ಒಟ್ಟು 1016 ಕಡೆಗಳಲ್ಲಿ , 95 ದಾಸರು , 881 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಪ ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ ಶರಧಿ ಚಂದಿರನಾದ ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ ಪರಮ ಸಾಧು ಸಹ್ಲಾದ ಅ.ಪ ತರಣಿ ತನಯನ ಸೂತ ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ ಮರುತ ದೇವನ ಪದಕೆ ಬರುವ ಯತಿಗಳ ದೂತ ವರದೇಂದ್ರ ತೀರ್ಥರಿಗೆ ಪ್ರೀತ || ಗುರುಧೇನು ಪಾಲ ವಿಜಯ ದಾಸವರ್ಯರ ಮಮತ ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ ನಮಗೀತ ಗತಿ ಪ್ರದಾತ 1 ದುರಿತ ವಿದೂರ ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ ಸಾರಿದಂಥ ಸುಧೀರ || ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ ಸುಜನ ಕೋರಿಕೆಯ ಮಂದಾರ ಭೂರುಹದ ತೆರದಿ ಘುನ ಸೂರೆ ಕೊಡುವನುದಾರ ದುರಿತವಿಪಿನ ಕುಠಾರ 2 ಇವರ ಕವನ ಪಠಣ ಶ್ರವಣ ಮನನಗಳಿಂದ ಲವಕೇಶವಾಗದು ಜವನ ಭವನದ ಬಂಧ ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ ಗೈದ ಮನಜ ದಿವಾಂಧ | ಭುವನದೊಳು ಬೆಳಗುತಿಹ ಇವರ ಮಹಿಮಾನಂದ ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ ನೆಲಸಿಹವು ನಲವಿಂದ 3 ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ ಹರಿಗೆ ಪಂಚಪ್ರಾಣ || ಅರುಹಲೇನಿವರ ಚರಣನಂಬಿದ ಸುಜನ ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ ಸೇರಿದರು ನಿಜ ಸ್ಥಾನ 4 ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ ತಿಮಿರ ದಿನೇಶ ಭೂಮಿ ವಿಬುಧರ ಪೋಷ || ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ ಸುಜನ ಕುಮುದ ವಿಕಾಸ ಗೊಳಿಸಿಗರೆದುದುಲ್ಹಾಸ 5
--------------
ಶಾಮಸುಂದರ ವಿಠಲ
ಮಾನಸಾದಾತೂರ ಕಳವಳಗೊಳದಂತೇ ಪ ಮಾನವ ಕಾಡುವ ದುರಿತಾಗಳೋಡಿಸಿ ಸಲಹಲು 1 ನಿಷ್ಠೂರದಿಂದೆನಗೆ | ಕಷ್ಟಗೊಳಿಸದಂತೇ 2 ನಿತ್ಯಾ ಚಿತ್ತಕೆ ದುಃಖವೊತ್ತಿ ದೂಡುವರು 3 ಧ್ರಷ್ಟರಿಂದ್ಹದಿನೆಂಟು | ಕೆಟ್ಟಾ ದೋಷವ ತ್ಯಜಿಸಲ್ 4 ಎಂದೂ ರಕ್ಷಿಸೋ ಯೆನ್ನ | ತಂದೆ ಸದಾನಂದ 5
--------------
ಸದಾನಂದರು
ಮಾಯಾಮಯ ಜಗವೆಲ್ಲ ಇದ- ರಾಯತ ತಿಳಿದವರಿಲ್ಲಪ. ಕಾಯದಿಂ ಜೀವನಿಕಾಯವ ಬಂಧಿಸೆ ನೋಯಿಸುವಳು ಸುಳ್ಳಲ್ಲಅ.ಪ. ತಿಳಿದು ತಿಳಿಯದಂತೆ ಮಾಡಿ ಹೊರ- ಒಳಗಿರುವಳು ನಲಿದಾಡಿ ಹಲವು ಹಂಬಲವ ಮನದೊಳು ಪುಟ್ಟಿಸೆ ನೆಲೆಗೆಡಿಸುವಳೊಡಗೂಡಿ 1 ಯೋಷಿದ್ರೂಪವೆ ಮುಖ್ಯ ಅ- ಲ್ಪಾಸೆಗೆ ಗೈವಳು ಸಖ್ಯ ದೋಷದಿ ಪುಣ್ಯದ ವಾಸನೆ ತೋರ್ಪಳು ಜೈಸಲಾರಿಂದಶಕ್ಯ2 ಕರ್ತ ಲಕ್ಷ್ಮೀನಾರಾಯಣನ ಭೃತ್ಯರ ಕಂಡರೆ ದೂರ ಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ- ರಾರ್ಥಕೆ ಕೊಡಳು ವಿಚಾರ3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾರಜನಕ ಮುರಾರಿ ಕಾಣಮ್ಮ ಪ ಅರುಣ ಚರಣ ಕಳದಿರವು ಅಂಕುಶಧ್ವಜ ಅರವಿಂದ ರೇಖಾಂಕ ಪುರುಷನಾರಮ್ಮ ಉರಗಶಯನ ಕರಸರೋಜ ಮಧ್ಯದೊಳಿಟ್ಟು ಸುರರಿಂದರ್ಚನೆಗೊಂಬ ಹರಿಯು ಕಾಣಮ್ಮ 1 ಪೊಳೆವ ಉದಯ ಶಶಿ ಬೆಳಗು ಸೋಲಿಪ ನಾಖಾ ವಳಿಯಿಂದ ಒಪ್ಪುವ ಚಲುವನಾರಮ್ಮಾ ಕುಲಿಶ ಪಾಣಿಗೆ ಒಲಿದಿಳೆಯೊಳು ಬಂದು ಖಂ ಜಲಧಿ ಕಾಣಮ್ಮ 2 ಅಂದುಗೆ ಗೆಜ್ಜೆ ಕಡಗ ಪೊನ್ನೂಪುರ ತೊಡಂದ ಬರುತಿಹ ಪ್ರೌಢನಾರಮ್ಮ ದೃಢ ಭಕ್ತರೆಡೆಯಲಿ ಬಿಡದೆ ನಲಿಯುತಲಿಪ್ಪ ಮೃಡಸುರಪಾದ್ಯರ ಪತಿಯು ಕಾಣಮ್ಮ 3 ಕರಿಗಲ್ಲಿನಂತೆ ಸುಂದರ ಜಂಘೆ ಜಾನುಗ ಳೆರಡು ತರಣಿಯಂತೆ ಇವನಾರಮ್ಮಾ ಪರಮೇಷ್ಠಿ ಪ್ರಳಯದಿ ಸಿರಿಯಿಂದ ನುತಿಗೊಂಬ ಪರಮ ಪುರುಷ ನರಹರಿಯು ಕಾಣಮ್ಮ 4 ಇಭವರಕರದಂತೆ ಉಭಯ ಊರು ಕಟಿ ಪ್ರಭ ವಸನವನುಟ್ಟ ಸುಭಗನಾರಮ್ಮಾ ರಭಸದಿಂದಲಿ ಕಂಭ ಬಿಗಿದು ಪ್ರಹ್ಲಾದಗೆ ಅಭಯವಿತ್ತ ಸುರಪ್ರಭುವು ಕಾಣಮ್ಮ 5 ವಲಿವಿೂಕ ಬಿಲದಂತೆ ಸುಳಿನಾಭಿ ಜಠರತ್ರಿ ವಳಿಗಳಿಂದಲಿ ಬಲು ಪೊಳೆವನಾರಮ್ಮಾ ನಳಿನೋದ್ಭವನ ಪುತ್ರಾಖಿಳ ಲೋಕ ತಾಳಿದಾ ಹಾಲಾಹಲಕಂಠನ ಗೆಳೆಯ ಕಾಣಮ್ಮಾ 6 ಕೌಸ್ತುಭ ವೈಜಯಂತೀ ಸರ ಸಿರಿಯಿಂದಲೊಪ್ಪೋ ನಿರಯನಾರಮ್ಮ ವರಭೃಗುಮುನಿಪನ ಸ್ಪರುಶವನು ತಾಳ್ದ ಕರುಣ ಸಾಗರ ಸಿರಿಧರನು ಕಾಣಮ್ಮ 7 ಅರಿ ಶಂಖ ಸತತ ಪಿಡಿದಿಹ ಚತುರನಾರಮ್ಮ ದಿತಿಜರ ಸದೆದು ದೇವತೆಗಳ ಸಲಹಿದ ಚತುರಾಸ್ಯ ಕೃತಿದೇವಿ ಪತಿಯು ಕಾಣಮ್ಮ 8 ಧರದಿಂದೊಪ್ಪುತಲಿಹ ಪಿರಿಯ ನಾರಮ್ಮಾ ಸಿರಿಯೊಡನೆ ಕ್ಷೀರಶರಧಿ ಯೊಳೊರಗಿಪ್ಪ ವಜ್ರ ಪಂಜರವನು ಕಾಣಮ್ಮ 9 ಸುರಕಪೋಲ ನಾಸ ಸರಸಿಜನಯನ ಪು ಕುಂಡಲಿ ಯುಗಧರನು ಆರಮ್ಮಾ ಶರಧಿ ಮಥನದಲ್ಲಿ ತರುಣಿಯಾಗಿ ಅಸು ರರ ಮೋಹಿಸಿದ ಅಜರನು ಕಾಣಮ್ಮ10 ಬಾಲಶಶಿಯಂತೆ ಫಾಲಕಸ್ತೂರಿನಾಮ ಮೌಳಿ ಸುಳಿಕೇಶ ಬಾಲನಾರಮ್ಮಾ ಮೂಲೇಶನಾದ ಜಗನ್ನಾಥ ವಿಠ್ಠಲ ಮೂರ್ಲೋಕಾಧಿಪ ಶ್ರೀ ಗೋಪಾಲ ಕಾಣಮ್ಮ11
--------------
ಜಗನ್ನಾಥದಾಸರು
ಮಾರಿ ಬೇರೆಂದೇಕೆ ಹಲುಬುವರು ಜಗದಿ ನಾರಿಯೇ ಮಕ್ಕಮಾರ್ಯೆಂದೆನ್ನಬಾರದೆ ಪ ಹಿತದೋರಿ ಮನಸೆಳೆದು ಮತಿಗೆಡಿಸಿ ವಿಧವಿಧ ದು ಷ್ಕøತ ಪೇಳಿ ಬಂಧುಗಳ ಹಿತವನೆ ಮರೆಸಿ ಸತತ ಬೆನ್ನ್ಹತ್ತಿ ಬಿಡದೆ ಕ್ಷಿತಿಮೇಲೆ ಅತಿಯಾಗಿ ವ್ಯಥೆಬಡಿಪ ಮಾರಿ ನಿಜಸ್ಥಿತಿ ವಿಚಾರಿಸದೆ 1 ಮನೆ ಧನ ಗುಣ ಸುಲಿದು ಘನತೆಯನು ಕೆಡಿಸಿ ಮ ತ್ತನುಕೂಲವನು ಇತ್ತು ತನುಶಕ್ತಿ ಹೀರಿ ಕುಣಿಕುಣಿಸಿ ಜಗದೊಳಗೆ ಬಿನಗುರಲಿ ಬಿನುಗೆನಿಸಿ ಘನ ಬಾಧಿಸುವ ಮಾರಿದಿನಿಸು ಕಾಣದಲೆ 2 ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರೆನಿಸಿ ಭುವಿಯೊಳು ಮುಕ್ತಿಕಾಮಿನಿಯ ತೊರೆಸಿ ನೇಮವಿಲ್ಲದ ಕಷ್ಟ ನೇಮಿಯೊಳಳಿಸಲಿಕೆ ಯಮನೊಶಕೆ ಕೊಡುವಂಥ ಈ ಮಾರಿನೊದೆಯದೆ 3
--------------
ರಾಮದಾಸರು
ಮಾವಿನಕೆರೆ 7 ಮಾನಗಿರಿಯು ಹಲವಾಭಿಮಾನ ಗಿರಿಯು ಪ ಮಾನಗರಿ ಭಕ್ತಾಭಿಮಾನ ಮಾಂಗಿರಿಯು ಅ.ಪ ಭಾರತದ ದಕ್ಷಿಣದಿ ನೂರೆಂಟು ತಿರುಪತಿಯೊ ಳೋರಂತೆ ಮಹಿಮೆಗಳ ತೋರಿಸಲೈ ಕಾರುಣ್ಯ ಪರಿಪೂರ್ಣ ಸಿರಿವೆಂಕಟಾದ್ರೀಶ ಏರಿನಿಂದನು ನಮ್ಮ ಮಾಂಗಿರಿಯಲಿ 1 ಕಡುಸುಂದರಾಕೃತಿಯ ಬೆಡಗಿಂಗೆ ಮರುಳಾಗಿ ನಡೆತಂದ ಮಾನವರು ಕುಡಿದೃಷ್ಟಿಬೀರಿ ಪಿಡಿದು ಕೊಂಡೊಯ್ವೆವೆಂದಡಿಯಿಡಲು ರಂಗಯ್ಯ ಅಡಗಿಸಿದ ದೇಹವನು ಒರಳಿನಲ್ಲಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಸ ನಿಯಾಮಕ ದೇವತೆಗಳ ವರ್ಣಿಸುವೆನು ಪ ಶ್ರೀಶನಾಜ್ಞೆಯಲಿ ಸಕಲ ಸುಜನರಿದ ಕೇಳಿ ಅ.ಪ. ಸಹವೆಂಬ ಮಾರ್ಗ ಶಿರದಿ ಪುತ್ರ ನಾಮಕ ಸವಿತೃ ಮಹಾ ವಿಶಾಲಾಕ್ಷಿರಮಣ ಕೇಶವ ನಿಯಾಮಕನು ಸಹಸ್ಯವೆನಿಪ ಪುಷ್ಯದೊಳು ವಿಷ್ಣುವೆನಿಪನು ಮಹಲಕುಮಿರಮಣ ನಾರಾಯಣನಿದಕೆ ಕರ್ತೃ 1 ತಪವೆನಿಪ ಮಾಘದೊಳು ಅರುಣನಾಮಕ ಸವಿತೃ ಚಪಲಾಕ್ಷಿ ರುಕ್ಮಿಣೀರಮಣ ಮಾಧವನು ದೊರೆಯು ತಪಸ್ಯವೆನಿಪ ಫಾಲ್ಗುಣದಿ ಸೂರ್ಯನೆನಿಪನು ಸುಪವಿತ್ರೆ ಧಾತ್ರೀಪತಿ ಗೋವಿಂದನಧಿದೇವತೆ2 ಮಧುಮಾಸವಾದ ಚೈತ್ರದೊಳು ವೇದಾಂಗನು ಪದುಮಾಕ್ಷ ಮಾ ರಮಾರಮಣ ವಿಷ್ಣು ನಿಯಾಮಕನು ಮಾಧವನೆನಿಪ ವೈಶಾಖದಿ ಭಾನುವೆಂದೆನಿಸುವನು ಮಧುಸೂದನ ನಾಮಕ ಮೋಹಿನೀ ಪತಿಯು 3 ಶುಕ್ರವೆನಿಪ ಜ್ಯೇಷ್ಠದೊಳು ಇಂದ್ರನೆನಿಪ ಸವಿತೃ ತ್ರಿ ವಿಕ್ರಮನಿದಕಧಿಪತಿಯು ಪದುಮಾಕ್ಷಿರಮಣ ಅಕ್ಕರದಿ ಶುಚಿಯೆನಿಪಾಷಾಡದಿ ರವಿಯೆನಿಪನು ಚಕ್ರಧರ ವಾಮನನಿದರಧಿಪತಿ ಕಮಲಾರಮಣ 4 ನಭವಾದ ಶ್ರಾವಣದಿ ಗಭಸ್ತಿಯೆನಿಸುವನು ತ್ರಿಭುವನದಧಿಪತಿ ಶ್ರೀಧರನು ಕಾಂತಿಮತಿರಮಣ ನಭಸ್ಯವೆನಿಪ ಭಾದ್ರಪದದಿ ಯಮನೆನಿಸುವನು ಇಭವರದ ಹೃಷಿಕೇಶ ಅಪರಾಜಿತಾ ರಮಣ 5 ಒದಗಿಹ ಇಷವೆನಿಪಾಶ್ವೀಜದೊಳು ಸ್ವರ್ಣರೇತಾ ಇದಕಭಿಮಾನಿ ಪದಮಾವತಿಪತಿ ಪದುಮನಾಭ ಉದಯಿಸುತಿಹ ಊರ್ಜಿಯೆನಿಪ ಕಾರ್ತಿಕದಿ ದಿವಾಕರ ರಾಧಾರಮಣ ದಾಮೋದರನಿದರಭಿಮಾನಿ 6 ಆಯಾಯ ಮಾಸದಲಿ ಮಾಳ್ಪ ಸಕಲ ಕರ್ಮಗಳನು ಆಯಾಯಭಿಮಾನಿ ದೇವರುಗಳಿಗರ್ಪಿಸಿ ಮಾಯಾರಮಣ ಶ್ರೀ ರಂಗೇಶವಿಠಲನ ನೆನೆಯುತ ಆಯಾಸವಿಲ್ಲದೆ ಪರಮಪದವನು ಪಡೆಯಿರೊ 7
--------------
ರಂಗೇಶವಿಠಲದಾಸರು
ಮುಖ್ಯಪ್ರಾಣ ಕರವೆತ್ತಿ ನಿಂದ ಪ ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ. ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು ವರಕಪಿಗಳೊಡಗೂಡಿ ಸಿರಿದೇವಿಯನರಸುತ ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ ಪರಿತೋರದಿರ್ದ ಹರಿವರರಿಗಭಯವಿತ್ತು 1 ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ ಸಿರಿ ರಾಮ ನೋಡುತ ಮರುಗುತಿರಲಂದು ವರ ಜಾಂಬವನ ಸುಮತಿಯಲಿ ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2 ಭರದಿ ದಶಶಿರನು ತಾನರಿಯದೆ ಹನುಮನ ಬಲ ಭರವಸದಲಿ ಮಾಡಿ ಮೂರು ಗುದ್ದಿನ ಪಂಥ ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3 ದುರುಳ ಕೀಚಕನಂದು ಕರಿಗಮನೆಯನು ಕಂಡು ಸ್ಮರಶರಹತಿಯಿಂದ ಉರುತರದಲಿ ನೊಂದು ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4 ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5 ಹರಿಹರರು ಸರಿಯೆಂದು ಹರಟುತಿರ್ದವರನು ಗುರುತರ ವಾಕುಗಳೆಂಬ ಬಿರುಬಾಣದಿಂದ ಗರ ಹೊಡೆದವರ ಮಾಡಿ ಪರತತ್ವವನು ಪೇಳಿ ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6 ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು ಸಿರಿ ರಂಗೇಶವಿಠಲನ ದುರಿತ ಭಯವಿಲ್ಲೆಂದು 7
--------------
ರಂಗೇಶವಿಠಲದಾಸರು
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ ಮುತ್ತೈದೆಯರು ಜಯ ಪ ರತ್ನಮಂಟಪದೊಳು ವರ ಮಹ- ಲಕ್ಷ್ಮಿಯ ಕುಳ್ಳಿರಿಸಿ ಮುತ್ತಿನ್ಹಾರಗಳ್ಹಾಕಿ ಮುತ್ತೈದೆಯರು ಜಯ 1 ಮಿತ್ರೆ ಮಹಲಕ್ಷುಮಿಯ ಬಹು ಸಿಸ್ತಿಲಿ ಶೃಂಗರಿಸಿ ಉತ್ತಮಾಂಗನೆಗೀಗ ಮುತ್ತೈದೆಯರು ಜಯ2 ಕರ್ತೃ ಶ್ರೀಹರಿ ಎನ್ನುತ ಕಮಲನಾಭ ವಿಠ್ಠಲನರಸಿಗೀಗ ಎತ್ತಿ ಚಾಮರ ಬೀಸಿ ಮುತ್ತೈದೆಯರು ಜಯ3
--------------
ನಿಡಗುರುಕಿ ಜೀವೂಬಾಯಿ
ಮುದ್ದುಕೃಷ್ಣ ವಿಠಲ | ಕಾಪಾಡೋ ಇವನ ಪ ಅಧ್ವರೇಡ್ಯನೆ ದೇವ | ಬುದ್ಧಿ ಪ್ರದನಾಗೀ ಅ.ಪ. ತರಳನಿವ ಭಕ್ತಿಯುತ | ಕರಪಿಡಿದು ಸಲಹಯ್ಯಮರುತಮತ ಪರಿಕರಪು | ತರತಮಸುತತ್ವಾಅ |ವರಪಂಚ ಭೇದಗಳ | ಅರಿಪಾಗುವಂತೆಸಗಿಪೊರೆಯೊ ಕರುಣಾಮಯನೆ | ಕರಿವರದ ದೇವಾ 1 ಪಾದ | ಭಕುತಿಭಾಗ್ಯಗಳಾ |ತೋಕನಿಗೆ ಒದಗಿಸುತ | ಬೇಕಾದ ವರವಿತ್ತುಮೊಕಳತ್ರನೆ ಸಲಹೊ | ಸಾಕಾರ ಮೂರ್ತೇ 2 ಹರಿಸೇವೆ ಗುರುಸೇವೆ | ಹಿರೆಜನಂಗಳ ಸೇವೆಸಾರುತಾ ಭಕುತಿಯಲಿಂದ | ಚರಿಪಮನವಿತ್ತೂವಸಸು ಸಾಧನಗೈಸಿ | ಪೊರೆಯ ಬೇಕೆಂದೆನುತಮರುತಾಂತರಾತ್ಮಕನೆ | ಕರಮುಗಿದು ಬೇಡ್ದೆ 3 ಕಾಮಾದಿಷಡ್ರಿಪು | ಸ್ತೋಮಗಳ ಕಾಟವನುನೇಮದಾ ಕಡೆಗೊತ್ತಿ | ಪಾಮರನು ಇವನಾಭೂಮಗುಣಿ ನೀನಾಗಿ | ಪ್ರೇಮದಿಂ ಸಲಹಲ್ಕೆನಾಮಾಳ್ಪೆ ಭಿನ್ನಪವ | ಶ್ಯಾಮಸುಂದರನೇ 4 ಗಾವಲ್ಗಣಿವರದ | ತಾವಕಗೆ ತವನಾಮಸೇವೆಯನೆ ಕರುಣಿಸುತ | ಕಾಪಾಡೊ ಹರಿಯೇ |ಗೋವುಗಳ ಪಾಲಗುರು | ಗೋವಿಂದ ವಿಠ್ಠಲನೆನೀವೊಲಿಯದಿನ್ನಿಲ್ಲ | ದೇವದೇವೇಶಾ 5
--------------
ಗುರುಗೋವಿಂದವಿಠಲರು
ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು 1 ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ 2 ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ 3 ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ ಮೆರೆದ4 ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ ವೇಲೂರ ಪುರಪಯೋನಿಧಿವಾಸ ಜಗದ ದೊರೆ ವಿಜಯವಿಠ್ಠಲನ್ನದಾಸ5
--------------
ವಿಜಯದಾಸ
ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ನಾರಿ ಮಾರನಯ್ಯನ ತೋರೆ ಪ. ಹರದಿ ಸುಭದ್ರಾ ತಮ್ಮ ದೊರೆಗಳಿಗೆ ಅರುಹಲು ಪರಮ ಹರುಷರಾಗಿ ಐವರು ಚಪಲಾಕ್ಷಿ ಪರಮ ಹರುಷರಾಗಿ ಐವರು ಮುಯ್ಯಕ್ಕದುರದಿಂದ ಭೇರಿ ಹೊಯ್ಸಿದರ ಚಪಲಾಕ್ಷಿ1 ಹಸ್ತಿನಾಪುರದರಸು ಮತ್ತೆ ಜೋಯಿಸರ ಕರೆಸಿ ಮುತ್ತು ತುಂಬಿಡಿಸಿ ಮರದಾಗ ಚಪಲಾಕ್ಷಿಮುತ್ತು ತುಂಬಿಡಿಸಿ ಮರದಾಗ ಮುಯ್ಯಕ್ಕಉತ್ತಮ ತಿಥಿಯು ಬರಬೇಕು ಚಪಲಾಕ್ಷಿ 2 ಧರ್ಮನ ಪ್ರಶ್ನೆಯ ಪ್ರೇಮದಿಂದಲೆ ಕೇಳಿ ಅಮ್ಮಯ್ಯ ಶ್ರೀ ರಮಣನ ನೆನೆಯುತ ಚಪಾಲಾಕ್ಷಿ ಶ್ರೀ ರಮಣನ ನೆನೆಯುತ ಬೃಹಸ್ಪತಿಜಮ್ಮನೆ ತೆಗೆದಾ ಶುಭತಿಥಿಚಪಲಾಕ್ಷಿ3 ಈಗಿನ ವ್ಯಾಳ್ಯಕ್ಕ ಜಾಗು ಮಾಡದೆ ಕೃಷ್ಣಿಹೋಗ ನೀಗೆದ್ದು ಬರತೀಯೆ ಚಪಲಾಕ್ಷಿಹೋಗ ನೀಗೆದ್ದು ಬರತೀಯೆ ಎನುತಲೆ ಆಗಬೃಹಸ್ಪತಿಯು ನುಡಿದಾನೆ ಚಪಲಾಕ್ಷಿ 4 ಇಂದಿನ ದಿವಸÀಕ್ಕ ಸಂದೇಹ ಬ್ಯಾಡವ್ವಾ ತಂದೆರಾಮೇಶನ ಮಡದೇರ ಚಪಲಾಕ್ಷಿತಂದೆ ರಾಮೇಶನ ಮಡದೇರ ನಾಚಿಸಿ ಬಂದಿಯೆಕೃಷ್ಣಿ ನಗುತಲೆ ಚಪಲಾಕ್ಷಿ5
--------------
ಗಲಗಲಿಅವ್ವನವರು
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮುರವೈರಿಯೇ ಮೊರೆ ಹೊಕ್ಕೆ ನಿನ್ನಕರಿಯ ಕಾಯ್ದಹಲೈಯ | ವರದನೆಂದರಿತು ಪ ಸರಸಿ ಜಾಂಡದೋಳು | ಅರಸಿ ಅನ್ಯ ಕಾಣೆಕರುಣಿ ಕಂಜನಯನ | ಪರಿಪೋಷಿಸೆನ್ನ ಅ.ಪ. ಭಕ್ತಾಭೀಷ್ಟದಾ | ಮುಕ್ತಿದಾಯಕಾಶಕ್ತನಾಗಿ ಇರಲು | ವ್ಯಕ್ತನಾಗದಿರೆ |ಸೂಕ್ತವೇನೊ ನಿನಗೆ | ಯುಕ್ತಿ ಪೂರ್ಣ ಪುರುಷಸೂಕ್ತ ಮೇಯ ನೀನು | ವ್ಯಕ್ತನಾಗೊ ಮನದಿ 1 ಕಣ್ಣು ಬಿಟ್ಟು ಗಿರಿಯ | ಬೆನ್ನಿಲ್ಹೊತ್ತರೇನುಮಣ್ಣ ಹಲ್ಲಿಲಗಿದು | ಚಿಣ್ಣನನ್ನೆ ಪೊರೆದುಸಣ್ಣ ವಟುವೆ ಪಿಡಿದೆ | ಚೆನ್ನ ಪರಶುವನ್ನಘನ್ನ ಧನುವ ಮುರಿದ | ಕನ್ಯೆ ಸೀತೆ ಪತಿಯ 2 ಗೊಲ್ಲರೋಳು ಪುಟ್ಟಿ | ಮಲ್ಲರನು ಕುಟ್ಟಿಚೆಲ್ವ ಕನ್ಯೆ ಕೂಡಿ | ಕೊಲ್ಲಿಸಿ ತ್ರಿಪುರರಚೆಲ್ವ ಹಯವನೇರಿ | ಕೈಲಿ ಖಡ್ಗ ಪಿಡಿದುಚೆಲ್ವ ಕಲ್ಕಿ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ 1 ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ 2 ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ 3 ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ 4 ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ5 ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕಎರಡು ನಕಲು, ಒಂದು ಸವಕಲು 6 ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರ ಕಡುಬಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ 7 ಬೇಯದ ಕಡುಬಿಗಿ ಬಂದಾರ ಮೂವರು ಬೀಗರಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ 8 ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು 9 ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ10 ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿಇಬ್ಬರು ಕುಂಟರು, ಒಬ್ಬಗೆ ಕಾಲೇ ಇಲ್ಲ 11 ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ 12 ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿಇದ ತಿಳಿದವ ಜಾಣ. ಒಡೆದು ಹೇಳಿದವ ಕೋಣ13
--------------
ಕನಕದಾಸ