ಒಟ್ಟು 1329 ಕಡೆಗಳಲ್ಲಿ , 102 ದಾಸರು , 953 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಪೆಂಡಿರಿಬ್ಬರನಾಳ್ವಗುಂಟೆ ಸುಖ ಕರುಣಿಸೈ ಪುಂಡರೀಕಾಕ್ಷ ತವ ಭಕ್ತಿವಧು ಒಬ್ಬಳನೆ ಪ ನರ ಬಾ ನೀ ಯೆಂದೆಳೆವಳಾಸೆ ಹೃದಯೇಶನಂ ಬರಸೆಳೆವಳಾ ಲಜ್ಜೆ ತನ್ನ ಕಡೆಗೆ ಹರಿಹರಿ ಡೋಲಾಯಮಾನವಾದುದು ಚಿತ್ತ ಸ್ಥಿರವ ಕರುಣಿಸು ಲಕ್ಷ್ಮಿಯರಸ ಶ್ರೀಕೃಷ್ಣಾ 1 ನಾಲಿಗೆಗೆ ದೈನ್ಯಮಂ ತಹಳಾಶೆ ಆ ಲಜ್ಜೆ ತಾಳಿಗೆಯನೊಣಗಿಸೀ ನುಡಿಯಲೀಯಳೋ ಪೇಳಲೇನುಭಯಸಂಕಟ ಸೀಗೆಯೊಳಗಿರ್ದ ಬಾಳೆಯಾದುದು ಚಿತ್ತ ಪರಿಹರಿಸು ಕೃಷ್ಣಾ 2 ಆಶೆಯಾ ಸವತಿಯಂ ಕೆಡಿಸಬಗೆವಳು ಲಜ್ಜೆ ಆ ಸವತಿಯಂ ಕೆಡಿಸಬಗೆವಳೆಂತೊ ಗಾಸಿಯಾದುದು ಚಿತ್ತವಿಬ್ಬರಿಂ ವೈಕುಂಠ ಕೇಶವಾ ಮನದ ಸಂಸಾರವಂ ಬಿಡಿಸಯ್ಯ 3
--------------
ಬೇಲೂರು ವೈಕುಂಠದಾಸರು
ಪೊರೆಯುವುದೆಮ್ಮನು ನರಹರಿ ನೀನು ಸ್ಮರಿಪೆವು ತವ ಪದಸರಸಿಜಗಳನು ಪ. ತರಳ ಪ್ರಹ್ಲಾದನು ಮೊರೆಯಿಟ್ಟು ತಾನು ಕರೆಯಲಾಕ್ಷಣ ಬಂದೆ ತ್ವರಿತದಿ ನೀನು 1 ದುರುಳ ಹಿರಣ್ಯಕಸುರನನು ಸೀಳಿ ಸುರರನ್ನು ಸಲಹಿದೆ ಕರುಣವ ತಾಳಿ 2 ಮಿತ್ರ ಮಂಡಳಿ ಶತಪತ್ರಕೆ ನೀನು ಮಿತ್ರನಂತೆಸಗು ವಿಮಿತ್ರತೆಯನ್ನು 3 ಕಾರುಣ್ಯಾಮೃತವಾರಿಧೇ ಮೂರ್ತೇ ವರ ಲಕ್ಷುಮಿನಾರಾಯಣ ಸತ್ಕೀರ್ತೇ 4
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಥಮಾಕ್ಷರನೆ ದೇವಾ ಮಹಾನುಭಾವಾ ಪ ಸದ್ಗತಿಗೆ ಕಾರಣ ಸಿದ್ಧ ಮೆನ್ನುತ ಪಥವ ಗೈದು ಪರಂಪರವ ತಾ ಸ್ವತಹನಾಗಿಯು ಪ್ರಜ್ವಲಿಸುತಿಹ 1 ವೇದವೇದಾಂತತಿ ಪರತರ ಪಾದಸೇವೆಯ ಕೊಟ್ಟು ನನಗೆ ನೀ ಬೋಧಿಸೆಂದೆಂತೆನು ಪ್ರಣವಾ 2 ಶಿಕ್ಷೆ ರಕ್ಷೆಗೆ ಅಕ್ಷಗೊಳಿಸಿದ ಮೋಕ್ಷದಾಯಕನೆಂದು ಭಜಿಸಲು ಸೂಕ್ಷ್ಮದ್ವಾರದಿ ಹೊಳೆವ ನಿಜಪದ 3 ವೃಂದ ಮಧ್ಯದೊಳೆಸೆವ ಶುಭಕರ ಚಂದಪಾದವ ತೋರಿ ಕರುಣಿಸೊ ಚಂದ್ರಧರ ಚಾಂಪೇಯವದನನೆ 4 ಅಂಗವಿಲ್ಲದೆ ಪೆಸುಸರುತಾಳಿ ನೀ ಲಿಂಗ ಮುಖವಾಗಿರುವ ಸೊಬಗನೂ ಕಲುಷ ಪ ತಂಗ ವೋಂಕಾರೇಶ್ವರನೇ ವೋಂ 5 ಗುಡಿಯೊಳಿಹ ನಿಷ್ಕಲ ನಿರಂಜನ ಅಡಿಗಳಿಗಡಿಯಾದೆನೀಗಾ 6
--------------
ಚನ್ನಪಟ್ಟಣದ ಅಹೋಬಲದಾಸರು
ಪ್ರಭು ಪಾಂಡುರಂಗ ವಿಠಲ | ಅಭಯಪ್ರದಾತಾ ಪ ಇಭವರದ ನೀನಾಗಿ | ಪೊರೆಯ ಬೇಕಿವನಾ ಅ.ಪ. ಮರ್ಮಗಳ ನರಿಯದಲೆ | ಕರ್ಮೂನುಭವದೊಳಗೆಪೇರ್ಮೆಯಲಿ ಸಿಲ್ಕಿ ಬಲು | ನೊಂದಿಹನೊ ಬಹಳಾಧರ್ಮಕೃದ್ಧರ್ಮಿ ಹರಿ | ಧರ್ಮಸೂಕ್ಷ್ಮವ ತಿಳಿಸಿನಿರ್ಮಮನ ಮಾಡಿವನ | ಕರ್ಮನಾಮಕನೇ 1 ಮಧ್ವರಾಯರ ಕರುಣ | ಬದ್ಧ ನಿರುವನು ಈತಸಿದ್ದಾಂತ ತತ್ವಗಳು | ಬುದ್ದಿಗೇ ನಿಲುಕೀಅದ್ವಯನು ನೀನೆಂಬ | ಶುದ್ಧಬುದ್ಧಿಯನಿತ್ತುಉದ್ಧಾರಮಾಡೊ ಹರಿ | ಕೃದ್ಧಖಳಹಾರೀ 2 ನಾನು ನನ್ನದು ಎಂಬ | ಹೀನಮತಿಯನು ಕಳೆದುನೀನು ನೀನೇ ಎಂಬ | ಸುಜ್ಞಾನವಿತ್ತುದಾನವಾರಣ್ಯ ಕೃ | ಶಾನು ಶ್ರೀ ಹರಿಯೇಸಾನುರಾಗದಿ ಪೊರೆಯೊ | ದೀನವತ್ಸಲ್ಲಾ 3 ಹರಿ ನಾಮ ವೆಂತೆಂಬೊ | ವಜ್ರಕವಚವತೊಡಿಸಿದುರಿತಾಳಿ ಅಟ್ಟುಳಿಯ | ದೂರಗೈ ಹರಿಯೇಸರುವ ಕಾರ್ಯಗಳಲ್ಲಿ | ಹರಿಯು ಓತಪ್ರೋತನಿರುವ ನೆಂಬುದ ತಿಳಿಸಿ | ಪೊರೆಯ ಬೇಕಿವನಾ 4 ಪಾದನಾತ್ಮಕನೆನಸಿ | ಪಾವ ಮಾನಿಯ ಪ್ರೀಯಧೀವರನೆ ಶ್ರೀವರನೆ | ಕಾವ ಕರುಣಾಳುಗೋವುಗಳ ಕಾವ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಪ್ರಸನ್ನ ರಾಮಾಯಣ ಸುಂದರಕಾಂಡ ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ಜಯ ಜಯ ಜಯ ರಾಮ ಸ್ವರತ ಆಹ ಜಯ ಸೀತಾರಮಣ ನೀ ಭಯಬಂಧ ಮೋಚಕ ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ ಶಾಶ್ವತ ಸುಗುಣಾಬ್ಧಿ ರಾಮ ಸವೇಶ್ವರನೆ ಬಲವೀರ್ಯ ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ ಸಾಗರ ಸರ್ವವು ಕಲಕಿ ಓಡಿತು ಕೂಡ 1 ಹಿಂದೆ ಪರ್ವತಗಳ ಪಕ್ಷ ಹನನ ಕಾಲದಿ ವಾಯು ತನ್ನ ಹಿತದಿ ರಕ್ಷಿಸಿದನು ಎಂದು ಆಹ ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2 ಶ್ರಮರಹಿತನು ಎಂದೂ ಹನುಮ ಶ್ರಮ ನಿವಾರಣ ಅನಪೇಕ್ಷ ಆಶ್ಲೇಷಿಸಿ ನಗವರನ ಆಹ ನಿಸ್ಸೀಮ ಪೌರುಷ ಬಲಯುತ ಹನುಮನು ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3 ಪರೀಕ್ಷಿಸೆ ಸುರಸೆಯ ಸುರರು ಪ್ರೇರಿಸಿ ವರವನ್ನು ಕೊಡಲು ಆಹ ಫಣಿಗಳ ತಾಯಿ ಅವಳು ಬಾಯಿ ತೆರೆಯಲು ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4 ಸುರರು ಆನಂದದಿ ಆಗ ಸ್ತುತಿಸಿ ಹನುಮನ ಕೊಂಡಾಡಿ ಸುರಿಯಲು ಪುಷ್ಪದ ಮಳೆಯ ಆಹ ಶೀಘ್ರ ಪವನಜನು ಮುಂದೆ ತಾ ಹೋಗುತ್ತ ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5 ಸರಸಿಜಾಸನ ವರಬಲದಿ ಸಿಂಹಿಕಾ ಲಂಕಾ ಪೋಗುವರ ಸೆಳೆದು ತಾ ನಿಗ್ರಹಿಸುವಳು ಆಹ ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6 ತನ್ನ ನಿಸ್ಸೀಮ ಬಲವನು ತೋರಿಸಿ ಈ ರೀತಿ ಹನುಮ ಧುಮುಕಿದ ಲಂಬ ಪರ್ವತದಿ ಆಹ ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7 ಆಗಿ ಬಿಡಾಲದೊಲ್ ಸಣ್ಣ ಅಸಿತ ಕಾಲದಿ ಪೋಗೆ ಪುರಿಗೆ ಅಲ್ಲಿದ್ದ ಲಂಕಿಣಿ ತಡೆಯೆ ಆಹ ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8 ಶ್ರೀಘ್ರ ಅಶೋಕ ವನದಲಿ ಶಿಂಶುಪಾವೃಕ್ಷ ಮೂಲದಲಿ ಸೀತಾ ಅಕೃತಿಯನು ಕಂಡ ಆಹ ಸೀತೆಗೆ ಏನೇನು ಭೂಷಣ ಉಂಟೋ ಸೀತಾ ಆಕೃತಿಗೂ ಸಹ ಅದರವೊಲಿತ್ತು 9 ಅವನಿಯೋಳು ನಿನ್ನ ವಿಡಂಬ ಅರಿತು ಅನುಸರಿಸಿ ಹನುಮ ಅದರಂತೆ ಪರಿಪಂಥಾವಳಿಗೆ ಆಹ ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ ಚೂಡಾಮಣಿ ನಿನಗೆಂದು ಕೊಟ್ಟಳು 10 ಅರಿಯರು ರಾಕ್ಷಸರಿದನು ಅಮರರು ಕಲಿಮುಖರೆಲ್ಲ ಅವಲೋಕಿಸಿದರು ಈ ಕಾರ್ಯ ಆಹ ಅಮರರು ಲೋಕವಿಡಂಬವಿದೆಂದರಿಯೆ ಅಧಮ ಕಲ್ಯಾದಿಗಳ್ ಮೋಹಿತರಾದರು 11 ಕೃತಕೃತ್ಯವಾಗಿ ತಾ ಹನುಮ ಕೋವಿದೋತ್ತಮ ಬಲವಂತ ಕಾಣಿಸಿಕೊಳ್ಳುವ ಮನದಿ ಕಿಂಚಿತ್ತೂ ಭಯವೇನೂ ಇಲ್ಲದೆ ವನವನು ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12 ಕುಜನ ರಾಕ್ಷಸರನು ಕೊಲ್ಲೆ ಕೂಗಿ ಆರ್ಭಟಮಾಡೆ ಹನುಮ ಕೇಳಿ ಚೇಷ್ಟೆಗಳ ರಾವಣನು ಆಹ ಕಪ್ಪು ಕಂಠನ ವರ ಆಯುಧಯುತರು ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13 ಆರ್ಭಟದಿಂದ ಘೋಷಿಸುತ ಅವರು ಆವರಿಸಿ ಹನುಮನ ಆಯುಧಗಳ ಪ್ರಯೋಗಿಸಲು ಆಹ ಪವನಜ ಮುಷ್ಟಿಪ್ರಹರದಿ ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14 ಕಡುಕೋಪದಿಂದ ರಾವಣನು ಕಳುಹಿದನು ಏಳು ಮಂತ್ರಿ ಕುವರರ ವರ ಬಲಯುತರ ಆಹ ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15 ಅನುಪಮ ಬಲಕಾರ್ಯಕೇಳಿ ಅಧಮ ರಾವಣ ತನ್ನ ಸುತನ ಅಕ್ಷನ ಕಳುಹಲು ಹನುಮ ಆಹ ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16 ಅತಿ ದುಃಖದಿಂದ ರಾವಣನು ಅಕ್ಷನಗ್ರಜ ಇಂದ್ರಜಿತನ ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17 ರಾವಣನಲಿ ಕೊಂಡು ಪೋಗೆ ರಾವಣ ಪ್ರಶ್ನೆಯ ಮಾಡೆ ರಾಮಗೆ ನಮಿಸಿ ಹನುಮನು ಆಹ ರಘುವರ ರಾಮ ದುರಂತ ವಿಕ್ರಮ ಹರಿ ರಾಕ್ಷಸಾಂತಕ ದೂತ ಮಾರುತಿ ತಾನೆಂದ 18 ರಘುವರ ಪ್ರಿಯೆಯನು ಬೇಗ ರಾಮಗರ್ಪಿಸಲೊಲ್ಲೆ ಎನ್ನೆ ಹನುಮ ಪ್ರಕೋಪದಿ ಅವನ ಆಹ ರಾಜ್ಯ ಮಿತ್ರ ಬಂಧು ಸರ್ವನಾಶ ರಾಘವ ಮಾಡುವನೆಂದು ಪೇಳಿದನು 19 ಅಜ ಶಿವ ಮೊದಲಾದ ಸರ್ವ ಅಮರೇಶ್ವರರು ತಾವು ತಡೆಯ ಆಶಕ್ತರು ರಾಮಬಾಣವನು ಆಹ ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ ಅಸಮರ್ಥನೆಂದ ಪ್ರಭಂಜನ ಸುತನು 20 ಪ್ರಭಂಜನ 1 ಸುತ ಮಾತು ಕೇಳಿ ಪ್ರಕುಪಿತನಾಗಿ ರಾವಣನು ಪ್ರಯತ್ನಿಸೆ ಹನುಮನ ಕೊಲ್ಲೆ ಆಹ ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21 ಆತಿಭಾರ ವಸ್ತ್ರ ಕಟ್ಟುಗಳಿಂ ಅಧಮರು ಸುತ್ತಿ ಬಾಲವನು ಅಗ್ನಿಯ ತೀವ್ರದಿ ಹಚ್ಚೆ ಆಹ ಅಗ್ನಿಯ ಪರಸಖ ವಾಯು ಆದುದರಿಂದ ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22 ಅಧಮ ರಾಕ್ಷಸರ ಚೇಷ್ಟೆಗಳ ಅಸಮ ಬಲಾಢ್ಯನು ಹನುಮ ಅನುಭವಿಸಿ ಕುತೂಹಲದಿ ಆಹ ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು ಅತಿ ಮುದದಲಿ ಗರ್ಜಿಸಿದ ರಾಮದೂತ 23 ಅಧಮ ಸಪುತ್ರ ರಾವಣನ ಅಲ್ಪ ತೃಣೋಪಮ ಮಾಡಿ ಅವರೆದುರಿಗೆ ಪುರಿ ಸುಟ್ಟು ಆಹ ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24 ಸಮಸ್ತ ವಾನರ ವರರೊಡನೆ ಸಮರ್ಥ ಹನುಮ ಧೀರ ಬಂದು ಶುಭಸೂಚಕ ಚೂಡಾಮಣಿಯ ಆಹ ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25 ಭಕ್ತಿ ಸವೈರಾಗ್ಯ ಜ್ಞಾನ ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು ಪ್ರಾಣ ಯೋಗ ಬಲ ಇಂಥಾ ಆಹ ತುಂಬಿ ಇರುವುವು ಈ ಪ್ರಭಂಜನ ವಾಯು ಹನುಮನಲಿ ಸರ್ವದಾ 26 ಸರ್ವೇಶ ರಾಮ ಅಗಾಧ ಸದ್ಗುಣಾರ್ಣವ ನೀ ಹನುಮನ ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ನಮ್ಯ ಮಾರುತಿ ಮನೋಗತನೆ ಆಹ ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ನರಸಿಂಹ (ಪ್ರಹ್ಲಾದ ಚರಿತೆ)] ಪ್ರಥಮ ಅಧ್ಯಾಯ - ಹಿರಣ್ಯಕಶಿಪು ಪೂರ್ವ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ತೋಯಸ್ಥ ಪತ್ರಸ್ಥ ತೋಯಜಾಲಯಾ ಸ್ತುತ್ಯ ಅಂಡ ಸ್ರಷ್ಟಾ ಸರ್ವಸ್ಥ ಅಚ್ಯುತಾನಂತ ಗೋವಿಂದ ನೀ ಸಜ್ಜನರ ಭಯ ನಿವಾರಣ ಮಾಳ್ಪಿ ತೋರಿ ಆಗಾಗ 1 ಪ್ರಳಯ ಜಲಚರ ಶೈಲಧರ ಧರೋದ್ಧರ ನಮೋ ಬಾಲಕಗೆ ಒಲಿದು ಬಲಿಯಲಿ ದಾನ ಕೇಳಿ ಖಳ ಕುಪಾಲರ ಸದೆದು ಜಲಧಿಯ ಬಂಧಿಸಿದ ಲಲನೇರ ರಂಜಿತ ಶಿಶು ಶಂಭಳದಿ ತೋರ್ವಿ 2 ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೇ ತಡೆದರು ದ್ವಾರಪಾಲಕರು 3 ಜಯವಿಜಯರೆಂಬ ಆ ದ್ವಾರಪಾಲಕರಿಗೆ0 ಮಾಯೇಶ ಹರಿ ಪ್ರಿಯತರರು ಮುನಿವರರು ಈಯಲು ಶಾಪವ ಆ ವಿಷ್ಣು ಪಾರ್ಶದರು0 ದೈತ್ಯಜನ್ಮವ ಹೊಂದಿದರು ಪತನವಾಗಿ 4 ಸುತಪೋನಿಧಿ ಕಶ್ಯಪ ತೇಜೋಲ್ಬಣದಿಂ ದಿತಿದೇವಿ ಜಠರದಲಿ ವಿಷ್ಣು ಪಾರ್ಶದರು ಪತಿತ ಆ ಜಯ ವಿಜಯರು ಪ್ರವೇಶಿಸಿದರು ದಿತಿ ಹಡೆದಳು ಗಂಡು ಮಕ್ಕಳೀರ್ವರನು 5 ದಿತಿದೇವಿ ಅಗ್ರಸುತ ಹಿರಣ್ಯಕಶಿಪು ಜಯ ದಿತಿ ಅವರಸುತ ವಿಜಯನೇ ಹಿರಣ್ಯಾಕ್ಷ ಉಪಟಳ ಕೊಟ್ಟನು ಈ ಧರೆಯ ಅಬ್ಧಿಯ ಕೆಳಗೆ ಅಡಗಿಸಿದ 6 ಸುರಸುಜನ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಹಿರಣ್ಯಾಕ್ಷನ ಕೊಂದು ಧರೆಯ ಲೀಲೆಯಿಂದ ಮೇಲೆತ್ತಿತಂದಿ ವರಾಹ ಹರಿ ನೀನು 7 ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 -ಇತಿ ಪ್ರಥಮಾಧ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಕಶಿಪು ವರ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಮೂರ್ಜಗದ ದೊರೆ ಹರೇ ನೀ ತನ್ನ ತಮ್ಮನ ಭಂಜಿಸಿದೆ ಎಂದು ಕಡುಕೋಪಗೊಂಡು ದುರ್ಜನ ದಾನವ ವಂದಿತ ಹಿರಣ್ಯಕನು ರಜಸ್ತಮೋಚ್ಛದಿ ದ್ವೇಷ ಮಾಡಿದನು ನಿನ್ನಲ್ಲಿ 1 ಶೂಲದಿಂ ಅಚ್ಯುತನ ಕುತ್ತಿಗೆ ಕತ್ತರಿಸಿ ಗಳರುಧಿರ ತರ್ಪಣ ಕೊಡುವೆ ಎನ್ನುತ್ತ ಖಳ ದೈತ್ಯ ಪ್ರಮುಖರಿಗೆ ಹೇಳಿದನು ವೈಷ್ಣವ ಸ್ಥಳ ದ್ವಿಜ ಗೋ ಭಕ್ತರನ್ನ ತರಿ ಎಂದ 2 ಗರ್ಜಿಸುತ ದೈತ್ಯರು ಪುರ ಗ್ರಾಮ ಆಶ್ರಮ ವ್ರಜಕ್ಷೇತ್ರ ದಹಿಸÀಲು ಹಿರಣ್ಯಕಶಿಪು ಅಜೇಯಾಜರಾಮರತ್ವವ ಅಪ್ರತಿ ಮುಖ್ಯ ರಾಜತ್ವ ಹೊಂದಲು ತಪಸ್ಸು ಮಾಡಿದನು 3 ಊಧ್ರ್ವದಲಿ ಬಾಹುಗಳ ನಭದಲಿ ದೃಷ್ಟಿಯು ಪಾದಾಂಗುಷ್ಟ ಮಾತ್ರದಿ ನಿಂತು ತಪವ ಗೈದನು ಆ ತಪೋಧೂಮಾಗ್ನಿ ಪೀಡಿತ ತ್ರಿದಿವರು ಮೊರೆ ಇಟ್ಟರು ಬ್ರಹ್ಮನಲ್ಲಿ 4 ಪದುಮಭವ ಭೃಗು ದಕ್ಷಾದಿಗಳೊಡೆಯೈದು ದೈತ್ಯೇಶ್ವರ ಹಿರಣ್ಯಕನ ಆಶ್ರಮವ ಭದ್ರಂತೇ ತಪಸಿದ್ಧಿ ಆಯಿತು ವಶೀಕೃತನಾದ ಉತ್ತಿಷ್ಠೋತ್ತಿಷ್ಠ ವರ ಕೊಡುವೆನು ಎಂದ 5 ಬ್ರಹ್ಮನ್ನ ನೋಡಿ ಹಿರಣ್ಯಕನು ಸನ್ನಮಿಸಿ - ಬ್ರಹಾಂತರ್ಗತ ಹರಿ ವಿವಕ್ಷಿತ ಗುಣಗಳ ಬ್ರಹ್ಮ ಹರುಷದಿಂದಲಿ ಸಮ್ಯಕ್ ಕೀರ್ತನೆ ಮಾಡಿ ಆ ಹಂಸವಾಹನನ ವರಗಳ ಬೇಡಿದನು 6 ಸರೋರುಹಾಸನ ಸೃಷ್ಟ ಸರ್ವಭೂತಂಗಳು ಮೃಗ ಪ್ರಾಣ ಉಳ್ಳವು ಇಲ್ಲದವು ಹೊರ ಒಳಗೆ ಭೂಮ್ಯಾಂಬರ ದಿವಾ ರಾತ್ರಿಯು ಸುರಾಸುರ ಮೃತ್ಯು ಮಾ ಭೂನ್ಮ್‍ಮ ಎಂದ 7 ಏಕಪಥ್ಯವು ಅಪ್ರತಿ ಶಕ್ತಿಮತ್ಯವವು ಲೋಕಪಾಲಕರಂತೆ ಬಲವು ಮಹಿಮೆಗಳು ಯೋಗಿ ತಪಸ್ವಿಗಳಂತೆ ಸಿದ್ಧಿಗಳು ಸರ್ವವು ಬೇಕು ತನಗೆಂದು ವರ ಬೇಡಿದ ಬ್ರಹ್ಮನ್ನ 8 ಶತಧೃತಿಯು ಈ ದುರ್ಲಭ ವರಗಳನ್ನಿತ್ತು ತಾ ತೆರಳಿದನು ದೈತ್ಯನಿಂ ಪೂಜೆಗೊಂಡು ಭ್ರಾತೃವಧ ಅನುಸ್ಮರಿಸಿ ಹರಿದ್ವೇಷ ಬೆಳಸಿದನು ಲಬ್ಧವರ ದೈತ್ಯೇಶ ಇನ್ನೂ ಹೆಚ್ಚಾಗಿ 9 ನರಸುರಾಸುರ ಋಷಿ ಗರುಡೋರಗ ಸಿದ್ಧ ಚಾರಣ ವಿದ್ಯಾಧರ ಯಕ್ಷ ಗಂಧರ್ವ ಪಿತೃ ಪ್ರೇತ ಭೂತಪತಿ ರಾಕ್ಷಸ ಪಿಶಾಚೇಶ ಸರ್ವರನು ಜೈಸಿ ತನ್ನವಶ ಮಾಡಿಕೊಂಡ 10 ಮೂರ್ಲೋಕಂಗಳಲ್ಲಿ ದಶದಿಕ್ಕುಗಳಲ್ಲಿ ಈ ಹಿರಣ್ಯಕಶಿಪು ತನ್ನ ಜಯಭೇರಿ ಹೊಡೆದ ಸರ್ವಲೋಕಪಾಲರ ತೇಜಃಸ್ಥಾನಗಳ ಅಪ - ಹರಿಸಿ ತ್ರಿವಿಷ್ಟಪ ಭೋಗದಲಿ ಮನಸ್ಸಿಟ್ಟ 11 ಅಜಿತೇಂದ್ರಿಯ ಹೇಯ ಭೋಗರತ ಅಹಂಕಾರಿ ಮೂರ್ಜಗಾರಿಯು ಧರ್ಮ ಆಚಾರ ದ್ವೇಷಿ ನಿರ್ಜರರು ಅವನಿಂದ ಹಿಂಸೆ ತಾಳದೆ ವಿಷ್ಣೋ ತ್ರಿಜಗದೀಶನೇ ಮೊರೆ ಹೊಕ್ಕರು ನಿನ್ನಲ್ಲಿ 12 ಅಚ್ಯುತ ಈಶ್ವರ ನಿನ್ನ ಭದ್ರವಾಣಿ ಅಭಯ ಹೊಂದಿ ಸುರವರರು ನಿರೀಕ್ಷಿಸಿದರು ಪ್ರಶಾಂತ ಮಹಾತ್ಮಾ ನಿರ್ವೈರ ಪ್ರಹ್ಲಾದ ಹುಟ್ಟುವ ಕಾಲವನು 13 ಜಯತು ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 13 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ - ತೃತೀಯ ಅಧ್ಯಾಯ - ಬಾಲಕ ಪ್ರಹ್ಲಾದ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಯುಕ್ತ ಕಾಲದಿ ಹೇಮಕಶಿಪುಗೆ ಐದು ಮಕ್ಕಳು ಹುಟ್ಟಿದರು ನಾಲ್ವರು ಗಂಡು ಮಕ್ಕಳು ನಾಲ್ವರಲ್ಲಿ ಪ್ರವರ ಪ್ರಹ್ಲಾದನು ಅಕಳಂಕ ಗುಣಶ್ರೇಷ್ಠ ಮಹದುಪಾಸಕನು 1 ಸತ್ಯಸಂಧನು ಶೀಲಸಂಪನ್ನ ಬ್ರಹ್ಮಣ್ಯ ಜಿತೇಂದ್ರಿಯ ಸಮದರ್ಶಿ ಆರ್ಯರ ವಿಧೇಯ ಸ್ನಿಗ್ಧರಿಗೆ ಭ್ರಾತೃವತ್ ಯಥಾದೇವೋ ತಥಾಗುರೋ ಭೂತಪ್ರಿಯ ಸುಹೃತ್ತಮ ದೀನವತ್ಸಲನು 2 ವಿಧ್ಯಾರ್ಥಿ ರೂಪಾದಿಗಳ ಗರ್ವ ಇವಗಿಲ್ಲ ಶ್ರುತ ದೃಷ್ಟ ವಿಷಯದಲಿ ಗುಣಗ್ರಾಹಿಯು ಶಾಂತನು ದಾಂತನು ಸಾಧುಗಳಲಿ ಪ್ರಿಯ ಸದಾ ಸ್ವಭಾವದಿ ಶ್ರೀ ವಿಷ್ಣುಭಕ್ತಿ 3 ವಾಸುದೇವ ನಿನ್ನಲ್ಲೇ ಸರ್ವದಾ ಮನವನು ನೆಲಸಿ ಈ ಬಾಲ ಸರ್ವ ನಡೆನುಡಿ ಊಟ ಶಯನ ಪರ್ಯಟನ ಸರ್ವಾವಸ್ಥೆಯಲೂ ನಿನ್ನ ಸ್ಮರಿಸುವನು 4 ಅಂಬುಜೋದ್ಭವ ತ್ರ್ಯಿಂಬಕ ಮುಖ್ಯವಿನುತ ನಿನ್ನ ಅಂಬುಜಾಂಘ್ರಿಗಳನ್ನ ಧ್ಯಾನಿಪ ಈ ಬಾಲಕನ ಅಂಬಕದಿ ಸುಜ್ಞಾನ ಭಕ್ತಿ ಪುಳಕಾಂಬುವು ತುಂಬಿ ತುಳುಕಾಡುವುದು ಕಂಡಿಹರು ಅಂದು 5 ಒಮ್ಮೆ ನಗುವನು ಒಮ್ಮೆ ರೋದಿಸುವನು ಒಮ್ಮೆ ಸುಮ್ಮನಿರುವ ಹರಿ ಪ್ರೇಮಾನಂದದಲಿ ಅಮ್ಮಮ್ಮ ಭಕ್ತಿಯಲಿ ಕೂಗಿ ಕುಣಿವನು ಮಹಾನ್ ರಮೆಯರಸ ನಿನ್ನ ದಾಸಾಗ್ರಣಿಯು ಪ್ರಹ್ಲಾದ 6 ಮಹಾತ್ಮನು ಮಹಾಭಾಗ ಮಹಾಭಾಗವತನು ಮಹಾಕಾರುಣಿಕ ಪ್ರಹ್ಲಾದಗೆರಗುವೆನು ಅಹರ್ನಿಶಿ ಧೃತಿಸ್ಥ ಹರಿ ನಿನ್ನಲ್ಲಿ ಭಕ್ತಿ ಇಹಪರದಿ ಸೌಭಾಗ್ಯ ಎಮಗೀಯಲೆಂದು 7 ಜಯ ಗುಣಾರ್ಣವ ಭೂಮನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 - ಇತಿ ತೃತಿಯಾ ಅಧ್ಯಾಯ ಸಂಪೂರ್ಣಂ - ಚತುರ್ಥ ಅಧ್ಯಾಯ ಪ್ರಹ್ಲಾದರ ವಿಧ್ಯಾಭ್ಯಾಸ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ದೈತ್ಯರಾಜನು ಪ್ರಿಯಪುತ್ರ ಪ್ರಹ್ಲಾದನಿಗೆ ವಿದ್ಯೆಕಲಿಸಲು ಶಂಡಾಮರ್ಕರು ಎಂಬ ಬೋಧಕರ ಏರ್ಪಾಡು ಮಾಡಿಸಲು ಆ ಮಹಾನ್ ಇತರ ಬಾಲಕರೊಡೆ ಕೂಡಿ ಓದಿದನು 1 ವಿದ್ಯೆ ಕಲಿಯುವಾಗ ಇತರ ಬಾಲರ ಮೀರಿ ಪ್ರತಿಭೆ ತೋರಿಸಿದನು ಬಾಲಪ್ರಹ್ಲಾದ ಕೇಳ್ದ ಕಲಿತದೆÀ್ದಲ್ಲಿ ಸಾಧು ಹೇಳೆಂದು 2 ಸಂಸಾರಿ ಜೀವರುಗಳು ಸದಾ ಐಹಿಕ ನಿಸ್ಸಾರ ವಿಷಯಂಗಳಲ್ಲಿ ಮುಳುಗಿ ತಮಃಸಿಲಿ ಬೀಳದಿರೆ ಸಾಧು ಜನಸಂಗ ಶ್ರೀಶ ಹರಿ ಸರ್ವವಂದ್ಯನ ಆಶ್ರಯಿಪುದು 3 ಹೀಗೆ ಪ್ರಹ್ಲಾದ ಪೇಳಲು ಹಿರಣ್ಯಕ ಕೇಳಿ ಪರ ಬೋಧಿತನಾಗಿಹನೆಂದು ನೆನೆದು ಶುಕ್ರ ಸುತರು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಕ್ಕ ವಿಧದಲಿ ಬುದ್ಧಿ ತಿದ್ದಿಸುವುದು ಎಂದ 4 ಗುರುಗಳು ಮನೆಯಲ್ಲಿ ಒಳ್ಳೆಮಾತಿಂದಲಿ ಪರಕೃತವೋ ಸ್ವತಃ ಕೃತವೋ ಈ ಹರಿಪಕ್ಷಬುದ್ದಿ ಅನೃತವಾಡದೆ ಸತ್ಯ ಪೇಳೆಂದು ಕೇಳಿದರು ಭಾಗವತ ಪ್ರಹ್ಲಾದ ಬಾಲನ್ನ 5 ಸತ್ತಾ ಪ್ರವೃತ್ತಿ ಪ್ರತೀತ್ಯಾದಿಪ್ರದ ಸರ್ವ - ಚಕ್ರಧರ ವಿಷ್ಣು ವಿಧಿ ಶಿವಾದೀಡ್ಯನಲಿ ರತತಾನು ಕಾಂತವು ಅಯಸ್ಸನ್ನು ಸೆಳೆವಂತೆ ಎಂದು 6
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಾಣ ನರಹರಿವಿಠಲ | ಪಾಲಿಸೋ ಇವನಾ ಪ ಕಾಣೆನೋ ನಿನ್ಹೊರತು | ಅನ್ಯರನು ಹರಿಯೇ ಅ.ಪ. ಮಧ್ವಮತದೀಕ್ಷೆಯಲಿ | ಶ್ರದ್ಧೆಯುಳ್ಳವನಿವನುಬುದ್ಧಿ ಪೂರ್ವಕ ಶಾಸ್ತ್ರ | ದಧ್ಯಯನದಾಶೇ |ವೃದ್ಧಿಗೈಸುತ ಅದಕೆ | ಅದ್ವಾನ ವೆಸಗುತಲಿಹದ್ದುವಹ ಪೊರೆ ಇವನ | ಮಧ್ವಾಂತರಾತ್ಮ 1 ವೇದಾಂತ ವೇದ್ಯಹರಿ | ಪಾದಭಜನೆಯ ನಿತ್ತುಮೋದಮುನಿ ಸನ್ಮತವ | ಭೋದ ಚಾತುರ್ಯಆದರಿಸಿ ಇವಗಿತ್ತು | ಸಾಧನವಗೈಸೊ ಹರಿಬಾದರಾಯಣ ದೇವ | ಪ್ರಾರ್ಥಿಸುವೆ ನಿನ್ನಾ 2 ಸರ್ವಜ್ಞ ಸರ್ವೇಶ | ಸ್ವಾತಂತ್ರ ಪುರುಷನೆಸರ್ವಾಂತರಾತ್ಮಕನೆ | ನಿರ್ವಿಕಾರಾಖ್ಯಾಅದ್ವೆತತ್ರಯದಲ್ಲಿ | ಸರ್ವ ಸಾದನವಿರುವಸದ್ವಾರ್ತೆ ತಿಳಿಸಿವಗೆ | ಶರ್ವ ಸುರವಂದ್ಯಾ 3 ಧ್ಯಾನೊ ಪಾಸನೆ ತಿಳಿಸಿ | ಮೌನಿಗಳ ಸನ್ಮಾರ್ಗಜ್ಞಾನಿಯೆಂದೆನಿಸಿವನ | ಹೇ ನಾರಸಿಂಹ |ಮಾನಾಭಿ ಮಾನಗಳ | ನಾನಾಸುದ್ವಂದ್ವಗಳಶ್ರೀನಿವಾಸನೆ ತಾಳ್ವ | ಮನಧೈರ್ಯವೀಯೋ 4 ಗುರ್ವಂತರಾತ್ಮಗುರು | ಗೋವಿಂದ ವಿಠಲನೆದರ್ವಿಜೀವಿಯ ಹೃದಯ | ಗಹ್ವರದಿ ನಿನ್ನಾ |ಚೆಲ್ವರೂಪವ ಕಂಡು | ಭವವನುತ್ತರಿಪಂಥಹವಣೆ ಒದಗಿಸೊ ಎಂದು | ಪ್ರಾರ್ಥಿಸುವೆ ದೇವಾ 5
--------------
ಗುರುಗೋವಿಂದವಿಠಲರು
ಪ್ರಾಣಸನ್ನುತ ನರಸಿಂಹ | ವಿಠಲ ಪೊರೆ ಇವಳಾ ಪ ಕಾಣೆನಾನನ್ಯರನು | ಕಾರುಣ್ಯ ಮೂರ್ತೇ ಅ.ಪ. ವಾಸುದೇವ ಹರೀ |ಕೇಶವನೆ ಪೂಜಿಸೀ | ವೇಷದಲಿ ಸೂಚ್ಯ ಪರಿಆಶಿಷವನಿತ್ತು ಉಪ | ದೇಶ ಮಾಡಿಹೆನೋ 1 ಕಾಮಾರಿ ಸಖಕೃಷ್ಣ | ಕಾಮಿತವನೇ ಇತ್ತುಭಾಮಿನಿಯ ಸಲಹೆಂದು | ನೇಮದಲಿ ಬೇಡ್ವೇಶ್ರೀ ಮನೋಹರ ಹರಿಯೆ | ದುರಿತಾಳಿ ಪರಿಹರಿಸಿನಾಮಸ್ಮøತಿ ಸುಖ ಕೊಟ್ಟು | ಭವವನುತ್ತರಿಸೋ 2 ಪಾದ ಮಾನಿಯ ಪ್ರೀಯಪಾವನ್ನ ತವನಾಮ | ನಾಲಿಗ್ಯೆ ಒದಗೀಜೀವನದಿ ಸಂತೋಷ | ಒದಗಲೀ ಎನುತ ಹರಿದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಪ್ರಿಯ ಹಯಾಸ್ಯವಿಠಲ | ದಯದಿ ಪೊರೆ ಇವನಾ ಪ ನಯವಿನಯದಿಂ ಬೇಡ್ವ | ದಾಸತ್ವ ದೀಕ್ಷಾ ಅ.ಪ. ದಾಸರಾಯರ ಕರುಣ | ಪಾತ್ರ ನಿರುವನು ಈತಸೂಸಿದತಿಭಕುತಿಯಿಂ | ಸೇವೆಯನು ಗೈವಾ |ಏಸೊ ಜನ್ಮದ ಪುಣ್ಯ | ರಾಶಿ ಬಂದೊದಗುತಲಿಆಶಿಸುತ್ತಿರುವನೂ | ದಾಸದೀಕ್ಷೆಯನು 1 ಅಂಕಿತವ ನಿತ್ತಿಹೆನೊ | ಪಂಕಜಸನ ವಂದ್ಯಶಂಕೆಯಿಲ್ಲದೆ ಸ್ವಪ್ನ | ಸೂಚ್ಯದಂತೇವೆಂಕಟೇಶನೆ ಇವನಾ | ಮಂಕುಮತಿಯನೆ ಕಳೆದುಬಿಂಕದಿಂ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 2 ಶ್ರದ್ಧೆಯಿಂದಲಿ ಇವನು | ಮಧ್ವಮತ ದೀಕ್ಷೆಯಲಿಬದ್ಧವಾಗಲಿ ಹರಿಯೆ | ಸಿದ್ದ ಮುನಿವಂದ್ಯಾಶುದ್ದ ತತ್ವಗಳೆಲ್ಲ | ಬುದ್ದಿಗೇ ನಿಲುಕಿಸುತಶುದ್ದೋದ ನೀನು ತವ | ಪ್ರಧ್ವಂಸಗೊಳಿಸೊ 3 ಹರಿಯರಲಿ ಸದ್ಭಕ್ತಿ | ಕರುಣಿಸುತ ತೋಕನಿಗೆ ಪರಿಪರಿಯಲಿಂ ಕೀರ್ತಿ | ಸಂಪನ್ನನೆನಿಸೋಮರುತಂತರಾತ್ಮ ಹರಿ | ದುರಿತಾಳಿ ಪರಿಹರಿಸಿಕರುಣದಿಂ ಕೈಪಿಡಿದು | ಉದ್ದರಿಸೊ ಹರಿಯೇ 4 ಕೈವಲ್ಯದರಸಾಗಿ | ಭಾವಮೈದುನಗೊಲಿದುಬೋವ ಬಂಡಿಗೆ ಆದೆ | ಶ್ರೀವರನೆ ಹರಿಯೇಗೋವತ್ಸದನಿ ಕೇಳಿ | ಆವು ಧಾವಿಸುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ಪ ವೈಕುಂಠದ ಸೊಂಪಿನ ದಾಸರ ಮನೆಯ ಅ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ 1 ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು 2 ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು 3 ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ ಪಂಜಿನ ದಾಸನಾಗಿರುವೆ 4 ಮೀಸಲೂಳಿಗವ ನಾ ಮಾಡಿಕೊಂಡಿರುವೆಶೇಷ ಪ್ರಸಾದವ ಉಂಡುಕೊಂಡಿರುವೆಶೇಷಗಿರಿ ಕಾಗಿನೆಲೆಯಾದಿಕೇಶವನದಾಸರ ದಾಸರ ದಾಸರ ಮನೆಯ 5
--------------
ಕನಕದಾಸ
ಬಟ್ಟ ಮುತ್ತಿನ ಸರವ ಕೊರಳೊಳಿಟ್ಟು ನೋಡುತಪುಟ್ಟ ಪುಟ್ಟ ಪಾದದಿಂದ ದಟ್ಟಡಿಯನಿಕ್ಕುತಅಟ್ಟಟ್ಟು ಕರೆದರೆ ಬಾರದೆ ಅಂಬೆಗಾಲನಿಕ್ಕಿ ಕೊಡವುತತಿಗೂಳುಗುಳೆಂದು ಮುಟ್ಟಿ ನಲಿದಾಡುತ ತಟ್ಟೆಗೆ ಮುಚ್ಚಿಗೆಯೆಂದುತಟ್ಟನೆ ಕೈಯನಿಡುತ ಪುಟ್ಟಮಕ್ಕಳೊಡನೆ ಚಂಡಾಡಿನಲಿದಾಡುವ ದಿಟ್ಟರಂಗಯ್ಯ 1 ರನ್ನ ದುಂಗುರ ಪದಕ ತಾಳಿಯನ್ನು ಹಾಕುವೆಸಣ್ಣ ಮಕ್ಕಳ ಕೂಡೆಲ್ಲಾ ಚಿನ್ನಿಕೋಲನಾಡುತಕನ್ನೆವೆಣ್ಣುಗಳ ಕಂಡು ಕಣ್ಣ ಸನ್ನೆ ಮಾಡುತಕಣ್ಣಮುಚ್ಚಾಲೆ ಆಟವ ಆಡಿ ನಲಿದಾಡುತ ತಾಹೊನ್ನ ಹಿಡಿ ಹೊನ್ನಾಟವನಾಡುತ ಶ್ರೀರಂಗಧಾಮ ಪನ್ನಗಶಯನ 2 ಕಾಲಿನಂದುಗೆ ಘಲಿರೆನೆ ನಳಿತೋಳನಾಡುತಬಾಲೆಯರ ಕೂಡೆ ಬಹು ಲೀಲೆಯ ಮಾತಾಡುತಶಾಲೆಗಳ ಸೆಳದು ಮರದ ಮೇಲೆ ಕುಳಿತು ನೋಡುತಹಾಲು ಬೆಣ್ಣೆ ಕಳ್ಳನೆಂಬ ದೂರುಗಳ ಕೇಳುತಲೋಲಾಕ್ಷಿಯರೊಳನಿಂಥಾ ಜಾಲಿಗಳ ಮಾಡುವ ಬಾಲಗೋಪಾಲ3 ಕಂಡು ನಿನ್ನನು ಪ್ರೇಮದೊಳಪ್ಪಿಕೊಂಡು ನೋಡುವೆಹಿಂಡು ಬೊಗರಿಲಿತ್ತಲಿಗ್ಗೆ ಚಂಡ ಕೊಡುವೆ ಬಾರಯ್ಯಭಂಡಿಯನೊದದ ಪಾದಪದುಮವನ್ನೇ ತಾರಯ್ಯಗುಂಡುವಾನಿಟ್ಟ ನಳಿ ತೋಳನೊಮ್ಮೆ ತೋರಯ್ಯಪುಂಡಲೀಕಾಕ್ಷಿಯರು ನಿನ್ನ ಕಂಡರೆ ಸೇರರೂ ಕೃಷ್ಣ4 ಕರದ ಕಂಕಣ ಝಣರೆನಲು ಮುಂಗುರಳ ತಿದ್ದುತಕರದ ಕಂಬಾಲಿನೆಲ್ಲವ ಸುರಿದು ಸೂರೆ ಮಾಡುತತರುಣಿಯರು ನೋಡಲವರ ಪುರುಷರಂತೆ ತೋರುತಸರಸವಾಕಿನಿಂದಲವರ ಮರುಳು ಮಾಡಿ ಕರವುತಸರಿಯ ಮಕ್ಕಳೊಡನೆ ಜೊಲ್ಲು ಸುರಿಸುತ ಮಾತಾಡುವಂಥಾ ಸರಸಗೋಪಾಲ 5 ಮರುಗ ಮಲ್ಲಿಗೆ ಸಂಪಗೆಯ ಪೂಸರವ ಮುಡಿಸುವೆಕೊರಳ ಮುತ್ತಿನ ಸರವ ನಿನಗೆ ಕರದು ಕೊಡುವೆಬಾರಯ್ಯ ಅರಳೆಲೆ ಮಾಗಾಯನಿಟ್ಟ ಸಿರಿಮುಖವತೋರಯ್ಯ ಪರನಾರಿಯರೊಡನಿಂಪಾಸರ ಛಂದವೇನಯ್ಯಪುರದ ನಾರಿಯರ ಕೂಡೆ ಸರಸವನಾಡು ಉಡುಪಿಪುರದ ಶ್ರೀಕೃಷ್ಣ 6 ಅಂದುಗೆ
--------------
ಕೆಳದಿ ವೆಂಕಣ್ಣ ಕವಿ
ಬಟ್ಟೆ ಪ ಕೆಟ್ಟವನೆಂಬಪಕೀರ್ತಿಯ ಪಡಿಯುವ ಅ.ಪ ಒಂದು ಹೊತ್ತಿಲ್ಲದಿರುಲು ತಾಳಲಾರೆ | ನಿನಗಾಗಿ ನೀಚ- ವೃಂದವÀ ಯಾಚಿಸಿ ನಾ ಬಳಲಲಾರೆ ತಂದೆ ತಾಯಿಗಳನ್ನಾದರೂ ವಂಚಿಸಿ ಮುಂದಾಗುವ ಕೇಡರಿಯದಿರುವ ಹಾಳು 1 ಹೆಚ್ಚು ಕೊಟ್ಟರು ಒಲ್ಲೆಯೆಂಬೆ | ಕಡಿಮೆಯಾದರೂ ಬಾಯಿ ತುಚ್ಛರ ಸೇವಿಸಿ ಅನ್ಯಾರ್ಜಿಸಿ ಹುಚ್ಚು ಹಿಡಿಸುವೆಯೇನೊ ನೀ ಕೊನೆಗೆ 2 ನಿನಗಾಗೀ ಸಕಲ ವಿದ್ಯಗಳರಿತು | ಸಭೆಯೊಳು ವಾದಿಸಿ ಮನಸು ಚಪಲ ಮಾಡಿ ತಹ ತಹ ಪಡಿಸುವ 3 ವ್ಯವಸಾಯಯೋಗ್ಯ ವ್ಯಾಪಾರಗಳು | ಯಾಚನೆಕಷ್ಟ ಭಾರವಾಹತ್ವ ಮೊದಲು ದಿವಸ ದಿವಸ ಮಾಡುತ ನಿನ್ನೊಲಿಸಲು ಜವನಾಳ್ಗಳ ಕೈಗೊಪ್ಪಿಸಿಸುವೆ ಕಡೆಗೆ 4 ಜ್ಞಾನ ನಿಷ್ಕಾಮ ಕರ್ಮದಾನ | ಸಂಧ್ಯಾಜಪತಪ ಸ್ನಾನಾನುಷ್ಠಾನ ಸತ್ಸಾಧನಾ ಏನು ನಡೆಯಲೀಸದೆ ದಿನದಿನದಲಿ ನಾನು ನನಗೆ ಎನ್ನಿಸಿ ಬಾಯಿಬಿಡಿಸುವ 5 ಮುಷ್ಕರದಿಂದ ನಿನ್ನ ನೋಯಿಸಲು | ಕರಗಿಯೆಲ್ಲ ನಿಷ್ಕಾರಣವಲ್ಲವು ನೀ ಜಗದೊಳು 6 ಕೊಟ್ಟಷ್ಟರಲ್ಲೆ ತೃಪ್ತಿಯ ಹೊಂದು | ಸಾಲದಿರಲು ಸಿಟ್ಟೇಕೆನ್ನೊಳು ದಯಮಾಡಿಂದು ಮುಟ್ಟಿ ಭಜಿಸೆ ಸಂತುಷ್ಟಿಯ ಪಡೆವೆ 7
--------------
ಗುರುರಾಮವಿಠಲ
ಬಡನಡುವು ಬಾಲೆಯರ ಕೂಡಿ | ಪಾ | ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ 1 ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ | ಹನ್ಮಾಲೆ ಪದಕ ನ್ಯಾವಳ ಸರಿಗೆಸರ ಮುತ್ತು | ವಾಲೆ ಪೊಂಪುಷ್ಟ ಬುಗುಡಿ ಥೋ | ರನ್ಮುತ್ತು ನಾಸಾಮಣಿ | ಅರರೆ | ಮನ್ಮನೋಹರವಾದ ಕಡಕ ಕಂಕಣ ಮುದ್ರೆ | ಸನ್ಮೋಹನಾಂಗಿಯರು ಸರ್ವಾಭರಣವಿಟ್ಟು | ಮನ್ಮಥನ ಹಿಡಿದೇಜಿ ಕುಣಿವಂತೆ ಮುಂದೊರಿದು | ಕಣ್ಣಂಚಿನಿಂದ ಜಗವೆಲ್ಲ ಬೆಳಗುತಲಿ 2 ಕರ್ಪುರದ ವೀಳ್ಯೆಯವ ಮೆಲುತ ನಾನಾ ಬಗೆ | ಅಗರು ಶಿರಿಗಂಧ | ಸಾರ್ಪರಿಮಳ ಸಕಲ ದ್ರವ್ಯದಿಂದೋಕುಳಿಯ | ಮಾರ್ಪೆಸರು ಬಾರದಂತೆ | ಅರೆರೆ | ಕರ್ಪಾಣಿಯೊಳಗೆ ದ್ವೀಪಾಂತರದ ತರ ನಿಲುವ | ದರ್ಪಣವ ಪಿಡಿದು ಸರ್ವಾಂಗ ನೋಡಿಕೊಳುತ | ದರ್ಪ ತಗ್ಗಿಸದಲೆ | ಪೊನ್ನುಡೆಗಳ ತುಡುಕಿ ಕಂ | ದರ್ಪನಪ್ಪನ ಮೇಲೆ ಗುಪ್ಪಿರರು ಮುದದೀ 3 ಮೇಲ್ಮೇಲು ಸೊಗಸು ಚನ್ನಿಗರಾಯನಿಲ್ಲ ನಿಲೂ ನೀಲ್ಮೇಘ ವರ್ಣಾನೆ | ಕಾಲ್ದೆಗೆದು ನಮ್ಮಮ್ಮ | ತೋಳ್ಮದವ ತೀರಿಸದೆ ಪೋಗದಿರು ಭಡಭಡಾ | ಕರವ ತೆಕ್ಕೊ | ಅರೆರೆ | ತಾಳ್ಮದತಿಗತಿಯಂತೆ ಹೆಜ್ಜೆಯ ನಿಡುತ | ಸತಿ | ಜಾಲ್ಮೊಗದು ವಾರಿಧಿಯ ಥೆರೆಯಂತೆ ಮೂದಲಿಸಿ | ಆಳ್ಮಾತಿಲಿಂದ ಹೈ ಎನುತ ಚಲ್ಲಿದರೂ4 ಪೆಣ್ಗಳಿರಾ ನಿಮಗೇಕೆ ಪ್ರಬಲತನವೆಂದೆನುತ | ಅಣ್ಗದಾ ಗೋವಳರ ನಡುವೆ ವಪ್ರ್ಪಿರ್ದಸು | ವಣ್ಮಾತ್ರ ಪರಮಾತ್ಮನೀಕ್ಷಿಸಿದ ಅವರವರ | ಕಣ್ಗೊರಳ ಕುಚ ತೊಡೆಗಳ | ಅರೆರೆ | ಹೃತ್ತಾಪ ಹರಿಸುವ | ಸಿರಿ | ಸರ್ರನೆ ಓಕಳಿ ಚಲ್ಲೆ | ಸಣ್ಗೊಲ್ಲತಿಯರು ಬೆರಗಾಗಿ ಮರಳೆÀ ಹರಿಯ | ಬೆಣ್ಗಳ್ಳನೆಂದು ಮುತ್ತಿದರು ಹಾಸ್ಯದಲಿ 6 ತೋರ್ಕೈಯ ಬಚ್ಚಿಡದೆ ಪಳ್ಳಿಗನೆ ಠಕ್ಕಿಸದೆ | ಮಾರ್ಕರೆದುಕೋ ನಿನ್ನ ಗೆಳೆಯರನ ಒಂದಾಗಿ | ಸೂರ್ಕುದೇಗಂತೆ ಸರ್ವೋದ್ಧಾರಗರದ ವೈ | ಜೀರ್ಕೋಳಲಿ ತೆರವಿಲ್ಲದೆ | ಅರೆರೆ | ಅರ್ಕನರ್ಕಕೆ ವಾರಿ ಇಂಗಿ ಪೋಗುವಂತೆ | ನರ್ಕಾಂತಕನ ಕಾಯದೊಳಗೆ ಓಕುಳಿಯಡಗೆ | ಅರ್ಕಾದ್ರಿಯಂತೆ ಶಿರಿ ಕೃಷ್ಣರಾಜಿಸುತಿರೆ | ತರ್ಕೈಪ ಭರದಿಂದ ನಾರಿಯರು ಇರಲು 7 ಹಸ್ತ ಲಾಘವ ನೋಡಿ ತಲೆದೂಗಿ ನಕ್ಕು ಸ | ಮಸ್ತ ನಾರಿಯರಿಟ್ಟು ಉಟ್ಟ ಮಂಗಳವಸನ | ವಸ್ತುಗಳು ಜಿಗಳುವಂತೆ ಓಕುಳಿಯಿಂದ | ವಿಸ್ತಾರವಾಗಿ ಉಗ್ಗೆ | ಅರೆರೆ | ಕಸ್ತೂರಿಮೃಗದಂತೆ ಸುಳಿಸುಳಿಯ ನಿಂದಿರ್ದ| ಹಸ್ತಿಗಮನಿಯರೊಡನೆ ಕ್ರೀಡೆಯನು ಪರಾತ್ಪÀರ | ವಸ್ತು ಲಕುಮಿಯ ರಮಣ ಆಡುತಿರೆ ನಾಲ್ಕೈದು | ಮಸ್ತಕಾದ್ಯರು ವಿಸ್ತರಿಸಲರಿದೆನಲು 8 ಸುಕ್ಕದೆ ಕುಚಗುಳುಬ್ಬಿ ಕಕ್ಕಸವಾಗೆ ಹೆಜ್ಜೆ | ಇಕ್ಕಲಾರದೆ ವಿರಹತಾಪದಿಂದೀಕ್ಷಿಸುತ | ವಖ್ಖಣಿಸುವ ಮಾತು ಹಿಂದಾಗುತಿರೆ ಕಲೆಗ | ಳುಕ್ಕೇರಿ ಬೆವರುತಿರಲು | ಅರೆರೆ | ಅಕ್ಕಕ್ಕೊ ಎಂದು ಅಕ್ಕೋಜಗೆಗೊಳ್ಳುತ್ತ ತಾ | ರಕ್ಕಿಯಂತೆ ಕೃಷ್ಣ ಸುತ್ತ ವಲ್ದರು | ಸಕ್ಕರೆದುಟಿ ಚಲುವ ಉಡುಪನಂತೆ ವಪ್ಪೆ | ದಕ್ಕಿವನಂತೆ ಸಂತರಿಸುತಲಿ ಇಂದೂ 9 ಬೆರ್ದೋಕಳಿಯನಾಡಿ ಸರಿ ಮಿಗಿಲು ಎನಿಸಿ ಕೆಲ | ಸಾರ್ದಿರ್ದ ನಾರಿಯರ ಶಿರವ ತಡವರಿಸಿ ಶತ | ಸಾರ್ದವೆಲೆ ಉಳ್ಳ ಉಡುಗೊರೆನಿತ್ತು ಮನ್ನಿಸಿ | ಮೀರ್ದಾಭರಣವ ತೊಡಿಸಿ | ಅರೆರೆ | ಸಾರ್ದೆಗೆದು ತರ್ಕೈಸಿ ಪ್ರೀತಿಯಿಂ ಬಡಿಸಿ ಮುರ ಮರ್ದನ ವಿಜಯವಿಠ್ಠಲ ಮೆರೆದ ಗೋಕುಲ ದೊರೆ | ಸುಜನ ಜನಸಂಗಾ 10
--------------
ವಿಜಯದಾಸ