ಒಟ್ಟು 7530 ಕಡೆಗಳಲ್ಲಿ , 133 ದಾಸರು , 4766 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ ಮೊರಿಯು ಕೇಳೆಲಾ ಹರಿಯು ನಿಶ್ಚಲಾ ದುರಿತ ಹರಿಸೆಲಾ 1 ಸುಳವದೋರಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2 ಬಂಧುಬಳಗ ದೈವ ಕುಲಕೋಟಿ ನೀನೆಲಾ3 ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4 ಅಂದು ಒದಗಿ ನೀ ಬಂದ ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5 ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6 ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಇಂದು ನಮ್ಮ ಮನಿಲ್ಯಾನಂದೋಬ್ರಹ್ಮಾ ತಂದೆ ಸದ್ಗುರು ದಯ ಏನೆಂದ್ಹೇಳಲಿ ಸಂಭ್ರಮ ಧ್ರುವ ಹರುಷ ತುಂಬೇದ ಬಹಳ ತೆರವಿಲ್ಲೆಳ್ಳಷ್ಟು ಸ್ಥಳ ಸಿರಿಯನಾಳ್ವ ದಯಾಳ ಹರಿ ಬಂದಾನೆ ಕೃಪಾಳ 1 ಸೂಸುತಲಿ ಸಂತೋಷ ಪಸರಿಸ್ಯದ ಉಲ್ಹಾಸ ಭಾಸುತಾನೆ ಸರ್ವೇಶ ಭಾಸ್ಕರ ಕೋಟಿ ಪ್ರಕಾಶ 2 ಪ್ರಾಣಕಾಗೇದ ಪ್ರಸ್ತ ಮನಕಾಗೇದ ತಾಂ ಸ್ವಸ್ತ ಸಅನುಭವದ ಸುವಸ್ತ ಖೂನಾಗಿ ಬಂದು ಸಾಭ್ಯಸ್ತ 3 ಹೇಳಲಿಕ್ಕಳವಲ್ಲ ಹೊಳವ ಸುಖದ ಸೊಲ್ಲ ತಿಳಿದ ಮಹಿಮೆ ಬಲ್ಲ ಸುಳವು ಸೂಕ್ಷ್ಮವೆಲ್ಲ 4 ಕರ್ತುತಾಂ ದಯಮಾಡಿ ಅರ್ತು ಬಂದೊಡಮೂಡಿಆರ್ಥಿಯಿಂದೆವೆ ನೋಡಿ ಬೆರ್ತು ಮಹಿಪತಿಕೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮ ಸಲಹಯ್ಯಾ ಸಿರಿರಮಣಾ| ದುರಿತ ನಿವಾರಿಸು ಪೂರ್ಣ| ಮಂದಮತಿಗಳಾ ನೋಡದೆವೆ ನ್ಯೂನಾ| ಛಂದದಿಂದ ಕೊಡು ನಿನ್ನ ಚರಣ ಧ್ಯಾನಾ ಪ ಹಿಂದ ವ್ಯಾಧನೊಬ್ಬ ಹರಿಣಿ ಹಿಡಿಯಲಿ| ನಿಂತು ಚತುರ್ವಿಧ ಬಲಿಯಾನೊಡ್ಡಿರಲಿ| ಮೃಗ ಮೊರೆಯಿಡಲಿ| ಬಂದು ಕರುಣಿಸಿ ರಕ್ಷಿಸಿದ ಪರಿಲಿ 1 ಬಸಿರೊಳಗಿದ್ದ ಪರೀಕ್ಷಿತಗೆಂದು| ಎಸೆಯಲು ಬಾಣಗಳ ದ್ರೋಣಿ ಮುಳಿದು| ಬಿಸಜಾಕ್ಷ ನಿನ್ನ ಚಕ್ರ ಮರೆವಿಡಿದು| ಪರಿ ಬಂದು 2 ದಿನ ವತ್ಸಲ ದಯಾನಿಧಿ ಎನುವಾ| ಖೂನದೋರಿಸಯ್ಯಾ ಬಿರುದಿನ ಅನುವಾ| ನಿನೇ ತಾಯಿ ತಂದೆ ಬಂಧು ಸಖದೈವ| ಘನಗುರು ಮಹಿಪತಿ ಸುಖ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ ಸ್ವಾನಂದ ಸಂದಿಸಿ ತುಂಬೇದ ಸುಖ ಸಾಂದ್ರ ಧ್ರುವ ಅತಿಶಯಾನಂದ ಕಂದ ಪತಿತಪಾವನ ಮುಕುಂದ ಹಿತದೋರಲಿಕ್ಕೆ ಬಂದ ಸತತ ಸುದಯದಿಂದ 1 ಪುಣ್ಯದಿರಿಟ್ಟತು ಈಗ ಎನ್ನೊಡಿಯ ಬಂದಾಗ ಧನ್ಯಗೈಸಿದೆನಗೆ ಚೆನ್ನಾಗಿ ಬಂದು ಮನೆಗೆ 2 ಮನಮಂದಿರಕೆ ಬಂದ ಅನುಕೂಲವಾಗಿ ಗೋವಿಂದ ಘನಗುರು ಕೃಪೆಯಿಂದ 3 ಬಾಹ್ಯಾಂತ್ರ ಭಾಸುವ ಕ್ರಮ ಮಹಾಗುರುವಿನ ಧರ್ಮ ಮಹಿಪತಿಯ ಸಂಭ್ರಮ ಇಹಪರಾನಂದೋಬ್ರಹ್ಮ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ನಿನಗೆ ಧರ್ಮವೇ ಇಂದಿರೇಶ ಬದಿಗ ನೀನಾಗಿದ್ದು ಭೀತಿ ಪಡಿಸುವುದು ಪ ನಿನ್ನ ಗುಣಗಳ ತುತಿಸಿ ನಿನ್ನನ್ನೇ ಹಾರೈಸಿ ನಿನ್ನವರ ಪ್ರೀತಿಯನು ಸಂಪಾದಿಸಿ ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ ಮಾನ್ನವರನ ಈ ಪರಿಯ ಬನ್ನಬಡಿಸುವುದು 1 ದುರುಳನಲ್ಲವೊ ನಿನ್ನ ಚರಣ ಸೇವಕರವನೊ ಪರಿಪಾಲಿಸುವುದು ನಿನ್ನ ಪರಮ ಧರ್ಮ ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ ಶರಣ ರಕ್ಷಕನೆಂಬೊ ಬಿರಿದು ಸುಳ್ಳಾಗುತಿದೆ 2 ಶೋಕನಾಶಕ ವಿಗತಶೋಕನೆಂಬೋ ನಾಮ ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿ ರಾಕರಿಸದೆಮ್ಮ ನೀ ಸಾಕಬೇಕನುದಿನವು ವಾಕು ಮನ್ನಿಪುದು ಲೋಕೈಕ ರಕ್ಷಾಮಣಿಯೆ 3 ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು ಪ್ರಣತಾರ್ತಿಹರ ವಿಭೀಷಣ ಪಾಲಕ ಕ್ಷಣಕನಂತಪರಾಧವೆಣಿಸುವರೆ ಕಡೆಯುಂಟೆ ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ 4 ನಮೋ ನಮೋ ಬ್ರಹ್ಮಣ್ಯ ದೇವರ ದೇವ ದುರಿತ ನಮೋ ನಮೋ ಕಾರುಣ್ಯ ಶೀಲ ಸಜ್ಜನ ಪಾಲಾ ನಮೋ ನಮೋ ಜಗನ್ನಾಥವಿಠಲ ವಿಖ್ಯಾತ 5
--------------
ಜಗನ್ನಾಥದಾಸರು
ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು | ಅಂದದಿಂದ ಮೆರೆವನಂದವ ನೋಡಾ ಪ ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು | ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ || ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು | ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು 1 ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ | ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ | ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ | ದುಂಗುರವ ಯಿಟ್ಟ ಸುಖಂಗಳ ನೋಡಾ 2 ಉಂಗುರವ ನಡು ಮೇಲು ಕಂಗಳ ಕುಡಿನೋಟ | ಗೋಪಾಂಗನೇರ ಮನಕೆ ಮೋಹಂಗಳ ತೋರೆ | ಅಂಗಜನ್ನೆನೆಸಿ ತಾಪಂಗಳು ವೆಗ್ಗಳದಿಂದ | ಹಂಗೀಗರಾಗೆ ನಗುವ ಗಂಗಾಜನಕ 3 ಲೋಕ ಬೆಲೆಗೊಂಬ ಅಲೌಕೀಕ ಮಣಿನಾಸದಲ್ಲಿ | ರಾಕಾಬ್ಜಾನಂದದಿ ಮೊಗಾನೇಕ ಲೋಕೇಳಾ | ನಿತ್ಯ ಬೇಕೆಂದು ಜಪಿಸಲು ದೊರಕದ ದೊಂಬಲು ಬಾ ಯದುಕುಲಾಂಬರಾ4 ಕುಂಡಲ ಕರ್ಣ ಶ್ರೀಗಂಧ ಪೂಸಿದ ವಕ್ಷ | ಪೂಗೊಂಚಲು ಸಣ್ಣನಾಮ ಆ ಗೆಜ್ಜೆಧ್ವನಿ | ಆಗಮನ ಸೋಲಿಸೆ ನಾನಾ ಭೋಗಾದಲ್ಲಿಯಿಪ್ಪ | ಮಧ್ವ | ಯೋಗಿಪ್ರಿಯಾ ವಿಜಯವಿಠ್ಠಲಾ ಗುಣನಿಧಿ 5
--------------
ವಿಜಯದಾಸ
ಇದು ರಕ್ಷಿಸುವಂಥ ಕಾಲ ಚಿಕ್ಕ ಮುದನೂರ ಗೋಪಾಲ ಮುನಿಜನಲೋಲ ಪ ನಿತ್ಯಾನಂದ ಭಕ್ತಮಂದಾರ ಮೊರೆಹೊಕ್ಕೆ ಸಲಹೆನ್ನ ಮುದದಿಂದ ನೀ ಕರುಣಾತೋರಿ ತ್ವರ ಕಾಯೋ ಗೋವಿಂದ 1 ಸರ್ವೋತ್ತಮ ವೆಂಕಟರಮಣ | ಭವ ನಿಃಶ್ಯಂಕ ನಿರಾಮಯ 2 ವಿಠಲ ಹರ್ಷದಿ ಬಂದು ಶರಣೆಂಬೆ ದೀನ ದಯಾಪರ ಮುರಹರ ಮುರಲೀಧರ ಅಗಣಿತಾವತಾರ 3
--------------
ಹೆನ್ನೆರಂಗದಾಸರು
ಇಂದು ವನಜದಳಾಂಬಕ ದೊರೆಯ ಪ. ಕನಸಿನಲೆ ಕಂಡೆನು ಮನಸಿಜನಯ್ಯನ ದನುಜಸಂಕುಲವನೆಲ್ಲವ ಕ್ಷಣದಿಸವರಿದ ಕಡುಗಲಿರಾಮನ ಅ.ಪ. ವರ ರನ್ನಹಾರ ಕಿರೀಟ ಕೋಟಿತರಣಿಸನ್ನಿಭಸಂಕಾಶ ಕೌಸ್ತುಭ ಶ್ರೀವತ್ಸ ಲಾಂಚಿತವಕ್ಷ | ಕೊರಳೊಳು ಧರಿಸಿರ್ಪ ವರರತ್ನ ಹಾರಂಗಳ್ | ತರುಣಿ ಶ್ರೀ ತುಳಸೀ ವನಮಾಲೆಯಿಂದೊಲಿಯಲ್ | ಪರಮ ಮಂಗಳಮೂರ್ತಿವರದ ಹಸ್ತವನೆತ್ತಿ | ಶರಣಜನ ಮೋಹಿಪ ದುರುಳ ರಕ್ಕಸರ ಬೇರಸವರಿದ ಪಾರಕೀರ್ತಿ | ಅರಿತೆನಾ ತರಳ ಪ್ರಹ್ಲಾದನಂ ಪೊರೆದ ಕರುಣಾಮೂರ್ತಿ 1 ವೇದಪಾರಾಯಣಗೈವ ವರದ್ವಾದಶನಾಮದಿ ಮೆರೆವ ಕೀರ್ತನದಿಂ ಮೈಮರೆವ | ಸಾಧುಸಜ್ಜನವೃಂದ ಭಕ್ತಿಭಾವದಿ ಕೈಕಟ್ಟಿ | ಶ್ರೀಧರಾಚ್ಯುತ ಪಾದ ಸಮ್ಮುಖದಿ ನಿಂದು ಭಜಿಪರ ಪರಮಾದರದೆನೋಡಿ | ಶ್ರೀದೇವಿ ಕೆಲದೋಳ್ ನೆಲಸಿರಲ್ ಮನದಿ ಸಂತಸವು ಮೂಡಿ | ಸಾದರದಿ ಕರೆದಾದರಿಸಿ ಕಾಂಕ್ಷಿತಾರ್ಥವನೀಡಿ | ಮೋದಗೊಳ್ಳುತಿಹ ಶ್ರೀಧರನ ಕಂಡು ಮೈಮರೆದೆನೇನಿವನ ನೋಡಿ 2 ಕನಕಖಚಿತ ರತ್ನಮಂಟಪದ ಮಧ್ಯೆ | ಮಿನುಗುವ ಮಣಿಪೀಠದಿ ವೈದೇಹಿ | ವನಜಾಕ್ಷಿ ಕುಳಿತಿರಲು ಕೆಲದೊಳ್ ಮರುತಾತ್ಮಜ | [ನುನಮಿಸ] (ರ)ಲು ಪರಮಸಂಭ್ರಮದಿ ಸೋದರರು ಸಂಸೇವಿಸೆ | [ವÀನ] ತರಣಿಸುತ ಸಪರಿವಾರ ಸಂಭ್ರಮಿಸೆ, ಶರಣ ವಿಭೀಷ | ಣನು ಜಯಘೋಷವೆಬ್ಬಿಸೆ ವರವಸಿಷ್ಟಾದೈಖಿಲ | ಮುನಿವರ ರಾಶೀರ್ವಚಿಸೆ ಸರಸವಚನವೆರಸಿ ರಘುವರ ವರನೆ ತಾನೆಂದು ತೋರೆ 3
--------------
ನಂಜನಗೂಡು ತಿರುಮಲಾಂಬಾ
ಇಂದು ಶಿವಯೋಗಾ ಶಿವಯೋಗಾ | ಮುಂದಿಲ್ಲವು ತನು ಭೋಗಾ ಪ ಕೋಟಿ ತೀರ್ಥದಲಿ ಮುಣುಗಿ ಬಂದು | ಕೀಟಕ ಜನರರಿಯರು ಎಂದೆಂದೂ 1 ಎಲ್ಲಿಹುದರಿದರೆ ಗೋಕರ್ಣ | ಇಲ್ಲದಾಯ್ತು ದೇಹದ ವರ್ಣ 2 ಭವತಾರಕನ ಭಜಕನು ಬಲ್ಲಾ | ಭವದೊಳು ಇದ್ದರೂ ಭಯ ಅವಗಿಲ್ಲಾ 3
--------------
ಭಾವತರಕರು
ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು ಇಂದು ಕಂದು ಗೊರಳನೆ 1 ಕಾಲ ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು ಕಾಯದೊಳಗೆ ಮುಸುಕಲು ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ 2 ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ ಬನ್ನ ಬಟ್ಟು ಸಾಯುತ ಭವದಶರಧಿ ಬೇಗೆಯನ್ನು ಈಸಲಾರೆನೋ 3 ಸಿಂಧು ತೆರೆಯೊಳು ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ 4 ದುರಿತ ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ ಕರುಣದಿಂದಲಿ ನಿರುತಸಲಹೋ ಇಕ್ಕೆರಿ ಅಘೋರೇಶಲಿಂಗನೆ 5
--------------
ಕವಿ ಪರಮದೇವದಾಸರು
ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುದಿನ ಶುಭದಿವಸ ನೋಡಿ ಬಂದು ಕೂಡಿದ ಸದ್ಗುರು ದಯಮಾಡಿ ಧ್ರುವ ಮುನ್ನ ಮಾಡಿದ ಸುಪಣ್ಯ ಒದಗಿತು ಭಿನ್ನವಿಲ್ಲದೆ ಸುಚಿನ್ಹ ಹೊಳೆಯಿತು ಧನ್ಯಗೈಸುವ ಸುಫಲದೋರಿತು ಎನ್ನ ಜನುಮ ಸಾಫಲ್ಯವಾಯಿತು 1 ಸ್ವಾಮಿ ಕಂಡೆ ಕಣ್ಣಿನೊಳಂತರಂಗ ಬ್ರಹ್ಮಾನಂದ ಭಾಸುತದೆ ಸರ್ವಾಂಗ ಸಮಾರಂಭದೋರುತದೆ ಸುಸಂಗ ಒಮ್ಮಿಂದೊಮ್ಮೆ ಬಂದ ನೋಡಿ ಶ್ರೀರಂಗ 2 ಗುಹ್ಯ ಒಡೆದು ಹೇಳಲು ಸುವಿಚಾರ ದಯವಿಟ್ಟು ಬಂದ ನೋಡಿದರ ಇಹಪರಕೆ ಸದ್ಗುರು ಸಹಕಾರ ಮಹಿಪತಿಗೆ ಮಾಡಿದ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಹೊನ್ನು ಹೂವುಗಳ ತಾರತಮ್ಯ ಪ ಇದು ಬಾಹ್ಯ ಅದು ಅಂತರಂಗಿಗೆ ರಮ್ಯ ಅ.ಪ ಹೊನ್ನಿನಿಂದಾಗುವುದು ಹೂವಿನಿಂದಾಗುವುದು ಹೊನ್ನು ಹೂವೆರಡಯ್ಯ ಬಣ್ಣ ಒಂದೇ ಹೊನ್ನು ಹೂವೆರಡಕ್ಕು ಬಣ್ಣ ಒಂದಾಗವೋ ನಿನ್ನ ಕೃಪೆಯೆಂಬ ರೇಕುಗಳಾಗಬೇಕೋ 1 ಹೊನ್ನು ಭೂಲೋಕಕ್ಕೆ ಹೂವು ಪರಲೋಕಕ್ಕೆ ಹೊನ್ನಿನಾ ಹೂವುಗಳು ಇಹಪರಕೆ ದಾನ ಹೊನ್ನುಳ್ಳವರಿಗೆಲ್ಲ ಹೂ ಹೊನ್ನುವಿಲ್ಲ ತಾನಿಲ್ಲ ಹೊನ್ನ ಹೊರುವುದಸಾಧ್ಯ 2 ಹೊನ್ನ ಕಾವುದಸಾಧ್ಯ | ಹೊನ್ನುಳ್ಳ ನರರಿಗೆ [ಮ] ಗಳಿಲ್ಲ ಹೊನ್ನುಳ್ಳ ಮನುಜ ಪಾತಕಗಳನು ಕಲಿಯುವ ಹೊನ್ನಿಲ್ಲದಾತರಿಗೆ ಹೂವೊಂದು ದೊರಕಿದೊಡೆ ಅನ್ನ ನಿದ್ರಾ ಪಾನ ಸೌಖ್ಯಂಗಳುಂಟಯ್ಯ 3 [ಹೊನ್ನುಳ್ಳವಸದಾ ಹೊನ್ನಿ ನೊಡನೆಕಲ್ಳ್ವೆ] ಹೊನ್ನಿಲ್ಲದಾತ ಶ್ರೀರಾಮಕೃಷ್ಣರ ಕಲೆವ ಹೊನ್ನಿಂದ ಬೆಣ್ಣೆತಾಂ ಸುಣ್ಣವೆನಿಪುದು ಜಗದಿ ಹೊನ್ನಿಲ್ಲದಾತಂಗೆ ಸುಣ್ಣವೇ ಬೆಣ್ಣೆ 4 ಹೊನ್ನಕೇಳನು ನಮ್ಮ ಮಾಂಗಿರಿಪುರವಾಸ ಹೊನ್ನಿಂಗೆ ಬದಲು ಭಕ್ತಿಯಹೂವ ಕೇಳ್ವುದು ಹೊನ್ನ ದಾನವಮಾಡಿ ಹೂವ ಹರಿಗರ್ಪಿಸಿರಿ ಇನ್ನಾವ ವರಗಳನ್ನು ಬೇಡ ಬೇಡಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದು ಹೊಳೆವುತದೆ ಸುಚಿನ್ಹಬೋಧ ತಂದಿ ಕಂಡೆವೇನೊ ಸದ್ಗುರು ಶ್ರೀಪಾದ ಧ್ರುವ ಪ್ರಾಣದೊಡಿಯ ಬಾವ್ಹಾಂಗನೇನೊ ಪೂರ್ಣಕ್ಷಣಕೊಮ್ಮಾಗುತದೆ ಸುಶಕುನ ಕಣ್ಹುಬ್ಬಾರುತದೆ ಬಲದೆನ್ನ ಚೆನ್ನಾಗ್ಯಾಗಮ್ಮ ತಾನೇನೊ ಸುಪ್ರಸನ್ನ 1 ತೋಳಭುಜಹಾರುತದೆ ಬಲುಬಹಳ ವ್ಯಾಳ್ಯಕೊದಗಿಬಂದೆನೇನೊ ದಯಾಳ ಸುಳವುದೋರುತದೆ ನಿಶ್ಚಳ ಸುಳಿದೊಮ್ಮೆ ಬಂದನೇನೊ ಕೃಪಾಳ 2 ಬುದ್ಧಿ ಮನಸಿಗಾಗುತದೆ ವಿಕಾಸ ಸಿದ್ಧಿಸೋರುವ್ಹಾಗಾದೆ ಪ್ರಕಾಶ ಸದ್ಯ ಹೃದಯವಾಗುತದೆ ಉಲ್ಹಾಸ ಸಾಧ್ಯವಾಗುವ್ಹಾಂಗ್ಹಾನೇನೊ ತಾ ಸರ್ವೇಶ 3 ಪ್ರೇಮ ಉಕ್ಕಿಬರುದೆನ್ನೊಳಗೆ ಸ್ವಾಮಿದರುಷಣಾದೀತೇನೊ ತಾ ಈಗ ರೋಮರೋಮವು ಬಿಡದೆ ಎನಗೆ ಬ್ರಹ್ಮಾನಂದ ಭಾಸುತದೇನೊ ಬ್ಯಾಗ 4 ಖೂನದೋರಿಬರುತದೆನಗೊಂದು ಭಾನುಕೋಟಿ ತೇಜ ತಾ ಬಾವ್ಹಾಂಗಿಂದು ದೀನ ಮಹಿಪತಿಗುರು ಕೃಪಾಸಿಂಧುಮನೋಹರ ಮಾಡುವ್ಹಾಂಗ್ಹಾನೆ ಬಂದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು