ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3
ಯೋಗದರ್ಶನ ಎಂತುಗೂಡುವದೊ ನಿಜ ಹರಿಯೆ ಧ್ರುವ ನಿದ್ರ್ವಂದ್ವದಲಿದ್ದ ಒಂದೆ ವಸ್ತುವೆ ನೀನು ದ್ವಂದ್ವಾಭೇದದ ಸಂದೇಹಿ ನಾನು ಅಂದಿಗಿಂದಿಗೆ ಪೂರ್ಣ ಎಂದೆಂದಿಗೆ ನೀನು ಹೊಂದಲರಿಯದಾ ತಿಮಿರಾಂಧ ನಾನು ಹರಿ 1 ನಿಃಪ್ರಪಂಚದ ನಿರ್ಮಳ ನಿರ್ಗುಣನು ನೀನು ಪ್ರಾಪಂಚಿಕ ಪರಮ ನಾನು ಕೃಪೆಯುಳ್ಳ ಕರುಣಾಕಾರ ಪರಿಪೂರ್ಣ ನೀನು ಕಪಟ ಕುಟಿಲಲಿಹ ಪ್ರಾಣಿ ನಾನು ಹರಿ 2 ಮಹಿಗೆ ಪತಿಯಾದ ಸ್ವಾಮಿ ಶ್ರೀಪತಿ ನೀನು ಸೋಹ್ಯ ತಿಳಿಯದಾ ಮಂದಮತಿ ನಾನು ಸಾಹ್ಯ ಮಾಡುವ ಸಹಕಾರ ಸದ್ಗತಿ ನೀನು ಮಹಾಮಹಿಮೆಯುಳ್ಳ ಮೂರುತಿ ನೀನು 3