ಒಟ್ಟು 165 ಕಡೆಗಳಲ್ಲಿ , 59 ದಾಸರು , 160 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚನ್ನಕೇಶವ ಚನ್ನಕೇಶವ ಚನ್ನಕೇಶವ ತ್ರಾಹಿಮಾಂ ಪ ಮನ್ನಿಸೆನ್ನನು ರಕ್ಷಿಸೆನ್ನನು ಸನ್ನುತಾಂಗನೆ ಪಾಹಿಮಾಂ ಅ.ಪ. ಭವದಿ ನೊಂದೆನು ಸವೆದು ಬೆಂದೆನು ಜವದಿ ಬಂದೆನು ತ್ರಾಹಿಮಾಂ ಭವಣೆಯನು ಪರಿಹರಿಸಿ ದೇವನೆ ಭವ ವಿದೂರನೆ ಪಾಹಿಮಾಂ1 ನಾನು ಏನನು ನಿನ್ನ ಮರತೆನು ನಾನು ಬಡವನು ತ್ರಾಹಿಮಾಂ ಗಾನ ಲೋಲನೆ ಬಿಡದೆ ಭಜಿಸುವೆ ದೀನ ವತ್ಸಲ ಪಾಹಿಮಾಂ 2 ಭಕ್ತವತ್ಸಲ ಭಕ್ತದಾಯಕ ಭಕ್ತಿಯರಿಯೆನು ತ್ರಾಹಿಮಾಂ ಮುಕ್ತಿದಾಯಕ ಶಕ್ತಿ ಮೂರುತಿ ಮುಕ್ತಿ ಪಾಲಿಸಿ ಪಾಹಿಮಾಂ3
--------------
ಕರ್ಕಿ ಕೇಶವದಾಸ
ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಪ ದಿಗಳ ವೆಗ್ಗಳವ ನೋಡಲಿ ಬಂದ್ಯೋ ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ 1 ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ ಬಿಡದೆ ನಕ್ರನ ಕೂಡ ಕಾದಿ ಸೋತು ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ 2 ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ ಜಠರದೊಳು ಜಗಕರ್ತುನೆಂದೆನಿಸಿದೆ ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ3
--------------
ವಿಜಯದಾಸ
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗ ಜಯ ಜಯ ಶ್ರೀ ಮಹಾಲಿಂಗ ಪ. ಜಯರಹಿತಾಚ್ಯುತಪ್ರಿಯ ಬುಧಾರ್ಚಿತ ದಯಾಸಾಗರ ಭಸಿತಾಂಗ ನಯನತ್ರಯ ನಮಿತಾಮರಸಂಘಾ- ಮಯಹರ ಗಂಗೋತ್ತುಮಾಂಗ 1 ಭೂತೇಶ ಭೂರಿಭೂತಹೃದಿಸ್ಥಿತ ಭೂಷಣೀಕೃತಭುಜಂಗ ಪೂತಾತ್ಮ ಪರಮಜ್ಞಾನತರಂಗ ಪಾತಕತಿಮಿರಪತಂಗ2 ಲಂಬೋದರಗುಹಪ್ರಮುಖಪ್ರಮಥನಿಕು- ರುಂಬಾಶ್ರಿತ ಜಿತಸಂಗ ಗಂಭೀರಗುಮಕದಂಬೋತ್ತುಂಗ- ಸಂಭೃತ ಹಸ್ತಕುರಂಗ 3 ಸೋಮಶೇಖರ ಮಹಾಮಹಿಮ ವಿಜಿತ- ಕಾಮ ಕಲಿಕಲುಷಭಂಗ ರಾಮನಾಮ ಸ್ಮರಣಾಂತರಂಗ ವಾಮಾಂಕಾಸ್ಥಿತ ಪಿಂಗ 4 ದೇವ ಲಕ್ಷ್ಮೀನಾರಾಯಣ ಪದರಾ- ಜೀವನಿರತ ವನಭೃಂಗ ಪಾವಂಜಾಖ್ಯ ಗಿರೀಶ ಶುಭಾಂಗ ಕೇವಲ ಸದಯಾಪಾಂಗ5
--------------
ತುಪಾಕಿ ವೆಂಕಟರಮಣಾಚಾರ್ಯ
ತಂದುಕೊಟ್ಟಳು ವೀಳ್ಯ ಮಂದಗಮನೆ ಗೋಪಿನಂದನವನ ನಿಧಿ ಆನಂದನ ಕರದಿ ಪ ಮುತ್ತು ಬಿಗಿದ ನವರತ್ನದ ತಬಕದಿಕೆತ್ತಿದ ಕಂಕಣ ಶೋಭಿತ ಉತ್ತಮ ಕರದಿ 1 ನಾಗವಲ್ಲಿಯ ದಳಾ ಪುನುಗು ಪತ್ತರಿಜಾಜಿ ಭಾಗ ಕಾದಿರೆ ನಾನಾ ಭೋಗ ದ್ರವ್ಯಗಳುಳ್ಳ 2 ಭೂಷಿತಾಂಗಿಯು ಮಂದಹಾಸಾ ಮಾಡುತ ಇಂದಿ-ರೇಶನೆದುರಲಿ ಇಭರಾಶಿ ಸುಂದರಿಯು 3
--------------
ಇಂದಿರೇಶರು
ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ. ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1 ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2 ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3 ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4 ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5
--------------
ಮೋಹನದಾಸರು
ದಾರಿತೋರೋ ಮಾಯಾಕಾರ ಕರುಣಾಸಾಗರ ಪ ಪಾರುಗಾಣಲಾರೆನಯ್ಯ ದೂರಮಾಡದಿರಯ್ಯ ಅ.ಪ ಕರವ ನೀಡಿದೆ ಹರಿಯೇ ನಿನ್ನ ಭಜನೆಯೆಂಬುದ ಮರೆತು ಮೆರೆದೆನಯ್ಯ 1 ಸ್ನಾನ ನೇಮ ಜಪ ತಪಂಗಳ ಜ್ಞಾನವಿಲ್ಲವೈ ಧ್ಯಾನ ಹೋಮ ಭಜನೆ ಪೂಜೆ ಏನನರಿಯೆನಯ್ಯ 2 ನಿನ್ನ ದಾಸರದಾಸನೆಂದು ಎನ್ನ ಪಾಲಿಸೈ ಸನ್ನುತಾಂಗ ಮಾಂಗಿರೀಶ ನಿನ್ನ ನಂಬಿದೆ [ನಯ್ಯ] 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ ಕೂಡಿದೆಡೆಯಲಿ ಕಪಟವೆಸಗುವನೆ ದ್ರೋಹಿಮಾಡಿದುಪಕಾರವನು ಮರೆವವನೆ ದ್ರೋಹಿಚಾಡಿ ಕೊಂಡೆಗಳನಾಡಿ ನಡೆವವನೆ ದ್ರೋಹಿರೂಢಿಯೊಳು ಬಾಳುವರ ಸಹಿಸದನೆ ದ್ರೋಹಿ 1 ಸತಿಯಿದ್ದು ಪರಸತಿಯ ಬಯಸುವನೆ ದ್ರೋಹಿಹೆತ್ತವರೊಡನೆ ಕಲಹ ಮಾಡುವನೆ ದ್ರೋಹಿಯತಿಗಳನು ಒಂದೆ ಸಮ ನಿಂದಿಸುವನೆ ದ್ರೋಹಿಸತಿಯನ್ನು ಪರರ ವಶ ಗೈವವನೆ ದ್ರೋಹಿ 2 ಹೊನ್ನಿದ್ದು ಅನ್ನದಾನ ಮಾಡದವನೆ ದ್ರೋಹಿತನ್ನ ಗುರು ಸತಿಯ ಬಯಸುವವನೇ ದ್ರೋಹಿಸನ್ನುತಾಂಗ ಕಾಗಿನೆಲೆಯಾದಿಕೇಶವನತನ್ನೊಳಗೆ ತಾ ತಿಳಿದು ಸುಖಿಸದವ ದ್ರೋಹಿ 3
--------------
ಕನಕದಾಸ
ಧನ್ಯನಾದೆನಾ ಗುರು ಪ ಸನ್ನುತಾಂಗ ಗುರುರಾಜರ ನೋಡಿಅ.ಪ ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು | ಸುಖಗಳನೀವರ ನೋಡಿ 1 ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ| ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು| ಅಧಮರ ಮುರಿದಿಹ ಧೀರರ ನೋಡಿ2 ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಕೊಂಡಾಡುತೆ ನೋಡಿ3
--------------
ಶ್ರೀಶ ಕೇಶವದಾಸರು
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ ಇನ್ನು ಪಾಲಿಸು ದೇವನೆ ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ ಇನ್ನು ಕರುಣಿಸೊ ಕೇಶವಾ ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ ನಿನ್ನ ಮೊರೆಯಿಡುವೆ ಹರಿಯೇ ಚನ್ನ ಶ್ರೀಗೋಪಾಲ ಗೋವಿಂದ ಕೇಶವ ನಿನ್ನ ನಾಮನಿರಂತರವು ಪಾ- ವನ್ನ ಮಾಡಲಿ ಎನ್ನ ಜಿಹ್ವೆಯಾ 1 ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ ಭೇದವಿಲ್ಲದೆ ಕರುಣಿಸೊ ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ- ಮಾದರವ ನಿತ್ತು ಸಲಹೊ ಮೋದ ಪಡುವ ಭಾಗ್ಯ ಮಾಧವನೆ ದಯಪಾಲಿಸೋ ಮಾಧವ ಜನಾರ್ದನ ಕ್ರೋಧಿ ಸಂವತ್ಸರವು ಭಕುತರ ಕ್ರೋಧಗಳ ಕಳೆಯುತ್ತ ಸಲಹಲಿ2 ಶರಣೆಂದು ಬೇಡುವೆ ಪರಿಪರಿ ಅಘಗಳ ಪರಿಹರಿಸೆಂದು ನಾ ಸ್ಮರಿಸಿಬೇಡುವೆನು ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ ಹರುಷದಿ ನೆಲಸೆನ್ನ ಹೃದಯದಲಿ ದೇವ ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ ಕಡುಭಾಗವತರ ಸಂಗವನೆ ನೀಡೈ ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ ತಡೆಯದಲೆ ಪಾಲಿಸುತ ಪೊರೆ ಶ್ರೀ ಕಮಲನಾಭ ವಿಠ್ಠಲನೆ ದಯದಲಿ 3
--------------
ನಿಡಗುರುಕಿ ಜೀವೂಬಾಯಿ
ನಡಿ ನೀರೇ ಪೋಪಾ ದೇವಿ ಇದ್ದೆಡೆಗೆ| ಕಡು ಕೋಪವ್ಯಾಕ ಶ್ರೀರಮೆ ಕೂಡ ಎನಗೆ ಪ ಫುಲ್ಲ ಲೋಚನೆ ಕುಂದರದನೆ ಸುಫಣಿ ವೇಣಿ| ಮಲ್ಲಿಕಾ ಮಂದಸ್ಮಿತೆ ಚಲ್ಪಕದಪು| ಬಿಲ್ಲು ಕಾಮನ ಸೋಲಿಪ ಭ್ರೂಲತೆಯುಳ್ಳ| ಸಲ್ಲಲಿತಾಂಗಿಯಾವಾಗ ಕಂಡೆಪೆನೆ 1 ಹುಣ್ಣಿಮೆ ಚಂದ್ರನ ಮಂಡಲ ಪೊಳೆವಾ|ಪೊಂ| ಬಣ್ಣವದನೆ ಮಹಾಸಿಂಹನ ಜರೆವಾ| ಸಣ್ಣ ನಡುವಿನಿಂದೊಪ್ಪುವ ಸಿರಿಯನು| ಕಣ್ಣಾರೆನೋಡಿ ಮತಾಡುವೆ-ನೇಳೆ 2 ಬರಬಾರದು ದೇವಿಯಗಲಿ ಬಂದರ| ಸ್ಥಿರವಾಗದು ಅರಫಳಿಗೆನ್ನ ಮನಸು| ಗುರುಮಹಿಪತಿ ಸುತ ವರದ ದೇವತೆಯಾಗಿ| ಧರೆಯೊಳು ಮೆರವಾ ಶ್ರೀ ಲಕ್ಷೀಯ ತೋರೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮಾಮಿ ದಿವ್ಯ ತರಂಗೆ ಶಿವೆಗಂಗೆ ಕೃಪಾಪಾಂಗೆ ನಮಾಮಿ ಪ ದಯಾಸಾರೆ ಸುಧಾಕಾರೆ ಧಿಯಾದೊರೆ ಗುಣಾಕರೆ ತ್ರಯೀವಾಣಿ ಮಹಾವೇಣಿ ಸುರೂಪಿಣಿ ನಮಾಮಿ 1 ಶುಭಂ ದೇಹಿ ಕೃಪೆ ಪಾಹಿ ಶುಭೇ ಭಾಗೀರಥೀ ಸತೀ ಪರಂಪಾರೇ ಜಲಾಧಾರೆ ಜಿತಕ್ಷೀರೆ ನತಾಮರೆ ನಮಾಮಿ 2 ಗಿರೀಶಾಂಕಾತ್ ಪರಂಶೈಲಾತ್ ಧರಾಂ ಪ್ರಾಪ್ತೇ ಪುನೀಹಿಮಾಂ ಮಹಾಭೂತೆ ಸುವಿಖ್ಯಾತೇ ಧರಾನಾಥೇ ಸತಾಂಗತೇ ನಮಾಮಿ 3 ವರಂಧೇನುಪುರಸ್ತೋಹಂ ಭಜೆ ದೇವೀಂ ಭವಾಪಹಾಂ ಕನ್ಯಾಂ ಸುಪಾವನಾಂ ನಮಾಮಿ 4
--------------
ಬೇಟೆರಾಯ ದೀಕ್ಷಿತರು
ನರಜನ್ಮವನು ಕೊಟ್ಟು ಸಲಹಿದೆ ಯೆನ್ನನು ಕೊರತೆಯೇನಿಲ್ಲವೋ ಗೋವಿಂದಾ ಪ ಉರುತರ ಜನ್ಮವ ಸುರುಚಿರಾಂಗಗಳನ್ನು ಅರಿವು ಇಂದ್ರಿಯಗಳ ಸ್ಮರಣೆಯಿಂ ಕೂಡಿದ ಅ.ಪ ನಿನ್ನಧ್ಯಾನವ ಗೈವವೊಲೆನ್ನ ಈ ರಸನೆಯು ನಿನ್ನ ಮೂರ್ತಿಯ ನೋಡಲಿ ಈ ನೇತ್ರಾ ನಿನ್ನ ಪೂಜಿಸೆ ಹಸ್ತ ನಿನ್ನ ಚರಿತೆಗೆ ತರ್ಕಾ ನಿನ್ನ ನಮಿಸಲು ಶಿರವು ನಿನ್ನಾಲಯಕೆ ಕಾಲು 1 ನಿನ್ನ ಪಾದದ ತುಳಸಿಯನ್ನು ಘ್ರಾಣಿಸ ಇನ್ನೇನು ಬೇಡವಯ್ಯ ಸನ್ನುತಾಂಗ ಗೋಪಾಲ 2 ಧನಕನಕಾಂಬರ [ವಸ]ನದ ಧರ್ಮ ಮೋಕ್ಷದೊ ಳಿನಿತಾಸೆಯೆನಗಿಲ್ಲ ಕೇಳಯ್ಯ ಜನುಮ ಜನುಮದೆ ನಿನ್ನ ಘನಪುಣ್ಯ ನಾಮವ ನೆನೆವ ಭಕ್ತಿಯು ಮಾತ್ರ ಮನದೆ ನೆಲೆಗೊಳಿಸಯ್ಯ 3 ದೇವದೇವನೆ ನಿನ್ನ ಸೇವಕರಿಗೆ ಯೆನ್ನ ಸೇವಕನೆನಿಸದೆ ಬಿಡಬೇಡಾ ದಾಸರಸೇವಿಸಲೆನ್ನ ಜೀವ ತುಡಿಯುವುದೊ ವಿಸಲೆ ದಾಸರದಾಸ ಶ್ರೀ ಮಾಂಗಿರಿಯರಸ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಲಿನಲಿದರು ದ್ವಾರಕಾಪುರದಿ ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ. ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ. ಅಂಬರದಲಿ ಭೇರಿ ವಾದ್ಯಗಳೆಸಗೆ ತುಂಬುರು ನಾರದರು ಗಾನವ ಪಾಡೆ ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1 ವಿಪ್ರರು ವೇದ ಮಂತ್ರವ ಪಠಿಸೆ ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2 ದೇವಕಿ ವಸುದೇವನಿಗ್ಹರುಷವನಿತ್ತು ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ ಕಾವ ಸಕಲ ಜೀವರ ಹೃದಯನಿವಾಸ ದೇವ ಯಶೋದೆ ನಂದ ಕಂದನ ನೋಡಿ 3
--------------
ಸರಸ್ವತಿ ಬಾಯಿ
ನಾಟ್ಯಕಲಾವಿದ ಶಿವನೋ ಕೇಶವನೋ ನಾಟ್ಯಕೆ ನಲಿವನಾ ಭವನೋ ಮಾಧವನೋ ಪ ನಾಟ್ಯಾಪ್ಸರಗಣವೇಷ್ಟಿತನಿವನು ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ ಝಣ ಝಣ ಝಣರವ ರಣಿಪನಿವನು ಕಿಣಿ ಕಿಣಿ ಕಿಣಿರವ ಚೆಲ್ಲುವನವನು ಗಣ ಗಣ ನಾದದಿ ವರ್ತಿಪನಿವನು ಮಣಿಗಣನಾದದಿ ನರ್ತಿಪನವನು 1 ಮುರಳಿಯಗಾನವ ಪಾಡುವನಿವನು ನಿರುಪಮ ದಿವಿಜಾ ನರ್ತಕನವನು ಭರತನಾಟ್ಯ ಕಲಾ ಕೋವಿದನಿವನು [ವರ ನಾಟ್ಯ ನಟನಾ ನಿಪುಣನವನು] 2 ಭೇರಿನಗಾರೀ ತುತ್ತೂರಿ ಡಮರುಗ ಕರಿಮುಖ ಷಣ್ಮುಖಯುತ ಭಸಿತಾಂಗ ನಾರದ ತುಂಬುರ ವೀಣೆ ಮೃದಂಗ ಸಾರಗಾನಯುತ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿತ್ಯ ತೃಪ್ತಾ ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ಪ ದರುಶನಕೆ ಬಂದವ ನಾನಲ್ಲವೆಂದು ನಾನಂದು ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ1 ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು ಸರುವ ಚೇತನ ಜಡ ಮತ್ತೆ ಮತ್ತೆ ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ 2 ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ 3 ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು ಅಕಟಕಟ ನಿನ್ನ ದೊರೆತನಕೆ ಏನೆಂಬೆ ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ 4 ಹೊನ್ನು ಹಣ ತೂಗಬೇಕಾದರೆ ಮೊದಲಿಗೆ ಚಿನ್ನ ಹಾಕುವರೇನೊ ಚಿನ್ಮಯರೂಪ ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ ವನ್ನ ಶಾರೀರನೆ ನಿನ್ನ ಕಾಂಬುವದುಚಿತ 5 ಜರೆಮರಣರಹಿತ ಸುಜನರ ಪರಿಪಾಲಾ ನಿ ನಿತ್ಯ ವಜ್ರಪಂಜರಾ ಜರಗೆ ವರವಿತ್ತ ದನುಜರ ವಂಶನಾಶಾ ನಿ ರ್ಜರ ನದಿ ಜನಕಾಂಬುಜ ರವಿ ನಯನ ದೇವಾ 6 ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ ಲಾಲಿಸು ಲಲಿತಾಂಗಿ ಲಕುಮಿ ರಮಣಾ ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು7
--------------
ವಿಜಯದಾಸ