ಒಟ್ಟು 428 ಕಡೆಗಳಲ್ಲಿ , 76 ದಾಸರು , 403 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1 ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2 ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3 ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4 ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5
--------------
ವೆಂಕಟೇಶವಿಟ್ಠಲ
ಆತ್ಮಶೋಧನೆ ಪ್ರಧಾನ ಮಾಡೂ ಇಭಗಿರಿವಾಸ ಪ. ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ 1 ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ಶಕ್ತ ನೀನಿರುತಿರೆ ಮತ್ತಾರ ಬೇಡಲಿ 2 ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ 3 ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ 4 ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ 5
--------------
ಅಂಬಾಬಾಯಿ
ಆದರೇನಾಯಿತು ಹರಿ ಎನ್ನ ಪೊರೆಯಾ ಈ ಧರೆಯೊಳಾರು ಮಾಡದ ದೋಷ ನಾ ಮಾಡಲಿಲ್ಲಾ ಪ ತಾರಾಪತಿಯಂತೆ ಗುರುದ್ರೋಹ ಮಾಡಿದವನಲ್ಲ ವಾರಿಜೋದ್ಬವನಂತೆ ತಪ್ಪಲಿಲ್ಲಾ ಮಾರ ಮಹಿಮನಂತೆ ನಾ ಮಹಿಮನೆಂದು ಹೇಳಲಿಲ್ಲ ಬಾರಿಬಾರಿಗು ನಿನ್ನ ಭಜಿಸುವದೊಂದೆ 1 ತಂದೆ ಮಾತನು ಕೇಳಿ ತಾಯಿ ದ್ರೋಹ ಮಾಡಲಿಲ್ಲ ಬಂಧು ಬಳಗ ದ್ವೇಷ ಮಾಡಿ ಬಾಧಿಸಲಿಲ್ಲ ಅಂಡಜಾಮಿಳನಂತೆ ಅತಿದ್ರೋಹ ಮಾಡಲಿಲ್ಲ ಚಂದದಿಂದಲಿ ನಿಮ್ಮ ಸ್ಮರಿಸುವದೊಂದೆ 2 ಅತಿ ಘಂಟಾಕರ್ಣನಂತೆ ಕರ್ಣಘಂಟೆ ಶಬ್ಧವಿಲ್ಲ ಹಿತದಿ --------ಬ್ರಹ್ಮತ್ಯನಿಲ್ಲ ಸತತ ನೀನೆ ಎನಗೆ ಗತಿಯೆಂದು ಇರುವುದೊಂದೆವಿತರಣಾ ಕೊಂಡರಿಯೆ ವೀರ 'ಹೊನ್ನವಿಠಲಾ’ 3
--------------
ಹೆನ್ನೆರಂಗದಾಸರು
ಆರಗೊಡವೆ ನಮಗಿನ್ಯಾಕೊ ಹರಿ ಅ ಪಾರ ಮಹಿಮನ ದಯವೊಂದೆ ಸಾಕೊ ಪ ಮಾರಿಗೀರಾಗಲಿ ದೂರಿ ಸಕಲರೆನ್ನ ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ ಜಗಜನ ಕಂಡಂತೆ ಬೊಗಳಲಿ ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ ನಿಗಮಾಗಮನುತ ಜಗಜೀವೇಶನ ಸೊಗಸಿನ ಕೃಪೆಯೊಂದೆ ನಮಗಿರಲಿ 1 ದುರುಳ ಕೃತ್ತಿಮನೆಂದು ಜರಿಯಲಿ ಜರಿಜರಿದು ಮರೆದ್ಹೋಗಲಿ ಚರಣದಂತಿ ಪರಮ ಪಾವನಂಘ್ರಿ ಕರುಣಾಮೃತವೊಂದೆ ನಮಗಿರಲಿ 2 ಕ್ಷೇಮ ತುಸು ಕಾಣದಳಿದ್ಹೋಗಲಿ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಧ್ಯಾನವೊಂದೇ ನಮಗಿರಲಿ 3
--------------
ರಾಮದಾಸರು
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ | ಸಾರು ನೀನು ಎನಗೆ ಸುಮ್ಮನ್ಯಾತÀಕೆ ಯಿದ್ದೀ ಪ ನೀರೊಳು ಮುಣಗೆ ವೇದವ ತಂದಾತನೊ | ಭಾರವನು ಪೊತ್ತು ಸುರರ ಕಾಯಿದಾತನೊ | ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ | ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1 ಗಗನಕೆ ಬೆಳದು ಸುರ ನದಿಯ ಪಡೆದಾತನೊ | ಹಗೆಗಳ ಕೊಂದು ಹರುಷಿತನಾದನೊ | ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ | ಮಗನಮಗನ ತಂದ ಮಹಿಮನೊ 2 ಹರಗೆ ಸಾಯಕವಾಗಿ ಪುರ ಉರಹಿದಾತನೊ | ದುರುಳರನ ಕೊಂದ ದುರ್ಲಭದೇವನೊ | ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ - ಶರಣರಿಗೊಲಿದು ಬಂದ ಸರ್ವೋತ್ತಮನೊ 3
--------------
ವಿಜಯದಾಸ
ಆರಾಧನೆ ಪರಮಾನಂದ ಪ ತಾರಾನಾಥ ಕುಲೋದ್ಭವ ಕೃಷ್ಣನ ಅ.ಪ ಘೋರವು ಈ ಸಂಸಾರವೆನ್ನುವುದು ದೂರಿನ ನುಡಿಯಿದು ಬಾಳುವಗೆ ನೂರು ವರುಷಗಳ ಮೀರಿ ಜೀವಿಸಲು ಕೋರಿಕೆ ಬರುವುದು ಧೀರ ಜನರಿಗೆ 1 ನಿರ್ಮಲ ದೇಹವು ನಿರ್ಮಲ ಹೃದಯವು ನಿರ್ಮಲ ನಡೆನುಡಿ ಕರ್ಮಗಳು ಮರ್ಮಜ್ಞರ ಮಾರ್ಗಗಳಲಿ ಸ್ವೋಚಿತ ಧರ್ಮಗಳಲಿ ವಿಶ್ವಾಸವಿರುವವರಿಗೆ 2 ಅನ್ನವಿರುವವರಿಗೆ ತಿನ್ನಲಾಗದು ತಿನ್ನಬಲ್ಲವರಿಗೆ ಅನ್ನವು ಸಿಗದು ಘನ್ನ ಮಹಿಮನ ಪ್ರಸನ್ನತೆಯಿಂದಲಿ ಅನ್ನ ಪಡೆದು ತಿನ್ನಲು ಬಲ್ಲವರಿಗೆ 3
--------------
ವಿದ್ಯಾಪ್ರಸನ್ನತೀರ್ಥರು
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1 ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2 ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3 ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4 ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5
--------------
ಕನಕದಾಸ
ಆವನ ಭಯ ತನಭಾವದಿ ಗುರುಪದ ಸೇವಕನಾದÀವಗೆ ಪ ಕೋವಿದ ಕುಲ ಸಂಭಾವಿತ ಗುರುವರ ಕಾವನೆನುತ ಮನೋಭಾವದಲಿರುವವಗೆ ಧಾರುಣಿಪತಿ ತನ್ನ ಸೇರದೆ ಪರಿಪರಿ ಗಾರುಮಾಡಿದರೇನೂ ಕ್ರೂರತನದಲಧಿಕಾರಿ ಜನಂಗಳು ದೂರ ನೋಡಲೇನು ನಾರಿ ತನುಜ ಪರಿವಾರದ ಜನರೂ ಮೋರೆಗಾಣದಿರಲೇನೂ ಘೋರ ಭಯ ಪರಿಹಾರಕ ನಮ್ಮ ಧೀರ ಗುರುಪದ ಸೇರಿದ ನರನಿಗೆ 1 ಕಾಮಿತ ಫಲಪ್ರದ ಈ ಮಹಮಹಿಮನ ನೇಮದಿ ಭಜಿಸುವಗೆ ಆಮುಷ್ಮಿಕ ಸುಖ ಪ್ರೇಮದಿ ನೀಡುವ ಕಾಮಧೇನು ನಂಬಿದಗೆ ಧೀಮಂತರ ಮಹÀಸ್ತೋಮದಿ ನಮಿತನ ನಾಮವ ಜಪಿಸುವಗೆ ಈ ಮಹ ಸಾರ್ವಭೌಮನ ಪದಯುಗ ತಾಮರಸವೆ ಹೃದ್ಯೋಮದಿ ನೆನೆವಗೆ 2 ಭೂತಲ ಮಧ್ಯದಿ ಖ್ಯಾತಿಯ ಪಡೆದ್ಯತಿ ನಾಥನ ಸ್ಮರಿಸುವಗೆ ಭೂತ ಪ್ರೇತಭಯ ಘಾತಿಸಿ ನಿಜಸುಖ ದಾತನ ಮೊರೆಪೊಕ್ಕವಗೆ ಕಾತರ ಪಡುವ ಅನಾಥsÀರ ಪೊರೆವನ ದೂತನಾದ ನರಗೆ ದಾತ ಗುರುಜಗನ್ನಾಥ ವಿಠಲನ ಪ್ರೀತಿಯಪಡೆದ್ಯತಿನಾಥನ ಭಜಿಪಗೆ 3
--------------
ಗುರುಜಗನ್ನಾಥದಾಸರು
ಇದನೆ ಪಾಲಿಸು ಜನ್ಮ ಜನ್ಮಗಳಲಿ ಪ ಮಧುಸೂದನನೆ ನಿನ್ನ ಸ್ಮರಣೆ ದಾಸರ ಸಂಗ ಅ ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ ಮನ್ಯುಮೋಹಾಸಕ್ತಿ ಕಾಮಲೋಭಾ ನಿನ್ನಾಧೀನವು ಎನ್ನದಲ್ಲವೆಂದಿಗು ಪ್ರಕೃತಿ ಜನ್ಮ ಗುಣಕಾರ್ಯವೆಂಬುವ ಜ್ಞಾನವೇ ಸತತ 1 ಗುಣಕರ್ಮ ಕಾಲಗಳ ಮನಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನ ಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ ಜನವಿಲ್ಲದಲೆ ಮಾಡಿ ಜನರ ಮೋಹಿಪಿಯೆಂಬೋ 2 ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವ ಜಗನ್ನಾಥ ವಿಠ್ಠಲನೆ ಭಕ್ತರ ಪ್ರ ಯಾಸವಿಲ್ಲದೆ ಕಾಯ್ವಿಯೆಂಬ ಸ್ಮರಣೆ ನಿರುತ 3
--------------
ಜಗನ್ನಾಥದಾಸರು
ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ 1 ಮರೆಯಬೇಡವೊ ಸಿರಿಯ ಅರಸನೆ ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ 2 ರಂಗ ರಮಣನೆ ಭುಜಂಗಶಯನನೆ ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ 3 ಮಾರಜನಕನೆ ಉದಾರಚರಿತನೆ ಭಾರವೇನೊ ದೀನಜನರುದ್ಧಾರ ಮಾಡುವುದು 4 ನಾಮಗಿರೀಶನೆ ನಿಸ್ಸೀಮ ಮಹಿಮನೆ ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ 5
--------------
ವಿದ್ಯಾರತ್ನಾಕರತೀರ್ಥರು
ಇಂದು ನೋಡಿದೆ ನಂದಕರ ಯೋ- ಗೀಂದ್ರ ವಂದಿತ ಚರಣನಾ ಪ ವಂದನೀಯ ಶುಭೋರು ಗುಣ ಗಣ ಸಾಂದ್ರಗುರುರಾಘವೇಂದ್ರನಾ ಅ.ಪ ವೇದತತಿ ಶತಮೋದಗಿತ್ತ(ನ) - ಆದಿ ಮತ್ಸ್ಯನ ತೆರದಲಿ ವೇದವಾದವ ಶೋಧಮಾಡಿ ಮೇದಿನೀಸುರಗಿತ್ತನಾ 1 ಕಮಠರೂಪದಲಮರ - ತತಿಗೆ ಅಮೃತ ನೀಡಿದ - ತೆರದಲಿ ಸ್ವಮತ ಸುಧೆಯನು ಪ್ರಮಿತಗಿತ್ತಿಹ ಅಮಿತ ಸುಮಹಾಮಹಿಮನ 2 ಧರಣಿಮಂಡಲ ಧುರುದಿ ದಾಡಿಲಿ ಧರಿಸಿ ತಂದನ ತೆರದಲಿ ಧರಣಿ - ಜನರಿಗೆ ಧರೆಯ ಮೊದಲಾದ ಪರಮಭೀಷ್ಟೆಯನಿತ್ತು ಪೊರೆವನ 3 ತರುಳಪಾಲನ ತೆರದಲಿ ದುರಿತರಾಶಿಯ ತರಿದು ತನ್ನಯ ಶರಣಜನಪರಿಪಾಲನ 4 ಬಲಿಯ ಯಙ್ಞದÀ ಸ್ಥಳದಿ ಭೂಮಿಯ ನಳೆದರೂಪನÀತೆರದಲಿ ಖಳರ ವಂಚಕÀ ತನ್ನ ತಿಳಿವಗೆ ಸುಲಭದಿಂದಲಿ ಒಲಿವನ 5 ಕೆಟ್ಟರೋಗವು ಶ್ರೇಷ್ಠಭೂತದ ಅಟ್ಟುಳಿಯನೆ ಕಳೆವನ 6 ಜನಕನಾಜ್ಞದಿ ವನವ ಚರಿಸಿದ ಇನಕುಲೇಶನ ತೆರದಲಿ ಜನರಿಗೀಪ್ಸಿತ ತನಯ ಮೊದಲಾದ ಮನದಪೇಕ್ಷೆಯ ನೀಡೊನ 7 ಕನಲಿ ದ್ರೌಪದಿ ನೆನೆಸಲಾಕೆಯ ಕ್ಷಣಕೆ ಬಂದನ ತೆರದಲಿ ಮನದಿ ತನ್ನನು ನೆನೆವ ಜನರನು ಜನುಮ ಜನುಮದಿ ಪೊರೆವನ 8 ಮುದ್ದು ಸತಿಯರ ಬುದ್ಧಿ ಕೆಡಿಸಿ(ದ) ಗೆದ್ದು - ಬಂದನ ತೆರದಲಿ ಮದ್ದು ಮತಿಯನು ತಿದ್ದಿ ಭಕುತಗೆ ಶುದ್ಧ ಙÁ್ಞನವ ನೀಡೊನ 9 ಕಂಟಕ ಕಲಿಯವೈರಿ ಕಲಿಕಿರೂಪನ ತೆರದಲಿ ಹುಳುಕು ಮನವನು ಕಳೆದು ತನ್ನಲಿ ಹೊಳೆವ ಮನವನು ಕೊಡುವನಾ 10 ನೀತ ಗುರುಜಗನ್ನಾಥ ವಿಠಲ ಭೂತಳಕ್ಕಧಿನಾಥನು ಆತನಂತ್ಯತಿನಾಥ ಜಗಕೆ ಪ್ರೀತಿಶುಭಫಲದಾತನ 11
--------------
ಗುರುಜಗನ್ನಾಥದಾಸರು
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಪ ಮುಂದಕೆ ನಿಮ್ಮ ಮನೆಗೆ ಬಾರನಮ್ಮಅ ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನುಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ 1 ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ 2 ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ 3
--------------
ಕನಕದಾಸ
ಇನ್ನೇನ ಮಾಡುವೆ ಇನ್ನಾರ ಬೇಡುವೆ ಪ್ರ-ಸನ್ನ ಚೆನ್ನಕೇಶವ ಎನ್ನ ಬಿನ್ನಪವಮನ್ನಿಸಿ ದಿನದಿನದಲ್ಲಿನಿನ್ನನರ್ಚಿಪಂತೆ ಮಾಡು ಪ. ಮೊಲೆಯುಂಬ ಹಸುಗೂಸು ಮಾತನಾಡಿ ತನ್ನಮನದಭೀಷ್ಟವ ಪೇಳ್ವುದೆಚೀರಿ ಅಳುವದೈಸೆ ಅದನರಿತು ಅದರ ತಾಯಿಅಪ್ಪ್ಪಿಮುದ್ದಾಡಿಸುತ್ತಬಳಲಿಕೆÀ ಪೋಪಂತೆ ನಸುಬಿಸಿಪಾಲನುಬಾಯೆಂದು ಕುಡಿಸುವಳುಸಿರಿಲಲನೆಯರಸ ನಮ್ಮ ಈ ಪರಿಯಲಿನೀನು ಲಾಲಿಸಿ ಸಲಹಬೇಕು 1 ಕರಿ ಕರೆಯಲುಪೊರೆದಂತೆ ಪೊರೆಯೆನ್ನನುಮಕರಿಯ ಕೊಂದು ಪೊರೆದಂತೆ2 ಹುಲಿಯ ಕಂಡೋಡುವ ಹುಲ್ಲೆಯ ಮರಿಯಂತೆಭವದ ಬೇಗೆಯಲಿ ಬೆಂದೆ ವಿಘಳಿಗೆ ಘಳಿಗೆಯೊಳು ಅಲಸದೆ ಪಾಪವಗÀಳಿಸುವ ಗÀಸಣೆಗಂಜೆತುಳಸಿಯ ದಳದಿಂದ ಸಂತುಷ್ಟನಹ ನಿನ್ನಒಲಿಸುವ ಭಾಗ್ಯದಲ್ಲೆ ಈ ಇಳೆಗೆ ಭಾರವಾದೆಇಹಪರ ದುಃಖದ ಹಂಬಲಿಕೆ ಎಳ್ಳಷ್ಟು ಇಲ್ಲಸನ್ಮಾರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ ಅಪವರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ3 ಹೆಂಡಿರ ಸಾಕಲಾರದೆ ಹೆಣ್ಣು ಮಕ್ಕಳುಗಳಕಂಡ ಕಂಡವಗೆರ್À ಮಾರಿ ಜಗಭಂಡನೆನಿಸಿಕೊಂಡೆ ಬಡತನ ಹಿಂಗದೆಕೊಂಡೆಯಗಳ ಪೇಳುವೆಉಂಡುಡುವರ ಕಂಡು ಮತ್ಸರ ಮಾಡುವೆತಂಡ ತಂಡÀದವರಿಂದ ಕಡಗೊಂಡರ್ಧನ ಕೊಡದೆ ಕಲ್ಲಪೊರುವೆನು ಕೋ-ದಂಡವೇರಿಸಿ ಕೊಂಡೆನು 4 ದಂಡವಿಡಿದು ವೇಷಧಾರಿಯೆಂಬುದ ಕೈಕೊಂಡು ರಾವಣನಂತೆ ಚರಿಸಿ ಎನ್ನಮಂಡೆ ಬೋಳು ಮಾಡಿ-ಕೊಂಡು ಇಳೆಯೊಳು ಪರಸತಿಯರ ಮೋಹಿಪೆಪುಂಡರೀಕಾಕ್ಷ ಈ ಪರಿಯ ಕ್ಲೇಶಗಳನುಉಂಡರೆÀ ವೈರಾಗ್ಯ ಬಾರದು ಎಲೆಪಾಂಡವಪ್ರಿಯ ಇನ್ನಾರಿ ಗುಸುರುವೆನು ಉ-ದ್ದಂಡಭಕ್ತರ ಸೇರಿಸೊ ಕೈ-ಕೊಂಡು ನಿನ್ನುದ್ದಂಡಭಕ್ತರ ಸೇರಿಸೊ5 ತಪ್ಪಿದರೆ ತಾಯಿ ತನ್ನ ಮಕ್ಕಳುಗಳತಕ್ಕೈಸಿಕೊಂಬವೊಲು ಕಾಮ-ನಪ್ಪ ಎನ್ನಪ್ಪ ಒಂದು ಕೊರತೆಯ ಕಾಣದೆಕರುಣದಿ ಕಾಯಬೇಕುಅಪಾರಮಹಿಮ ನೀನಾಶ್ರಿತ ಜನರನುಅತ್ತ ಹೋಗೆನ್ನೆ ಗಡ ನೀನ-ಪ್ರತಿಮಹಿಮನೆನಿಸಿಕೊಂಡೆ ಅದರಿಂದಅಮರರ ಶಿರೋರನ್ನವೆ ಅರ್ಜುನಸಖಅಮರರ ಶಿರೋರನ್ನವೆ 6 ಸರಿಮಿಗಿಲಿಲ್ಲದ ಸರ್ವೇಶ ಹರಿಯೆಂದುಸಿರಿಹಯವದನರಾಯ ನಿನ್ನಪರಮ ಮುನಿಗಳೆಲ್ಲಪರೀಕ್ಷೆಮಾಡಿ ನೋಡಿಮುನ್ನ ನಿರ್ಣೈಸಿದರುಹಿರಿಯರ ಮಾತನು ಪಾಟಿಮಾಡದನಗೋತ್ರ ಸೂತ್ರಗಳು ಪೋಕುಪ್ರವರ ಗೋತ್ರ ಋಷಿಮೂಲಯೆಂದು ಪ್ರಸಿದ್ಧ ಇನ್ನಾರು ನಿನ್ನಂಥವರು 7
--------------
ವಾದಿರಾಜ
ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ ಪರಿಯಾಗುವ ದೇವನ ಧ್ರುವ ಸಗುಣಲೀಹ್ಯನಾ ಭಕುತಿಗೊಲಿವನಾ ಸುಗಮದಿಂದ ನಿಗಮನುಳುಹಿ ನಗವ ನೆಗೆದನಾ 1 ಸಿರಿಯ ಲೋಲನಾ ವರಕೃಪಾಲನಾ ಧರಿಯನುಳುಹಿ ತರಳಗೊಲಿದು ಪ್ರಿಯವಾದನಾ2 ವರವ ಬಲಿಗೆ ಇತ್ತು ದೋರಿದ ಭಾರ್ಗವರೂಪನಾ 3 ಪರಮ ಆತ್ಮನಾ ಹರಿಸರ್ವೋತ್ತಮನಾ ಸುರರ ನೆರೆಯ ಬಿಡಿಸಿ ಹೊರಟ ಪಾಂಡವಪ್ರಿಯನಾ 4 ಹೊಳೆವ ತೇಜನಾ ಮೂಲೋಕ ಪಾವನಾ ಹಳಿದು ವ್ರತವ ನೋಡಿ ಹಯವನೇರಿ ಸುಳಿದನಾ 5 ಘನ ಮಹಿಮನಾ ದಯಾ ನಿಸ್ಸೀಮನಾ ದೀನ ಮಹಿಪತಿಸ್ವಾಮಿ ಭಾನುಕೋಟೆ ದೀಪ್ತನಾ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಷ್ಟಾದರು ದಯಮಾಡು ಪಂಡರಿನಾಥ ಪಾದ ಮುಟ್ಟಿ ಪ್ರಾರ್ಥಿಪೆನು ಪ ದಾನಧರ್ಮವು ಮಾಡಬೇಕೆಂದು ಮನವಿರೆ ದಾನವಾಂತಕ ಕೃಷ್ಣ ಧನವಿಲ್ಲವಯ್ಯ ಗಾನಲೋಲನೆ ಭಕ್ತಪಾಲ ನಿನ್ನಯ ಪಾದ ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ 1 ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ- ಮೂರ್ತಿ ಸೇವಿಸಲಸಮರ್ಥನಾಗಿರುವೆ ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ 2 ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ ಜ್ಞಾನಿಗಳರಸ ಭಕ್ತರ ಸುರಧೇನು ಅಜ್ಞಾನಿಗಳಳಿದು ಸುಜ್ಞಾನಜನರ ಸಂಘ 3 ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ ಖಗವಾಹನ ಕಂಸಾರಿಯೆ ದೇವ ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ ಪಾದಗಳು ಸೇವಿಪ ಪರಮಲಾಭವನು 4 ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ 5
--------------
ನಿಡಗುರುಕಿ ಜೀವೂಬಾಯಿ