ಒಟ್ಟು 3030 ಕಡೆಗಳಲ್ಲಿ , 117 ದಾಸರು , 2252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಲಯ್ಯ ಬಯಲಾಸೆ ಬಿಡದು ಪ ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1 ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2 ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3 ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4 ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5
--------------
ಕನಕದಾಸ
ಏನು ಸುಕೃತವ ಮಾಡಿದಳೊ ಯಶೋದೆಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆಪ ಗಂಗಾಜನಕನಿಗೆ ಗಡಿಗೆನೀರೆರೆವಳಂತೆಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ1 ನಗವನೆತ್ತಿದವನ ಮಗುವೆಂದೆತ್ತುವಳಂತೆನಿಗಮಗೋಚರನ ತಾ ನಿಟ್ಟಿಪಳಂತೆಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ 2 ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ 3 ಚತುರ್ಮುಖಪಿತನ ಸುತನೆಂದೆತ್ತುವಳಂತೆಶ್ರುತಿವಿನುತಗೆ ಜೋಗುಳ ಪಾಡುವಳಂತೆಶತರವಿತೇಜಗಾರತಿಯನೆತ್ತುವಳಂತೆಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ 4 ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದಪಡುಗಡಲತಡಿಯ ದ್ವಾರಕೆನಿಲಯಬಿಡದೆ ನೆಲೆಸಿದ ಹಯವದನ ಮುದ್ದುಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ5
--------------
ವಾದಿರಾಜ
ಏನು ಸೇವಿಸಿದೆ ಗುರು ಯೆಲೊ ಮಾರುತಿ | ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪ ಉದಧಿ | ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ | ಸೀತೆ ವಾರ್ತೆಯ ತÀಂದು ಪೇಳಿದಕೆ ಸುಫಲಾ 1 ವನಧಿ ಭೂತಳವ ತಿರುಗಿ ಪ್ರತಾಪದಿಂದ | ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ | ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ 2 ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ | ಬಂದಿರಲು ನೋಡಿ ಈ ಧನುರ್ಧಾರಿಯಾ ನಿಂದು ಚಾಲ್ವರಿದು ಬೊಬ್ಬಿರಿದದುಕ್ಕೇನು ಫಲಾ 3 ಒಂದೇ ಹಾರಿಕಿಯಲಿ ಜಿಗಿದು ಕುಪ್ಪಳಿಸಿ ನೀ | ಗಂಧಮಾದನಗಿರಿಯ ಕಿತ್ತು ತಂದು | ಅಂದದಲಿ ದೇವತತಿ ಕೊಂಡಾಡುತಿರೆ ಕಪಿ | ವೃಂದವೆಬ್ಬಿಸಿ ಖಳರ ಮಡುಹಿದದುಕ್ಕೇನು ಫಲಾ 4 ಅಪರಿಮಿತ ಉಪಕಾರ ಮಾಡಿದಲ್ಲದೆ ನಿನ್ನ | ಕೌಪೀನ ಬಿಡಿಸಲಿಲ್ಲಾ | ವನಧಿ ನಿಜವೆಂದು ತುತಿಸಿದದುಕ್ಕೇನು ಫಲಾ 5
--------------
ವಿಜಯದಾಸ
ಏನುಧನ್ಯನೊ ಇವನು ಎಂಥ ಪುಣ್ಯನೊ ದೀನದಯಾಳು ಜಾನಕೀಶನ ಧ್ಯಾನ ಮಾಳ್ಪ ಮಾನವನು ಪ ಜ್ಞಾನದಿಂದ ತಿಳಿದು ಜಗ ಶೂನ್ಯವೆಂದು ಊಹಿಸಿ ಮನದಿ ದಾನವಾಂತಕನಾದ ಹರಿಯ ಧ್ಯಾನವೊಂದೇ ಕಾರಣೆಂದು ಜ್ಞಾನಬೆಳಗಿನೊಳಗೆ ನೋಡಿ ಆನಂದಿಸುತಲ್ಹಿಗ್ಗುವವ 1 ಆಶಪಾಶಗಳನು ನೀಗಿ ಈ ಮೋಸಮಯ ಸಂಸಾರದೊಳು ವಾಸನಾರಹಿತನಾಗಿ ಸದಾ ದಾಸಸಂಗಸುಖಪಡೆದು ಈಶ ಭಜನೆಯೊಳ್ಮನವಿಟ್ಟು ಈಸಿಭವಾಂಬುಧಿ ಪಾರಾಗುವವ 2 ನಂಬಿಗಿಲ್ಲದ ದೇಹವಿದನು ನಂಬಿನೆಚ್ಚಿ ಸಂಭ್ರಮಿಸದೆ ಕಂಬುಕಂಧರ ಶಂಭುವಿನುತ ಅಂಬುಜಾಕ್ಷ ಶ್ರೀರಾಮನ ನಂಬಿ ಗಂಭೀರಸುಖದೊಳಿರುವವ 3
--------------
ರಾಮದಾಸರು
ಏನೆಂದು ಬಣ್ಣಿಪೆನು-ಶ್ರೀಗುರುವರನ ನಾನಾಮಹಿಮೆಗಳನು ಪ ಸಾನುರಾಗದಿ ಸಕಲ ತೀರ್ಥಕ್ಷೇತ್ರವ ಚರಿಸಿ ಶ್ರೀನಿವಾಸನ ದಯದಿ ದೀನರನುದ್ಧರಿಸಿದ ಅ.ಪ ತೀರ್ಥಕ್ಷೇತ್ರದ ಮಹಿಮೆ ತೀರ್ಥಪ್ರಬಂಧದೊಳ್ ಕೀರ್ತಿಸಿ ಕವಿತಾ ಚಾತುರ್ಯವ ಪ್ರಕಟಿಸಿದ 1 ಕುಂಡಲೀಗಿರಿಯನು ಮಂಡಿಯಿಂದಲೇರಿ ಉ ದ್ದಂಡಗಂಡಕ ಶಿಲೆಯ ಹಾರ ಶ್ರೀಹರಿಗಿತ್ತ 2 ಕುಂಭಕೋಣೆಯಲಿದ್ದ ಡಾಂಭಿಕ ಪಂಡಿತ ಜಂಬೂಕಗಳ ಗೆದ್ದ ಕುಂಭಿಣೀಸುರ ಸಿಂಹ 3 ಮಾಘಕಾವ್ಯವ ಮೀರ್ದ ಆಮೋದ ಸುಂದರವಾದ ಶ್ಲಾಘ್ಯ ಶ್ರೀ ರುಕ್ಮಿಣೀಶ ವಿಜಯವೆಂದೆನಿಸಿದ 4 ಘನ ಕಾವ್ಯವ ರಚಿಸಿ ಪುಣ್ಯ ಪತ್ತನದಿ ವಿ ದ್ವನ್ಮಣಿಗಳಿಂದ ಮಾನ್ಯತೆ ಪಡೆದುದು 5 ತುಂಗ ಕರ್ಣಾಟಕ ನೃಪನ ಸಭೆಯೊಳು ಪ್ರ ಸಂಗಾಭರಣವೆಂಬ ಬಿರುದು ಪಡೆದ ಖ್ಯಾತಿ 6 ಪಾದ ಭೃಂಗ ಶ್ರೀ ಗುರುವಾದಿರಾಜರ ಪರಿಪರಿ ಚರಿತೆಯಾ 7
--------------
ವರಾವಾಣಿರಾಮರಾಯದಾಸರು
ಏನೆಂದುಸರಲಿ ನಾ ನೆರೆ ಸಂತರಾ | ಸ್ವಾನುಭವಗಳನುವಾಗೀ ಮಾನಿಸಿರೋಳುಸಲೆ ಮಾನಿಸ ಸ್ಥಿತಿಯಲಿ ತಾನಿಹ ಉನ್ಮನಿಯಾಗಿ ಪ ಕಾಮವು ಹರಿಪದ ತಾಮರಸವ ನಿ | ಷ್ಕಾಮದ ಭಕುತಿಗಳಲ್ಲಿ | ಆ ಮಹಾ ಕೋಪವು ಈ ಮನಸಿನ ಗುಣ | ನೇಮಿಸಿ ಶೀಕ್ಷಿಸುವಲ್ಲಿ | ಆ ಮೋಹ ಲೋಭವು ಯಾಮವಳಿಯದಾ | ನಾಮ ಕೀರ್ತನೆಯಲ್ಲಿ | ತಾ ಮರೆಯದ ಅತಿ ವ್ಯಾಮೋಹ ತನ್ನಯ | ಪ್ರೇಮದ ಕಿಂಕರರಲ್ಲಿ 1 ಮದವತಿ ಇಂದ್ರಾದಿ ಪದಗಳ ಸಿದ್ದಿಗೆ | ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು | ವದಗಿಹ ಮತ್ಸರ ಕುದಿವಹಂಕಾರದ | ಮೊದಲಿಗೆ ತಲೆಯತ್ತಿಸಗುಡರು | ಇದರೊಳು ಸುಖದು:ಖ ಉದಿಸಲು ಹರಿಯಾ | ಜ್ಞದೆಗತಿಗಡ ಸಮಗಂಡಿಹರು | ಉದಕದಲಿ ಕಮಲದ ಎಲೆಯಂದದಿ | ಚದುರತೆಯಿಂದಲಿ ವರ್ತಿಪರು 2 ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ | ನಿಲಿಸದೆ ನಿಲ್ಲದೆ ಮುಣಗುವದು | ಪರಿ | ನಳನಳಿಸುತ ತೇಲುತಲಿಹುದು | ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ | ಬೆಳಗಿನ ಘನದೊಳು ಮನ ಬೆರೆದು | ನಲವರು ಮಹಿಪತಿ ವಲುಮೆಯ ಪಡೆಯದ | ಹುಲು ಮನುಜರಿಗಿದು ಭೇದಿಸದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದುಸುರುವೆ ಈ ನವರಾತ್ರಿಯಾ | ಸ್ವಾನಂದ ಸುಖಮಯ ಮಹಿಪತಿ ಚರ್ಯಾ ಪ ಮೊತ್ತ ಜನರು ಕೂಡಿ ಭಿತ್ತಿ ಬಾಗಿಲುಗಳ ಬಣ್ಣದಿ ನಿಚ್ಚಳ | ತೆತ್ತ ಮಾಡಳರವಿ ತಳಿಲು ತೋರಣದಿ | ಮತ್ತೆ ದೇವಾಲಯ ಮಂಡಿತ ಜಗಲಿಯಾ | ಸುತ್ತ ಕದಳೀ ಕಂಭದಿ ಮ್ಯಾಲಿಯ | ಉತ್ತಮ ಮಂಟಪದಿ ತರಗು ತೆಂಗು | ಉತ್ತತ್ತೀ ಬಹು ಓಲವೀ ಕಟ್ಟಿಹ | ವತ್ತೊತ್ತಿ ಥರ ಥರದಿ ನಮ್ಮಯ್ಯಾನಾ 1 ಕಡಲೆ ತಂಡುಲ ಗುಡ ಶರ್ಕರವ ಮತ್ತೆ ಗೂಡಿಹ ಸಮಸ್ತ | ಘೃತ ವಡವೆಯ ತುಂಬಿಹ ಸ್ಟೈಪಾಕ ಮಾಡಲಿ | ತಡೆಯದೆ ಕೊಡುತಿಹರು ಓಡ್ಯಾಡಲು | ಅಡಿಗಡಿಗೊಬ್ಬೊಬ್ಬರು ಆಜ್ಯವ | ಧೃಡ ಭಕ್ತಿಯುಳ್ಳವರು ನಮ್ಮಯ್ಯನಾ 2 ಏಕೋ ಭಾವನೆಯಲಿ ಯಾತ್ರೆಯ ಸದ್ಭೋಧಾಸಕ್ತರು | ಬೇಕಾದಿ ಸಾಕುವದೇವ ದೇವರಾ ಸಾರಿ ಸುಜನ ವಿಂಡು | ಹಾಕಿ ಸಾಷ್ಟಾಂಗದಲಿ ಪರಿ ಲೋಕ ನೆರೆಯುತಿರಲಿ ನಮ್ಮಯ್ಯನಾ 3 ಮೊದಲಿನ ದಿವಸದಿ ಸಂಧ್ಯಾವಂದನಜಪಾನುಷ್ಠಾನಾ | ವಿದಿತ ಬಂಗಾರ ವೆಳಿಯಲಿ ಬರೆದ ಚದುರ | ಝಗ ಝಗ ಅದು ನಕ್ಷತ್ರ ಮಾಲಿ ನಮ್ಮಯ್ಯನಾ 4 ಪಡದಿಯ ಸೋಂಪಿಲಿ ಬಹು ವಿಚಿತ್ರ | ಸಡಗರದಲಿ ದೇವ ಸಂಪುಟ ಮೆರೆವಾ| ವಡೆಯನ ಏನೆಂದ್ಹೇಳಲಿ ನಮ್ಮಯ್ಯಾನಾ 5 ಸನ್ನುತ ಗಂಗೆಯ ಸಲಿಲವು ಮುನ್ನ ಪಂಚಾಮೃತ ದಾಗಲು ಅಭಿಷೇಕ | ಸುಗಂಧವನ್ನು ಅರ್ಪಿಸಿ ಚಲ್ವದಾ ಸಾಲಾದಾ | ಘನ್ನ ದೀಪದೆಡೆ ಬಲದಾ ನಮ್ಮಯ್ಯನಾ 6 ಪರಿಮಳ ದಿಂಡಿಗೆ ಪರಿ ಪುಷ್ಪದಾ ಪಸರಿಕೆ ಬಹುಳವಾ | ತರುವಾರಾ ಧೂ ಬಲವೆಡಾ ಊದುಬತ್ತಿಯ ಗಿಡಾ | ನೆರೆ ಏಕಾರತಿಯಾಗಲಿ ನೈವೇದ್ಯ ಹರಿವಾಣವನು | ಬರಲಿ ಹರಿಗೆ ಪ್ರತ್ಯಕ್ಷದಲೀ ನಮ್ಮಯ್ಯನಾ 7 ವಾದಾ ಪೂಗೀ ಫಲಾ ಹರಿವಾಣ ಆರತಿ ಪೂರಣಾ | ಛಂದ ಭೇದಿಸಿ ಘನತಾಳಾ ಬಲು ಶಂಖ ನಾಮ ಘೋಷದಿತಿಂತ | ರಾದವರು ಪಾಡಲೀ ನೀರಾಂಜನ | ಸಾದಿಪ ಸಮಯದಲಿ ಕಣ್ಣಿನಲಿ ನಮ್ಮಯ್ಯನಾ 8 ಮೆರೆವ ಷೋಡಷದಿಂದ ಹರಿತೀರ್ಥಕೊಳ್ಳಲು ಹರುಷದಿ ಜನಗಳು | ಕರುವೇದ ಘೋಷ ಮಾಡು ಮಾಡಿ ಕುಳ್ಳಿರೆ | ಪರಮಾನ್ನ ಪರಿ ಶಾಕಗಳು ಸೂಪಘೃತ | ಗಿರಿಸಿಹ ದೀಪಗಳು ನಮ್ಮಯ್ಯನಾ 9 ಪ್ರೌಢದಿ ಹರಿ ನಾಮಾ ಆಡಲೇನದು ತೃಪ್ತಿ ಆಯಿತು ಉಂಡು | ನೀಡೆ ವೇದೋಕ್ತದ ನುಡಿ ಆಶೀರ್ವಾದ | ಮಾಡುತ ಬ್ರಾಹ್ಮರು ಮನೆಗೆ ಹೋಗುವರು | ಗಾಡ ಮದ್ದಲೆ ಸದರು ಸಭೆಯೊಳುಗೂಡಿ | ಒಡೆಯನಿದಿರು ಹರಿಯ ಕೊಂಡಾಡಿ ಆರತಿಯತ್ತೀರ ನಮ್ಮಯ್ಯನಾ 10 ಮುಂಚಿಲಿ ನಡೆಯಲು ಅರ್ಚನೆಯಾ ಅರ್ತಿ | ಸಂಭ್ರಮದಲಿ ನೋಡಿ ಸದ್ಗತಿ ಸೂರ್ಯಾಡಿ | ಕೊಂಬರು ಸ್ವಸ್ಥಲ ಕುರಿತು ಆಜ್ಞೆಗಳ | ಇಂದಿಲ್ಲ ಆನಂದದೀ ಈ ಮಹಿ ಮಾಡಂಬರೆನ್ನ ಮುಖದಿ ನುಡಿಸಿದ | ಶಂಭು ಮಹಿಪತಿ ದಯದಿ ನಂದನ | ಬೊಂಬಿ ಸೂತ್ರ ದಂದದಿ ನಮ್ಮಯ್ಯನಾ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು
ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ ಒಸರುವ ಗಡಿಗೆ ಪ ಏಸುರೂಪಾಯ್ಗೆ ಕೊಂಡುಕೊಂಡೆವ್ವಾ ಏಸುರಾಪಾಯ್ಗೆ ಕೊಂಡುಕೊಂಡಿ ಹೇಸಿಕೊಳ್ಳದೆ ಇದನು ನೀನು ಬೇಸರಿಲ್ಲದೆ ತೊಳೆಯುತಿದ್ದಿ ವಾಸನಿಕ್ಕಿ ನಾರುತಿದೆ ಅ.ಪ ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ ಕುಂತು ಇದಕೆ ಶೋಧ ಹುಡುಕಿದ ಅವನು ದಾವ ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ ತಂತು ತಿಳಿಯದೆ ಹೊತ್ತುಕೊಂಡು ನಿಂತಿಯಿದರ ಖ್ಯಾಲಿನೊಳಗೆ ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ 1 ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ ನಟ್ಟನಡುವೆ ಗಂಟುಬಿದ್ದು ಕೊಟ್ಟು ನಿನಗೆ ಕಷ್ಟ ವಿಧ ವಿಧ ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ 2 ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ ಮಸಿಯ ಗಡಿಗ್ಹಿಡಿದು ಹಸನಮಾಡಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ 3
--------------
ರಾಮದಾಸರು
ಏಳಯ್ಯ ಏಳಯ್ಯ ಬೆಳಗಾಯಿತೂ ಪ ಸುಳಿ | ನಾಭಿ ಸಂಭವ ಸುತನೆ ಅ.ಪ. ಸಾಮಜ ವರದ ಶ್ರೀರಾಮ ಬಂದಿಹನಯ್ಯ | ಭೂಮಿಜೆಯ ಪುಡುಕಲ್ಕೆ |ನೇಮದಿಂದಲಿ ನೀನು | ಶ್ಯಾಮಲಾಂಗನ ಕಂಡುಭೂಮ ಗುಣನಿಧಿ ಸು | ಪ್ರೇಮ ಪಡೆ ಹೊತ್ತಾಯಿತು 1 ತಾಲಸಪ್ತವ ಹಣಿಸು | ವಾಲಿ ಮಥನ ಗೈಸುನೀಲ ಜಾಂಬವ ಸುಷೇ | ಣಾದಿಗಳ ಕರೆ ಕಳಿಸು |ಶ್ರೀಲೋಲನಾಜ್ಞೆಯಲಿ | ಕಾಲಮೀರುವ ಮುನ್ನಲೋಲ ಲೋಚನೆ ವಾರ್ತೆ | ತಿಳುಹ ಬೇಕಯ್ಯಾ 2 ಬಿಂಕ ಮುರಿಯಲಿ ಬೇಕು |ಲಂಕಾಪುರದೊಳು ಮಾತೆ | ಗಂಕವೀಯಲಿ ಬೇಕುಅಂಕಕಾರನು ರಾಮ | ನಂಕೆ ಸಲಿಸಲಿ ಬೇಕು 3 ಶರಧಿ ಬಂಧಿಸಬೇಕು | ಧುರವ ಜೈಸಲು ಬೇಕುವರ ಭೂಮಿ ಜಾಕೃತಿಯ | ತ್ವರ ತರಲಿ ಬೇಕುವರ ವಿಭೀಷಣನಿಗೆ | ಅರಸುತನ ಕೊಡಬೇಕುಮರಳಿ ಅಯೋಧ್ಯಗೆ | ತೆರಳ ಬೇಕಯ್ಯಾ 4 ಉರ ರಕ್ತ ಕುಡಿಬೇಕುಧರಣಿ ಭಾರವ ನಿಳುಹಿ | ತರುಣಿ ಶಿಖೆ ಬಿಗಿಬೇಕು 5 ಅದ್ವೈತ ಗೆಲಬೇಕುಬುದ್ಧಿಪೂರ್ವಕವಾಗಿ | ಸಿದ್ದ ಮುನಿ ಜನರಿಂದಮುದ್ದುಕೃಷ್ಣನ ಪೂಜೆ | ವಿಧಿಸಲೀ ಬೇಕೂ 6 ಸಾರ ಗ್ರಂಥವ ರಚಿಸಿಮೂರ್ಮೂರು ಭಕುತಿಲಿ | ಹರಿಯ ಪೂಜಿಸಬೇಕು |ಮೂರ್ಲೋಕ ದೊರೆ ಗುರು | ಗೋವಿಂದ ವಿಠಲನಸಾರ್ವಕಧಿಪತಿಯೆಂದು | ಸಾರಲೀ ಬೇಕೂ 7
--------------
ಗುರುಗೋವಿಂದವಿಠಲರು
ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಪ ಬಾಗಿಲಲಿ ಕೂಗುವರು ಸನಕಾದಿ ಮುನಿವರರು ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು ಯೋಗಿಗಳು ಪೊಗಳುವರು ನಿನ್ನಂಘ್ರಿಯ 1 ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ ಗಂಗೆಯನು ಬಿಟ್ಟೇಳು ಜಗದೀಶನೆ | ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ 2 ಥಟ್ಟನೆ ಏಳು ಯಾದವರಿಗರಸ | ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ ಪುಟ್ಟ ವಾಲೆಯ ತಂದ ನೀ ನೋಡು ನೋಡು 3 ಕೋಪಿಗಳರಸಾದಿ ದುರ್ವಾಸ ಮುನಿ ಬಂದ | ಇಂಪಾಗಿ ಪಾಡುತಿಹ ಸುರಮುನಿಯು ಬಂದ | ಕೋಪದೊಳೊದೆದ ಮುನಿ ಬಂದ ಬೇಗೇಳು ಪುಷ್ಪಶರ ಮಗ ಬಂದ ಬೇಗೇಳು ರಂಗ 4 ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ | ಮಾರುತಿಯ ಜಪವಿನ್ನು ಮುಗಿಯಲಿಲ್ಲೊ | ನರರೆಲ್ಲ ನಗುವಂತೆ ಮಾಡದಿರೊ ರಂಗ 5
--------------
ವಿಶ್ವೇಂದ್ರತೀರ್ಥ
ಏಳಯ್ಯ ರಾಕ್ಷಸಾಂತಕ ದನುಜಸಂಹಾರ ಪ ಏಳಯ್ಯ ರಾಜೀವನಯನ ನವನೀತಚೋರ ಏಳು ಲಕ್ಷ್ಮೀಮನೋಹರ ಹರಿಯೆ ಅ.ಪ ದಿನಪನುದಯಂಗೆಯ್ಯೆ ದಿಕ್ಪಾಲಕರ್ನೆರೆಯೆ ಕನಕಭೂಷಣದ ಕಾಂತೆಯರು ಆರತಿಪಿಡಿಯೆ ಅನುಪಮಗೆ ಜಯವೆಂದು ಬಂದು ನಿಂದೈದಾರೆ ಇನಕುಲನೆ ನಲಿದುಪ್ಪವಡಿಸು ಶ್ರೀಹರಿಯೇ 1 ಪ್ರಹ್ಲಾದ ನಾರದರು ವಾಸಿಷ್ಠ ವಿಶ್ವಾಮಿತ್ರರು ಮಹಮುನಿಗಳತ್ರಿ ಭಾರದ್ವಾಜ ಜಮದಗ್ನಿ ಗೌತಮರು ಬಹುವಿಧದಿ ಕಶ್ಯಪರು ಹನುಮಂತ ತುಂಬುರರು ಹರುಷದಿ ಪಾಡುತ್ತಲೈದಾರೆ ಇನಕುಲನೆ ನಲಿದು 2 ದೇವಗಂಗೆಯಕೊಂಡು ದೇವರ್ಕಳೈದಿದರು ದೇವತಾವಳಿ ಬಂದು ದೇವ ಜಯವೆನುತಿಹರು ದೇವಪುರದಲಿ ನಿಂದ ದೇವಕಿಯ ವರಕಂದ ದೇವ ಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ 3
--------------
ಕವಿ ಲಕ್ಷ್ಮೀಶ
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು
ಏಳು ಪಂಡರಿವಾಸ ಏಳು ಶ್ರೀ ದೇವೇಶ ಏಳು ಮುಕ್ತ ಗಿರೀಶ ಏಳು ಹೃದೇಶ ಪ. ಏಳು ಮೂಲೋಕದೀಶ ಏಳು ಹೃತ್ಪದವಾಸ ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ ಅ.ಪ. ಗಂಗಾ ಭಾಗೀರಥಿ ತುಂಗಭದ್ರಾ ಯಮುನ ಸಂಗಮ ತ್ರೀವೇಣಿ ಸರಸ್ವತಿ ಸರಯೂ ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ 1 ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ ನಿನಗೆ ತೈಲವನೊತ್ತಿ ಎರೆವೆನೆಂದು ಕನಕ ರತ್ನದಿ ಭೂಷಿತರಾದ ದೇವ ಕನ್ನಿಕೆಯರು ಕಾದಿಹರೈಯ್ಯ ಲಕುಮಿಪತಿ 2 ಪಂಚಬಾಣನ ಪಿತನೆ ಪಂಚಾಮೃತ ತಂದು ಪಂಚಕನ್ನೆಯರು ಎರೆವೆನೆಂದು ಮಿಂಚು ಕೋಟಿಯತೇಜಾಭರಣ ಪೀತಾಂಬರ ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು 3 ಕಸ್ತೂರಿ ತಿಲಕವು ಕನಕಾಂಬರದ ಶಾಲು ಸುತ್ತಿದ ಮುಂಡಾಸು ಶೃಂಗರಿಸಿ ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು ಎತ್ತಿ ಬೆಳಗುವ ಮುತ್ತಿನಾರುತಿ ವಿಠಲ 4 ಪಾಪರಹಿತ ಏಳು ಪಾವನ್ನ ರೂಪ ಏಳು ಗೋಪಾಲಕೃಷ್ಣವಿಠಲ ಹರಿ ಏಳು ಶ್ರೀಪದ್ಮಭವಮುಖರಾಪಾರ ಮುನಿಗಳು ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ5
--------------
ಅಂಬಾಬಾಯಿ
ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರೀಯ ಏಳಯ್ಯ ಬೆಳಗಾಯಿತು ಹರಿಯೇ ಪ. ಆದಿಶೇಷನ ಮೇಲೆ ಅಪ್ರಮೇಯನು ನೀನು ಆದರದಿ ಮಹಲಕ್ಷ್ಮಿಯೊಡನಿರಲೂ ಸುರರು ಸನಕ ಸನಂದನರು ಆದರಿಸೆ ಬಾ ಬೇಗ ಬಾಗಿಲನು ತೆಗೆದು ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು ಮಾಧವನೆ ಹಾಸು ಮಂಚವನಿಳಿದು ಬಾ ಕತ್ತಲೆ ಹರಿಪಾ ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು 1 ಕಾಸಿದ್ಹಾಲನೆ ತಂದು ಕಾವಡಿಯಲಿ ತುಂಬಿ ಲೇಸಾಗಿ ನಿನ್ನ ಭಕ್ತರು ನಿಂತಿದಾರೆ ವಾಸುದೇವನೆ ನಿನಗೆ ಮಲ್ಲಿಗೆ ಕುಸುಮ ಭಾಸುರಾಂಗನೆ ತಂದು ಅರ್ಪಿಸಲು ಭಕ್ತರು ಏಸು ಹೊತ್ತಿನಿಂದ ತುಳಸೀ ದಳ ತಂದು ವಾಸುಕೀಶಯನಗೆಂದು ಭೂಸುರರು ನಿಂದಾರೆ ವೇದ ಘೋಷದಿಂದ ಈಸು ನುಡಿಗಳು ನಿನ್ನ ಕರ್ಣಕೇಳಲಿಲ್ಲವೆ ಏಸು ಮೆಚ್ಚಿಸಿಹಳೋ ಲಕ್ಷ್ಮೀ ನಿನ್ನ ಸರಸದೊಳು ವಾಸುಕೀಶಯನ ಹಾಸಿಗೆಯಿಂದೇಳೋ ದೊರೆಯೆ ಏಳಯ್ಯ ಬೆಳಗಾಯಿತು2 ಕರುಣಾಸಾಗರ ನಿನಗೆ ಕರುಣೆ ಬರುವಾತೆರ ಪರಿಪರಿಯ ಸ್ತೋತ್ರದೊಳು ನಾರಿಯೇರು ಕರೆವರೋ ಕರಗತ ಕಾಮಧೇನು ನೀನೆಂದು ಕರದೊಳಾರತಿಯ ಪಿಡಿದೂ ತರತರದ ಉಡಿಗೆ ತೊಡಿಗೆ ನಿನಗೀಯಲು ಸರಸರನೆ ದೇಶದೇಶದಿ ಬಂದು ನಿಂತಿದ್ದಾರೆ ಶರಧಿ ಗಂಭೀರನೆ ವರ ಶ್ರೀ ಶ್ರೀನಿವಾಸನೆ ಕರುಣೆ ತೋರುತ್ತ ನಿನ್ನ ಭಕ್ತರ ಮೇಲೆ ವರ ನಾರಿಯರ ನಾಟ್ಯ ವೈಭವದಿ ವರದುಂದುಭಿ ವಾದ್ಯದಲಿ ವರ ತಾಳ ಮೇಳದಿಂ ವರ ಶೇಷಾದ್ರಿವಾಸ ವೆಂಕಟೇಶನೆ ಏಳಯ್ಯ ಬೆಳಗಾಯಿತು 3
--------------
ಸರಸ್ವತಿ ಬಾಯಿ