕಲೆಯ ಕಲಿಯಬೇಡಿರಿ ಕಲಿಸಿರಮ್ಮ ಕೆಲಸಕಾರ್ಯ ಮಕ್ಕಳುಗಳಿಗೆ ಗಳಿಸಿರಮ್ಮ ಪುಣ್ಯಕೀರ್ತಿ ತಿಳಿಯಮನದಲಿ ಸುಲಭವು ಸಾಧನವು ನಿಮಗೆ ಪುಣ್ಯಲೋಕಕೆ ಮನವತಿ ಚಂಚಲತೆಯನ್ನು ಹೊಂದಬಿಡದಿರಿ ಅನುಮತಿ ಕೊಡಬೇಡಿ ದುಷ್ಟ ಜನರ ಬೋಧೆಗೆ ಘನಮತಿಯನು ಪೊಂದಿ ಸತಿಯ ಮಾರ್ಗ ತೋರಿರಿ ಗುಣವತಿಯೆಂದೆನಿಸಿರಮ್ಮ ಹಿರಿಯ ಜನರಲಿ ದುಡುಕಿನ ಹೆಣ್ಣೆಂದು ಹೆಸರು ಪಡೆಯಬೇಡಿರಿ ಸಿಡುಕಿನ ಮೋರೆಯನು ತೋರಬೇಡಿ ಜನರಿಗೆ 70 ಒಡಕಿನ ಬಾಯವಳು ಎಂದು ಎನಿಸಬೇಡಿರಿ ಕೆಡುಕ ಕೋರಬೇಡಿ ಕೋಪದಿಂದ ಪರರಿಗೆ ಧ್ವನಿಯು ಮಧುರವಿರಲಿ ನಿಮ್ಮ ಮಾತುಕಥೆಯಲಿ ಕೆಣಕಬೇಡಿ ಮರೆತುಬಿಟ್ಟ ಜಗಳ ಕದನವ ಇಣಕಿ ನೋಡಬೇಡಿ ಪರರ ನಡೆನುಡಿಗಳನು ಸಾರಥಿಯೆಂದೆನಿಸಿರಿ ಸಂಸಾರ ರಥದಲಿ ವೀರರಮಣಿಯೆಂಬ ದಿವ್ಯ ಕೀರುತಿ ಬರಲಿ ನಾರಿಯರಲಿ ಮಾದರಿಯನು ಪಡೆದು ತೋರಿದ ಭಾರತ ಭೂಮಾತೆಗೆ ಪ್ರತಿಬಿಂಬವೆನಿಸಿರಿ 80 ದೇಶಸೇವೆಯೆಂದು ರಾಜಕೀಯ ಬೇಡಿರಿ ಮೋಸ ಹೋಗಬೇಡಿ ಆಸೆ ತೋರುವ ನುಡಿಗೆ ಕಾಯ ಕ್ಲೇಶ ಬೇಡಿರಿ ಭಾಷಣ ಬಹಿರಂಗದಲ್ಲಿ ಭೂಷಣಲ್ಲವು ಸಿರಿರಮಣಗೆ ತುಳಸಿಗಿಂತ ಪುಷ್ಪವಿಲ್ಲವು ಹಿರಿಯತನಕೆ ಸತ್ಯಕ್ಕಿಂತ ಯುಕ್ತಿಯಿಲ್ಲವು ಅರಸಿ ನೋಡೆ ತಾಯಿಗಿಂತ ನಂಟರಿಲ್ಲವು ಕರಿಮಣಿ ಸಮ ನಾರಿಜನಕೆ ನಗಗಳಿಲ್ಲವು ದಾಸರ ನುಡಿ ಧರ್ಮಗಳ ಪ್ರಕಾಶ ಮಾಡಿತು ಸ್ತ್ರೀ ಸಮೂಹದಿಂದ ನಾಶವಾಗದುಳಿದವು 90 ಆ ಸುಧಾಮ ಸತಿಯರೆ ಈ ದೇಶದ ಸೊಬಗು ಮಾಸದಂತೆ ರಕ್ಷಿಸಿ ಪ್ರಾಚೀನ ನಡತೆಯ ನುಡಿಯಬೇಡಿರಮ್ಮ ಪರರ ವಂಚನೆನುಡಿಯ ಕೊಡಲಿ ಹಾಕಬೇಡಿರಮ್ಮ ಕುಳಿತ ಕೊಂಬೆಗೆ ಇಡಲಿಬೇಡಿ ಮತ್ಸರವನು ದೀರ್ಘ ಕಾಲದಿ ಪುಡಿಯನಿಡಲಿಬೇಡಿರಮ್ಮ ಪುಣ್ಯ ಕಾರ್ಯಕೆ ಸಣ್ಣನುಡಿಗಳೆಂದು ತಿಳಿಯಬೇಡಿರಿವುಗಳ ಭಿನ್ನ ಭಿನ್ನ ದೇಶಕಾಲದನುಭವಗಳಿದು ಬಣ್ಣವತಿಶಯೋಕ್ತಿಯಲ್ಲ ಅರಿತು ನೋಡಿರಿ ಘನ್ನ ಸುಗುಣಭರಿತ ಶ್ರೀ ಪ್ರಸನ್ನ ಸಲಹುವ 100
--------------
ವಿದ್ಯಾಪ್ರಸನ್ನತೀರ್ಥರು
ನಿನಗೇನು ಘನವೇನು ವನಜಾಕ್ಷ ವೆಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ಪ ದೇಶ ನಿನ್ನದು ಬಹುಕೋಶ ನಿನ್ನದು ಜಗ ದೀಶ ನಿನ್ನನು ಭಾಗ್ಯಲಕುಮಿ ಸೇವಿಸುವಳು ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ 1 ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ ಅಣುಮಹತ್ತಿನೊಳಗೆ ಗುಣವ ತೋರಲು ಬಲ್ಲೆ ಕ್ಷಣಕೆ ಮುನಿಯ ಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ ಗುಣಗಳವಗುಣಗಳ ನೋಡದೆ ಸಲಹಯ್ಯ 2 ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ 3 ತಂದೆ ತಾಯಿಗಳಿಲ್ಲ ಬಂಧು ಬಾಂಧವರಿಲ್ಲ ಕುಂದು ಹೆಚ್ಚಿಯೆ ನಿರ್ಬಂಧ ಬಡಿಸುತಿದೆ ಮಂದರಾದ್ರಿಯ ಗೋವಿಂದ ನಿನ್ನಯ ಪಾದ ದ್ವಂದ್ವವ ತೋರಿಸಿ ಚಂದದಿ ಸಲಹಯ್ಯ 4 ಮನದ ಸಂಕಲ್ಪಕೆ ಅನುಗುಣವಾಗಿಯೆ ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ ತನು ಮನದೊಳಗನುದಿನದಿನ ಸಲಹಯ್ಯ 5
--------------
ವರಹತಿಮ್ಮಪ್ಪ
ನೀ ತಂದೆ ನಾಕಂದನಯ್ಯ ರಂಗಯ್ಯ ಪ ಪಾತಕಿಯು ನಾನೆಂದೆ ಘಾತಕನು ನಾನೆಂದೆ ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ ತಂದೆ ನೀ ಕೈಬಿಟ್ಟು ಹಿಂದೆ ನಿಂದೆ ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ ಮಂದರೋದ್ಧಾರ ಗೋಪಾಲ ತಾಪವತಂದೆ 1 ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ ಇಂದು ನರಜನ್ಮದಲಿ ಬಂದೆನಯ್ಯ ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ2 ಮುಂದಿನಾ ಪಥವಾವುದೆಂದರಿಯೆ ಮದನಾಂಗ ಮಂದಮತಿಯನು ನೀಗಿಸೆಂದೆನುವೆ ರಂಗ ಬಂದ ಸುಖದು:ಖಗಳನೊಂದೆಣಿಸು ನೀಲಾಂಗ ಕರವ ಪಿಡಿ ಮೋಹನಾಂಗ 3 ಎಂದು ತವಪಾದಾರವಿಂದವನು ಸೇರಿಸುವೆ ಅಂದು ಜನ್ಮವು ಸಫಲವೆಂದು ನಂಬಿರುವೆ ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ 4 ಮಂದಾಕಿನೀಜನಕ ನಂದಗೋಪನ ಕಂದ ಇಂದೀವರಾಕ್ಷ ಮುಚುಕುಂದವರದಾ ಎಂದೆಂದು ವಂದನೆಯ ಮಾಳ್ಪುದೆನಗಾನಂದ ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನಲ್ಲದನ್ಯವೆನಗಿಲ್ಲ ನಾರದ ವರದಏನೆಂಬೆ ಸರ್ವರಿಗು ನೀನೆಯಹುದಾದಡೆಯು ಪಧನದ ಬಲವುಳ್ಳವರು ಧರ್ಮಗಳ ಮಾಡುವರುಮನದ ಮೇಧಾವಿಗಳು ಮಂತ್ರಿಸುವರು ತನುವಿನಲಿ ತ್ರಾಣಿಗಳು ತೀರ್ಥಗಳ ಪಡೆಯುವರುಅನುವದಿಸಿ ವೇದಗಳನವರಾಢ್ಯರಹರು 1ತನುವ ದಂಡಿಸಿ ಪೂಜ್ಯ ತನುವಾದರವರ್ಗುಂಟುಧನದ ತ್ಯಾಗದಿ ಮುಂದೆ ದೈನ್ಯ ಹರವುಮನವ ನಿಗ್ರಹಿಸಿದರೆ ಮುಖ್ಯ ಜ್ಞಾನವುಬಹುದುಇನಿತಾದರವರ್ಗಿರುವದೇನುಂಟು ನನಗೆ 2ಇತರ ಮಾತುಗಳಾಡದೀ ವಾಕನೊಳಗಿರಿಸಿಮಿತವಾಗಿ ಸತ್ಯಯುತಮಾಗಿ ನುಡಿಸಿಅತಿದೋಷಗಳು ಹೋಗಿಯವರ್ಗೆ ಮುಂದಣ ಭವದಿವಿತತವಾಹದವಿದ್ಯೆ ವಿವರಿಸಲಿದುಂಟೆ 3ಸತತವೂ ಧನವಿಲ್ಲ ಸಾಧು ಸಮ ತನುವಿಲ್ಲವ್ರತತೀರ್ಥಗಳಲಾಡಿದೊಡಲಿದಲ್ಲಮತಿಯಲ್ಲಿ ನೋಡಿದರೆ ಮಂತ್ರ ಮನನಗಳಿಲ್ಲಸ್ತುತಿ ಮಾಳ್ಪ ಸೂಕ್ತಗಳ ಸೊಲ್ಲು ತಾನಿಲ್ಲ 4ಹಿಂದಾದ ಮುಂದೆ ಬಹ ಹೊಂದಿದೀ ಭವ ಸಹಿತತಂದೆ ಕಣ್ದೆರಪಾಗಿ ತಾ ತೋರಿತುಬಿಂದು ಸಾಧನವಿಲ್ಲದೊಡಲೊಂದು ಲಭಿಸಿರಲುಬಂಧವನು ಬಿಡಿಸುವರೆ ಬಂದೆ ಗುರುವಾಗಿ 5ಪರಮ ಕರುಣಾಸಿಂಧು ಪತಿತ ಪಾವನ ಶೀಲದುರಿತಾಂಧಕಾರಕ್ಕೆ ದಿವಸಕರನುಹರಿ ದೀನವತ್ಸಲನು ಹಾಗನಾಥರ ತಾನುಹೊರೆವನೆಂಬೀ ಮಾತು ಹುಸಿಯಾಗಲಿಲ್ಲ 6ನನ್ನನೀಪರಿಯಲ್ಲಿ ನೋಡಿ ಸಲಹಿದ ಮೇಲೆುನ್ನೇಕೆ ಸಂದೇಹವಿದೆ ಚೋದ್ಯವುಸನ್ನುತನೆ ತಿರುಪತಿಯ ಸ್ವಾಮಿ ವೆಂಕಟರಮಣನಿನ್ನಡಿಯ ಸ್ಮರಣೆಯನು ನನಗಿತ್ತೆಯಾಗಿ 7ಕಂ|| ಭೃಗುವಾರದರ್ಚನೆಯನಿದಭೃಗುಸುತೆ ಸಹ ನೀನು ಕೊಳುತೆ ರಕ್ಷಿಸುಯೆನ್ನಂಹೊಗಲಾರೆನು ಭವಸಿಂಧುವನಿಗಮಾರಾಧಿತನೆ ದೇವ ವೆಂಕಟರಮಣಾಓಂ ಯಜ್ಞ ಭೋಕ್ತ್ರೇ ನಮಃ
--------------
ತಿಮ್ಮಪ್ಪದಾಸರು