ಕ್ಷಮಿಸೆನ್ನ ದೋಷಗಳ ಕ್ಷಿಪ್ರದಿ ಹರಿ ಪ
ಕ್ಷಮೆಯನ್ನು ಧರಿಸಿದ ಕಮಲಾನಿವಾಸನೆ ಅ.ಪ
ಕರಣತ್ರಯದಿಕಾಲಹರಣವಿಲ್ಲದೆ ಪಾಪಾ
ಚರಣೆಯಿಂ ದೋಷದ ಭರಣಿಯಾದೆನು ಹರಿ 1
ಮಾಡಬಾರದ ಪಾಪ ಮಾಡುವೆನನುದಿನಸ
ಮೂಢನ ಸುಕೃತವನಾಡಿ ತೋರಿಸಲೇಕೆ 2
ಹರಿಗುರುಹಿರಿಯರ ಜರಿದು ಸಜ್ಜನರನು
ತೊರೆದು ದುರ್ಜನರೊಳು ಬೆರೆದು ಪಾಮರನಾದೆ3
ಸರ್ವಸಹಾಧಿಪ ಸರ್ವಚೇತನದೀಪ
ಸರ್ವಾಪರಾಧವ ನಿರ್ವಹಿಸುವ ಭೂಪ 4
ದುರಿತವೈರಿಯೆ ನಿನ್ನ ಮರೆಹೊಕ್ಕ ಮನುಜಗೆ
ದುರಿತ ದುಃಖಗಳುಂಟೆ ವರದವಿಠಲರಾಯ 5