ಒಟ್ಟು 1527 ಕಡೆಗಳಲ್ಲಿ , 100 ದಾಸರು , 1115 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
(ಅ) ಶ್ರೀಹರಿಸ್ತುತಿಗಳು ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ ಏಳಯ್ಯ ಕರಿರಾಜವರದ ವಿಜಯಮಿತ್ರ ಏಳು ದೇವಕಿಯ ಪುತ್ರ ಅ.ಪ ಏಳು ಹರಿರಥ ಶತಕೋಟಿ ಪ್ರಕಾಶನೇ ಏಳೆರಡು ಲೋಕಗಳು ಉದರದಲಿ ಧರಿಸಿದನೇ ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ ಏಳು ಮುನಿನುತ ವಂದ್ಯನೇ ಸ್ವಾಮಿ 1 ಏಳು...(?)ಗಳೊಳು ಗಂಗೆಯನು ಪಾದದಲಿ ಪಡೆದೇ ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ ಏಳು ಜನ್ಮದ ಭವಹರಾ ಸ್ವಾಮಿ 2 ಏಳು ಜಿಹ್ವೆಯನುಳ್ಳವನ ಮುಖವಾದೆ ಮ ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ ಏಳು ಸಮರನ ಕೊಲಿಸಿದೇ ಸ್ವಾಮಿ 3 ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ ಏಳು ದ್ವೀಪಕ್ಕೊಡೆಯನೇ ಸ್ವಾಮಿ 4 ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ ಏಳಿಸಿದೆ ಸುರಲೋಕಕೇ ಸ್ವಾಮಿ 5 ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ ಏಳುನಗರಕ್ಕಧಿಪವೆನಿಪ ಸುರಪುರವಾಸ ಏಳು ಲಕ್ಷ್ಮೀನಿವಾಸ ಸ್ವಾಮಿ 6
--------------
ಕವಿ ಲಕ್ಷ್ಮೀಶ
(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
(ಅನಂತೇಶ್ವರ ದೇವರನ್ನು ನೆನೆದು) ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇ ಲೋಕೋತ್ತಮಾನಂತೇಶ್ವರ ದೇವಾಲಯದಿ ಪ. ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆ ಝಡಿದು ಬರುತಿಹುದು ಭೋರ್ಗುಡಿಪ ತೆರೆಯ ಝಡಿವ ನಾದಕೆ ಒಡಂಬಡದೇಕಾಂತದಿ ಬಂದು ಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ 1 ನೀರೊಳಗೆ ಮುಳುಗಿ ವೇದವÀ ತಂದು ಬೆನ್ನಿನೊಳು ಭಾರವನು ಪೊತ್ತು ಬಹಳಾಲಸ್ಯವೋ ಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದ ಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ 2 ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ- ಬೇಡಿದೆನು ಎಂಬ ನಾಚಿಕೆಯ ಮನವೋ ಖೋಡಿ ನೃಪತಿಯರ ಹೋಗಾಡಿಸುತ ಕಾಡಿನೊಳು ಕೋಡಗರ ಕೂಡಿ ರಥ ಓಡಿಸಿದ ಬೇಸರವೋ 3 ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯ ಕಾಲದೊಳು ಗೈವಂತಮೇಲುಕಾರಿಯದ ಕಾಲೋಚಿತವ ಮನದೊಳಾಲೋಚಿಸುತ್ತಹಿಯ ಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ 4 ಯುಗಯುಗದೊಳವತಿರಿಸ ಜಗದ ಭಾರವನಿಳುಹಿ ಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವ ತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀ ಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ 5 ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ- ಗಲಭೆಯುಂಟೆಂದಲ್ಲಿ ನಿ¯ದೆ ಈಗ ಲಲನೆಯಳ ಕೂಡೆ ಸರಸಗಳನಾಡಲು ತನಗೆ ಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ 6 ಸೇರಿರ್ದ ಶರಣ ಸಂಸಾರಿ ನೀನೆಂದು ಶ್ರುತಿ ಸಾರುವುದು ಕರುಣವನು ತೋರೆನ್ನ ದೊರೆಯೇ ದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ- ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ 7
--------------
ತುಪಾಕಿ ವೆಂಕಟರಮಣಾಚಾರ್ಯ
(ಅನುಭವ ಬಾರಾಮಾಸ ) ಏನೆಂದು ಹೇಳಲಿ ಶಾಂತಳೇ ಬುದ್ಧಿವಂತಳೇ | ವರ್ತ ಣೂಕದೆನ್ನ ಮಾತಾ | ಶ್ರೀನಾಥ ನಂಘ್ರಿಯ ನೋಡದೇ ಒಮ್ಮೆ ಮಾನವ ಜನು ಮದಿ ಬಂದೆನು ಹೊಂದಿ ನಿಂದೆನು | ಮೆರೆದೆನು ಸ್ವಹಿತಾ | ನಾನಾ ಹಂಬಲ ದೊಳು ಶಿಲುಕಿದ ಬಲು ಬಳಲಿದ | ದೊರಯದು ಪರಮಾರ್ಥ | ಶ್ಲೋಕ 1 ಭರತ ಖಂಡದಿ ಬಂದ ನೃದೇಹವಾ | ಮರೆದು ಮಾಡಲಿಬಾರದು ಹೇಯವಾ | ತ್ವರಿತ ನಂಬುದು ಶ್ರೀ ಹರಿ ಪಾದವಾ | ಗುರು ಮಹಿಪತಿ ಸಾರಿದ ಬೋಧವಾ | ಪದ ಮುಕುತಿ ಸಾಧನ ಮಾರ್ಗಶೀರ್ಷ ಮಾಸಾ ವಿಶೇಷಾ | ಧರಿಯೊಳು ಇದರಿಂದಾ | ಯುಕುತೊಲು ಹೋಗಿ ನಿರಂತರಾ ಸಾಧು ಸಂತರಾ | ಅವರ ಚರಣಾರವಿಂದಾ | ಭಕುತಿಲಿ ಮುಟ್ಟಿವಂದಿಸಲಿಲ್ಲಾ ಹೊಂದಿಸಲಿಲ್ಲಾ | ಅಖಿಳ ದೊಳಾರಿಗೆ ಬಾಗದೇ ದಿನನೀಗದೇ | ಮೋಟ ಮರ ನಿಲುಲುಂದಾ | ಶ್ಲೋಕ 2 ಮೆರೆವ ಅವಯವದೊಳು ಉತ್ತು ಮಂಗದಿ ನಿಂದು | ಹೊರಿಯ ಲುದರ ಕಾಗೀ ಬಾಗುವೀ ನೀಚಗಿಂದು | ಹರಿ ಶರಣರ ಕಂಡು ವಾಕ್ಯ ನಮನವೇನು | ಗುರು ಮಹಿಪತಿ ಸ್ವಾಮಿ ವಲಿಯನೆಂದಿಗೆ ತಾನು | ಪದ ಮಾಸ ಶೂನ್ಯವೇ ನೋಡು ಶ್ರವಣವೇ | ಮಾಡಿ ಸ್ಥಿರ ಮನುಚಿತಾ | ಸವಿ ಸವಿಯಲಿ ನಿತ್ಯ ನೂತನಾ ತೋರದನುಮಾನಾ | ಶ್ರೀ ಗೋವಿಂದ ಚರಿತಾ | ಹವಣದಿ ಸಂತರ ಮುಖದಿಂದಾ ಅನುಸರಣಿಂದಾ | ಕೇಳಲಿಲ್ಲನರತಾ | ಅವನಿಲಿ ದುಷ್ಟಪ ಕೀರ್ತಿಯಾ ಅನ್ಯ ವಾರ್ತರಿಯಾ | ಆಲಿಸಿದೇ ಸುಖ ಬಡುತಾ | ಶ್ಲೋಕ 3 ಕುಂಡಲ ವಿಟ್ಟಿಹಾ | ಹರಿ ಕಥಾಮೃತ ಕೇಳುದು ಬಿಟ್ಟಿಹಾ | ಗಿರಿಯ ಗುಹ್ಯವೋ ಕರ್ಣವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ನೋಟ ಉನ್ಮನಿ ನದಿ ಮಾಘವೇ ಮಹಾಯೋಗವೇ | ಲಯ ಲಕ್ಷಿಯ ಲಿಂದು | ನೀಟದಿ ಹರಿಯಾವತಾರದಾ ಮೂರ್ತಿ ಧ್ಯಾನಕ ತಂದು | ಧಾಟಿಲಿ ಸಮ ದೃಷ್ಟಿ ಬಲಿಯದೇ ಅಲ್ಲ ಚಲಿಸದೇ | ನಾನಾ ಬಯಕೆಯ ವಿಡಿದು ತ್ರೋಟಕ ದೈವ ನೋಡಿದ ಮತ ಕೂಡಿದ | ನೀಚ ವೃತ್ತಿಗೆ ಬಿದ್ದು | ಶ್ಲೋಕ 4 ಅಂಗನೆಯರ ಶೃಂಗಾರ ನೋಡುವಾ | ರಂಗನಾಕೃತಿ ನೋಡಲಿ ಬಾಡುವಾ | ಕಂಗಳೋಸಿ ಖಿಗಿಲಿಗಳೋ ಮಂದನಾ | ಇಂಗಿತ್ಹೇಳಿದ ಮಹಿಪತಿ ನಂದನಾ | ಪದ ಪುಣ್ಯ ಫಲಗುಣ ಮಾಸವೇ ವಬಿಗಿಯೇರ ಸನವೇ | ಸನ್ನುತ ಶ್ರೀಹರಿ ನಾಮವಾ ವಿಡಿದು ಪ್ರೇಮನಾ | ಪದ ಪದ್ಯಲೀಗ | ಚೆನ್ನಾಗಿ ಕೀರ್ತನೆ ಮಾಡದೇ ಗತಿಬೇಡದೇ | ಪಾತಕಕೆ ಗುರಿಯಾಗೆ | ಅನ್ಯರ ನಿಹಪರ ಸ್ತುತಿಗಳಾ ಹುಸಿನುಡಿಗಳಾ | ಆಡಿಬರಡಾದೆ ನೆಲಿಗೆ | ಶ್ಲೋಕ 5 ಸಿರಿಕಾಂತಾ ನತಶಮಿತ ದುರಿತಧ್ವಾಂತ ಯನುತಾ | ಹರಿನಾಮಾ ಪ್ರೇಮ ವಿಡಿದು ಸ್ಮರಿಸಾದಿಪ್ಪವನುತಾ | ನರಾಧಮಾನೇ ಮಾವನ ಮುಖವೋ ನೃಪಮಾಯ ಮುಖವೋ | ಅರುಹಿದಾ ಬೋಧಾ ಗುರು ಮಹಿಪತಿ ಸ್ವಾಮಿ ಸುಖವೋ ಪದ ದೋಷನಾಶಕ ಪ್ರಣವಧ ಕ್ಷೇತ್ರಾ ಮಾಸವೀ ಚಿತ್ರಾ | ಪವನನಾ ನೆಲೆಗೊಳಿಸಿ | ಮೀಸಲ ರೇಚಕ ಪೂರ್ವಕಾ ಧೃಡ ಕುಂಭಕಾ | ದಿಂದ ಮಂತ್ರವ ಜಪಿಸಿ | ವಸುದೇವನ ಪಾದ ನಿರ್ಮಾಲ್ಯ ಆಘ್ರಾಣಿ ಸಲಿಲ್ಲಾ | ಭೋಗ ದ್ರವ್ಯವ ಬಯಸಿ | ಲೇಸಾದ ಪರಿಮಳವನೇ ತಂದು ವಾಸಿಸುತ ನಿಂದು | ಮೈಯ್ಯ ಮರ್ತೆನು ಚಲಿಸಿ ಶ್ಲೋಕ 6 ಪರಿಮಳಂಗಳ ವಾಸನೆಗ್ಹಿಗ್ಗುಯವಾಸಿರಿ | ತುಳಸಿಯ ತೋರಲು ಸಗ್ಗುವಾ | ಇರುವ ನಾಶಿಕೋತಿತ್ತಿಯೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ತನುವೆಂಬೋ ವೃಕ್ಷ ಕಿವೇ ಶಾಖಾ ಹಸ್ತಾ ಮೌಲಿಕಾ | ದೇವ ಪೂಜದರಿಂದ | ಘನವಾದಾ ತುಳಸಿ ಪುಷ್ಪಗಳನು ತಂದು ಹಲವನು | ಸಹಸ್ರ ನಾಮಗಳಿಂದಾ | ಅನುವಾಗಿ ಹರಿಗೆ ಏರಿಸಲಿಲ್ಲಾ ಅರ್ಪಿಸಲಿಲ್ಲಾ ಮರಹು ಆಲಸ್ಯದಿಂದಾ | ವನಿಯೊಳು ಪಗಡಿ ಪಂಚಿಗಳನು ಆಡಿ ದಿನವನು | ನೂಕಿದನು ಇದರಿಂದಾ | (ತನಗಿಂದ ದೀನದುರ್ಬಲರನು ಕಂಡು ಹೊಡೆವನು | ಹೋಗಾಡಿದ ನಿಜಾನಂದ ) ಶ್ಲೋಕ 7 ಹರಿಯ ಸೇವೆಯ ಮಾಡಲು ಬೀಳುವಾ | ಮೆರೆವ ಕಂಕಣ ಮುದ್ರಿಕೆ ತಾಳುವಾ | ಕರವೋ ಮದನಾ ಕೈಯ್ಯವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ಸರ್ವ ವಿಷಯವತಿ ಜೇಷ್ಠವೇ ಬಲಿ ದಿಷ್ಟವೇ | ಮೃದು ಕಠಿಣ ವೆನ್ನದೇ | ಹರಿಯಂಗಣದಿ ಲೋಟಾಂಗಣವನು ಹಾಕುತಲಿ ತಾನು | ದೇವ ರೂಳಿಗದಿಂದೇ | ನೆರೆ ಹಡಪಿಗ ಪಾದುಕೆಯ ವಾ ಯಂಬನಾಮವಾ | ತಾಳಿ ಕರಸಿ ಕೊಳ್ಳದೇ | ತರಳೆ ತ್ಯಾಡಿಸುತಲಿ ತನ್ನಾ ಕಳೆ ದನುದಿನಾ | ಇದು ಯಾತರ ಛಂದಾ | ಶ್ಲೋಕ 8 ಪರೋಪಕಾರ ವಂಚನೆ ಮಾಡುವಾ | ಸುರಭಿ ಚಂದನ ಮಿಂಚಿಲೆ ತೀಡುವಾ | ಶರೀರೋ ಬೆಚ್ಚಿನ ಮಾಟವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ ಪದ ಆಷಾಡ ಗೇಯಲಿ ಹಸಿವೆಯ ಬಲು ತೃಷಿವಿಯು | ಸಕಲನು ಕೂಲದಿಂದಾ | ಲೇಸಾಗಿ ನೈವೇದ್ಯ ವದಗಿಸಿ ಹರಿಗರ್ಪಿಸಿ | ನಿಜ ತೀರ್ಥ ಪ್ರಸಾದಾ | ಭೂಷಣದಲಿ ನಾನು ಕೊಳಲಿಲ್ಲಾÀ ಸುಖ ಬಡಲಿಲ್ಲಾ | ದೋಷದನ್ನವ ಉಂಡು ವಡಲನು ನಾನು ಹೊರೆದನು ಬಯಸುತ ಜಿವ್ಹ ಸ್ವಾದಾ ಶ್ಲೋಕ 9 ವಿದತವಾದ ರಸ್ನಾವ ಉಂಬನು | ಮುದದಿ ತತ್ವದ ವಿದ್ಯವ ತುಂಬನು | ಉದರೋಶಾಲ್ಮಲಿ ಫಲವೋ ಮಂದನಾ | ಇದನು ಸಾರಿದ ಮಹಿಪತಿ ನಂದನಾ | ಪದ ಮನ ವಿಶ್ರಾವಣ ಸುಖ ಬೆರತಿದೇ ನೋಡು ನಿಂದಿದೇ | ಗುರು ಬೋಧಿಸಿದನು | ಮನನ ಮಾಡುತ ನಿಜಧ್ಯಾಸಾ | ಹಚ್ಚಿ ವಿಶೇಷಾ | ಪಡೆದು ಸಾಕ್ಷಾತ್ಕಾರವನು | ಚಿನುಮಯಾನಂದ ನೋಲಾಡದೇ ತಾಂ ಪೀಡಾಡದೇ | ಅಲ್ಲಿ ತೊಳಲಿದ | ಹರಿ ವಲುಮೆ ಇಲ್ಲದೇನು | ಶ್ಲೋಕ 10 ವಿಷಯ ಚಿಂತನೆ ಮಾಡಲು ಸಂಭ್ರಮಾ | ಕುಸುಮ ನಾಭನ ನೆನಿಯೆ ವಿಭ್ರಮಾ | ಕುಶಲ ಮಾನಸೋ ಪಶುವೋ ಮಂದನಾ | ಸ್ವಸುಖ ಸಾರಿದ ಮಹಿಪತಿ ನಂದನಾ ಪದ ಸುಕೃತ ಇದೇವೇ ಭಾದ್ರಪದವೇ | ನಡೆದ್ಹೋಗಿದ ರಿಂದಾ ಒಲಿದ ಪುಣ್ಯ ಕ್ಷೇತ್ರವಾಗಿಹಾ ಸಂತರಾಲಯಾ | ಪುಗುವುದೇ ಯಾತ್ರೆ ಛಂದಾ | ಜಲಜಾಂಬಕನ ಮಹಿಮೆ ಗಳುಂಟು ಅಲ್ಲಿ ಸುಖವುಂಟು | ತೊರೆದನು ಪುರವಿಂದಾ | ಸತಿ ಉದರದ ದಾವತಿಗಾಗಿ ತಿರುತಿರುಗೀ | ಜನುಮ ಶ್ಲೋಕ 11 ಧನದ ಆಶೆಗೆ ನಡೆಡತಾಕುವಾ | ಘನ ಪ್ರದಕ್ಷಿಣೆ ಮಾಡಲು ಬಳುಕುವಾ | ಮನುಜಪಾದವೋ ಪಾದವೋಮಂದನಾ | ಅನುವ ಸಾರಿದ ಪದ ಪ್ರತಿ ಪದಾಶಿವಿಜಯಂಬುದೇ ಗುರು ಭಕ್ತಿಂದೇ | ಶೃತಿ ಯಥಾದೇವೇ ತಥಾಗುರೌ ಎಂದು ನುಡಿವುದು ಅರ್ಥ ತಿಳಿದು | ನಂಬಿ ಭಜಿಸದೆವೆ | ಕ್ಷಿತಿಯೊಳು ನರರೆಂದು ಬಗೆದೆವು ಹಿತ ಮರದೆವು | ಬಾಹ್ಯ ದೃಷ್ಟಿ ಶ್ಲೋಕ 12 ಸಕಲ ವೃತ ತಪ ತಿರ್ಥಾ ಶಾಸ್ತ್ರ ಪೌರಾಣ ಬಲ್ಲಾ | ಅಖಳದಿ ಫಲವೇನು ಶ್ರೀ ಗುರು ಭಕ್ತನಲ್ಲಾ | ನಿಖಿಳಾ ಭರಣಗಳಿದ್ದು ವ್ಯರ್ಥ ಮಾಂಗಲ್ಯವಿಲ್ಲಾ | ಪಿಂತಿನ ತಪ್ಪವ ನೋಡದೇ ತಡ ಮಾಡದೇ | ಸಿರದಲ್ಲಾ ಭಯ ನೀಡಿ | ಅಂತರಂಗದ ಸುಖದೆಚ್ಚರಾ ಕೊಟ್ಟ ಸಾರಥಿ | ನಾಮ ಬಿಡದೆ ಕೊಂಡಾಡಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಆ) ಲಕ್ಷ್ಮೀಸ್ತುತಿಗಳು ನಾರಿಮಣಿಯೆ ನಿನ್ನಾಣೆ ನಾಕಾಣೆ ಕರತಂದು ತೊರೆ ಚೆಲ್ವ ರಂಗನಾ ಪ ಕರತಂದು ತೋರೆ ಮಧ್ಯರಂಗನಾ ಅ.ಪ ಪಾರವಾರನೆಂಬ ಧೀರ ಭವದೂರನೊ ಬಾರದ ಮನಸೆನ್ನ ಸೂರೆಗೊಳ್ಳುತಿದೇ 1 ಮೀರಿದ ಹದ್ದಿಗೆ ಹಾರಿಬಂದಾ ಗಿಣಿಯು ದಾರಿಯ ತಪ್ಪಿ ಹಿಂತಿರುಗಿದಂತೆ ಮಾರನಯ್ಯನ ಪಾದತೋರಿ ಪೋಗಿಯು ತಾ ತೇರಮೇಲೇರಿದ ಸಾರುವ ಬಾರೆ 2 ಉರಗೇಂದ್ರಶಯನನೆ ಸರಿಗಾಣೆ ರಮಣಿ ಶ್ರೀ ನರಗೆ ಸಾರಥಿಯಾಗಿ ಮೆರೆವ ಶ್ರೀ ಪರಮಾತ್ಮ ನಿರುತಿಹ ನೀನೋಗಿ ಕರತಾರೆ ಕಾಮಿನೀ3
--------------
ಚನ್ನಪಟ್ಟಣದ ಅಹೋಬಲದಾಸರು
(ಆ) ಶ್ರೀರಾಮಸ್ತುತಿಗಳು ರಾಮನ ನೆನೆ ಮನವೆ ಹೃದಯಾರಾಮನ ನೆನೆ ಮನವೆ ಪ ಸದ್ಗುಣಧಾಮನ ಸೀತಾ ಅ.ಪ ದಶರಥ ನಂದನನಾ ಧರಣಿಯೊಳಸುರರÀ ಕೊಂದವನ ವಸುಮತೀಸುತೆಯಂ ಒಲಿದೊಡಗೂಡಿ 1 ತಂದೆಯಮಾತಲಿವನಕೈತಂದುಸರಾಗದಲಿಬಂದವಿರಾಧನ ಕೊಂದು ನಿಶಾಚರಿಯಂದವಳಿದು ಖಳವೃಂದವ ಸವರಿದ 2 ಸೀತೆಯನರಸುತಲಿ ಕಬಂಧನ ಮಾತನನುಸರಿಸುತ ಸುತನ ಘಾತಿಸಿ ದಾತನ 3 ವಿಲಾಸದಿಂದ ತರುಣಿಯನರಸಲು ಮರುತನ ಮಗನಿಗೆ ಬೆರಳುಂಗುರವನು ಗುರುತಾಗಿತ್ತನ 4 ಧರಣಿಜೆಯನುಕಂಡುವನವನುಮುರಿದುಗುರುತುಗೊಂಡು ಅರಿಪುರವನು ಸುಟ್ಟುರುಹಿದ ವಾನರವರನಿಗೆ ಸೃಷ್ಟಿಪ ಪದವಿತ್ತಾತನ 5 ಶರಣನ ಲಂಕೆಗೆ ದೊರೆಯನು ಮಾಡಿ ಸಿರಿಯನಯೋಧ್ಯೆಗೆ ಕರೆತಂದಾತನ6 ಧರಣಿಯ ಪಾಲಿಸುತ ಧರ್ಮದ ಸರಣಿಯ ಲಾಲಿಸುತ ವರದವಿಠಲದೊರೆ ಪರಮೋದಾರನ 7
--------------
ವೆಂಕಟವರದಾರ್ಯರು
(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
(ಉ) ರುದ್ರದೇವರು ನಮೋ ಪಾರ್ವತೀಪತಿ ನುತಜನಪರ ನಮೋ ವಿರೂಪಾಕ್ಷ ಪ ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ಅ.ಪ ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ 1 ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ 2 ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೊ ಸರ್ವತ್ರಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರತೆತ್ತಿಗನಂತೆÉ ಕಾಯುತ್ತಿಹ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತೃ ಕೃಪಾಪಾತ್ರ3
--------------
ವ್ಯಾಸರಾಯರು
(ಉಡುಪಿಯ ಪ್ರಾಣದೇವರು) ಏನೆಂದು ಸ್ತುತಿಸಲಿ ಪ್ರಾಣನಾಯಕನಾ ಕಾಣುವಂದದಿ ಮಹಾ ಮಹಿಮೆ ತೋರುವನಾ ಪ. ಕಡು ಪಾಪಿ ಕಲಿಯನ್ನು ಕಾಲಿಂದ ಮೆಟ್ಟಿ ಬಡಜನರಲ್ಲಿಟ್ಟು ಕರುಣಾದೃಷ್ಟಿ ಉಡುಪಿ ಕೃಷ್ಣನ ಮುಂದೆ ವಿಪ್ಪ ಸಂತುಷ್ಟಿಯ ಬಡಿಸುತ ನಿಂತಿರುವನು ಜಗಜಟ್ಟಿ 1 ಪ್ರಥಮ ರೂಪನಾಗಿ ಪರಿಜನರಲ್ಲಿ ದ್ವಿತೀಯ ರೂಪದಿಂದ ಪಾಕಕರ್ತರಲಿ ರತಿಪತಿಪಿತನ ಪೂಜಾವಿಧಿ ನಡೆಸಲು ಯತಿ ಜನರೊಳು ಪೂರ್ಣಮತಿಯಾಗಿ ನಿಲುವನ 2 ಮೂರೊಂದು ಪುರುಷಾರ್ಥ ದಯೆಮಾಳ್ಪೆನೆಂದು ದ್ವಾರಾವತಿಯಿಂದ ತಾನಿಲ್ಲಿ ಬಂದು ಸೇರಿದ ಸಿರಿವರ ವೆಂಕಟನಾಥನ ಕಾರುಣ್ಯಂಸ ಪಾತ್ರ ಕರುಣಾಳು ರಾಜನ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಊ) ಲೋಕನೀತಿಯ ಕೃತಿಗಳು ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು ಭ್ರಷ್ಟನೆನಿಸದೆ ಬಿಡವು ಇವನ ಪ ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು ಹರಿಯಿಂದ ಹತನಾಗಿ ಹೋದಾ ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ ತರಿದನಲ್ಲವೆ ಭೀಮ ತಾನು 1 ದಾಯವನು ಲೋಭದಿಂ ಕೌರವನು ಪಾಂಡವರಿ ಗೀಯದುದಕವನೇನು ಪಡೆದಾ ರಾಯದಶರಥ ತನ್ನ ಸತಿಸುತರ ಮೋಹವಿರೆ ಆಯುವಿಂ ಗತನಾಗಿ ಹೋದಾ 2 ಜಮದಗ್ನಿಯ ಹೋಮಧೇನುವಂ ಮದದಿಂದೆ ಕಾರ್ತಿವೀರ್ಯಾರ್ಜುನನು ಕೊಳಲು ಅಮಿತಬಲನಾಪರಶುಧಾರಿಯು ತಾನು ಸಮರದೊಳೆ ಸವರುತ್ತ ಅವನ ಕಳೆದ3 ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು ವಿಷ್ಣುಚಕ್ರವು ಕೊಂದಿತವನ ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4 ವಾಸುದೇವನ ಮೇಲಸೂಯೆಯಿಂ ಪೌಂಡ್ರಕ ವಾಸುದೇವನೊಳು ಅಳಿದ ಕಂಡ್ಯಾ ದೂಷಣೆಯು ಡಂಬಗಳು ನಾಶನವ ಗೈಯುವುವು ಈಶ ಸುಜನರಿಗಾಗಿ ಭಾವಿಸುವ ಜಗದೀ5 ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ ಅಪಹಾರಗೈದ ಶ್ರೀರಾಮ ತಲೆಯಾ ರಿಪುಗಳಾ ಮಧು ಕೈಟಭರ ಮಮತೆಯನು ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6 ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ ಸರ್ವವೂ ಹೆಜ್ಜಾಜಿ ಕೇಶವಾ ಯೆಂದು ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ ಒರ್ವನೇ ಜಗದೀಶನೆಂದು ನಮಿಸೀ 7
--------------
ಶಾಮಶರ್ಮರು
(ಎ) ಭೀಮ ಸೋಮ ರಣರಂಗ ಭೀಮಾ ಆ ಮಹಾದುರಿತ ಭಾರ ಹರ ಪ ಧರ್ಮನಂದನನೊಡನೆ ಜನಿಸಿ ಬಂದು ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ1 ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದÀ ಮೌಳಿ ಅಕಟ ತೊಲಗಿಸಿ ಗೆಲಿದು ನೆರೆದ ಕಾ ಮುಕರ ಬಿಂಕವ ಹಳಿದು ಬಕ ವಿರೋಧಿಯ ಭಕುತಿಯಿಂದಲಿ ಬಲು ಸುಖ ಬಡಿಸುತ ಕು ಹಕ ಮಾಗಧÀನ ರಣಮುಖಕಾಹುತಿಯಿತ್ತು ವಿಕಳತನದ ಕೀಚರ ಕಿಮ್ಮೀರ ಲಿಕಿಲಿಕಿ ಮಾಡಿದ2 ಗುರುವಿನ ರಥವೆ ತೆಗೆದು ಗಗನಕ್ಕೆ ಭರದಿಂದಲಿ ಬಗೆದು ಅರಿಗಳ ಶಿರಗಳ ತರಿ ತರಿದವನಿಗೆ ಧುರ ಧರದೊಳು ಹರಿಶರ ಬಿಡಲಂಜದೆ ಎರಗದಲಿಪ್ಪ ಭ ಳಿರೆ ಪರಾಕ್ರಮ ವರ ವೃಕೋದರ3 ಕರಿ ತೀಕ್ಷಣ ಕಬ್ಬು ತುಡಕಿದಂದದಿ ಪಿಡಿದವನ ಇಬ್ಬಗದು ಉದರದ ಕೊಬ್ಬು ಹರಿಸಿ ಕರು ಳಬ್ಬರದಲಿ ಸತಿಗೆ ಉಬ್ಬಿಗೆ ತೀರಿಸಿ ಇಬ್ಬಲದವರನ ಯೆಬ್ಬಟಲು ಸುರರಭ್ಬೆಭ್ಬೆನುತಿರೆ ಬೊಬ್ಬಾಟಕೆ ಜಗ ಸುಬ್ಬನ ಸೂರೆ 4 ಕುರುಪ ಜಲದೊಳಗೆ ಅಡಗಿರಲು ವೈರಿಯ ತೊಡೆ ಮುರಿದು ನಿರ್ಭಯದಿಂದಲಿ ತುರಗಧ್ವರದಲಿ ಮೆರೆದೆ ದೋಷರಾಶಿ ವಿರಹಿತ ಕಾಮನೆ ಸುರಮಣಿ ಜಗದಂ ವಿಠ್ಠಲರಿವ ಭಾರತ ಮಲ್ಲ ಮರುತಾವತಾರ 5
--------------
ವಿಜಯದಾಸ
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ) ಶ್ರೀನಿವಾಸಾಯ ನಮೋ ಪ. ಶ್ರೀನಿವಾಸಾಯ ಶತಭಾನುಪ್ರಕಾಶಾಯ ಶ್ರೀನಿವಾಸಾಯ ನಿಜ ಭಕ್ತಜನಪೋಷಾಯ ಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ. ದೋಷಗಂಧವಿದೂರ ಕೇಶಿಮುಖದಾನವ ವಿ- ನಾಶವಿಧಿಭವಸುಖನಿವಾಸ ವಾಸುಕಿಶಯನ ವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷ ದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ- ಭೂಷ ಭೂತಾತ್ಮ ಭವಪಾಶಹರ ಪರತರ ದ- ಕೇಶವಾಯ ನಮೋನಮಃ 1 ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶ ಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತ ಸನ್ನುತ ಪಾದನೀರರುಹದ್ವಂದ್ವನೆ ಸುರರು ತಿಳಿಯರು ನಿನ್ನ ಭೂರಿಮಹಿಮೆಗಳ ಸಾಕಾರವನು ಬಣ್ಣಿಸುವ ನಾರಾಯಣಾಯ ನಮೋ 2 ವೇದವೇದ್ಯನೆ ದುರಿತಶೋಧನೆ ದೈತ್ಯಗಣ- ಛೇದಕನೆ ಸುರಸುಪ್ರಸಾದಕನೆ ಭಕ್ತಜನ- ಸಮಾನಾಧಿಕ್ಯರಹಿತ ಸತತ ಆದಿತ್ಯ ಶತಕೋಟಿತೇಜೋವಿರಾಜ ಮಹ- ದಾದಿಕಾರಣ ಮಧುವಿರೋಧಿ ಮಂಗಲಸುಖಾಂ- ಮಾಧವಾಯ ನಮೋನಮಃ 3 ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು- ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ- ಸನ್ನುತ ಮಹೇಂದ್ರ ವಂದಾರುಜನತ್ರಿದಶಮಂದಾರ ಕೋಮಲಿತ ವೃಂದಾವನವಿಹಾರ ಕಂದರ್ಪಜನಕ ಬಾ- ತುಭ್ಯಂ ನಮಃ 4 ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷ ಮುಷ್ಟಿಕಾಸುರವೈರಿ ಮುನಿಜನಮನೋಹಾರಿ ಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇ ಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆ ತುಷ್ಟಿಯನು ನೀನಿತ್ತು ಸಲಹೊ ಸಾಮಜವರದ ತುಭ್ಯಂ ನಮೋ 5 ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತ ಬುಧಜನಪ್ರಿಯ ಭೂತಭಾವನ ಜಗನ್ನಾಥ ಮದನಕೋಟಿಸ್ವರೂಪ ವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ- ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸ ಮಧುಸೂದನಾಯ ನಮೋ 6 ಅಕ್ರೂರವರದ ಸದತಿಕ್ರಮರ ಗೆಲಿದ ಹಯ- ವಕ್ತ್ರ ವೈಕುಂಠಾಖ್ಯ ಪುರವಾಸ ಜಗದೀಶ ಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನು ಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ- ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿ ತ್ರಿವಿಕ್ರಮಾಯ ನಮೋನಮಃ 7 ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು- ದಾಮಸಖ ಪರಿಪೂರ್ಣಕಾಮ ಕೈರವದಳ- ಸುಜನಸ್ತೋಮಸುರಕಾಮಧೇನು ಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ- ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ- ಪ್ರಾಜ್ಞ ವಾಮನಾಯ ನಮೋನಮಃ 8 ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ- ರಾಧಭಂಜನ ಭವಾಂಬೋಧಿಕುಂಭಜ ಭಜಕ- ಚತುಷ್ಟಾದ ಪಾವನಚರಿತನೆ ಗಾಧಿಜಾಧ್ವರಪಾಲ ಗರುಡಧ್ವಜ ದಯಾಳು ನಾದಬಿಂದು ಕಲಾತೀತ ರುಕ್ಮಿಣಿನಾಥ ಶ್ರೀಧರಾಯ ನಮೋನಮಃ 9 ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ- ಕಾಶ ಪಾಲಿತನಿಖಿಳಭೂಸುರವ್ರಜ ಮಂದ- ದೂಷಣಾದ್ಯ ಸುರಹರನೆ ಈಶಪತಿಸೇವ್ಯಾಂಬರೀಶನೃಪವರದ ಪರ- ಮೇಶ ಕೋವಳಪೀತವಾಸ ಕರ್ದಮಶುಕಪ- ಹೃಷೀಕೇಶಾಯ ತುಭ್ಯಂ ನಮೋ 10 ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲ ಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ- ಬುದ್ಧ ಬುಧಜನಸುಲಭ ಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇ ತದ್ವೀಪವೈಕುಂಠಮಂದಿರತ್ರಯ ಸಾಧು- ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11 ಸಾಮಗಾನವಿನೋದ ಸಾಧುಜನಸುಖಬೋಧ ಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತ ಸಮರಂಗ ಭೀಮ ನಾಮಧಾರಕರ ಪರಿಣಾಮರೂಪಕ ಸುಜನ- ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣ ದಾಮೋದರಾಯ ನಮೋ 12 ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯ ವೆಂಕಟಾಚಲಸದಾಲಂಕಾರ ಶೇಷಪರಿ- ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗ ಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತ ಓಂಕಾರನಿಧನ ಸಾಮಕಭಕ್ತರಾನೇಕ ಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ 13 ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದು ಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯ ನೀ ಸಲಹೊ ದೇವದೇವ ಭೂ ಸಲಿಲ ಪಾವಕಾಕಾಶಾದಿ ಭೂತಾಧಿ- ವಾಸ ರಾಕ್ಷಸವನಹುತಾಶ ನಾನಾ ರೂಪ- ವಾಸುದೇವಾಯ ನಮೋ 14 ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲ ವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರ ಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನ ರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ- ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ- ಪ್ರದ್ಯುಮ್ನಾಯ ತುಭ್ಯಂ ನಮಃ 15 ಉದ್ಧವಾದಿ ಸಮಸ್ತ ಭಾಗವತಜನಕಮಲ- ಮಧ್ಯಚರರಾಜಹಂಸಾಯ ಮಾನಸದ ಶ್ರೀಹರಿಯೆ ವೈದ್ಯನಾಥವಿಧಾತನೆ ಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ- ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆ ಅನಿರುದ್ಧಾಯ ತುಭ್ಯಂ ನಮಃ 16 ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾ ಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷ ಮಂಗಲರಿತ ಗುರುತಮ ಗುಣಧ್ಯಕ್ಷನೆ ಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದ ಶರಭಂಗ ಮುನಿಪಾಲ ಶಮಿತದಾನವಜಾಲ ಪುರುಷೋತ್ತಮಾಯನ್ನಮೋ 17 ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್- ವಿಶ್ವತೋಮುಖ ವಿಶ್ವತೋಬಾಹು ಕರುಣಾಕ- ದಯಮಾಡು ಶ್ರೀವಕ್ಷಸ್ಥಲನಿವಾಸನೆ ಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ- ಮೋಕ್ಷದಾಯಕ ಯಜ್ಞಮೂರ್ತಿ ರೂಪತ್ರಯ ಮ- ಅಧೋಕ್ಷಜಾಯ ನಮೋನಮಃ 18 ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು- ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ- ಶಿರಪ್ರಕರಧೀರ ಪ್ರಹ್ಲಾದಾಭಿವರದ ಭೂರೀಕರರೂಪ ಭೂಮಕೀರ್ತಿಕಲಾಪ ಸಾರವಜ್ರಸ್ತಂಭದಿಂ ಬಂದ ನಂದ ಸುಕು- ನಾರಸಿಂಹಾಯ ನಮೋ 19 ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತ ಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ- ನಿರ್ಮಿಸುವ ಆಶ್ಚರ್ಯಕೃತ ಸಲೀಲ ಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯ ಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ- ಶ್ರೀಮದಚ್ಯುತಾಯ ನಮೋನಮಃ 20 ಚೈದ್ಯಮಥನ ಮನೋಜ್ಞಶುದ್ಧಾತ್ಮ ಸರ್ವಜ್ಞ ಹೊದ್ದಿಸಿದ ಪಾರ್ಥನಿಂಗೆ ಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ- ವಿದ್ದ ಮಾನಸವ ಪಾದದ್ವಯದೊಳಿರಿಸೈ ದ- ಜನಾರ್ದನಾಯ ನಮೋನಮಃ 21 ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದ ನಂದಗೋಪನ ಕಂದನೆನಿಸಿ ಬಾಲಕತನದ ಸುಂದರೀರಮಣ ಜಯತು ತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ- ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ- ಉಪೇಂದ್ರಾಯ ತುಭ್ಯಂ ನಮಃ 22 ಸ್ಥಿರಚರಾತ್ಮಕ ಧೇನುಚರ ದೇವಕೀಜಠರ- ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥ ದುರಿತದೂರ ಗಭೀರನೆ ನಿರತಿಶಯ ನಿಜನಿರ್ವಿಕಲ್ಪ ಕಲ್ಪಾಂತಸಾ- ಗರದಿ ವಟಪತ್ರಪುಟಶಯನ ಪುಣ್ಯಶ್ರವಣ ಹರಯೇ ನಮೋನಮಸ್ತೇ 23 ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ- ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ- ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾ ದುಷ್ಟ ನರಕಾದಿದಾನವರ ಮರ್ದಿಸಿದ ಜಗ- ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ- ಹರೇ ಕೃಷ್ಣಾಯ ತುಭ್ಯಂ ನಮಃ 24 ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆ ಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ- ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜ ಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು- ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ- ಲಕ್ಷ್ಮೀನಾರಾಯಣಾಯ ನಮೋ 25
--------------
ತುಪಾಕಿ ವೆಂಕಟರಮಣಾಚಾರ್ಯ
(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ