ಬೆಳೆಬೆಳೆದು ಮನದಾಸೆಗಳ ಕಳೆದೆನಯ್ಯ
ಸುಳಿದಿರ್ಪುದೊಂದಾಸೆ ಅದ ಪೇಳ್ವೆನಯ್ಯ ಪ
ತೊಳತೊಳಲಿ ಬಳಬಳಲಿ ಬೆಂಡಾದೆನಯ್ಯ
ಕೊಳಕೊಳದಿ ಮುಳುಮುಳುಗಿ ತಳಮಳಿಪೆನು ಅ.ಪ
ಅದು ನಿನ್ನ ಬಳಿಸಾರ್ದು ನಿಲ್ವಪರಿಯಾಸೆ
ಅದು ನಿನ್ನ ಪಾದಗಳ ನೋಡಿ ನಲಿವಾಸೆ
ಅದು ನಿನ್ನ ನಾಮಗಳ ಪಾಡಿನುಡಿವಾಸೆ
ಅದು ನಿನ್ನ ನಸುನಗೆಯ ಬೇಡಿಕೊಂಬಾಸೆ 1
ಅದು ನಿನ್ನ ಅಡಿಗಳಿಗೆ ಮುಡಿಯಿಡು[ವಾಸೆ]
ಅದು ನಿನ್ನ ಕೊರಳಿಗೆ ಮಾಲೆಯಿಡು[ವಾಸೆ]
ಅದು ನಿನ್ನ ಬೆಡಗುಗಳ ನುಡಿನುಡಿಯೊಳೆಸೆವಾಸೆ
ಅದು ಮಾಂಗಿರಿಯ ರಂಗ ನಿನ್ನ ಕೃಪೆಯಾಸೆ2