ಒಟ್ಟು 48 ಕಡೆಗಳಲ್ಲಿ , 31 ದಾಸರು , 46 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಪ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಅ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು 1 ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು ಹೋಯಿತಮ್ಮ2 ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ 3 ಊರೊಳಿಂತಾಯ್ತೆಂದು ಸಾರಿದೆವೆ ನಾರೇರುಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರುನೂರಾರು ಗೆಳತೇರು ಉಳಿದ ಹಾಲನು ಮಾರಿದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು 4 ಓರಗೆ ಹೆಂಗಳು ನಾವು ನೀರಾಟವಾಡಲಿಕೆಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿತೋರದುಂಚ ಕಡಹದ ಮರನೇರಿ ನೋಡುತ ಕುಂತನೆ 5 ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋಕಿಟ್ಟನ ಕೈಚಳಕವೆಂದು ನಾವಷ್ಟದಿಕ್ಕುಗಳ ನೋಡಿದೆವೆತುಟ್ಟತುದಿ ಕೊಂಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ 6 ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲುವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದಬಂಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ 7 ಪುಷ್ಪಗಂಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ8 ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರುತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿಂದಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದುಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ 9 ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತ್ರವನಿತ್ತನೆ 10 ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟುಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆಪುಂಡ ನಿನ್ನಣುಗ ನೆಲೆಯಾದಿಕೇಶವರಾಯಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ 11
--------------
ಕನಕದಾಸ
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಊದೊ ಕೊಳಲನು ಕೃಷ್ಣ ಊದೊ ಕೊಳಲನುವೇದ ವೇದ್ಯ ಊದು ಕೊಳಲ ನಾದ ತುಂಬೆ ನಭದಿ ಕೃಷ್ಣ ಪಮದನಜನಕ ಮೋಹನಾಂಗಚದುರೆಯರಿಗೊಲಿದು ವನದಿವಿಧ ವಿಧ ಕ್ರೀಡೆಗಳನಾಡಿಮುದವನಿತ್ತ ಮಧುಸೂದನನೆ 1ಗೋಪಿಕಾ ಸ್ತ್ರೀಯರ ವಾಕ್ಯಶ್ರೀಪತಿಯುಕೇಳಿಮುದದಿತಾಪಕಳೆದುಸುರರುತಲೆಯತೂಗೆ ಹರುಷದಿಂದಕೊಳಲನೂದಿದ ಚಲುವ ಕೊಳಲನೂದಿದ 2ನಾರಿಯರು ನಲಿದು ಬಂದುವಾರಿಧಿಯೊಳು ಸರಸವಾಡೆಮಾರಮಣನು ಸೀರೆಗಳನುಗಾರುಮಾಡಿ ಕದಿವರೇನೊತಾರೊ ವಸನವದುರುಳಕೃಷ್ಣ ತಾರೊ ವಸನವÀ3ಅಂಗನೆಯರೆ ನಿಮ್ಮ ವ್ರತಕೆಭಂಗವಾದ ಕಾರ್ಯವೆಸಗೆವಂದಿಸಿದರೆ ಕೊಡುವೆನೆಂದುರಂಗ ನಲಿದು ನುಡಿದ ಮುದದಿವಸನನೀಡಿದ ರಂಗವಸನನೀಡಿದ4ತರುಳರೆಲ್ಲ ಕೂಡಿಕೊಂಡುಕರುಗಳನ್ನೆ ಪಾಲಿಸುತಿರೆಮರೆಯ ಮಾಡಿ ಕರುಗಳನ್ನುದುರುಳತನವು ತರವೆ ಕೃಷ್ಣತಾರೊ ಕರುಗಳ ಕೃಷ್ಣ ತಾರೊ ಕರುಗಳ 5ಮಾತೆಯರನೆ ಅರಸುತಿರಲುಪ್ರೀತಿಯಿಂದ ಕರುಗಳನ್ನುಜೋಕೆಯಿಂದ ಪಿಡಿದು ತರಲುಯಾತಕೀಪರಿ ನಿಂದಿಸುವದುನೋಡಿ ಕರುಗಳ ನಿಂತಿರುವದು ನೋಡಿ ಕರುಗಳ 6ಗೊಲ್ಲತಿಯರ ಮನೆಯ ಪೊಕ್ಕುಮೆಲ್ಲುತಿರಲು ಬೆಣ್ಣೆ ಮೊಸರುನಲ್ಲೆಯರು ಪಿಡಿದು ಹರಿಯನಿಲ್ಲೊ ನಿಲ್ಲೊ ನಿಲ್ಲೊ ಕೃಷ್ಣಚೋರ ಕೃಷ್ಣನೆ ತೋರೊ ನಿಜವಜಾರಕೃಷ್ಣನೆ7ಚಿಕ್ಕ ಪ್ರಾಯದವರೆಕೇಳಿಸೊಕ್ಕಿನಿಂದ ನುಡಿವರೇನೆಬೆಕ್ಕು ತಿಂದ ತೆರವರಿಯದೆಧಿಃಕರಿಸುವುದುಚಿತವಲ್ಲನುಡಿವರೇನೆಲೆ ನಿಷ್ಠುರ ನುಡಿವರೇನೆಲೆ 8ಮಕ್ಕಳೆಲ್ಲ ಆಡುತಿರಲುಕಕ್ಕು ಬಿಕ್ಕು ಮಾಡಿಅವರದಿಕ್ಕು ದಿಕ್ಕುಗಳಿಗೆ ನಡೆಸಿಠಕ್ಕುತನವು ತರವೆ ಕೃಷ್ಣನಡತೆಯಲ್ಲವೊತುಡುಗಕೃಷ್ಣ ನಡತೆಯಲ್ಲವೊ9ಮಕ್ಕಳಾಡುತಿರಲು ಮಧ್ಯಸರ್ಪವೆರಡು ಕಾದಿ ಬರಲುದಿಕ್ಕು ತೋರದಂತೆ ಭಯದಿದಿಕ್ಕು ದಿಕ್ಕಿಗೆ ಓಡದಿಹರೆದುಡುಕು ನನ್ನದೆ ದೂರುವಿರೆನ್ನ ದುಡುಕು ನನ್ನದೆ 10ಹರಿಯ ಮಾತುಕೇಳಿಮುದದಿಹರುಷದಿಂದ ನಮಿಸಿ ಕೃಷ್ಣಗೆತ್ವರಿತದಿಂದಲಿ ಒಲಿಯೊ ಮುರಳೀ-ಧರನೆ ಹರುಷದಿಂದ ಕೃಷ್ಣನಮಿಸಿ ಬೇಡುವೆವೊ ಕೃಷ್ಣ ಸ್ಮರಿಸಿ ಪಾಡುವೆವೊ 11ಸರಸವಾಡÀುತಿಹಿರಿ ಎನ್ನಸ್ಮರಣೆಯಿಂದ ತನುವ ಮರೆತುಕ್ಷಮಿಪೆ ನಿಮ್ಮ ಗೃಹಕೆ ತೆರಳಿವನಜಮುಖಿಯರೆಲ್ಲರುತೆರಳಿರೆಂದನು ತರುಣಿಯರೆನ್ನ ಸ್ಮರಿಸಿರೆಂದನು 12ಕರುಣದಿಂದ ಸಲಹುತಿಹೆನುದುರಿತವೆಲ್ಲ ತರಿದು ಮುದದಿಕಮಲನಾಭ ವಿಠ್ಠಲನೆಂದುಕುಣಿದು ಪಾಡಿ ವನಿತೆಯರೆನಲಿದು ಪಾಡಿರೆ ನಾರಿಯರೆಲ್ಲ ಕುಣಿದು ಪಾಡಿರೆ 13
--------------
ನಿಡಗುರುಕಿ ಜೀವೂಬಾಯಿ
ಏನುಚೋದ್ಯಶ್ರೀನಿಧೆಹರಿಮಾನಿನಿಶ್ರೀದೇವಿ ಭೂದೇವಿರಮಣಪಸೃಷ್ಟಿಕರ್ತನೆಂದು ಪೇಳ್ವರು ಪಾಂಡವರ ಮನೆಯಬಿಟ್ಟಿ ಬಂಡಿಬೋವನೆಂಬೋರು ಪಾಂಚಾಲಿಗೆ ಒದಗಿದಕಷ್ಟಕಳೆದÀು ಪೊರೆದನೆಂಬೊರೊಕೆಟ್ಟದಾನವರ ಅಟ್ಟುಳಿಯ ಕಳೆದುದುಷ್ಟಕಂಸನವಧೆಯ ಸ್ಪಷ್ಟ ಪೇಳುತಿಹರೊ 1ಗಜನ ಸಲಹಿ ಪೊರೆದನೆಂಬೊರೊ ನೆಗಳೆಯನು ಸೀಳಿತ್ರಿಜಗದೊಡೆಯ ಶ್ರೀಶನೆಂಬೊರೊ ಪ್ರಹ್ಲಾದ ಧೃವಗೆನಿಜಸೌಭಾಗ್ಯ ಇತ್ತೆ ಎಂಬೊರೊವಿಜಯಸಾರಥಿಯ ವಿಶ್ವರೂಪ ತೋರಿಸುಜನರನ್ನು ಪೊರೆದ ನಿಜವ ಪೇಳುತಿಹರು 2ವತ್ಸಾಸುರನ ಮಡುಹಿದೆಂಬೊರೊ ಅಡವಿಯಲಿ ಕಾಡ-ಕಿಚ್ಚನುಂಗಿ ಬೆಳೆದಿ ಎಂಬೊರೊ ತಾಯಿಗೆ ಬಾಯೋಳಹೆಚ್ಚಿನ್ವಿಷಯ ತೋರ್ದಿ ಎಂಬೊರೊಕಚ್ಚ ಬಂದ ಘಣಿಯ ಮೆಟ್ಟಿ ತುಳಿದು ಜಲವಸ್ವಚ್ಛಗೈದನೆಂದಾಶ್ಚರ್ಯ ಪೇಳುತಿಹರೊ 3ಕರಡಿ ಮಗಳು ಮಡದಿಯೆಂಬೊರೊ ಪುಷ್ಪವನು ತರಲುತೆರಳಿ ಯುದ್ಧ ಮಾಡ್ದನೆಂಬೊರೊ ದೇವೇಂದ್ರನ ಗೆಲಲುತರುಣಿ ಸಮರಗೈದಳೆಂಬೊರೊಮುರಳಿನಾದದಿಂದ ತರುಣಿಯರ ಮನವಮರುಳುಗೈದನೆಂದು ಪರಿಪರಿ ಪೇಳುವರೊ 4ಕೆಟ್ಟದ್ವಿಜನ ಪೊರೆದಿ ಎಂಬೊರೋ ವನವನವ ಚರಿಸಿಸುಟ್ಟ ದಾಸಗೊಲಿದೆ ಎಂಬೊರೋ ಒಪ್ಪಿಡಿಯ ಗ್ರಾಸವಕೊಟ್ಟದ್ವಿಜನ ಪೊರೆದಿಯೆಂಬೊರೊಅಟ್ಟಹಾಸದಿ ತಂದ ರುಕ್ಮಿಣಿಯ ತನ್ನಪಟ್ಟದರಸಿಯೆಂದು ಸ್ಪಷ್ಟ ಪೇಳುತಿಹರೊ 5ಶಿಲೆಯ ಸತಿಯಗೈದನೆಂಬರೊ ಅಡವಿಗಳ ಚರಿಸಿಬಲುಕಪಿಗಳ ಕೂಡ್ದನೆಂಬೊರೊ ಭಯ ಭಕ್ತಿಗೆ ಮೆಚ್ಚಿಫಲದ ಎಂಜಲ ಸವಿದನೆಂಬೊರೊ ಮೆಚ್ಚಿಸುಲಭದಿಂದ ದೈತ್ಯಕುಲವನೆಲ್ಲ ಸವರಿಛಲದ ದಶಶಿರನ ವಧೆಯ ಪೇಳುತಿಹರೊ 6ಪುಟ್ಟಬ್ರಹ್ಮಚಾರಿ ಎಂಬೋರೊ ಬಲಿರಾಜನ ಬೇಡಿಕೊಟ್ಟದಾನ ಕೊಂಡನೆಂಬೋರೊ ಈರಡಿಯನಳೆದುಮೆಟ್ಟಿ ಸಿರವ ತುಳಿದನೆಂಬೋರೊಎಷ್ಟು ಪೇಳಲಿ ನಿನ್ನ ಶ್ರೇಷ್ಠಗುಣಗಳನ್ನುದಿಟ್ಟ ಕಮಲನಾಭ ವಿಠ್ಠಲ ಸರ್ವೇಶ 7
--------------
ನಿಡಗುರುಕಿ ಜೀವೂಬಾಯಿ
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪಅರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
--------------
ನಿಡಗುರುಕಿ ಜೀವೂಬಾಯಿ
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿಮೃಗತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1ಖಳಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದುಶುಭವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜಪಿತನಿಗೆ ಬಿನ್ನೈಸೊ ತಮ್ಮ 7ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
--------------
ಪ್ರಾಣೇಶದಾಸರು
ಪ್ರಸನ್ನ ಶ್ರೀಕೂರ್ಮ5ಪ್ರಥಮ ಅಧ್ಯಾಯಶ್ರೀಕೂರ್ಮಪ್ರಾದುರ್ಭಾವಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ತನು ಕೂರ್ಮರೂಪಪಾಲಾಬ್ಧಿಜಾಪತಿಅನಘಅಜಿತ ಧನ್ವಂತರಿಲೀಲಾ ಮೋಹಿನಿಅನಘಶರಣು ಮಾಂಪಾಹಿಪವೇದಾದಿ ಸಚ್ಛಾಶ್ರ(ಪ್ರ)ಮೇಯ ವೇದವತೀಶಪದುಮಜಾಂಡವ ಪಡೆದ ಜಗದೇಕಭರ್ತಾಅದ್ವಿತೀಯನು ಸ್ವಾಮಿ ಸಮರಧಿಕರಿಲ್ಲದವವೇಧಮುಕ್ಕಣ್ಣಾದಿ ಸುರಸೇವ್ಯಪಾಹಿ1ಸತ್ಯ ಜ್ಞÕನಾನಂತ ಭೂಮಾದಿ ಗುಣನಿಧಿಯೇಸತ್ಯಸೃಷ್ಟಿ ಮಾಳ್ಪಿ ಸತ್ಯನಾಮಾಪ್ರತ್ಯಕ್ಷ ಪ್ರಮಾಣ ಸಿದ್ಧವು ಈ ಜಗತ್ತುತತ್ಸøಷ್ಟಿ ಪಾಲನಾದಿಗಳೆಲ್ಲ ಸತ್ಯ 2ಸೃಷ್ಟಿ ಪ್ರವಾಹವು ಅನಾದಿಯೂ ನಿತ್ಯವೂಘಟಾದಿ ಕಾರ್ಯಗಳ ಉಪಾದಾನ ಕಾರಣಮೂಲ ಜಡಪ್ರಕೃತಿಯೂ ಅನಾದಿಯೂ ನಿತ್ಯವೂಸೃಷ್ಟ್ಯಾದಿಕರ್ತಾ ನಿನ್ನಾಧೀನವು ಎಲ್ಲಾ 3ಕಾರ್ಯಕಾರಣಾತ್ಮಕ ಜಗತ್ತು ಸರ್ವಕ್ಕೂತೋಯಜಾಕ್ಷನೇ ನೀನು ನಿಮಿತ್ತ ಕಾರಣನುನಿಯಾಮಕನು ನೀನೇವೇ ಚಿದಚಿತ್ ಅಖಿಳಕ್ಕೂಅನ್ಯರಿಗೆ ಸ್ವಾತಂತ್ರ್ಯ ಸಾಮಥ್ರ್ಯವಿಲ್ಲ 4ವಿಧಿಶಿವಾದಿ ಸರ್ವ ಸುರಾಸುರರುಗಳಿಗೆಸತ್ತಾಪ್ರತೀತಿ ಪ್ರವೃತ್ತಿಪ್ರದ ಹರಿಯೇಭೂತಭವ್ಯ ಭವತ್ಪ್ರಭುವು ವಿಷ್ಣು ನೀನೇವೇಚೇತನಾ ಚೇತನಾಧಾರ ಸರ್ವತ್ರ 5ದೂರ್ವಾಸರ ಶಾಪ ನಿಮಿತ್ತದಿ ಸ್ವರ್ಗದಐಶ್ವರ್ಯವು ಕ್ಷಿಣವು ಆಗಿ ಬಹುವಿಧದಿದೇವಶತೃಗಳ ಬಲ ಉನ್ನಾಹವಾಗಲುದೇವರಾಜನು ಬ್ರಹ್ಮನಲ್ಲಿ ಪೋದ 6ವಾಸವವರುಣಾದಿ ಸುರರ ಮೊರೆಕೇಳಿಬಿಸಜಸಂಭವ ಶಿವ ಶಕ್ರಾದಿಗಳ ಕೂಡಿಶ್ರೀಶನೇ ರಕ್ಷಕನು ಎಂದು ನಿನ್ನಲ್ಲಿ ಬಂದುಸಂಸ್ತುತಿಸಿದನುಪರಮಪೂರುಷ ನಿನ್ನನ್ನ7ಅವ್ಯಯನೇ ಸತ್ಯನೇ ಅನಂತನೇ ಅನಘನೇಶ್ರೀವರನೇ ಪೂರ್ಣೈಶ್ವರ್ಯ ಮಹಾಪುರುಷದೇವವರೇಣ್ಯ ನಿನ್ನಲ್ಲಿ ಸ್ತುತಿ ಬ್ರಹ್ಮಸುವಿನಯದಿ ಮಾಡಿದ ವೇದಾರ್ಥಸಾರ 8ಸಹಸ್ರಾರ್ಕೋದಯ ದ್ಯುತಿ ಸುಂದರರೂಪಮಹಾರ್ಹ ಭಗವಂತಹರಿಈಶ್ವರನೇ ನೀನುಬ್ರಹ್ಮಾದಿಗಳ ಸ್ತುತಿಗೆ ಪ್ರಸನ್ನನು ಆಗಿಮಹಾನುಭಾವ ನೀ ಒಲಿದಿ ಕೃಪೆಯಿಂದ 9ಪದುಮನಾಭನೇನಿರ್ವಾಣಸುಖಾರ್ಣವನೇಪದುಮಭವ ಸನ್ನಮಿಸಿ ಪೇಳಿದ್ದಕೇಳಿಸಿಂಧುವಮಥನಮಾಡಲಿಕೆ ಬೇಕು ಎಂದಿಅದರ ಬಗ್ಗೆ ಉಪಾಯವ ಅರುಹಿದಿ ವಿಭುವೇ 10ಕ್ಷೀರಾಬ್ಧಿಯಲಿ ವೀರು ತೃಣ ಲತೌಷಧಿ ಇಟ್ಟುಗಿರಿಶ್ರೇಷ್ಠ ಮಂದರವ ಕಡೆಗೋಲು ಮಾಡಿವರಸರ್ಪ ವಾಸುಕಿಯ ಹಗ್ಗ ಮಾಡಿ ಮಥಿಸಿಅಮೃತೋತ್ಪಾದನ ಯತ್ನಿಪುದು ಎಂದಿ 11ದೈತ್ಯ ದಾನವರೆಲ್ಲ ಶತೃಗಳು ಆದರೂಸಂಧಿಯ ಅವರೊಡೆ ಮಾಡಿ ಕೂಡಿಮಂದರವ ಸಿಂಧುವಲಿ ತಂದಿಟ್ಟು ಮಥಿಸುವುದುಸುಧೆಯ ಉತ್ಪಾದನಕೆ ಉಪಾಯ ಇದು ಎಂದಿ 12ದೈತ್ಯರ ಸಹಕಾರ ಬಗೆ ಯುಕ್ತಿಗಳ ಪೇಳಿಭೀತಿ ಪಡಬೇಡ ವಿಷ ಉಕ್ಕಿ ಬರುವಾಗಅದಿತಜರಿಗೇವೇ ಫಲ ಲಭಿಸುವುದು ಎಂದುದಿತಿಜರಿಗೆಕ್ಲೇಶಭವಿಸುವುದು ಎಂದಿ13ಪುರುಷೋತ್ತಮ ಜಗತಃಪತಿ ಅಜಿತನಾಮಾಸುರರಿಗೆ ಬೋಧಿಸಿದ ರೀತಿ ಅನುಸರಿಸಿಶಕ್ರಾದಿಗಳು ವೈರೋಚನಾದಿಗಳೊಡೆತ್ವರಿತ ಯತ್ನಿಸಿದರು ಕಡಲ ಮಥನಕ್ಕೆ 14ದೂರದಲ್ಲಿ ಇದ್ದ ಆ ಅತಿಭಾರ ಗಿರಿಯನ್ನಸುರರುದಾನವರೆತ್ತಿ ಸಮುದ್ರ ತಟಕೆತರಲು ಬಹು ಯತ್ನಿಸಿದರು ವ್ಯರ್ಥದಿಗಿರಿಯ ಭೂ ಮೇಲೆತ್ತೆ ಅಸಮರ್ಥರು 15ಮೇರುಗಿರಿ ಬದಿ ಇದ್ದ ಮಂದರಾಚಲವುರುದ್ರ ರುದ್ರವರ ಬಲಯುತವು ಎತ್ತಲು ಅಶಕ್ಯಸುರದಾನವರು ಬೆರಗಾಗೇ ಒಂದೇ ಕರದಿಂಗಿರಿಯ ನೀ ಎತ್ತಿ ಗರುಡನ ಮೇಲೆ ಇಟ್ಟಿ 16ಗರುಡನಿಂದ ತಮ್ಮ ಮೇಲೆ ಇರಿಸೆ ಪರಿಕ್ಷಾರ್ಥಭಾರತಾಳದೇ ಸುರಾಸುರರು ಹತರಾಗೇಕಾರುಣ್ಯ ನೋಟದಿ ಬದುಕಿಸಿದಿ ಮೃತರನ್ನತೀವ್ರ ಗಾಯಗಳನ್ನ ಸೌಖ್ಯ ಮಾಡಿದಿಯೋ 17ಲೀಲೆಯಿಂದಲಿ ಪುನಃ ಒಂದೇ ಹಸ್ತದಿ ಗಿರಿಯಮೇಲೆತ್ತಿ ಗರುಡನ ಹೆಗಲಲಿಟ್ಟು ಕುಳಿತುಪಾಲಸಾಗರದಲ್ಲಿ ಸ್ಥಾಪಿಸಿ ಮಥನಕ್ಕೆವ್ಯಾಳನ ಹಗ್ಗದಂದದಿ ಸುತ್ತಿಸಿದಿಯೋ 18ಪುಚ್ಛಭಾಗವು ಅಮಂಗಳವು ಬೇಡವೆಂದುಅಸುರರ ವಾದಾ ಮುಖಭಾಗ ಹಿಡಿಯೇವಾಸುಕಿಯ ಪುಚ್ಛಾಂಗ ದೇವತೆಗಳು ಹಿಡಿದುಶ್ರೀಶ ನೀ ಸಹಕರಿಸೆ ಮಥನವ ಮಾಡಿದರು 19ಪರಮಯತ್ನದಿ ಅಮೃತಾರ್ಥ ಪಯೋನಿಧಿಯಗಿರಿಯಿಂದ ಮಂಥನ ಸುರಾಸುರರು ಮಾಡೆಪರಮಗುರುತರಅದ್ರಿಆಧಾರವಿಲ್ಲದೆಸರಿದು ಮುಳುಗಿ ಬೇಗ ಕೆಳಗಡೆ ಹೋಯಿತು 20ಶೈಲವು ಮುಳುಗಲು ಸುಧಾಕಾಂಕ್ಷಿಗಳ ಮನವ್ಯಾಕುಲದಿ ಮುಖಕಾಂತಿ ಮ್ಲೌನವು ಆಯಿತುಎಲ್ಲಾ ಶ್ರಮವು ವ್ಯರ್ಥ ಎಂದು ಬೆರಗಾಗಿರೆಬಲು ಕೃಪೆಯಲಿ ನೀನು ಒದಗಿದಿ ಆಗ 21ಅದ್ಭುತ್ ಮಹತ್ ಕಚ್ಛಪ ರೂಪದಲಿ ನೀಅಬ್ಧಿಯಲಿ ಬೇಗನೇ ಬಂದು ಮೇಲೆಎಬ್ಬಿಸಿದಿ ಆ ಮಂದರಾಚಲಗಿರಿಯಸುಬಲ ಪೂರುಷ ನಮೋ ಚಿನ್ಮೋದಗಾತ್ರ 22ಚನ್ಮೋದಮಯ ಮಹಾಕೂರ್ಮರೂಪನೇ ನಿನ್ನಅಮಿತ ಸುಬಲ ಲಕ್ಷ ಯೋಜನ ವಿಸ್ತಾರಸುಮಹಾ ದ್ವೀಪದಂದಿರುವ ಪೃಷ್ಠದ ಮೇಲೆಆ ಮಹಾದ್ರಿಯ ಹೊತ್ತಿ ಪುನರ್ ಮಥಿಸಲೊದಗಿದಿ 23ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧೀಶಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀಪ್ರಸನ್ನ ಶ್ರೀನಿವಾಸಧನ್ವಂತರೀ ಶರಣು ಅಜಿತ ಸ್ತ್ರೀಕೂರ್ಮ24-ಇತಿ ಪ್ರಥಮಾಧ್ಯಾಯ ಸಂಪೂರ್ಣಂ-ದ್ವಿತೀಯ ಅಧ್ಯಾಯನೀಲಕಂಠವೃತ್ತಾಂತಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಸಿರಿವರಹರಿಕೂರ್ಮನ ಪೃಷ್ಠೋಪರಿನಿಂತಗಿರಿಯಿಂದ ಅಸುರರುಸುರರುಪುನರ್ಮಥಿಸೆಗಿರ್ಗಿರಿ ಗಿರಿ ಗಿರಿ ಎಂದು ಭ್ರಮಿಸಿತು ಗಿರಿಯುಪರಿಮಳ ಪೂ ಸುರಿಸಿದರು ಬ್ರಹ್ಮಾದಿಗಳು 1ವಾಸುಕಿತಾಳದೇ ಬುಸು ಬುಸು ಎಂದು ಮೇಲ್ಶ್ವಾಸದಿ ವಿಷಜ್ವಾಲೆ ಹೊರಗೆ ಬಿಡಲುಅಸುರಬಲಿಇಲ್ವಾದಿಗಳು ಬಿಸಿ ಸಹಿಸದೇಘಾಸಿಹೊಂದಿದರುದಾವಾಗ್ನಿಪೀಡಿತರ ಪÉೂೀಲ್2ದಿತಿಜರು ಅದಿತಿಜರು ಎಷ್ಟೇ ಯತ್ನಿಸಿದರೂಸುಧಾ ಇನ್ನೂ ಪುಟ್ಟದೇ ಇರುವುದ ಕಂಡುದಂತ ಶೂಕವ ಆಗ ಸ್ವಯಂ ನೀನೇ ಹಿಡಿದುಮಥನಮಾಡಿದಿ ಸ್ವಾಮಿ ಕಾರುಣ್ಯದಿಂದ3ಪೀತಾಂಬರಿ ಸುಖ ಚಿನ್ಮಾತ್ರ ಚಾರ್ವಾಂಗಸದಾ ನಮೋ ಶರಣಾದೆ ಲೋಹಿತಾಕ್ಷದಿತಿಜಾ ಅದಿತಿಜಾರೊಡೆ ನೀನು ಸಹಮಥಿಸಲುಲತಾ ಓಷಧಿ ಕಲುಕಿ ಉಕ್ಕಿತುಸಿಂಧು4ಹಾಹಾ ಭಯಂಕರವು ಇದೇನು ಲೋಕಗಳದಹಿಸುವಂದದಿ ಫೇಣ ಉಕ್ಕಿ ಬರುತಿದೆಯುಮಹಾ ವೀರ್ಯತರ ಹಾಲಾಹಲವೆಂಬ ವಿಷ ಇದುಮಹೀಭರ್ತಾ ಮಹಾದೇವ ಮಹಾದ್ರಿದೃತ್ಪಾಹಿ5ಅಸಮ ಸ್ವಾತಂತ್ರ್ಯ ನಿಜಶಕ್ತಿ ಪರಿಪೂರ್ಣವಿಶ್ವರಕ್ಷಕ ನೀ ವಿಷಭಯ ನಿವಾರಿಸೆಸ್ವಸಮರ್ಥನಾದರೂ ಭೃತ್ಯರ ಕೀರ್ತಿಯಪ್ರಸರಿಸೆ ಒದಗಿದಿ ಮಹಾದೇವ ಶಾಸ್ತ 6ಮಹತ್ ಎಂಬ ಬ್ರಹ್ಮನ ಸ್ವಾಮಿ ಆದುದರಿಂದಮಹಾದೇವ ಎಂಬುವ ನಾಮ ನಿನ್ನದೇವೇಮಹಾದೇವ ಶಿವ ಈಶ ರುದ್ರಾದಿ ಶಬ್ದಗಳುಮಹಾಮುಖ್ಯ ವೃತ್ತಿಯಲಿ ನಿನಗೇವೇ ವಾಚಕವು 7ಭಸ್ಮಧರ ದೇವನಿಗೆ ಮಹಾದೇವ ಎಂಬುವನಾಮ ಔಪಚಾರಿಕದಲ್ಲೇವೇ ರೂಢಬ್ರಹ್ಮನಾಮನು ನೀನೇ ಬ್ರಹ್ಮಾಂತರ್ಯಾಮಿಯುಬ್ರಹ್ಮನೊಳು ಇದ್ದು ನೀ ಭುವನಂಗಳ ಪಡೆವಿ 8ರುದ್ರ ನಾಮನು ನೀನೇ ರುದ್ರಾಂತರ್ಯಾಮಿಯುರುದ್ರನೊಳು ಇದ್ದು ನೀ ಸಂಹಾರವ ಮಾಡುವಿತತ್‍ತತ್ರಸ್ಥಿತೋ ವಿಷ್ಣುಃ ತತ್‍ಚ್ಛಕ್ತಿ ಪ್ರಬೋಧÀಯನ್ರುದ್ರನಿಂ ವಿಷಪಾನ ನಿನ್ನ ನಿಯಮನವೇ 9ಶಕ್ರಾದಿ ಸರ್ವರಿಗೂಗುರುಆಶ್ರಯನು ಶಂಕರನುಶಂಕರನಿಗೆ ಆಶ್ರಯನು ಗುರುಮುಖ್ಯವಾಯುಮುಖ್ಯವಾಯುಗಾಶ್ರಯ ಶ್ರೀಕಾಂತ ನೀನುಶ್ರೀಕಾಂತ ನೀನೇವೇ ಸರ್ವಾಶ್ರಯ ಅನೀಶ 10ಯಾವ ಮಹಾದೇವನೊಲಿಯದೇ ವಾಯು ಒಲಿಯಆ ವಾಯು ಒಲಿಯದೇಹರಿತಾನೂ ಒಲಿಯಆ ವಾಯು ಹರಿಒಲಿಯದಿರೆ ಬೇರೆ ಗತಿಇಲ್ಲಆ ವಾಯು ಹರಿಧಾಮ ಮಹಾದೇವ ಸ್ತುತ್ಯ 11ಸರ್ವಾಂತರ್ಯಾಮಿ ಯಾವನಲಿ ಪ್ರಸನ್ನನು ಆಗಿಯಾವನ ಮೂಲಕ ಶಕ್ರಾದಿಗಳ ಕಷ್ಟತೀವ್ರದಿ ಪೋಗುವುದೋ ಆ ಮಹಾದೇವನ ಸ್ತುತಿಸಿದರುಸುರರುಶಿವಾಂತರ್ಯಾಮಿ ಶ್ರೀಹರಿ ಮಹಿಮೆಗಳ ಕೂಡಿ 12ಕರತಲೀಕೃತ್ಯಹಾಲಾಹಲವಿಷವಶಕ್ರಾದಿ ಜನರಲ್ಲಿ ಕೃಪೆ ಮಾಡಿ ಉಂಡುಕರುಣಾಳು ಮಹಾದೇವ ಭೂತದಯಾಪರನು ಈಹರಿಭಕ್ತಾಗ್ರಣಿ ಶಿವ ಉಮೇಶನಿಗೆ ಶರಣು 13ಹರಿಬ್ರಹ್ಮ ಪಾರ್ವತಿ ಪ್ರಜೇಶ್ವರರುಹರನ ಈ ಮಹತ್ಸೇವೆ ಬಹು ಶ್ಲಾಘಿಸಿದರುಕರದಿಂದ ಕೆಳಗೆ ಪ್ರಸ್ಕನ್ನ ಗರವಾದ್ದುಸರೀಸೃಪ ವೃಶ್ಚಿಕಾದಿಗಳೊಳು ಸೇರಿತು 14ಗರವು ಭೂಷಣವಾಯಿತು ವೈರಾಗ್ಯಾಧಿಪ ಶಿವಗೆಸುಪ್ರಸಿದ್ಧನು ಆದ ನೀಲಕಂಠನೆಂದುಧೀರ ಕರುಣಾಂಬುನಿಧಿ ನಂಜುಂಡೇಶ್ವರನು ಈಗಿರಿಜೇಶನಿಗೆ ನಾ ನಮಿಪೆ ಶರಣೆಂದು 15ಈ ಕೃಪಾಕರ ನೀಲಕಂಠ ಕರತಲೀಕೃತ್ಯಆ ಕಾಲಕೂಟವಿಷ ಉಂಡ ಮಹತ್ಕಾರ್ಯಸಂಕೀರ್ತಿ ಪೇಳಿರುವುದು ಶ್ರೀ ಭಾಗವತದಿಬಾಕಿ ಬಹು ಮಹೋಲ್ಪಣ ವಿಷ ವಿಷಯ ಶೃತಿ ವೇದ್ಯ 16ಉರಗಭೂಷಣ ವಿಪ ಉರಗಪರುಗಳಿಗಿಂತನೂರುಗುಣ ಎಂಬುದಕೆ ಅತ್ಯಧಿಕ ಬಲಿಯುವರಮುಖ್ಯ ಪ್ರಾಣ ಜಗತ್ ಪ್ರಾಣಗೆ ಸಮರಿಲ್ಲನೀರಜಜಾಂಡದಿ ಎಲ್ಲೂ ಶರಣೆಂಬೆ ಇವಗೆ 17ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ18-ಇತಿ ದ್ವಿತೀಯಾಧ್ಯಾಯಂ ಸಂಪೂರ್ಣಂ -ತೃತೀಯ ಅಧ್ಯಾಯಶ್ರೀ ಇಂದಿರಾ ಆವಿರ್ಭಾವಸಾರಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಗರಪಾನವ ವೃಷಾಂಕನು ಮಾಡೆ ಇಂದ್ರಾದಿಸುರರುದಾನವರು ಪುನರ್‍ಮಥನವ ಚರಿಸೆಕ್ಷೀರಸಾಗರದಿಂದ ಉತ್ಪನ್ನವಾದವುಪರಿಪರಿ ವಸ್ತುಗಳ್ ಒಂದರ ಮೇಲೊಂದು 1ಯಜÉೂÕೀಪಯೋಗಿಗಳಪ್ರದ ಕಾಮಧೇನುಉಚ್ಛೈಶ್ರವನಾಮ ಸುಲಕ್ಷಣ ಅಶ್ವಸಚ್ಛಕ್ತಿ ಶ್ರೇಷ್ಠತರ ಐರಾವತನಾಮಗಜೇಂದ್ರ ನಾಲ್ಕು ಚಂದದಂತ ಭೂಷಿತವು 2ಸರಸಿಜೋದ್ಭವಸೇವ್ಯಶ್ರೀಶವರಾಹಹರಿನಿನ್ನ ವಕ್ಷ ಸಂಬಂಧದಿ ಹೊಳೆವಸುಶ್ರೇಷ್ಠ ಕೌಸ್ತುಭರತ್ನ ಎಂಬುವಂತಹಸುಭ್ರಾಜಮಣಿ ಬಂತು ಆ ಸಿಂಧುವಿನಿಂದ 3ಸುರಲೋಕ ವಿಭೂಷಣವು ಸರ್ವವಾಂಛಿತ ಪ್ರದವುಪಾರಿಜಾತವು ಉದ್ಭವವಾಯಿತು ತರುವಾಯಸ್ಫುರದ್ರೂಪ ರಮಣೀಯ ಸುಂದರಾಂಗಿಗಳುಹಾರವಸನಭೂಷಿತ ಅಪ್ಸರಸರು 4ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್‍ವಿದಿಕ್ಕುಗಳ ರಂಜಿಸುವರೂಪ -ದಿಂದ ಆವಿರ್ಭವಿಸಿದಳು ಸಾಕ್ಷಾತ್ ಶ್ರೀಇಂದಿರೆಅಲೌಕಿಕ ಸೌಂದರ್ಯಪೂರ್ಣೆ5ಸರ್ವದಾ ಸರ್ವವಿಧದಿ ನಿನ್ನ ಸೇವಿಸಿ ನುತಿಪಸರ್ವಜಗಜ್ಜನನಿಯೇಸಿಂಧುಕನ್ಯಾದೇವ ದೇವೋತ್ತಮ ರಾಜರಾಜೇಶ್ವರ ನಿನಗೆದೇವ ಶ್ರೀ ರಾಜರಾಜೇಶ್ವರಿನಿತ್ಯನಿಜಸತಿಯು6ಇಂದ್ರಾದಿ ದೇವತೆಗಳು ಮುನಿಜನರುಇಂದಿರೆಯನ್ನು ವಿಧಿಯುಕ್ತ ಪೂಜಿಸಿದರುಸಿಂಧುರಾಜನು ವರುಣ ಏನು ಧನ್ಯನೋ ಜಗನ್ -ಮಾತೆ ನಿರ್ದೋಷೆ ರಮಾ ಮಗಳಾಗಿ ತೋರಿಹಳು 7ಅಲೌಕಿಕ ಮುತ್ತು ನವರತ್ನದ ಮುಕುಟಒಳ್ಳೇ ಪರಿಮಳ ಹೂವು ಮುಡಿದ ತುರುಬುಪಾಲದಲಿ ಶ್ರೇಷ್ಠತಮ ಕಸ್ತೂರಿತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬಟ್ಟು 8ಅಂಬುಜಾಕ್ಷಗಳು ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯಪ್ರದ ಕೃಪಾನೋಟಕಂಬುಕಂಠದಿ ಮಂಗಳಸೂತ್ರ ಕರಯುಗದಿಅಂಬುಜಾವರಕೊಡುವ ಅಭಯಹಸ್ತಗಳು9ಕಂದರದಿ ಎಂದೂ ಬಾಡದಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟಿವಸ್ತ್ರ ರಾಜಿಸುವಂತಹ ಸ್ವರ್ಣಹಾರಗಳುಕಾಂತಿಯುಕ್ ಭಂಗಾರ ಸರ್ವಾಭರಣಗಳು 10ಆನಂದಮಯಅಜಿತನಾಮಾ ನಿನ್ನನು ಮನ-ಮಂದಿರದಿ ಪೂಜಿಸುತ ಇಂದಿರಾದೇವಿಬಂದು ಸಭೆಯಲಿ ಸಾಲು ಸಾಲಾಗಿ ಕುಳಿತಿದ್ದವೃಂದಾರಕರನ್ನ ಮಂದಹಾಸದಿ ನೋಡಿದಳು 11ಒಬ್ಬೊಬ್ಬ ದೇವತೆಯಲೂ ಗುಣವಿದ್ದರೂಅಬ್ಬಬ್ಬ ಏನೆಂಬೆ ದೋಷಗಳೂ ಉಂಟುಅದ್ಭುತ ಗುಣನಿಧಿನಿರ್ದೋಷಸರ್ವೇಶ-ಅಂಬುಜನಾಭ ನೀನೇವೇ ಎಂದು ನಮಿಸಿದಳು 12ಕ್ಷರರಿಗೂ ಅಕ್ಷರರಿಗೂ ಎಂದೆಂದೂ ಆಶ್ರಯನುಪುರುಷೋತ್ತಮಹರಿವಿಷ್ಣು ಸ್ವತಂತ್ರಸರಿ ಅಧಿಕರು ಇಲ್ಲದ ಅನಘನು ಸರ್ವಗುಣಪರಿಪೂರ್ಣನಿಗೇವೇ ಅರ್ಪಿಸಿದಳು ಮಾಲೆ 13ಉತ್ತಮ ಸುತೀರ್ಥಗಳಿಂದ ಅಘ್ರ್ಯ ಚಮನಪಾದ್ಯಾದಿ ಅರ್ಚನೆ ವಿಧಿಯುಕ್ತವಾಗಿಸುತಪೂನಿಧಿ ವಸಿಷ್ಠಾದೀಯರು ವೇದೋಕ್ತಮಂತ್ರ ಪಠಿಸೆ ವರುಣ ಹರಿಯ ಪೂಜಿಸಿದ 14ಆನಂದಪೂರ್ಣಅಜನಿತ್ಯಮುಕ್ತೆ ಮಗಳುಇಂದಿರೆಯಆನಂದಮಯಹರಿನಿನಗೆಸಿಂಧುಧಾರೆ ಎರೆದು ಮದುವೆ ಮಾಡಿಕೊಟ್ಟಆನಂದ ನಿತ್ಯದಂಪತಿ ರಮಾ ಮಾಧವರು 15ಪೀತಾಂಬರ ದಿವ್ಯ ಆಭರಣ ಪೊಳೆಯುತ್ತಮೋದಮಯ ನೀ ಸಿಂಧುಜಾ ಸಹ ದಿವ್ಯರತ್ನ ಖಚಿತ ಮಂಟಪದಲಿ ಕುಳಿತರೆಮುದದಿ ವರ್ಷಿಸಿದರು ಪೂಮಳೆಸುರರು16ಸಂಭ್ರಮದಿ ಮಂಗಳವಾದ್ಯ ಸುಧ್ವನಿಗಳುತುಂಬಿತುಅಂಬರಅಂಬುಧಿಎಲ್ಲೂಗಂಭೀರ ಸುಸ್ವರ ವೇದಘೋಷಗಳುತುಂಬರ ನಾರದಾದಿಗಳ ಗಾಯನವು 17ದೇವಗಾಯಕರುಗಳ ದಿವ್ಯ ಕೀರ್ತನೆಗಳುದೇವನರ್ತಕ ನರ್ತಕಿಯರ ನರ್ತನವುದೇವತೆಗಳ ಆಭರಣಾದಿ ಕಾಣಿಕೆಗಳದೇವಿ ರಮೆಗೂ ನಿನಗೂ ಅರ್ಪಿಸಿದರು ಮುದದಿಂ 18ವನಜಭವ ರುದ್ರಾದಿಗಳು ಮುನಿವೃಂದವುಸನ್ನುತಿಸುತ ಸರ್ವ ಕೀರ್ತನವನ್ನುಆನಂದ ಭಕ್ತಿಯಂ ಶ್ರೀ ಲಕ್ಷ್ಮೀಯನ್ನು ನೋಡಿಧನ್ಯರಾದರು ನಮೋ ವಿಷ್ಣುಗೆ ಶ್ರೀರಮೆಗೆ 19ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ20- ಇತಿ ತೃತೀಯ ಅಧ್ಯಾಯ ಪೂರ್ಣಂ -ಚತುರ್ಥ ಅಧ್ಯಾಯಶ್ರೀ ಧನ್ವಂತರಿ ಹಾಗೂ ಮೋಹಿನಿವೃತ್ತಾಂತಸಾರಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪವಿಸ್ತಾರವಾಗಿ ಫೇಣವು ವ್ಯಾಪಿಸಿರುವಆ ಸಮುದ್ರದಿಂದ ವಾರುಣಿಯು ಬರಲಾಗಅಸುರರನು ತಮಗೇವೆ ಬೇಕೆಂದು ಕೊಂಡರುಈಶ ನೀ ಅವರಿಗೆ ಅನುಮತಿ ಕೊಡಲು 1ಸುಧೆಗಾಗಿ ಸಿಂಧುವ ಮತ್ತೂ ಮಥನಮಾಡೆಉದಿಸಿದನುಪರಮಅದ್ಭುತ ಪುರುಷನುಸುಂದರ ವಿಗ್ರಹ ಕಂಬುಗ್ರೀವ ಅರುಣೇಕ್ಷಣಅಂದ ಸುದೀರ್ಘ ಪೀವರದೋರ್ದಂಡ 2ಸಗ್ನಧರ ಶ್ಯಾಮಲಸ್ತರುಣ ಸರ್ವಾಭರಣ -ದಿಂದ ಒಪ್ಪುವ ರತ್ನಖಚಿತ ಕುಂಡಲವುಪೀತವಾಸ ಮಹಾಸ್ಕಂಧ ಸುಶುಭಾಂಗನುಸ್ನಿಗ್ದ ಕುಂಚಿತ ಕೇಶ ಸಿಂಹ ವಿಕ್ರಮನು 3ಅನುಪಮಾದ್ಭುತ ಈ ಮಹಾಪುರುಷ ಸಾಕ್ಷಾತ್ವಿಷ್ಣು ನೀನೇವೆ ಮತ್ತೊಂದವತಾರಆನಂದ ಚಿನ್ಮಾತ್ರ ಹಸ್ತದಲಿ ಹಿಡಿದಿರುವಿಪೂರ್ಣವಾಗಿ ಅಮೃತ ತುಂಬಿರುವ ಕಳಸ 4ಆಯುರ್ವೇದ ಮಹಾಭಿಷಕ್ ಶ್ರೀ ಧನ್ವಂತರಿ ನೀನುಕೈಯಲ್ಲಿ ಪಿಡಿದ ಪಿಯೂಷ ಕುಂಭವನುದೈತ್ಯರು ನೋಡಿ ಬಹು ಇಚ್ಛೈಸಿ ಅಪಹರಿಸೆಶ್ರೀಯಃಪತಿಯೇಸುರರುನಿನ್ನಲ್ಲಿ ಮೊರೆಇಟ್ಟರು5ದೇವತಾವೃಂದವಿಷ್ಣಮನಸ್ಸಿಂದಲಿದೇವವರೇಣ್ಯಹರಿನಿನ್ನ ಶರಣು ಹೋಗಲುಯಾವ ಮನಖೇದವೂ ಬೇಡ ಅನುಕೂಲವನೇಮಾಡುವಿ ಎಂದು ನೀ ಅಭಯವನ್ನಿತ್ತಿ 6ಅಮೃತಕಲಶವು ಎಂದು ನೆನೆದು ಆ ಅಸುರರುನಾಮುಂಚಿ(ಚೆ) ನಾಮುಂಚಿ (ಚೆ) ನೀ ಮುಂಚಿ (ಚೆ) ಅಲಲ್ತಮ್ಮೊಳಗೆ ಈ ರೀತಿ ಪರಸ್ಪರ ಕಾದಾಡೇನೀ ಮೋಹಿನಿ ರೂಪದಲಿ ತೋರಿ ನಿಂತಿ 7ಪರಮಅದ್ಭುತ ಅನಿರ್ದೇಶ್ಯ ಸ್ತ್ರೀರೂಪವಧರಿಸಿ ನಿಂತಿಯೋ ಆ ಅಸುರರ ಮುಂದೆಅರಳಿದಮಲ್ಲಿಗೆ ಮುಡಿದ ಕುಂತಳವುವರಾನನ ಕರ್ಣಕುಂಡಲಕಪೋಲ8ಸುಗ್ರೀವ ಕಂಠಾಭರಣ ಸುಭುಜಾಂಗದಸ್ಫುರತ್ ನವ ಯೌವನಗಾತ್ರ ಸೌಂದರ್ಯಉರದಿ ಪೊಳೆಯುವ ನವರತ್ನಪದಕಗಳುಭಾರಿ ಪೀತಾಂಬರವುದಿವ್ಯಒಡ್ಯಾಣ9ಸರ್ವಅವಯವಗಳು ಅನುಪಮ ಸುಂದರವುಸರ್ವಾಭರಣ ವಿಭೂಷಿತ ಸೊಬಗುಸರ್ವಾಕರ್ಷಕ ಮಂದಗತಿ ನೋಟವುಸರ್ವ ಆ ದೈತ್ಯರೊಳು ಕಾಮ ಪುಟ್ಟಿಸಿತು 10ಅಮರರೊಳು ದೈತ್ಯರೊಳು ಗಂಧರ್ವ ನರರೊಳುಈ ಮಹಾ ಸೌಂದರ್ಯರೂಪ ಕಂಡಿಲ್ಲಸುಮೋಹಿತ ದೈತ್ಯರು ಸುಧಾ ವಿಷಯದಲಿತಮಗೂ ಸುರರಿಗೂ ನ್ಯಾಯಮಾಡೆ ಕೋರಿದರು 11ಮಾಯಾಯೋಷಿದ್ವಪುಷಅಮೃತ ವಿನಿಯೋಗನ್ಯಾಯವೋ ಸರಿಯೋ ಸರಿಯಲ್ಲವೋನೀ ಹ್ಯಾಗಾದರೂ ಮಾಡಲಿಕೆ ಒಪ್ಪಿದರುಮಾಯಾಮೋಹವೃತ ಆ ದೈತ್ಯಜನರು12ಉಪವಾಸ ಸ್ನಾನ ಹೋಮಾದಿಗಳು ಆಗಿದೀಪಾವಳಿಗಳ ಹಚ್ಚಿಟ್ಟು ಮುದದಿತಪ್ಪದೇಮುಕ್ತಆಚರಣೆ ತರುವಾಯಸುಪವಿತ್ರ ಸುಧೆಗೆ ಕಾದರು ಸುರಾಸುರರು 13ಸುಧೆಗೆ ಕಾದಿರುವ ಸುರಾಸುರರ ನೋಡಿಸುಧಾ ಕಲಶ ನಿಜವಾದ್ದನ್ನ ಹಿಡಿದಿಮಂದಗಜ ಗತಿಯಲ್ಲಿ ಶೃಂಗಾರ ಸುರಿಸುತ್ತಬಂದಳು ಮೋಹಿನಿ ಚಂದ ನವಯುವತಿ 14ಅಸುರರು ಅರಿಯರು ಯೋಷಿದ್ ವಪುಹರಿಯೇವೇಆ ಸ್ಫುರದ್ರೂಪಿಣಿ ಮೋಹಿನಿ ಎಂತಅಸುರರು ಲೋಲುಪಮರು ಸುಧಾ ಅನರ್ಹರು ಎಂದುಶ್ರೀಶ ನೀ ನಿಶ್ಚಯಿಸಿದಿ ದೇವ ದೇವ 15ದೇವತೆಗಳ ಪಂಕ್ತಿ ಒಂದು ಸಾಲು ಮತ್ತುದೇವಶತೃಗಳ ಪಂಕ್ತಿ ಮತ್ತೊಂದು ಸಾಲುದೇವತೆಗಳಿಗೇವೇ ನೀ ಸುಧ ಉಣಿಸಿದಿದೇವಶತೃಗಳಿಗೆ ಸುಧಾ ಉಣಿಸಲಿಲ್ಲ 16ಕೂರ್ಮರೂಪದಲಿ ನೀ ಮಂದರಾಗಿರಿ ಪೊತ್ತುಅಮರರ ಸಹಿತಸಿಂಧುಮಥಿಸಿದಿ ಅಜಿತಅಮೃತ ಕಲಶವ ತಂದಿ ಶ್ರೀಶ ಧನ್ವಂತರಿಸುಮನಸಸುಧಾಪ್ರದ ಮೋಹಿನಿರೂಪ17ಹರಿಪಾದಾಶ್ರಿತರಾಗಿರುವ ಸುರರಿಗೆ ಅಮೃತಹರಿಪರಾನ್ಮುಖ ದ್ವೇಷಿ ದೈತ್ಯರಿಗೆ ಇಲ್ಲಸುರಾಸುರಗಣಕೆ ಸಮ ಕರ್ಮೋಪಕರಣಗಳುಆದರೂ ಯೋಗ್ಯತೆಯಿಂದ ಫಲ ಬೇರೆ ಬೇರೆ 18ಜ್ಞಾನಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ19- ಇತಿ ಚತುರ್ಥ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಮಾರ್ತಾಂಡಕುಲದೀಶ ದಶರಥನುದರದಿಪುತ್ರನಾಗಿಯೆ ಜನಿಸಿ ರಾಘವ ವಿಶ್ವಾಮಿತ್ರರೆಜÕವಪಾಲಿಸಿ ತಾಟಕೀ ಮುಖ್ಯಧೂರ್ತದೈತ್ಯರ ಮಥಿಸಿಅಹಲ್ಯೆದೇವಿಯ ಪಾಲಿಸಿ ಅರ್ಥಿಯಲಿ ವಿಥಿಲೇಖೆಗೆಗಮಿಸುತ ಪೃಥ್ವಿಜಾತೆಯನೊಲಿಸಿ ಮಾರ್ಗದಿ ಕಾರ್ತವೀರ್ಯಾಂತಕನ ಭಂಗಿಸಿ ತ್ವರಿತದಿಂದಯೋಧ್ಯೆಗೈಸಿದ ರಾಮಸೀತೆಗೆ ಮುತ್ತಿನಾರತೀಯ ಬೆಳಗೀರೆ ಶೋಭಾನೆ 1ಮಲತಾಯಿ ಕೈಕೆಯ ಮಾತಿಗೋಸುಗ ಪೋಗಿ ನೆಲಸಿದನಾರಣ್ಯದಿ ಪೋಗಿಮೃಗರಾಮ ತರಲುಪೋಗಲು ಭರದಿ ಸೀತೆಯ ರಾವಣೇಶನೊಯ್ಯಲುಮಾಯದೀ ರಾಮಲಕ್ಷ್ಮಣರ ವನದಿ ಚಲಿಸುತಲಿಕಪಿವರರ ಸ್ನೇಹದಿಜಲಧಿಬಂಧಿಸಿ ರಾವಣಾದ್ಯರಗೆಲಿದು ಶರಣಗೆ ಪಟ್ಟಗಟ್ಟುತ ಲಲನೆಸಹ ನಡೆತಂದಯೋಧ್ಯೆಗೆ ರಾಮಸೀತೆಗೆ ಹರಳಿನಾರತೀಯಾ ಬೆಳಗೀರೇ ಶೋಭಾನೆ 2ಚಂದದಿ ಧರಣಿಯ ಪಾಲಿಸುತಿರೆ ರಾಮನೊಂದಪವಾದವಕೇಳಿಸೀತೆಯ ಘೋರಾರಣ್ಯದಿ ಬಿಡಲು ಪೇಳಿ ಗರ್ಭಿಣಿ ಸೀತೆಬಂದ್ವಾಲ್ಮೀಕಿಯರೊಳು ಬಾಳಿ ಪಡೆದು ಲವಕುಶರನಲ್ಲಿಚಂದದಲಿ ಪಾಲಿಸುತಿರೆ ಗೋವಿಂದನೆಜ್ಞಾಶ್ವವನು ಬಂಧಿಸಿಬಂದು ಕಲಹದಿ ನಿಜವನರಿತಾ ನಂದನರ ಕರೆತಂದಯೋಧ್ಯೆಗೆರಾಮಸೀತೆಗೆ ಕುಂದಣದಾರತೀಂiÀi್ಞ ಬೆಳಗೀರೆ ಶೋಭಾನೆ 3
--------------
ಗೋವಿಂದದಾಸ
ರಾಮ ಶ್ರೀರಾಮ ಸೀತಾರಾಮ ಶ್ರೀರಾಮರಾಮನೆ ರವಿಕುಲಸೋಮಶ್ರೀರಾಮಪರಾಮ ರಾಮ ರಘುರಾಮನೆ ದಶರಥರಾಮನೆ ಗುಣಗಣಧಾಮನೆ ಶ್ರೀರಘು ಅ.ಪಕೌಸಲ್ಯಾದೇವಿಯ ಕಂದನೆ ರಾಮಕೌಶಿಕಯಜÕವ ಕಾಯ್ದ ಶ್ರೀರಾಮಹಿಂಸಿಸಿದ ತಾಟಕಿಯನು ಕೊಂದರಾಮಧ್ವಂಸಮಾಡಿದೆ ಶಿವಧನು ಮುರಿದುರಾಮಸಂಶಯವಿಲ್ಲದೆ ಸೀತೆಕರವಪಿಡಿದುತನ್ನಂಶದ ಪರಶುರಾಮನಿಗೊಲಿದನೆ ಶ್ರೀ 1ದಶರಥರಾಮ ನೀನರಸನಾಗೆನಲುಅಸುರಾವೇಶದಿ ಕೈಕೆ ವರವ ಯಾಚಿಸಲುಎಸೆವ ಸಿಂಹಾಸನ ತೊರೆದು ಪೊರಮಾಡಲುಶಶಿಮುಖಿಸೀತಾಲಕ್ಷ್ಮಣರ ಕೂಡಿ ಬರಲುಭರತಗೆ ಪಾದುಕೆ ಕೊಡುತಲಿ ಕಳುಹಿಸಿಗುಹನ ಮನ್ನಿಸಿ ವನರಾಜ್ಯದೊಳ್ ಮೆರೆದೆ 2ವನದೊಳುಮಾಯಾಮೃಗವ ಕಂಡು ಸತಿಯುಮನದಿ ಚಿಂತಿಸಿರಾಮ ತೆರಳೆ ರಕ್ಕಸನುವನಜಾಕ್ಷಿ ಸೀತೆಯ ಕಳವಿನಿಂ ತರಲುವನವನಚರಿಸಿ ಪುಡುಕೆ ಕಂಡು ಕಪಿವರನುಶರಧಿಲಂಘಿಸಿ ಸೀತೆಯನು ಕಂಡು ಹನುಮನುಕುರುಹು ಪಡೆದು ಲಂಕೆ ದಹಿಸುತ ಬರಲು 3ಸೇತುಬಂಧನ ಮಾಡಿ ಕಪಿಗಳ ಕೂಡಿನೀತಿ ಪೇಳಿದ ವಿಭೀಷಣಗಭಯ ನೀಡಿಭೂತ ರಾವಣನ ದಶಶಿರವ ಚಂಡಾಡಿಸೀತಾಸಹಿತ ರಾಮ ಪುಷ್ಪಕವನೇರಿಆತುರದಿಂದಿಹ ಭರತನಿಗ್ವಾರ್ತೆಯಪ್ರೀತಿಲಿ ಕಳುಹಿದ ಶ್ರಿ ರಘುರಾಮ 4ಬಂದ ಶ್ರೀರಾಮಚಂದ್ರ ಬಹುಪ್ರೀತಿಯಿಂದಛಂದದಿಂ ಭರತನ ಮನ್ನಿಸಿ ಮುದದಿಂದಕುಂದಣಮಯದ ಸಿಂಹಾಸನ ಚಂದ-ದಿಂದಲೇರುತ ರಾಮ ನಸುನಗೆಯಿಂದಇಂದಿರಾಸೀತಾ ಸಹಿತ ಅಯೋಧ್ಯದಿಬಂದು ಪೊರೆವ ಕಮಲನಾಭ ವಿಠ್ಠಲನು 5
--------------
ನಿಡಗುರುಕಿ ಜೀವೂಬಾಯಿ
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಹರಿಮಂದಿರಹರಿಮಂದಿರ ಈ ಸ್ಥಳವುಹರುಷದಿ ಚಿಂತಿಪರಿಗೆ ಪಹರಿಹರ ಬ್ರಹ್ಮಾದಿಗಳು ಪೊಗಳುತಿರೆಸುರಮುನಿ ನಾರದ ಋಷಿಗಳು ಸ್ತುತಿಸಲುಸುರರುಪುಷ್ಪ ವೃಷ್ಟಿಯ ಕರೆಯಲು ಅ-ಪÀ್ಸರಸ್ತ್ರೀಯರುನರ್ತನ ಮಾಡುವ ಸ್ಥಳಅ.ಪಸಿರಿನಾರಾಯಣ ಶೇಷಶಯನದಲಿಶಯನಿಸಿ ನಿದ್ರಿಸುತಿರೆಸಿರಿಭೂದುರ್ಗಾಂಬ್ರಣಿಯರು ಸೇವಿಸಲುನಾಭಿ ಕಮಲದಲಿಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲುಕರಜೋಡಿಸಿ ಸುಜನರು ನಮೋ ನಮೋ ಎನೆಭರದಿ ಜಾಗಟೆಭೇರಿತಾಳ ತುತ್ತೂರಿಯುಕರದಿ ಶಂಖು ಗಂಟೆ ನಾದ ಮೊಳಗೆಹರಿಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ 1ಹರಿವೈಕುಂಠದಿ ಸಿರಿಯೊಡಗೂಡಿರಲುಭೃಗುಮುನಿ ತಾಡನದಿಸಿರಿದೇವಿ ಕೋಪಿಸಿ ಹರಿಯನು ಬಿಡಲುಸಿರಿಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲುಸರಸಿಜಾಕ್ಷ ಕರಿಬೇಟೆಯ ನಾಡುತಬರುತ ಪದ್ಮಾವತಿಯನು ಮೋಹಿಸಿಕೊರವಿರೂಪತಾಳುತ ಕಣಿ ಹೇಳಲುಭರದಿ ಕಲ್ಯಾಣವು ನಡಸಿದ ಸ್ಥಳವಿದು 2ಸುರರುಅಸುರರು ಶರಧಿಯ ಮಥಿಸಿರಲುಅಮೃತವನೆ ಕಂಡುಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರುಶ್ರೀಹರಿತಿಳಿದು ತ್ವರದಿಂದ ಮೋಹಿನಿರೂಪ ತಾಳಿಬಿರಿಬಿರಿ ನೋಡುತಲಿರೆ ದಾನವರುಸುರರಿಗೆ ಅಮೃತವನುಣಿಸುತ ಮೋಹಿನಿಪರವಶದಲಿ ಮೈ ಮರತಿರೆ ಅಸುರರುಸುರರಿಗೆ ಅಭಯವ ನೀಡಿದ ಸ್ಥಳವಿದು 3ವಿಶ್ವಾಸದಿ ತಪಗೈದ ಸುರನ ನೋಡಿಮಹದೇವರು ಒಲಿದುಭಸ್ಮಾಸುರ ಬೇಡಿದ ವರಗಳ ಕೊಡಲುನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲುವಿಶ್ವವ್ಯಾಪಕಹರಿತಾ ತಿಳಿದುತಕ್ಷಣ ಸ್ತ್ರೀ ರೂಪವ ಧರಿಸುತ ಬರೆಭಸ್ಮಾಸುರ ತನ್ಹಸ್ತದಿ ಮೃತಿಸಲುಭಕ್ತರನುದ್ಧರಿಸಿದ ಈ ಸ್ಥಳವು 4ಲೋಕ ಲೋಕದ ಜನರೆಲ್ಲರು ಕೂಡಿಪ್ರಜಾ ಕಂಟಕನಾದಮೂಕಾಸುರನನು ಗೆಲ್ಲಲು ಸಾಗದಲೆಶ್ರೀಕಾಂತನ ಪ್ರಾರ್ಥಿಸೆಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿಮೂಕಾಸುರನನು ವಧಿಸಿದ ಶ್ರೀ ಕೋಲಾ-ಪುರದಲಿ ವಾಸಿಸುತಲಿ ಸಂತತಶ್ರೀಕರ ಕಮಲನಾಭ ವಿಠ್ಠಲಏಕಾಂತದಿ ಭಕ್ತರ ಸಲಹಿದ ಸ್ಥಳವಿದು 5
--------------
ನಿಡಗುರುಕಿ ಜೀವೂಬಾಯಿ