ಒಟ್ಟು 2197 ಕಡೆಗಳಲ್ಲಿ , 114 ದಾಸರು , 1773 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣವೇಣಿ ಕಲ್ಯಾಣಿ ನಿತ್ಯ ಸಾಗರನ ರಾಣಿ ಪ ಅಜನ ನಿರೂಪದಲಿ ಜಾಬಾಲಿಮುನಿ ಬಂದು ಭಜಿಸಿದನು ನಿನ್ನ ಬಲುದಿವಸಂಗಳು ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ 1 ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ ಹನ್ನೆರಡು ವರುಷಕೆ ಒಮ್ಮೆ ಬಿಡದೇ ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ 2 ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ 3 ಪೋಗದ ಪಾಪಗಳಿರಲು ನಿನ್ನ ದರುಶನವು ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ 4 ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು ಒಲಿದು ಕೊಂಡಾಡುವರು ಸತತದಲ್ಲಿ ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ 5
--------------
ವಿಜಯದಾಸ
ಕೃಷ್ಣಾ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ಪ ಪಾದ ಮುಟ್ಟಿ ಭಜಿಸುವರ ಇಷ್ಟಾರ್ಥಗಳನೀವೆ ಸೃಷ್ಟಿಗೊಡೆಯ ದೇವ ಅ.ಪ ಶಿಲೆಯಾದಹಲ್ಯೆಯ ದುರಿತವ ತರಿದೆ ಸಲಿಲ ಮಡುವಿಲಿ ಮಕರದಿ ಕರಿಯ ರಕ್ಷಿಸಿದೆ ಸುಲಭದಿಂದಜಮಿಳನ ದುರಿತವ ತರಿದೆ ಕಲಿ ಸುಯೋಧನನ ಓಲಗದಿ ಗರ್ವ ಮುರಿದೆ 1 ವಿಶ್ವರೂಪನು ನೀನೆ ವಿಶ್ವವ್ಯಾಪಕನೆ ವಿಶ್ವೋದರನೆ ಕೃಷ್ಣಾ ವಿಶ್ವನಾಟಕನೆ ವಿಶ್ವಬಾಯೊಳು ತೋರ್ದ ವಿಶ್ವೋದ್ಧಾರಕನೆ ವಿಶ್ವಮಯನೆ ಸರ್ವ ವಿಶ್ವನು ನೀನೆ2 ಅಗಣಿತ ಮಹಿಮ ಆಶ್ಚರ್ಯನು ನೀನೆ ಬಗೆ ಬಗೆ ನಾಮಗಳಿಂದ ಪೂಜಿತನೆ ಖಗವರವಾಹನ ಕಂಸ ಮರ್ದನನೆ ನಿಗಮಗೋಚರ ನಿತ್ಯತೃಪ್ತನು ನೀನೆ 3 ಕನಕಗರ್ಭನ ಪಿತ ಕರುಣದಿ ಸಲಹೊ ಇನಕುಲ ತಿಲಕ ಸುಂದರ ಮೇಘಶಾಮ ದಿನಕರ ತೇಜ ಶ್ರೀ ಸನಕಾದಿ ಮುನಿನುತ ಹನುಮನಂತರ್ಯಾಮಿ ಮಮತೇಲಿ ಸಲಹೊ 4 ಕಮಲ ಸಂಭವನಯ್ಯ ಕಮಲಜಾತೆಯ ಪ್ರಿಯ ಕಮಲ ಪುಷ್ಪ ಮಾಲಾಲಂಕೃತ ಹರಿಯೆ ಕಮಲಭವೇಂದ್ರಾದಿ ಸುಮನಸರೊಡೆಯ ಶ್ರೀ-ಕಮಲನಾಭ ವಿಠ್ಠಲ ಕರುಣದಿ ಸಲಹೊ 5
--------------
ನಿಡಗುರುಕಿ ಜೀವೂಬಾಯಿ
ಕೃಷ್ಣಾ ನೀ ಬೇಗನೆ ಬಾರೊಮುಖವನೆ ತೋರೋ ಪ ಕಾಶೀ ಪೀತಾಂಬರ ಕೈಯಲಿ ಕೊಳಲುಪೂಸೀದ ಶ್ರೀಗಂಧ ಮೈಯೊಳಗಮ್ಮ 1 ಉಡಿಯಲ್ಲಿ ಉಡಿಗೆಜ್ಜೆ ಬೆರಳಲಿ ಉಂಗುರಕೊರಳಲಿ ಹಾಕಿದ ಹುಲಿಯುಗುರಮ್ಮ2 ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕೃಷ್ಣ3
--------------
ವ್ಯಾಸರಾಯರು
ಕೆಡುವೆಯೇಕೋ ಮನುಜ ಕೆಡುವೆಯೇಕೋ ಪ ಪೊಡವಿಯಾ ಸುಖ ಸ್ಥಿರವದೆಂಬ ದೃಢವನಾಂತು ನೀ ಅ.ಪ ಧನವಗಳಿಸಲೇಂ ಮನುಜಾ ಮನೆಗಳೀಡಾಡೆ ಎನಿತು ಬಳಗಮಿರ್ಪೊಡೇನು ತನುವಿನಾಸೆಯಿಂ 1 ಮರೆವೆಯೇತಕೋ ಮನುಜಾ ಅರಿಯಲೆನ್ನುತಾ ಬರಿಯ ಮಾಯೆಯೀ ಪ್ರಪಂಚ ಚಿರವೆಂದೆನ್ನುತಾ 2 ರಂಗಮಾಲೋಲನಾ ಮಾಂಗಿರೀಶನ ನೆನೆ[ದರೆ] ಹಿಂಗದೇ ಭವಬಂಧಗಳನು | ಭಂಗಗೈಯನೇ 3 ಕಾಲದೂತ ರಂಗ ಕಾಲಿನಿಂದೊದೆಯುವಾಗ ಬಾಲರಾಮದಾಸ[ನುತನ] ನಲಿದು ನೆನೆಯದೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೆಳದಿ ಕೇಳುವ ಬಾರೆ ನಳಿನಾಕ್ಷ ವನದಲ್ಲಿ ಕೊಳಲನೂದುವ ಬಗೆಯ ನಳಿನಜಾಂಡವು ತಾನೆ ತಲೆದೂಗುತಲಿದೆ ಕುಳಿತಿರೆ ವಶವಲ್ಲವೆ ಪ ಸರಸಿಜ ನಯನಾಳೆ ಧರೆಯ ಭಾಗ್ಯವ ನೋಡೆ ತರುಗುಲ್ಮಾಲತೆ ನೆವದಿ ಭರದಿ ಪುಲಕಿತಳಾಗೆ ಪರಿಪರಿ ಸುಮದಿಂದ ನೆರೆ ನಸುನಗುತಿಪ್ಪ ಮರುಳೆ ಕಣ್ಣಿಲಿ ನೋಡೆ ವರ ವಿಮಾನಗಳು ಸಂ- ಚರಿಸಿ ಮೆರೆವ ವೈಭವ ಧರೆಯೆಲ್ಲಾ ತಿಳಿಯದು ಲೋಲ್ಯಾಡದೆ ಬಿಡರು 1 ವಾಮಾಲೋಚನೆ ಸುರರ ಧಾಮಾವೆಂಬಿಯಾ ಇದು ಕಾಮತನಯ ಕಾಮದೇವ ಸೋಮಶೇಖರ ತಾನು ತಾಮರಸಾಸನ ಪ್ರೇಮಾದಿ ನಲಿಯುವ ಆ ಮಹರಾದಿ ಲೋಕವೆ ಸಾಮಜಗಮನೆ ಕೇಳೆ ನೀ ಮರುಳಾಗ ಬ್ಯಾಡಾ ಆ ಮುಕುತಿ ಸ್ಥಾನವೆ ಸೇವೆ ಮಾಡುವರು 2 ದೂರ ಜನರಿಗೆ ಸಾಲೋಕ್ಯ ಊರಲಿಪ್ಪರಿಗೆ ಸಾಮೀಪ್ಯ ಗೋರಕ್ಷಕರಿಗೆ ಸಾರೂಪ್ಯ ಸೇರಿದ ಯುವತಿಗೆ ಭರದಿ ಸಾಯುಜ್ಯವೆ ಮೀರಿದೆ ಮುಕುತಿಗಿದು ಭಾರಿ ಭಾರಿಗೆ ಸಾಮಾ ಪೂರೈಸಿ ಮುಕುತರು ತೋರುವರಿಲ್ಲಿ ಆನಂದ ಈ ರಭಸದಿ ವೇಣು ಪೂರೈಸಿ ಸುಖವೀವ ಧೀರ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಕೇಶವ ಕೇಶವನೆಂದು ನುಡಿಯಲು ಕ್ಲೇಶ ತೊಲಗುವುದು ಮಾಧವ ಮಾಧವನೆಂದು ನುಡಿಯಲು ಮಾದರಿಯಲ್ಲಿದ ಮೋದವ ಪೊಂದುವಿ 1 ಗೋವಿಂದ ಗೋವಿಂದನೆಂದು ನುಡಿಯಲು ಎಂದಿಗೂ ತೋರದ ನಂದವ ಪೊಂದುವಿ ವಾಮನ ವಾಮನನೆಂದು ಪೊಗಳಲು ತಾಮಸವಿಲ್ಲದೆ ಕಾಮಿತ ಪೊಂದುವಿ 2 ಶ್ರೀಧರ ಶ್ರೀಧರನೆಂದು ನುಡಿಯಲು ಈ ಧರೆಯೊಳು ನಿನಗೆ ಖೇದವೆಲ್ಲಿಯದು ಅಚ್ಚುತ ಅಚ್ಚುತನೆಂದು ಪೊಗಳಲು ಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ 3 ನರಹರಿ ನರಹರಿಯೆಂದು ನುಡಿಯಲು ಪರತರ ಸುಖವನು ನಿರುತವು ಪೊಂದುವಿ ಶ್ರೀ ಕೃಷ್ಣನೆಂದು ಪೊಗಳಲು ಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ 4 ರಾಘವ ರಾಘವನೆಂದು ಪೊಗಳಲು ನೀಗುವೆ ಸುಲಭದಿ ಅಘಗಳೆಲ್ಲವನು ಭಾರ್ಗವನೆನಲು ಪ್ರಸನ್ನನಾಗಿ ಹರಿ ದುರ್ಗಮ ಮೋಕ್ಷಕೆ ಮಾರ್ಗವ ತೋರುವ 5
--------------
ವಿದ್ಯಾಪ್ರಸನ್ನತೀರ್ಥರು
ಕೇಶವ ಪಾಲಿಸೈ ವರವ ಪ ಕೇಶವ ಪಾಲಿಸೈ ದಾಸನ ಆಸೆ ನಿ ರಾಸೆಯ ಮಾಡದೆಅ.ಪ ಈರೇಳು ಲೋಕದಾಧಾರನು ನೀನೆ ನಿಗಮ ಸಂಸಾರವು ನೀನೆ 1 ಸರ್ವಂತರಾತ್ಮ ಸರ್ವವ್ಯಾಪಕನೆ ಸರ್ವಸ್ವತಂತ್ರನೆ ಸರ್ವದೇವ ನೀನೆ 2 ಆಸೆ ನೀಗಿಸಿ ಎನ್ನ ಘಾಸಿಮಾಡದೆ ಪೊರೆ ದೋಷನಿವಾರಣ ಶ್ರೀಶ ಶ್ರೀರಾಮನೆ 3
--------------
ರಾಮದಾಸರು
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಧ್ರುವ ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ ಸುಬೋಧದಲಿ ಗೆದ್ದಿ 1 ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ ದೋರುದು ತಾ ಹರುಷ ಭವ ಬಂಧಪಾಶ 2 ಗುರು ಘನಸೌಖ್ಯ ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ ತರಳ ಮಹಿಪತಿ ಮನವೆÀ ಕೇಳು ಗುರುರಾಯನ ಸುವಾಕ್ಯ ಪರ ಗೆಲಿಸುವದು ನಿಜಮುಖ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು ಪ ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈಅ ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದುತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು 1 ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರುಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ 2 ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ 3
--------------
ಕನಕದಾಸ
ಕೇಳು ಜೀವನವೆ ನೀ ಮಧ್ವಮತವನುಸರಿಸಿ ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ. ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ- ಸುರಕುಲದಿ ಜನಿಸುವುದು ಬಹು ದುರ್ಲಭ ಪರಮ ಸುಕೃತವದೇನು ಫಲಿಸಿತೊ ನಿನಗೀಗ ದೊರಕಿದೀ ಜನುಮವನು ಸಫಲ ಮಾಡೊ 1 ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2 ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ ನರಕಯಾತನೆಗೆ ಗುರಿಯಾಗದಿರೆಲೊ ಎರಡುದಿನದೋಡ್ಯಾಟ ಇರಬಂದುದಲ್ಲವಿದು ಪರಗತಿಗೆ ಸಾಧನ ಮಾಡಿಕೊಳ್ಳೊ 3 ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ ಹೀಗೆ ಮೈಮರೆದಿಹುದು ನಿನಗೊಳ್ಳಿತೆ ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ ಹೋಗಿನೋಡಲು ಯಮನ ಬಾಧೆ ಬಿರುಸೊ4 ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ ಶ್ವಾನಸೂಕರ ಮೊದಲಾದ ನೀಚ- ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು ಆ ನೋವನಾಗಲೆ ಮರೆದಿಯಲ್ಲೊ 5 ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು ಉನ್ನತ ನೀಚ ದೇಹಗಳ ಧರಿಸಿ ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ ದುರ್ನಡತೆಯನು ಮಾಡಲುದ್ಯೋಗಿಪೆ 6 ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ ಕುಂಭಿಣಿಯೊಳಗೆ ತಿರುತಿರುಗಿ ಪಾಪ ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ ನಂಬುನಾರಾಯಣನ ಇನ್ನಾದರೂ 7 ಜನನಿಯ ಗರ್ಭವಾಸ ದುಃಖ ಅತಿಶಯವೊ ಜನನ ಮರಣದ ದುಃಖ ಬಲು ಅಧಿಕವೊ ಘನ ನರಕದಾ ದುಃಖ ಪೇಳಲೊಶವಲ್ಲ ನಿನ- ಗಿನಿತಾದರೂ ನಾಚಿಕಿಲ್ಲವೇನೊ 8 ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ- ಸಾರ ಸುಖವಲ್ಲ ಮಹ ದುಃಖಪುಂಜ ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ ವಾರಿಜಾಂಬಕನ ಮರೆಯೊಕ್ಕು ಬದುಕೊ 9 ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ ಒಂದೊಂದು ನೆನೆಸಿಕೊಳಲತಿ ಕಷ್ಟವೊ ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ- ವಿಂದನ ಪದಾಂಬುಜವ ಧ್ಯಾನ ಮಾಡೊ 10 ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ ಭೂರಿ ಭಯಕೊಳಗಹದು ನೀತಿಯಲ್ಲ ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು ಸೇರಿ ಸಜ್ಜನರ ಸುಪಥವ ಪಡೆಯೊ 11 ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು ಪುಣ್ಯವನೆ ಗಳಿಸಿಕೊ ಬ್ಯಾಗ ನೀನು ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ- ವನ್ನು ಪೋಷಿಸಿಕೊಂಡು ಹಿಗ್ಗಬೇಡ 12 ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ ಧನದಾಸೆಯಿಂದಲಗಣಿತ ಪಾಪವ ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ ನಿನಗಿವರು ಕೊನೆಗೆ ಸಂಗಡ ಬರುವರೆ 13 ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ ಬಿಡಿಸುವವರಾರಿಲ್ಲ ಈಗಳೆ ಮುಂದರಿತು ಕಡಲಶಯನನ ಪೊಂದಿ ಮುಕುತಿ ಪಡೆಯೊ 14 ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ ನೀ ಗರುತರಿಯದಲೆ ಹಿತ ರಾಗದಲಿ ಸರ್ವವನು ಎನ್ನದೆಂದಾಡದಿರು ನಾಗಾರಿಗಮನನಾಧೀನವೆನ್ನೊ 15 ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ ಶ್ರೀಮನೋ ಹರನಿಗರ್ಪಣೆಯ ಮಾಡೊ16 ಏನುಧಾವತಿಗೊಳಲೇನೇನು ಫಲವಿಲ್ಲ ಮಾನವಜನುಮ ಜೊಳ್ಳು ಮಾಡಬ್ಯಾಡ ಆನಂದತೀರ್ಥರ ಪಾದಕಮಲವ ಪೊಂದಿ ಅಚ- ಲಾನಂದವಿಠಲನ್ನ ನೀನೊಲಿಸಿಕೊ 17
--------------
ಅಚಲಾನಂದದಾಸ
ಕೇಳು ನಾ ಪೇಳ್ವದೊಂದಾ ನಿತ್ಯಾನಂದಾ ಪ. ಕೇಳು ನಾ ಪೇಳ್ವದೊಂದಾ ಕಂಸಾದ್ಯಸುರವೃಂದ ಸೀಳಿ ಶೀಘ್ರಾದಿ ಪರಿಹರಿಸಿದಿ ಪಿತೃ ಬಂಧ ಅ.ಪ. ನಿಗಮ ತತಿಗಳು ನಿಶ್ಯೇಷ ತಿಳಿಯದ ಸುಗುಣವಾರಿಧಿ ಸುಖಬೋಧ ದೇಹ ಸ್ವಗತ ಖೇದೊಝ್ಝಿತ ಸರ್ವ ನಿಯಾಮಕ ಖಗಪತಿವಾಹನ ಕಾಮಿತ ಭಾವನ ಪಾಲನ ಪರಾತ್ಪರ ಸ್ವಗತಿ ನಿಯತಿ ಜ್ಞಾನ ದಾಯಕ ತ್ರಿಗುಣ ವರ್ಜಿತ ತ್ರಿಭುವನೇಶ್ವರ ಮಗುವು ನುಡಿವುದ ಮಾತೆಯಂದದಿ 1 ಮೊದಲಿನ ಭವಗಳ ಹದನ ಒಂದರಿಯೆನು ಪಾದ ಪದುಮಗಳ ಸದರದಿ ಸೇವಿಸಲಧಿಕ ಸಾಧನ ಮಾನು ಷ್ಯದಿ ಬಂದು ವೈಷ್ಣವ ಬುಧರಾ ಸೇವೆಯ ಬಿಟ್ಟು ವಿಧವಿಧ ಮೋಹಾಂಧಕಾರಗ- ಳುದಿಸಲದರೊಳು ಸಿಲುಕಿ ನಿರುಪದಿ ಬಧಿರ ಮೂಕ ಜಡಾಂಧನಾದೆನು ಸದಯ ಇನ್ನಾದರೂ ಕಟಾಕ್ಷದಿ 2 ತಾಪತ್ರಯೋನ್ಮೂಲನೇಶಾ ಕೌಸ್ತುಭಭೂಷ ಸುಜನ ಗಣೈಕ ಪೋಷಾ ಈಪರಿಯೊಳಗೆನ್ನ ಜರಿವದುಚಿತವೇನೊ ಕಾಪುರುಷರ ಸಂಗ ಕಡಿದು ಕರುಣವಿಟ್ಟು ಶ್ರೀ ಪಯೋಜ ಭವೇಂದ್ರ ವಂದ್ಯ ಪ್ರ- ದೀಪ ಸತ್ಸಿದ್ಧಾಂತ ತಿಳಿಸಿ ಪ- ದೇ ಪದೇ ಕಾಪಾಡು ವೆಂಕಟ ಭೂಪ ನೀ ಗತಿಯೆಂದು ನಂಬಿದೆ ಕೇಳು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೈಕೊಂಡ - ನೃಹರಿ ಕೈಕೊಂಡ ಪ ಕೈಕೊಂಡ ಪೂಜೆಯ ನೃಹರಿ | ತ್ರೈಲೋಕ್ಯಕನಾಥನು ಅಸುರಾರಿ | ಆಹತೋಕನ ಸಲಹಲು | ಏಕಮೇವನ ಲೀಲೆಕೈಕೊಂಡ ಅವತಾರ | ಆ ಕಂಬೋದ್ಭವನಾಗಿಅ.ಪ. ಭಕ್ತಿ ಭಾವದಿ ಪರಾಶರ | ಬಹುತಪ್ತ ಭಾವದಿ ಕೃಷ್ಣೇ ತೀರ | ದಲ್ಲಿಸಕ್ತನಿರೆ ಧ್ಯಾನ ಗೋಚರ | ನಾಗಿವ್ಯಕ್ತನು ಷೋಡಶಕರ | ಆಹದೃಪ್ತ ದಾನವ ಧ್ವಂಸಿ | ದೀಪ್ತಾನಂತ ತೇಜಮೂರ್ತಿ ಕಾಣಿಸಿದನ | ವ್ಯಕ್ತನಾಗಿದ್ದಂಥ 1 ಕಟಿಸೂತ್ರ ಸ್ಮರ ಕೋಟಿ ಲಾವಣ್ಯಕರ ಪಾಶ ಅಸಿಕುಂತ | ವರದಾ ಭಯವು ಹಸ್ತ 2 ಕಂಬು ಚಕ್ರ ಚರ್ಮಕರ | ಮತ್ತೆಅಂಬುಜ ಶಾಂಙÁ್ರ್ಞದಿಧರ | ಗದಸಂಭೃತ ತುಳಸಿಯ ಹಾರ | ಮತ್ತೆಇಂಬಿನ್ವ್ಯೊ ಜಯಂತಿ ಹಾರ | ಆಹಅಂಬುಜದಳ ನೇತ್ರ | ಇಂಬಾಗಿ ಕರಪಾತ್ರತುಂಬ ಪೀಯುಷಧಿ | ಪೊಂಬಸಿರ ವಂದ್ಯನು 3 ಶ್ರೀವತ್ಸ ಲಾಂಛನ ಭೂಷ | ತನ್ನಭ್ರೂವಿಲಾಸದಿ ಬ್ರಹ್ಮ ಈಶ | ರಿಗೆತಾವೊಲಿದೀವ ಆವಾಸ | ಯೆನುತವ ವೇದಂಗಳು ಅನಿಶ | ಆಹಮಾವಿನೋದಿಯ ಗುಣ | ಸಾವಕಾಶಿಲ್ಲದೆಸಾರ್ವದ ಪೊಗಳುತ್ತ | ಭಾವದೊಳ್ಹಿಗ್ಗುವವು 4 ಪೊತ್ತು ರೂಪವ ಬಲಪಾದ | ಚಾಚುತ್ತ ರಕ್ಕಸನೊಡಲಗಾಧ | ಇಟ್ಟುವತ್ತುತ ತೊಡೆಯಲ್ವಿನೋದ | ದ್ವಯಹಸ್ತ ನಖದಿ ಉದರ ಬಗೆದ | ಆಹಕಿತ್ತುತ ಕರುಳನ್ನ | ಕತ್ತಿನೊಳ್ಹಾಕುತಭಕ್ತನ ಸಂಬಂಧ | ಎತ್ತಿ ತೋರ್ದ ಜಗಕೆ 4 ಪಂಚ ಮೋಕ್ಷಪ್ರದ ಹರಿ | ಆಯ್ತುಪಂಚಾಮೃತಭಿಷೇಕ ಅವಗೆ | ಮತ್ತೆಪಂಚಕಲಶಾರ್ಚನವು ಆವಗೆ | ಆಯ್ತುಪಂಚ ಕುಂಭಾಭಿಷೇಕವಗೆ | ಆಹಸಂಚಿಂತಿಸುತ ಹೃ | ತ್ಪಂಕಜದೊಳು ನೋಡೆಸಂಚಿಂತಾಗಮ ನಾಶ | ಕೊಂಚವು ಪ್ರಾರಬ್ಧ 6 ಶಾಲಿಗ್ರಾಮದ ಶಿಲ ಏಕ | ಪೊತ್ತುಪೋದಕ ಬಾಹು ಅಲೀಕ | ಶತಶಾಲೀವಾಹನವೆಂಬ ಶಕ | ದೊಳುಜ್ವಾಲಾ ನರಹರಿ ನಾಮಕ | ಆಹಯೇಳು ಐದೊರ್ಷದ | ಭಾಳ ತಪಕೆ ಮೆಚ್ಚಿಶೀಲ ದ್ವಿಜ ದಂಪತಿ | ಗೊಲಿದು ಪೇಳಿದ ಹೀಗೆ 7 ಭೀಮಕ ರಾಜಗೆ ಪೇಳು | ತೃಣಜಾಲವ ಹಾಕೆ ನೀರೊಳು | ಅಲ್ಲಿಜ್ವಾಲೆ ಉದ್ಭವಿಸಲು ಬಲು | ನೀರಮೇಲಕ್ಕೆ ಒಳಗಿಂದ ಬರಲು | ಆಹತೋಳೆರಡಲಿ ರಾಜ | ಮೇಲೆತ್ತೆ ಬರುವನುತಾಳ ಮೇಳ್ವೈಭವ | ದೊಳಗೆ ಸ್ಥಾಪಿಸಲೆಂದು 8 ಅಂಗಹೀನರೆ ಕೇಳಿ ಆವ | ನಿಮ್ಮಭಂಗಿಪ ಮೂಕಾಂಧ ಭಾವ | ನೀಗಿಶೃಂಗಾರ ರೂಪ ಸ್ವಭಾವ | ನರಸಿಂಗ ಕೊಡುವೆನು ಸೇವ | ಆಹ ಹಿಂಗದೆ ಕೊಡುವೆನು | ಅಂಗಜ ಪಿತ ನರಸಿಂಗಪುರವೆಂದು | ಸಂಗೀತವಾಗಲಿ 9 ವತ್ಸರ ಸೌಮ್ಯವು ಪುಷ್ಯ | ದಿನದರ್ಶ ವ್ಯಾಸತೀರ್ಥ ಶಿಷ್ಯ | ಆದರ್ಶ ದಾಸರ ದಿನ ಭವ್ಯ | ಭಕ್ತವತ್ಸಲ ಸ್ವೀಕಾರ ಆಲ್ಪ್ಯ | ಆಹಉತ್ಸವ ಕೊಳ್ಳುತ | ಉತ್ಸಾಹವೆನಗಿತ್ತುಮತ್ಸ್ಯಾದಿ ದಶರೂಪಿ | ಕೃತ್ಸ್ನ ಕಾರುಣ್ಯನು 10 ಪರಾಶರಗೊಲಿದ ಸುಶೀಲ | ಖಗವರನು ಭೂದೇವಿಯು ಬಲ | ಎಡವರಲಕ್ಷ್ಮೀ ಪ್ರಹ್ಲಾದ ಬಾಲ | ಸುರವರರಿಂದ ಸ್ತುತ್ಯ ವಿಶಾಲ | ಆಹಗುರು ಗೋವಿಂದ ವಿಠ್ಠಲ | ಗುರು ಬಿಂಬ ನರಸಿಂಗಶರಣರ ಅಪಮೃತ್ಯು | ಹರಿಸಿ ಸಂತತ ಕಾಯ್ವ11
--------------
ಗುರುಗೋವಿಂದವಿಠಲರು
ಕೈಲಾಸವಾಸ ಶ್ರೀತಜನ ಶುಭಕರ ಗಿರಿಜಾ ಹೃದಯ ವಿಲಾಸ ಹಿಮ ಹಿಮಕರ ಧವಳ ಸುಭಾವ ದೇವ ದೇವ ಪ ಸಮಸುರುಚಿರಗ್ರೀವ ವರ ಮೇರುಶರಾಸನ ನಿರಂಜನ ಪಾರ್ವತೀರಮಣ ಪಾಹಿ ಜಗನ್ಮಯ 1 ಹರಿಶರಜಿತ ಪುರ ನಿಕುರುಂಬ ಜಿತಧೃತ ಮನಸಿಜ ಶಶಿಬಿಂಬ ರವಿ ಸೋಮ ವಿಲೋಚನ ತ್ರಿಪುರಾಂತಕ ಶಂಕರ 2 ಭವ ವಿದಳನ ವರದ ಗಿರೀಶ ಪರತರ ಶಿವ ಪರಮ ಮಹೇಶ ನಿಗಮಾಗಮ ಗೋಚರ ಭೋಗಿ ವರ ಧೇನು ಪುರೀಶ್ವರ 3
--------------
ಬೇಟೆರಾಯ ದೀಕ್ಷಿತರು
ಕೈವಲ್ಯ ಇದೇವೆ ದೇವಾಲ್ಯ ತ್ರಾಹಿ ತ್ರಾಹಿ ತ್ರಾಹಿ ಎಂದು ನೋಡಿಮನದ ವೈಶಾಲ್ಯ ಧ್ರುವ ಮಹಾಮಹಿಮೆ ದೋರುವ ಇದೆ ದೇವದ್ವಾರ ಸೋಹ್ಯದೋರಿ ಕುಡುತಿಹ ಪುಣ್ಯ ಸಹಕಾರ ಬಾಹ್ಯಾಂತ್ರ ಭಾಸುತಿಹ ಸದ್ಗುರು ಸಹಕಾರ ದೇಹ ಅಭಿಮಾನ ಬಿಟ್ಟು ಮಾಡಿ ಜಯ ಜಯಕಾರ 1 ಮಾರ್ಗ ಸುಪಥವಿದೆ ನೋಡಿ ಸಾಕ್ಷಾತ್ಕಾರ ವರ್ಗ ಷಡ್ವೆರಿಗಳ ಮಾಡಿ ಬ್ಯಾಗೆ ದೂರ ದೀರ್ಘದಂಡ ಹಾಕಿ ಗುರುವಿಗೆ ನಮಸ್ಕಾರ ಸ್ವರ್ಗ ಸುಖಗೊಳ್ಳಲಿಕೆ ಇದೇವೆ ಸಹಕಾರ 2 ಸ್ವರ್ಗ ಭೂಕೈಲಾಸ ವೈಕುಂಠವಿದೆ ನೋಡೆವೈ ಪಾದ ಪದ್ಮಕೂಡಿ ಯೋಗ ಇದೆ ಸುಗಮ ಸಾಧನವ ಮಾಡಿ ಸುಙÁ್ಞನ ಸೂರೆಗೊಂಡು ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು