ಒಟ್ಟು 11537 ಕಡೆಗಳಲ್ಲಿ , 136 ದಾಸರು , 5740 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಮತ್ಸರಿಸುವವರಲ್ಲಿ ಮಾನ್ಯವಿರಲೀ ಪ ಬಚ್ಚಲಿಲ್ಲದ ಮನೆಯು ಸ್ವಚ್ಛತಾನಾಗಿಹುದೆ ಅ.ಪ ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ ಪರಿಶುದ್ಧವಹುದೇನೊ ಆವಾಗಲೂ ಪರಿಪರಿಯಿಂದಲಿ ಪರಿವಾರ ಜನಗಳು ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ 1 ಗುಣತ್ರಯಗಳಿಂದಲಿ ನಿಬಿಡವಾದೀದೇಹ ಗುಣಕಾರ್ಯ ಮಾಡದೇ ಬಿಡದೆಂದಿಗೂ ಅಣಿಯಾಗಿ ದುರ್ಗುಣಗಳೊಕ್ಕಣಿಸಿ ಪೇಳುವಡೆ ಗುಣವ ತಿದ್ದಲು ತಾವು ಋಣಿಯಾಗುವರಯ್ಯ2 ಅಭಿಮಾನವೆಂಬುದು ನಭೋಮಂಡಲವರೆಗಿಹುದು ಶುಭವೆಂತೊ ಡಾಂಭಿಕದ ಹೇ ಮಾನವಾ ತುಂಬಿತುಳುಕುವ ದುರಭಿಮಾನವನೆ ತೊಲಗಿಸಿ ಇಂಬು ತೋರುವರಯ್ಯ ಮನಸ್ಥೈರ್ಯಕೇ3 ಕಕ್ಕುಲತೆ ಪಡದೆ ನಕ್ಕುಸಂತೈಸಿಲಾಲಿಸುವ ತೆರದಿ ಅಕ್ಕರದಿ ತನ್ನ ಅಪರಾಧಗಳನೆಲ್ಲ ಲೆಕ್ಕಿಸದೆ ಪೇಳ್ವರದು ಉಪಕಾರವಯ್ಯ 4 ಮಚ್ಚರದಿ ನಿಂದಿಸೆ ಅಚ್ಚುತನ ಭಕುತರಿಗೆ ನಿಚ್ಚದಲಿ ಸ್ವಚ್ಛಭಕುತಿ ಇಹುದು ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ ಮೆಚ್ಚಿ ಕಾಯುವನಯ್ಯ ಶ್ರೀ ವೇಂಕಟೇಶ 5
--------------
ಉರಗಾದ್ರಿವಾಸವಿಠಲದಾಸರು
ಲೋಕನೀತಿ (ಆ) ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ ಯಾತಕ್ಕೆ ತಡವಾಗೋದು | ಪ ತರಬೇಕೇಂದು ನೂರು ತಡವೆ ನಾ ನುಡಿದರು ಅರಿಯದವರ ಪರಿತಿರುಗುತ್ತಲಿರುವದು ಅ.ಪ ಮನೆ ಮನೆಯಲಿವಂದು ಮಾನಾರ್ಧಮಾನಗಳು ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ ಮನೆಗೆ ಬಂದು ಹಸಿವೆನುತ ಪೇಳುವದು 1 ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2 ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ- ಖರವ ಮಾಡುವುದು ಈ ಮನೆಯೊಳಿಲ್ಲಾ ಹಿರಿಯರಿಂದ ಬಂದ ಸಂಪ್ರದಾಯವಿದೇನೊ ಇಂಥಾಮನೆಯ ಸೇರಿ ಈ ಸುಖ ಪಡುವೆ 3 ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ ಬದಲು ಸೀರೆಯು ನಾನುಟ್ಟರಿಯೆ ವಿಧಿಲಿಖಿತವು ತಪ್ಪುವುದೆಯೆಂದಿಗಾದರು ವದರಿ ಕೊಂಡರೆಯೇನು ಇದರೊಳು ಫಲವುಂಟು 4 ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು ಈ ನರಜನ್ಮವು ಇಷ್ಟಕ್ಕೆಸಾಕೆಂದು ಧೇನಿಸಿ ಗುರುರಾಮವಿಠಲನ ಬೇಡುವೆ 5
--------------
ಗುರುರಾಮವಿಠಲ
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ಲೋಕನೀತಿಯ ಹಾಡುಗಳು ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ. ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ1 ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ 2 ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ 3
--------------
ಮೋಹನದಾಸರು
ಲೋಕಮಾತೆಯೆ ದಯಮಾಡೆ ತಾಯೆ ಪರಿ ಪೂಜಿಪೆ ಶ್ರೀಪತಿಯ ಸತಿಯೆ ಪುಲ್ಲನಾಭನ ಕೂಡಿ ಮೆಲ್ಲಡಿ ಇಡುತಲಿ ಉಲ್ಲಾಸದಿಂದಲಿ ಬಂದು ಕಾಯೆ ತಾಯೆ 1 ನಿತ್ಯ ಮಂಗಳನಾಗೆ ಅಚ್ಚುತನರಾಣಿ ನಿಚ್ಚದಿ ಭಕ್ತಿ ಜ್ಞಾನವಿತ್ತು ಕಾಯೆ ತಾಯೆ 2 ವಕ್ಷಸ್ಥಳದಲಿ ನಿಂತೂ ಕಾಯೆ ತಾಯೆ ಪಕ್ಷಿವಾಹನ ರುಕ್ಮಿಣೀಶ ವಿಠಲನ ರಾಣಿ 3
--------------
ಗುಂಡಮ್ಮ
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು
ಲೋಲನೇಳುವದಕಿನ್ನ ಮುನ್ನ ಪ ತಾಳಮೇಳದವರೆಲ್ಲಿ ಬಂದು ದ್ವಾರ ದೊಳು ಸೇರಿ ಪಾಡುತಿಹರೊ ನಿಂದು 1 ಸುರರು ಸಭೆ ಯಲಿ ಬಂದಾಗಲೆ ಓಲೈಸುತಲಿಹರು 2 ತಡಮಾಡಬೇಡಯ್ಯ ನೀನು ನಿನ್ನ ಒಡೆಯನೆದ್ದು ನಿನ್ನನು ಕೂಗ್ಯಾನೊ 3 ಕಪಿಯಾಗಿ ನೀ ಪುಟ್ಟಬೇಕಂತೆ ತಾನು ವಿಪಿನವಾಸಕಾಗಿ ತೆರಳುವನಂತೆ 4 ಶರಧಿಯ ನೀ ದಾಟಬೇಕಂತೆ ಅಲ್ಲಿ ಸಿರಿಗೆ ಮುದ್ರೆಯ ನೀನೀಯಬೇಕಂತೆ 5 ದುರುಳನ ಪುರವ ನೀನುರುಹಬೇಕಂತೆ ಅವನ ಪರಿವಾರವೆಲ್ಲವ ನೀ ತರಿಯಬೇಕಂತೆ 6 ಕುಂತೀಲಿ ನೀ ಪುಟ್ಟಬೇಕಂತೆ ತಾನು ಕಂತುವಿಗೆ ಪಿತನಾಗುವನಂತೆ 7 ಮಗಧ ಮುಖ್ಯರ ನೀ ಸೀಳಬೇಕಂತೆ ದೇವ ಜಗಕೆ ಮಂಗಳವ ನೀ ಮಾಡಬೇಕಂತೆ 8 ದುರುಳ ದುಶ್ಶಾಸನನ ಇರಿಯಬೇಕಂತೆ ಅವನ ಕರುಳ ನಿನ್ನರಸಿಗೆ ಮುಡಿಸಬೇಕಂತೆ 9 ಮುದ್ದು ಭಾರತಿಯ ನೀ ಬಿಡಬೇಕಂತೆ ನೀನು ಹೊದ್ದು ಕಾವಿಬಟ್ಟೆ ಯತಿಯಾಗಬೇಕಂತೆ 10 ಅದ್ವೈತ ಮತವನು ನೀ ಖಂಡ್ರಿಸಬೇಕಂತೆ ಗುರು ಮಧ್ವಮುನಿಯೆಂದು ನೀ ಮೆರೆಯಬೇಕಂತೆ 11 ಬದರಿಕಾಶ್ರಮಕೆ ಪೋಗಬೇಕಂತೆ ಅಲ್ಲಿ ಬಾದರಾಯಣನಾಗಿ ತಾನಿರ್ಪನಂತೆ 12 ಹಿಂಗದೆ ಶ್ರೀಶನ ನೀ ನುತಿಸಬೇಕಂತೆ ಸಿರಿ ರಂಗೇಶವಿಠಲ ನಿನಗೊಲಿದಿಹನಂತೆ 13
--------------
ರಂಗೇಶವಿಠಲದಾಸರು
ಲೌಕಿಕ ಸಂದರ್ಭದ ಹಾಡು ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ ಪ ಏಳು ಬಿಲ್ಲಿಯ ಕೊಡಲಿಕ್ಕೆ ಬಂದ ಖೂಳನಿವನು ಈ ಮನೆಯೊಳಗೆ ತಾಳಲಾರದೆ ಬೀಸಾಟಿ ಬಂದೆನು ಶ್ರೀಲತಾಂಗಿಯ ರಮಣ ಗೋವಿಂದಾ 1 ಗುಂಡಪ್ಪನು ಯಾಗುಂಡಪ್ಪನು ರುಬು ಗುಂಡಪ್ಪನು ನಾನಿವನರಿಯೆ ಮಂಡರಂತೆ ದಿನಗಳಿವುತಲಿ ನಮ ಕಂಡು ಮಾನ್ಯ ಮಾಡದೆ ಹೋದನು 2 ಹರಿಸರ್ವೋತ್ತಮನೆಂದು ಝಾಂUಟಿ ಬಾರಿಪ ದಾಸರು ನಾವ್ ಹೌದು ವರ ಕದರುಂಡಲುಗೀಶನ ಒಡೆಯ ನಮ್ಮ ಪಾಂ- ಡುರಂಗನ ದಾಸನೆಂದು ತಿಳಿಯದಲೆ 3
--------------
ಕದರುಂಡಲಗೀಶರು
ವಂಚನೆಲ್ಲಿಹುದಯ್ಯ ವೈಕುಂಠಪತಿ ಗೊಂಚನೆಲ್ಲಿಹದಯ್ಯ ಪ ವಂಚನೆಲ್ಲಿಹ್ಯದು ವಿರಂಚಿತಾತನಿಗೆ ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ ಚರಣದಾಸರೆಂದು ಪಾಂಡವರ ತುರಗಕಾಯ್ದ ನಿಂದು ನರಗೆ ಬೆಂಬಲನಾಗಿ ತಿರುಗಿದ ಧುರದಲಿ ಜರ ಮರೆಯಾಗದೆ ಪರಮಕರುಣಾಕರ 1 ಜಾಗುಮಾಡುತಲಿವ ಭಕ್ತರ ಯೋಗಕ್ಷೇಮ ತಿಳಿವ ನೀಗದಂಥ ಮಹಾಭೋಗಭಾಗ್ಯವಿತ್ತು ಬಾಗಿಲ ಕಾಯ್ದನು ಸಾಗರನಿಲಯ 2 ಜಾರನೆನಿಸಿಕೊಂಡ ಒಲಿದು ಚೋರನೆನಿಸಿಕೊಂಡ ತೋರಿದವರ ಮನಸಾರ ವರವಿತ್ತು ಭೂ ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ 3
--------------
ರಾಮದಾಸರು
ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ. ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1 ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2 ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3
--------------
ಗುರುಗೋವಿಂದವಿಠಲರು
ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ ವಂದಿಸುವರ ಭವಬಂಧವ ಬಿಡಿಸಿ ಆ ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ ಸದ್ಗುಣ ಸಾಂದ್ರಾ ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ ಸತಿ ಮೆಚ್ಚಿಸಿದಾ ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ ಬಂದಿಹರೆನ್ನುತ 1 ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ- ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ ಭೀಷ್ಟೆಯಗರಿವರ 2 ಸೂರ್ಯಯತಿ ಕುಲ- ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ- ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ3
--------------
ಕಾರ್ಪರ ನರಹರಿದಾಸರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ವಂದನೆಯನು ಮಾಡೋ ನಾಮವ ಛಂದದಿ ನೀ ಪಾಡೋ ಭವ ಬಂಧ ಹರಿವುದು ಮುಂದುವರಿದ ಮನಸೊಂದನು ಬಂಧಿಸಿ ಪ ಕಳೆಯದೆ ಮುದದಿಂದ ಮಾಧವ ಗೋವಿಂದನೆಂದು 1 ನಡೆ ನುಡಿಗೊಮ್ಮೊಮ್ಮೆ ಶ್ರೀ ವಿಷ್ಣು ಮಧುಸೂದನನೆಂದು ಒಡನೆ ತ್ರಿವಿಕ್ರಮ ವಾಮನ ಶ್ರೀಧರ ಬಿಡದೆನ್ನ ಸಲಹೋ ಹೃಷಿಕೇಶನಂದು 2 ಚಿತ್ತ ಶುದ್ಧಿಗಳಿಂದ ಶ್ರೀ ಪದ್ಮನಾಭನೆ ಗತಿಯೆಂದು ಮರುತಸುತನ ಕೋಣೆವಾಸ ಲಕ್ಷ್ಮೀಶಗೆ 3
--------------
ಕವಿ ಪರಮದೇವದಾಸರು
ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆಪ ಹಿಂದೆ ಮುಂದೆ ಎಂದೆಂದಿಗು ಎನ್ನಯ ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ ಅಪರಾಧಿಯು ಎಂದು ತಿಳಿದರು ಗುಪಿತದಿ ಸಲಹುವದು ಅಪಮೃತ್ಯುವು ಪರಿಹಾರಕೆ ನಿಮ್ಮಯ ಉಪದೇಶದ ಮಂತ್ರವೆ ಪರಮೌಷಧಿ 1 ಕಾಯಕ್ಲೇಶದಿಂದ ಮನಸಿನ ಹೇಯ ವ್ಯಥೆಗಳಿಂದ ಕಾಯಜ ಪಿತನಂಘ್ರಿಯ ಸೇವಿಸದಲೆ ಆಯಾಸದಿ ಮನ ಕಳವಳಗೊಳುತಿದೆ 2 ಆರು ಮಂದಿ ಇಹರು ಮಾಯಾ ಪಾಶಾದಿ ಬಂಧಕ ಪಡಿಸುತ ಹಾಯಲೀಸರೊ ಹರಿ ಅಂಘ್ರಿಗಳಲಿ 3 ಆರಿಗುಸುರಲೇನು ಮಾಡಿದ ಕಾಂiÀರ್iವು ಮುಂದಿನ್ನೂ ಆನಂದಮಯ ವಿಠ್ಠಲದಾಸರ ಕೂಡಿ ಆದರುಸುವುದಿನ್ನೂ ಮುನ್ನೂ4 ಕಮಲನಾಭ ವಿಠ್ಠಲನೊಲುಮೆಯು ಸುಲಭದಿ ಪಡೆವುದಕೆ ಅನುದಿನ ಪ್ರಾರ್ಥಿಸುತ5
--------------
ನಿಡಗುರುಕಿ ಜೀವೂಬಾಯಿ
ವಂದಿಪೆ ನಿನಗೆ ಗಣನಾಥ ಮೊದಲೊಂದಿಪೆ ನಿನಗೆ ಗಣನಾಥ ಪ ಬಂದ ವಿಘ್ನ ಕಳೆ ಗಣನಾಥ ಅ.ಪ. ಸಿಂಧುರವದನರವಿಂದ ನಯನ ಘನ ಸುಂದರ ಸತಿಯರ ಮಂದಿರ ನಿಲಯನೆ 1 ಹೂಡಿದ ಆಟಕೆ ಮಾಡಿದ ಯೋಚನೆ ಕಡೆಗಾಣಿಸು ಘಟ್ಟಿಕಾಣಿಕೆ ಕೊಡುವೆ 2 ಮಂಗಳಾಂಗ ಮಹಮಾದಗಮನಿಯಳ ತಂದು ತೋರೋ ತಂದೆವರದಗೋಪಾಲವಿಠ್ಠಲಪ್ರಿಯ 3
--------------
ತಂದೆವರದಗೋಪಾಲವಿಠಲರು