ಒಟ್ಟು 134 ಕಡೆಗಳಲ್ಲಿ , 34 ದಾಸರು , 126 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋಕೆ ಮಾಡೆನ್ನ ನಮ್ಮಯ್ಯ ರಂಗ ಜೋಕೆ ಮಾಡೆನ್ನ ಪ ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ ಜೋಕಿನೊಳು ಇರಿಸು ದೇವ ಅ.ಪ ನಿಗಮಗೋಚರನೆ ಜಗದಯ್ಯ ವಿಜಯ್ಯ ಖಗಪತ್ವಾಹನನೆ ಅಗಧರನೆ ಈರೇಳು ಜಗವ ರಕ್ಷಿಪನೆ ರಘುಕುಲಾರ್ಯನೆ ಮಗನಬಗೆ ಕೇಳು ಕರುಣದಿಂದಲಿ ನಿಗಮಾತೀತನೆ ಮುಗಿವೆ ಕರಮಂ ಹಗಲು ಇರಲು ಸುಗುಣಿ ಸಂತರ ಸಂಗಸುಖ ಎನಗಗಲಿಸದೆ ಹರಿ 1 ಮೆರೆವವೇದವ ವರಸ್ಮøತಿಶಾಸ್ತ್ರವ ಕರುಣಿಸೈ ದೇವ ಪರಿಹರಿಸು ಎನ್ನ ಮರವೆ ಮಾಯವ ವರಭಕ್ತ ಜೀವ ಮರವೆ ಮಾಯದಿ ಸಿರಿಯವರ ತವಪರಮ ಚರಿತವ ಅರಿವು ನಿಲ್ಲಿಸಿ ಕರುಣದಿಂ ತವ ಚರಣಕುರುಹನು ಕರುಣಿಸಭವ 2 ದೃಢದಿ ಬೇಡುವೆನು ತಡಿಯೆನೀಭವ ಎಡರುತೊಡರನು ಗಡನೆ ಬಿಡಿಸೆನ್ನ ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು ನುಡಿಸು ಎನ್ನ ಮೆಲ್ನುಡಿಯೊಳನುದಿನ ಬಿಡದೆ ತವ ಕೊಡು ಗೂಢಮಂತ್ರವ ಬಿಡದೆ ಕೊಡು ನಿನ್ನಡಿಯ ದಾಸರ ಸಡಗರದ್ಯನ್ನೊಡೆಯ ಶ್ರೀರಾಮ 3
--------------
ರಾಮದಾಸರು
ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ. ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1 ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2 ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3 ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4 ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5
--------------
ಮೋಹನದಾಸರು
ತಿಳಿಯೋ ಮನವೇ ನಿಜ ಘನವಾ | ಕಳಿಯೋ ಹಮ್ಮಿನ ಅವಗುಣವಾ ಪ ಸದ್ಗುರು ಶರಣವ ನೀ ಬ್ಯಾಗ | ಸದ್ಗುಣದಲಿಹುದು ಜಗದೊಳಗ | ತದ್ಗತ ಬೋಧವರೆದು ಈಗ | ಸದ್ಗತಿ ಕಾಣಿಸುವದು ನಿನಗ 1 ಪಿಡಿಯದೆ ನಾನಾ ಬಯಕೆಯನು | ತಡೆಯದೆ ಬಿಡು ಕುಜನಾಶ್ರಯನು | ಇಡು ಗುರು ಪದ ಭಕುತಿಯನು | ಪಡೆ ದೃಷ್ಟಿಯ ಘನ ಸಮತೆಯನು 2 ಬ್ಯಾರೆ ಬ್ಯಾರೆ ನಗದಾಕಾರಾ | ತೋರಿದರೇನದು ಬಂಗಾರಾ | ಈ ರೀತಿ ಮಾಯದ ವ್ಯವಹಾರಾ | ಈರೇಳು ಜಗ ಚಿನ್ಮಯ ಸಾರಾ 3 ಗೋಡಿಯಿಂದಲಿ ಚಿತ್ರಗಳೆಲ್ಲಾ | ರೂಢಿಸಿ ದೋರಿತು ಜನರೆಲ್ಲಾ | ಆಡಲು ಯರಡಕ ಹೊರತಿಲ್ಲಾÀ | ನೋಡಲಾಯಿತು ತಾನೇಯಲ್ಲಾ 4 ಹಾಲುಕ್ಕಿದ ಸೋರೆಯ ಪರಿಯಾ | ಜ್ಯಾಳಿಸಬ್ಯಾಡಾ ಯುವ ಬರಿಯಾ | ಕೇಳಿಕೋ ಮಹಿಪತಿ ಸುತ ಧೋರಿಯಾ | ಬಾಳು ಗಳೆದು ದುಸ್ತರಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತುಂಬಿ ಬಂದಾಗ) ನಂಬಿದೆನೊ ಸ್ವಾಮಿ ನಂಬಿದೆನೊ ಪ. ಅಂಬುಜಾಕ್ಷ ಸ್ವಪ್ನದಿ ನೀ ತುಂಬಿದಾನಂದ ವಾರ್ತೆಯ ಅ.ಪ. ಈರೇಳು ಲೋಕದ ಜನಕೆ ಮೂರಾವಸ್ಥೆಗಳಲಿ ನೀನೆ ಪ್ರೇರೇಪಿಸುವನೆಂದು ವೇದ ಸಾರವಾಗಿದೆ ನಾರದಾದಿ ಸಕಲ ಮುನಿ ವೀರರೆಲ್ಲ ಸ್ವಪ್ನವು ನಿ- ಸ್ಸಾರವಲ್ಲವೆಂದು ಪೇಳ್ವಾಧಾರದಿಂದ ಭ್ರಮೆಯ ಬಿಟ್ಟು 1 ನಾನು ನನ್ನದೆಂಬ ಬಹು ಹೀನ ಮತಿಯ ಪೇಳ್ವ ನರಗೆ ತಾನಾಗಿ ಬಂದುಸುರಲನುಮಾನಕರವೆಂದು ಶ್ರೀನಿಕೇತನ ನಿನ್ನ ಚರಣ ಮಾನಿಯೆಂದು ಮನ್ನಿಸಿ ಸ್ವಪ್ನಾನುಸರಿಸಿ ಶುಭವ ಪೇಳಿ ದೀನಭಾವ ಕಳೆವಿಯೆಂದು 2 ಇಂದಿರೇಶ ಎನ್ನೊಳಿರುವ ಕುಂದನೊಂದನೆಣಿಸದೆ ಈ ಅಂದದಿಂದಲೆಂದೆಂದಿಗು ತಂದೆ ಕರುಣಿಸು ಸುಂದರಾಂಗ ಶೇಷಗಿರಿ ಮಂದಿರ ನಿನ್ನ ಪಾದಾರ ವಿಂದ ಭಕ್ತಿ ಇತ್ತು ನಿತ್ಯಾನಂದಗೊಳಿಸಿ ಸಲಹೊ ಬೇಗ 3
--------------
ತುಪಾಕಿ ವೆಂಕಟರಮಣಾಚಾರ್ಯ
ತುಂಬಿತು ಬೆಳೆದಿಂಗಳು-ಈ ವನದೊಳುತುಂಬಿತು ಬೆಳೆದಿಂಗಳು ಪ ತುಂಬಿತು ಬೆಳೆದಿಂಗಳೀವನದೊಳಗೆಲ್ಲಅಂಬುಜನಾಥನು ಬಾರ ಕಾಣಕ್ಕ ಅ.ಪ. ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ1 ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿದೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದ ರಂಗ ಬಾರ ಕಾಣಕ್ಕ 2 ಕಾದ ನೀರು ಎಲ್ಲ ಆರಿ ಹೋಗುತಲಿದೆಕಾಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯನು ಕೃಷ್ಣ ಬಾರ ಕಾಣಕ್ಕ3 ಅಡವಿಲಿ ಕೆರೆಕಟ್ಟೆ ಕುಡಿವೋರಿಲ್ಲದೆ ಬತ್ತಿನಡೆವೋರಿಲ್ಲದೆ ದಾರಿ ಹಸಗೆಟ್ಟಿತುಕಾಡಮಲ್ಲಿಗೆ ಹೂವ ಕುಯ್ದು ಮುಡಿವರಿಲ್ಲನೋಡದೆ ಎನ್ನ ಜೀವ ಹಸಗೆಟ್ಟಿತಮ್ಮ 4 ಹಾಸಿದ್ಹಾಸಿಗೆ ಮಂಚ ಹಸಗೆಟ್ಹೋಗುತಿದೆಪೂಸಿದ ಶ್ರೀಗಂಧ ಬೆವರುತಿದೆಲೇಸಾದ ನಮ್ಮೆದೆ ಮಿಂಚೇರುತಲಿದೆವಾಸುದೇವನು ಕೃಷ್ಣ ಬಾರಕಾಣಕ್ಕ 5 ಕಾಯ ಹೊಳವು ಮಾಡಿ ಕುಚವ ಸೋರೆಯಮಾಡಿಮನವೆಂಬ ತಂತಿಯ ಹೂಡಿಕೊಂಡುಎರಡು ಕಂಗಳನ್ನು ಎರಡು ತಾಳವÀ ಮಾಡಿಮೇಳಕೊಪ್ಪುವೆ ರಂಗ ಬಾರ ಕಾಣಕ್ಕ6 ಒಳದೊಡೆ ನಡುಗಿತೆ, ನೆರಿಯು ಹಾರುತಲಿವೆಕಳಕಳಿಸುತಲಿದೆ ಕಳವಳವುಪುಳಕವಾಗುತಲಿದೆ ಕಳೆಯುಗುಂದುತಲಿದೆನಳಿನಾಭನು ಕೃಷ್ಣ ಬಾರ ಕಾಣಕ್ಕ7
--------------
ವ್ಯಾಸರಾಯರು
ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ. ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ 1 ಮೋಕ್ಷÀದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವಾದಿರಾಜವರದನೆ ಬಂದೆ ಹಯವದನನೆ 3
--------------
ವಾದಿರಾಜ
ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ ಗೋಪ್ಯಮ್ಮ ಈರೇಳು ಲೋಕದೊಡೆಯನೊ ದಾರಮ್ಮ ಪ ಪಿಡಿದಿದ್ದ ಕೊಳಲೂದುವ ಬಾಯಲಿ ಬೆಣ್ಣೆ ಕಡಗೋಲ ಪಿಡಿದಿದ್ದ ಬೆಡಗು ನೋಡಮ್ಮ ಬಿಡಿಮುತ್ತಿನ ಉಡಿದಾರವು ಉಡಿಗಂಟೆ ಮುಡಿದ ಮಲ್ಲಿಗೆ ಕುಸುಮಗಳು ನೋಡಮ್ಮ ಕುಡಿಹುಬ್ಬು ಕಡೆಗಣ್ಣನೋಟದ ಚೆಲುವ ತಾ ಹುಡುಗರಂತಾಡುವ ತುಡುಗ ತಾನಮ್ಮ 1 ಕಮಲ ನಕ್ಷತ್ರದ ಪತಿಯಂತೆ ಇಪ್ಪೊ ವಜ್ರದ ಪದಕಗಳ ನೋಡಮ್ಮ ಅರ್ಕನಂತಿರಲತಿ ಕೋಮಲಪಾದಕೆ ಶುಕ್ಲಗೆ ಮಿಗಿಲಾದ ಗುರು ಕೇಳಮ್ಮ ಕತ್ತಲೊಳಗೆ ಕಳ್ಳತನದಿಂದೋಡಾಡುತ ಕಟ್ಟಿದ ಪಂಜಿನಂತ್ಹೊಳೆವೊ ಕೇಳಮ್ಮ 2 ಕಟ್ಟಿದ ನೆಲವಿನೊಳ್ ಮಕ್ಕಳ ಮಲಗಿಸಿ ಎಷ್ಟು ಘಾತಕÀ ತಾ ಕೈಬಿಟ್ಟ ನೋಡಮ್ಮ ತೊಟ್ಟಿಲೊಳಗೆ ಕೆನೆಮೊಸರಿನ ಚಟ್ಟಿಗೆ ಇಟ್ಟು ತೂಗುತ ಮೆಲ್ಲುವನು ಕೇಳಮ್ಮ ಕಟ್ಟಿದ್ದಾಕಳ ಕಣ್ಣಿ ಬಿಚ್ಚಿ ಮೊಲೆಗೆ ಬಾಯ್ಹಚ್ಚಿ ಕ್ಷೀರವ ಸುರಿದುಂಬುವನಮ್ಮ 3 ತೋಳ ಬಾಪುರಿ ವಂಕಿ ತೋಡ್ಯ ಬಿಂದಲಿ ಚಕ್ರ- ಪಾಣಿಯಲ್ಲೊ ್ಹಳೆವೊ ಮುದ್ರಿಕೆಯ ನೋಡಮ್ಮ ಆಣಿ ಮುತ್ತಿನ ಸರ ಅರಳೆಲೆ ಪದಕವು ಕಾಲ ಕಿಂಕಿಣಿ ನಾದಗಳ ಕೇಳಮ್ಮ ತೋರ ಮುತ್ತುಗಳೋಣಿಯಲುದುರುತ ಒ- ಯ್ಯಾರದೊಲಪಿನ ಚೆದುರ್ಯಾರು ಪೇಳಮ್ಮ4 ಮನ್ಮಥನಿಗೆ ಮಿಗಿಲಾದ ಸ್ವರೂಪಲಾವಣ್ಯನೆ ನೀಲದ ವರ್ಣ ಕೇಳಮ್ಮ ಹುಣ್ಣಿಮೆ ಚಂದ್ರಮನ್ನ ಸೋಲಿಸೋಮುಖ ಇನ್ನು ಇವನÀ ಸೌಂದರ್ಯ ನೋಡಮ್ಮ ಹೆಣ್ಣು ಮಕ್ಕಳ ಸೆರಗನ್ನು ಕೈಯ್ಯಲಿ ಸುತ್ತಿ ಬೆನ್ನು ಬೆನ್ಹತ್ತಿ ತಾ ತಿರುಗುವನಮ್ಮ 5 ಚೀನಿ ಅಂಗಿಯ ಮ್ಯಾಲೆ ಚಿತ್ರದ ನಡುಕಟ್ಟಿ ಜಾರ ಜರದ ಛಾದರವ ನೋಡಮ್ಮ ಸೋಗೆ ನವಿಲು ಗಿಳಿ ಕೋಗಿಲೆ ಸ್ವರದಂತೆ ವೇಣು ಕೊಳಲ ಗಾಯನವ ಕೇಳಮ್ಮ ಮೇಘಮಂಡಲ ತಲೆತಾಕುವ ಹರಿಯದೆ ತಾ ಜಿಗಿದಾಡೋನಂಗಳದಿ ಕೇಳಮ್ಮ 6 ಎಷ್ಟು ಹೇಳಿದರೀ ಮಾತು ಮನಕೆ ನಿಜ ಹುಟ್ಟವಲ್ಲದೇನೀಗ ಬಾರೆ ಗೋಪಮ್ಮ ಬಿಟ್ಟು ಕೆಲಸ ಭೀಮೇಶಕೃಷ್ಣಗೆ ಬುದ್ಧಿ ಎಷ್ಟು ಹೇಳುವಿ ಮುಂದ್ಹೇಳಲೇಕಮ್ಮ ಸಿಟ್ಟು ಮಾಡುವರೇನೆ ಸಿರಿಪತಿ ಆಟ ನಿನ್ನ ದೃಷ್ಟಿಂದ ನೋಡೆ ನಿಜಹುಟ್ಟುವುದಮ್ಮ7
--------------
ಹರಪನಹಳ್ಳಿಭೀಮವ್ವ
ದಾಸರಾಯಾ ಎನ್ನ | ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ ಪ ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ | ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ | ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ1 ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ | ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ | ಡಿಂಗರೊಳುತ್ತುಂಗನೆನಿಸಿಕೊಂಡೆ ದಾಸರಾಯ 2 ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ | ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು |ದಾಸರಾಯಾ | 3 ಚರಿಸಿದೆ ಪುಣ್ಯಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ | ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ | ಪರಿಯಂತ | ದಾಸರಾಯಾ | ಪರಿ ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ 4 ಮುನಿಯು ಉಪೇಂದ್ರರಾಯರು ನಿಮ್ಮ ಚರಿತೆಯ | ದಾಸರಾಯಾಕೇಳಿ ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ | ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು ಶ್ರೀ ನರಸಿಂಹ ಪ್ರತಿಮೆ ಸಾಲಿಗ್ರಾಮ | ದಾಸರಾಯಾ | 5 ಕಿಂಕರನೆನಿಸಿ ಪರಂದರದಾಸರೆ | ದಾಸರಾಯಾ | ಅವರಿಂ ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ | ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ|ಭವ ಪಂಕವ ದಾಟ ಪರೇಶನನೈದಿದೆ | ದಾಸರಾಯಾ 6 ಪರಿಯಂತ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ | ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ ಅನುಭವೋಪಾಸನೆ ಏನು ತಿಳಿಯದು ದಾಸರಾಯಾ 7 ಕಮಲ ಧ್ಯಾನ ದಾಸರಾಯಾ | ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ | ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ 8 ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ |ಪುಟ್ಟಿ | ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ | ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ 9
--------------
ಜಗನ್ನಾಥದಾಸರು
ದೃಷ್ಟಿ ದೋಷವು ತಗಲಿತೆನ್ನ ಕಂದನಿಗೆ ಪ ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲು ಅ.ಪ ಸೇರು ಬೆಣ್ಣೆಯ ತಿಂದು ದೂರು ಕೇಳಿದೆನಿಂದು ಚಾರು ಮುಖಿಯರ ನೋಟ ಕ್ರೂರವೆಂದರಿ ಕಂದ ಈರೇಳು ಭುವನಗಳ ತಿಂದು ತೇಗುವ ದೇವ ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ 1 ಎಂದು ಕಾಣೆವು ಇಂಥಾ ಸುಂದರನ ನಾವೆಂದು ಮಂದಗಮನೆಯರ ನುಡಿ ಅಂದವಾಯಿತೆ ಕಂದ ಸಂದೇಹವಿಲ್ಲವರ ಶೃಂಗಾರಕೀ ಫಲವು ಜಲಧಿ ಮನುಮಥನ ಮನುಮಥನೆ ಗತಿ 2 ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು ನಾರಸಿಂಹಾದಿ ವರಮಂತ್ರಗಳ ಜಪವಾಯ್ತು ಭಾರಿ ಪುಸಿಯಾಯ್ತು ಜನನಿಯೊಲು ಹರಸಿದೀತನಲಿ ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ3
--------------
ವಿದ್ಯಾಪ್ರಸನ್ನತೀರ್ಥರು
ದೇವರಾಗಬಾರದೇನೆಲೇ ದೆವ್ವಿನಂಥ....... ದೇವರಾಗಬಾರದೇನೆಲೇ ಪ ದೇವರಾಗಬಾರದೇಕೋದೇವನ ಪಾದವನಂಬಿ ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು ಬಂಧಕ್ಕೀಡಾಗುವುದಿದೇನೆಲೆ 1 ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ ನಾಮ ಭಜಿಸಿ 2 ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು....... ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3
--------------
ರಾಮದಾಸರು
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1 ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2 ದುರಿತ ಮಾಯಾ ಶರೀರಿ ನಾನು 3 ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4 ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5
--------------
ಕನಕದಾಸ
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ನಿತ್ಯ ಪ ಭಾರತಿ ಭಾಸ್ವರಕಾಂತೆ ನಿನ್ನ ಸಾರುವೆ ಸತತ ನಿಶ್ಚಿಂತೆ ಆಹಾ ವಾರಿಜಸಮಪಾದ ತೋರಿಸು ಮಮ ಸುಹೃ - ನಿತ್ಯ ಗಾರುಮಾಡದೆ ಜನನಿ ಅ.ಪ ಹರಿಯ ಪಟ್ಟದ ನಿಜರಾಣಿ ಎನಗೆ ಹರಿಯ ತೋರಿಸೆ ಹೇ ಕಲ್ಯಾಣಿ ನಿನಗೆ ಕರುಣಿಯೆ ಕೋಕಿಲವಾಣಿ ಆಹಾ ಹರಿಹರಾದ್ಯನಿಮಿಷ ಕರಕಮಲಪೂಜಿತೆ ವರಭಾಗವತರಗ್ರೇಸಳೆಂದು ನಮಿಸುವೆ 1 ಮೂರೇಳು ತತ್ತ್ವಾಭಿಮಾನಿ ಎನಿಸಿ ಮೂರಾರು ಭಕುತಿಯಿಂದಲಿ ನೀ ಸತತ ಮೂರು ಜೀವರೊಳು ಪ್ರೇರಣಿಯಾಗಿ ಮೂರೊಂದು ಮೊಗನ ಕಲ್ಯಾಣಿ ಆಹಾ ಮೂರು ಬಗೆಯ ಜನಕೆ ಮೂರು ವಿಧದಿ ಗತಿ ಮೂರು ಕಾಲಕೆ ಇತ್ತು ಮೂರುಮಾಡುವಿ ದೇವಿ 2 ಮಾತರಿಶ್ವನ ಪಾದಕಮಲ ಯುಗಕೆ ನೀತಷಟ್ಟದಳೆ ನಿರ್ಮಲ ಮನಸು ಆತುರದಲಿ ಮಾಡು ವಿಮಲೆ ನಮಿಪೆ ಕಾತರಭವಶ್ರಮಶಮಲಾ ಆಹಾ ಜಾತರೂಪೋದರತಾತ ಶ್ರೀ ಗುರುಜಗ - ನ್ನಾಥವಿಠಲಗೆ ನೀ ದೂತನೆನಿಸು ಎನ್ನ 3
--------------
ಗುರುಜಗನ್ನಾಥದಾಸರು
ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ನೀನೆ ಅನಾಥನಾಗಿರಲು ಅನ್ಯರಿಗೆ ಏನು ದಾನವ ನೀ ಮಾಡುವಿಯೊ ಪ ಜ್ಞಾನಪೂರ್ಣ ನೀನೆಂದು ಅರಿತು ನಿನ್ನ ಜ್ಞಾನಲೇಶವನು ಯಾಚಿಸುವೆ ಅ.ಪ ಯಾರು ನಿನ್ನ ತಂದೆ ಯಾರು ನಿನ್ನ ತಾಯಿ ತೋರೆಲೊ ಈರೇಳು ಭುವನದಲಿ ಊರೊಳು ವಾಸಕೆ ಗೃಹವನು ಕಾಣದೆ ವಾರಿಧಿಯೊಳು ನೀನಡಗಿದೆಯೊ ರಂಗ 1 ಎಡಬಿಡದಿಹ ನಿನ್ನ ಮಡದಿಯ ಬಯಸದೆ ಪಡೆದೆಯೊ ನಾಭಿಯೊಳ್ನಾಲ್ಮುಗನ ಅಡಿಯಾಕಾಶವ ಕಾಣದ ಇಂತಹ ದುಡುಕಿನ ಲೋಕೋತ್ತರ ಪುರುಷ 2 ಪೆತ್ತುದನೆಲ್ಲವ ತುತ್ತು ಮಾಡುವುದು ಎತ್ತರ ನಡತೆಯೊ ನಾ ಕಾಣೆ ಪುತ್ಥಲಿ ಗೊಂಬೆಗಳಂದದಿ ಎಲ್ಲರ ಸುತ್ತಿಸುತಿಹೆ ಪುರುಷೋತ್ತಮನೆ 3 ಚಂಚಲಳಾದÀ ಮಡದಿಯು ನಿನ್ನನÀು ವಂಚಿಪಳೆನ್ನುವ ಭಯದಿಂದ ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು ಸಂಚರಿಸುವೆ ವಿಲಕ್ಷಣ ಪುರುಷ 4 ಅಣುವಿನೊಳಗೆ ಅಣು ಮಹತಿನೊಳಗೆ ಮಹ ತೆನಿಪ ವಿರೋಧ ಧರ್ಮಕೆ ಧರ್ಮಿ ಎನ್ನಿಪ ನಿನ್ನಯ ಗುಣವರಿಯಲು ಸಂತತ ಸುಜನ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು