ಕೃತಿ 5
ಇಂದು ಎನಗೆ ಗೋವಿಂದ ನಿನ್ನ ಪಾದಾರ
ವಿಂದವ ತೋರೊ ಮುಕುಂದ ಪ
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದುಗಳೆಣಿಸದೆ
ಕಂದರ್ಪ ಜನಕನೆ 1
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ 2
ಧಾರುಣಿಯೊಳು ಭೂಭಾರ ಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ 3