ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತವರ ನಾನಲ್ಲವೊ ಹರಿ ಬರಿದೆ ಖ್ಯಾತಿಯನು ತಂದಿತ್ತಿಯ ಪ ಮಾತುಗಳು ನಾಲುಕಾಡಿ ಸಭೆಯೊಳಗೆ ಪ್ರೀತಿ ಬಡಿಸುವೆನೊ ನರರ ರೀತಿಯಲಿ ಶ್ರುತಿ ಸ್ಮøತಿಗಳ ಪಠಿಸಿ ಶ್ರೀ- ನಾಥ ನಿನ್ನ ತೋಷಿಸಿದೆನೆ 1 ಜಪಮಣಿಗಳನು ತಿರುಹಿಸಿ | ಲೋಕರನ ಕಪಟಗೊಳಿಸುವೆನಲ್ಲದೆ ತಪ ಮಾಡಿದೆನೆ ಮನದಲಿ | ನಿನ್ನಯ ಕೃಪೆಯು ಉದಿಸುವ ತೆರದಲಿ 2 ದಾಸ ವೇಷವ ಧರಿಸಿದೆ ಕನಕದಾ- ವಾಸನೆಯಿಂದಲ್ಲದೆ ವಾಸುದೇವವಿಠಲ ಶರಣ ತಾ ಲೇಶವರಿಯೆನು ಕರುಣಿಸೊ 3
--------------
ವ್ಯಾಸತತ್ವಜ್ಞದಾಸರು
ಯಾತ್ರಕ್ಕೆ ಬಂದಿರ್ದೆನೋ ಭುವನ ಯಾತ್ರ ಮಾಡುವೆನು ಪ ಧಾತ್ರಿ ಈರೇಳಕ್ಕೆ ಸೂತ್ರಧಾರನ ಕೃಪಾ ಪಾತ್ರನಾಗಿ ಪವಿತ್ರನಾಗುವೆನು ಅ.ಪ ದೇಶ ತಿರುಗುವೆನು ದೇಹ್ಯದ ವಾಸನೆ ತೊಡೆಯುವೆನು ಆಶಾಪಾಶ ನೀಗಿ ದೋಷರಹಿತನಾಗಿ ದಾಸಜನಕೆ ಬಾಗಿ ಸಂತೋಷ ಪಡೆಯುವೆನು 1 ಪೃಥ್ವಿ ತಿರುಗುವೆನು ಹುಡುಕಿ ಸತ್ಯರ ಕಾಂಬುವೆನು ನಿತ್ಯನಿರ್ಮಲ ಹರಿಭಕ್ತಿ ಕವಚ ತೊಟ್ಟು ಮತ್ತೆ ಸಾವ್ಹುಟ್ಟುವ ಕುತ್ತ ಗೆಲಿಯುವೆನು 2 ಕ್ಲೇಶವ ತರಿಯುವೆನು ಮಾಯ ಮೋಸವ ಗೆಲಿಯುವೆನು ದಾಸಜನರ ಪ್ರಾಣೇಶ ಶ್ರೀರಾಮನ ದಾಸನಾಗಿ ಮುಕ್ತಿ ಆಸನೇರುವೆನು 3
--------------
ರಾಮದಾಸರು
ಯಾದವಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ಪ ಪಾವಕ ಮೂರ್ತಿಕಳ್ಳ ದೈತ್ಯರ ಸಂಹಾರವ ಮಾಡಿದೆನಳಿನೋದ್ಭವನಯ್ಯ ಅಮರ ಚೆನ್ನಿಗರಾಯ 1 ಕಾಯ ಬೇಕೆಂದುನಟಿಸಿ ಕಂಬದಿ ಮೂಡಿ ನಗುವ ಭಕ್ತನ ನೋಡಿಸಟೆಯಲ್ಲ ಅಜಾಂಡಗಳೊಡೆವಂತೆ ಘರ್ಜಿಸೆಕುಟಿಲ ದಾನವನೋಡುವುದ ಕಂಡು ಎಳೆತಂದುಚಿಟಿಚಿಟಿ ಚಿಟಿರೆನ್ನಲು ಉಗುರಲಿ ಸೀಳಿಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟನಾಟಕ ಸೂತ್ರಧಾರಿ ನೀನಹುದು ಕ್ಷತ್ರಿಯರಚಟುಲ ಛಲದಿ ಒಗೆದು ಕರುಳ ಬಗೆದು ತುಳಿದ-ದಟರನು ಸಂಹರಿಸಿದ ಚೆಲುವರಾಯ 2 ಅಂದು ಕೌಸಲ್ಯಾ ಗರ್ಭ ಚಂದ್ರಮನಾಗಿ ಬೆಳಗಿಕೊಂದೆ ರಾವಣ ಕುಂಭಕರ್ಣಾದಿಗಳನೆಲ್ಲಇಂದಿರೇಶನೆ ನಿನ್ನ ನಂಬಿದ ವಿಭೀಷಣನಿಗೆಎಂದಿಗೂ ಪಾರವಿಲ್ಲದ ಪದವಿಯನಿತ್ತೆಕಂದನಾಗಿ ಜನಿಸಿ ವಸುದೇವ ದೇವಕಿಯರಿಗೆನಂದಗೋಕುಲದೊಳು ನಿಂದ ಕಂಸನ ಕೊಂದೆಚಂದಿರನ ನೆರೆಪೋಲ್ವ ಉನ್ನತೋನ್ನತನಾಗಿಕೊಂದು ತ್ರಿಪುರಾಸುರರ ಅವರ ಸತಿಯರ ಕೆಡೆಸಿಒಂದೆ ನೆಗೆತಕೆ ನೆಗೆವ ಅಶ್ವವನೇರಿದೆ ವ-ಸುಂಧರೆಯ ಮೇಲೆ ಲೀಲೆಯಾಡುತ ಕೃತಯುಗದಿನಿಂದು ಯಾದವಗಿರಿಯ ಮೇಲೆ ತ್ರೇತಾಯುಗದಿಬಂದು ರಾಮನೆನಿಸಿಕೊಂಡೆ ದ್ವಾಪರ ಯುಗದಿಬಂದು ಕೃಷ್ಣನೆನಸಿಕೊಂಡೆ ಕಲಿಯುಗದೊಳುನಿಂದು ಚೆಲುವ ಚೆನ್ನಿಗರಾಯನಾದೆ ವರನಂದಿಯ ಚಂದದಿಂ ರಕ್ಷಿಸಿದೆ ಎನ್ನ ಕಾಯೊಇಂದಿರಾಪ್ರಿಯ ಬಾಡದಾದಿಕೇಶವ ರಾಯ3
--------------
ಕನಕದಾಸ
ಯಾರ ಕೃತಕವು ಇದು ವಿಚಾರವನು ಮಾಡಿ ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು ಮೃಗ ಮೈಮೇಲೆ ಬೀಳುವುದ 1 ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು ಕೆಟ್ಟ ಪಥದಲಿ ಚಾರುಗಟ್ಟಿವಿಳಿದು ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು 2 ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ 3 ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು ಬಂದುದೆನಗೈಶ್ವರ್ಯ ಎಂದು ಹರುಷಿಸುತ ಮಂದಹಾಸದ ಒಳಗೆ ಬಂಧನದಲಿರುತಿರ್ದು ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ 4 ಮೂರು ಮಂದಿಯು ಬಂದು ಸೇರಿದರು ದೂರಿಡುವ ಆರು ಕರೆದರು ತಾನು ಬಾರೆನೆಂಬ ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ ಸಾರಿ ಚೋರತ್ವದಲ್ಲಿ ಪರವೂರ ಸುಲಿವ 5 ಮೇಲು ದುರ್ಗವ ಕಂಡು ಗಾಳಿಗೋಪುರವನ್ನು ಆಳ ಬಲುಹುಳ್ಳವನು ಅವಸರದೊಳು ನೂಲಯೇಣಿಯನಿರಿಸಿ ಏರಿಳಿದು ಬಾಹಾಗ ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು 6 ಹೀಗಿರುವ ಕೃತ್ಯಗಳು ನಾಗಶಯನನಿಗರುಹು ಬೇಗದೊಳು ಪರಿಹರಿಪ ಯೋಗವನು ಕೊಡುವ ನಾಗಗಿರಿವಾಸನಹ ವರಾಹತಿಮ್ಮಪ್ಪ ತೂಗುವನು ತೊಟ್ಟಿಲೊಳು ಆಗುವುದನಿತ್ತು 7
--------------
ವರಹತಿಮ್ಮಪ್ಪ
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ಯಾರಂದರೇನು ಫಲವದೆ ನಮ್ಮ ದೃಷ್ಟ ಈ ರೀತಿ ಕಾಡಲು ಬರಿದೆ ಪ ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ- ಜಾಕ್ಷ ಕೃಷ್ಣ ಮಾಧವಾಚ್ಯುತ ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು ಪೇಕ್ಷಿಸದೆ ರಕ್ಷಿಸೆನ್ನ 1 ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ ಅನಿಮಿಷರೊಡೆಯನ ಮೊರೆ ಹೋಗದೆ 2 ಪರಮ ಪುರುಷ ಪತಿತ ಪಾವನ ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ ಪರರ ನಿಂದೆಗೊಳಗಾಗಿ ವೃಥಾ 3
--------------
ಹೆನ್ನೆರಂಗದಾಸರು
ಯಾರಯ್ಯ ನೀನ್ಯಾರಯ್ಯ ಪ ಸೋರುತಿರುವ ಸೌಂದರ್ಯದಿ ಮನವನು ಸೂರೆಯಗೊಂಬ ನೀನ್ಯಾರಯ್ಯ ಅ.ಪ ನಂದನ ಕಂದ ನೀನಾದರೆ ಗೋವ್ಗಳ ಮಂದೆಯ ಬಿಟ್ಟು ಬಂದಿಹುದೇಕೆ ಸಂದೇಹವು ತೋರುತಲಿವೆ ನಿನ್ನನು ಎಂದಾದರು ನಾ ಬಯಸಿದೆನೆ 1 ನೀರಿಗೆ ಬಂದೆನು ನಾನಿಲ್ಲಿ ಯಾರು ಪೇಳಿದರು ಎನ್ನ ಸುದ್ದಿ ಮಾರನ ತಾತ ನೀನಿರಬಹುದು ಯಾರ ಮಾತ ಕೇಳುವಳಲ್ಲ 2 ಬಿಂದಿಗೆ ಭಾರವು ಜಗಿಯುತಿದೆ ಮಂದಸ್ಮಿತವೆನ್ನ ಬಿಗಿಯುತಿದೆ ತಂದೆ ಪ್ರಸನ್ನ ಕೈಮುಗಿಯುವೆನು ಮಂದಿರ ಮಾರ್ಗವು ಸಿಗಲೆನಗೆ 3
--------------
ವಿದ್ಯಾಪ್ರಸನ್ನತೀರ್ಥರು
ಯಾರಲ್ಲಿ ಪೋದರು ನೀರಾದರೂ ಕೊಡರು ಪ ದೂರ ಹೋಗೆಂಬರು ಬದಿಸೇರಲೀಸರು ಅ.ಪ ಹಸಿವು ತೃಷೆಗಳಿಂದಲಿ ವ್ಯಸನವಪಡುತಲಿ ಉಸುರುಸುರೆನುತಲಿ ಬಸವಳಿದು ಭಯದಲಿ 1 ರೋಗದಲಿ ಬಳಲುತ ಹ್ಯಾಗಿನ್ನು ಎನ್ನುತ ಕೂಗುತ್ತ ಬಾಯ್ಬಿಡುತ ಎಲ್ಲರನು ಬೇಡುತ 2 ಗುರುರಾಮವಿಠಲನ ನೆರೆ ನಂಬದಿರುವನ ಪರಿಪರಿಯಲಿ ಜನ ಬಯ್ಯುವರನುದಿನ 3
--------------
ಗುರುರಾಮವಿಠಲ
ಯಾರಿಗಾದರು ಬಿಡದು ಪೂರ್ವಾರ್ಜಿತ ಬೆನ್ನ ಸಾರಿಹುದು ಭವಭವದೊಳದು ಕಾಡುತ ಪ ಇಂದ್ರ ದೊಡ್ಡವನೆಂದರವಗೆ ಮೈಕಣ್ಣೆಲ್ಲ ಚಂದ್ರ ದೊಡ್ಡವನೆನಲು ಹೆಚ್ಚು ಕುಂದು ಇಂದ್ರ ಜಾಲೆಯು ಲಕ್ಷ್ಮೀದೇವಿ ದೊಡ್ಡವಳೆನಲು ಮ ಹೇಂದ್ರ ಜಾಲೆಯು ಒಂದು ಕಡೆ ನಿಲ್ಲಳು 1 ಸರಸಿರುಹಭವ ದೊಡ್ಡವನೆನಲು ನಡುತಲೆಯಿಲ್ಲ ತರುಣಿ ದೊಡ್ಡವನೆನಲು ಸಂಚಾರವು ಉರಿಯು ದೊಡ್ಡವ ನೆನಲು ಮೈಯೆಲ್ಲ ಧೂಮಮಯ ಉರಗ ಮಿಗಿಲೆನೆ ಶಿರದಿ ಪೊತ್ತಭಾರ 2 ಮೇರು ದೊಡ್ಡವ ನೆನಲು ಏಳಲಿ ಬಗೆಯಿಲ್ಲ ವಾರಧಿಯು ದೊಡ್ಡಿತೆನೆ ಪಾನಕಿಲ್ಲ ಮಾರುತಾತ್ಮಜ ಕೋಣೆ ವಾಸ ಲಕ್ಷ್ಮೀರಮಣ ಯಾರಿಗೂ ಸ್ವತಂತ್ರವನು ಕೊಟ್ಟುದಿಲ್ಲ 3
--------------
ಕವಿ ಪರಮದೇವದಾಸರು
ಯಾರಿಗುಸರಲೇನು ದುರಿತಾರಿ ನೀನೆ ರಕ್ಷಿಸು ಕಂ- ಸಾರಿ ನೀನೆ ರಕ್ಷಿಸು ಮುರಾರಿ ನೀನೆ ರಕ್ಷಿಸು ಪ. ಭಾರಿ ಭಾರಿ ನಿನ್ನ ಪದವ ಸೇರಿದವರ ಕಾಯ್ದ ದೊರೆಯೆ ಅ.ಪ. ಪತಿಗಳೈವರಿದಿರೆ ಪತಿವ್ರತೆಯ ಖಳನು ಸೆಳೆಯೆ ಲಕ್ಷ್ಮೀ- ಪತಿಯೆ ನೀನೆ ಕಾಯ್ದೆಯಲ್ಲದೆ ಗತಿಯದಾರು ತೋರ್ದರಯ್ಯ 1 ಪಿತನ ತೊಡೆಯೊಳಿದ್ದ ಸುತನ ಸತಿಯು ಕಾಲಿನಿಂದೊದೆಯೆ ಖತಿಯೊಳೈದಿ ಭಜಿಸೆ ಅತಿಶಯದ ವರವನಿತ್ತೆ 2 ದನುಜ ಕೋಪದಿಂದ ತನ್ನ ತನುಜನನ್ನು ಬಾಧೆಗೊಳಿಸೆ ಮನುಜ ಸಿಂಹನಾಗಿ ಭಕ್ತಗನುಪಮಾದ ಹರುಷವಿತ್ತೆ 3 ಮಕರ ಬಾಧೆಯಿಂದ ಕರಿಯು ಸಕಲಕರ್ತನೆನುತಲೊದರೆ ಅಖಿಳ ದೈವಂಗಳಿರಲು ಬಕವಿರೋಧಿ ನೀನೆ ಪೊರೆದೆ 4 ಕೂರ್ಮ ಕ್ರೋಢ ಸಿಂಹ ಬ್ರಾಹ್ಮಣೇಂದ್ರ ರಾಮಕೃಷ್ಣ ಬುದ್ಧ ಕಲ್ಕಿ ದಾನವಾರಿ ಸಲಹೊ ಎನ್ನ 5 ಸರ್ವಲೋಕ ಜನಕ ನಿನ್ನ ಸರ್ವಕಾಲದಲ್ಲಿ ನೆನೆವೆ ವಿನುತ ಸರ್ವಸೌಖ್ಯ ನೀಡು ಹರಿಯೆ 6 ಕಂಜಜೇಶ ಪನ್ನಗೇಶ ನಿರ್ಜರೇಶ ಮುಖ್ಯ ದಾಸವರದ ಶೇಷ ಭೂಧರೇಶ ಎನ್ನ ಸಲಹೊ ಬೇಗ 7
--------------
ತುಪಾಕಿ ವೆಂಕಟರಮಣಾಚಾರ್ಯ
ಯಾರಿಗುಸುರಲಿ ಸಾರತತ್ವ ವಿ ಚಾರ ಭವದೂರಾ ಪ ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ. ಶ್ರೀ ಗುರುನಾಥನ ಕಟಾಕ್ಷದಿ ತ್ಯಾಗಿಸಿ ಸಂಸಾರದ ಗೊಡವೆಯ ಯೋಗಿಯಂದದೊಳಿದ್ದು ಆಗಮ ನಿಗಮಾರ್ಥಕೆ ಸಿಲುಕದ ಯೋಗ ಘನವನೊಳಗೊಂಡಿಹ ಅಂಗದ ಯೋಗಾನಂದದುಯ್ಯಾಲೆಯ ತೂಗಿ ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1 ಉದರದ ನಾಭಿಯ ನೀಳದ ತುದಿ ಹೃದಯ ವಾರಿಜದೊಳಗಿಪ್ಪ ಶಿವ ಸದನ ಲಿಂಗವ ಕಂಡು ಅದು ಇದು ಬೇರ್ಪಡಿಸದೆ ಹೃದಯದಿ ಚದುರ ಸಾಧು ಸತ್ಪುರುಷರ ಮತದಲಿ ಮುದದಿ ಮುಕ್ತಿ ಮಾನಿನಿಗೆ ಮಂಗಲ ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2 ನೆತ್ತಿಯೊಳ್ ಹೊಳೆ ಹೊಳೆವ ಚಿದಾ ದಿತ್ಯನ ಪ್ರಕಾಶವ ಕಂಡು ಚಿತ್ತದಿ ನಲಿದಾಡಿ ಉತ್ತಮಾನಂದಾತ್ಮರಸ ಸವಿ ಯುತ್ತ ಚಪ್ಪರಿದು ಶರಣರ ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3 ಕುಂದುವ ಕಾಯದ ಸುಖಿಕೆಳೆಸದೆ ಹೊಂದಿದ ಸರ್ವಾಂಗದ ಶೋಧಿಸಿ ಒಂದೇ ದೇವನೊಳಾಡಿ ವಂದಿಸಿ ಗುರುಹಿರಿಯರ ಚರಣಕೆ ಹೊಂದಿ ಹೊಂದಿ ಓಲಾಡುವ ಅರಿಗಳ ಬಂದಿಯೊಳಗೆ ಸಿಲುಕದೆ ಬ್ರಹ್ಮಾ ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4 ಹಲವು ಯೋನಿಯೊಳಗೆ ಹೊರಳ ಕುಲ ಛಲ ಶೀಲವ ಮೂರಡಗಿಸಿ ಸುಲಭ ವಂಶದೊಳುಂಡು ಮಲಿನ ಮಾಯಾಮೋಹಕೆ ಸಿಲುಕದೆ ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5
--------------
ಭಟಕಳ ಅಪ್ಪಯ್ಯ
ಯಾರಿಗೆ ದಾರೋ ಗೋಡೆಗೆ ಮಣ್ಣು ಮಾರಿಯರೆಲ್ಲರು ಶ್ರೀ ಹರಿಯೇ ಪ ಸ್ಥಿತಿಯಲ್ಲ ದೇವಾ ನಿನ್ನುಳಿದು 1 ಅಂಬುಜಲೋಚನ ಪರಮ ಪುರುಷನ ಭವ ಅಂಬುಜೆರಮಣಾ ನಿನ್ನುಳಿದು 2 ನಂಬಿದ ಭಕ್ತರ ಸಲಹುವ ಹರಿಯೇ ಸಂಭ್ರಮದಾತ್ಮಗೆ ನಿನ್ನುಳಿದು3 ನರಹರಿ ಭಕ್ತಿ ಮಾಡಿದ ಧರ್ಮ ಸರಸದಿ ಪರಹಿತವನ್ನುಳಿದು 4 ಹಿಡಿಯುವೆ ಮುಕ್ತಿಯ ಮಾರ್ಗವನೀಗ ಪಡೆವೆನು ಸುಖವ ಕೇಶವನೇ5
--------------
ಕರ್ಕಿ ಕೇಶವದಾಸ
ಯಾರಿಗೆ ದೂರುವೆನು ವೆಂಕಟರಾಯ ಚಾರದ ಮಹಿಮೆಯನು ಪ ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ ಹೋರಾಟವನಿತ್ತು ಮಾರಿದೆಯೆನ್ನನು ಅ.ಪ ತೇಜವುಳ್ಳವನೊಬ್ಬನು ಐದನೆಯಲ್ಲಿ ಮೋಜಾಗಿ ಒಳಹೊಕ್ಕನು ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು ಪಾಜಿ ಮಾಡಿದನೆನ್ನ ಮೂಜಗದೊಡೆಯ 1 ಸೀತವಾದವನೊಬ್ಬನು ಅಷ್ಟಮದದಲ್ಲಿ ಕಾತುರದೊಳು ಬಂದನು ಘಾತಕತನ ಮಾಡಿ ಭೀತಿಗಳನು ತೋರಿ ದಾತ 2 ಮೂರನೆಯವನೊಬ್ಬನು ಏಳನೆಯಲ್ಲಿ ಸೇರಿಯೆ ಕಳುತಿದ್ದನು ಏರಿ ಬಂದುದನೆಲ್ಲ ಆರಿಸಿ ಮಾರಿಸಿ ಸೂರೆಗೊಂಡನು ಎನ್ನ ವಾರಿಜನಾಭ 3 ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ ಶತ್ರುವಾಗಿಯೆ ನಿಂತನು ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ ಪಾತ್ರವÀ ತೀರಿಸಿ ಗಾತ್ರವ ಕೆಡಸಿದ 4 ಸುರಗುರುವೆಂಬುವನು ಮೂರನೆಯಲ್ಲಿ ಸ್ಥಿರವಾಗಿ ನಿಂತಿಹನು ಗುರುಗಳ ಮುಖದಿಂದ ಕರಕರೆ ಹತ್ತಿಸಿ- ದರು ಪಾಡಿ ಹರಿಯನ್ನು ತಿರುಕನಾದೆನು ನಾನು 5 ಆರನೆ ಮನೆಯೊಳಗೆ ದೈತ್ಯರ ಆ- ಚಾರಿಯನು ನಿಂತಿಹನು ಹಾರುಮಾತುಗಳೇಕೆ ತೂರಿದನೆಲ್ಲವ ಪಾರಾದೆನು ನಾನು ವಾರಿಜನೇತ್ರ 6 ಆದಿತ್ಯ ಪುತ್ರನಾದ ಶನೈಶ್ವರ ಬಾಧಿಪ ಮನೆಗಳಾರು ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ ವೇದಗಳೆಲ್ಲವು ಏಳುಯೆಂಟಿರಲಿ 7 ನಾಡನಾಳುವ ರಾಯರ ಕೆಡಿಸಿ ಮುಂದೆ ಕಾಡಿಗೆ ಸೇರಿಸಿದ ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ 8 ವಾರಿಧಿ ಮಥನದಲಿ ಸುಧೆಯನ್ನುಂಡು ಸೇರಿದ ಗೃಹರೊಳಗೆ ಮೀರಿದರಿಬ್ಬರ ಪಾರುಪತ್ಯಗಳನ್ನು ಮಾರ ಸನ್ನಿಭನೆ 9 ಸಂಧಿ ಸಂಧಿಯಲಿವರು ಬಂದೆನ್ನನು ದಂದುಗ ಬಡಿಸುವರು ಇಂದ್ರಾದಿ ದೇವರಿಗಳವಲ್ಲ ಇವರೊಳು ಹಿಂದು ಮುಂದರಿಯೆನು ಬಂದ ಬವರವನ್ನು 10 ಶುಭದಲ್ಲಿ ಶುಭವಿತ್ತರು ವೆಂಕಟರಾಯ ಶುಭ ತೋರಿಸೊ ಅಭಯವನಿಪ್ಪಂಥ ವರಾಹತಿಮ್ಮಪ್ಪನೆ ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ 11
--------------
ವರಹತಿಮ್ಮಪ್ಪ
ಯಾರಿಗೆ ಯಾರಿಹರೋ ಜಗದಲಿ ನಾರಾಯಣ ನೀನಲ್ಲದೆ ಬಾಂಧವ ಪ ಜನನಿ ಜನಕ ಸತಿಸುತ ಸಹಜರುಗಳು ಮನೆ ಮಠ ಧನಕನಕಾಧಿಗಳೆಲ್ಲವು ಅನಿಮಿತ್ತ ಬಾಂಧವ ನೀನಲ್ಲದೆ ಹೊಣೆ 1 ದೇಹಬಿಟ್ಟು ಪರದೇಹವ ಸೇರಲು ಬಾಹರೇ ಲೋಕದ ಬಂಧುಗಳು ದೇಹ ದೇಹದಲೂ ಕ್ಷಣವಗಲದೆ ಎಂದು ಸಾಹಚರ್ಯ ಜಗಮೋಹನಗಲ್ಲದೆ 2 ಸಂತೆಗೆ ಸೇರುವ ಗಂಟುಕಳ್ಳರುಗಳ ತಂಟೆಯು ಬೇಡೆಂದು ಲೌಕಿಕಕೆ ಅಂಟದಿದ್ದರೆ ದೊಡ್ಡ ಗಂಟನು ಹೊರಿಸುವ ನಂಟನು ಭಕ್ತ ಪ್ರಸನ್ನ ತಾನಲ್ಲದೆ 3
--------------
ವಿದ್ಯಾಪ್ರಸನ್ನತೀರ್ಥರು
ಯಾರಿಗೆ ಯಾರು | ಯಾರಿಗು ಯಾರು ಯಾರಿಲ್ಲಾ | ಯಾರಿಲ್ಲ ಪ ನಾರಾಯಣನೊಬ್ಬ | ಸಾರುವ ಸಮಯಕೆ ಬೇರೊಬ್ಬರಿಲ್ಲ ಕಂಡ್ಯಾ ಜೀವವೇ ಅ.ಪ. ತಂದೆ ತಾಯಿ ಸುತ | ಬಂಧು ಬಳಗ ಜನಮಂದಿಯೊಬ್ಬರು ಬರರೊ ||ಸಂದೋಹದಿಂದ ಜೀವ | ನೊಂದು ಪೋಗುವ ವೇಳೆಬಂಧು ಬಳಗ ರೋದನಾ | ಬಲು ರೋದನ 1 ಅಂದಾದರವನ್ಹಿಂದೆ | ಪೋಗೋರೊಬ್ಬರ ಕಾಣೆಸಂದೋಹ ಸುಟ್ಟು ಬರುವರೋ ||ಬಂದು ಮಶಣದಿಂದ | ಮಿಂದು ಮೆಲ್ಲದೆ ಇರುವಮಂದಿಯೊಬ್ಬರ ಕಾಣೆನೋ | ಎಲ್ಲು ಕಾಣೆನೊ 2 ಕಾಲ ಕಳೆಯುತ ಬರೆ | ಮೇಲಾದ ದುಃಖ ಮರೆಕಾಲಾ ನಾಮಕ ಲೀಲೆಯೋ ||ವ್ಯಾಳಾ ವ್ಯಾಳಕೆ ಮೆದ್ದು | ಜೋಲು ಮುಖವ ಬಿಟ್ಟುಲೀಲಾ ವಿನೋದ ಮಾಡರೇ | ಅದ ಬಿಡುವರೇ 3 ಪಥ ಸೇರೋ | ಅದ ಸೇರೋ 4 ಬಂದದ್ದು ಹೋದದ್ದು | ಮುಂದೆ ಬರುವುದನುದ್ವಂದ್ವಕರ್ಮಗಳೆಲ್ಲವಾ ||ಸುಂದರ ಗುರು ಗೋ | ವಿಂದ ವಿಠಲ ಪಾದದ್ವಂದ್ವ ಕರ್ಪಿಸೊ ಬಿಡದೇ | ಮರೆಯದೇ 5
--------------
ಗುರುಗೋವಿಂದವಿಠಲರು