ಒಟ್ಟು 332 ಕಡೆಗಳಲ್ಲಿ , 43 ದಾಸರು , 187 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಮನ ಹಿಗ್ಗೋದು ರಂಗಯ್ಯನ ಕೊಂಡಾಡಿಮನ ಉಬ್ಬೋದು ಪ. ಎಂಟು ದಿಕ್ಕಿಗೆ ದಿವ್ಯ ಮಂಟಪ ಮಣಿಯುಎಸೆಯೆ ಕಂಠದಿ ಸ್ವರವ ಕುಣಿಸುತಕಂಠದಿ ಸ್ವರವ ಕುಣಿಸುತಸಭೆಯೊಳು ನಟನೆ ಮಾಡುವರು ಕಡೆಯಿಲ್ಲ 1 ಛÀತ್ರ ಚಾಮರ ದಿವ್ಯ ಉತ್ತಮ ವ್ಯಜನವಸುತ್ತ ಬೀಸುವ ಸುಗುಣಿಯರುಸುತ್ತ ಬೀಸುವ ಸುಗುಣಿಯರುಸಭೆಯೊಳು ನರ್ತನ ಮಾಡೋರಮ್ಮ ಐವರು 2 ಕುಂದಣವುಳ್ಳ ಇಂದಿರೆರಮಣನಒಂದೊಂದು ಗುಣವ ವಿವರಿಸಿಒಂದೊಂದು ಗುಣವ ವಿವರಿಸಿಸಭೆಯೊಳು ವಂದಿಗರು ಬಂದು ಹೊಗಳೋರು3 ಭಾಗೀರಥಿ ಜಲವ ಬ್ಯಾಗ ಗಿಂಡಿಯ ತುಂಬಿಸಾಗರಶಯನನ ಅಭಿಷೇಕಸಾಗರಶಯನನ ಅಭಿಷೇಕ ಮಾಡುವಪನ್ನಂಗವೇಣಿಯರು ಕಡೆಯಿಲ್ಲ 4 ಮಲ್ಲಿಗೆ ತುರುಬಿನ ಮಲ್ಲಮುಷ್ಠಿಕರೆಲ್ಲಗುಲ್ಲು ಮಾಡುತಲೆ ಸಭೆಯೊಳು ಗುಲ್ಲು ಮಾಡುತಲೆ ಸಭೆಯೊಳು ಅಲ್ಲಲ್ಲೆಬಿಲ್ಲನೆತ್ತುವರು ಕಡೆಯಿಲ್ಲ 5 ಬಾಲೆಯರು ಅಂಗಾಲು ಲಾಲಿಸಿ ಒರೆಸುತಮ್ಯಾಲೆ ಪನ್ನೀರು ಎರೆಯುತ ಮ್ಯಾಲೆ ಪನ್ನೀರು ಎರೆಯುತ ರಂಗಯ್ಯನಕಾಲಿಗೆ ಎರಗುವರು ಐವರು 6 ಹರದೆಯರು ಅಂಗಾಲು ಸೆರಗಿಲೆ ಒರೆಸುತ ಕಿರುಗೆಜ್ಜೆ ರುಳಿಯ ಸರಿಸುತಕಿರುಗೆಜ್ಜೆ ರುಳಿಯ ಸರಿಸುತ ರಾಮೇಶನ ಎರಕಿ ನಿಂತವರು ಕಡೆಯಿಲ್ಲ7
--------------
ಗಲಗಲಿಅವ್ವನವರು
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ ಬಡವರ ಬಂಧು ಬಹುಕೃಪಾಸಿಂಧು ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ. ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ ಅತಿಪಾತಕಿ ಅಜಾಮಿಳನ ಉದ್ಧರಿಸಿದೆ ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ 1 ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ ಬಳಲಿಸಬ್ಯಾಡವೊ ಭಕ್ತಕುಟುಂಬಿ ನಳಿನದಳಾಂಬಕ ನೀ ಸಲಹೆನ್ನನು 2 ಹೇರೊಪ್ಪಿಸಿದ ಮೇಲ್ಯಾತರ ಸುಂಕವು ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 3
--------------
ಹೆಳವನಕಟ್ಟೆ ಗಿರಿಯಮ್ಮ
ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ಪ. ಅಣ್ಣ ಬಲರಾಮನು ಚಿಣ್ಣರ ಸಹಿತಾಗಿ ಬೆಣ್ಣೆ ಹಣ್ಣನು ಮೆಲುವಿಯಂತೆ ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ 1 ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ ಹೊಸಪರಿಯಾಭರಣಗಳನಿಡುವೆ ಹಸನಾದ ಹಸುವಿನ ತುಪ್ಪದ ದೋಸೆಯ ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ 2 ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ ಕಡೆಹಾಯಿಸೊ ಕಡೆಗೋಲನಿತ್ತು ಎನ್ನ ಗೋಪಿ ಕಡುಮುದ್ದು ರಂಗನ ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ 3
--------------
ಸರಸ್ವತಿ ಬಾಯಿ
ಕರುಣವ ತೋರೋ ಕರುಣಗುಣಾಂಬುಧಿ ಕರುಣವ ತೋರೋ ರಂಗಯ್ಯ ಪ ಕರುಣದಿ ಬಾರೋ ಬಾರೋ ಕರುಣ ತೋರಿ ಎನ್ನ ಕರುಣದಪ್ಪಿ ಪೊರಿ ಕರುಣವ ತೋರೋ ಅ.ಪ ಪರತರಮಹಿಮ ಹರಸುರಬ್ರಹ್ಮರ ಮೊರೆಯ ಕೇಳಿದ ಕರುಣವ ತೋರೋ ರಂಗಯ್ಯ ಧರೆಗೆ ಇಳಿದು ಶೇಷಗಿರಿಯಲಿ ನಿಂತು ನರಸುರರಿಗೆ ವರವಿತ್ತ ಕರುಣವ ತೋರೋ ರಂಗಯ್ಯ ಪುರದಿ ಬಂದು ನಿಂತ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಚರಣವಿಟ್ಟು ನಾರಿಕುಲವನು ದ್ಧರಿಸಿದಿ ಕರುಣವ ತೋರೋ 1 ಅಂಬುಜನಯನ ಕಂಬದಿ ಬಂದು ಭಕ್ತ ಗಿಂಬುಕೊಟ್ಟು ಕಾಯ್ದ ಕರುಣವ ತೋರೋ ರಂಗಯ್ಯ ನಂಬಿಕೊಟ್ಟ ಕಮಲಾಂಬಕಿಯೆಂಜಲ ಸಂಭ್ರಮದಿಂ ಮೆದ್ದ ಕರುಣವ ತೋರೋ ರಂಗಯ್ಯ ನಂಬಿದ ಅಸುರಗೆ ಬೆಂಬಲಗೊಟ್ಟು ಸ್ಥಿರ ಕುಂಭಿನಿಪಟ್ಟವಿತ್ತ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಅಂಬರೀಷನ ಮೊರೆ ಕೇಳಿ ಶೀಘ್ರದಿಂದ ಕರುಣವ ತೋರೋ 2 ನಿರುತ ನಂಬಿ ನಿನ್ನ ಮರೆಹೊಕ್ಕ ಬಾಲಗೆ ಸ್ಥಿರಪದವಿಯನಿತ್ತ ಕರುಣವ ತೋರೋ ರಂಗಯ್ಯ ಗರುಡನೇರಿ ಬಂದು ಕರಿಯ ವಿಪತ್ತನು ಪರಿಹರಿಸಿದ ಮಹಕರುಣವ ತೋರೋ ರಂಗಯ್ಯ ಹರಿಹರಿ ಎಂದೊದರಿದ ತರಣಿಭಕ್ತಿಗೆ ಮೆಚ್ಚಿ ನಿರುತ ಮೈಗಾವಲಾದ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಪರಮ ನಿರ್ಜರರಿಗೆ ಅಮೃತವುಣಿಸಿದ ಕರುಣವ ತೋರೋ3 ದುರುಳಕೋಟಿಯಾಚರಿಸಿದ ದುರುಳಗೆ ಪರಮ ಕೈವಲ್ಯವಿತ್ತ ಕರುಣವ ತೋರೋ ರಂಗಯ್ಯ ಕಿರಿಕುಲದವನ ಕರದಿಂ ಪರಮಾ ದರದಿ ಉಂಡ ಮಹಕರುಣವ ತೋರೋ ರಂಗಯ್ಯ ನೀರು ಕೊಟ್ಟ ನಿಜಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಚರಣದಾಸ ವರ ಕನಕನಿಗೊಲಿದ ಕರುಣವ ತೋರೋ 4 ಹಿಡಿ ಅವಲಕ್ಕಿಯ ಕೊಡಲು ಒಪ್ಪಿ ನೀ ಕಡು ಸಂಪದವಿತ್ತ ಕರುಣವ ತೋರೋ ರಂಗಯ್ಯ ಮಡಿದ ಬಾಲಕನಂ ಕಡುದಯದೆಬ್ಬಿಸಿ ಪಿಡಿದು ಕಾಪಾಡಿದ ಕರುಣವ ತೋರೋ ರಂಗಯ್ಯ ದೃಢಕರ ಬೆಂಬಲ ಬಿಡದೆಯಿರುವ ನಿನ್ನ ಕಡುದಿವ್ಯ ಮೂರ್ತಿಯ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ರಂಗ ಒಡೆಯ ಶ್ರೀರಾಮ ಎ ನ್ನೊಡಲಗಲದೆ ನಿಂತು ಕರುಣವ ತೋರೋ 5
--------------
ರಾಮದಾಸರು
ಕರುಣಿಸು ಕರುಣಿಸು ಕರುಣಿ ಶ್ರೀ ರಂಗಯ್ಯಾ ಹರಣ ಪೋದರು ನಿಮ್ಮ ಸ್ಮರಣೆ ಮರೆಯದಂತೆ ಪ ಮರವೆ ಮಾಯದಿ ಸಿಲುಕಿ ಮರುಳ ಮಾನವರಿಗೆ ಶಿರವ ಬಾಗದಂತೆ 1 ಘನದು:ಖಮಯವಾದ ಜನನಮರಣವೆಂಬ ಕುಣಿಯೊಳಗೆ ಸಿಕ್ಕಿ ಜನಿಸಿಬಾರದಂತೆ 2 ದುರಿತ ದಾರಿದ್ರ್ಯದಿಂದ ಪರಿಪಕ್ವನೆನಿಸೆನ್ನ ವರದ ಶ್ರೀರಾಮ ನಿಮ್ಮ ಚರಣ ಸೇವೆಯ ಘನತೆ 3
--------------
ರಾಮದಾಸರು
ಕರೆತಾರಬಾರದೇನೇ ರಂಗಯ್ಯನ ಬರಲಾರೆನೆಂದರೂ ಕರವಮುಗಿದಾದರೂ ಪ ಸರಸಿಜನಾಭನ ಅರವಿಂದಚರಣಕೆ ಎರಗಿ ಎರಗಿ ಮತ್ತೆ ಕರುಣಿಸೆಂದಾದರೂ ಅ.ಪ ನೆನೆದು ಪೂಜಿಸುವರ ಮನೆಗೆ ಬರುವೆಯೆಂದು ಮುನಿಜನ ಪೇಳ್ದುದು ಸಟೆಯಹುದೇನೋ ಜನನಿಯು ಜನಕನ ಅನುಜನಗ್ರಜನ ಘನತರ ಬಂಧುವು ನೀನೆಂದುಸುರಿ 1 ನಂದನಕಂದ ಗೋವಿಂದನ ಪಾದಾರ ವಿಂದವ ಕಾಣದೆ ಜೀವಿಸಲರಿಯೆ ಎಂದು ಪೇಳುತ ಮುಚುಕುಂದಗೆ ವಂದಿಸು ಮಂದಹಾಸದಿ ಬರುವ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರೆತಾರೆ ಕರೆತಾರೆ ಕರೆತಾರೆ ಸಖಿಜರ ಜರತಾರಿ ನೀರೆ ಅವರ ಸುರತ ರಂಗಯ್ಯನ ಗುರುತದ ಮಡದಿಯರ ಕರೆ ತಾರೆ ಪ. ಸೃಷ್ಟಿಗಧಿಕವಾದ ಪಟ್ಟಾವಳಿಯ ಸೀರೆಘಟ್ಟಿ ಕಂಕಣವ ನಡುವಿಟ್ಟುಘಟ್ಟಿ ಕಂಕಣವ ನಡುವಿಟ್ಟು ತಂದೆವ ಧಿಟ್ಟ ದ್ರೌಪತಿಗೆ ಉಡುಗೊರೆ 1 ಖಡ್ಡಿ ಪೈಠಣ ಸೀರೆ ದೊಡ್ಡ ಮುತ್ತಿನ ದಂಡೆಕಡ್ಡಿ ಬಳೆ ದೋರೆ ನಡುವಿಟ್ಟುಕಡ್ಡಿ ಬಳೆ ದೋರೆ ನಡುವಿಟ್ಟು ತಂದೆವಗುಣಾಢ್ಯ ಸುಭದ್ರಾಗುಡುಗೊರೆ2 ಅತ್ತಿ ಹೂವಿನ ಸೀರೆ ಕುತನಿ ಕುಪ್ಪುಸ ಸುತ್ತು ಮುತ್ತಿನ ನೆನೆದಂಡೆ ಸುತ್ತು ಮುತ್ತಿನ ನೆನೆದಂಡೆ ತಂದೆವ ಮಿತ್ರಿ ವೃಂದಾಗೆ ಉಡುಗೊರೆ 3 ಮೋತಿ ಚೂರಿನ ಸೀರೆ ಜಾತಿ ಮುತ್ತಿನ ದಂಡೆ ನೂತನವಾದ ಚವರಿಯ ನೂತನವಾದ ಚವರಿ ರಾಗಟೆಗೊಂಡೆಯ ಕಂಠಿ ಕಾಳಿಂದಿಗೆ ಉಡುಗೊರೆ4 ಸಾರಸನ ಸೀರೆ ತೋರ ಮುತ್ತಿನ ದಂಡೆಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ತಂದೆವನಾರಿ ಲಕ್ಷಣಾಗೆ ಉಡುಗೊರೆ5 ಅಂಬುಜಾಕ್ಷಿಗೆ ತಕ್ಕ ಗೊಂಬಿ ಪೈಠಣಿಸೀರೆ ಜಂಬುದ್ವೀಪದ ನೆನಿದಂಡೆ ಜಂಬುದ್ವೀಪದ ನೆನಿದಂಡೆ ತಂದೆವಜಾಂಬವಂತಿಗೆ ಉಡುಗೊರೆ6 ಸಾವಿರಕಬೆಲಿಯಾದ ಸೇಲ್ಯಾವಲಿ ಜವಳಿವೀರ ರಾಮೇಶನ ಮನಮೆಚ್ಚಿವೀರ ರಾಮೇಶನ ಮನಮೆಚ್ಚಿ(ದ) ಹದಿನಾರು ಸಾವಿರ ನಾರಿಯರಿಗೆ ಉಡುಗೊರೆ7
--------------
ಗಲಗಲಿಅವ್ವನವರು
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ ಕಾಲ ವಿಪರೀತದಿ ಅ ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ - ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ 1 ನಿತ್ಯ ನೇಮವು ನಿಂತಿತು - ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು 2 ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ 3
--------------
ಕನಕದಾಸ
ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ. ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು 1 ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು 2 ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು 3 ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ವೀರನಾರಾಯಣನೆದಯವ ತೋರಿ ಹೇಳು ಬೇಡುತಿಹೆನು 4
--------------
ವೀರನಾರಾಯಣ
ಕಾವುದೆಮ್ಮನು ನೀನು ದೇವರಂಗಯ್ಯ ಪ ಭಾವಮೈದುನಗೆ ಬೋವನಾದ ರಂಗಯ್ಯ ನೋವುಬಾರದಂತವನ ಕಾಯ್ದೆ ರಂಗಯ್ಯಾ 1 ಮಾಯವಾದಿಗಳ ಸಂಗ ಬಿಡಿಸೋ ರಂಗಯ್ಯ ತೋಯಜಾಕ್ಷನೆ ಬೇಡುವೆ ಸ್ವಾಮಿ ರಂಗಯ್ಯ 2 ದಾಸತ್ವ ಮಾತ್ರ ದಯಮಾಡೊ ರಂಗಯ್ಯ 3 ಸತ್ತು ಹುಟ್ಟುವಿಕೆ ಬಿಡಿಸಿ ಸಲಹೊ ರಂಗಯ್ಯ ಮತ್ತೇನು ಬೇಡೆನು ಮಮ ಬಂಧು ರಂಗಯ್ಯ 4 ರಂಗೇಶವಿಠಲ ನೀನಲ್ಲವೆ ರಂಗಯ್ಯ ಭಂಗಪಡಲಾರೆ ಭವಹಿಂಗಿಸು ರಂಗಯ್ಯ 5
--------------
ರಂಗೇಶವಿಠಲದಾಸರು
ಕೃಷ್ಣ | ಕುಣಿದಾಡಿ ಬಾರೋ ಪ ಕಿರುನಗೆ ಸೂಸುತ| ನಲಿದಾಡಿ ಬಾರೋಅ.ಪ ರಂಗಯ್ಯ ಬಾರೋ | ಕೃಷ್ಣಯ್ಯ ಬಾರೋ ಮಂಗಳಾತ್ಮಕ ಮುದ್ದು | ಕಂದಯ್ಯ ಬಾರೋ1 ನೊರೆಹಾಲ ನೀವÉ | ಸರಸದಿ ಬಾರೋ | ನವನೀತವೀಯುವೆ | ನಲಿದೋಡಿ ಬಾರೋ 2 ಕಜ್ಜಾಯ ಕೊಡುವೆ| ಮುದ್ದು ನೀ ಬಾರೋ || ಗೆಜ್ಜೆನಾದವ ಮಾಡಿ | ಎದ್ದೋಡಿ ಬಾರೋ3
--------------
ವೆಂಕಟ್‍ರಾವ್
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ ಕೊಳಲನೂದೋ ಇನ್ನೊಮ್ಮೆ ಕೃಷ್ಣಯ್ಯಾ ಪ ಕೊಳಲನೂದೋ ದ್ವಾರಕಾ ಪುರನಿಲಯಾ ಅ.ಪ. ಎಡಹೆಗಲಲ್ಲೆಡಗಲ್ಲಂವ ನೀಡೀ ಕುಡಿ ಹುಬ್ಬುಗಳಲ್ಲಾಡಿಸುತ್ತ 1 ಮೃದುತರ ತುದಿ ಬೆರಳಿಂದೊತ್ತುತ ಮಧುರಾಧರದಲ್ಲಿಟ್ಟು ರಂಗಯ್ಯ2 ನಾದ ಮೂರುತಿ ಗೋಪೀಜನಲೋಲಾಶ್ರೀದವಿಠಲ ಗೋಪಾಲಬಾಲ3
--------------
ಶ್ರೀದವಿಠಲರು
ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಕೋಲ ಕೋಲೆನ್ನ ಕೋಲ ಕೃಷ್ಣ ನೀಮದನಗೋಪಾಲನಾಗಿಮೆರೆದಿಯಲೊ ಕೃಷ್ಣ ಪ. ಅಂಬರ ತಕ್ಕ ಸುರುಳಿಯ ಮುಂಡಾಸಮುರಿಗಿಯವಂಕಿ ನಡುವಿಟ್ಟುಮುರಿಗಿಯವಂಕಿ ನಡುವಿಟ್ಟು ರುಕ್ಮಿಣಿಯವರಪುತ್ರ ಪ್ರದ್ಯುಮ್ನಗೆ ಉಡುಗೊರೆ1 ಮುತ್ತಿನಾಭರಣ ಹೆಚ್ಚಿನ್ಹೆಚ್ಚಿನ ಜವಳಿಮತ್ತೆ ಕೃಷ್ಣಯ್ಯನ ಸಭೆಯೊಳು ಮತ್ತೆ ಕೃಷ್ಣಯ್ಯನ ಸಭೆಯೊಳು ಇಟ್ಟೆವಪಾರ್ಥನು ಕೊಟ್ಟ ಉಡುಗೊರೆ 2 ಬೆಳಕಿನಂತೊಪ್ಪುವ ಥಳಥಳಿಸುವ ಜವಳಿ ನಳಿನಾಕ್ಷಿಯರು ಕುಳಿತ ಸಭೆಯಾಳು ನಳಿನಾಕ್ಷಿಯರು ಕುಳಿತ ಸಭೆಯಾಳಗೆ ಇಟ್ಟೆವಕುಳಿತ ಜನಕೆಲ್ಲ ಉಡುಗೊರೆ 3 ಅಂದವಾದ ಬಲು ಚಂದ ಚಂದದ ಜವಳಿ ತಂದೆ ಕೃಷ್ಣಯ್ಯನ ಸಭೆಯೊಳು ತಂದೆ ಕೃಷ್ಣಯ್ಯನ ಸಭೆಯೊಳಗೆ ಇಟ್ಟೆವಬಂದ ಜನಕೆಲ್ಲ ಉಡುಗೊರೆ 4 ಸಾಸಿವೆ ಬಣ್ಣದ ಸೀರೆ ಕುಸುಬೆ ಬಣ್ಣದ ಕುಪ್ಪುಸ ಲೇಸಾದ ಅಡಿಕೆ ನಡುವಿಟ್ಟುಲೇಸಾದ ಅಡಿಕೆ ನಡುವಿಟ್ಟು ರುಕ್ಮಿಣಿಯದಾಸಿಯರಿಗೆಲ್ಲ ಉಡುಗೊರೆ 5 ಹತ್ತೆಂಟು ಸಾವಿರ ಸುತ್ತುವ ಮುಂಡಾಸ ಮತ್ತ ಬೆಟ್ಟಡಕಿ ನಡುವಿಟ್ಟುಮತ್ತ ಬೆಟ್ಟಡಕಿ ನಡುವಿಟ್ಟು ರಂಗಯ್ಯನ ಭೃತ್ಯರಿಗೆಲ್ಲ ಉಡುಗೊರೆ6 ಸುಳಿಬಳ್ಳಿಯಂತೊಪ್ಪುವ ಬಿಳಿ ಚೀಟಿನ ಜೂಲು ಎಳೆ ಮಾವುಗಳ ನಡುವಿಟ್ಟುಎಳೆ ಮಾವುಗಳ ನಡುವಿಟ್ಟು ರಂಗಯ್ಯನ ಗಿಳಿಗಳಿಗೆಲ್ಲ ಉಡುಗೊರೆ 7 ಅಕ್ಕರದಿಂದ ಹೊಸ ಚಿಕ್ಕ ಚೀಟಿನ ಜೂಲುತಕ್ಕ ಕುಲಾಯಿ ಮುರುವಿಟ್ಟುತಕ್ಕ ಕುಲಾಯಿ ಮುರುವಿಟ್ಟು ರುಕ್ಮಿಣಿಯ ಬೆಕ್ಕಿಗೆ ಕೊಟ್ಟ ಉಡುಗೊರೆ 8 ಅಷ್ಟೂರಿಗೆ ಉಡುಗೊರೆ ತಕ್ಕಷ್ಟು ಕೊಟ್ಟೆವಕೃಷ್ಣಯ್ಯನ ಮನಕೆ ಬರಲಿಲ್ಲಕೃಷ್ಣಯ್ಯನ ಮನಕೆ ಬರಲಿಲ್ಲ ಕುಬ್ಚಿಎಂಬೊ ಸೊಟ್ಟ ಸ್ತ್ರೀಯಳ ಕರೆಸಿಲ್ಲ9 ಎಲ್ಲರಿಗುಡಗೊರೆ ಬಲ್ಲಷ್ಟು ಕೊಟ್ಟೆವಚಲುವನ ಮನಕೆ ಬರಲಿಲ್ಲಚಲುವನ ಮನಕೆ ಬರಲಿಲ್ಲ ಗೋಕುಲದಗೊಲ್ಲ ನಾರಿಯರ ಕರೆಸಿಲ್ಲ10 ತರಹ ತರಹದ ಜವಳಿ ದುಂಡು ಮುತ್ತಿನ ಪದಕಪೆಂಡಿ ಸರಗಳ ನಡುವಿಟ್ಟುಪೆಂಡಿ ಸರಗಳ ನಡುವಿಟ್ಟು ರಾಮೇಶನಿನ್ನ ಪಂಡಿತರಿಗೆಲ್ಲ ಉಡುಗೊರೆ 11
--------------
ಗಲಗಲಿಅವ್ವನವರು