ಒಟ್ಟು 11537 ಕಡೆಗಳಲ್ಲಿ , 136 ದಾಸರು , 5740 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಶಾ ಪಾಶದಲಿ ಬಿದ್ದು ಘಾಸಿಯಾಯಿತು ಜೀವ ವಾಸುದೇವನೆ ನಿಮ್ಮ ಆಶೆಗೆನ್ನ ಮನವಿಲ್ಲ ಪ ಮಡದಿಯಾಗಲು ಮತ್ತೆ ಮನೆಯಾ ಮಾಡುವದಾಶಾ ಒಡಗೂಡಲದು ಮಕ್ಕಳಾಗುವಾಶಾ ಬಿಡದೆ ಕುಟುಂಬ ಪೋಷಣೆಯಾಗುವಾದಾಶಾ ಕಡಲ ಶಯನಾ ನಿಮ್ಮ ಆಶೆಗೆನ್ನ ಮನವಿಲ್ಲ 1 ಅನ್ನವಾಗಲು ವಸ್ತ್ರ ಅಲಂಕಾರದಾಶಾ ಇನ್ನು ಮಕ್ಕಳ ಮುಂಜಿ ಮದುವಿಯಾಶಾ ತನ್ನ ನೆಂಟರಸರಿಯಾ ಮಾಡುವದಾಶಾ ಪನ್ನಗಾಶನವಾಹನಾಶೆಗೇ ಮನವಿಲ್ಲ 2 ನಡೆವಕಾಲಕೆ ದೊಡ್ಡ ಕುದುರೆ ಏರುವದಾಶಾ ಅಡರಲು ರಥದಿಂದ ಆಂದಣಾಶಾ ಕಡಿಗೆ ತೀರದ ಹೊನ್ನು ಹಣದ ಸಂಗ್ರಹದಾಶಾ ಪೊಡವಿಧರನೇ ನಿಮ್ಮ ಆಶೆಗೆ ಮನವಿಲ್ಲ 3 ಒಂದೊದಗಲು ಮತ್ತೆ ಒಂದು ಬಯಸುದಾಶಾ ಎಂದಿಗೇ ಸರಿಯದು ವಿಷಯದಾಶಾ ಕುಂದಿದ ತನುವಿನ ಬಲವಾಗುವದಾಶಾ ಇಂದಿರೇಶನ ಆಶೆಗೆನ್ನ ಮನವಿಲ್ಲ 4 ಆಶೆಯೆಂಬಾ ನದಿಯ ಸುಳಿಯ ಬಿಡಿಸಿ ನಿಜ ದಾಸರಾ ಸಂಗ ಮನವ ತಿದ್ದೀ ಲೇಸಾಗಿ ಮಹಿಪತಿ ಸುತ ಪ್ರಭು ಭಕುತಿಯಾ ಆಶೆ ಹೆಚ್ಚಿಸಿ ಎನ್ನ ದಯದಿ ಪಾಲಿಸೋ ದೇವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ ಬಡಜನರ ಪರ್ವತ ಒಡಲ ಆಸೆಯ ಕೊಡುವೆನೆಂದು ನುಡಿಯಲವರು ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ ಕಡೆಗೆ ನೋಯ್ವರು 1 ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ ಖೋಡಿದೈವಿನಾ ಬೇಡುವಂತೆ ನಿನ್ನ ಬೇಡಿಕೊಂಬೆ ಗಾಢಮಹಿಮ ನೋಡದಿರೊಳಿತಿತ್ತಾಡಿದ್ಯಾಕ 2 ರೂಢಿಗಧಿಕನೆ ದಯವ ಮಾಡು ಎನ್ನೊಳು ಮೂಢತನದಿ ನಾ ಮಾಡಿದಂಥ ಕೇಡುಗುಣಗಳೆಣೆಸದೆನ್ನೊ ಳಾಡಿದ್ವಾಕ್ಯ ನೀಡು ಶ್ರೀರಾಮ 3
--------------
ರಾಮದಾಸರು
ಆಸ್ಥಾನ ಮಾಡೋಣ ಆತ್ಮ ವಿಚಾರ ದಾಸ್ತಾನ ಮಾಡೋಣ ಪ ಸ್ವಸ್ತಿ ಆಯುಷ್ಕೀರ್ತಿ ಧರ್ಮಯಶೋಕಾಮ ಹಸ್ತಿವರದನಾಧೀನವೆಂದು ನಾವೆಲ್ಲಅ.ಪ ಶಮದಮಶ್ಯಾಂತಿ ವಿರಕ್ತ್ಯುಪರತಿಯಂಬೋ ಕ್ರಮಮಂತ್ರಿಗಳು ವಿಜ್ಞಾನಿ ಪ್ರಧಾನಿಯು ಸಮಾಧಿಕ ಶೂನ್ಯವೆಂಬುವ ರಾಜನು ವಿಷಯ ಭ್ರಮೆ ಎಂಬೊ ಕಟ್ಟು ವಿಚಾರಣೆಯಾಗುವ 1 ಸತ್ಕರ್ಮವೆಂಬೊ ಭೂಮಿಯನು ಸಾಧುಗಳೆಂಬ ವಕ್ಕಲುಗಳಿಗಿತ್ತು ಸಿದ್ಧಾಯವ ತೆಗೆದು ಭಕ್ತಿ ಜ್ಞಾನ ವೈರಾಗ್ಯ ಬಂಡಿಗಳಲಿ ತುಂಬಿ ಭಗವಂತನೆಂಬ ರಾಜಗೆ ಒಪ್ಪಿಸುವಂಥ 2 ಸ್ವಾಮಿ ಭೃತ್ಯನ್ಯಾಯ ಎಂಬೋ ಡಂಗುರವನು ಹೊಯಿಸಿ ತಾಮಸರಿಗೆ ನಿತ್ಯದಂಡನೆಯನು ವಿಧಿಸಿ ಕಾಮಕ್ರೋಧಗಳೆಂಬೋ ಖಳರ ಶಿಕ್ಷಿಸಿ ಗುರು- ರಾಮವಿಠಲನ ಕರುಣವೆಂಬೋ ಸಂಬಳ ಪಡೆದು 3
--------------
ಗುರುರಾಮವಿಠಲ
ಆಳ್ವಾರ್-ಆಚಾರ್ಯ ಸ್ತುತಿಗಳು ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ ದೇವಿ ತಾನುದಿಸೆ ಬೇಗ ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1 ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು ಭಕ್ತವತ್ಸಲನಾ ವರಿಸಬೇಕೆನುತಾನೆ ಅರ್ಥಿಯಿಂದಲೆ ನೀರಾಟವನೆನೆದಾಳು 2 ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ ವಾಸುದೇವನಾ ವರಿಸಬೇಕೆನುತಾಲೆ ಉ ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3 ಮುತ್ತು ಮಾಣಿಕದಾಭರಣವನಿಟ್ಟು ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4 ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5 ದಂತಧಾವನ ಮಾಡಿ ಕಂತುಪಿತನರಸೀಗೆ ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6 ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ ದರ್ಪಣವನು ತೋರಿ ಕಂದರ್ಪನ ಮಾತೆಗೆ ಧೂಪ ದೀಪ ಕರ್ಪೂರದಾರತಿಯೆತ್ತಿದರು 7 ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8 ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ ನೂತನವಾದ ಕರ್ಪೂರವರ್ಣಗಳಿಂದ ಜಗ ನ್ಮಾತೆಗೆ ತಾಂಬೂಲವ ನೀಡಿದರೂ 9 ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10 ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು ಮಂದಗಮನೆ ತನ್ನ ಮಂದಿರಕೆ ನಡೆದಾಳು 11 ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ ಕತ್ತುರಿ ಬಾವುಲಿ ಕಮಲಸರಗಳೂ ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12 ಹಾರಪದಕ ಹಸ್ತಕಡಗ ಹರಡಿ ವಂಕಿ ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು ಅಂದುಗೆ ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13 ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ ಯಾ ಶೀರೆ ಕುಪ್ಪುಸವನಿತ್ತು ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14 ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು ಚಂದದಿಂ ಮಲ್ಲಿಗೆಮಾಲೆಯ ಕಳುಹಲು ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15 ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ ಕ್ಷೀರಾನ್ನ ಭೋಜನಂಗಳ ಮಾಡಿದರು ಭೋಗಿಯ ದಿನದಿ ಕಲ್ಯಾಣವ 16 ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17
--------------
ಯದುಗಿರಿಯಮ್ಮ
ಇ. ದೇವತಾ ಸ್ತುತಿ ವಾಯುದೇವರು ಇನ್ನಾದರೂ ಸುಮುಖನಾಗೊ ಧ್ವರಿಯೇ ಪ ಪರಿ ವಿಧದಿಂದ ನೊಂದು ಕರಮುಗಿದುಬಾಯ್‍ತ್ಯರದು ಕೂಗಿ ಕರಿವೆ ಸದ್ಗುರುರಾಜನೆಂದು ಅ.ಪ. ಪಾದ ನಂಬಿದ ಭಕ್ತರಿಗಾನಂದಗರಿವೆನೆಂಬ ಬಿರುದಾಂಕಿತನಾಗಿ ಸದ್ವøಂದದೊಳಗಿಪ್ಪೆ ರಾಜಾಚಾರು ಗುರು ಬೃಂದಾವನಾರ್ಯರ ಪೊರೆದ ಮಂದಾಕಿನಿಧರ ಧವಳಾಖ್ಯವಾಸಾ ಭೋಜಾ 1 ಭುವನದೊಳು ಸರಿಗಾಣೆ ನಿನಗಿನ್ನು ಪರಮಾಪ್ತ ಶಿರೋಮಣಿಗಳೊಳು ಸರ್ಜಿಸಿದ ಕಾರಣ ವಜ್ರಲೇಪನ ಮಾಡಿ ಊರ್ಜಿಸುವತ್ಯರ ಮಾಡು ಎನ್ನಾ 2 ಪರಮ ಪಾಮರನು ನಾನಯ್ಯ ಪವಮಾನರಾಯಾಪಾರುಗಾಣದೆ ಶರಧಿಯೊಳು ಮುಳುಗುವ್ಯನೋಕರವಿಡಿದು ತಡಿಗೆತ್ತಿ ಕಾಪಾಡು ತಂದೆವರದಗೋಪಾಲವಿಠಲನ ಮರಿಯೇ 3
--------------
ತಂದೆವರದಗೋಪಾಲವಿಠಲರು
ಇಕೋ ಈತ ವೆಂಕಟೇಶನೊ | ಭವದ | ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ ಪ ಕರುಣ ಅರುಣ ಕಿರಣ ಪೋಲುವ | ಚರಣ ಧರಣಿ ತರುಣಿ ಸ್ಮರಿಸಿ | ಕರುಣಗಡಲಾ | ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ 1 ಮಂಡಿಯ ಮಂಡನ | ಕುಂಡಲ ಕಾಂತಿ | ಗಂಡ ಸ್ಥಳದಲಿ ಮಿರುಗೆ ತುಲಸಿ | ಕೌಸ್ತುಭ ಕಾಲ | ಪೆಂಡೆಯಿಟ್ಟು ನಂದನೀತ 2 ವಾಹನ ಆ ಖಂಡಲ ಇಕ್ಷುಕೋ | ಪರಮೇಷ್ಠಿ | ತೊಂಡರ ನಲಿದು ಕೊಂಡಾಡೆ ಚಂದಿರ ಮಂಡಲದೊಳು ಉ| ದ್ದಂಡನಾಗಿಯಿಪ್ಪಾ | ಪುಂಡ ದೈವನೀತ 3 ಪಂಜಿನಸಾಲು ಪರಂಜಳಿ ವಾದ್ಯ ವಿ | ರಂಜಿಸಲು ಜ್ಞಾನ | ಪುಂಜ ನಾರದ ಜಯ ಜಯ ಪೇಳಲು | ನಿರಂಜನ ಭಂಜನ ಈಶಾ 4 ಕರದ ಜನಕೆ ಸುರಧೇನು ಇದು | ನಿರುತದಲ್ಲಿ ಪೊರೆವ ಭಕ್ತರ | ಕರಿಯ ಕಾಯ್ದ ವಿಜಯವಿಠ್ಠಲ | ಪರಮ ಪುರುಷ ತಿರುಮಲನೀತ 5
--------------
ವಿಜಯದಾಸ
ಇಕೋ ದೇವನೆಂದಾಗಮಗಳು ಪೇಳೆನೀ ಕೋಟಿದೇವರನೇಕೆ ಭಜಿಸುವೆ ಪಸಾಕೊ ಸಂಸೃತಿಯಾಟವಿಷ್ಟರ ಮೇಲೆನೂಕೊ ರಾಗ ದ್ವೇಷಗಳ ಚನ್ನಾಗಿಕಾಕೋದರನಂತೆ ಕಾಡದೆ ಜನರನುಬೇಕೋ ಸಾಧನಗಳ ನೀ ಸಾಧಿಸಲು 1ಏಕೋ ಮೂಢನಂದದಿ ಸುಮ್ಮನಿರುವೆ ವಿವೇಕೋಪಚಯವ ಮಾಡು ಮನದಲಿಲೋಕೋಪಕಾರವ ನಡಸು ನಿಷ್ಕಪಟದಿಈ ಕೋಪವ ಬಿಟ್ಟರಿದಿರಾರು ನಿನಗೆ 2ಫಣ ಕೋಪಮನನಾಗಿ ಪಗಲ ಕಾಣದೆ ನಿನ್ನನಾ ಕೋಪಮೆಗೆ ಪೆಚ್ಚಿದ ನಿಜ ಸುಖವಾತಾಕೋ ಶ್ರೀ ಪಾದವನು ಗೋಪಾಲಾರ್ಯನಕೋ ಕೋ ಎಂದು ಕೊಡುವನು ಮುಕುತಿಯನು 3
--------------
ಗೋಪಾಲಾರ್ಯರು
ಇಕ್ಕೊ ಇಲ್ಲೆ ಹಾನೆ ಅಖಂಡವಾಗಿ ಸದ್ಗುರು ನಮ್ಮ ಅಕ್ಕಿಸಿಕೋಬೇಕು ಗುಕ್ಕಿ ತನ್ನೊಳು ತಾ ಗುಹ್ಯವರ್ಮ ಧ್ರುವ ಹೇಳಬಾರದು ಇನ್ನೊಬ್ಬರಗೀ ಮಾತು ಬಹಳ ಗೂಢ ತಿಳಿದ ಮಹಿಪನೀವಾ ಲಕ್ಷಕೋಟಿಗೆ ಒಬ್ಬ ಪ್ರೌಢ ಒಳಗುಟ್ಟಿನ ಕೀಲು ತಿಳಿಯಲಿಕ್ಕೆ ಮಾಡಿ ಮನದೃಢ ಸುಳಹು ಕಂಡಮ್ಯಾಲೆ ಪ್ರಾಣಹೋದರೆ ಒಬ್ಬನು ಬಿಡಾ 1 ದೂರಿಲ್ಲ ದೂರಿಲ್ಲ ತಿಳಿಕೊಳ್ಳಿ ಪೂರ್ಣ ಅರಿತು ಬ್ಯಾಗ ತಿರುಗಿನೋಡಲು ತನ್ನೊಳು ದೋರುತಿದೆ ಬ್ರಹ್ಮಯೋಗ ಸಾರವೇ ಸುಖಗರವುತದೆ ನೋಡಿರೋ ರಾಜಯೋಗ ಪರದೆ ಇಲ್ಲದೆ ಗುರುತದೋರುವಾ ನೋಡಿ ಕಣ್ಣಾರೆ ಈಗ 2 ಗುರುಕೃಪೆಯಿಂದ ಗುರುತಕ ದೂರಿಲ್ಲ ಕೊಳ್ಳಿ ಖೂನ ಒಳಹೊರಗೆ ತುಂಬಿತುಳುಕುತದೆ ತಾನೆ ನಿಧಾನ ತರಳ ಮಹಿಪತಿ ಸ್ವಾಮಿ ನೋಡಲಿಕ್ಕೆದ ಒಂದೆ ಸಾಧನ ಸ್ವರೂಪರಿಯಲಿಕ್ಕೆ ಆಗುತ್ತದೆ ಬಲುಬ್ಯಾಗಲುನ್ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ ಧ್ರುವ ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1 ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2 ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ನಮ್ಮಸ್ವಾಮಿ ಸಕಲಾಂತರ್ಯಾಮಿ ಪ್ರಕಟ ಸಹಸ್ರನಾಮಿ ಭಕ್ತಜನ ಪ್ರೇಮಿ ಧ್ರುವ ಒಳಗೆ ನೋಡಿ ನಿಮ್ಮ ಹೊಳೆವ ಪರಬ್ರಹ್ಮ ತಿಳಿಯಲಿಕ್ಕೆ ನೋಡಿವರ್ಮ ಅಳಿಯಬೇಕು ಹಮ್ಮ 1 ಸ್ವಸ್ತ ಮನಮಾಡಿ ವಸ್ತು ಇದೇ ನೋಡಿ ಅಸ್ತವ್ಯಸ್ತ ಬ್ಯಾಡಿ ಸಾಭ್ಯಸ್ತ ನಿಜಗೂಡಿ 2 ಬಿಟ್ಟು ನಿಜಖೂನ ಕೆಟ್ಟು ಹೋಗುದೇನ ಗುಟ್ಟು ಮಹಿಪತಿಗಿದೆ ಮುಟ್ಟಿ ಗುರುಙÁ್ಞನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇತರ ಗುರುಗಳ ಸ್ತುತಿ ಶ್ರೀ ನಾರದರ ಸ್ತುತಿ 7 ಇದೇ ಪೇಳಿ ಪೋದರು ವಿಧುವದನೆ ನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ ಸಿರಿ ಅರಸನೆ ಈ ಧರೆಯೊಳಗುತ್ತಮ ಮರುತ ದೇವರೆ ಜಗದ್ಗುರುಗಳೆಂದು ಪಂಚಭೇದ ಜ್ಞಾನಶೀಲನೆ ಸುರಲೋಕವಾಸಿ ಶ್ರೀ ಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1 ಜರದೂರ ನರಹರಿ ಧರೆಯೊಳು ವ್ಯಾಪಿಸಿ ಇರಲು ತ್ರಿಗುಣ ಕಾರ್ಯವಾಹವೆನ್ನುತಾ ಪರತಂತ್ರ ಜೀವವೆಂದರಿದು ಪಾಪ ಪುಣ್ಯ ಸರಸಿಜನಾಭನಿಗರ್ಪಿಸಿ ಒಟ್ಟಿಗೆ ಬರಬೇಕು ಯೆಂದು 2 ಸಿರಿಗೋವಿಂದ ವಿಠಲ ವಿಶ್ವವ್ಯಾಪಕ ಗಿರುವವು ಎರಡು ಪ್ರತಿಮೆ ಜಗದಿ ಚರ ಅಚರಗಳನ್ನು ಅರಿತು ಮಾನಸದಲ್ಲಿ ಹರಿ ಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆ ಪೇಳಿ ಪೋದರು 3
--------------
ಅಸ್ಕಿಹಾಳ ಗೋವಿಂದ
ಇಂತಾ ಸಾಟಿಗಳೆಷ್ಟೊ ಜಗದೊಳಗಿಂತಾ ಸಪ್ಪಳೆಷ್ಟೊ ಪ ಅಂತರವರಿಯದೆ ಅಧಮನು ತಾನಾ ಗಿಂತಿದರೊಳು ಬೊಗಳುವ ಕಂತೆ ಅ.ಪ ಕುಂತರೆ ನಿಂತರೆ ಸುಜನರ ದೂಷಿಸೆ ಅಂತಕನಿಗೆ ಸಿಲ್ಕುವೆಯಹುದೊ ಪಂಥವಿಲ್ಲ ಪರೀಕ್ಷಿಸಿ ನೋಡೆಲೊ ಸಂತೆಯೊಳಗೆ ನೀಮಾಡುವ ಡಂಬದ 1 ಮಸ್ತಿಯೊಳಾಡಲು ಮಥನಿಪುದಹುದೆಲೊ ದುಸ್ತರವೆಲೊ ದುರಿತಾಂಬುಧಿಯು ನಿಸ್ತರಂಗನಿಗೆ ನಿಜಸುಖವೆನ್ನುತ ಶಿಸ್ತೊಡೆಯುವನಂಥಡಿಯನು ಅರಿಯದ 2 ಆಗದು ಅನುಭವ ನೀಗದು ಕತ್ತಲೆ ಹ್ಯಾಗೆಂಬುವ ಸಂಶಯ ನಿನಗೇ ನಾಗರೀಯೆ ನಿಜ ತುಲಸೀ ರಾಮ ಮದ್ಗುರುವಿ ನಪ್ಪಣೆಯ ಬಿಟ್ಟಿರೆ ಬೊಗಳುವ 3
--------------
ಚನ್ನಪಟ್ಟಣದ ಅಹೋಬಲದಾಸರು
ಇತ್ತ ಬಾರೊ ಒಲವುತ್ತ ಬಾರೊಹತ್ತವತಾರದ ಚಿತ್ರಚಾರಿತ್ರ ಎನ್ನತ್ತ ಬಾರೊಪ. ಒದ್ದು ಶಕಟನ ಮುರಿದ ಶಿಶುವೆ ನೀನೆದ್ದು ಬಾರೊ ಅ-ಳದ್ದು ಬ್ರಹ್ಮಾಂಡವ ಸೀಳ್ದ ಮಹಿಮೆಸಾಲದ್ದೆÉ ಬಾರೊಕದ್ದು ಬೆಣ್ಣೆನೇಕೆ ಮೆದ್ದೆ ದಾರಿದ್ರವೆ ಮುದ್ದೆ ಬಾರೊ ಆಡು-ತಿದ್ದ ಮಕ್ಕಳ ನೀನು ಗುದ್ದಿ ದೂರನು ತರುತಿದ್ದೆ ಬಾರೊ 1 ಹಿಂದೆ ಬಾಯೆಂದರೆ ಮುಂದೆ ಬಾಹೆ ಗೋವಿಂದ ಬಾರೊ ಎನ್ನ ಕಂದ ಬಾಯೆಂದರೆ ಮುಂದೆ ನಿಲುವೆ ಮುಕುಂದ ಬಾರೊಬಂದೆನ್ನ ಮುಂದೆ ನೀ ನಿಂದಿರು ನಿತ್ಯಾನಂದ ಬಾರೊಎಂದೆಂದು ಭಕುತರ ಹೊರೆದಿಹ ಕಾರುಣ್ಯಸಿಂಧು ಬಾರೊ 2 ಮಂಥನ ಮಾಡಲು ನಿಂತೆÀ ಕಡೆಗೋಲ ನೇಣಾಂತೆ ಬಾರೊಸಂತರಿಗನುದಿನ ಸಂತೋಷವೀವ ನಿಶ್ಚಿಂತ ಬಾರೊಅಂತವಿಲ್ಲದ ಮಾರಾಂತನ ಗೆಲಿದ ಕೃತಾಂತ ಬಾರೊಅಂತಿಂತೆನದೆ ಮಾಕಾಂತ ಹಯವದನನನಂತ ಬಾರೊ3
--------------
ವಾದಿರಾಜ
ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ಪ ಇಂಥಾ ಗುರುಗಳನೆಂದು ಕಾಣೆನಾ ನಂತ ಚೇತನರಂತರ ಬಹಿರದಿ ನಿಂತು ಕರ್ಮವವರಂತೆ ಮಾಳ್ಪಾ - ನಂತ ಮಹಿಮಾನಂತನಾಂಶಜರಿಂಥಾಅ.ಪ ತುಂಗಾತೀರದಿ ನಿವಾಸಾ ಮಂತ್ರಾಲಯಕೀಶ ತುಂಗ ವಿಕÀ್ರಮ ಜಗದೀಶಾ ಶ್ರೀಹರಿ ದಾಸಾ ಮಂಗಲ್ಮಾತಕ ವೃಂದಾವನ ದೇಶಾ ಸಾರಿದ ವ್ರತೀಶಾ ಮಂಗಲ ಮಹಿಮ ರಂಗನ ಕರುಣಾಪಾಂಗ ಪಡೆದ ಕೃ - ಪಾಂಗ ಯತಿಕುಲೋತ್ತುಂಗ ಮಾಯಿ ಮಾ - ತಂಗ ಸಂಘಕೆ ಸಿಂಗ ದುಷ್ಟ ಭು - ವಿಹಂಗ ಸ್ವಮತೋ - ಭೃಂಗ ಮನ್ಮನೋ - ರಂಗ ಬಿಂಬನ ಇಂಗಿತಙ್ಞರ ಸಂಗ ನೀಡಿ ಕಂಗಳಿಗೆ ತಾವು ಕಂಗೊಳಿಪರಿಂಥಾ 1 ಮೇದಿನಿ ತಳದಲಿ ಜನಿಸೀ ಸುಖತಿರ್ಥರ ಭಜಿಸೀ ಭೇಧಮತವನೆ ಸಾಧಿಸೀ ವಾದದಿ ಜೈಸಿ ಮಾಧವನೆ ಸರ್ವೋತ್ತಮನೆನಿಸಿ ಸ್ವಮತವ ಸ್ಥಾಪಿಸಿ ಭೋಧಿಸಿ ತತ್ತ್ವವ ಭೇಧಿಸಿ ಪರಮತ ಛೇಧಿಸಿ ಕುಮತಿಯ ಶೋಧಿಸಿ ತತ್ತ್ವದ ಹಾದಿಯ ಹಿಡಿಸಿ - ಮೋದಕೊಡುವ ಪಂಚ ಭೇದವ ತಿಳಿಸೀ ಸಾದರ ತನ್ನಯ ಪಾದಸೇವೆಯ ಮೋದವ ನೀಡುವ ಮೇದಿನೀ ದಿವಿಜಾರಾಧಿತ ಪದಯುಗ ಶೋಧಿಸಿ ಜನಮನೋ ಖೇದಗೊಳಿಪ ಭ - ವೋಧಧಿ ದಾಟಿಸಿ ಶ್ರೀದÀನ ತೆರದಲಿ ಮೇದಿನಿಯಾಳುವರಿಂಥಾ 2 ಧಿಟ್ಟ ಗುರು ಜಗನ್ನಾಥ ವಿಠಲದೂತಾ ಸೃಷ್ಟಯೊಳಗತಿ ವಿಖ್ಯಾತಾನೆನಿಸಿದ ಯತಿನಾಥಾ ಕುಷ್ಟಾದಿ ರೋಗದ ಘಾತಾ ಮಾಡುವೊದಾತಾ ಇಷ್ಟಾರ್ಥವಾ ತಾ ಸೃಷ್ಠಿಗೆ ಬೀರುವ ಶಿಷ್ಟಜನರನುತ್ನøಷ್ಟದಿ ಪಾಲಿಪ ಎಷ್ಟು ಪೇಳುವುದೋ ಉತ್ಕøಷ್ಟನ ಗುಣಗಳ ಭ್ರಷ್ಟರರಿಯರೆಲೆ ಶಿಷ್ಟರು ಬಲ್ಲರು ಇಷ್ಟೇ ಅಲ್ಲವೀತನ ವಿಶಿಷ್ಟ ಮಹಿಮೆಗ - ಳೆಷ್ಟು ಪೇಳಲವಶಿಷ್ಟವೆನಿಪವೋ ದೃಷ್ಟಿಹೀನರಿಗೆ ದೃಷ್ಟಿ ನೀಡುವ ದೃಷ್ಟಿ ಮಾತ್ರದಿ ತುಷ್ಟಿಬಡಿಸುವೊರಿಂಥಾ 3
--------------
ಗುರುಜಗನ್ನಾಥದಾಸರು