ಒಟ್ಟು 2499 ಕಡೆಗಳಲ್ಲಿ , 99 ದಾಸರು , 1487 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ದೇವ ಜಯ ದೇವ ಜಯ ಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ಧ್ರುವ ಖಡ್ಗವ ಕರದಲಿ ಪಿಡಿದು ಖಂಡಿಸಿದಙÁ್ಞನ ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ 1 ಮಲಹರಣ ಮಾಡಲು ಧರಿಸಿ ಅವತಾರ ಮೂಲೋಕ ಪಾವನಮಾಡುವ ಸಹಕಾರ ಸಲಹುವೆ ಭಕ್ತಜನರಿಗೆ ನೀ ಘನ ಮಂದಾರ ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿಶೂರ 2 ಪತಿ ಅಹದು ಶ್ರೀಗುರು ಭೂಪತಿ ಬಾಹ್ಯಾಂತ್ರಿ ಬೆಳಗುವೆ ಶ್ರೀಪಾದಕೆ ಆರ್ತಿ ಇಹಪರಕೆ ದಾತನಹುದೊ ಶ್ರೀಪತಿ ಜಯಜಯವೆಂದು ಬೆಳಗುವೆ ದಾಸ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಲಕ್ಷ್ಮಿ ಬಾ ಹಸೆಗೆ ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ ಮುತ್ತಿನ ಮಂಟಪದಿ ರತ್ನಪೀಠವಿರಿಸಿ ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ1 ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ 2 ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ 3 ಕರ್ತೃ ಕಮಲನಾಭ ವಿಠ್ಠಲನರಸಿಯೆ ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ 4
--------------
ನಿಡಗುರುಕಿ ಜೀವೂಬಾಯಿ
ಜಯಕೃಷ್ಣವೇಣಿ | ಜಗಪಾವನೀ | ಜಯಕರುಣಿ ಭಯಹರಿಣಿ ಭವತಾರಿಣಿ ಪ ಮಾಬಳೇಶ್ವರನ ಸುಜಟಾ ಭಾಗದಲಿ ಪದ್ಮ | ನಾಭನಂಶದಿ ಬಂದು ಶೋಭಿಸುತಲಿ | ಈ ಭುವನಜನರ ಮನದಾಭೀಷ್ಟಮಂ ಕೊಡಲು | ತಾ ಭರದಿ ನದಿರೂಪನಾಗಿ ಪ್ರವಹಿಸಿದೆ 1 ನಿನ್ನೆಡೆಗೆ ನಡೆತಂದು ನಿನ್ನ ಜಲ ವೀಕ್ಷಿಸುತ | ನಿನ್ನ ಘೋಷವ ಕೇಳಿ ತನ್ನ ಕರದಿ | ನಿನ್ನ ಸ್ಪರ್ಶನ ಅಚಮನ ಮಾರ್ಜನದಿಂದ | ತನುಮನೇಂದ್ರಿಯಗಳು ಪಾವನವಾದವು 2 ಪೊಡವಿಯೊಳಧಿಕ ತೀರ್ಥ ತಡಿಯಗ್ರಾಮವೇ ಕ್ಷೇತ್ರ | ಸುರರು | ಒಡಲೊಳಿಹ ಜಲಚರಗಳೊಡನೆ ಗತಿಸಾಧಕರು | ನುಡಿವ ಪಕ್ಷಿಗಳು ಸಲೆ ಗಿಡಮರಗಳು 3 ಸಾಗಿಸುವ ಕರ್ಮೇದ್ರಿ ತ್ಯಾಸದ್ಧರ್ಮದಿಂ | ಯೋಗ ಅಷ್ಟಾಂಗದಿಂ ಯಾಗದಿಂದ | ಭೋಗಿಸುವ ಪುಣ್ಯವನು ರಾಗದಿಂ ತೀರದಿಹ | ಯೋಗಿಜನಕೀವೆ ತಾನೀಗ ದಯದಿ 4 ಬಿಂದುಮಾತ್ರವೇ ಬೀಳಲೊಂದು ಕಾಯದಿ ಅಘದ | ವೃಂದ ನಾಶನವಹುದು ಮಿಂದಡವನ | ಛಂದಮಂ ಬಣ್ಣಿಸುವದಿಂದು ತಿಳಿಯದು ಎನುತ | ತಂದೆ ಮಹೀಪತಿ ಜ ಕರದ್ವಂದ್ವ ಮುಗಿಯೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಜಯದೇವ ಜಯದೇವ ಜಯ ಶಂಕರ ಮೂರ್ತಿ ಜಯ ಜಯವೆಂದು ಬೆಳಗುವೆ ಮನದಲಿ ಭಾವಾರ್ತಿ ಪ ಸಾಧನ ಕೆಂಜೆಡೆಯೊಳಗೆ ಜ್ಞಾನಗಂಗೆಯ ನಿಲಿಸಿ ಸಾದರದಲಿ ಚಿಜ್ಯೋತಿಯ ಚಂದ್ರನ ಕಳೆಧರಿಸಿ ನಾದಬಿಂದು ಕಳಾನಯನ ತ್ರಯವೆರಿಸಿ ಮೋದಿಪೆ ಅಪರೋಕ್ಷನುಭವ ಮುಖದೆಳೆ ನಗೆಬಳಿಸಿ 1 ಧವಲಾಂಗದಿ ಸಲೆ ಶುದ್ಧ ಸತ್ವದ ಶೋಧಿಸಲಿ ತವಕದಿ ಶಮದಮವೆಂಬಾ ಬಾಹುದ್ವಯದಲಿ ಅವಯವದಲಿ ನಿಜಭಕ್ತಿ ಶೇಷಾಭರಣದಲಿ ಶಿವತಾನೆಂದು ಬೆಳಗುವೆ ಸಹಜಾನಂದದಲಿ 2 ವಿವೇಕ ವೈರಾಗ್ಯದಾ ಕರಚರ್ಮಾಂಬರಣಾ ಅವನಿಲಿಸುರನರಪೂಜಿತ ಪಾವನಶ್ರೀ ಚರಣಾ ಕುವಲಯ ಲೋಚನ ಶಾಂತಿಯ ಪಾರ್ವತಿ ಸಹಕರುಣಾ ಭವತಾರಕ ಗುರುಮಹಿಪತಿ ಪ್ರಭುದೀನೋದ್ದಾರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೊ ಪ ರಾಣಿ ಭಾರತೀ ರಮಣ ನಿನಗೆಣೆಕಾಣೆ ತ್ರಿಭುವನದೊಳಗೆ ಸರ್ವಪ್ರಾಣಿಗಳ ಹೃದಯದಲಿ ಮುಖ್ಯಪ್ರಾಣನೆಂದೆನಿಸಿದೆಯೊ ಧಿಟ್ಟ ಅ.ಪ ಧೀರ ನೀನಹುದೋ ವಾಯುಕುಮಾರ ನೀನಹುದೊಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ 1 ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟು ಲಂಕೆಯ ಸೀತೆಗುಂಗುರಕೊಟ್ಟೆ ಜಗಜ್ಜಟ್ಟಿ ಹನುಮ2 ದುರಿತ ಮಾರ್ತಾಂಡ ನೀನಹುದೊಕುಂಡಲ ಕಿರಿಘಂಟೆ ಉಡಿಯಲಿಪೆಂಡೆ ನೂಪುರ ಕಾಲಲಂದಿಗೆತಂಡ ತಂಡದಿ ಕೃಷ್ಣನಂಘ್ರಿಪುಂಡರೀಕಕೆ ಕೈಯ ಮುಗಿದ 3
--------------
ವ್ಯಾಸರಾಯರು
ಜಾನಕೀಶ ವಿಠಲ ನೀನಿವನ ಪೊರೆಯೋ ಪ ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ. ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ 1 ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ 2 ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ 3 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ 4 ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ ಮಲಗಯ್ಯ ಜೋ ಜೋ ಪ ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ ಬೆನ್ನು ಭಾರವಾಗಿರುವುದೇನೋ ದೇವ ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ 1 ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ 2 ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ ಮುತ್ತಿಟ್ಟು ತೂಗಿದಳು ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ ಹುಟ್ಟಿ ಬಂದು ನಿಜದೋರಿದೆ ಖೂನ ಮುಟ್ಟಿ ಬೀರುವ ಸುಚಿನ್ನಸಾಧನ ಇಟ್ಟ ಕಾವಲಿ ಹಾಕಿದೆ ಮೌನ ಮೆಟ್ಟಿಮರ್ದಿಸಿ ಬಂದೆ ಮಾವನ 1 ಮಾಡಬಂದೆ ನೀ ಧರ್ಮಸ್ಥಾಪನಿಯ ನೋಡಬಂದೆನಿಷ್ಟ ಜನರಾರ್ಚನಿಯ ಆಡಬಂದೆ ನಂದಯಶೋದೆ ಮನಿಯ ನೀಡಬಂದೆ ನಿಜಸುಖಸಾಧನಿಯ 2 ಶಿಷ್ಟಜನರಿಗಾಗಿ ಸಹಾಕಾರಿ ಸೃಷ್ಟಿಯೊಳು ತೋರಬಂದೆ ಶ್ರೀಹರಿ ದುಷ್ಟ ಜನರ ಮರ್ದಿಸುವಾವತಾರಿ ಕಂಸಾರಿ 3 ದೇವಾದಿಗಳ ಮಗುಟಮಣಿಯೆ ಭಾವಿಸಲಳವಲ್ಲ ಸದ್ಗುಣಿಯೆ ಕಾವ ದೈವ ನೀನೆ ಕೃಷ್ಣ ಕರುಣೆಯೆ ದೇವಕಿ ಗರ್ಭನಿಧಾನದ ಖಣಿಯೆ 4 ಬಲವಾಗಿ ಎನಗಬಂದೆ ಸರ್ವೇಶ ಒಲಿದು ಭಾನುಕೋಟಿತೇಜಪ್ರಕಾಶ ಫಲವ ನೀಡಿ ತೋರಬಂದೆ ಸಂತೋಷ ಸಲಹಬಂದೆ ಮಹಿಪತಿ ಪ್ರಾಣೇಶ 5 ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ ನೀನೆ ಮುರಾರಿ 6 ಅನೆ ಕಾಯಲಿಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀಹರಿ 7 ಪತಿತ ಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ ಸ್ವೀಕರಿಸಬೇಕು ಕ್ಷಣದಿ ಪ ನಾಕಾರು ವಿಧಗಳಲಿ ನೀಪೇಳಿದುದನೆಲ್ಲ ಏಕಮನದಲಿ ಮಾಡಿದೆ ಕೃಷ್ಣ ಅ.ಪ ಬಾಲತನದಲಿ ಬಹಳ ಲೋಲನಾಗಿರು ಎಂದು ಪೇಳಲಿಲ್ಲವೆ ಯೋಚಿಸು ಕೀಳುಜೀವನದಲ್ಲಿ ಕಾಲವನು ಕಳೆ ಎಂದು ಪೇಳಿದುದ ನೀ ಮರೆತೆಯಾ ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ ಪೇಳಿದುದ ಮಾಡಿರುವೆನೊ 1 ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ ಪಾಪ ಪುಣ್ಯಕೆ ಕಾರಣ ಈ ಪರಿಯ ನಿನ್ನ ಸಂಕಲ್ಪವನು ಮೀರಲು ತಾಪಸೋತ್ತಮರಿಗಳವೆ ಆಪತ್ತು ಸಂಪತ್ತು ನಿನ್ನಧೀನಗಳೆಂದು ತಾಪತ್ರಯವ ಸಹಿಸಿದೆ 2 ಇಂದಿರಾಪತಿ ನಿನ್ನ ಒಂದೊಂದು ದಿನದಲಾ ನಂದ ಪೂಜೆಗೈಯಲು ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ ಇಂದು ಮಾಡುವರ್ಯಾರು ಸಂದೇಹವಿಲ್ಲವೆನಗೆ 3 ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ ಸಂತಸದಿ ಮುಳುಗಿರುವೆನೊ ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ ಶಾಂತಿಯನು ದಯಮಾಡೆಲೊ ಸಂತತ ನೀನು ಎನ್ನಂತರಂಗದಲಿರಲು ಕಂತೆಯಂದದಿ ಕಾಂಬೆನೊ ಜಗವ 4 ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು ಯಾರ ಭಯವೆನಗಿಲ್ಲವೊ ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು ಮೀರಿ ನಡೆಯುವುದಿಲ್ಲವೊ ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ ಯಾರಿರುವರೊ ಜಗದಲಿ ನಿನ್ಹೊರತು 5
--------------
ವಿದ್ಯಾಪ್ರಸನ್ನತೀರ್ಥರು
ಜೋಜೋ ಕಂದÀರ್ಪಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ ಪ . ಜೋಜೋ ನಂದನ ಸುಕೃತದ ಫಲವೆಜೋಜೋ ಮುನಿಮನಮಧುಪ ಕಮಲವೆಅ.ಪ. ಪೊನ್ನ ತೊಟ್ಟಿಲ ಮೇಲೆ ಮಣಿಮಯವಾದ ವಿತಾನ್ನವ ಕಟ್ಟ್ಟಿ ಪಟ್ಟೆಯ ಮೇಲ್ವಾಸಿನಲಿಚಿನ್ನ ಶ್ರೀಕೃಷ್ಣನ ಮಲಗಿಸಿ ಗೋಕುಲದಕನ್ನೆಯರೆಲ್ಲ ತೂಗುತ ಪಾಡಿದರೆ 1 ಶಶಿಯ ಚೆಲುವ ಪೋಲ್ವ ಮೊಗದ ಚೆನ್ನಿಗನೆಎಸೆವ ಕಿರುಡೊಳ್ಳಿನ ಸೊಬಗ ಬಾಲಕನೆಪೊಸಕೆಂದಾವರೆಯಂದದಿ ಮೃದುಪದನೆಬಿಸರುಹನಯನ ಬಿಡದಿರೆಮ್ಮ ಕಂದ 2 ಪೂತನಿ ಅಸುವನೀಂಟಿದ ಪೋತ ಶಿಶುವೆವಾತದೈತ್ಯನ ಗೆಲಿದದುಭುತ ಬಾಲಭೂತಗಳನಂಜಿಸುವರ್ಭಕನೆಓತೆಮ್ಮ ಶಿಶುಗಳ ಸಲಹೊ ಶ್ರೀಹರಿಯೆ 3 ಅಮೃತವನೂಡಿ ಸುರರ ಬೆಳೆಸಿದನೆಭ್ರಮಿತನಾದ ಕರಿವರನ ಕಾಯ್ದವನೆಸುಮುಖತನದಿ ಪರೀಕ್ಷಿತನ ಪೊರೆದನೆಮಮತೆಯಿಂದೆಮ್ಮ ಶಿಶುಗಳ ನೀ ಸಲಹೊ 4 ಪೊಳೆÀವ ಮೂಲರೂಪದಿ ತೋರಿದೆ ನೀ-ನುಳಿದ ಶಿಶುಗಳಂತೆ ಶಿಶುವೆನ್ನಬಹುದೆಲಲನೆ ಬೇಡಿಕೊಳ್ಳೆ ತನ್ನ ತಾನೆ ಶಿಶು-ಗಳ ಭಾವವಿಡಿದೆಯೆಂದೆಂಬರು ನಿನ್ನ5 ಈ ಮಹಿಯೊಳು ಹರಿ ಶಿಶುವಾಗೆ ತನ್ನ ಮ-ಹಿಮೆಯ ತುತಿಸುವ ಶ್ರುತಿವನಿತೆಯರುವ್ಯಾಮೋಹದಿ ಬಂದು ಲಲನೆಯರಾದರುಆ ಮುಗ್ಧೆಯರು ಪಾಡುತ ತೂಗಿದರೆ 6 ನೀ. ಶಿಶುವಾದರೆ ನಿನ್ನುದರದೊಳಿರ್ದ ಶ್ರುತಿಮುಕ್ತರು ಶಿಶುಗಳೆಂತಾಹರೊವೇಷಧರನಾಗಿ ಶಿಶುಗಳ ವಾಸಿನೊಲಿದೆವಾಸುದೇವ ನಮ್ಮ ಬಿಡದಿರು ಶ್ರೀ ಕೃಷ್ಣ 7 ಆವಳಿಸಲು ನಿನ್ನ ಗರ್ಭದೊಳಗೆ ಭುವ-ನಾವಳಿ ಗೋಪಗೋಪಿಯರನ್ನು ತೋರಿದೆಶ್ರೀವರ ನೀನೆಲ್ಲರ ತಂದೆಯಲ್ಲದೆಭಾವಜ್ಞರ ಮತದಿ ಶಿಶುವೆಂತಪ್ಪೆ 8 ಹಯವದನನಾಗಿ ವೇದವÀ ತಂದುಪ್ರಿಯಸುತ ಚತುರಮುಖಗೆ ಪೇಳಿದಖಿಳ ವಿ-ದ್ಯೆಯ ಖನಿ ನೀನೀಗಳೇನೆಂದು ನುಡಿಯಲ-ರಿಯದ ಬಾಲಕನಾದ ಬಗೆ ಪೊಸತಯ್ಯ
--------------
ವಾದಿರಾಜ
ಜೋಜೋ ಶ್ರೀ ಗೋಪಾಲಕೃಷ್ಣ ಮೂರುತಿಯೆ ಪತಿ ಲೋಕ ದೊರೆಯೆ ಜೋಜೋ ಈ ಲೋಕದೊಳು ನಿನಗಿನ್ನು ಸರಿಯೆ ಜೋಜೋ ಶ್ರೀ ಗುರುಕರಾರ್ಚಿತದಿ ಬಂದ್ಹರಿಯೆ ಪ. ತಂದೆ ಮುದ್ದುಮೋಹನರು ಕೊಟ್ಟ ಅಂಕಿತದಿ ಪೊಂದಿದ್ದ ರೂಪ ಗ್ರಹದಲ್ಲಿ ಹೊಂದಿ ಮುಂದೆಂಟು ವತ್ಸರಕೆ ಎನ್ನೊಡನೆ ಬಂದಿ ತಂದೆ ಮುದ್ದುಮೋಹನರ ಕರಸ್ಪರ್ಶ ಪೊಂದಿ 1 ನಮ್ಮ ಹಿರಿಯರ ಪೂಜೆ ಒಮ್ಮೊಮ್ಮೆ ಎಂದು ಒಮ್ಮೆ ದುರುಳನು ಮುಟ್ಟೆ ಮಲಿನಾದೆನೆಂದು ನಮ್ಮ ಗುರು ಕರಸ್ಪರ್ಶದಿಂ ಪುನಃ ಬಂದು ಪತಿ ಎನ್ನ ಕರಪೂಜೆ ಬೇಕೆಂದು 2 ಘನ್ನ ಗುಣರು ನಿನ್ನ ಪೂಜಿಸಿ ಪೋಗಲಂದು ಮನೆ ಪೆಟ್ಟಿಗೆಯೊಳ್ ಸುಮ್ಮನಿರಲಾರೆನೆಂದು ಮನಕೆ ಪ್ರೇರಿಸೆ ದುರುಳರಿಗೆ ಕದ್ದು ಒಯ್ದು ಘನ ಮೂರ್ತಿಗಳು ಪೋಗೆ ನೀನೊಬ್ಬ ಬಂದು 3 ಬಹುದಿವಸ ಮಲಿನವಾಗಿರುತಿರಲು ನೀನು ಮಹಮಹಿಮೆ ಅರಿಯಲಿಲ್ಲಾಗ ನಾನಿನ್ನು ಅಹಹ ನಮ್ಮ ಗುರುಗಳೆರೆಯಲು ಜ್ಞಾನವನ್ನು ಮಹಿಯೊಳೆನ್ನ ಪೂಜೆಯನು ಬಯಸಿದೆಯೊ ನೀನು 4 ಮನದಲ್ಲಿ ಪ್ರೇರಿಸಲು ಘನವಲ್ಲವೆಂದು ಕನಸಿನಲಿ ಎನ್ನ ಹಸ್ತದೊಳ್ ಬಂದು ನಿಂದು ಸನುಮತದಿ ಹರುಷದಲಿ ನಿನ್ನ ನಾ ತಂದು ಘನ ಮಹಿಮ ಗುರುಗಳಿಗೆ ಒಪ್ಪಿಸಲು ಅಂದು 5 ಅಂತರಾತ್ಮನ ಗುರುವು ವಿಗ್ರಹದೊಳಿಟ್ಟು ಸಂತೋಷದಿಂದ ಮನಮುಟ್ಟಿ ಕೊಡಲಷ್ಟು ಅಂತಾಯ್ತು ಮಲಿನ ಕುಂದಿತು ತೇಜವೆಷ್ಟು ನಿಂತೆನ್ನ ಕೈಲಿ ಪೂಜೆಯಗೊಂಬ ಗುಟ್ಟು 6 ದಿನದಿನಕೆ ಭಜನೆ ಪೂಜೆಯನೆಗೊಂಬ ಚಂದ ಘನಭಕ್ತರನು ಪೊರೆವ ಬಿರುದು ಆನಂದ ಮುನಿಜನರ ಮೋಹಕನೆ ಸಚ್ಚಿದಾನಂದ ಎನಗೊಲಿದೆ ಗೋಪಾಲಕೃಷ್ಣ ಗೋವಿಂದ 7 ರಮೆ ಬ್ರಹ್ಮ ಸುರರಿಗೆ ಸರಿ ಪೂಜಿಸುವೆನೆ ಕಮಲಾಕ್ಷ ಅಣು ನಾನು ನಿನ್ನ ಒಲಿಸುವೆನೆ ರಮಣೀಯವಾದ ವಸ್ತುಗಳ ನಾ ತಹೆನೆ ಕ್ಷಮಿಸು ನಿನ್ನ ದಾಸಿ ನನ್ನಪರಾಧಗಳನೆ 8 ಅಂತರಂಗದಲಿಪ್ಪ ಬಿಂಬ ಮೂರುತಿಯೆ ನಿಂತು ಈ ವಿಗ್ರಹದಿ ಈ ರೀತಿ ಮೆರೆಯೆ ಸಂತೋಷ ನೋಳ್ಪರಿಗೆ ಕೊಡು ಭಕ್ತಿ ಹರಿಯೆ ಕಂತುಪಿತ ಕಮಲಾಕ್ಷ ಕಾಯೊ ಸಿರಿದೊರೆಯೆ 9 ಪೂಜ್ಯಪೂಜಕನೆಂದು ಪೂಜೆ ಮಾಡುವೆನೊ ಮೂರ್ಜಗತ್ಪತಿ ನಿನ್ನ ಲಾಲಿ ಪಾಡುವೆನೊ ಪೂಜ್ಯ ಶ್ರೀ ಗೋಪಾಲಕೃಷ್ಣವಿಠ್ಠಲ ನೀನು ಗೋಜು ಬೇಡನ್ಯರದು ಪೊರೆಯೊ ದಾಸರನು 10
--------------
ಅಂಬಾಬಾಯಿ
ಜ್ಞಾನ ಪ್ರದಾಯಕ ಪ್ರಾಣದೇವ ಪ ಕಾಣೆ ನಿನಗೆ ಸಮಸತ್ಪ್ರಭಾವ ಅ.ಪ ಈ ಶರೀರದೊಳು ವಿಭೀಷಣನ ತೋರೊ 1 ಕೋಪ ಕುಜನತ್ವ ದುರ್ ವ್ಯಾಪಾರಾದಿಗಳನ್ನೆಲ್ಲ ರೂಪಡಗಿಸಿದೆ ನೀನೇ ಭೂಪನೈಯ್ಯ 2 ಇಪ್ಪತ್ತೊಂದು ವಿಧದ ತಪ್ಪುಗಳ ತಿದ್ದಿದೆ ತಿ- ಮ್ಮಪ್ಪ ವೇದ ವ್ಯಾಸರ ಶಿಷ್ಯಾವರ್ಯಾ 3 ಕಲಿಮಾರ್ಗದಲಿ ಪೋಪ ಹೊರೆ ಬುದ್ಧಿನಾಶಗೈಸಿ ಒಳಗೆ ನೀ ಪೊಳೆವುದು ಜಲಜಾಪ್ತ ಪ್ರಿಯ4 ರಂಜೀತವಾದ ಕಣ್ಣ್ಣಿಗೆ ಮಂಜು ಮುಚ್ಚಿಹುದು ದಿ- ವ್ಯಾಂಜನ ಹಚ್ಚೈ ವೀರಾಂಜನೇಯಾ5 ಯೇಳಾರೊಳಗೆ ಹದಿನೇಳಾನೆಯವರನು ಪಾಲಿಪ ದೊರೆ ನೀನು ಜಾಲವೇನು?6 ಸಿರಿಗುರುರಾಮ ವಿಠಲನ ಶರಣಾರಾಭರಣ ನೀನೆ ಕರುಣೀಸದಿದ್ದರೆಮ್ಮನು ಕಾವರಾರೈ 7
--------------
ಗುರುರಾಮವಿಠಲ
ಜ್ಞಾನಭ್ಯಾಸವ ಮಾಡಿ ಹೀಗೆ ತಾನೊಲಿದು ಜ್ಞಾನ ಗುರು ಖೂನಾಗುವ್ಹಾಂಗೆ ಧ್ರುವ ಮನದಲಿ ಬಾವ್ಹಾಂಗ ನೆನೆದಲಿ ಕಾಂಬ್ಹಾಂಗೆ ತನುವಿನಲಿ ನಿಜಗೊಂಡು ತಾ ನೆಲೆಯಗೊಂಬ್ಹಾಂಗೆ ಅನುದಿನನದಲ್ಯನುಭವಿಸುವ್ಹಾಂಗೆ ಕನಗರಸಿದಲಿ ಮನೋಹರ ಮಾಡುವ್ಹಾಂಗೆ 1 ಅರ್ವಿನಲಿರುವ್ಹಾಂಗೆ ಕುರುಹುದೋರುವ್ಹಾಂಗೆ ಇರುವ್ಹ ನೆಲೆಗೊಂಡು ತಾನೆವೆ ಸ್ಥಿರವಾಗುವ್ಹಾಂಗೆ ಮರವು ಮರದೀಡ್ಯಾಡುವ್ಹಾಂಗೆ ಗುರು ಚರಣ ಕಮಲವನು ಗುರುತಾಗುವ್ಹಾಂಗೆ 2 ಧ್ಯಾಸ ನೀಜ ಬಲುವ್ಹಾಂಗೆ ವಾಸನೆ ಪೂರಿಸುಹಾಂಗೆ ಭಾಸ್ಕರ ಕೋಟಿ ಪ್ರಕಾಶ ಭಾಸಿಸುವ್ಹಾಂಗೆ ಭಾಸ್ಕರ ಬಾಹ್ಯಾಂತ್ರಲಿವ್ಹಾಂಗೆ ಲೇಸಾಗಿ ಮಹಿಪತಿ ಸ್ವಾಮಿಒಲುವ್ಹಾಂಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ಪ ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ ಪರರ ಸತಿಯ ತೊರೆವುದೊಂದು ಮಾನವಲ್ಲವೆ ಪರರ ಸೇವೆಗಿರುವದವಮಾನವಲ್ಲವೆ 1 ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ ಹೊನ್ನ ಹುದಿದು ಅನ್ನ ತೊರೆವುದಜ್ಞಾನವಲ್ಲವೆ ಅನ್ಯರೊಡವೆ ಕಳುವುದವಮಾನವಲ್ಲವೆ 2 ಹಸಿದವರನು ಕಂಡು ಯಿಕ್ಕಲು ಜ್ಞಾನವಲ್ಲವೆ ಹುಸಿಕನಾಗಿ ಅಸತ್ಯ ಮಾಳ್ಪುದು ಅಜ್ಞಾನವಲ್ಲವೆ ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ ಎಸೆವ ಜೂಜು ತಪ್ಪಲವಮಾನವಲ್ಲವೆ 3 ಸ್ಥಿರವಿದಲ್ಲವೆಂಬ ಜೀವಿ ಜ್ಞಾನಿಯಲ್ಲವೆ ನರಕ ಭಯವ ಮರೆವ ಜಡನಜ್ಞಾನಿಯಲ್ಲವೆ ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ ಬರಿಯ ಕ್ಷುದ್ರವೆಸಗಲವಮಾನವಲ್ಲವೆ 4 ಕ್ರೋಧವನ್ನು ತೊರೆದ ಮನುಜ ಜ್ಞಾನಿಯಲ್ಲವೆ ವೇದವನ್ನು ಜರೆದ ನರನಜ್ಞಾನಿಯಲ್ಲವೆ ಸೋದರರು ಕೂಡಿಯಿರಲು ಮಾನವಲ್ಲವೆ ಮಾದಿಗರ ಸಂಗವದವಮಾನವಲ್ಲವೆ 5 ಗುರು-ಹಿರಿಯರನುಸರಿಸೆ ಜ್ಞಾನವಲ್ಲವೆ ಸಿರಿಯ ವೇಶ್ಯಸ್ತ್ರೀಗೆ ಕೊಡಲಜ್ಞಾನವಲ್ಲವೆ ದೊರೆಯು ಕರೆದು ಉಚಿತವೀಯೆ ಮಾನವಲ್ಲವೆ ತಿರುಕರಂತೆ ತಿರಿವುದು ಅವಮಾನವಲ್ಲವೆ 6 ವರಾಹತಿಮ್ಮಪ್ಪ ಒಲಿದರದು ಜ್ಞಾನವಲ್ಲವೆ ಮರೆದು ಕ್ಲೇಶಕೆರಗುವುದಜ್ಞಾನವಲ್ಲವೆ ಕರೆದು ಪರರಿಗಿಕ್ಕುವುದು ಮಾನವಲ್ಲವೆ ಕರೆಕರೆಯ ಮಾತು ಅವಮಾನವಲ್ಲವೆ 7
--------------
ವರಹತಿಮ್ಮಪ್ಪ