ಒಟ್ಟು 1149 ಕಡೆಗಳಲ್ಲಿ , 97 ದಾಸರು , 869 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ | ಕಿನ್ನೇಶ ಮುನಿದು ಬಂದೇನು ಮಾಡುವನು ಪ ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು | ಅತ್ತವಿತ್ತ ಊರು ಸುತ್ತುತಿರಲು | ಸುತ್ತಯಿದ್ದ ಬಂಧು ಬಳಗದವರು ಕೂಡಿ | ಮುತ್ತಿಕೊಂಡು ಅವಳನೇನು ಮಾಡುವರು 1 ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ | ತಿದ್ದುವಾ ಸರಿಪಾಲು ಲಂಚಕೊಟ್ಟು | ಇದ್ದವನು ಹಗಲಿರಳು ಕದ್ದರೆ ಆ ಊರು | ಎದ್ದು ಹಿಡಿದವರೆಲ್ಲ ಏನು ಮಾಡುವರು2 ತೊತ್ತಿನ ಮೇಲೆ ಒಡೆಯನ ದಯವಿರೆ | ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ | ಕರ್ತು ಶ್ರೀ ವಿಜಯವಿಠ್ಠಲ ವೆಂಕಟೇಶನ | ಚಿತ್ತದಿ ನೀನಿರೆಯನೆವುಂಟೆ3
--------------
ವಿಜಯದಾಸ
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ
ವೈದಿಕ ಧರ್ಮಧ್ವಜ ಫಡಫಡಿಸಲ ಗಗನದೊಳೆತ್ತರದಿವೈದಿಕ ತತ್ವಜ್ಞಾನ ಪ್ರಕಾಶವು ಪಸರಿಸಲೀ ಜಗದಿ 1ಜ್ಞಾನ ಭಕ್ತಿ ವೈರಾಗ್ಯ ಧೈರ್ಯ ಔದಾರ್ಯ ತಪಶ್ಚರ್ಯದಿನ ದಿನ ಬೆಳೆಯಲಿ ದಾನಧರ್ಮಗಳು ದಯಾ ಸತ್ಯ ಶೌರ್ಯ 2ದುಷ್ಟ ಶತ್ರುಗಳ ಸದ್ದು ಅಡಗಲಿ ಜಗನಿರ್ಭಯ'ರಲಿಭ್ರಷ್ಟಾಚಾರವು ನಿರ್ಮೂಲಾಗಲಿ ಸತ್ಯಕ್ಕೆ ಜಯ'ರಲಿ 3ವರ್ಣಾಶ್ರಮಗಳ ಧರ್ಮದ ಮರ್ಮವು ತಿಳಿಯಲಿ ಜಗಕೆಲ್ಲಾಕರ್ಮಾ ಕರ್ಮ 'ಕರ್ಮ ಮರ್ಮವನು ಅರಿಯಲಿ ಜನರೆಲ್ಲಾ 4ಜಯ ಜಗದೀಶ್ವರರೆಂಬ ನಿನಾದವು ತುಂಬಲಿ ಜಗದಲ್ಲಿಜಯ ಭೂಪತಿ'ಠ್ಠಲ ಸರ್ವೋತ್ತಮ ಜಯಹರಿ ಎಂದೆನಲಿ 5
--------------
ಭೂಪತಿ ವಿಠಲರು
ವೈಶಾಖದುತ್ಸವ ಗೀತೆ ವರ್ಣಿಸಲಳವೆ ವೈಶಾಖದುತ್ಸವವಾ ಪ. ವೃಷಭಸೇರಿದ ವೈಶಾಖಮಾಸದ ಶುಕ್ಲ ಪಕ್ಷದ ಷಷ್ಠಿಯಲಿ ಕಂಕಣವ ಕಟ್ಟಿ ಪಟ್ಟದರಸಿ ಯರ್ಸಹಿತ ದಿಟ್ಟತನದಲಿ ಪೊರಟು ಶ್ರೇಷ್ಠವಾದ ಮಧ್ಯಮಂಟಪಕೆ ನಡೆತಂದ 1 ಮುದ್ದುಮೊಖ ಮುಗುಳ್ನಗೆಯು ವಜ್ರದ ಕಿರೀಟವು ತಿದ್ದಿದ ಕಸ್ತೂರಿತಿಲಕ ಹೊಳೆವ ವಜ್ರದ ಪದಕಗಳು ನಾಲ್ಕು ಮೂರನೆ ಧರಿಸಿ ಪ್ರಜ್ವಲಿಸುತ ಬಂದ ಅರ್ಜುನ ಸಾರಥಿಯು 2 ಶಿರದಿ ಪುಷ್ಪವ ಧರಿಸಿ ಪರಮಪುರುಷನು ತಾನು ಕೊರಳಲ್ಲಿ ವೈಜಯಂತಿಮಾಲೆಯನು ಧರಿಸಿ ಕರದಲ್ಲಿ ಪರಿಮಳದ ಗಂಧವನು ಧರಿಸಿ ಪರಮ ಪುರುಷನು ಬರುವ ಪರಿಯನೇನೆಂಬೆ 3 ದಂತದ ಉಯ್ಯಾಲೆಮಂಟಪದಲಿ ನಿಂದು ಕಂತುಪಿತ ಕರ್ಪೂರದಚೂರ್ಣದಲಿ ಮಿಂದು ಅಂತರಂಗದಿ ಭಕ್ತರಿತ್ತ ನೈವೇದ್ಯ ಉಂಡ ಲಕ್ಷ್ಮೀ ಕಾಂತನು ನಡೆತರುವ ಪರಿಯನೇನೆಂಬೆ 4 ಮುಂದೆ ದ್ರಾವಿಡವೇದ ಹಿಂದೆ ವೇದಘೋಷಗಳು ಆ ನಂದದಿಂ ಭಕ್ತರೆಲ್ಲ ಮುಂದೆ ಬರುತಿರಲು ಛಂದದಿಂ ರಂಭೆಯರ ಕೋಲಾಟಗಳ ನೋಡಿ ಇಂದಿರೆಯಿದಿರು ಮಂಟಪಕೆ ನಡೆತಂದ 5 ಸೃಷ್ಟಿಪತಿ ರಂಗನಿಗೆ ದೃಷ್ಟಿ ತಾಕುವುದೆಂದು ಹಿಟ್ಟಿನಾರತಿಯಿಂದ ದೃಷ್ಟಿಯನು ತೆಗೆದು ಶ್ರೇಷ್ಠವಾದ ಕರ್ಪೂರದ ಆರತಿಯನೆತ್ತಲು ಥಟ್ಟನೆ ತಿರುಗಿದನು ಕೃಷ್ಣಮೂರುತಿ ತಾನು 6 ಸಪ್ತದಿನದಲಿ ರಂಗ ರತ್ನಮೌಳಿಯ ಧರಿಸಿ ಮುತ್ತಿನಾ ಹಾರವನು ಹಾಕಿ ರತ್ನದ ಉಡದಾರ ಉಡಗೆಜ್ಜೆಯನು ಧರಿಸಿ ಪತ್ನಿ ಸಹಿತಲೆ ಬಂದು ಭತ್ತವನಳಿಸುವ ಸೊಬಗ 7 ಮುತ್ತಿನ ಕಿರೀಟವಿಟ್ಟು ಮುದದಿ ನಿಲುವಂಗಿ ತೊಟ್ಟು ರತ್ನದಾ ಹಸ್ತದಲಿ ಅಭಯವನು ಕೊಟ್ಟು ಕತ್ತಿ ಈಟಿ ಗುರಾಣಿ ಬತ್ತಳಿಕೆ ಅಳವಟ್ಟು ಹಸ್ತದಲಿ ಕಡಿವಾಣವಿಟ್ಟು ಬರುವ ಸೊಬಗ 8 ಹತ್ತಿ ಹಯವನು ರಂಗ ಒಂಭತ್ತು ದಿನದಲಿ ಮತ್ತೆ ಪುಷ್ಕರಣಿಯ ತೀರ್ಥದಲ್ಲಿ ಮಿಂದು ಅರ್ತಿಯಿಂ ಬಂದ ನೀರಾಳಿಮಂಟಪಕೆ 9 ಮಿಂದು ಮಡಿಯನೆ ವುಟ್ಟು ಛಂದದಿಂದಲೆ ರಂಗ ಬಂದು ಕಂಕಣವನ್ನು ಬಿಚ್ಚಿ ಆ ಘೃತ ಚೂತಫಲಗಳ ಸವಿದು ನಿಂದ ವೆಂಕಟರಂಗ [ಕರುಣಾಂತರಂಗ] 10
--------------
ಯದುಗಿರಿಯಮ್ಮ
ವ್ಯಾಸರಾಯರ ಚರಣವನೆ ಸೇವಿಸಿ ಪ ವ್ಯಾಸರಾಯರ ಚರಣ ಸರಸಿಜದ ಸೇವೆ ಬಲು ಮೀಸಲ ಮನದಿ ಮಾಡೆ ಆಶೆಪಾಶೆಯ ತೊರೆದು ಕ್ಲೇಶವೆಲ್ಲವ ಹರಿಸಿ ಭಾಸಿಸುವ ಬಿಡದಲೇ ಹೃದ್ದೇಶ ಖೇಶದೊಳಗೇ ಅ.ಪ. ಬನ್ನೂರು ಪುರದಲ್ಲಿ ಮುನ್ನೋರ್ವ ಬ್ರಾಹ್ಮಣನಮನ್ನೆಯೋಳ್ಳುದಿಸಲೂ ಸ್ವರ್ಣ ಪಾತ್ರೆಲಿ ತರಿಸಿಘನ್ನ ಮಹಿಮನ ತಂದು ಬ್ರಹ್ಮಣ್ಯ ಯತಿವರರು ತಮ್ಮ ಆಶ್ರಮದಿ ಪೊರೆಯೆ ||ಉನ್ನತದ ಗುಡ್ಡದಲಿ ಗವಿಯ ಮನೆಯಾಗಿರಲು ಚಿಣ್ಣನಾ ತೊಟ್ಟಿಲಿನ ಮೇಲಿನ ಗವಾಕ್ಷದಿಂಚೆನ್ನಗೋವ್ ದಿನದಿನದಿ ಪಾಲ ಕರೆಯುತ ಚಿಣ್ಣನನು ತಾ ಬಲು ಸಲಹಿತು 1 ತಾಪಸೋತ್ತಮರಾದ ಶ್ರೀಪಾದರಾಯರ ಸ-ಮೀಪದೊಳು ಆ ಪರಮ ಶಾಸ್ತ್ರ ವ್ಯಾಸಂಗದೀಭಾಪು ಭಾಪನೆ ಮೆರೆದು ಭಕ್ತಿ ಸುಪಥವ ಪಿಡಿದು ಮೈ ಮರೆದು ಕುಣಿಯುತಿರುವ ||ಶ್ರೀಪಾದ ಮುನಿಪ ತಾ ಮುಚ್ಚಳವ ತೆರೆಯದಿಹ ಸಂಪುಟವ ತೆರೆಯುತ್ತ ಶ್ರೀ ಪತಿಯನೆ ನೋದುತಶ್ರೀಪ ಶ್ರೀ ವೇಣುಗೋಪಾಲ ಕೃಷ್ಣನ್ನ ಕಾಣುತ್ತ ಕುಣಿ ಕುಣಿದಾಡಿದ 2 ಶಾಲಿಗ್ರಾಮವ ಪಿಡಿದು ತಾಳವನೆ ಹಾಕುತ್ತಬಲುಭಕ್ತಿ ಭರದಿಂದ ಘಲ್ಲು ಘಲ್ಲನೆ ಕುಣಿಯೆಖುಲ್ಲ ಜನರಿದರ ವಳ ಮರ್ಮವನೆ ತಿಳಿಯದಲೆ ಗುಲ್ಲುಗುಲ್ಲೆಂದು ನಗಲೂ || ಬಲ್ಲಿದ ಶ್ರೀಪಾದರಾಯರಿದ ಕೇಳಿ ಕಂಗಳಲಿ ಗಂಬನಿ ಗಲ್ಲದಲಿ ಕೈಯಿಡುತ ಸೊಲ್ಲ ಕೇಳಿರಿ ಸುಜನರೆಲ್ಲರು ಶ್ರೀ ಕೃಷ್ಣ ನಮ್ಮ ವ್ಯಾಸರೋಶನಾದನು 3 ಸಾರಥಿ ಹರಿಯನಿಜ ಮತವ ಬೋಧಿಸುತ ನಿಜ ಜನರ ಪೊರೆಯುತ್ತಕುಜನ ಕುತ್ಸಿತ ಮಾಯಿಮತ ಜೈಸಿಅಜನನಯ್ಯನ ಪ್ರೀತಿ ಸಂಪಾದಿಸಿ ||ಸುಜನ ಪಾಲಕ ಕೃಷ್ಣರಾಜನಿಗೆ ಕುಹುಯೋಗಗಜಬಜಿಸಿ ಬರುತಿರ್ಪುದನು ನಿಜ ಮನದಿ ತಿಳಿದುಗಜವರದ ನಂಘ್ರಿಯನೆ ಭಜಿಸುತ್ತ ವಿಜಯ ಪುರಿ ಸಿಂಹಾಸನವನೇರ್ಧರ 4 ಪರಿ ಗ್ರಂಥ ರಚನೆಯಲಿ ಕಳೆಯೆ ಕಾಲವಕಲು ಮನದ ಜನರಿವರ ಬಲು ಪರಿಯ ಮಹಿಮೆಗಳನೂ ತಾವ್ ತಿಳಿಯಲೊಶವೆ 5 ಇಂಪುಗೊಳ್ಳುತ ಮನದಿ ತಂಪಿನಿಂದಲಿ ಮೆರೆವಪಂಪೆ ಸುಕ್ಷೇತ್ರದಲಿ ಬಾಂಬೊಳೆಯ ಜನಕನ್ನಸಂಪ್ರೀತಿಯನೆ ಪಡೆದಿರುವ ಯಂತ್ರ ಉದ್ಧಾರರನ ಸ್ಥಾಪಿಸುತಲಿ||ನೋಂಪಿನಿಂದಲಿ ಬ್ರಾಹ್ಮಲಕ್ಷ ಗುಂಪಿಗೆ ಉಣಿಸಿ |ಸಂಪುಲ್ಲ ಲೋಚನನ ಶಂಫಲಿಯ ಪುರಗನನುಸಾಂಪ್ರದಾಯಕದಿಂದ ಸಂಪ್ರೀತಿ ಬಡಿಸಿದರ ಪದ ಪಾಂಸುವನೆ ಸಾರಿರೋ 6 ಪರಿ ಪರಿಯ ಪೂಜೆಯನೆ ಗೈಯ್ಯುತಲಿ ||ಶ್ರೀಶನ ಸುಪೂಜಾ ವಿಧಾನವನೆ ಗೈಸುತ್ತದೋಷದೂರನ ಸೇವೆ ಮೀಸಲಳಿಯದ ಮನದಿ ಒಸೆದು ತಾವ್ ಗೈಯ್ಯುತ ಭಾಸಿಸುವ ಸತ್ಕೀರ್ತಿಯುತರಾಗಿ ಮೆರೆಯುತಿಹರ 7 ಪುರಂದರ ವಿಠಲ ದಾಸನೆಂದೂದಾಸ ಪೀಠದಿ ನಿಲಿಸಿ ದಾಸ ಕೂಟವ ರಚಿಸಿ ಸತ್ಪಂಥವನೆ ಸಾರಿದ ||ಆಶುಕವಿತೆಯ ರಚಿಸಿ ಪ್ರಾಕೃತ ಸುಭಾಷೆಯಲಿಕೇಶವನ ಗುಣಧಿಯಲಿ ಲೇಸಾಗಿ ಈಸುತಲಿದಾಸರೊಡನಾಡುತಲಿ ಮೀಸಲಾಗಿರಿಸಿ ತನು ಕೇಶವನ ಗುಣ ಪೊಗಳಿದ 8 ಜಯ ಜಯತು ಶುಭಕಾಯ ಜಯ ಜಯತು ವ್ಯಾಸಾರ್ಯಜಯ ಮಧ್ವಮುನಿ ಪ್ರೀಯ ಜಯ ಚಂದ್ರಿಕಾಚಾರ್ಯಜಯತು ವಿದ್ವದ್ದಾರ್ಯ ಜಯತು ಸುರಮುನಿ ಪ್ರೀಯ ಜಯ ಜಯತು ಯತಿವರ್ಯನೆ ||ಕಾಯಭವ ಪಿತ ಗುರೂ ಗೋವಿಂದ ವಿಠ್ಠಲಗೆಪ್ರೀಯ ಗುರು ವ್ಯಾಸಾರ್ಯ ಸ್ತೋತ್ರವನು ಭಾವ ಶುದ್ಧಿಯೊಳಾವ ಭಜಿಸುವನವಗೆ ಭವವನಧಿ ಉತ್ತರಿಸೆ ನಾವೆಯೆನಿಸುವುದಿದು 9
--------------
ಗುರುಗೋವಿಂದವಿಠಲರು
ಶಂಕರ ಭಗವತ್ ಪರಭಾವ ಪ ಪುರಹರ ಕವಿಜನ ವಂದಿತ ರಾಗದೆ ರತಿಯನು ಜಾಗು ಮಾಡದೆ ಕೊಡು 1 ಮನಕಭಿಮಾನಿಯು ನೀನು ಮನ್ಮ ಅನುದಿನದಿ ಶ್ರವಣ ಮನನ ನಿಧಿ ಧ್ಯಾ ಸನ ಮೊದಲಾದ ಸಾಧನೆಯನು ಮಾಡಿಸು 2 ಸುರಪತಿ ಮೊದಲಾದವರೆಲ್ಲ ನಿನ್ನ ಚರಣವ ಧ್ಯಾನಿಪರೆಲ್ಲ ಧರಣಿಜಾರಮಣ ಗುರುರಾಮ ವಿಠಲನ ಮರೆಯದಿರುವ ಮಹತ್ತರ ಭಾಗ್ಯವ ಕೊಡು3
--------------
ಗುರುರಾಮವಿಠಲ
ಶತ್ರುಗಳ ಬೇಗ ಜಯಿಸು ಪ. ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ ನಿನ್ನ ತೋರೆಂದು ಹಾಟಕ ಬಂದ ದೈತ್ಯನ ದೇಹದಿಂದ ದೀನ ಬಂಧು ಗೋವಿಂದ 1 ಶತ್ರುಸಂಚಯ ಪಚನ ವಿಭಾವನ ದಾನವಕೂಟ ಮಥನ ಲೋಕಪಾವನ ದಯಕರ ಪಕ್ಷಿಗಮನ ಗೆಲ್ವ ಶಕ್ತಿಕೊಡುವರೆ ಬಲ್ಲನ 2 ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ ಲಾಲಿಪರಿಲ್ಲ ಆದರು ಭಯವಿಲ್ಲ ಸೂತ ರಕ್ಷಿಸು ಜಗನ್ನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ | ಶರಣು ಪಾವನಕಾಯಾ | ಸಲಹುನಮ್ಮಾ ಪ ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ | ಪಾವನ ದೇವ ದಯಾನಿಧಿಯೇ 1 ಶಿರಿವಧು ರಮಣನಾ ಚರಿತವ ಪೇಳುವೆ | ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ | ಧರಿಯೊಳು ಭಾಗವತರು ಯಲ್ಲಾ 2 ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು | ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ | ಉನ್ನತ ಸಂಭ್ರಮದಿ ನೆರೆದರು 3 ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು | ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ | ಮದನ ಲಾವಣ್ಯನು 4 ಅನಾದಿ ಮಹಿಮ ಮೋಹನನಾದ ಕೃಷ್ಣನು | ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ | ಅನುಭವ ದೂಟಣಿಯನ್ನು ಮಾಡಲಾರಿ 5 ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ | ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ | ಒಡನೆ ರತಿ ರತ್ನಾಸನ ಹಾಕಿ 6 ಮ್ಯಾಲ ಭಾವಕಿಯರು ಮೂಲೋಕವಂದ್ಯರಾ | ಲೋಲವಧು ವರರನು ಕುಳ್ಳಿರಿಸಿ | ಹರುಷದಿ | ಮೇಲೆನಿಸಿ ಊಟಣಿಯ ಮಾಡಿಸಲು 7 ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ | ಸಿರಿ | ಮುದ್ದು ಶ್ರೀ ಕೃಷ್ಣನು ವಲಿವಂತೇ 8 ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ | ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ | ಏನುಳಿಯದ್ಹಾಂಗ ವಿವೇಕದಿಂದ 9 ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ | ಕಮ್ಯ ದೋರುವಂತೆ ಕಲಿಸುತಾ | ಶ್ರೀವರ | ಬ್ರಹ್ಮನ ಪಾಪಕ ಅರ್ಪಿಸಿದರು 10 ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ | ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ | ಹರಿಯಾ ನಾಮಗಳನು ನುಡಿಸುತಾ 11 ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ | ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ | ಲೇವಿಗಂಧವಾ ಲೇಪಿಸಿದರು 12 ಪರಿಮಳ ಸುವಾಸನೆಯ ಬೇರದ ಸುಮನ ಸರವಾ | ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ | ಕರದಿ ನೇಮಿಸಿದರು ರುಕ್ಮಣಿಗೆ 13 ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ | ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು | ನಿರ್ತದಿಂದಲಿ ನೋಡಿ ಇಬ್ಬರಿಂದ 14 ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ | ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ | ಜಗದೀಶನಾ ಕೈಯಿಂದ ಬಿಡಿಸಿದರು 15 ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು | ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ | ಧರಿಯೊಳಾನಂದವ ತೋರುವಂತೆ 16 ತನುವಿನಾರತಿಯೊಳು ಘನದೆಚ್ಚರ ದೀಪದಿ | ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು | ಅನುವಾಗಿ ತಾವು ನಿವಾಳಿಸಿದರು 17 ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ | ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ | ತ್ವರಿತ ನಿಜ ಮಂದಿರವ ಸಾರಿದರು 18 ಇಂತಿ ಪರಿಯಾಗಿಹ ಅಂತರನು ಭವದಾ | ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ | ಸಂತತ ಸುಖವನು ಪಡೆದರೆಲ್ಲಾ 19 ಇನಿತು ಸುಖ ಕರವಾದಾ ಅನುಭವ ದೂಟಣಿಯನು | ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ | ಘನ ಗುರು ಮಹಿತಪಿ ಸುತ ಸ್ವಾಮಿ 20 ತಂದೆ ತಾಯಿ ಮಿತ್ರ ಬಂಧು ಬಳಗನಾದಿ | ಎಂದೆಂದೂ ಶರಣರ ಸಲಹುವಾ | ದೇವನೇ | ಇಂದೆನ್ನ ನುದ್ಧರಿಸು ದತ್ತಾತ್ರೇಯಾ 21
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1 ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ ಮೂರ್ಛೆಗೈದು ಮೃತನಾದನು 2 ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ ಕೊಡುವೆನೆಂದು ನುಡಿದಾನು 3 ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ ಕನ್ನಿಕೆಗೆ ಮಾಂಗಲ್ಯ ಬಂಧನ ಮಾಡಿಹೋದಾರು 4 ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5 ಒಂದು ದಿನ ಸುಂದರಿ ಬಂದವರ ಕೇಳಿದಳು ಇಂದು ದಿವಸಿ ವ್ರತವು ಅಂದರು ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು ಬಂಧು ಬಳಗೆ ಇಲ್ಲದಲೆ ಮಾಡುವುದೇನು 6 ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು ಹರತಾ ಭಂಡಾರ ಒಡೆದು ಹರುಷಗರೆದನು ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು ಸತತ ನಾರಸಿಂಹನ ಸ್ಮರಣೆ ಮಾಡಿದರು 7
--------------
ಓರಬಾಯಿ ಲಕ್ಷ್ಮೀದೇವಮ್ಮ
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಶೋಭಾನೆ ಶೋಭಾನೆ ಶೋಭಾನೆ ಪ ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವÀಂದಿಸಿ ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ ಸುಜನರೆಲ್ಲಾಲಿಪುದು ಶೋಭಾನೆ 1 ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ ಶಾಸ್ತ್ರಾರ್ಥವೇತ್ತನಾಗುತಲಿ ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ ಅಗ್ಗಳ ನೀನಾಗು 2 ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ- ನಿಖಿಳ ಯಜ್ಞಗಳಾಚರಿಸು ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು ಮಾನ್ಯರೊಳು ವರ್ತಿಸಿಸುಖಿಸು 3 ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ- ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು ನಿತ್ಯ ಸಂತಸದಿ ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ ಮಾಡಿ ನಿತ್ಯಸುಖಿಯಾಗು 4 ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ- ಅರ್ಥಿಯ ಪೊಂದು ಸ್ವರ್ಗಸ್ಥಿತಿ ಲಯಕರ್ತ ಗುರುರಾಮವಿಠಲ ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ ನಿತ್ಯ ಸತ್ಯಾಧನವ ಮಾಡಿಸುವಾ ಶೋಭಾನೆ 5
--------------
ಗುರುರಾಮವಿಠಲ
ಶೌನಕಾದಿ ಮುನಿಗಳಿಗೆ ಸಾನುರಾಗದಲಿ ಪೇಳಿದರು 1 ಕೈಲಾಸಶಿಖರ ಮೆರೆವುದು ಮೇಲಾದ ರತ್ನಕಾಂತಿಗಳಿಂ2 ಜಂಬುಕೇತಕಿ ಪನಸ ಪುನ್ನಾಗ ಸರ್ವಾತಿಶಯದಲಿ ತೋರುವದು 3 ಸಿದ್ಧಿದಾಯಕ ವೆಂದಿಲ್ಲಿ ಪದಧ್ಯಾನದಿ ಕುಳಿತಿಹರು 4 ದಿವಿಜ ಅವನಿಧರಾಗ್ರಣಿಯಾಗಿ ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ ಗಿರಿಯು ಮೆರೆಯುವುದು5 ಪಾರ್ವತಿಯೊಡನೆ ಸತಿ ನಮಿಸಿ ನುಡಿದಳು 6 ನುಡಿಯ ಲಾಕ್ಷಣದಿ ನಾಕರುಣಿಸುವೆ ಕೇಳೆಂದ7 ವರಮಹಾಲಕ್ಷ್ಮಿಯ ವೃತವು ದೊರೆವುದು ಸಕಲಸೌಭಾಗ್ಯ 8 ಶ್ರಾವಣ ಪೂರ್ಣ ಮಾಸಿಯ ದಿನದಿ ಪೂಜಿಪದು ವಿಶ್ವಾಸದಿಂದಾರಾಧಿಸುತಲಿ 9 ಪಕ್ವಾನ್ನ ಲೇಹ್ಯಾದಿ ನೈವೇದ್ಯ ತತ್ತನ್ನಿಯಾಮಕರ ಚಿಂತಿಪುದು 10 ಕೃಪಾಪಯೋನಿಧೆಯ ಪೂಜಿಪುದು ಬಿಂಬಾಪರೋಕ್ಷಿಗಳು ಪೂಜಿಪರು 11 ಕಾಮಿತ ಪಡೆದವರ್ಯಾರು ಮಹಾಮಹಿಮೆಯನು ಚನ್ನಾಗಿ12 ಮಡದಿ ತಾನಿರಲು ಕರೆಯುವರೆಲ್ಲಾರು ಪುರದಿ 13 ವನಜನಾಭನ ಶೇವೆಯೆಂದು ಗುಣದಿ ಭೂಷಿತಳು 14 ಬಂದಳು ವರಮಹಾಲಕ್ಷ್ಮಿ ಪರಮ ಸಂಭ್ರಮದಿ 15 ನಿರ್ಮಿಸುವನು ಜಗವೆಲ್ಲ ನೀ ಕರುಣಿಸು ಮಾತೆ 16 ಶ್ರಾವಣ ಹರುಷದಿಂದೆನ್ನಯ ವೃತವ ವರಗಳನಿತ್ತಳು ದಯದಿ 17 ಸಂತೋಷದಲಿ ಪೇಳಲವರು ಚಿಂತಿತ ಫಲವೀವುದೆಂದು 18 ಸಿಂಗರಿಸಿದಳಾದಿನದಿ ವಿಪ್ರಾಂಗನೆಯರನು ಕರೆದಳು 19 ಶಿರಿದೇವಿ ಪೂಜಾಸಾಧನವ ನೆರೆದರಾ ದ್ವಿಜನಮಂದಿರದಿ 20 ಕುಂಭಗಳಿಟ್ಟಘ್ರ್ಯಾದಿಗಳಿಂ ಸುರರ ಸಮ್ಮುಖದಿ 21 ಇಂದಿರ ದೇವಿಗಾರುತಿಯ ಬಂಧÀ£ವÀನÉ ಮಾಡುತಿಹರು 22 ಪೂಜಿಸುತಿರಲಾಗೃಹವು ಸೋಜಿಗವಾಯ್ತು ನೋಳ್ಪರಿಗೆ 23 ಕೊರಳೊಳುನವರತ್ನಹಾರ ಸಿರಿದೇವಿ ಕರುಣವಿದೆಂದು 24 ಇತ್ತರು ಬಾಗಿಣಗಳನು ಪೋದರು ತಮ್ಮ ಮನೆಗೆ 25 ಪುಣ್ಯದಿಂದೆಲ್ಲರು ನಾವೆಂ ಧನಧಾನ್ಯ ಸಂಪದಾಗಮನ 26 ಪಾಲಿಸುವಳು ಸಿರಿಯೆಂದು ಶಿವನು ಹೀಗೆಂದು ||27| ಕಾಯಜ ಜನನಿಯ ಕಾಯುವದೆಂದು ನೀ ತಿಳಿಯೆ 28 ನಿರ್ಮಲ ಭಕ್ತಿಜ್ಞಾನ ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲಿವನು ನಿರುತ ಪಠಿಸಲು30
--------------
ಕಾರ್ಪರ ನರಹರಿದಾಸರು
ಶೌರಿ ಬಾರೋ ಭಕ್ತರ ದೊರೆ ಬಾರೋ ಬಾಬಾ ಮನೆಗೆ ಪ ಚಾರುತರ ನವರತುನದ ಶೃಂ- ಗಾರ ರಥದೊಳು ಕುಳಿತು ಬೇಗನೇ ಭೇರಿ ವಾದ್ಯಗಳೆಲ್ಲ ಮೊಳಗಲು ನಾರಿ ರುಕ್ಮಿಣಿ ಭಾಮೆ ಸಹಿತಅ.ಪ ಸುರರು ಅಸರರು ಕೂಡಿ ಶರಧಿಯ ಮಥಿಸಲು ಭರದಿ ಪುಟ್ಟಲು ಸುಧೆಯು ಪರಮ ಹರುಷದಿಂದ ದೊರಕಿತಮೃತವೆಂದು ಅಸುರರೆಲ್ಲರು ಬರಲು ಬೆರಗಾಗಿ ಸುರರೆಲ್ಲ ಉಪಾಯವನರಿಯದೆ ಗಗನ ನೋಡುತಿರಲು ತ್ವರದಿ ಶ್ರೀಹರಿ ಅವರ ನೋಡುತ ಪರಿಪರಿಯ ಆಭರಣ ಪೀತಾಂ- ಬರಗಳಿಂದಲಂಕರಿಸಿ ಸುಂದರ ತರುಣಿ ರೂಪವ ಭರದಿತಾಳಿದೆ 1 ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ ಮರಳಿ ನೋಡಲಪೇಕ್ಷಿಸೆ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು ಇದುತರವಲ್ಲೆನುತ ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು ತರುಣಿಯಾದನು ಹರಿಯು ಪರಮಸೂಕ್ಷ್ಮದ ವಸನ ವಡ್ಡ್ಯಾ- ಣಗಳಲಂಕರಿಸುತ್ತ ವನದೊಳು ಚರಿಸುತಿರೆ ಹರ ಬೆರಗಾಗಿ ಹಿಂದೋ- ಡುತಲಿ ಬರೆ ಮರೆಯಾದ ದೇವನೆ 2 ಹಿಂದೆ ದೈತ್ಯನು ಬಹುಚಂದದಿ ತಪಗೈದು ಕಂದುಗೊರಳನ ಮೆಚ್ಚಿಸೇ ಬಂದನಾಗಲೇ ಶಂಭು ಇಂದುವರ ಬೇಡೆನಲು ವಂದಿಸಿ ಬೇಡಿದ ವರವ ತಾನು ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು ಹಿಂದೆ ಬೆನ್ನಟ್ಟಿದ ರಕ್ಕಸನೂ ಹಿಂದÀುರಗದಲೆ ಓಡುತಲೆ ಶ್ರೀ ತಂದೆ ಕಮಲನಾಭ ವಿಠ್ಠಲ ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ 3
--------------
ನಿಡಗುರುಕಿ ಜೀವೂಬಾಯಿ
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ