ಒಟ್ಟು 669 ಕಡೆಗಳಲ್ಲಿ , 92 ದಾಸರು , 544 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸೊ ಹರಿನಾಮ ಏ ಮನುಜಾ ಸ್ಮರಿಸೋ ಹರಿನಾಮ ನಿರವಧಿ ಸುಖಧಾಮ ಪರಮ ಪುರುಷಗಿದು ಪರಿಪೂರ್ಣ ಪ್ರೇಮ ಪ. ತರಳ ಪ್ರಹ್ಲಾದನ ಪೊರದು ಪಾಂಚಾಲಿಗೆ ತ್ವರಿತದೊಳಕ್ಷಯವಿತ್ತು ಸರಸಿಯೊಳಗೆ ಕರಿರಾಜನ ಸಲಹಿದ ನರ ಕಂಠೀರವ ಕರುಣಿಸುವನು ಬೇಗ 1 ಹಲವು ಜನ್ಮಗಳಲ್ಲಿ ಗಳಿಸಿದ ದುಷ್ಕøತ ಗಳನೆಲ್ಲ ನಿರ್ಮೂಲಗೊಳಿಸುವುದು ಜಲಜ ಸಂಭವ ಮಾಳ್ಪ ಕೆಲಸದಿ ಸಿಲುಕದೇ ನೆಲೆಗೊಂಡು ಸೌಖ್ಯವ ಸಲಿಸಬೇಕಾದರೆ 2 ಕಲಿಕೃತ ಕಲ್ಮಷ ಬಲೆಯಿಂದ ಮೋಚನ- ಗೊಳಿಸಲು ಹರಿನಾಮವಲ್ಲದಿನ್ನು ಚಲಿತ ಚಿತ್ತದ ಕರ್ಮಬಲದಿಂದಲಾಹದೆ ನಳಿನನಾಭನೇ ನೀ ಬೆಂಬಲನಾಗು ತನಗೆಂದು 3 ಉದಯಾರಂಭಿಸಿ ಮತ್ತೊಂದು ದಯ ಪರ್ಯಂತ ವಿಧಿವಿಹಿತಗಳೆಲ್ಲ ಸದರವೇನೊ ಪದುಮನಾಭನ ನಾಮ ಒದಗಿದರದು ಪೂರ್ಣ- ವದರಿಂದ ಸರ್ವರ ಹೃದಯ ನೀ ಮರೆಯದೆ 4 ಸಂಚಿತಾಗಾಮಿಗಳಂಚುವಂ ದಿತಿಜರ ಸಂಚಯಕನುದಿನ ಸ್ಮರಿಸುವರ ಕಿಂತಿತಾರಬ್ದ ಪ್ರಪಂಚವ ತ್ವರಿತದಿ ಮಿಂಚಿನಂದದಿ ತೋರಿ ಪರಿಹಾರಗೊಳಿಪರೇ 5 ಕರುಣಾಭಿಮಾನಿಗಳರಿತು ಮಾಡಿಸುತಿಹ ನಿರತ ಕೃತ್ಯಗಳೊಂದು ಮೀರದಲೆ ಹರಿಯಾಜ್ಞೆ ಇದು ಯೆಂದು ಚರಿಸುತಲನುದಿನ ಪರಮೋತ್ತಮ ಕಾರ್ಯಧುರವಿದೆ ತನಗೆಂದು 6 ನಾಗ ಗಿರೀಂದ್ರನ ನೆನೆದರೆ ಇಹಪರ ಭೋಗ ಸಾಮ್ರಾಜ್ಯವು ಸ್ಥಿರವಾಹುದು ವಾಗೀಶನ ಪರಮಾಗಮ ಸಿದ್ಧಾಂತ- ವಾಗಿಹದಿದೆಯೆಂದು ನೀ ಗುರುತವನಿಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸೋ ಆದರಿಸೋ ಆನಮಿಸೊ, ಮಾನವನೆ ಗುರುಪದವ ಪೊಂದು ಮುದವ ಹೇ ಮನವೇ ನೀ ಸ್ಮರಿಸೋ ಪ ದುರಿತ ತಿಮಿರಕೆ ತರಣಿ ಸಮರೆಂದೆನಿಸಿ ದ್ವಿಜರೊಳು ಮೆರೆದು ವಿಭವದಿ ಕರೆದು ಛಾತ್ರರ ಪೊರೆದ ಐಕೂರು ನರಶಿಂಹಾರ್ಯರ ಅ.ಪ ವರವೆಂಕಟಾರ್ಯರ ತರುಣಿ ಸೀತಾಗರ್ಭ ಶರಧಿಯಿಂದ ಜನಿಸಿದ ಶಶಿಯ ತೆರದಿ ಧರಿಸಿ ವಿಪ್ರತ್ವವನು ಶೀಘ್ರದಿ ಇರಿಸಿ ದ್ವಿತಿಯಾಶ್ರಮದಿ ಪದವನು ಚರಿಸುತಲೆ ಸಾಧನಸುಮಾರ್ಗದಿ ಕರೆಸಿದರು ವರಭಾಗವತರೆಂದು 1 ಹರಿಪದದಲಿ ಮನವಿರಿಸಿ ದುರ್ವಿಷಯಧಿಃ ಕರೆಸಿ ಧಿ:ಕರಿಸಿ ಪ್ರಿತಾಜ್ಞಾನುಸರಿಸಿ ಧರಣಿಯೊಳು ಗುರುಕರುಣದಿಂದಲಿ ಮರುತ ಶಾಸ್ತ್ರವನರಿತು ಕರುಣದಿ ಸರಸದಲಿ ಸಚ್ಛಾಸ್ತ್ರ ಮರ್ಮವ- ನರುಹಿ ಜನರನುಧ್ಧರಿಸಿದವರನು 2 ಕರ್ಮ ಹರಿಯೆ ಮೂಡಿಸುವನೆಂದರಿದು ಅರಿದು ಧ್ಯಾನಿಸುತ ಮೈಮರೆದು ಹರಿಯ ಗುಣಗಳ ಪೊಗಳಿ ಹಿಗ್ಗುತ ಶರಣು ಜನ ಮಂದಾರ ಕಾರ್ಪರ ಶರಣಶಿರಿ ನರಹರಿಯ ಪುರವನು ತ್ವರದಿ ಸೇರಿದವರ ಸುಚರಿತೆಯ 3
--------------
ಕಾರ್ಪರ ನರಹರಿದಾಸರು
ಸ್ವಾಂತವ ತೊಳೆಯುತಲಿರಬೇಕು ಶಾಂತಿನಿಕೇತನವಾಗುವ ತನಕ ಪ ಶಾಂತ ಮೂರುತಿ ಶ್ರೀಶಾಂತನು ತನ್ನ ಏ ಕಾಂತ ಮಂದಿರವೆಂದೊಪ್ಪುವ ತನಕ ಅ.ಪ ಕಾಮ ಕ್ರೋಧವೆಂಬೊ ಕಸಗಳನು ನೇಮದಿಂದ ಗುಡಿಸುತಲಿರಬೇಕು ಪ್ರೇಮಜಲದ ಸೇಚನೆ ಮಾಡಿ ಹರಿ ನಾಮಸ್ಮರಣೆ ಧೂಪವ ಕೊಡಬೇಕು 1 ಕಲಿಪುರುಷನ ಓಡಿಸಬೇಕು ತಿಳಿಯ ವೈರಾಗ್ಯ ಭಕ್ತಿಗಳೆಂಬ ತಳಿರು ತೋರಣವ ಕಟ್ಟಲಿಬೇಕು ನಳಿನನಾಭನ ಮನ ಸೆಳೆಯುವ ತೆರದಿ 2 ಕಾಣಲು ಪರಮತತ್ವದ ದಿವ್ಯ ಜ್ಞಾನದ ಜ್ಯೋತಿಯ ಮುಡಿಸಲಿ ಬೇಕು ಜ್ಞಾನ ಸುಖಾದಿ ಸದ್ಗುಣ ನಿಧಿಯು ತಾನೆ ಪ್ರಸನ್ನನಾಗುತ ನೆಲೆಸುವ ಪರಿ3
--------------
ವಿದ್ಯಾಪ್ರಸನ್ನತೀರ್ಥರು
ಸ್ವಾಮಿ ಶ್ರೀಗುರುವಿರಲಿಕ್ಕೆ ಸಾಯಸವೆನಗಿನ್ಯಾಕೆ ಗುರುನಾಮ ನಿಧಾನಿರಲಿಕ್ಕೆ ನನಗಿಲ್ಲೆಂಬುವದ್ಯಾಕೆ ಧ್ರುವ ಅನುದಿನ ಎನಗಿರೆ ಅನುಕೂಲದ ಚಿಂತ್ಯಾಕೆ ತನುಮನದೊಳು ತಾನೆತಾನಿರಲು ಅನುಮಾನಿಸಲಿನ್ಯಾಕೆ 1 ದಾತನೊಬ್ಬ ಶ್ರೀನಾಥೆನಗಿರಲು ಯಾತಕೆ ಪರರ ದುರಾಸೆ ಮಾತುಮಾತಿಗೆ ತೋರುವ ಸದ್ಗುರು ತೇಜೋಪುಣ್ಯದ ರಾಶಿ 2 ಲೇಸಾಗೆನಗಿರೆ ಭಾಸ್ಕರ ಗುರುದಯೆ ವೇಷದೋರುವದಿನ್ಯಾಕೆದಾಸ ಮಹಿಪತಿಗ್ಯನುದಿನ ಭಾಸುತಲಿರೆ ಕಾಸಿನ ಕಳವಳಿಕ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹನುಮ ಶ್ರೀರಾಮ ದೇವರ ಅತಿ ತ್ವರದಲಿ ಬಾ ಹನುಮ ಪ ದಿನವೊಂದು ಯುಗವಾಗಿ ದೈತ್ಯರಬಾಧೆಗೆ ಪರಿ ತಲ್ಲಣುಸುತಲಿದೆ ಅ.ಫ ಚಂಡ ಪ್ರಚಂಡನಾದ ದೇವಾ ಸದ್ಗುಣಭಾವಾ ಶೌರಿ ಹರೇ ಜಗದೋದ್ಧಾರಿ ಹಿಂಡು ಬಲದಿ ಬಂದೀ ದೈತ್ಯರನೆಲ್ಲ ಛಂಡಿಸಿ ಬಿಡುವಾ ಶರ್ತು ಬಿರುದು ನಿಂದ್ಹನುಮಾ 1 ಹತ್ತು ಮಾಸವು ಆಯಿತ್ಹನುಮಾ ಭಕ್ತರ ಪ್ರೇಮಾ ಒತ್ತಿಸೈನ್ಯದಿಂದ ವಾರಿಧಿ ಬಂಧಿಸಿ ಮತ್ತಿನ ದೈತ್ಯರ ಮರ್ದನ ಮಾಡೆಂದ್ಹೇಳ್ಹನುಮಾ 2 ರಾಜಾಧಿ ರಾಜನಾದಂಥಾ ರಾಮನಂತಾ ಭೋಜ ಮಹಿಮ ಬಲವಂತ ವಿಜಯನಂತ ಈನಗರ ರಕ್ಷಕ 'ಹೊನ್ನವಿಠ್ಠಲ' ರಾಜೀವಾಕ್ಷಗೆ ರೋಷವು ಇದ್ದರೆ 3
--------------
ಹೆನ್ನೆರಂಗದಾಸರು
ಹನುಮ-ಭೀಮ-ಮಧ್ವ ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1 ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2 ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3 ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4 ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
--------------
ವೀರನಾರಾಯಣ
ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ ಪ ಅನುಮಾನ ಸಲ್ಲ ಸುರಧೇನುವೆನಿಸುವನು ತನ್ನ ನೆನೆವರಿಗೆ ಅ.ಪ. ಅಂಜನದೇವಿಯೊಳ್ ಪುಟ್ಟಿ | ಪ್ರ- ಭಂಜನ ಸುತ ಜಗಜಟ್ಟಿ | ಶ್ರೀ ಕಂಜನಾಭನನು ಕಂಡು ಭಜಿಸುತಲಿ ತಾನು ರಂಜಿಪನು 1 ಪಾಥೋದಿಯನು ನೆರೆದಾಟಿ | ರಘು - ನಾಥನ ಮಡದಿಗೆ ಭೇಟಿ | ಇತ್ತು ಖ್ಯಾತ ಲಂಕೆಯನು ವೀತಿ- ಹೋತ್ರನಿಗೆ ಕೊಟ್ಟ ಬಲುದಿಟ್ಟ 2 ಸಂಜೀವನಾದ್ರಿಯ ತಂದು | ಕಪಿ ಪುಂಜವನೆಬ್ಬಿಸಿ ನಿಂದು | ತುಸ ಅಂಜಕಿಲ್ಲದಲೆ ಅಸುರರನು ಭಂಜಿಸಿ ನಿಂತ ಜಯವಂತ 3 ಶ್ರೀರಾಮಚಂದ್ರನು ಒಲಿದು | ಮಹ ಪಾರಮೇಷ್ಠ್ಯವನೀಯೆ ನಲಿದು | ಮುಕ್ತಾ ಹಾರ ಪಡೆದ ಗಂಭೀರ ಶೂರ ರಣಧೀರ ಉದಾರ 4 ಎಂತೆಂತು ಸೇವಿಪ ಜಂತು | ಗಳಿ ಗಂತಂತೆ ಫಲವೀವನಿಂತು | ಶ್ರೀ - ಕಾಂತ ನಾಮವನು ಆಂತು ಭಜಿಪರಲಿ ಪ್ರೇಮ ಬಹುನೇಮ 5
--------------
ಲಕ್ಷ್ಮೀನಾರಯಣರಾಯರು
ಹನುಮಂತ ದೇವರು (ದಂಡಕ) ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ ರಣರಂಗಧೀರಾ ಕದನಕಂಠೀರಾ ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್ ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ ಭಾಪು ಭಲ ಭಲ್ಲ ಭಾರತಿಯ ನಲ್ಲ ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ- ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ- ವನ್ನು ಪೇಳಲಿನ್ನೇನು ಭುಜಬಲವನ್ನು ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ- ಗಳಿಂದ ಮಾಡಿದೈ ಛಂದ ಅಂಜನೆಯ ಕಂದ ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು- ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ ಚರಣಮಂ ಕಂಡು.... ಮಾಡಿದೈ ಗಂಡು ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ- ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ ಮೆರೆವಂಥಾ ಜಯ ಹನುಮ ಭೀಮ ಬಲವಂತಾ ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ ಸುತ್ತ ಓಡ್ಯಾಡಿ ದೈತ್ಯರಂ ಕಾಡಿ ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು ..................................ಮಹಿಮೆ ಹೌಧೌದು ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು ಎನ್ನ ಧೊರೆಯೆ ನಾ ನಿನ್ನ ಮರೆಯೆ ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು ಮಹಾರಾಯ ಅವನಾಯುಗೇಯಾ ಹನುಮಂತರಾಯಾ ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು ಪರಾಕು ಪರಾಕು
--------------
ಕದರುಂಡಲಗಿ ಹನುಮಯ್ಯ
ಹನುಮನ ಬಲಗೊಂಬೆ ಹರುಷದಲೆನಮ್ಮ ತನುಮನ ಧನ ಈತಗೊಪ್ಪಿಸುತಲೆ ಪ. ರಾಣಿಗೆ ಮುದ್ರೆಯನಿಟ್ಟ ಜಾಣನೆನುತಲೆಮುಖ್ಯ ಪ್ರಾಣ ಮುಯ್ಯಾ ಗೆಲೆಸೋ ಈ ಕ್ಷಣ ಎನುತಲೆ 1 ಕೋತಿಯ ಸ್ವರೂಪನಾದ ಈತನೆನುತಲೆ ದೈತ್ಯ ಜಾತಿಯ ಸಂಹರಿಸಿ ಬಂದ ಖ್ಯಾತನೆನುತಲೆ2 ಸೀತೆಯ ಮನೆಗೆ ತಂದ ಮಹಾತ್ಮನೆನುತಲೆಈತಗೆ ಜೋಡ್ಯಾರು ಮುಂದೆ ಖ್ಯಾತನೆನುತಲೆ 3 ಕೃಷ್ಣನ ಸೇವೆಗೆ ಅತಿ ನಿಷ್ಠ ನೆನುತಲೆದುಷ್ಟ ಕೌರವರ ಕೊಂದ ಶ್ರೇಷ್ಠ ನೆನುತಲೆ 4 ಶ್ರೀಶ ರಾಮೇಶಗೆ ಮುಖ್ಯದಾಸನೆನುತಲೆ ವಾಸವಾದ ಬದರಿಯಲಿ ಮಧ್ವೇಶನೆನುತಲೆ5
--------------
ಗಲಗಲಿಅವ್ವನವರು
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
ಹರಿಕಥಾಮೃತಸಾರದ ಫಲಶ್ರುತಿ ಶ್ರೀ ಮದಶ್ವಗ್ರೀವನೊಲುಮೆಗೆ ಧಾಮರೆನಿಪ ಶ್ರೀ ವಾದಿರಾಜರುಪ್ರೇಮದಲ್ಲಿ ಜಗನ್ನಾಥದಾಸರ ಸ್ವಪ್ನದಲಿ ಬಂದುಶ್ರೀ ಮನೋರಮನರಿಪ ತತ್ವ ಸು ಸೌಮನದ ಮಾಲಿಕೆಯನಿತ್ತು-ದ್ದಾಮ ಗ್ರಂಥವ ರಚಿಸಿರೆನುತಲಿ ನುಡಿದ ಕಾರಣದೀ ಪ ಭಾಗವತ ಗಾರುಡ ಭವಿಷ್ಯೋತ್ತರ ಪುರಾಣಚಾರು ವಿಷ್ಣು ರಹಸ್ಯ ಪಂಚರಾತ್ರಾಗಮ ವಾಯುಸಾರ ಗುರವೃತ್ಪ್ರವೃತ್ತವು ಈರ ಸಂಹಿತಾದಿತ್ಯವಾಗ್ನೇಯಪಾರ ರಸಗಳ ತೋರ್ಪ ಶ್ರೀ ಗುರು ಮಧ್ವ ಶಾಸ್ತ್ರದಲೀ 1 ಸಾರ ಕ್ರೋಢೀಕರಿಸಿ ದೀನೋ-ದ್ಧಾರಗೋಸುಗ ಹರಿಕಥಾಮೃತ ಸಾರವನು ರಚಿಸೀಸ್ಥೈರ್ಯ ಮಾನಸದಿಂದ ಭಾವೀ ಭಾರತೀಪತಿ ವಾದಿರಾಜರಭೂರಿ ತೋಷಕೊಪ್ಪಿಸುತಲಾಪಾರ ಮುದ ಪಡೆದೂ 2 ಸಾಸಿರಾರ್ಥಗಳೊಂದು ಪದಕವಕಾಶವಿರುವೋ ಶ್ರೀದ ವಿಷ್ಣುಸಾಸಿರದ ನಾಮವನು ಯೋಚಿಸಿ ಇಹರು ಗ್ರಂಥದಲೀಈಸು ರಹಸ್ಯವನರಿತು ಪಠಪಗೆ ಏಸು ದೂರವೊ ಮುಕ್ತಿಬರಿದಾ-ಯಾಸ ಬಟ್ಟುದರಿಂದ ಫಲವೇನಿಲ್ಲವೀ ಜಗದೀ 3 ಹ ಯೆನಲು ಹರಿಯೊಲಿಯುವನು ತಾ ರಿ ಯೆನಲು ರಿಕ್ತತ್ವ ಹರಿಸುವಕ ಯೆನಲು ಕತ್ತಲೆಯೆಂಬಾಜ್ಞಾನವನು ಪರಿಹರಿಪಾಥಾ ಯೆನಲು ಸ್ಥಾಪಿಸುವ ಜ್ಞಾನ ಮೃಯೆನಲು ಮೃತಿಜನಿಯ ಬಿಡಿಸುವತ ಯೆನಲು ಹರಿ ತನ್ನ ಮೂರ್ತಿಯ ತೋರುವನು ನಿತ್ಯಾ 4 ಸಾ ಯೆನಲು ಸಾಧಿಸುವ ಮುಕ್ತೀ ರ ಯೆನಲು ರತಿಯಿತ್ತು ರಮಿಪನುಕಾಯ ವಾಙ್ಮನದೆಂಟು ಅಕ್ಕರ ನುಡಿದರದರೊಳಗೇಶ್ರೀಯರಸು ವಿಶ್ವಾದಿ ಅಷ್ಟೈಶ್ವರ್ಯ ರೂಪದಿ ನಿಂತು ತಾ ಪರ-ಕೀಯನೆನಿಸದೆ ಇವನ ಮನದೊಳು ರಾಜಿಪನು ಬಿಡದೇ 5 ಅನಿರುದ್ಧ ಧರ್ಮವು ದೊರಕಿಸುವ ಪರಮ್ಹರುಷದಲ್ಲಿ ಸ-ತ್ವರ ಕಥಾಯೆನೆ ಕೃತಿರಮಣನರ್ಥಗಳ ಹನಿಗರೆವಾವರ ಅಮೃತಯೆನಲಾಗ ಶ್ರೀ ಸಂಕರುಷಣನು ಕಾಮವನು ಯೋಜಿಪಸರಸ ಸಾರೆನೆ ವಾಸುದೇವನು ಮೋಕ್ಷ ಕೊಡುತಿಪ್ಪಾ 6 ನಿತ್ಯ 7 ಚಾರುತರದೀ ಹರಿಕಥಾಮೃತ ಸಾರಕೃತ ಋಷಿ ಭಾರದ್ವಾಜರುಸಾರ ಹೃದಯದಿ ನಿಂತು ಸಕಲ ಸು ಶಾಸ್ತ್ರದಾಲೋಕಾಸಾರಿ ಸಾರಿಗೆ ಮಾಡಿ ಮಾಡಿಸಿ ಸೂರೆಗೊಟ್ಟಾನಂದ ಚಿನ್ಮಯಪಾರವಾರಾಶಯನ ಶ್ರೀ ಕಮಲಾಪತಿ ವಿಠಲಾ 8
--------------
ಕಮಲಪತಿವಿಠ್ಠಲರು
ಹರಿಗುರು ಪ್ರಸನ್ನ ವಿಠಲ | ಪೊರೆಯ ಬೇಕಿವಳಾ ಪ ದುರಿತ ರಾಶಿಯ ಕಳೆದು | ಕಾಪಾಡೋ ಇವಳಾ ಅ.ಪ. ಭವ ವಂದ್ಯ | ಕೋಮಲಾಂಗನೆ ದೇವಕಾಮಿತಾರ್ಥದವನಾಗಿ | ಕಾಪಾಡ ಬೇಕೋ 1 ಬೋಧ ತಿಳಿಸುತಲೀಸಾಧನವ ಗೈಸಿ ಸ | ಮ್ಮೋದ ಕೊಡು ಇವಳೀಗೆಹೇ ದಯಾನಿಧಿ ಹರಿಯೇ | ಬಾದರಾಯಣನೇ 2 ಪತಿಸುತರೊಳು ಹರಿಯೇ | ವ್ಯಾಪ್ತಿಯನೆ ತಿಳಿಸುತ್ತಹಿತದಾದ ಸೇವೆಯಲಿ | ರತಳೆನಿಸೊ ಹರಿಯೇಹಿತವಹಿತವೆರಡನ್ನು | ಸಮತೆಯಲಿ ಉಂಬಂಥಮತಿಯ ನೀ ಕರುಣಿಸುತ | ಅತಿಹಿತದಿ ಪೊರೆಯೋ 3 ಭವವನದಿ ನವಪೋತ | ತವದಿವ್ಯಸ್ಮøತಿ ಇತ್ತುಶ್ರವಣ ಸುಖ ವದಗಿಸುತ | ಸಾಧನವ ಗೈಸೋಭುವನ ಪಾವನ ದೇವ | ತವನಾಮ ಜಪಗಳನುಸರ್ವದಾ ಕರುಣಿಸುತ | ಉದ್ಧರಿಸೋ ಇವಳಾ 4 ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿತ್ರಿವಿಕ್ರಮ ವ್ಯಾಸವಿಠಲ | ಪೊರೆ ಇವಳಾ ಪ ದುರಿತ ದುಷ್ಕøತವೆಲ್ಲ | ದೂರಮಾಡುತಲೀ ಅ.ಪ. ಸಾರ | ಪಠಿಸೆಂದು ಪೇಳ್ದಾ 1 ವರುಷ ಪೈಂಗಳ ಪುಷ್ಯ | ಆರಾಧನೆಯದಿನದಿಗುರುಗಳನು ಕಂಡೀಕೆ | ಅವರೆ ಇವರೆಂದುಭರದಿ ನಿಶ್ಚಯಿಸುತಲಿ | ಹರಿದಾಸ್ಯ ಕಾಂಕ್ಷಿಸುತಗುರುವೆಂದು ಎನ್ನ ಬಳಿ | ಪ್ರಾರ್ಥಿಸುತ್ತಿಹಳಾ 2 ಕಂಸಾರಿ ಕಳೆದು ಭವಸಂಸಕ್ತಳಾಗಿಸದೆ | ಉದ್ದರಿಸೊ ಇವಳಾಶಂಸಿಸೀ ತವಪಾದ | ಪಾಂಸುವನೆ ಧರಿಸಿ ನಿ-ಸಂಶಯದಿ ತವದಾಸ್ಯ | ಸಿದ್ದಿಸೊ ಹರಿಯೇ 3 ಪತಿತ ಪಾವನ ರಂಗ | ಪತಿವ್ರತೆಗೆ ಸುಜ್ಞಾನಭಕ್ತಿ ಹರಿಗುರುಗಳಲಿ | ಇತ್ತು ಅಧಿಕಧಿಕಾವತ್ತಿ ಬಹ ವಿಘ್ನಗಳ | ಹತ್ತಿಕ್ಕಿ ಪೊರೆಯೆಂದುಅರ್ಥಿಯಲಿ ಬಿನೈಪೆ | ಮರುತಂತರಾತ್ಮ 4 ದರ್ವಿ ಜೀವಿಯ ಪೊರೆಯೊ | ದುರ್ವಿಭಾವ್ಯನೆ ಹೃದಯಗಹ್ವರದಿ ತವರೂಪ | ತೋರ್ವ ಮನಮಾಡೀಸರ್ವತ್ರ ತವನಾಮ | ದಿವ್ಯ ಸಂಸ್ಕøತಿ ಈಯೊಸರ್ವೊತ್ತಮನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿದಾಸರ ಸ್ತುತಿ ಆನಂದ ಸಾಗರದ ಸೌಖ್ಯವೇಂ ನುತಿಪೆ ಪ. ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ ಅ.ಪ. ಗಾನಲೋಲನ ಮಹಿಮೆ ಜ್ಞಾನ ಬೋಧನೆಯಿಂದ ನಾನಾಪ್ರಕಾರದಿಂ ವರ್ಣಿಸುತಲಿ ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ ಮಾನಸದಿ ನಲಿವಂತೆ ಮಮತೆಯೊಳು ಪೊರೆದ 1 ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ ಸೋಮಕಳೆ ಪೌರ್ಣಿಮ ಸ್ಥಿರವಾರದಿ ಕಾಮಧೇನುವು ಎನುತ ಕರೆದು ಮುದವಿತ್ತು 2 ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ- ನಿಲ ಭಾರತಿಯರ ವ್ಯಾಪಾರ ತಿಳಿಸಿ ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು3
--------------
ಅಂಬಾಬಾಯಿ
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ- ಹರಿಕೃಷ್ಣ ಶರಣೆನ್ನಿರೊ ಪ ಪರಿಪರಿ ದುರಿತಗಳಳಿದು ಪೋಗುವದೆಂದು ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ ಹರಿ ಎಂದ ಮಾತ್ರದಲಿ ಹತ್ತಿದ ಪಾಪ ಪರಿಹಾರಾಗುವುದು ಕೇಳಿ ಹರಿದಾಸರೊಡನೆ ಕೂಡಿ ಸತ್ಸಂಗದಿ ಹರಿ ಕೀರ್ತನೆಯನು ಪಾಡಿ ಹರಿಯ ಮಹಿಮೆಯ ಸ್ಮರಿಸುತಲಿ ಹಗ ಲಿರುಳು ಚಿಂತನೆ ಮಾಳ್ಪ ಸುಜನರ ಪರಮ ಕರುಣಾ ಸಾಗರನು ತನ್ನ- ವರೊಳಿರಿಸುತ ಪೊರೆವ ಸಂತತ 1 ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ ತ್ವರದಿ ಓಡಿ ಬರಲಿಲ್ಲವೆ ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ- ಕ್ಷಯ ವಸ್ತ್ರವೆನಲಿಲ್ಲವೆ ತರುಳರೀರ್ವರ ಪೊರೆದು ರಕ್ಷಿಸಿ ಕರೆಯೆ ನಾರಗನೆಂದ ದ್ವಿಜನಿಗೆ ನರಕ ಬಾಧೆಯ ಬಿಡಿಸಿ ಸಲಹಿದ ಹರಿಗೆ ಸಮರು ಅಧಿಕರಿಲ್ಲ ಶ್ರೀ 2 ಬಡಬ್ರಾಹ್ಮಣನ ಸತಿಯು ನಯಭಯದಿಂದ ಒಡೆಯರ್ಯಾರಿಲ್ಲೆನಲೂ ಪೊಡವೀಶ ಶ್ರೀಪತಿಯು ಪರಮಾಪ್ತನೆನಲು ಹಿಡಿಯಗ್ರಾಸವ ಕೊಡಲು ನಡೆದು ದ್ವಾರಕ ದೊಡೆಯನಿಗೆ ಒ- ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ ಕೆಡದ ಸೌಭಾಗ್ಯವನೆ ನೀಡಿದ ಬಿಡದೆ ಕಮಲಾನಾಭ ವಿಠ್ಠಲನ 3
--------------
ನಿಡಗುರುಕಿ ಜೀವೂಬಾಯಿ