ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಂಕರ ಶಿವಶಂಕರ ಶಿವಶಂಕರ ಶಿವಶಂಕರ ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ. ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ1 ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2 ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ ಕರುಣಾಲವಾಲ ಮಹೇಶ್ವರ ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3 ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ ಮೃಡ ನಮೋ„ಸ್ತು ಸುಮನನಿಯಾಮಕ 4 ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5 ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6 ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7 ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ತುಪಾಕಿ ವೆಂಕಟರಮಣಾಚಾರ್ಯ
ಶಂಕರನಾರಾಯಣ ಸಲಹೊ ಎನ್ನ | ಪಂಕಜ ಪಾರ್ವತಿ ಪ್ರಿಯಾ | ಕಿಂಕರನ ಮೊರೆ ಕೇಳು ಪ ಶಂಖ ಚಕ್ರಪಾಣಿ | ಮೃಗಾಂಕ ಮೌಳಿ ಅಹಿಪರಿ-| ಯಂಕ ರುಂಡಮಾಲಾ ಶ್ರೀ | ವತ್ಸಾಂಕ ಭುಜಗಭೂಷಣ ವಿಷ್ಟು 1 ನಂದಿಗಮನ ಗರುಡಾರೂಢಾ | ಅಂದ ಭಸ್ಮಧರ ಕಸ್ತೂರಿ | ಸಿಂಧು ವೈರಿ 2 ಪೀತಾಂಬರಧರ ಕೃತ್ಯವಾಸಾ | ಜಾತರಹಿತ ಜಾಹ್ನವಿಧರ | ವಿ- ಧಾತ ಜನಕ ತ್ರಿಶೂಲಪಾಣಿ | ವಾತನೋಡಿಯ ಶಿವ ಗೋವಿಂದ 3 ಕೈಲಾಸವಾಸ ವೈಕುಂಠ | ಲೋಲ ಮಹಾಲಿಂಗ ರಂಗಾ | ಜ್ವಾಲನೇತ್ರ ಕಮಲನಯನಾ | ಕಾಲಾ ನೀಲವರ್ಣ ಕಪರ್ವಿ 4 ರಾಜನೊಬ್ಬ ಭೃತ್ಯನೊಬ್ಬ | ಪೂಜ್ಯನೊಬ್ಬ ಮಾಳ್ಪನೊಬ್ಬ | ಮೂಜ್ಜಗೇಶ ವಿಜಯವಿಠ್ಠಲ | ರಾಜ ತಾತ ಈಶ ಮೊಮ್ಮಗ 5
--------------
ವಿಜಯದಾಸ
ಶಂಕರಾ ಪೊರೆಯಯ್ಯ ನಾ ನಿನ್ನ ಕಿಂಕರ ಪ ಪಂಕಜಾಸನಕುವರ ಮನದ ಶಂಕ ನಾಶಗೈಸಿ ಶೇಷಪ ರ್ಯಂಕಶಯನನ ಪಾದ ಪಂಕಜದೇಕ ಭಕುತಿಯನಿತ್ತು ಸಲಹಯ್ಯಅ.ಪ ನಿಟಿಲನಯನ ಧೂರ್ಜಟಿಯೆ ಸೋಮಧರಾ ಜಟಾಜೂಟನೆ ಕಠಿಣವೆನ್ನಯ ಕುಟಿಲಮತಿಯ ಜಟಿಲಕಳೆದು ನಿಷ್ಕುಟಿಲ ಮನದೊಳು ವಿಠಲಮೂರ್ತಿಯ ಧೇನಿಸಲು ಹೃ ತ್ತಟದಿ ದಿಟಮನ ಕೊಟ್ಟು ರಕ್ಷಿಸಯ್ಯ 1 ಘೋರ ದುರಿತಾಪಹಾರ ತ್ರಿಪುರಹರ ಕರುಣಾಸಮುದ್ರನೆ ನಿರುತ ಶ್ರೀಹರಿಚಾರುಚರಣಸ್ಮರಣೆ ಕರುಣಿಸಿ ಪೊರೆಯೋ ಗುರುವರ ಸುರನದೀಧರ ಪಾರ್ವತೀವರ ಕರಿಗೊರಳ ಕೈಲಾಸಮಂದಿರ2 ಸರ್ಪಭೂಷಣ ಶೂಲಿ ಡಮರುಧರ ಕಂದರ್ಪಹರ ಶಿವ ಸರ್ಪಗಿರಿ ಶ್ರಿ ವೆಂಕಟೇಶಗೆ ಸರ್ವಭಕ್ತಿ ಸಮರ್ಪಿಸಯ್ಯ ಆಪತ್ತುಹರ ಸಂಪತ್ತುಕರ ಶಾರ್ವರೀಕರಧರ ಶುಭಕರ 3 ಶಂಬರಾಂತಕವೈರಿ ಭಸಿತಧರ ಬೆಂಬಿಡದೆ ಸಲಹೊ ಶಂಭು ಶಚಿಪತಿಬಿಂಬ ಗುರುವರ ಸಾಂಬ ಪೊಂಬಸುರಕುವರ ತ್ರ್ಯಂಬಕಾ ತ್ರಿಪುರಾಂತಕ ಶುಕ 4 ಗಿರೀಶ ಸುರವರ ರುಂಡಮಾಲಾಧರ ಕರಿಚರ್ಮಾಂಬರ ನಿರುತ ಹೃದಯಸದನದೊಳನ ವರತ ಉರಗಾದ್ರಿವಾಸ ವಿಠಲನ ಚರಣಸರಸಿಜಮಧುಪ- ನೀ ಸುಖ ಸವಿದು ಸೇವಿಪ ವೈಷ್ಣವಾಗ್ರಣಿ5
--------------
ಉರಗಾದ್ರಿವಾಸವಿಠಲದಾಸರು
ಶಂಕರಾವ ಮಾಂ ಶಂಕರಾವ ಮಾಂ ಶಂಕರಾವ ಮಾಂ ಕಿಂಕರಂ ತವ ಪಶಂಕರಾವ ಮಾಂ ಪಂಕಜಾಲಯಾ ಲಂಕೃತಾಂಘ್ರಿಣಾ ನಿರತ ಪೂಜಿತ ಅ.ಪ ಫಾಲಲೋಚನ ಫಣಿವಿಭೂಷಣ ಕಾಲಖಂಡನ ಕಲುಷಭಂಜನಲೋಲಕಂಕಣಾಲಿಪ್ತಚಂದನ ಮೂಲಕರಣ ಮೃದುಸುಭಾಷಣ 1ಭಕ್ತಪಾಲಕ ಮುಕ್ತಿದಾಯಕ ಶಕ್ತಿಪ್ರೇರಕ ಯುಕ್ತಿಬೋಧಕತ್ಯಕ್ತಲೌಕಿಕ ಮುಕ್ತಬಂಧಕ ದಿಕ್ತಟಾದಿಕ ವ್ಯಕ್ತರೂಪಕ 2ಭೂತಭಾವನ ಭೂರಿಲೋಚನ ಭೀತಿಭೇದನ ನೀತಿವರ್ಧನವೀತಬಹುಜನ ವಿತತಸದ್ಗುಣ ಪಾತಕೀಜನ ಪಾಪ ಶೋಧನ 3ಶಿವ ಮಹೇಶ್ವರ ಶಿವಗುಶೇಖರ ಭವ ಪರಾತ್ಪರ ಭುವನಮಂದಿರಧ್ರುವ ದಿಗಂಬರ ಧೂರ್ತಪುರಹರ ದಿವಪ ಭಾಸುರ ಶ್ರೀ ಉಮಾವರ 4ತಿರುಪತೀತಿಭೂಧರ ವರೇಸದಾ ವರದ ವೆಂಕಟೇಶ್ವರ ಇತಿಸ್ಥಿತವರ ಕಕುದ್ಗಿರೀಶ್ವರ ಗಂಗಾಧರ ಚರಣಸೇವಕಂ ಮಾಂ ಕುರು ಪ್ರಭೂ 5ಓಂ ಪರಮ ಪುರುಷಾಯ ನಮಃ
--------------
ತಿಮ್ಮಪ್ಪದಾಸರು
ಶಕುನವೆ ಬಲು ಶಕುನವೆ ಸಖ ಕೃಷ್ಣನ ಮುದ್ದು ಮುಖವ ಕಾಂಬುವೆ ನೀಗ ಪ. ಹಾಲು ಮೊಸರಿನ ಕುಂಭ ಮೇಲಾದ ಘ್ರತÀ ಬೆಣ್ಣಿಸಾಲುಸಾಲಾಗಿ ಎದುರಾಗಿ ಇಂದೀವರಾಕ್ಷಿಸಾಲುಸಾಲಾಗಿ ಎದುರಾಗಿ ರಂಗನ ಕಾಲಿಗೆಶಿರವ ನೀಡುವಂತೆ ಇಂದೀವರಾಕ್ಷಿ 1 ಕೋಟಿ ಜನರು ಕೂಡಿ ತ್ವಾಟ ಪಟ್ಟಿಗಳದಾಟಿ ನೀಟಾದ ಹಂಸ ಗಿಳಿವಿಂಡುನೀಟಾದ ಹಂಸ ಗಿಳಿ ವಿಂಡು ನಡೆದವುಹಾಟಕಾಂಬರನ ದಯವಿದು ಇಂದೀವರಾಕ್ಷಿ 2 ಜತ್ತಾಗಿ ದ್ವಾರಕೆಯ ಹತ್ತಿರ ಬರುತಿರೆಮುತ್ತಿನ ಹೇರು ಇದುರಾಗಿ ಇಂದೀವರಾಕ್ಷಿಮುತ್ತಿನ ಹೇರು ಇದುರಾಗಿ ರಂಗಯ್ಯಹಸ್ತಲಾಘವ ಕೊಡುತಾನೆ ಇಂದೀವರಾಕ್ಷಿ3 ಸಾವಿರ ಅಂಗಡಿ ಸಾಲಾದ ಬಾಜಾರ ನೇರಳೆ ಹಣ್ಣು ಇದುರಾಗಿ ಇಂದೀವರಾಕ್ಷಿನೇರಳೆ ಹಣ್ಣು ಇದುರಾಗಿ ರಂಗಯ್ಯಮೇಲು ಕರುಣದಲಿ ಕರೆಸುವನು ಇಂದೀವರಾಕ್ಷಿ 4 ಹಸ್ತಿನಾಪುರದವರು ಸಪ್ತಪ್ರಾಕಾರ ದಾಟಿಮತ್ತೆ ಶ್ರೀಗಂಧ ಇದುರಾಗಿ ಇಂದೀವರಾಕ್ಷಿಮತ್ತೆ ಶ್ರೀಗಂಧ ಎದುರಾಗಿ ಬಲರಾಮಅರ್ಥಿಲೆ ಬಂದು ಕರೆವÀನು ಇಂದೀವರಾಕ್ಷಿ5 ವ್ಯಾಲಾಶಯನನ ಮನೆಯ ಏಳು ಬಾಗಿಲದಾಟಿಬಾಳೆಯ ಹಣ್ಣು ಇದುರಾಗ ಇಂದೀವರಾಕ್ಷಿಬಾಳೆಯ ಹಣ್ಣು ಇದುರಾಗ ರಂಗಯ್ಯಕೇಳೋನು ಕ್ಷೇಮ ಕುಶಲವ ಇಂದೀವರಾಕ್ಷಿ6 ನಾಗಶಯನನ ಮನೆಯ ಬಾಗಿಲು ಹೊಗಲಿಕ್ಕೆನಾಗಸಂಪಿಗೆಯ ಮುಡಿದವರು ಇಂದೀವರಾಕ್ಷಿನಾಗಸಂಪಿಗೆಯ ಮುಡಿದವರು ಬಂದರು ಈಗರಾಮೇಶನ ದರುಶನಕೆ ಇಂದೀವರಾಕ್ಷಿ 7
--------------
ಗಲಗಲಿಅವ್ವನವರು
ಶತ್ರುಗಳ ಬೇಗ ಜಯಿಸು ಪ. ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ ನಿನ್ನ ತೋರೆಂದು ಹಾಟಕ ಬಂದ ದೈತ್ಯನ ದೇಹದಿಂದ ದೀನ ಬಂಧು ಗೋವಿಂದ 1 ಶತ್ರುಸಂಚಯ ಪಚನ ವಿಭಾವನ ದಾನವಕೂಟ ಮಥನ ಲೋಕಪಾವನ ದಯಕರ ಪಕ್ಷಿಗಮನ ಗೆಲ್ವ ಶಕ್ತಿಕೊಡುವರೆ ಬಲ್ಲನ 2 ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ ಲಾಲಿಪರಿಲ್ಲ ಆದರು ಭಯವಿಲ್ಲ ಸೂತ ರಕ್ಷಿಸು ಜಗನ್ನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶತ್ರುಭಯ ಪರಿಹರಿಸೊ ಭೂತರಾಜ ಪ ಭವಕೆ ಭೀಕರ ಭಾವಿ ಭೀಮನ ಭಜಿಪ ಭೋಜಾ ಸುತೇಜಾ ಅ.ಪ. ಇಂದು ನೀನೆ ನಾನೆಂದು ಕಮರಿ ಕೂಪದಿ ನೊಂದೆನೊ ಭಾವಿ ನಂದಿವಾಹನ ಮಂಗಳ ಪ್ರದ ನೀಲಕಂಠಾ 1 ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹ ನಿನ್ನ ಲೋಲ ಮೂರುತಿಯ ನೆನೆವೆ ಫಾಲನಯನಾ ಪಾಲಿಗೇ ಪಾಲನೆಂತೆಂದು ಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ 2 ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದು ಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆಪಾಲಾ ದಿಟ್ಟ ಗುರು ಕೃಷ್ಣವಂದಿತ ತಂದೆ-ವರದಗೋಪಾಲವಿಠ್ಠಲನ ಸಹಜ ಬಂದು 3
--------------
ತಂದೆವರದಗೋಪಾಲವಿಠಲರು
ಶಂಭು ಶಂಕರನೆ ನಿನಗೊಂದಿಸಿ ಬೇಡುವೆ ಬಿಂಬದಲ್ಲಿರುವ ಮನ ಸ್ವಾಮಿಯ ತೋರೈ ಪ. ರುದ್ರ ದೇವನೆ ಮನಶುದ್ಧಿಯ ನೀ ಮಾಡಿ ಶ್ರದ್ದೆಯಿಂದಲಿ ಅನಿರುದ್ಧನ ತೋರೈ 1 ಸಿದ್ದಗುಣಗಳೊಡೆಯ ಉದ್ದರಿಸೆನ್ನ ಹದ್ದುವಾಹನ ಪ್ರದ್ಯುಮ್ನನ ತೋರೈ 2 ಶಂಕರನೇ ನಿನ್ನ ಕಿಂಕರಳನೆ ಮಾಡಿ ಮಂಕುಬುದ್ದಿಯ ಬಿಡಿಸಿ ಸಂಕರುಷಣನ ತೋರೈ 3 ವಾಸುದೇವನಿಗೆ ಶಿಶುವಿನ ಶಿಶು ನೀನಾಗಿ ಹುಸಿಯ ಮಾಡದೆ ವಾಸುದೇವನ ತೋರೈ 4 ಪಾರ್ವತಿ ಪತಿಹರ ಪಾಪವ ಕಳೆಸೆನೆಗೆ ಪಾರ್ಥನ ಸಖನ ನಾರಾಯಣನ ತೋರೈ 5 ನಂದಿವಾಹನ ನಿನಗೊಂದಿಸಿ ಬೇಡುವೆ ಬಂಧನ ಬಿಡಿಸಿ ಗೋವಿಂದನ ತೋರೈ 6 ರಮಾವಲ್ಲಭ ವಿಠಲ ನಾಮವ ಅನುಗಾಲ ನುಡಿವಂತೆ ವರಗಳ ನೀ ನೀಡೈ 7
--------------
ಕಳಸದ ಸುಂದರಮ್ಮ
ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ಪ ರಂಭ ಜನಕ ಕರುಣಾಂಬುಧಿ ಗುರುವರ ಅ.ಪ. ಮುರಾರಿ ಮಹದೇವ ನಿನ್ನಯ ಪಾದ ವಾರಿಜದಳಯುಗವ ಸಾರಿದೆ ಸತತ ಸರೋರುಹೇಕ್ಷಣ ಹೃ ದ್ವಾರಿಜದೊಳು ತೋರು ಗಾರುಮಾಡದಲೆನ್ನ ಅಮಿತ ಗುಣಗುಣ ವಾರಿನಿಧಿ ವಿಗತಾಘ ವ್ಯಾಳಾ ಗಾರ ವಿತ್ತಪ ಮಿತ್ರ ಸುಭಗ ಶ ಪಾವಕ 1 ಇಂದು ಮೌಳೀ ಈಪ್ಸಿತಫಲ ಸಲಿಸುವ ಘನತ್ರಿಶೂಲೀ ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ ದಳಪುರಾಂತಕ ನಿಜಶರಣವ ತ್ಸಲ ವೃಷಾರೋಹಣ ವಿಬುಧವರ 2 ದೃತಡಮರುಗ ಸಾರಂಗ ನಿನ್ನಯಪಾದ ಶತಪತ್ರಾರ್ಚಿಪರ ಸಂಗ ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ ನ್ನುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ ಶತಮಖನ ಜೈಸಿದನ ಪುತ್ರನ ಪಿತನ ಜನಕನ ಕೈಲಿ ಕೊಲಿಸಿದೆ ಅತುಳ ಭುಜಜಲ ಭೂತಪಡೆ ಪಾ ವನತಿ ಮುಖಾಂಭೋರುಹ ದಿವಾಕರ 3
--------------
ಜಗನ್ನಾಥದಾಸರು
ಶಯನ ಸುಖವೇ ಸುಖವೆ ರಂಗನಾಥ ಭಯಗೊಂಡ ಭಕ್ತರೊಳು ದಯವಿಲ್ಲವೆ ಪ ಶರಣನ ಕೈ ನೀಡಿ ಪೊರೆಯೆಂದು ಪೇಳ್ವಾಗ ದುರಿತಗಳ ಹರಿಸೆಂದು ಬೇಡುವಾಗ ಕರುಣಾನಿಧಿ ನೀನೆಂದು ಹಾಡಿ ಹಂಬಲಿಪಾಗ ಶಿರಬಾಗಿ ಪಾದಕೆ ವಂದಿಸುವಾಗ ರಂಗಾ 1 ಜೀವಿಗಳ ಪಾಲಿಸುವ ಹೊಣೆ ನಿನಗೆ ಸಲುವಾಗ ದೇವ ನೀನೋಬ್ಬನೇ ದಿಕ್ಕೆನುವಾಗ ಭಾವದಲಿ ನಿನ್ನಮೂರ್ತಿಯ ನೆನೆದು ನಲಿವಾಗ ದೇವ ಎನ್ನಪ್ಪ ಬಾಯೆನುವಾಗ ರಂಗಾ 2 ಸ್ವಾಭಿಮಾನದಿ ನೀನು ಲೋಕವನು ಮರೆವಾಗ ಲೋಭಿ ನೀನೆನ್ನದೇ ಜಗವೆಲ್ಲ ರಂಗಾ ಲಾಭವುಂಟೇ ಭಕ್ತಜನಕೆಲ್ಲ ಕ್ಷಯರೋಗ ನಾಭಿಗಂಟದೆ ಪೇಳು ಮಾಂಗಿರಿಯರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶರಜ ಪಾಹಿಮಾಂ ಪ ಚಿನ್ಮಯ ಪಾಹಿಮಾಂ ಅ.ಪ ಉಮಾ ಕುಮಾರ ಶೋಕ ಮೋಹಾ-ನೀಕದೂರ ಪಾಹಿಮಾಂ - ಜಗದೇಕ ವೀರ ತ್ರಿಲೋಕ ಪೂಜಿತ ಶ್ರೀಕುಮಾರ ಪಾಹಿಮಾಂ 1 ವಿಶ್ವ ಷಟ್‍ಶಿರ ಪಾಹಿಮಾಂ2 ದಾಸ ರಕ್ಷಕ ಪಾಹಿಮಾಂ 3
--------------
ಬೆಳ್ಳೆ ದಾಸಪ್ಪಯ್ಯ
ಶರಣ ನೀನೆಲೊ ನರಹರಿ ಶರಣನೀನೆಲೊ ನರಹರಿ ಚರಣ ಪ ಶರಣ ನೀನಿರ್ದು ಮರವೆಗೂಡಿ ಜರಾಮರಣ ಪಡೆವರೇನೊ ಅ,ಪ ಯೋಗಮಾರ್ಗ ವಹಿಸಿ ನಿಜವಾದ ಭಾಗವತರ ಒಲಿಸಿ ರಾಗರಹಿತನಾಗಿ ನೀಗದ ಸಂಸಾರ ಭೋಗ ತ್ಯಜಿಸಿ ಭವರೋಗ ಗೆಲಿಯುವಂಥ 1 ಮಿಥ್ಯೆ ಮಾಯ ನೀಗಿ ಸತತ ನೀ ಸತ್ಯ ಜನಕೆ ಬಾಗಿ ಸತ್ಯಸಂಧನಾಗಿ ಚಿತ್ತಜತಾತನ ಭಕ್ತನೆನಿಸಿ ಯಮ ಮೃತ್ಯುಗೆಲಿಯುವಂಥ 2 ಪಾಮರತ್ವ ತೊರೆದು ನಿಜವಾದ ನೇಮನಿತ್ಯ ಪಿಡಿದು ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ ನಾಮ ಭಜಿಸಿ ಮುಕ್ತಿ ಸಾಮ್ರಾಜ್ಯಪಡೆಯೆಲೊ 3
--------------
ರಾಮದಾಸರು
ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ ಧ್ರುವ ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದ ನೇತ್ರ ಸುರಮುನಿ ಸ್ತೋತ್ರ ಹರಿ ನಿನ್ನ ಚರಿತ್ರ ಪರಮ ಪವಿತ್ರ 1 ವಿದುರ ವಂದಿತ ದೇವ ಬುಧಜನ ಪ್ರಾಣಜೀವ ಯದುಕುಲೋದ್ಭವ ನೀನೆ ಶ್ರೀಮಾಧವ ಸದಾ ಸದ್ಗೈಸುವ ಆದಿ ಕೇಶವ 2 ಅನಂದ ಘನಲೋಲ ನೀನೆ ಸರ್ವಕಾಲ ಅನಾಥರನುಕೂಲ ಶರಣಾಗತ ವತ್ಸಲ ದೀನ ಮಹಿಪತಿ ಸ್ವಾಮಿ ನೀನೆ ಕೃಪಾಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಧ್ರುವ ನಕ್ರ ಗಜೇಂದ್ರಗೆ ವಕ್ರಾಗಿ ತ್ರಿ ವಿಕ್ರಮನೆಂದಂದು ಮೊರೆ ಇಡಲು ಚಕ್ರದಿಂದಲಿ ನೀ ವಕ್ರನೆ ಹರಿಸಿ ಅಕ್ರದಲೊದಗಿ ಕಾಯ್ದವ ನೀನಹುದೊ 1 ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ ಭರದಿಂದ ಸ್ಥಂಭದಲುದ್ಭವಿಸಿ ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ ಕರುಣಿಸಿ ಭಕ್ತ ಗೊಲಿದವ ನೀನಹುದೊ 2 ಸೆರಗಪಿಡಿದು ಸೀರೆ ಸೆಳೆವ ಸಮಯದಲಿ ಹರಿಯೆಂದು ದ್ರೌಪದಿ ಮೊರೆ ಇಡಲು ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ ಧರೆಯೊಳು ಲಜ್ಜೆಗಾಯ್ದವ ನೀನಹುದೊ 3 ಮಂಡಿಸಿರಲು ಕೌರವ ಅರಗಿನ ಮನೆ ಪಾಂಡವರದರೊಳು ಸಿಲ್ಕಿರಲು ಕಂಡು ನೀ ಅದರೊಳು ವಿವರವ ತೋರಿ ಪೊರವಂಡಿಸಿದ ಪ್ರಚಂಡ ನೀನಹುದೊ 4 ಎಸೇಸು ಭಕುತರ ಅವರಸಕ್ಕೊದಗುತ ಲೇಸಾಗಿ ಕಾಯ್ದವ ನೀನಹುದೊ ದಾಸ ಮಹಿಪತಿ ಮನದವಸರಕ್ಕೊದಗುತ ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣಜನಮಂದಾರ ಮುರದಾನವವಿದಾರ ಕರವಿಡಿದು ಕಾಪಿಡೈ ಕಮಲನಾಭ ಧರೆಯೊಳಾರಿರ್ಪರೈ ಪರಮಸತ್ಯಾತ್ಮರೀ ಪರಿಯ ನೋಡಲು ನಿನಗೆ ಸರಿಯನರಿಯೆ ಮೂರಡಿಯ ನೆವದಿ ನೀನಾರಯ್ದು ಭೂಮಿಯಂ ಧಾರಾವಿಧಿಯಿನಿತ್ತ ದೈತ್ಯವರನ ಶಿರಮೆಟ್ಟಿ ಪಾತಾಳ ಕುಹರದೊಳ್ ಸೆರೆವಿಡಿದು ಪರಮ ಜಾಗರದಿಂದ ಕಾಪುಗುಡುವೈ ಕರಿರಾಜವರದ ಲಕ್ಷ್ಮೀವಿನೋದ ಕರುಣಾಳು ನೀನೆಂದು ತಿಳಿದೆ ಮನದೆ ಭರದಿಂದ ಮೈದೋರು ಮುದುವ ಬೀರು ವರಶೇಷ ಗಿರಿನಿಲಯ ಸುಗುಣವಲಯ
--------------
ನಂಜನಗೂಡು ತಿರುಮಲಾಂಬಾ