ಒಟ್ಟು 320 ಕಡೆಗಳಲ್ಲಿ , 56 ದಾಸರು , 288 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾದಿ ಪಿಡಿ ಕರವಾ ದೇವರ ದೇವ ಪ ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ ಗತಶೋಕ ಜಿತಮಾಯ ಪತಿತ ಪಾವನವೇದ್ಯ ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ ನತರ ಪಾಲಕ ದುಷ್ಟದಿತಿಜಾರಿ ತವಪಾದ ಶತಪತ್ರ ಬಿಡದೆ ಸಂತತ ಭಕುತಿಯಲಿಂದ ಸ್ತುತಿಪಾರ ಮಿತ ಅಘವಾ ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ 1 ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ ಕನಕ ನೇತ್ರಾರಿ ಪಾವನತರ ನರ ಪಂಚ ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ ನಿತ್ಯ ಅನಘಾತ್ಮ ಜನನೀಯ ಕೊಂದಾನೆ ಜನಕ ಜಾಪತಿಯ ರು ಕ್ಮಿಣಿ ಮನೋಹರನೆ ವಸನದೂರ ಹಯರೂಢ ಜನನ ರಹಿತ ವಿಖ್ಯಾತಾ ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ ಅನುದಿನದಲಿ ಮಮತಾ ಕನಕೋದರನ ತಾತಾ 2 ಸರಿವೀರ ಹಿತ ಬಲಿಸರಸಿ ಜಾಂಬಕ ಮುರ ಹರ ಹರ ವಂದಿತ ಹರಿಮುಖ ಹರಿನುತ ಪಾದ್ಯ ಹರಸು ಎನ್ನಯ ಅಘ ನಿರುತ ನಿನ್ನ ಡಿಂಗರರ ನೀಕರದಿತ್ತು ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು ವರ ಶಿರಿಗೋವಿಂದ ವಿಠಲನೆ ನೀ ಯನ್ನ ಮರಿಯದೆ ಮಮತೆಯಿಂದಾ ನಿತ್ಯ ಗರಿಯುತಲಿರು ಆನಂದಾ ನಿನ್ನಯ ಪಾದಾದಿರಲಿ ಮನಸು ಮುಕುಂದಾ ದುರುಳ ಭವದ ಬಂಧ 3
--------------
ಅಸ್ಕಿಹಾಳ ಗೋವಿಂದ
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ಕರುಣಿಸೊ ಕರುಣಿಸೊ ಗುರುವೆಂಕಟೇಶ ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ ಬಿನ್ನಹವ ಪಾಲಿಸೊ ಚಿನುಮಯ ರೂಪ ಉನ್ನತ ಮಹಿಮ ನೀ ಘನ್ನ ಗುರು ಕೃಪ 1 ಅನಾಥ ಬಂಧು ನೀ ಶರಣ ರಕ್ಷಕ ಅನಂತ ಕೋಟಿ ಬ್ರಹ್ಮಾಂಡ ನಾಯಕ 2 ವಾಸುದೇವ ಚಿದ್ರೂಪ ದೇಶಿಕರದೇವ ಭಾಸಿ ಪಾಲಿಪ 3 ವಂದಿತ ತ್ರೈಲೋಕ್ಯ ವೇದಾಂತ ಮಹಿಮ ಇಂದಿರಾಪತಿ ಘನಗುರುಬ್ರಹ್ಮ 4 ಶ್ರೀನಾಥ ನೀನಲ್ಲದೆ ನನಗಾರು ಇಲ್ಲ ನೀನೆ ಸಕಲಪೂರ್ಣ ಭಕ್ತವತ್ಸಲ 5 ಮತಿಹೀನನವಗುಣ ನೋಡದಿರೆನ್ನ ಕ್ಷಿತಿಯೊಳು ಸದ್ಗೈಸೊ ಪತಿತಪಾವನ 6 ದೀನನಾಥ ನೀ ಬಂದು ಮನದೊಳು ನಿಂದು ಮನ್ನಿಸಿ ದಯಬೀರೊ ಘನಕೃಪಾಸಿಂಧು7 ವಿಶ್ವವ್ಯಾಪಕ ಸಾಧುಹೃದಯನಿವಾಸ ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕವಳತಾಯಿ ಕವಳ ಅಮ್ಮ ಪ ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ಅ.ಪ ಸಂಜೆಯ ಕವಳಕ್ಕೆ ಸಾವಿರ ಆಪತ್ತು ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ 1 ನಮದೊಂದು ಸಂಸಾರ ಬಲು ದೊಡ್ಡದವ್ವ ಶ್ರಮಿಸುವರದರೊಳಗೊಬ್ಬರಿಲ್ಲವ್ವ ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ ಎಮಗೊಂದು ಕ್ಷಣದಲಿ ಅಮೃತವಾಗೋದವ್ವ 2 ಕ್ಷಿತಿಯೊಳು ಜ್ಞಾನಿಗಳಾಡುತಲಿಹರು ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ ಪ್ರತಿದಿನವಿತ್ತು ಪ್ರಸನ್ನರಾಗಿರವ್ವ 3
--------------
ವಿದ್ಯಾಪ್ರಸನ್ನತೀರ್ಥರು
ಕಳೆಯ ಬ್ಯಾಡ ಮನವೇ ದಿನಾ ಕಳೆಯ ಬ್ಯಾಡ ಪ ವಿನುತ ಪದವನುಜ ಮರೆತು ದಿನ ಅ.ಪ ಆರನು ನಂಬಿದರಾರು ಕಾಯುವರು ಧೀರ ದೇವಕಿಯ ಸುಕುಮಾರ ನುಳಿದು ದಿನ 1 ಕ್ಷಿತಿಗೆ ಪಾರ್ಥಸಾರಥಿಯ ನುಳಿದು 2 ವಿನುತ ದ್ವಂದ್ವನುಳಿದು ದಿನ 3
--------------
ಅಸ್ಕಿಹಾಳ ಗೋವಿಂದ
ಕಾಮನ ಪೆತ್ತನ ಕೋಲೆ ನಿ- ಸ್ಸೀಮ ಚರಿತ್ರನ ಕೋಲೆ ಶ್ಯಾಮಲ ಗಾತ್ರನ ಕೋಲೆ ನಮ್ಮ ಕಾಮಿತವಿತ್ತನ ಕೋಲೆ ಪ. ಕಂಜಜ ತಾತನ ಕೋಲೆ ಧ sನಂಜಯ ಸೂತನ ಕೋಲೆ ಕುಂಜರ ಗೀತನ ಕೋಲೆ ಸುರ- ಪುಂಜ ವಿಖ್ಯಾತನ ಕೋಲೆ 1 ಶ್ರುತಿಗಳ ತಂದನ ಕೋಲೆ ಬಲು ಮಥನಕೊದಗಿದನ ಕೋಲೆ ಕ್ಷಿತಿಯನೆತ್ತಿದವನ ಕೋಲೆ ಭಕ್ತ ಹಿತಕಾಗಿ ಬಂದನÀ ಕೋಲೆ 2 ಪೃಥ್ವಿಯಳದನ ಕೋಲೆ ಅಲ್ಲಿ ಸುತ್ತ ಸುಳಿದನ ಕೋಲೆ ಅರ್ಥಿಗÀಳದನ ಕೋಲೆ ದ್ವಾರಾ- ವತ್ತಿಯಾಳಿದನ ಕೋಲೆ 3 ಮುಕ್ತಾಮುಕ್ತ ಜಗತ್ತ ತನ್ನ ವಿತ್ತ ಸಂಪತ್ತ ಕಲಿ- ವೊತ್ತಿ ಮಾಡಿತ್ತನ ಕೋಲೆ4 ಜಗತಿಧನ್ಯನ ಕೋಲೆ ನಿಗಮೋಕ್ತ್ತ ವಣ್ರ್ಯನ ಕೋಲೆ ಅಘಲೇಶಶೂನ್ಯನ ಕೋಲೆ ಸರ್ವ ಸುಗುಣಾಬ್ಧಿಪೂರ್ಣನ ಕೋಲೆ 5 ಸಿರಿಹಯವದನನ ಕೋಲೆ ಸುಖ ಕರ ಸಿಂಧುಮಥನನ ಕೋಲೆ ಹರಮಾನ್ಯಸದÀನನ ಕೋಲೆ ಗೋಪಿ- ಯರ ಕಣ್ಗೆ ಮದನನ ಕೊಲೆ 6
--------------
ವಾದಿರಾಜ
ಕಾಲ ವ್ಯರ್ಥ ಹರಿಯನೇಕ ಗುಣಗಳ ಪೊಗಳಿ ಪುರುಷಾರ್ಥ ಪ ಸತಿಸುತರ ನೆಚ್ಚಿ ಕೆಡಬ್ಯಾಡಾ ನಿನ್ನ ಸಂ- ಗತಿಲೇ ಬಾಹರು ಇದನು ತಿಳಿಯೋ ಕ್ಷಿತಿಪತಿಯ ನೆನೆಯದಿರಬ್ಯಾಡಾ ಲಕ್ಷ್ಮೀ ಪತಿಯೊಬ್ಬನೇ ಗತಿ ಎಂದು ತಿಳಿ ಗಾಢಾ 1 ಇಂದೆ ಇದ್ದವ ನಾಳೆಗಿಲ್ಲಾ ಅದ ರಿಂದ ಜಗದೀಶನನು ಹಿಂದೆ ಕಳೆದ ಆಯು ಬರೋದಿಲ್ಲಾ ಇನ್ನು ಮುಂದೆ ನರಜನ್ಮ ಬರುವುದು ಭರವಸಲ್ಲಾ 2 ಸತ್ತ ನಂತರ ಬಳಗ ನಿನ್ನ ತೀವ್ರ ಹೊತ್ತು ಹೊರಗ್ಹಾಕಿರೆನ್ನುವರೋ ತಿಳಿಯನ್ನಾ ಮಿಥ್ಯ ಸುಖಕೊಳಗಾಗದಿನ್ನಾ ಏಕ ಚಿತ್ತದಿಂ ಭಜಿಸೋ ಹನುಮೇಶ ವಿಠಲನಾ 3
--------------
ಹನುಮೇಶವಿಠಲ
ಕಾಲವೆಂತು ಕಳೆಯಲೆನ್ನಯ್ಯ ಪ ಕಾಲಕಳೆಯಲೆಂತು ನಾನು ತಾಳಿಮೂಗುತಿ ಕಾಣದೊನಿತೆಯ ಹಾಳುಮುಖವ ನೋಡೆವೆಂದು ಶೀಲಮುತ್ತೈದೇರ್ಹಳಿಯುತಿಹ್ಯರು ಅ.ಪ ಏಳುಸುತ್ತಿನಕೋಟಿ ಪಟ್ಟಣದಿ ಖೂಳರುಪಟಳ ಹೇಳಲಳವಲ್ಲ ಸೇರಿ ವಿಧ ವಿಧದಿ ದಾಳಿನಿಕ್ಕಿ ಹಾಳು ಮಾಡ್ವರು ಮನಕೆ ಬಂದತೆರದಿ ಗೋಳು ಕೇಳುವರಿಲ್ಲವೋರ್ವರು ತಾಳೆನೀಬಾಧೆ ಶೀಲದೆನ್ನ ಬಹು ಜೋಕಿಯಿಂ ಮೇಲ್ಮಾಲಿನೋಳಿಟ್ಟು ಆಳುವಂಥ ಮೂಲಪುರಷನಿಲ್ಲದಿನ್ನು 1 ಆರು ಕೇಳುವರಿಲ್ಲ ಇವಳಿಗೆಯೆನುತ ಕೀಳ ಮೂರು ಮಂದಿ ಊರ ಬೀದಿಯೊಳಗೆ ದಾರಿ ತರುಬಿ ಸಾರಿ ತರಿವರು ಮಾರಕೇಳಿಗೆ ಸೈರಿಸಲಿ ಹ್ಯಾಗೆ ಚೋರನೋರ್ವನು ಮೀರಿ ಬಾಧಿಪ ಆರು ಮಂದಿ ಬಿಡದೆ ಎನ್ನನು ಘೋರಿಸುವರು ನಾನ ವಿಧದಿ ಪಾರುಗಾಣೆನು ವ್ರತದಿ ಇನ್ನು 2 ಪತಿಯು ಇಲ್ಲದ ಜನ್ಮವ್ಯಾತಕ್ಕೆ ಕ್ಷಿತಿಯಮೇಲೆ ಸತಿಗೆ ಪರಮ ಗತಿಯ ಕೊಡಲಿಕ್ಕೆ ಪತಿಯೆ ಬಾಧ್ಯ ಇತರರು ಕಾರಣಲ್ಲ ಕಾಯಕ್ಕೆ ಜತನ ಗೈಲಿಕ್ಕೆ ಪ್ರಥಮ ಮುತ್ತಿನ ಮೂಗುತಿಯನು ಹಿತದಿ ಕರುಣಿಸಿ ಪತಿಯಾಗೆನಗೆ ಗತಿಯ ನೀಡಿ ಹಿತದಿಂ ಸಲಹು ಪತಿತ ಪಾವನೆನ್ನ ಪ್ರಾಣ ಶ್ರೀರಾಮ 3
--------------
ರಾಮದಾಸರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಕಾವಲಿರು ಕಮಲಾಕ್ಷ ಕರುಣಿ ನಿರಪೇಕ್ಷ ದೇವ ದೇವಾಧ್ಯಕ್ಷ ದುರಿತಾಳಿಶೀಕ್ಷ ಪ. ಪಾಂಡುಕುವರರ ಪರಮ ಪ್ರೇಮದಿಂದಲಿ ಕಾಯ್ದೆ ತೋಂಡಮಾನಗೆ ಚಕ್ರ ಶಂಖಗಳನಿತ್ತೆ ಪಂಡಿತಾಗ್ರಣಿ ಬಲಿಯ ಬಾಗಿಲೊಳು ಶಾಙ್ರ್ಞಕೋ- ದಂಡ ಶರಗಳ ಧರಿಸಿಕೊಂಡು ಕಾಪಾಡುವನೆ 1 ವಿತತರೂಪನೆ ನಿನ್ನೊಳಿಟ್ಟಹೆನು ಭರವಸವ ಸತತ ನೀ ಸಲಹುವುದು ಸರ್ವಸ್ವವ ಕ್ಷಿತಿಯನಾಳುವ ಜನರೊಳಂತರಾತ್ಮಕ ನೀನೆ ಗತಿಯೆಂದು ನಂಬಿದೆನು ಗರುಡಾಂಗಗಮನ 2 ಕಂಟಕವ ಪರಿಹರಿಸು ಕಂಠೀರವಾಸ್ಯ ವೈ- ಕುಂಠಗಿರಿಯರಸ ಮೂರೆಂಟು ತತ್ವೇಶ ಸ್ವಿಂಟನಾಭಿದನ ನಿಷ್ಕಂಟತನವನು ಬಿಡಿಸಿ ಬಂಟವಾಗಿಹರ ಮೇಲೆ ತಂಟೆ ಬರದಂದದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೃತ ಕೃತ್ಯನಾದೆನಿಂದಿನ ದಿನದೊಳು ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ಪ ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು 1 ಪರಿಯಂತ ಹರಿಮಹಿಮೆಗಳ ಸನ್ನುತಿಯಲೀ ಶ್ರುತಿಸ್ಮøತಿಗಳಿಂದ ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು 2 ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು ಜ್ಞಾನಿಗಳು ದುರ್ಲಭರು ಕಲಿಯುಗದಲಿ ಆನತೇಷ್ಟಪ್ರದ ಜಗನ್ನಾಥ ವಿಠಲ ತಾನೆ ಕರೆತಂದು ತೋರಿ ಪುನೀತನ ಮಾಡ್ದ 3
--------------
ಜಗನ್ನಾಥದಾಸರು
ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ ಕೃಪಣವತ್ಸಲ ರಾಘವೇಂದ್ರಾ ಅಪರಿಮಿತ ಪಾಪೌಘ ಸÀಪದಿ ಪೋಗಾಡಿಸಿ ನೀ ಕೃಪಣ ಕಾಮಿತ ದಾತಾ - ಮನ್ನಾಥಾ ಪ ಮೋದತೀರ್ಥ ಮತೋದಧಿ ಸಂಜಾತಾ - ಮೋದ ಸಂಯುಕ್ತ ಸುಧಾ ಭೋಧಿಸಿ ಚಂದ್ರಿಕ ಭುಧಜನ ವೃಂದಕೆ ಉದಧಿನಂದನನಂತಿರುವೇ - ನಂದಕರ ಗುರುವೆ 1 ಕ್ಷಿತಿ ತಳದೊಳು ವರ ಯತಿಯ ರೂಪವ ಧರಿಸಿ ಪತಿತ ಪಾವನನೆನಿಸೀ ಸತತ ಸುಜನರ ಅತಿಹಿತದಲಿ ಪೊರೆವೊ ಮತಿವಂತ ಮನದಲೀಗ ಭಜಿಪೆ ತ್ವಚ್ಚರಣ2 ಧಿಟ ಗುರು ಜಗನ್ನಾಥ ವಿಠಲಪಾದ ಹೃತ್ಸಂ - ಪುಟದಿ ಭಜಿಸುತಲೀ ಶಿಷ್ಟಜನರ ಮನದಿಷ್ಟಾರ್ಥ ಸಲಿಸುವ ವÀಂ - ದ್ಯೇಷ್ಟದಾನದಿ ದಕ್ಷಾ - ಕಾಮಿತ ಕಲ್ಪವೃಕ್ಷಾ 3
--------------
ಗುರುಜಗನ್ನಾಥದಾಸರು
ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ಕೆಡದಿರು ಕಡುಮೋಹದಡವಿಬಿದ್ದು ಮನ ಕೆಡುವ ಶರೀರ ಜಡದೃಶ್ಯವಿದು ಪ ಜಲದ ಮೇಲಿನ ಗುರುಳೆಯಂತೆ ಈ ದೇಹ್ಯ ಗಳಿಗೆ ಚಲಿಸಿ ಒಡೆದು ನೆಲಕೆ ಬೀಳುವುದು ಬಳಿದ ಕಸದತೆರಗಳಿಗೆ ನಿಲ್ಲದೆ ಇದನು ಎಳೆದುಹಾಕುವರಂತ್ಯ ಕಾಲದಲಿ 1 ಕ್ಷಿತಿಯೊಳಿರುವ ತನಕ ಸತಿಸುತರೆಲ್ಲರು ಸತತ ಹಿತದಿ ಬಲುಪೂಜೆ ಮಾಳ್ಪರು ಸತ್ತ ಬಳಿಕ ತಮಗ್ಹತ್ತಿತ್ತು ಮುಟ್ಟೆಂದು ಹಿತದವರೆಲ್ಲ ಮುಟ್ಟುತೊಳಕೊಂಬರು2 ಗಳಿಸಿದ ಧನಮಾನ್ಯ ಬಲುಸಂಪದವೆಲ್ಲ ಉಳಿವುದು ಎಲ್ಲ ಇಲ್ಲೇ ಜತೆಯಲಿ ಬರದೇನು ತಿಳಿದು ಶ್ರೀರಾಮನ ಚರಣಕಮಲಧ್ಯಾನ ಗಳಿಸಿ ಘನಮುಕ್ತಿ ಪಡಕೊಳ್ಳೆಲೊ 3
--------------
ರಾಮದಾಸರು