ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ಯಾತಕನುಮಾನವಯ್ಯಾ ಪ ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ಅ.ಪ. ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು ವಾಸ ಏಕತ್ರದಲ್ಲಿ ನೀ ಸಾಕ್ಷಿಯಾಗಿದ್ದು ದಾಸನಾದವಗಪ್ರ- ಯಾಸದಿ ಫಲಗಳುಣಿಸಿ ಲೇಶ ಘನಮಾಡಿ ಸಂತೋಷಪಡುವಾ ನಿನ್ನ ದ್ವೇಷಿ ನಾನಲ್ಲವಯ್ಯ ದೇಶಕಾಲಾದಿಗಳಿಗೀಶ ನೀನೆಂದರಿದು ದಾಸನಾಗಿರುವೆನೆಂದಾಶೆ ಪುಟ್ಟಿದ ಬಳಿಕ 1 ನಿತ್ಯ ತೃಪ್ತನೆ ನಿನ್ನ ಕೃತ್ಯಕೇನೆಂಬೆನೋ ಸತ್ಯಸಂಕಲ್ಪ ಹರಿಯೇ ಮೃತ್ಯುಮಾರಿಗಳೆನಗೆ ಹತ್ತಿಕೊಂಡದರಿಂದ ಸತ್ತುಪುಟ್ಟುವೆಯಿನ್ನು ದತ್ತಕರ್ತೃತ್ವ ಬೆನ್ಹತ್ತಿಕೊಂಡದರಲ್ಲಿ ಅತ್ಯಪರಾಧಿಯಂದತ್ತ ಮೊಗದಿರುಗದಿರು ಭೃತ್ಯವತ್ಸಲನೆಂದಗತ್ಯ ಮನಸೋತ ಬಳಿಕ 2 ವೇದವೇದ್ಯ ಸ್ವಗತ ಭೇದವರ್ಜಿತ ಪೂರ್ಣ ಮಾಧವ ಮಹಿದಾಸ ಆದಿನಾರಾಯಣ ವಿನೋದ ವಿಷ್ವಕ್ಸೇನ ಶ್ರೀದವಿಠಲಾ ನಿನ್ನ ಕ್ರೋಧ ವರರೂಪ- ವಾದ ವಾರ್ತೆಯು ಕೇಳಿ ಧೈರ್ಯಬಿಡದಾ ಬಳಿಕಿನ್ನು 3
--------------
ಶ್ರೀದವಿಠಲರು
ಇಲ್ಲವಾಯಿತು ಸಾಧು ಜನಕೆ ಎಲ್ಲಾ | ಇಲ್ಲವೆಂಬುದವರ ಚಿತ್ತದೊಳಗಿಲ್ಲಾ ಪ ತನುವಿಲ್ಲ ಮನವಿಲ್ಲ, ಮನದೊಳಗೆ ನೆನವಿಲ್ಲ | ಬಿನುಗಿನ ಸುಖವ ಬಯಸಲಿಲ್ಲ |ಅನುಮಾನ ಎಂಬುವದಲ್ಲಿ ಜನಿಸುವದಿಲ್ಲ |ಚಿನುಮಯಾತ್ಮಕರಾಗಿ ಚರಿಸುತಿಹರೆಲ್ಲ 1 ಸತಿ ಸುತರೆಲ್ಲ ಹಿತವರೆಂದೆನಿಸಲಿಲ್ಲ | ಪತಿತಪಾವನ ರಘುನಾಥ ನೀನನ್ನದಲೆ |ಮಿತಿಯ ಆಯುಷ್ಯ ಕಳೆದರಲ್ಲ 2 ಮೂರ್ತಿ ಭವತಾರಕನ | ವ್ಯಾಪ ಕಾಣದೆ ಅನ್ಯ ಕಾಣಲಿಲ್ಲ 3
--------------
ಭಾವತರಕರು
ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿಮೇರು ಶಿಖರವ ನೋಡುವತನಕ ಪ ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟುವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ 1 ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ2 ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳುಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ 3
--------------
ಚಿದಾನಂದ ಅವಧೂತರು
ಇಲ್ಲೆ ಉಂಟು ಮುಕುತಿ ನೋಡಿ ನೋಡಿ ಒಂದೆ ಮನದಲಿ ಸುಲಭವಾಗಿ ದೋರುತಿಹ್ಯದು ಗುರುಕರುಣದಲಿ ಧ್ರುವ ಏನುಹೇಳಲಿ ಸ್ವಾನುಭವ ಸುಖದ ಸಿದ್ಧಿಯ ಜ್ಞಾನಿಬಲ್ಲ ಭಾಸುತಿಹ್ಯ ಸ್ವಕೀಲ ಸಿದ್ಧಿಯ ಮನವ ಬಲಿದು ಮಾಡಿಕೊಳ್ಳಿ ಜ್ಞಾನಸಿದ್ಧಿಯ ತನುವಿನೊಳು ದೋರುತೀಹ್ಯ ಶ್ರೀಗುರು ಸುಧೆಯ 1 ನಿಟಿಲ ಭ್ರೂಮಧ್ಯ ದಾಟಿನೋಡಿ ಮುಕ್ತಿಯ ದಿಟವಾಗಿ ಕೂಡಿ ಪ್ರಭಯ ಜ್ಞಾನ ಶಕ್ತಿಯ ಕುಟಿಲವಲ್ಲ ಕೇಳಿ ಮಾತು ನಿಜಯುಕ್ತಿಯ ನಟನೆ ತನ್ನೊಳು ದೋರುವ ಗುರುಭಕ್ತಿಯ 2 ಲೇಸು ಲೇಸಾಯಿತು ಎನಗೆ ಭಾಸ್ಕರ ಕರುಣವು ಭಾಸುತಿಹ್ಯದು ವಾಸುದೇವನ ಪುಣ್ಯಚರಣವು ಮೋಸವಿಲ್ಲದೆ ನೀಗಿತು ಜೀವನ ಜನ್ಮಮರಣವುದಾಸ ಮಹಿಪತಿಗಾಯಿತು ಘನಸ್ಫುರಣವು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲೆವೆ ನಿಧಾನವು ಶ್ರೀಗುರುವೆ ನಿಮ್ಮಲ್ಲೆವೆ ನಿಧಾನವು ಎಲ್ಲರಿಗಿದು ತಾ ದುರ್ಲಭವಾಗಿಹ್ಯ ಸುಲಭದಲಿ ಒಲಿದಿಹ್ಯ ಸದ್ಗುರು ನಮಗಿಲ್ಲೆ ನಿಧಾನವು ಧ್ರುವ ಪಾದ ಪದ್ಮವ ತಿಳಿದು ವೇದಕಗೋಚರವು ಸದ್ಗತಿ ಸುಖ ಸಾಧಿಸುವವ ಧನ್ಯನು ಶೋಧಿಸಿ ಅತ್ಮದಿ ಬೋಧೆಯಲಿ ನಿಜ ಅದಿತತ್ವದ ಗತಿ ಭೇದಿಸಿ ತಿಳಿದವಗಿಲ್ಲಿವೆ 1 ಖುಲ್ಲ ಮನುಜರಿಗಿದು ತಿಳಿಯದೆ ಇಲ್ಲದಂತಾಗಿಹುದು ಎಲ್ಲಾ ದೈವದ ಮೂಲವು ಬಲ್ಲವಗಿದು ಸೊಲ್ಲಿನೊಳಗಿಹುದು ಕಲ್ಲಿನೊಳಿಹ ದೈವಿಲ್ಲವೆ ಇಹ್ಯ ಪ್ರಾಣದೊಲ್ಲಭ ಗುರುನೆಂದಿಲ್ಲೆವೆ ತಿಳಿದುವಗಿಲ್ಲೆವೆ 2 ಸುತ್ತೇಳು ಸಾಗರದ ಪೃಥ್ವಿಲಿಹ್ಯ ನಿತ್ಯವುಳ್ಳ ದೈವೀತನು ಸುತ್ತ ಸನಕಾದಿಗಳು ಮತ್ತೆ ದೇವರು ತೆತ್ತೀಸ ಕೋಟಿಗಳು ಹತ್ತಿಲೆ ಹೊಳೆಯುತ್ತ ಚಿತ್ತದ ತುದಿಯಲಿ ಸತ್ಯಕೈಲಾಸವೆ ಇತ್ತ ವೈಕುಂಠವು ಇಲ್ಲೆವೆ 3 ಕಾಶಿ ರಾಮೇಶ್ವರವು ಸಕಲ ಕ್ಷೇತ್ರವಾಸವಾಗಿಲ್ಲಿಹವು ದೋಷನಾಶನ ಕೃಷ್ಣೆಯು ಮಿಗಿಲಾದ ಏಸು ತೀರ್ಥಗಳಿಹ್ಯವು ವಾಸವಾಗಿಹವು ಸೂಸುತ ನದಿಗಳು ಈಶನ ಚರಣದಲಿ ಭಾಸುದು ಕಂಡವಗಿಲ್ಲೆವೆ 4 ಚೆಂದುಳ್ಳ ದ್ವಾರಕೆಯು ಗೋಕುಲ ವೃಂದಾವನ ಕುರುಕ್ಷೇತ್ರವು ಒಂದೊಂದೇ ಕ್ಷೇತ್ರದಲಿ ವಾಸವಾಗಿ ನಿಂದು ಮಾಡಿದ ಪುಣ್ಯವು ಹಿಂದಿನ ಕರ್ಮವು ಹೊಂದದೆ ಗಳಿಸುವ ಮಂದಾಕಿನಿ ನದಿಯಿಂದ ಫಲಿಲ್ಲಿವೆ 5 ಬ್ರಹ್ಮಾಂಡ ನಾಯಕನು ಅದ್ವೈತ ಸುಖವು ಉಂಡವಗಿದು ಪಿಂಡ ಬ್ರಹ್ಮಾಂಡೈಕ್ಯವು ಮಂಡಲದೊಳು ಪಿಂಡಾಂಡದಿ ಕಂಡವಗಿಲ್ಲ್ಲೆವೆ 6 ಸಂದೇಹ ವೃತ್ತಿ ಹರಿದು ಸದಮಲಾನಂದ ಮುಕ್ತಿಯಲಿ ಬೆರೆದು ಒಂದು ಪಥsÀವನರಿದು ಜಗದೊಳು ದ್ವಂದ್ವಗಳನೆ ಮರೆದು ಎಂದಿಗಗಲದಂತೆ ಶ್ರೀಪಾದವನಿಂದ ಮಹಿಪತಿಗೆ ಇಲ್ಲೆವೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲೇ ಹರಿ ಇರುವ ಪ ಬಲ್ಲವರದ ನೋಡಲಲ್ಲೇ ತೋರುವ ಅ.ಪ ಗಿಡದ ಬೇರು ಕಾಂಡ ಕೊಂಬೆ ರೆಂಬೆಗಳಲ್ಲಿ ಅಡಗಿ ಎಲೆಯೊಳ್ಹೀಚು ಹೂವ್ಕಾಯ್ಗಳಲ್ಲಿ ಮೃಡ ಸಖನಲ್ಲಲ್ಲೆ ವಿವಿಧ ರೂಪಗಳಿಂದ ಅಡಗಿದ್ದು ಬೆಳೆಸುವ ಕಳೆಗೊಳಿಸುವನು1 ವಸ್ತ್ರದ್ಹಾಸುಹೊಕ್ಕು ದಾರಗಳಂದದಿ ವಿಸ್ತಾರಗೊಂಡ ಈ ಲೋಕದೊಳು ಹಸ್ತಿವರದನಾದಿಮೂಲ ತಾ ನೆಲೆಗೊಂಡು ಸ್ವಸ್ಥದಿ ಪೊರೆವನನಂತ ಪ್ರಾಣಿಗಳ 2 ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ರೂಪ ವನು ತಾಳಿ ನಾರಾಯಣ ವಾಸುದೇವನು ಅನಿಮಿತ್ತಬಂಧು ಚರಾಚರ ಪೃಥ್ವಿಯ ನನುದಿನ ಪೊರೆವ ರಘುರಾಮವಿಠಲನು 3
--------------
ರಘುರಾಮವಿಠಲದಾಸರು
ಇವ ನೋಡಮ್ಮ ನವನೀತಚೋರ ದೇವದೇವ ಮಾ ಮನೋಹರ ಧ್ರುವ ಗೋವನಿವ ಗೋಪಾಲ ಶ್ರೀಧರ ಗೋವಿಸುವ ಇವ ದಾಮೋದರ ಸಾವಿರ ನಾಮದೊಡೆಯ ಸಹಕಾರ ಫಣಿ ಮೆಟ್ಟಿದ ವೀರ 1 ಸಿರಿಯ ಲೋಲನಿವ ನಂದಕುಮಾರ ಉರಗಶಯನ ಕೌಸ್ತುಭಭರ ಪರಮ ಪುರಷ ಹರಿಯ ಸುರವರ ಮರುಳಮಾಡಿದವ ಗೊಲ್ಲತೇರ 2 ಬೆಣ್ಣೆ ಮೊಸರು ಕದ್ದು ವೈವನ ಕಣ್ಣಿಲೆ ಕಟ್ಟಬೇಕು ಇವನ ಪುಣ್ಯಯುಳ್ಳ ಯಶೋದೆ ಕಂದನ ಬಣ್ಣಿಸೊ ಮಹಿಪತಿಗನುದಿನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇವನಾರೆ ಮನಸೂರೆಗೈದೋಡುವಾ ನವನೀತ ಮೆಲುವಾತ ಪರಿದೋಡುವಾ ಪ ಸವಿನೋಟ ರಸದೂಟವನೆ ಬೀರುವ ಸುವಿಲಾಸ ಪರಿಹಾಸಗಳ ತೋರುವ ಅ.ಪ ಓರೆನೋಟವ ತೋರುತ ನಲಿವ ಕ್ಷೀರವ ಕುಡಿವ ಬೆರಳಲಿ ಕರೆವ ಕೊರಳಿನ ಹಾರವ ಎಡಬಲಕೆಳೆವ ಕೊರಳನು ಕೊಂಕಿಸಿ ಪರಿಪರಿ ಕುಣಿವ 1 ನೀರಜನೇತ್ರನು ನೀರದ ಗಾತ್ರನು ನಾರಿಯತನುವನು ಬರಸೆಳೆಯುವನು ಚೋರನು ಭವಭಯಹಾರನು ಧೀರನು ಶ್ರೀರಮೆಯರಸನು ಮಾಂಗಿರಿವರನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇವನೆ ಪ್ರಹ್ಲಾದನಿಂದಲಿ ಉಪಾಸ್ಯ ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ. ವಲಯಕಾರದಿ ಶೇಷ ಛತ್ತರಿಯಾಗಿ ಹಲ ಮುಸಲ ಧರಿಸಿ ಎಡದಲಿ ವಾರುಣೀ ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ ನಲಿದು ಸೇರಿಸೆ ಇಂಥ ಆಸನದಿ ಕುಳಿತಾ 1 ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು ಆಗಮನುತ ಬಲದ ತೊಡೆಯಲ್ಲಿ ವಾಯು ಭೋಗ ರೂಪನು ಸರ್ವ ಆಭರಣ ಶೃಂಗಾರ ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ2 ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ ಕರ್ಣ ಕುಂಡಲವೂ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು ದುರುಳರಿಗೆ ಘೋರ ವರಭಕ್ತರಿಗೆ ಅಭಯ 3 ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ ವೈಜಯಂತಿ ಹಾರಾ ಕರ ಶಂಖ ಚಕ್ರವು ಪದ್ಮ ಗದೆ ಅಭಯ ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ 4 ಉರ ಉದರ ಶೃಂಗಾರ ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ ಕರಿಸೊಂಡಲಿನ ತೊಡೆಯು ಸುರವರದ ಚರಣಾ5 ಚರಣದಾಭರಣ ಸಾಲ್ಯೆರಳನಖ ಕಾಂತಿಗಳು ಪಾದ ಪದುಮಾ ಮೃಗ ಮುಖವು ನರಮೃಗಾಕೃತಿರೂಪ ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ 6 ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ ಮದನ ಇರಿಸಿ ಹೂ ಬಾಣವನು ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ 7 ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ ಅರಸಿ ಭಾರತಿಯ ಎಡತೊಡೆಯಲಿಟ್ಟೂ ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ ಇರಿಸಿಕೊಂಡತುಲ ಸಂತಸದಿಂದ ಮೆರೆಯೇ 8 ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ ಪತಿ ಭಿಕ್ಷೆ ಬೇಡುವಾ9 ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ ಶೋಭಿಸಲು ಎಡತೊಡೆಯ ಮೇಲೆ ವಾಣೀ ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ10 ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ 11 ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು ಈ ರೀತಿಯಿಂದ ಪರಿವಾರ ಸಹಿತಾ ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ ಪತಿ ಮನದಿ ತೊರೆ ಭಕ್ತರಿಗೆ 12 ಕಾಲನಾಮಕ ಗರುಡ ಬಾಲೆ ಸೌಪರ್ಣಿ ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ ಓಲಗವ ಕೊಡುತ ಹರಿಗನುಕೂಲನಾಗಿರುವ ಲೀಲ ಮಾನುಷ ಇಂಥ ವೈಭವದಿ ಮೆರೆವಾ13 ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ ಶಾಂತಮನದಲಿ ಸುಖಿಸಿ ಆನಂದಿಸುವನೂ14 ವರಭಕ್ತ ಪ್ರಹ್ಲಾದ ವರದನ್ನ ಈ ರೂಪ ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ ಪರಮ ಉತ್ಸಾರಕರನೊಂದೊಂದು ಅಂಶದಲಿ ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ 15 ಪರಿವಾರ ಆಭರಣ ಆಯುಧಗಳಿಂ ಮೆರೆವ ನರಹರಿಯ ಈ ರೂಪ ನಿರುತ ಸ್ಮರಿಸೇ ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ16
--------------
ಅಂಬಾಬಾಯಿ
ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು ಪ ದಾವನು ಶ್ರಿ ಹರಿ ಪಾವನ ನಾಮವ ಆವಾಗ ನೆನೆವುತ ಸಾವಧನಾದಾ ಅ.ಪ ಹಿಂದಿನ ಪುಣ್ಯದಲಿ ನಾನೀಗ ಬಂದೆನು ನರದೇಹದಲಿ | ಮುಂದಾವ ಗತಿಗಳೋ ಛಂದದ ತಿಳಿಯದು | ಮಂದರ ಧರ ಸಲಹೆಂದು ಮೊರೆಯಿಡುವ 1 ಇದ್ದಷ್ಟರೊಳುದಾವ ಶೇವೆಗೆ ಕದ್ದಿರ ತನುಮನವಾ | ಸಿದ್ಧರ ನೆರೆಯಲಿ ಶಿದ್ಧ ಬೋಧಾಮೃತ | ಬುದ್ಧಿಲಿ ಸೇವಿಸಿ ಗದ್ದಳವಾಗಾ 2 ಗುರು ಮಹಿಪತಿ ಸ್ವಾಮಿ ಚರಣಕ ಶರಣೆಂದವನು ಪ್ರೇಮಿ | ಗುರು ವಚನವನಂದದಿ ಧರೆಯೊಳು ನಡೆಯುತ | ಗುರು ಭಕ್ತಿ ಜಾಗಿಸಿ ಗುರುತನಕ ಬಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇವುಗಳ ಹಾವಳಿಗಂಜುವಳಲ್ಲ ಅ ಲ್ಲವುಗಳ ಸ್ಮøತಿಗೆ ನಾನಂಜುವೆನೆ ಪ ಚಂದ್ರ ಚಂದ್ರಿಕೆಯು ಉದಯಿಸಲ್ಯಾತಕೆ ನಿಂದ್ರಿಸುವೆನೆ ನಾನದರನ್ನು ಇಂದ್ರನನುಜನಾ ಶ್ರುತಿಗೆ ಸ್ಮøತಿಗೆ ಬರಲು ನಿಂದ್ರಿಸಲಾರೆನೆ ನಿಮಿಷ ಮನ 1 ಪಲ್ಲವಿಸವ್ಯಾತಕೆ ಚೂತ ತರುಗಳಿಗಿನ್ನು ನಿಲ್ಲಿಸುವೆನೆ ಅದರುಲ್ಬಣವ ಪಲ್ಲವ ಪಾದವ ಮನಸಿಗೆ ಬಂದರೆ ತಲ್ಲಣಿಸುವೆನೆ ತಾವರೆ ನಯನೆ 2 ಅಂಬುದಗಳೆಲ್ಲ ಅಂಬರವೇರಲಾ ಇಂಬು ಕೊಡೆ ಅಂಬುದ ಶ್ಯಾಮನು ಮನದಲಿ ನಿಲಲು ಕಂಬು ಕಂಠಿ 3 ಕುಂದ ಕುಸುಮಗಳು ವಿಕಸಿತವಾದರು ಅಂದಗೆಡುವುದಿಲ್ಲ ಮನಸಿನಲಿ ಕುಂದರದನ ಎನ್ನ ಮನಸಿಗೆ ತೋರಲು ಕಂದಿ ಕುಂದುವೆ ಮನ ಮಂದಿರದಿ 4 ಏವಮಾದಿಗಳೆಲ್ಲ ಏನು ಮಾಡವೋ ವಾಸು- ದೇವವಿಟ್ಠಲ ಸ್ಮøತಿ ಬಾರದಿರೆ ಶ್ರೀವರ ಚಿತ್ತಕ್ಕೆ ಬಂದರೆ ನಿಂದರೆ ತಾವರೆನಯನೆ ನೀ ತಂದು ತೋರೆ 5
--------------
ವ್ಯಾಸತತ್ವಜ್ಞದಾಸರು
ಇಷ್ಟಾರ್ಥ ಪಾಲಿಸಯ್ಯ ಪ ಭೃಷ್ಟನಾದೆನು| ಧರಣಿಯೊಳಗತಿ| ದುಷ್ಟಜನ ಸಂಸರ್ಗದಿಂದಲಿ| ಕೃಷ್ಣನಿನ್ನಯ| ದಾಸರಾಗಿಹ| ಶ್ರೇಷ್ಠ ಜನರನು| ಪೊರೆವ ತೆರದಿ 1 ಗತಿಹೀನನಾದೆನಯ್ಯ|| ಮತಿಯ ಪಾಲಿಸಿ | ಕರುಣದಿ ಸ| ದ್ಗತಿಯು ದೊರಕುವ| ತೆರದಿ ನಿನ್ನನು| ಪತಿಕರಿಸಿ ಪಿತ| ನಂತೆ ಪೊರೆವ 2 ಪಂಕಜನಾಭ ದೇವ| ವೆಂಕಟರಾಯ| ಕಿಂಕರರನು ಪೊರೆವ| ಕಿಂಕರಗೆ ಮತಿ| ದೋರಿ ಪೊರೆಯೈ| ಪಂಕಜಾಂಬಕ | ಪರಮಪಾವನ 3
--------------
ವೆಂಕಟ್‍ರಾವ್
ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು ಶಿಷ್ಟರ ನಡತೆಲ್ಲೆಲ್ಲೂ ಗುರುವೇ ಬಲು ಕಷ್ಟದೊಳಗೆ ನಾ ಮುಳುಗಿರುವೆ ನೀ ಕೊಟ್ಟ ಅಭಯದಿಂ ಬದುಕಿರುವೆ ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣುಸಾರಥಿಯ ಪ್ರೀಯ ಮಗುವೆ ಬಾ ಬಾ ಗುರುವೆ ಪ ಇತ್ತರು ಸರಿಯಿಲ್ಲ ಈ ಮಾತು ಹೊರಗೆ ಪೇಳುವವಲ್ಲಾ ನಾ ನಿದ್ದೆ ಪೂರ್ವದಲಿ ಅತಿ ಖುಲ್ಲಾ ಶಿಲೆಯನು ಸುಂದರ ಮೂರ್ತಿಗೈದತೆರ ಬಲು ವಿಧದಲಿ ಸಲಹಿದಿಯಲ್ಲ ಹರಿಬಲ್ಲಾ ಜ್ಞಾನವಿತ್ತಿ ಹರಿಪಾದದಲ್ಲಿ ಅಭಿಮಾನವಿತ್ತಿ ಸುಖವೆಲ್ಲಾ ಬಲುಹೇಯವೆಂದು ತಿಳಿಸಿದಿಯಲ್ಲಾ ಮೇಲ್ವರದಿ ರಂಗನೊಲಿಯುವ ಸೊಲ್ಲಾ ಅಸನ ವಸನಗಳು ಕೊಟ್ಟು ಕೊನೆಗೆ ತುಚ್ಛಿಸುವ ನಿನ್ನ ಗುಣ ತಿಳಿಯಲಿಲ್ಲಾ ಇದು ಥsÀರವಲ್ಲಾ ನಿನ್ನ ಪಾದವೇ ಸಡಗರ ಸಿರಿ ಮೇಲೆ ಸುರಪುರಿ ಜ್ಞಾನನಿಧಿ ಥsÉರಿ ಕಾಶಿ ಗಯಾ ಮಧುರಿ ಹರಿ ಓಂ ಓಂ ಓಂ ನಿನ್ನ ನಾಮ ದುರಿತವೆಂಬೊ ಕರಿ ಕುಲಕೆ ಘನ ಹರಿ ಪರಿ ತಿಳಿದೆನೆಲೊಧೊರಿ ಹರಿ ಓಂ ಓಂ ಓಂ ಇನ್ನಾದರು ಕೋಪವತ್ವರಿ ಕರುಣಿ ಕಣ್ತೆರಿ ಸುತಗೆ ಸುಖಗರಿ ತೋರೋ ನಿನ್ನ ಮಾರಿ ಹರಿ ಓಂ ಓಂ ಓಂ ಎನ್ನಯ ಬಿsÀಷ್ಟಗಳನ್ನು ನೀಡದಿರೆ ನಿನ್ನ ವಿಮಲ ಕೀರ್ತಿಗೆ ಗುರುವೆ ಕುಂದನ್ನು ಬಿಡದೆ ತಿಳಿ ನಾ ತರುವೆ ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣು ಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ 1 ಪಂಥವೇ ಹೇ ಮಹಾಕಾಂತ ಪ್ರಿಯ ನಿನ್ನ ಸಂತತಿಯೊಳು ಸೂರಿಗಳೊಡೆಯ ನೀನೆಂತು ಪೊಂದಿದೈ ನಿರ್ಭಿಡಿಯಾ ಇದು ಸಂತರು ಕೇಳಿದರಾಶ್ಚರ್ಯ ವಂತರು ಆಗರೆ ಸಾಕು ಮುಂದೆಯನ್ನಂತರಂಗವೇ ತವನಿಲಯ ಆಗಲಿ ಜೀಯಾ ಕಂದನ ಕಾಯುವದಂತು ಸಹಜ ಸಿರಿ ಹಿಂದಕೆ ಪಾಂಡವನೆಂಭಿರಿಯಾ ಆ ಗಂಧರ್ವನ ಮಗನಾದ ಗಯಾ ತಾ ಬಂದು ಹೋಗಲವನನು ಮೊರೆಯ ಸಿಂಧು ಜಪನ ಸಹ ಲಕ್ಷಿಸದಲೆ ತ್ವರ ತಂದು ಕೊಟ್ಟನವನಿಗೆ ವಿಜಯಾ ಮೇಲ್ಹರಿಯದಯಾ ಇದು ಅಲ್ಲದೆ ಬಹು ಭಕ್ತರು ಜ್ಞಾನಯುಕ್ತರು ಸುಧಿಯ ಭೋಕ್ತರು ನೆನೆದವರ ದು:ಖ ಬಿಡಿಸಿದರು ಸುಧೆಯ ಬಡಿಸಿದರು ಹರಿ ಓಂ ಓಂ ಓಂ ಬಲು ಹಿತದಿ ಶುಭವ ಕೋರಿದರು ತಾಪ ಹೀರಿದರು ವಾಕ್ಯ ಸಾರಿದರು ಹರಿಯ ತೋರಿದರು ಹರಿ ಓಂ ಓಂ ಓಂ ನೀನಾದರೂ ಬಹಳರ ಪೊರದಿ ಈ ಹೀನ ಓರ್ವ ನಿನ್ನಗೆಯರವೆ ಮರಿಯಬ್ಯಾಡ ಕರುಣೆ ಕರವ ಮುಗಿವೆ ಸಿಟ್ಟು ಮಾತ್ರ ನೀನಾಗ ಬೇಡ2 ಪರ ಖರೆ ಗುರುವಿಲ್ಲದ ಗತಿಯನ್ನು ಧರೆತ್ರಯದಿ ತೋರು ತುಸು ನೋಡೋಣ ಗಿರಿಧರಿಯ ಬಿಟ್ಟು ನಿಲ್ಲುವುದೇನು ಗುರುವೆ ತ್ರಿಟಿಯ ಬಿಟ್ಟೊರುಷವಾಗುತದೆ ಹಿರಿಯರಿ ಪೇಳ ವದಿನ್ನೇನು ಹೇ | ಸುರಧೇನು ಗುರುವೆ ಸುಖದ ಖಣಿ ಗುರುತನುಮಣಿ ಮಣಿ ತಿಳಿದೆ ನಾ ಮನದಾಗೆ ಪರಕಿಸಿದೆನ್ನನು ಪೊರೆಯೆ ಯನುತ ಬಾ ಯ್ತೆರೆಯುತ ಮಣಿಸುವೆ ಶಿರನಿನಗೆ ಮೂಜಗದಾಗೆ | ನಿನ್ನಿಂದ ಎನಗೆ ಸದ್ಬುದ್ಧಿ ಯೋಗದಾಸಿದ್ಧಿ ಕಾರ್ಯದಾಸಿದ್ಧಿ ಸ್ವರ್ಗದಾಸಿದ್ಧಿ ಹರಿ ಓಂ ಓಂ ಓಂ ನಿನ್ನಿಂದ ಪಡೆದ ವಿಜ್ಞಾನ ಹರಿಯರಾ ಖೂನಾ ಲೋಕದೊಳು ಮಾನ ಮುಕ್ತಿ ಸೋಪಾನ ಹರಿ ಓಂ ಓಂ ಓಂ ನೀನೇವೆ ಯನಗೆ ಆಭರಣ ಝಗಝಗಿಪ ವಸನ ಶ್ರೀಹರಿಯ ಚರಣ ವಿರಜಾನದಿ ಸ್ನಾನ ಹರಿ ಓಂ ಓಂ ಓಂ ನಿನ್ನೊಮ್ಮೆ ನೆನಸೆ ಪವಮಾನ ಕಾಯ್ವ ಪ್ರತಿದಿನ ಇದಕೆ ಅನುಮಾನ ಇಲ್ಲ ಏನೇನ ಹರಿ ಓಂ ಓಂ ಓಂ ಗಡ ಕೇಳ್ವಡೆಯನೆ ಕಡೆ ನುಡಿಯನ್ನದು ಭಿಡೆಯ ಇಡದೆ ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ 3
--------------
ಅಸ್ಕಿಹಾಳ ಗೋವಿಂದ
ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ ನಿಸ್ಪøಹರಾಗದ ಜನರಿಗೆ ಕಡೆಯಲಿ ಸಸೆÀ್ಪಂಟಾದೀತೆಂದು ತಿಳಿದು ಅ.ಪ ಆಸೆಂಬುವದಾತ್ಮ | ರಾಜಾ ತಾಸಗುಣ ಬ್ರಹ್ಮ ಲೇಸಾಗಿ ರಾಣಿಯು ಮೂಲ ಪ್ರಕೃತಿ ಗುಲಾಮನೆಂಬುದು ಚತುರ್ಮಖನೆನ್ನುತ 1 ದಹಿಲವೆಯಿಂದ್ರಿಯಗಳು | ದ್ವಾರವು ನಹಿಲವಿದು ಭುವಿಯೋಳು ಅಹಹಾ ಅಟ್ಟವು ಮದಗಳು ನೋಡಲು ವಿಹಿತವೇಳನೆ ಬಂದು ವೆಸನಗಳು 2 ನಿಜವಿದು ಮೂರನೆ ಬಂದು ತ್ರಿಕಾಲಗಳ್ 3 ಯಿಲ್ಲದಿಹದು ಮರ್ಮ ತುರುಫೆಗುಣರಾಶಿಗಳೆಂದೀಪರಿ ಅರಿತಾಡಲದೆ ಪರಮಾರ್ಥವಹದು 4 ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್ ಈ ವಿಧ ಪೆಸರಿರಲೇನ್ ಭಕ್ತರ ಗುರುರಾಮ ವಿಠಲ ಕೈಬಿಡ 5
--------------
ಗುರುರಾಮವಿಠಲ
ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ ನಿಸ್ಪøಹರಾಗದ ಜನರಿಗೆ ಕಡೆಯಲಿ ಸಸೆÀ್ಪಂಟಾದೀತೆಂದು ತಿಳಿದು ಅ.ಪ ಆಸೆಂಬುವದಾತ್ಮ | ರಾಜಾ ತಾಸಗುಣ ಬ್ರಹ್ಮ ಲೇಸಾಗಿ ರಾಣಿಯು ಮೂಲ ಪ್ರಕೃತಿ ಗುಲಾಮನೆಂಬುದು ಚತುರ್ಮಖನೆನ್ನುತ 1 ದಹಿಲವೆಯಿಂದ್ರಿಯಗಳು | ದ್ವಾರವು ನಹಿಲವಿದು ಭುವಿಯೋಳು ಅಹಹಾ ಅಟ್ಟವು ಮದಗಳು ನೋಡಲು ವಿಹಿತವೇಳನೆ ಬಂದು ವೆಸನಗಳು 2 ನಿಜವಿದು ಮೂರನೆ ಬಂದು ತ್ರಿಕಾಲಗಳ್ 3 ಯಿಲ್ಲದಿಹದು ಮರ್ಮ ತುರುಫೆಗುಣರಾಶಿಗಳೆಂದೀಪರಿ ಅರಿತಾಡಲದೆ ಪರಮಾರ್ಥವಹದು 4 ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್ ಈ ವಿಧ ಪೆಸರಿರಲೇನ್ ಭಕ್ತರ ಗುರುರಾಮ ವಿಠಲ ಕೈಬಿಡ 5
--------------
ಗುರುರಾಮವಿಠಲ