ಒಟ್ಟು 404 ಕಡೆಗಳಲ್ಲಿ , 73 ದಾಸರು , 332 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪಾ ಕೇಳೊ ನಿನ್ನ ಗುರುತ ನೀನೆ ತಪ್ಪಿದೆಪ್ಪ | ತುಪ್ಪ ಹಾಲು ಬಿಟ್ಟು ನೀ ಅಡವಿಯ ಸೊಪ್ಪು ಮೆಲಬ್ಯಾಡಪ್ಪ ಪ ಅನುದಿನ ನೆನೆದು ಮಾಡುವ ಕರ್ಮವು ನಿನಗಿಲ್ಲಪ್ಪ | ಚಿನುಮಯಾತ್ಮಕ ಬ್ರಹ್ಮನು ನೀನು ಅನುಮಾನ ಇದಕಿಲ್ಲಪ್ಪ 1 ನಿತ್ಯ ಬೋಧಾಮೃತವ ಕುಡಿಯಪ್ಪ | ನಾದ ಬಿಂದು ಕಲಾತೀತರು ಹಾಡುವ ಪದವ್ಯಾಕಪ್ಪ | ಸಾಧು ಪುರುಷರು ಹೋದ ಹಾದಿಯ ಹಿಡಿದು ಮುಕ್ತಿ ಪಡೆಯಪ್ಪ 2 ಇಂದು ನಾಳೆ ಎಂಬುವದೊಂದು ಸಂಶಯ ನಿನಗೆ ಬ್ಯಾಡಪ್ಪ | ಕುಂದು ಕೊರತೆಯು ಇಲ್ಲಾತನಿಗೆ ಆನಂದವೆ ಸ್ವಾದವಪ್ಪ | ಬಂದು ಹೋಗಿ ನೀ ಭವಸಾಗರದೊಳು ಬಹು ಪರಿಯಿಂದಲಿ ನೊಂದೆಪ್ಪ | ತಂದೆಯಾದ ಭವತಾರಕನ ಹೊಂದಿ ದಿನವ ಕಳೆಯಪ್ಪ 3
--------------
ಭಾವತರಕರು
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಅವಗೆಲ್ಲಿಹುದೋ ನಿಜ ಮುಕ್ತಿ | ದಾವಗಿಲ್ಲವೋ ಗುರುಪಾದ ಭಕ್ತಿ ಪ ತಂದಿ ತಾಯಿ ಗುರು ಬಂಧು ಬಳಗಾ | ಎಂದು ಹಂಬಲಿಡದೆ ಮನಲೀಗಾ 1 ಗುರು ಕಂಡಾಗಳೆವೆ ಶರಣೆಂಬಾ | ತಿರುಗಿ ನೋಡಲು ಮರವನು ಡೊಂಬಾ2 ಹೊರಗ ದೋರುವ ಡೊಂಬ ಅನೇಕ | ಗುರುಸೇವೆಗೆ ಹೋದನು ಹೋಕಾ 3 ಪೂಜೆ ಸರ್ವೋಪಚಾರದಿ ಮಾಡಿ | ತ್ಯಾಜ ಪಡಿಯನು ಗುರುದಯ ಕೂಡಿ4 ಪರಮ ಗತಿಗಿದೇ ಕಾರಣವೆಂದು | ಗುರುಮಹಿಪತಿ ಬೋಧಿಸಿದನಿಂದು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಗಿದ್ದ ಹರಿ ಈಗಿಲ್ಲವೇನು ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ1 ಅರಮನೆಕಂಬದಿ ಅರಿಯದಂತಡಗಿ ತಾ ದುರುಳನ ಸದೆಬಡಿದು ತರಳ ಸಲಹಿದ ಬರುವ ಮುನಿಶಾಪವಂ ವರಚಕ್ರದಿಂ ತಡೆದು ಕರುಣದಿ ನೃಪನನ್ನು ಪೊರೆದ ಪರಮಾತ್ಮ 2 ಕರುಣಾಳು ಶ್ರೀರಾಮ ಚರಣದಾಸರ ಮನಕೆ ಕೊರತೆಯ ತರದಂತಿರುವ ಬೆಂಬಿಡದೆ ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ 3
--------------
ರಾಮದಾಸರು
ಆತ್ಮನಿವೇದನೆಯ ಹಾಡುಗಳು ಅಗಣಿತ ಗುಣ ಸಮುದ್ರ ನೀನು ಪ ಕಮಲಭವಗೆ ಮಿಕ್ಕವರ ಪಾಡೇನು ಅ.ಪ ಕಮಲ ನಿವಾಸನೆ 1 ಎನ್ನನಾದಿಕರ್ಮ | ಕಳೆಸುವುದು ಮುನ್ನು ನಿನಗೆ ಧರ್ಮ ಭವ ವಾರಿಧಿಯೊಳು ಭಿನ್ನೈಸುವುದೇತಕೆ ನೀನರಿಯಾ 2 ದ್ವಾಸುಪರ್ಣ ಶ್ರುತಿಯ | ಪ್ರಮಾಣದಿ ದಾಸನು ನಾನೈಯ್ಯ ಓ ಸೀತಾಪತಿ ಗುರುರಾಮ ವಿಠಲ ಶ್ವಾಸ ಬಿಡುವದಕೆ ಸ್ವತಂತ್ರವೆನಗಿಲ್ಲ 3
--------------
ಗುರುರಾಮವಿಠಲ
ಆರ ನಂಬುಗೆ ಜಗದೆನಗಿಲ್ಲ ಹರಿಯೆ ಕಾರುಣ್ಯನಿಧಿ ನೀನೆ ಗತಿಯೆನಗೆ ಪೊರೆಯೈ ಪ ತಿಂಡಿಗ್ಹಾಕುವತನಕ ಹೆಂಡತಿಯು ನುಡಿಯುವಳು ಗಂಡನೇ ಗತಿಯೆಂದು ಮಂಡೆಯನು ಬಾಗಿ ತಿಂಡಿತಪ್ಪಿದ ಕ್ಷಣದಿ ಕಂಡಕಂಡತೆ ಕೂಗಿ ಬಂಡುಮಾಡುವಳಿಹ್ಯದಿ ಷಂಡನೆಂದಭವ 1 ಬಂಧುಬಾಂಧವರೆಲ್ಲ ಸಂದುಬಿಡಿದಡಿಗಡಿಗೆ ವಂದಿಸಿ ನುಡಿಯುವರು ತಿಂದುಡುವನತಕ ಸಂಧಿಸಲು ಬಡತನವು ವಂದಿಸಿದವರೆ ಮನ ಬಂದಂತೆ ನಿಂದಿಪರು ಕುಂದ್ಹೊರಿಸಿ ದೇವ 2 ಭೂಮಿಯ ಜನರೆಲ್ಲ ಕ್ಷೇಮ ನೀ ಕೊಟ್ಟಿರಲು ತಾಮಸವ ಬಿಟ್ಟು ಬಲು ಪ್ರೇಮ ಬಳಸುವರು ಸ್ವಾಮಿ ಶ್ರೀರಾಮ ನಿಮ್ಮ ಪ್ರೇಮ ತುಸು ತಪ್ಪಿದರೆ ಭೂಮಿಯೊಳಗಿನ ಕೇಡು ನಾ ಸ್ಮರಿಸಲಾರೆ 3
--------------
ರಾಮದಾಸರು
ಆರಿಗ್ಯಾತಕೆ ಮೊರೆಯಿಡಲಿ ಸಾರಿದವರನ ಪೊರೆವ ಶ್ರೀರಮಣ ನೀನಿರಲು ಪ ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ ಅಳತಿಗೆ ಇನ್ನೊಬ್ಬನೆ ಹಾಗೆವೆ ವಳತಿಗೊಬ್ಬರು ದೊರೆಗಳೆ ಮ್ಯಾಲೆನ್ನ ಪ್ರಳಯಕೆ ಮತ್ತೊಬ್ಬನೆ ಪರಿಪರಿ ಖಳರ ಮಾತುಗಳೇ ಸ್ವಾಮಿ 1 ಆಕಾಲ ನೀನೆವೆ ಈ ಕಾಲದಲಿ ನೀನೆ ಸಾಕುವನು ಇನ್ನೊಬ್ಬನೆ ಸ್ಥಿರವಾಗಿ ತಾಕು ತಗಲಿಲ್ಲದೆಲೆ ಬೊಮ್ಮಾದಿ ಲೋಕಪತಿಗಳ ಒಡಿಯನೇ ಈ ವ್ಯಾಳ್ಯ ಲೋಕರನ ಕಾಯಬೇಕೊ ಸ್ವಾಮಿ 2 ಕಾಸು ಒಬ್ಬರಿಗಿಲ್ಲ ಲೇಸು ತೋರದಲೇವೆ ದೇಶಕೊಬ್ಬರು ಪೋದರೋ ಪೊಟ್ಟಿಗೆ ಕೂಸುಗಳ ಮಾರುಂಡರೋ ಈ ಜನರ ಕ್ಲೇಶಬಡಸದಲೆ ಪೊರಿಯೊ ಕರುಣದಲಿ ವಾಸುದೇವವಿಠಲ ಸ್ವಾಮಿ 3
--------------
ವ್ಯಾಸತತ್ವಜ್ಞದಾಸರು
ಆರು ಬಾಳಿದರೇನು ಆರು ಬದುಕಿದರೇನುನಾರಾಯಣನ ಸ್ಮರಣೆ ನಮಗಿಲ್ಲದನಕ ಪ ಉಣ್ಣ ಬರದವರಲ್ಲಿ ಊರೂಟವಾದರೇನುಹಣ್ಣುಬಿಡದ ಮರಗಳು ಹಾಳಾದರೇನುಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನುಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು 1 ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನುಹೊಕ್ಕು ನಡೆಯದ ನಂಟತನದೊಳೇನುರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನುಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು 2 ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನುಬಲ್ಪಂಥವಿಲ್ಲದವನ ಬಾಳ್ವೆಯೇನುಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನಸ್ವಲ್ಪವೂ ನೆನೆಯದ ನರನಿದ್ದರೇನು 3
--------------
ಕನಕದಾಸ
ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ಆಸೆಯೆನಗಿಲ್ಲ ಸರ್ವೇಶ ನಿನಬಿಟ್ಟು ವಾಸುಕೀಶಯನ ಜಗದೀಶ ನಿನ್ಹೊರತೆನಗೆ ಪ ನಿಗಮದಾಸೆಗೆ ಹೋಗಿ ನೀರೊಳಗೆ ಮುಳುಗಿ ನೀ ಸುಧೆಯ ಆಸೆಗೆ ಹೋಗಿ ಸುರರ ಕೈ ಸಿಕ್ಕು ನೆಲದ ಆಸೆಗೆ ಮಣ್ಣು ಬಗೆದÀು ಶ್ರಮವನೆ ಬಟ್ಟು ಕೊರಳ ಹಾರದ ಆಸೆ(ಗೆ) ಕರುಳ ಬಗೆವೊದೆ ಕಷ್ಟ1 ಭೂಮಿಯಲಿ ಭಾಳಾಸೆ ಭುವನ ವ್ಯಾಪಿಸಿಕೊಂಡು ಕಾಮಧೇನಿ (ನುವಿ?)ನ ಆಸೆ ಕಾರ್ತವೀರ್ಯಾರ್ಜುನನ ಕೊಂದು ಸಿರಿಯ ಸೌಂದರ್ಯದಾಸೆ ಶಿವನೆಬಲ್ಲನು ನೆಗಹಿ ಉದರದಾಸೆಗೆ ಅಸುರೆಜಗಿದು ವಿಷಮೊಲೆನುಂಡಿ 2 ತ್ರಿಪುರ ಸತಿಯರ ಆಸೆಗ್ವಸನವಿಲ್ಲದೆ ತಿರುಗಿ ಅಶ್ವದಲಿ ಆಸೆ ಅತಿ ಕಲಿಭಂಜನನೆನಿಸಿ ಈಸುಪರಿ ಆಸೆ ಭೀಮೇಶ ಕೃಷ್ಣಗೆ ಇರಲು ನಾಶರಹಿತನೆ ನಿನ್ನ ನಾಮವಿದ್ದರೆ ಸಾಕು 3
--------------
ಹರಪನಹಳ್ಳಿಭೀಮವ್ವ
ಇಂದು ಶಿವಯೋಗಾ ಶಿವಯೋಗಾ | ಮುಂದಿಲ್ಲವು ತನು ಭೋಗಾ ಪ ಕೋಟಿ ತೀರ್ಥದಲಿ ಮುಣುಗಿ ಬಂದು | ಕೀಟಕ ಜನರರಿಯರು ಎಂದೆಂದೂ 1 ಎಲ್ಲಿಹುದರಿದರೆ ಗೋಕರ್ಣ | ಇಲ್ಲದಾಯ್ತು ದೇಹದ ವರ್ಣ 2 ಭವತಾರಕನ ಭಜಕನು ಬಲ್ಲಾ | ಭವದೊಳು ಇದ್ದರೂ ಭಯ ಅವಗಿಲ್ಲಾ 3
--------------
ಭಾವತರಕರು
ಇದೇವೆ ಗುರು ಘನ ಮಹಿಮೆ ಧ್ರುವ ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ ಹೊಳೆಯುತಿಹ್ಯದು ಅನುದಿನ ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ 1 ಮಹಿಮರು ಮನಿಮನಿಗಿಲ್ಲ ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ 2 ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ ಸರ್ವರಿಗಾವುದಲ್ಲ ಪೂರ್ವಾ ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ ಸರ್ವಮಯವೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೆಲ್ಲಿ ಪರಮುಕ್ತಿ ಸಾಧನವು ನಿಮಗೆ ಭಿನ್ನ ಭೇದವಳಿಯದ ಕುನ್ನಿಮನುಜರಿಗೆ ಪ ಆಸೆಮೊದಲಳಿದಿಲ್ಲ ಮೋಸಕೃತಿನೀಗಿಲ್ಲ ಹೇಸಿ ಸಂಸಾರದ ವಾಸನ್ಹಿಂಗಿಲ್ಲ ದೋಷಕೊಂಡದಿ ನೂಕ್ವ ಕಾಸಿನಾಸ್ಹೋಗಿಲ್ಲ ದಾಸಜನ ವ್ಯಾಸಂಗ ಕನಸಿನೊಳಗಿಲ್ಲ 1 ಸತಿಮೋಹ ಕಡಿದಿಲ್ಲ ಸುತರಾಸೆ ಬಿಟ್ಟಿಲ್ಲ ಅತಿಭ್ರಮೆ ಸುಟ್ಟಿಲ್ಲ ಹಿತಚಿಂತನಿಲ್ಲ ಸ್ಮøತಿವಾಕ್ಯ ಅರಿತಿಲ್ಲ ಅತ್ಹಿತಪಥಗೊತ್ತಿಲ್ಲ ಗತಿಮೋಕ್ಷ ಕೊಡುವಂಥ ಪವಿತ್ರರೊಲಿಮಿಲ್ಲ 2 ಹಮ್ಮು ದೂರಾಗಿಲ್ಲ ಹೆಮ್ಮೆಯನು ತುಳಿದಿಲ್ಲ ಬ್ರಹ್ಮತ್ವ ತಿಳಿದಿಲ್ಲ ಚುಮ್ಮನದಳಿಕಿಲ್ಲ ಕರ್ಮ ತುಸು ತೊಳೆದಿಲ್ಲ ಧರ್ಮಗುಣ ಹೊಳಪಿಲ್ಲ ನಿರ್ಮಲಾನಂದ ಪದವಿ ಮರ್ಮ ಗುರುತಿಲ್ಲ 3 ಸತ್ಯಸನ್ಮಾರ್ಗವಿಲ್ಲ ಭೃತ್ಯನಾಗಿ ನಡೆದಿಲ್ಲ ಉತ್ತಮರೊಳಾಡಿಲ್ಲ ಮತ್ರ್ಯಗುಣ ತೊಡೆದಿಲ್ಲ ನಿತ್ಯಸುಖ ದೊರೆವಂಥ ಸತ್ಸೇವೆಯಿಲ್ಲ4 ಮೂರಾರು ಕೆಡಿಸಿಲ್ಲ ಈರೈದು ತರಿಸಿಲ್ಲ ಆರೆರಡು ಮುರಿದಿಲ್ಲ ತಾರತಮ್ಯವಿಲ್ಲ ಸಾರಮೋಕ್ಷದೀಪ ಧೀರ ಶ್ರೀರಾಮನಡಿ ಗಂ ಭೀರ ದಾಸತ್ವ ಸವಿಸಾರ ಕಂಡಿಲ್ಲ 5
--------------
ರಾಮದಾಸರು
ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ ಸಂಕೀರ್ತನೆಯೊಂದು ಹೊರತಾಗಿ ಪ ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ ಚಾಡಿ ಸಾಕಾಯ್ತು ದರಮಂ ಪೊರೆಯಲು ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ ನಾಡಿ ಸಾಕಾಯ್ತು ಕುಜನರ ಸಂಗದೊಳಗೆ 1 ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ ಕಂಡು ಸಾಕಾಯ್ತು ಸುಜನರ ಭಂಗವನು ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ ರಂಡಲೆದು ಬೇಡಿ ಸಾಕಾಯ್ತು ಈ ಭವಕೆ 2 ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ ಪರಿ ಪರಿಯ ದುಃಖಗಳನುಣ್ಣುತ ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ ಇರಿಸಿದಂತಿರ ಬೇಕು ಸಕಲಜನರು 3
--------------
ಕವಿ ಪರಮದೇವದಾಸರು
ಇಲ್ಲವಾಯಿತು ಸಾಧು ಜನಕೆ ಎಲ್ಲಾ | ಇಲ್ಲವೆಂಬುದವರ ಚಿತ್ತದೊಳಗಿಲ್ಲಾ ಪ ತನುವಿಲ್ಲ ಮನವಿಲ್ಲ, ಮನದೊಳಗೆ ನೆನವಿಲ್ಲ | ಬಿನುಗಿನ ಸುಖವ ಬಯಸಲಿಲ್ಲ |ಅನುಮಾನ ಎಂಬುವದಲ್ಲಿ ಜನಿಸುವದಿಲ್ಲ |ಚಿನುಮಯಾತ್ಮಕರಾಗಿ ಚರಿಸುತಿಹರೆಲ್ಲ 1 ಸತಿ ಸುತರೆಲ್ಲ ಹಿತವರೆಂದೆನಿಸಲಿಲ್ಲ | ಪತಿತಪಾವನ ರಘುನಾಥ ನೀನನ್ನದಲೆ |ಮಿತಿಯ ಆಯುಷ್ಯ ಕಳೆದರಲ್ಲ 2 ಮೂರ್ತಿ ಭವತಾರಕನ | ವ್ಯಾಪ ಕಾಣದೆ ಅನ್ಯ ಕಾಣಲಿಲ್ಲ 3
--------------
ಭಾವತರಕರು